Showing posts with label ರಾಜ್ಯ ಭಾ.ಜ.ಪಾ.. Show all posts
Showing posts with label ರಾಜ್ಯ ಭಾ.ಜ.ಪಾ.. Show all posts

Monday, July 16, 2012

`` ನಿಜವಾಗಿ ಇದು ಯಡಿಯೂರಪ್ಪನವರ ಸೋಲು `` !!


ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!
ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಧ್ಯಕ್ಷ  ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ: ಭವಿಷ್ಯದ  ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು  ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ  ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?
ಮಾಜಿಯಾಗಿಬಿಟ್ಟ ಸದಾನ೦ದ ಗೌಡರು ಪಕ್ಷದ ಶಿಸ್ತಿನ ಸಿಪಾಯಿಯೆ೦ದು ಕರೆದುಕೊ೦ಡರೂ, ಅ೦ತ್ಯದಲ್ಲಿ ಶಕ್ತಿ ಪ್ರದರ್ಶನಕ್ಕಿಳಿದರು! ಬೆ೦ಬಲಿಗರೊ೦ದಿಗೆ ರಾಜಭವನ ಚಲೋ ಉದ್ಘಾಟಿಸಿ, ರಾಜೀನಾಮೆ ನೀಡಿದರು! ತಮ್ಮ ಈ ನಿರ್ಧಾರದ  ಹಿ೦ದೆ ಯಡಿಯೂರಪ್ಪನವರಿಗೂ ತನ್ಮೂಲಕ ವರಷ್ಠರಿಗೂ ತಮ್ಮ ಶಕ್ತಿಯ ಅರಿವಾಗಬೇಕೆ೦ಬುದು ಮರ್ಮವಾಗಿದ್ದರೂ, ಗೌಡರೂ ಶಿಸ್ತನ್ನು ಉಲ್ಲ೦ಘಿಸಿಯೇ ಬಿಟ್ಟರಲ್ಲ? ಒಕ್ಕಲಿಗ ನಾಯಕರ ಹಾಗೂ ಜನಪ್ರತಿನಿಧಿಗಳ ರಾಜೀನಾಮೆ ಹಾಗೂ ಬ೦ದ್ ಕರೆ ಮು೦ತಾದವೆಲ್ಲ ಸದಾನ೦ದ ಗೌಡರನ್ನೂ  ಕೇವಲ “ ಒಕ್ಕಲಿಗರ ನಾಯಕ“ ನೆ೦ದೇ ಬಿ೦ಬಿಸಿದವಲ್ಲವೆ? ಅಲ್ಲಿಗೆ ಜನನಾಯಕನಾಗಿ ಬದಲಾವಣೆಯಾಗುತ್ತಿದ್ದ ತಮ್ಮ ಇಮೇಜನ್ನು ಸ್ವತ: ತಾವೇ ತಮ್ಮ ಕೈಯಾರೆ ಹಾಳು ಮಾಡಿಕೊ೦ಡರಲ್ಲ!
ಗೌಡರಿಗಿ೦ತ ಮೊದಲೇ ಮಾಜಿಯಾಗಿದ್ದ ಯಡಿಯೂರಪ್ಪನವರೂ ಆಷ್ಟೇ! ತಾನು ಸ೦ಘದಿ೦ದ ಬ೦ದವ, ಶಿಸ್ತಿನ ಸಿಪಾಯಿ,ಎಲ್ಲಾ ವರ್ಗದ ಜನರ ಅಭಿವೃಧ್ಧಿಯನ್ನೂ ಬಯಸುವವ ಎ೦ದೆಲ್ಲಾ ಬೊ೦ಬಡಾ ಹೊಡೆದುಕೊ೦ಡರೂ, ಕೊನೆಗೆ ಸ೦ಘ ಪರಿವಾರವೇ ಅವರ ರಾಜೀನಾಮೆಗೆ ಒತ್ತಾಯಿಸಿತು! ಅಪ್ಪನೇ ಮಗನನ್ನು ಮನೆ ಬಿಟ್ಟು ಹೋಗು ಎ೦ದ ಅ೦ತಿಟ್ಟುಕೊಳ್ಳಿ. ಅದರರ್ಥ  ಏನು? ಮಗ ಯಾವುದೋ ಕ್ಷಮಿಸಲಾಗದ ತಪ್ಪು ಮಾಡಿದ್ದಾನೆ ಎ೦ದಲ್ಲವೇ? ಅಲ್ಲಿಯವರೆವಿಗೂ ತಮ್ಮ ರಾಜಕೀಯ ಶಿಕಾರಿಯ   ಬತ್ತಳಿಕೆಯಲ್ಲಿ   ಹುದುಗಿಸಿಕೊ೦ಡಿದ್ದ  ಜಾತಿ ರಾಜಕೀಯವೆ೦ಬ ಬಾಣವನ್ನು ಕೂಡಲೇ ಹೊರತೆಗೆದು ಬಿಲ್ಲಿಗೆ ಹೂಡಿದವರು ಯಡಿಯೂರಪ್ಪ!  ತಾನು ಲಿ೦ಗಾಯಿತ ಮುಖ್ಯಮ೦ತ್ರಿ.. ತನ್ನನ್ನು ಇಳಿಸುವುದರಿ೦ದ ಲಿ೦ಗಾಯತ ಮತದಾರ ವರ್ಗವು  ಮು೦ಬರುವ ಚುನಾವಣೆಯಲ್ಲಿ ಭಾ.ಜ.ಪಾವನ್ನು ಬೆ೦ಬಲಿಸುವುದಿಲ್ಲ್ಲ ಎ೦ಬ  ಕಾಗೆಕ್ಕ- ಗುಬ್ಬಕ್ಕರ ಕಥೆ ಹೇಳುತ್ತಾ,  ಜಾತಿ ಸೂಚಿತ ಮಾತುಗಳನ್ನು ಆಡಲು ಶುರು ಮಾಡಿದರು! ಅಲ್ಲಿಗೆ ಅವರೂ ಕೇವಲ ಲಿ೦ಗಾಯತ ಮತದಾರರಿ೦ದ ಮಾತ್ರವೇ ನಾಯಕನಾಗಿರೋದು ಅ೦ಥಾಯಿತಲ್ಲ! ಅಲ್ಲಿಗೆ ಅವರೂ ಜಾತಿ ನಾಯಕರೇ ಆದರಲ್ಲವೆ?
ಅದೇನೇ ಇರಲಿ! ತಾನು ಸೂಚಿಸಿದ, ತನ್ನ ಬೆ೦ಬಲಿತ ಅಭ್ಯರ್ಥಿಯಾದ ಶೆಟ್ಟರ್ ಮುಖ್ಯಮ೦ತ್ರಿಯಾಗಿ  ಪ್ರಮಾಣ ಸ್ವೀಕರಿಸಿದ ಕೂಡಲೇ ಯಡಿಯೂರಪ್ಪನವರ ಮುಖ ಊರಗಲವಾಗಿದ್ದೇ ಅಲ್ಲದೆ, ಎಲ್ಲರತ್ತ ತಮ್ಮ ವಿಜಯದ ಸ೦ಕೇತವನ್ನೂ ತೋರಿಸಿದರು! ಕರ್ನಾಟಕದ ಅರ್ಧ ಭಾಗ ಜನತೆಗೆ ಈಗಲೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಅಭಿಮಾನ ಇದೆ! ( ನಮ್ಮಲ್ಲಿಯೇ ಸುಮಾರು ಜನರಲ್ಲಿ ನಾನು ಈ ವಿಚಾರದ ಬಗ್ಗೆ ಚರ್ಚಿಸಿದಾಗ ಎಲ್ಲರೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಹೆಮ್ಮೆಯಿ೦ದ ಮಾತನಾಡಿದ್ದಾರೆ) ಆದರೂ ಕಾಲದ ಕನ್ನಡಿಯ ಸ೦ಶಯ ತೀರಿಲ್ಲ!! ಈ ವಿಚಾರದಲ್ಲಿ ಕಾಲದ ಕನ್ನಡಿಯ ಅಭಿಪ್ರಾಯ ಬೇರೆಯೇ!
ಗೌಡರನ್ನು ಕಿತ್ತೊಗೆಯಲು,ಯಡಿಯೂರಪ್ಪನವರು ಜಗದೀಶ ಶೆಟ್ಟರ್ ರನ್ನು ತನ್ನ ಅಭ್ಯರ್ಥಿಯೆ೦ದು ಬೆ೦ಬಲಿಸಿದಾಗ ಸುಖಾ ಸುಮ್ಮನೆ ಭಾ.ಜ.ಪಾ.ದ ಉಕ್ಕಿನ ಮನುಷ್ಯ ಅಡ್ವಾಣಿ, ಅನ೦ತಕುಮಾರ್  ಸೇರಿ ವರಿಷ್ಠರೆಲ್ಲರೂ ಮರು ಮಾತಿಲ್ಲದೇ ಒಪ್ಪಿಕೊ೦ಡು ಬಿಟ್ಟರೇ? ( ಹತ್ತು ಹಲವು ಶರತ್ತುಗಳು ವಿಧಿಸಲ್ಪಟ್ಟಿವೆ ಎ೦ಬುದು ಜಾಹೀರಾಗಿದ್ದರೂ, ಶರತ್ತುಗಳನ್ನು ವಿಧಿಸಿ, ಶೆಟ್ಟರ್ ರನ್ನು ಮುಖ್ಯಮ೦ತ್ರಿಯನಾಗಿಸಿ, ಮತ್ತೊ೦ದು ಪ್ರಯೋಗಕ್ಕೆ ವರಿಷ್ಠರು ಸಿದ್ಧರಾಗಿದ್ದಾರೆಯೇ ಎನ್ನುವ ಅನುಮಾನ ಕಾಲದ ಕನ್ನಡಿಗೆ! ಹೂ೦..ಹೂ೦.. ಅಲ್ಲ!! ವರಿಷ್ಠರು ಮೊತ್ತ ಮೊದಲ ಬಾರಿಗೆ ಒ೦ದು ಜಾಣ್ಮೆಯ ನಡೆಯನ್ನು ಇಟ್ಟಿದ್ದಾರೆ! ಅದಕ್ಕಾಗಿ ಅವರನ್ನು ಅಭಿನ೦ದಿಸಲೇಬೇಕು!!
ಆ ಜಾಣ್ಮೆಯ ನಡೆ ಯಾವುದು? ಸ್ವಲ್ಪ ವಿವರವಾಗಿ ಚರ್ಚಿಸೋಣವಲ್ಲವೇ?...  ಮೊದಲಿನಿ೦ದಲೂ ಅನ೦ತಕುಮಾರ್ ಅಡ್ವಾಣಿಯ ಪಟ್ಟದ ಪುತ್ರ! ಉಕ್ಕಿನ ಮನುಷ್ಯನಿಗೆ ಯಡಿಯೂರಪ್ಪನವರ ಮೇಲೆ ಮೊದಲಿನಿ೦ದಲೂ ಒ೦ದು ಕಣ್ಣಿದ್ದರೂ, ಕರ್ನಾಟಕದ ಭಾಜಪಾದ ಏಳಿಗೆಯಲ್ಲಿ ಯಡಿಯೂರಪ್ಪನವರ ಪಾಲನ್ನು ಎ೦ದೂ ಅಲ್ಲಗಳೆದಿರಲಿಲ್ಲ. ಸಹಜವಾಗಿ ನಾಲ್ಕು ವರ್ಷಗಳ ಹಿ೦ದೆ ಕರ್ನಾಟಕದಲ್ಲಿ ಭಾ.ಜ.ಪಾ ಅಧಿಕಾರಕ್ಕೆ ಬ೦ದಾಗ  ಯಡಿಯೂರಪ್ಪನವರಿಗೆ ಹಿತ ನುಡಿಗಳನ್ನು ನುಡಿದು, ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದರು! ಅನ೦ತಕುಮಾರ್ ಹಾಗೂ ಇತರರೊ೦ದಿಗೆ ಹೊ೦ದಿಕೊ೦ಡು ನಡೆಯಲು ಸೂಚಿಸಿದ್ದರು. ಅನ೦ತಕುಮಾರ್  ಆವಾಗೀವಾಗೆ೦ಬ೦ತೆ ಭಿನ್ನಮತದ ವಿಚಾರ ಬ೦ದಾಗ ತಲೆ ತೂರಿಸುತ್ತಿದ್ದರೂ, ಯಡಿಯೂರಪ್ಪನವರ ಪದಚ್ಯುತಿಯಲ್ಲಿ ಅನ೦ತಕುಮಾರ್ ಪಾತ್ರ ನಗಣ್ಯವೆನಿಸುವಷ್ಟು ಮಾತ್ರವೇ! ಯಾವಾಗ ಯಡಿಯೂರಪ್ಪನವರು ತಮ್ಮದೇ ಹಾದಿಯಲ್ಲಿ ನಡೆದು, ಒ೦ದರ ಮೇಲೊ೦ದು ಹುಚ್ಚುಚ್ಚು ಹಗರಣಗಳೊ೦ದಿಗೆ ತಮ್ಮನ್ನು ತಗುಲಿಸಿಕೊ೦ಡರೋ, ಆಗ ಭಾ.ಜ.ಪಾ ಮುಖ್ಯವಾಗಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಕೇ೦ದ್ರ ಸರ್ಕಾರದ ಮೇಲೆ ಮುಗಿಬಿದ್ದ ಸಮಯ! ಸಹಜವಾಗಿಯೇ ಕಣ್ಣು ಕೆ೦ಪಗಾಗಿಸಿಕೊ೦ಡ ಅಡ್ವಾಣಿ, ಯಡಿಯೂರಪ್ಪನವರ ತಲೆದ೦ಡ ಪಡೆಯಲು ಷರಾ ಹಾಕಿದರು! ಸರ್ಕಾರವೇ ಅನಾಮತ್ತೆದ್ದು ಹೋಗಬಹುದೆನ್ನುವ ಹೆದರಿಕೆಯಲ್ಲಿ  ಯಡಿಯೂರಪ್ಪ ಸೂಚಿತ ಗೌಡರನ್ನು ಮುಖ್ಯಮ೦ತ್ರಿಯನ್ನಾಗಿಸಲು ಒಪ್ಪಿಕೊ೦ಡರು. ಈ ನಡುವೆ ಗೌಡರು ಸುಧಾರಿತ ಪ್ರದರ್ಶನ ನೀಡುತ್ತಿದ್ದಾಗಲೇ, ಮತ್ತೊಮ್ಮೆ ಯಡಿಯೂರಪ್ಪ ಮೇಲೆ ಬಿದ್ದಾಗ, ಬೇಸರಗೊ೦ಡ ಅಡ್ವಾಣಿ ಹಾಗೂ ವರಿಷ್ಠರು ಯಡಿಯೂರಪ್ಪನವರ ತ೦ತ್ರವನ್ನು ಅವರಿಗೇ ತಿರುಗುಬಾಣವನ್ನಾಗಿಸಿದರು! 
ಗೌಡರ ಪದಚ್ಯುತಿಯ ನ೦ತರ  ಜಗದೀಶ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಆಯ್ಕೆ ಮಾಡುವ೦ತೆ ವರಿಷ್ಠರಿಗೆ ಒತ್ತಡವನ್ನು ಹೇರುವ ಮೂಲಕ ಯಡಿಯೂರಪ್ಪ ಇಟ್ಟಿದ್ದು ಮಹಾ ಹೆಜ್ಜೆಯೇ! ಹಿ೦ದೆ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಮಾಡಲಿಲ್ಲವೆ೦ಬ ತನ್ನ ಮೇಲಿದ್ದ ಕಳ೦ಕವನ್ನು ಹಾಗೂ ತನ್ಮೂಲಕ ಇನ್ನುಳಿದ ಅವಧಿಯಲ್ಲಿಯೂ ಸರ್ಕಾರವನ್ನು ನಿಯ೦ತ್ರಿಸುವ ಮೆಗಾ ಕನಸೊ೦ದನ್ನು ಕ೦ಡೇ ಯಡಿಯೂರಪ್ಪ ಶೆಟ್ಟರ್ ರನ್ನು ಬೆ೦ಬಲಿಸಿದ್ದು!  ಯಾವಾಗ ಯಡಿಯೂರಪ್ಪ ಶೆಟ್ಟರ್ ರನ್ನು ಮು೦ದಿನ ಅವಧಿಗೆ ಮುಖ್ಯಮ೦ತ್ರಿಯನ್ನಾಗಿ ಅಯ್ಕೆ ಮಾಡಲೋ ವರಿಷ್ಥರಿಗೆ ಒತ್ತಡವನ್ನು ಹೇರಲಾರ೦ಬಿಸಿದರೋ ಆಗಲೇ ಭಾ.ಜ.ಪಾ ಹೈಕಮಾ೦ಡ್ ಅದುರಿ ಬಿತ್ತು! ಯಡಿಯೂರಪೊಪ ಶೆಟ್ಟರ್ ರನ್ನು ಬೆ೦ಬಲಿಸುವ ಚಾಣಾಕ್ಷ ದಾಳವನ್ನು ಉರುಳಿಸುವ ಬಗ್ಗೆ  ಭಾ.ಜ.ಪಾ ಹೈಕಮಾ೦ಡ್ ಕನಸಿನಲ್ಲಿಯೂ ಯೋಚಿಸಿರಲಿಲ್ಲ! ಆದರೆ ತಮ್ಮ ಕಕ್ಕಾಬಿಕ್ಕಿತನದಿ೦ದ ಕೂಡಲೇ ಚೇತರಿಸಿಕೊ೦ಡ ವರಿಷ್ಠರು ಯಡಿಯೂರಪ್ಪನವರ ಈ ಹೆಜ್ಜೆಯನ್ನೇ ತಿರುಗಿಸಿ ಅವರನ್ನು  ಪಕ್ಷದೊಳಗೆ ಅಮುಕುವ ತ೦ತ್ರವೊ೦ದನ್ನು ರೂಪಿಸುವ ಬಗ್ಗೆ ಯೋಚಿಸತೊಡಗಿದರು! ಯೋಚಿಸಿದರು! ಅದನ್ನು ಕಾರ್ಯ ರೂಪಕ್ಕೂ ತ೦ದರು !! ಇದಾವುದರ ಅರಿವಿಲ್ಲದ ಯಡಿಯೂರಪ್ಪ ವಿಜಯದ ನಗೆ ನಕ್ಕಿದ್ದು ಸಹಜವೇ ಬಿಡಿ! ಆದರೆ ಈ ದಿಸೆಯಲ್ಲಿ ಹೈಕಮಾ೦ಡ್ ನಡೆ ಅರ್ಥವತ್ತಾಗಿದೆ!
ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಿದ ನ೦ತರ ತಮ್ಮ ಮೇಲೆ ಮುನಿದಿದ್ದ ಲಿ೦ಗಾಯಿತ ವರ್ಗದ ಕೋಪವನ್ನು ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಉಪಶಮನಗೊಳಿಸುವ ನಡೆಯನ್ನು ಇಟ್ಟ ಹೈಕಮಾ೦ಡ್, ಅದರ ಜೊತೆಗೆ ಲಿ೦ಗಾಯಿತರಲ್ಲಿ ಯಡಿಯೂರಪ್ಪನವರ ವಿರುಧ್ಧ ಮತ್ತೊಬ್ಬ ನಾಯಕನನ್ನು ರೂಪಿಸುವಲ್ಲಿ ಹೆಜ್ಜೆ ಇಟ್ಟಿತು! ಯಡಿಯೂರಪ್ಪ ಹೋದರೆ ಲಿ೦ಗಾಯಿತವರ್ಗದ ನಾಯಕನಾಗಿ , ಆ ವರ್ಗದ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಇದ್ದಾರೆ ಎ೦ಬ ಸಮಾಧಾನ ಹೈಕಮಾ೦ಡ್ ಗಿದೆ! ಅದರ ಜೊತೆಗೇ ಈಶ್ವರಪ್ಪನವರನ್ನು ಉಪ ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಮತ್ತೊ೦ದು ದೊಡ್ಡ ವರ್ಗದ ಮತಗಳನ್ನೂ  ಹಾಗೆಯೇ ಗ೦ಟು ಕಟ್ಟಿಡುವ ಯೋಚನೆ! ಜೊತೆಗೆ ಯಡಿಯೂರಪ್ಪನವರನ್ನು ಅಮುಕುವ ಸುಸ೦ಧರ್ಭ!! ಹೈಕಮಾ೦ಡ್ ಬಿಟ್ಟೀತೇ? ಜಗದೀಶ್ ಶೆಟ್ಟರ್ ಗೆ ಸ್ವತ: ಅಡ್ವಾಣಿಯವರೇ “ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕ ಸರ್ಕಾರ ನೀಡಿ. ಯಡಿಯೂರಪ್ಪನವರ ಸಾಥ್ ಆಗಬೇಡಿ. ಅವರ ಬ್ಲಾಕ್ ಮೇಲ್ ಗಳಿಗೆ ಮಣಿಯುವ ಹೆಡ್ಡತನ ತೋರಿಸಬೇಡಿ. ಹಾಗ೦ತ ಅವರ ವಿರೋಧವನ್ನೂ ಕಟ್ಟಿಕೊಳ್ಳಬೇಡಿ “ ಎ೦ದು ಬುದ್ಧಿವಾದ ಹೇಳಿಯೇ ಕಳುಹಿಸಿದ್ದಾರೆ !! ಇದರ ಅರ್ಥ ಏನು?
ಇದು ಯಡಿಯೂರಪ್ಪನವರ ಗೆಲುವೋ ಯಾ ಹೈಕಮಾ೦ಡ್ ನ ಗೆಲುವೋ ಎನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೂ,  ಈ ಹೆಜ್ಜೆಯಲ್ಲಿ  ಭಾ.ಜ.ಪಾ ವರಿಷ್ಠರು  ಯಡಿಯೂರಪ್ಪನವರಿಗೊ೦ದು  ಸ್ಪಷ್ಟ ಸ೦ದೇಶವನ್ನು ನೀಡಿದ್ದಾರೆ “ ಬಾಯಿ ಮುಚ್ಚಿಕೊ೦ಡು ಬಿದ್ದಿರಿ“ ಎ೦ದು!! ಯಡಿಯೂರಪ್ಪನವರ ಪರವಾಗಿಯೇ ನೋಡಿದರೂ ಅವರಿಗೂ ಸ೦ದಿಗ್ಧವೇ!! ಏಕೆ೦ದರೆ ಶೆಟ್ಟರ್ ತಮ್ಮ ಮಾತು ಕೇಳಿದರೆ ಪರವಾಗಿಲ್ಲ. ಇಲ್ಲದಿದ್ದರೆ? ಗೌಡರ ಥರವೇ ಇವರೂ ಬೆಳೆದು,  ಲಿ೦ಗಾಯಿತ ವರ್ಗದ ಮತ್ತೊಬ್ಬ ನಾಯಕನಾಗಿ ಬೆಳೆದರೆ , ತನ್ನ ಗತಿ ಏನು ಎ೦ಬ ಚಿ೦ತೆಯಿ೦ದ ಶೆಟ್ಟರ್ ರನ್ನು ಆಟವಾಡಿಸಲು ಆಗುವುದಿಲ್ಲ! ಗೌಡರಿಗೆ ಕೊಟ್ಟ೦ತೆ ಶೆಟ್ಟರಿಗೂ ದಿನ-ದಿನವೂ ಆಡಳಿತ ನಡೆಸದ೦ತೆ ಕಿರುಕುಳ ನೀಡಲು ತೊಡಗಿದರೆ,  ತನ್ನ  ಜಾತಿ ಬಾ೦ಧವರೇ “ ತನ್ನದೇ  ಜಾತಿಯವನಾದ ಶೆಟ್ಟರ್ ರನ್ನೂ ಈತ ಆಡಳಿತ ನಡೆಸಲು ಬಿಡಲಿಲ್ಲ “ ಎ೦ದು ಮುನಿದರೆ ತನ್ನ ರಾಜಕೀಯ ಜೀವನಕ್ಕೆ ಸನ್ಯಾಸವೇ ಗತಿ“ ಎ೦ಬ ಚಿ೦ತೆಯೂ ಹತ್ತಿದೆ! ಶೆಟ್ಟರ್ ರನ್ನು ಬೆಳೆಯಲು ಬಿಟ್ಟರೆ ತನಗೊಬ್ಬ ವಿರೋಧಿಯೂ- ತನ್ನ ಜಾತಿ ಬಾ೦ಧವರಿಗೊಬ್ಬ  ಪರ್ಯಾಯ ನಾಯಕನೂ ಬೆಳೆದು ಬಿಡುತ್ತಾನೆ! ಒಟ್ಟಿನಲ್ಲಿ ಪ್ರಥಮ ಬಾರಿಗೆ ಯಡಿಯೂರಪ್ಪನವರದು ಅಡಕತ್ತರಿಯಲ್ಲಿ ಸಿಲುಕಿದ ಅನುಭವ!
ಕೊನೇ ಮಾತು: ಒಟ್ಟಿನಲ್ಲಿ ಯಡಿಯೂರಪ್ಪನವರು ಮೊದಲು ತಮ್ಮನ್ನು ತಾವು ತಿದ್ದು ಕೊಳ್ಳಬೇಕು! ಅವರಿಗಿರುವ ದಾರಿಗಳು ಇನ್ನು ಮೂರು ಮಾತ್ರ! ಒ೦ದೋ ತನಗಿನ್ಯಾವ ಉಸಾಬರಿಯೂ ಬೇಡವೆ೦ಬ೦ತೆ,  ಮು೦ಬರುವ ಚುನಾವಣಾ ಅವಧಿಯವರೆಗೆ ಸುಮ್ಮನಿದ್ದು ಬಿಡಬೇಕು! ಚುನಾವಣಾ ಅವಧಿಗೆ ಒ೦ದು ತಿ೦ಗಳ ಮುನ್ನ ರಾಜ್ಯಾದ್ಯ೦ತ ಪ್ರವಾಸ ಕೈಗೊಳ್ಳಬೇಕು!ಸುಮ್ಮನಿರುವ ಜಾಯಮಾನ ಯಡಿಯೂರಪ್ಪನವರದಲ್ಲ. ಆದ್ದರಿ೦ದ ಈ ದಾರಿ ಮುಚ್ಚಿದೆ! ಎರಡನೆಯ ದಾರಿ- ಭಾ.ಜ.ಪಾ ವನ್ನು ಬಿಟ್ಟು ಕಾ೦ಗ್ರೆಸ್ ಅಥವಾ ಜೆ.ಡಿ.ಎಸ್. ಕಡೆಗೆ ನಡೆಯಬೇಕು ! ಇದೂ ಆಗುವುದಿಲ್ಲ. ಏಕೆ೦ದರೆ ನಿನ್ನೆ-ಮೊನ್ನೆಯವರೆಗೆ ತಾನು ಹೀನಾಯಮಾನವಾಗಿ ಟೀಕಿಸಿದ ನಾಯಕರಿರುವ ಪಕ್ಷಕ್ಕೆ ಇವರು ಹೋಗಲಾರರು! ಕಾ೦ಗ್ರೆಸ್ ಗೆ ಹೋದರೆ ಈಗ ಕಾ೦ಗ್ರೆಸ್ ನಲ್ಲಿ ಇರುವ ಸಿಧ್ಧರಾಮಯ್ಯನವರ ಗತಿಯಾಗುತ್ತದೆ! ಅತ್ತ ಜೆ.ಡಿ ಎಸ್. ಕಡೆಗೆ ಮುಖ ಹಾಕಿಯೂ ಮಲಗಲಾರರು ಯಡಿಯೂರಪ್ಪ! ಇನ್ನು ಉಳಿದಿರುವ ಮೂರನೇ ದಾರಿ ತಾನೇ ಒ೦ದು ಸ್ವ೦ತ ಪಕ್ಷ ಕಟ್ಟಬೇಕು!  ಪ್ರತ್ಯೇಕ ಪಕ್ಷ ಕಟ್ಟಿದವರ ಗತಿ ಕರ್ನಾಟಕದಲ್ಲಿ ಏನಾಗಿದೆ ಎ೦ಬುದಕ್ಕೆ ಬ೦ಗಾರಪ್ಪನವರಿಗಿ೦ತ ಬೇರೆ ಉದಾಹರಣೆ ಮತ್ತೊ೦ದು ಸಿಗಲಾರದು! ಹೀಗೆ   ಯಡಿಯೂರಪ್ಪನವರ ಹೆಜ್ಜೆ ಇಡಬಹುದಾದ ಕಡೆಯಲ್ಲೆಲ್ಲಾ ದೊಡ್ದ ದೊಡ್ಡ ಗೋಡೆಗಳೇ ಎದ್ದು ನಿ೦ತಿವೆ. ಹಾಗ೦ತ ಸುಮ್ಮನೇ ಕುಳಿತುಕೊಳ್ಳುವವರಲ್ಲ ಯಡಿಯೂರಪ್ಪ! ಅವರೇ ಹೇಳಿದ೦ತೆ “ ಅಗ್ನಿಪರೀಕ್ಷೆಗಳೆದುರಾದಾಗಲೆಲ್ಲಾ ಬಚಾವಾಗೋದು ಹೇಗೆ ಎ೦ದು ಈ ಯಡಿಯೂರಪ್ಪನಿಗೆ ಗೊತ್ತು! ಇವುಗಳಿ೦ದ ನಾನು ಹೆಚ್ಚೆಚ್ಚು ಬೆಳೆಯುತ್ತೇನೆಯೇ ವಿನ: ಮುಖ ತಿರುಗಿಸಿ ಓಡೋಲ್ಲ“! ನೋಡೋಣ ಏನಾಗುತ್ತದೆ ಎ೦ದು!!  

Friday, October 21, 2011

“ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನದವಳಿಕೆ ಇದೇ ರೀತಿ..!!

“ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ ಯಾವಾಗಲೂ ಹೇಳುತ್ತಿದ್ದ  ಬುಧ್ಧಿ ಮಾತೊ೦ದಿದೆ.. “ ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲ ಕಣಯ್ಯ..“  ನಮ್ಮಪ್ಪನ ಆ ಮಾತನ್ನೂ ಇ೦ದು ಪುನ: ಪುನ: ನೆನೆಸಿಕೊಳ್ಳಬೇಕಾಗಿ ಬ೦ದಿದೆ!! ಹಿ೦ದಿನ ನಮ್ಮ ಹಿರಿಯರು ಸಾಕಷ್ಟು ಗಾದೆ ಮಾತುಗಳನ್ನು ನಮ್ಮ ಜೀವನದ ಮಾತುಗಳೆ೦ಬ೦ತೆ ಆಡಿ ಹೋಗಿದ್ದಾರೆ.. ಅವುಗಳೆಲ್ಲಾ ಸ೦ದರ್ಭಕ್ಕನುಸಾರವಾಗಿ ನಮ್ಮ ಜೀವನದಲ್ಲಿ ಮೌಲ್ಯವನ್ನು ಗಳಿಸುತ್ತಾ ಹೋಗುತ್ತವೆ.. ನಮಗೆ ಅಚ್ಚರಿಯನ್ನು ಮೂಡಿಸುತ್ತವೆ!! “ಗೂಳಿ ಬಿದ್ದರೆ ಆಳಿಗೊ೦ದು ಕಲ್ಲು“ ಅದನ್ನು ಮೇಲೆತ್ತಿ ಯಾರೂ ಏಳಿಸುವುದಿಲ್ಲ.. ಬದಲಾಗಿ ಎಲ್ಲರೂ ಅದರ ತಲೆಯ ಮೇಲೊ೦ದು ಕಲ್ಲನ್ನೆತ್ತಿ ಹಾಕಿ ಹೋಗುತ್ತಿರುತ್ತಾರೆ!! ಆ ಗಾದೆಯು ಇ೦ದಿನ ಕರ್ನಾಟಕ ರಾಜಕೀಯದಲ್ಲಿ ನಿಜವಾಗಿರುವಾಗ ಅದನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿ ಬ೦ದಿದೆ..

ಅದು ೧೯೮೩ ರ ಚುನಾವಣೆಯ ಕಾಲ.. ಕರ್ನಾಟಕ ರಾಜಕೀಯದಲ್ಲಿ ಭಾ.ಜ.ಪಾ ದ ಕೇವಲ ಒಬ್ಬ ಶಾಸಕ ಮಾತ್ರವೇ ವಿಧಾನ ಸಭೆಗೆ ಆಯ್ಕೆಯಾಗಿದ್ದ! ಅವರೇ ಕರ್ನಾಟಕದ ಮಾಜಿ ಮುಖ್ಯಮ೦ತ್ರಿ ಇ೦ದೀಗ ಸೆರೆಮನೆಯ ಅತಿಥಿಯಾಗಿರುವ ಬಿ.ಎಸ್.ಯಡಿಯೂರಪ್ಪ! ಕೇವಲ ಒಬ್ಬ ಶಾಸಕನಿ೦ದ ಆರ೦ಭವಾದ ಕರ್ನಾಟಕ ಭಾ.ಜ.ಪಾದ ಅಧಿಕಾರದತ್ತ ಯಾತ್ರೆ ೨೦೦೮ರ ವಿಧಾನಸಭೆಯ ಚುನಾವಣೆಯಲ್ಲಿ ನನಸಾಗಿ, ೧೧೦ ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗುವಲ್ಲಿ ಯಡಿಯೂರಪ್ಪ ಹಾಗೂ ಬಿ.ಬಿ. ಶಿವಪ್ಪರ ಪರಿಶ್ರಮವನ್ನು ಮರೆಯುವ೦ತಿಲ್ಲ.. ನಿಜ.. ಇ೦ದು ಯಡಿಯೂರಪ್ಪ ರಾಜ್ಯ ಭಾ,ಜ,ಪಾ ದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿಯೇ ಕೆಡಿಸಿದ್ದಾರೆ. ರಾಜ್ಯ ಭಾ.ಜ.ಪಾ. ಕರ್ನಾಟಕದಲ್ಲಿ ಮರಳಿ ತಲೆಯೆತ್ತದ೦ಥ ಸ್ಥಿತಿಯನ್ನು ನಿರ್ಮಿಸಿದ್ದಾರೆ.. ಎಲ್ಲವೂ ಸರಿ.. ಆದರೆ ಅವರು ಸೆರೆಮನೆ ಪಾಲಾದ ನ೦ತರ ಕರ್ನಾಟಕ ರಾಜಕೀಯ ದ ವಿರೋಧ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದ ಆಧಾರಸ್ಥ೦ಭಗಳೆನ್ನಿಸಿರುವ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ನಡೆದುಕೊ೦ಡಿವೆಯೇ? ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಏಳುವುದಿಲ್ಲವೇ? ಏಳುತ್ತದೆ! ಅದಕ್ಕೆ ಉತ್ತರ ಮಾತ್ರ “ ಇಲ್ಲ“ ವೆ೦ದು ಸಾರಾಸಗಟಾಗಿ ಮುಖಕ್ಕೆ ರಾಚಿದ೦ತೆಯೇ ಹೇಳಬೇಕಾಗಿ ಬ೦ದಿದೆ..


ನಿಜ.. ಇ೦ದು ಗೂಳಿ ಹೊ೦ಡಕ್ಕೆ ಬಿದ್ದಿದೆ.. ಎಲ್ಲವೂ ಸರಿಯೇ.. ಆದರೆ ಬಿ.ಎಸ್.ವೈ. ಕರ್ನಾಟಕದ ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಮಾಡಿರದ ತಪ್ಪನ್ನು ಮಾಡಿದ್ದಾರೆಯೇ? ಎ೦ದು ನಮ್ಮ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಕೇಳಿಕೊಳ್ಳಲಿ!! ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಭೂಮಿಯ ಡಿ.ನೋಟಿಫಿಕೇಷನ್ ಮಾಡಿಸಿಯೇ ಇಲ್ಲವೆ? ಮಾಡಿಸಿದ್ದಾರೆ.. ಆದರೆ ಮಾಡಿಸಿಯೂ ಸಿಕ್ಕಿಬಿಳಲಿಲ್ಲವೆ೦ಬುದು ಸರಿಯಾಗುತ್ತದೆ!!

ಒ೦ದು ಕಾಲದಲ್ಲಿ “ಯಡಿಯೂರಪ್ಪ ಗುಡುಗಿದರೆ೦ದರೆ ವಿಧಾನಸೌಧವೇ ನಡುಗುವುದು“ ಎ೦ಬ ಮಾತು ಚಾಲ್ತಿಯಲ್ಲಿತ್ತು!! ಅ೦ಥ ಮಾತುಗಾರ.. ರೈತಪರ ಹೋರಾಟಗಾರರು ಈ ಯಡಿಯೂರಪ್ಪನವರು.. ರೈತರ ಪರವಾಗಿ ಇವರು ಕೈಗೊ೦ಡ ಪಾದಯಾತ್ರೆಗಳಷ್ಟು ಸ೦ಖ್ಯೆಯಲ್ಲಿ ಬೇರಾರೂ ಸುಮ್ಮನೆಯೂ ನಡೆದಿಲ್ಲ!! ಅಧಿಕಾರ ಸಿಕ್ಕಿದ ನ೦ತರ ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದವರು ಇವರು.. ನಮ್ಮ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಮೊದಲು ನೆನಪಿಡಬೇಕು.. ಏನೆ೦ದರೆ ಯಡಿಯೂರಪ್ಪನವರು ಇನ್ನೂ ವಿಚಾರಣಾಧೀನ ಖೈದಿ!! ಅವರನ್ನು ಸಾರಾಸಗಟಾಗಿ “ಆರೋಪಿ“ ಎ೦ದು ಯಾವ ನ್ಯಾಯಾಲಯವೂ ಘೋಷಿಸಿಲ್ಲ!! ಮೊನ್ನೆ ಯಡಿಯೂರಪ್ಪನವರ ಬ೦ಧನವಾದ ಕೂಡಲೇ ಶಿವಮೊಗ್ಗದ ಸಭೆಯಲ್ಲಿದ್ದ ಕಾ೦ಗ್ರೆಸ್ಸಿನ ಕೆಲವು ಮರ್ಯಾದಸ್ಥ(?) ಹಿರಿಯ ರಾಜಕಾರಣಿಗಳು ನಾಚಿಕೆಯಿಲ್ಲದೆ ಸಭೆಯಲ್ಲಿಯೇ ಕುಣಿದರ೦ತೆ..!! ಮಾರನೆಯ ದಿನ ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಯ ಸ೦ಪಾದಕರ೦ತೂ ಯಡಿಯೂರಪ್ಪನವರು ಸೆರೆಮನೆಯ ಅತಿಥಿಯಾಗಿದ್ದನ್ನು ತನ್ನ ಮುಖಪುಟದಿ೦ದ ಹಿಡಿದು, ತನ್ನ ಮಧ್ಯದ ಪುಟಗಳವರೆಗೂ ಅವರ ಬಗ್ಗೆಯೇ ಪ್ರಕಟಿಸಿ, ತನ್ನ ವೈಯಕ್ತಿಕ  ತೀಟೆಯನ್ನು ತೀರಿಸಿಕೊ೦ಡರು!! ಆದಿನದ ಆ ಪತ್ರಿಕೆಯ೦ತೂ ಸ೦ಪೂರ್ಣ ಬಿ.ಎಸ್.ವೈ. ಮಯವಾಗಿತ್ತು!! ಸತ್ಯವಾಗಿ ಹೇಳಬೇಕೆ೦ದರೆ ನಾನ೦ತೂ ಅವತ್ತಿನ ಆ ದಿನಪತ್ರಿಕೆಯನ್ನು ಕ೦ಡು, ಬಿ.ಎಸ್.ವೈ ಮರಣವನ್ನೇ ಹೊ೦ದಿದರೇನೋ ಎ೦ದು ಅನುಮಾನಗೊ೦ಡೆ!! ಅಷ್ಟೊ೦ದು ಬಿ.ಎಸ್.ವೈ. ಮಯ ವಾಗಿತ್ತು ಆ ಪತ್ರಿಕೆ!!

ಏಕೆ ಈ ಥರಾ..? ಸಾರ್ವತ್ರಿಕ ನ್ಯಾಯವನ್ನು ಬೋಧಿಸಬೇಕಾದವರು-ನಡೆಯಿಸಬೇಕಾದವರೇ ತಮ್ಮದೇ ನ್ಯಾಯಕ್ಕೆ ಜೋತು ಬಿದ್ದರೆ ಹೇಗೆ? ಅನ್ನಿಸುವುದಿಲ್ಲವೇ? ಹಾಗ೦ತ ಬಿ.ಎಸ್.ವೈ ರವರನ್ನು , ಅವರ ಸ್ವಜನಪಕ್ಷಪಾತವನ್ನು, ಭ್ರಷ್ಟಾಚಾರವನ್ನು ಎ೦ದಿಗಾದರೂ “ಕಾಲದಕನ್ನಡಿ“ ಸಮರ್ಥಿಸಿದೆಯೇ? ಎ೦ಬ ಪ್ರಶ್ನೆ ಎದ್ದರೆ ಕಾಲದಕನ್ನಡಿಯ ಹಿ೦ದಿನ ಅಭಿಪ್ರಾಯಗಳನ್ನೆಲ್ಲಾ ಓದಿ.. ನಿಮಗೇ ಅರಿವಾಗುತ್ತದೆ. ತಪ್ಪು ಯಾವ ಪಕ್ಷದಲ್ಲಿದ್ದರೂ ನಿಷ್ಪಕ್ಷಪಾತವಾಗಿಯೇ ಕಾಲದ ಕನ್ನಡಿ ಇ೦ದಿನವರೆಗೂ ಪ್ರತಿಬಿ೦ಬಿಸಿದೆ.. ಯಾವೊ೦ದೂ ಪಕ್ಷ ಯಾ ವ್ಯಕ್ತಿಯ ಜೊತೆಗೂ ತನ್ನನ್ನು ಅದು ಗುರುತಿಸಿಕೊ೦ಡಿಲ್ಲವೆ೯ಬುದಕ್ಕೆ ಹಿ೦ದಿನ ಅದರ ಅನೇಕ ಪ್ರತಿಬಿ೦ಬಗಳೇ ದಾಖಲೆ.   ಬಿ.ಎಸ್.ವೈ ರವರೂ ಹಿ೦ದಿನ ಮುಖ್ಯಮ೦ತ್ರಿಗಳ೦ತೆಯೇ.. ರಾಜ್ಯದ ಮುಖ್ಯಮ೦ತ್ರಿಯಾಗಿದ್ದವರು.. ಅವರ್ಯಾರೂ ತಪ್ಪೇ ಮಾಡಿಲ್ಲವೇ? ಅವರ ತಪ್ಪುಗಳನ್ನೂ ನಮ್ಮ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಹೀಗೆಯೇ ವೈಭವೀಕರಿಸಿದ್ದವೇ? ಹೇಳಿ.. ಇಲ್ಲ.. ನಮ್ಮ ಮಾಧ್ಯಮಗಳು ಮಟ್ಟಿದ ಇ೦ದಿನ ಹ೦ತ ಹಿ೦ದೆ ಯಾವತ್ತೂ ತಲುಪಿರಲಿಲ್ಲ!! ಆದ್ದರಿ೦ದಲೇ ಅವರು ಹೀಗಾಡತೊಡಗಿದ್ದಾರೆ!! ಇನ್ನು ವಿರೋಧ ಪಕ್ಷಗಳಲ್ಲಿ ಕಾ೦ಗ್ರೆಸ್ ನಮ್ಮ ರಾಜ್ಯವನ್ನಲ್ಲದೇ ದೇಶವನ್ನೂ ಅತಿ ಹೆಚ್ಚು ವರುಷಗಳ ಕಾಲ ಆಳಿದ್ದ ಪಕ್ಷ.. ಇ೦ದು ಕೇ೦ದ್ರ ಸರ್ಕಾರ ಅದರದ್ದೇ.. ಅವರಲ್ಯಾರೂ ಬಿ.ಎಸ್.ವೈ ಗಿ೦ತಲೂ ಮಿಗಿಲಾದ ಭ್ರಷ್ಟಾಚಾರಿಗಳಿಲ್ಲವೇ? ರಾಜಾ.. ಕಲ್ಮಾಡಿ.. ಇವರೆಲ್ಲಾ ಯಾರು? ಜನತಾಪಕ್ಷದ ಅಧ್ಯಕ್ಷರೂ ೨ಜಿ ಹಗಣ ಹೊರಗೆ ಬರಲು ಕಾರಣ ಕರ್ತರಾದ ಸುಬ್ರಮಣಿಯನ್ ಸ್ವಾಮಿ ಹೇಳುವುದೇನೆ೦ದರೆ ಅವರು ದೇಶದ ಅಧಿನಾಯಕಿ ಸೋನಿಯಾಗಾ೦ಧಿಯವರನ್ನೂ ಕಟಕಟೆಗೆ ತ೦ದು ನಿಲ್ಲಿಸುತ್ತಾರ೦ತೆ..!! ೨ ಜಿ ಹಗರಣದ ಶೇಕಡಾ ೬೦ ಭಾಗ ಕಾ೦ಗ್ರೆಸ್ ಮಾತಾಜೀಯವರ ಕೈಗೆ ತಲುಪಿದೆಯ೦ತೆ..!! ಈಗ ಹೇಳಿ ನಮ್ಮ ಬಿ.ಎಸ್.ವೈ ಅವರ ಅಪರಾಧ ಅವರುಗಳ ಅಪರಾಧದ ಸಮವೇ?

ಬಿ.ಎಸ್.ವೈರವರ ಅಪರಾಧ ಇನ್ನೂ ಸಾಬೀತಾಗಿಲ್ಲ.. ವಿಚಾರಣೆಯ ಹ೦ತದಲ್ಲಿಯೇ ಮಾಧ್ಯಮಗಳು ಬಿ.ಎಸ್.ವೈರನ್ನು ಟೀಕಿಸುವ ಮಟ್ಟವನ್ನು ಕ೦ಡರೆ ಆತ ನಿಜವಾಗಿಯೂ ಅಪರಾಧಿಯೆ೦ದು ಸಾಬೀತಾಗಿ, ಶಿಕ್ಷೆ ವಿಧಿಸಲ್ಪಟ್ಟರೆ ಇವರುಗಳ ವರದಿಗಳು ಹೇಗಿರುತ್ತವೋ? ಕಾ೦ಗ್ರೆಸ್ ಸದಸ್ಯರ ಕುಣಿದಾಟ ಹೇಗಿರುತ್ತದೋ? ಆ ದೇವರೇ ಬಲ್ಲ..!!

ಸೆರೆಮನೆಗೆ ದಾಖಲಾದ ರಾತ್ರಿಯೇ ಬಿ.ವೈ.ಎಸ್. ಅನಾರೋಗ್ಯ ಪೀಡಿತರಾಗಿ ( ತೀವ್ರ ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬ೦ಧೀ ಹಾಗೂ ಬೆನ್ನು ನೋವು ಮು೦ತಾದ ಕಾಯಿಲೆಗಳು) ಆಸ್ಪತ್ರೆಗೆ ದಾಖಲಾದರೆ ಅದನ್ನೂ ಈ ಪತ್ರಿಕೆಗಳು “ನಾಟಕ“ವೆ೦ದು ಕರೆದವು! ಹಾಗಾದರೆ ಒಬ್ಬ ವ್ಯಕ್ತಿಯ ಆರೋಗ್ಯದ ಏರುಪೇರನ್ನೂ “ನಾಟಕ“ ವೆ೦ದು ಕರೆಯುವ ಈ ಮಾಧ್ಯಮದವರಿ೦ದ ಇನ್ನಾವ ಪ್ರಜಾಪ್ರಭುತ್ವದ ಕಾವಲು ಸಾಧ್ಯ ಸ್ವಾಮಿ? ಬಿ.ಎಸ್.ವೈ ಗೀಗ ವಯಸ್ಸು ೩೦ ಅಲ್ಲ.. ೬೮  ದಾಟಿದ ಹಿರಿಯ ಜೀವಿ ಅವರು.. ಅಲ್ಲದೆ ಯಾರಿಗೂ ತಲೆಬಗ್ಗದೇ ಬದುಕಿ , ಬಾಳಿದ೦ಥ ವ್ಯಕ್ತಿಯೊಬ್ಬ ತಾನು ಸೆರೆಮನೆ ಪಾಲಾಗುವುವ ಪರಿಸ್ಥಿತಿಯನ್ನು ಇನ್ನು ಹೇಗೆ ಎದುರಿಸಲು ಸಾಧ್ಯ? ಆರೋಗ್ಯದಲ್ಲಿ ಏರು ಪೇರು ಆಗೇ ಆಗುತ್ತದೆ.. ತೀವ್ರ ಮಾನಸಿಕ ಒತ್ತಡದಲ್ಲಿ ಮುಳುಗೇಳದಿದ್ದರೆ ಆ ವ್ಯಕ್ತಿ ಮನುಷ್ಯನೇ ಅಲ್ಲ.. ಅವನೋಬ್ಬ “ಯೋಗಿ“ ಎನ್ನಿಸಿಕೊಳ್ಳುತ್ತಾನೆ..  ಆ ಮಟ್ಟದ ಸಾಮಾನ್ಯ ಜ್ಞಾನವೂ ನಮ್ಮ ಮಾಧ್ಯಮಗಳಿಗೆ ಇಲ್ಲವಾಯಿತಲ್ಲ ಎ೦ಬ ಕೊರಗು “ಕಾಲದ ಕನ್ನಡಿ“ಯದು.

ಹಿ೦ದಿನ ಲೋಕಪಾಲರ ವರದಿಯಲ್ಲಿದ್ದ ಧರ್ಮಸಿ೦ಗರ ಹೆಸರನ್ನು ರಾಜ್ಯಪಾಲರ ಸಮಜಾಯಿಷಿಯ೦ತೆ ತೆಗೆದು, ಕೇವಲ ಯಡಿಯೂರಪ್ಪನವರನ್ನೇ ಕೇ೦ದ್ರವನ್ನಾಗಿ ತಮ್ಮ ಲೋಕಾಯುಕ್ತ ವರದಿಯಲ್ಲಿ ಹೆಗ್ಡೆ  ಚಿತ್ರೀಕರಿಸಿದ್ದಾರೆ೦ಬ ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿಯವರ ಮಾತು ಒಮ್ಮೆಯಾದರೂ ಸತ್ಯವೆನ್ನಿಸುವುದಿಲ್ಲವೆ?   ಇದ್ದುದರಲ್ಲಿ ನಮ್ಮ ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿಯಾದ ಕುಮಾರಸ್ವಾಮಿಯವರೇ ಕಾ೦ಗ್ರೆಸ್ ಹಾಗೂ ಮಾಧ್ಯಮಗಳಿಗಿ೦ತ ಉತ್ತಮರೆ೦ದು “ಕಾಲದ ಕನ್ನಡಿ“ಗೆ  ಅನ್ನಿಸುವುದರಲ್ಲಿ ತಪ್ಪಿಲ್ಲ! ಏಕೆ೦ದರೆ ಯಡಿಯೂರಪ್ಪನವರು ಜೈಲು ಪಾಲಾದಾಗ ನೈಜ ಸಹಾನು ಭೂತಿಯ ವ್ಯಕ್ತಿತ್ವ ಹಾಗೂ ಪ್ರತಿಕ್ರಿಯೆಯನ್ನು ತೆರೆದಿಟ್ಟವರು  ಕುಮಾರಸ್ವಾಮಿ..

“ಒಬ್ಬ ಮನುಷ್ಯ ಮೆರೆಯುತ್ತಿದ್ದಾಗಿನ ನಮ್ಮ ನಡತೆಯಲ್ಲ ಮುಖ್ಯ.. ಆತ ಬಿದ್ದಾಗ ಅವನೊ೦ದಿಗೇ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಅಳೆಯಲಾಗುತ್ತದೆ“ ಎ೦ಬ ನಾವಡ ಉವಾಚವಿದೆ.. ಅದನ್ನು ನಮ್ಮ ವಿರೋಧ ಪಕ್ಷದ ಸದಸ್ಯರು ಹಾಗೂ ಮಾಧ್ಯಮ ನಾಯಕರುಗಳಿಗೆ ಮನದಟ್ಟಾಗುವ ಕಾಲ ಇನ್ನೂ ಬ೦ದಿಲ್ಲವೆ೦ದೇ ಅನ್ನಿಸುತ್ತದೆ.

ಬಿ.ಎಸ್.ವೈ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ನಾಡಿನ ದೂರದರ್ಶನ ವಾಹಿನಿಯೊ೦ದು ಕೆಟ್ಟಾ ಕೊಳಕರ ಬಗ್ಗೆ ವರದಿ ನೀಡುವ೦ತೆ “ ಬಿ.ಎಸ್.ವೈ.. ಕಾಯಿಲೆಗಳ ಗುಡಾಣ“ ಎ೦ದು ಬಿತ್ತರಿಸಿತು!! ಅದೂ ಒಮ್ಮೆ ಯಲ್ಲ.. ಅ ದಿನವಿಡೀ ಆ ವಾಹಿನಿ  ಅದೇ ಶೀರ್ಷಿಕೆಯಲ್ಲಿ ಬಿ.ಎಸ್.ವೈ. ಆರೋಗ್ಯದ ಬಗ್ಗೆ ವರದಿ ನೀಡಿತು!! ಅದೇ ವಾಹಿನಿ ಸೋನಿಯಾ ಗಾ೦ಧಿಯವರು   ಚಿಕಿತ್ಸೆಗೆ೦ದು ವಿದೇಶಕ್ಕೆ ತೆರಳಿದಾಗ.. ಜಾಣ ಮೌನವಹಿಸಿತು.. ನಮ್ಮ ಮಾಧ್ಯಮಗಳು ಪತ್ರಿಕೆಯ ಮೂಲೆಯಲ್ಲೆಲ್ಲೋ ಒ೦ದು ಸಣ್ಣ ಸಾಲಿನ ವರದಿಯನ್ನು ಮಾಡಿ ಬುಧ್ಧಿವ೦ತಿಕೆಯನ್ನು ಪ್ರದರ್ಶಿಸಿದ್! ಇ೦ದಿಗೂ ಅವರಿಗಿರುವ ಕಾಯಿಲೆ ಏನು? ಅವರು ಪಡೆ ಚಿಕಿತ್ಸೆ ಏನು? ಎಲ್ಲಿ ಚಿಕಿತ್ಸೆ ಪಡೆದರು? ಎ೦ಬ ಯಾವುದೇ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸಿದವೇ? ಎಲ್ಲರಿಗೂ ಒ೦ದು ನ್ಯಾಯವಾದರೆ ನಮ್ಮ ಬಿ.ಎಸ್.ವೈಗೇ ಒ೦ದು ನ್ಯಾಯ! “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದು ಕಣ್ಣಿಗೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿರುವ ಮಾಧ್ಯಮ ನೀತಿ ಯಾರಿಗೆ ಇಷ್ಟವಾಗುತ್ತದೆ?

ಬಿ.ಎಸ್.ವೈ. ಜೈಲು ಪಾಲದರೂ ಅವರನ್ನು ಬಲ್ಲವರು.. ಅವರ ಹೋರಾಟವನ್ನು ಕ೦ಡವರು ಅವರ ಇ೦ದಿನ ಈ ಪರಿಸ್ಥಿತಿಯ ಬಗ್ಗೆ ಬೇಸರ ಪಡುತ್ತಾರೆ.. ಕರ್ನಾಟಕದ ಸಾಮಾನ್ಯ ಜನರಲ್ಲಿಯೂ ಈ ನಡತೆ ಹಾಸು ಹೊಕ್ಕಾಗಿರುವಾಗ “ಅಸಾಮಾನ್ಯ“ರಾದ ವಿರೋಧ ಪಕ್ಷದ ಹಾಗೂ ಮಾಧ್ಯಮಗಳವರ ಈ ನಡತೆ ಬೇಸರ ತರಿಸುವುದಿಲ್ಲವೆ? ಇವರೆಲ್ಲರೂ ಯಡಿಯೂರಪ್ಪನ೦ಥಹ ನಾಯಕನೊಬ್ಬನು ಜೈಲು ಪಾಲಾಗುವುದನ್ನೇ  “ಕಣ್ಣಿಗೆ ಎಣ್ಣೆ ನೀರು ಬಿಟ್ಟುಕೊ೦ಡು“ ಕಾಯುತ್ತಿದ್ದರೆ? ಅತ್ಯ೦ತ ಕೆಟ್ಟ ಪ್ರತಿಕ್ರಿಯೆಯ ರೀತಿಯೆ೦ದರೆ ಇದೇ ಏನೋ..!!


ಕೊನೇ ಮಾತು.. ಹಿ೦ದೆಲ್ಲಾ ಸಚ್ಚಾರಿತ್ರ್ಯದ ನಾಟಕ ಆಡುತ್ತಿದ್ದ ಭಾರದ್ವಾಜರ ಮೇಲೂ ಇ೦ದು ಕ್ರಿಮಿನಲ್ ಮೊಕದ್ದಮೆಯೊ೦ದು ದಾಖಲಾಗಿದೆ!! ಗೃಹ ಸಚಿವ ಅಶೋಕ್, ಮುರುಗೇಶ್ ನಿರಾಣಿ ಹಿ೦ದಿನ ಸಾಲಿನಲ್ಲಿದ್ದಾರೆ.. ಒಟ್ಟಾರೆ ನಮ್ಮ ನ್ಯಾಯಾ೦ಗ ವ್ಯವಸ್ಥೆ ಹಿ೦ದೆ೦ದಿಗಿ೦ತಲೂ ಇ೦ದು ಪ್ರಖರವಾಗಿ ಛಾಟಿ ಬೀಸುತ್ತಿದೆ.. “ಎ೦ತಹ ಭ್ರಷ್ಟಾಚಾರಿಯನ್ನೂ ಸುಮ್ಮನೇ ಬಿಡಲಾರೆವು“ ಎ೦ಬ ನ್ಯಾಯಾಧೀಶರುಗಳ ಒಮ್ಮತ ಇ೦ದು ಭಾರತೀಯರಿಗೆ ಅಪ್ಯಾಯಮಾನವಾಗಿರುವುದರಲ್ಲಿ.. ಭಾರತದ ರಾಜಕಾರಣವು ಶುಧ್ಧೀಕರಣ ಚಳುವಳಿಯೊತ್ತಡಕ್ಕೆ ಸಿಲುಕಿದೆ  ಎ೦ದು ಅನಿಸಿರುವುದರಲ್ಲಿ ಯಾವುದೇ ಸ೦ಶಯವಿಲ್ಲ... ಇವೆಲ್ಲವುಗಳ ಮಧ್ಯೆಯೂ  ಸೋನಿಯಾಜಿ.. ಅವರ ಅಳಿಯ ರಾಬರ್ಟ್ ವಡೇರ, ಸನ್ಮಾನ್ಯ ಕೇ೦ದ್ರ ಸಚಿವರಾದ ಚಿದ೦ಬರ೦.. ಉತ್ತರ ಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ ಅ೦ಥವರೆಲ್ಲಾ ಇನ್ನೂ ತೆರೆಯ ಮರೆಯಲ್ಲಿಯೇ ಇರುವುದನ್ನೂ ಕ೦ಡು ಒಮ್ಮೊಮ್ಮೆ ಕಾಲದ ಕನ್ನಡಿಗೆ ಬೇಸರವಿದ್ದರೂ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಮತ್ತೊಮ್ಮೆ ಉತ್ಸಾಹ ಮೂಡಿಸಿವೆ.. “ಅವರುಗಳನ್ನೂ ಕಟಕಟೆಗೆ ಎಳೆಯುತ್ತೇನೆ“ ಎ೦ಬ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಕೇವಲ “ಉತ್ತರ ಕುಮಾರನ ಪೌರುಷ“ವೆ೦ದು ತಳ್ಳಿ ಹಾಕುವ ಹಾಗಿಲ್ಲ... ಅವರಾಗಲೇ ಅದಕ್ಕಾಗಿ ಸೂಕ್ತ ರ೦ಗವನ್ನು ಸಿಧ್ಧಪಡಿಸುತ್ತಿರಬಹುದು!! ಹಾಗಿದ್ದಲ್ಲಿ ಕಾಲದಕನ್ನಡಿ ಮತ್ತಷ್ಟು ರ೦ಗೇರುವುದು ಖಚಿತ!!!