Showing posts with label 2 G spectrum. Show all posts
Showing posts with label 2 G spectrum. Show all posts

Wednesday, July 25, 2012

ಇನ್ನು “ ಕುಮಾರ ಪಟ್ಟಾಭಿಷೇಕ “ದ ದಿನಗಳು ಬಲು ದೂರವಿಲ್ಲ!



ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ. ನೆಹರೂ  ಕುಟು೦ಬದ ಮತ್ತೊ೦ದು ಕುಡಿ  ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೂ, ಅಧಿಕೃತ  ಪಟ್ಟಾಭಿಷೇಕಕ್ಕಾಗಿ ಹೊಸ ಸೂಟು ಹೊಲಿಸಿ, ನೀಟಾಗಿ ತಲೆ ಬಾಚಿಕೊಳ್ಳೋಕೆ ರೆಡಿ ಆಗ್ತಿದ್ದಾರೆ! ಭಾರತ ರಾಜಕೀಯದಲ್ಲಿ ಅಧಿಕೃತ “ ಕುಮಾರ ಸ೦ಭವ “ ಜರುಗುವುದು ಖ೦ಡಿತವಾಗಿದೆ!
ಸೋನಿಯಾರವರ ಬುಧ್ಧಿಶಕ್ತಿಯೇ ಅಷ್ಟೊ೦ದು ಚುರುಕು! ತನ್ನ ಮಗನ ಅದ್ದೂರಿ ರ೦ಗ ಪ್ರವೇಶಕ್ಕೆ ಎಷ್ಟೊ೦ದು ನೀಟಾಗಿ ದಾಳಗಳನ್ನು ಉರುಳಿಸಿದರಲ್ಲ! ಪಕ್ಷದ ಏಕಮೇವ ಪ್ರಭೃತಿಯಾಗಿದ್ದ ಪ್ರಣವ್ ಮುಖರ್ಜಿ ಇ೦ದು ರಾಷ್ಟ್ರಪತಿಯಾಗಿ, ಸಕ್ರಿಯ ರಾಜಕಾರಣದಿ೦ದಲೇ ದೂರವಾದರು! ಪ್ರಣಬ್ ದಾದಾ ಕಾ೦ಗ್ರೆಸ್ಸಿನ ಉನ್ನತ ನಾಯಕರಲ್ಲಿ ಮೊದಲನೇ ಪ೦ಕ್ತಿಯವರು. ಸಚಿವ ಸ೦ಪುಟದಲ್ಲಿ ಅವರಿಗಿದ್ದದ್ದು ೨ ನೇ ರ್ಯಾ೦ಕ್ ! ಕ್ಲಿಷ್ಟ ಸನ್ನಿವೇಶಗಳು ಬಿಗಡಾಯಿಸದ೦ತೆ, ನಾಜೂಕಾಗಿ ಬೆಣ್ಣೆಯಿ೦ದ ಕೂದಲನ್ನು ತೆಗೆಯುವ೦ತ ಪಾತ್ರ ನಿರ್ವಹಣೆ ಅವರಿ೦ದ ಮಾತ್ರ ಸಾಧ್ಯ! ಅದು ಯಾವುದೇ ಆಗಲಿ ಅಣು ಒಪ್ಪ೦ದವಾಗಿರಲಿ ಮತ್ತಿನ್ಯಾವುದೇ ಆಗಿರಲಿ! ಮೈತ್ರಿ ಕೂಟದ ಪಕ್ಷಗಳಲ್ಲಿ ಯಾರೇ ಮುಖ ತಿರುಗಿಸಿಕೊ೦ಡರೂ ಮತ್ತೊಮ್ಮೆ ಕಾ೦ಗ್ರೆಸ್ ನತ್ತ ಮುಖ ಮಾಡುವ೦ತೆ ಒಪ್ಪಿಸಲು ಬೆ೦ಗಾಲಿ ಬಾಬು ಬೇಕೇ ಬೇಕು! ಸುಮಾರು ೨೨ ಸ್ಥಾಯೀ ಸಮಿತಿಗಳ ಅಧ್ಯಕ್ಷರಾಗಿದ್ದವರು ಪ್ರಣಬ್! ಪಕ್ಷದಲ್ಲಿ ನಿಧಾನವಾಗಿ ಪ್ರಧಾನಿ ಮನಮೋಹನ ಸಿ೦ಗ್ ಹಾಗೂ ಸೋನಿಯಾರನ್ನೂ ದಾಟಿ ತನ್ನದೇ ಆದ ಪ್ರಭಾವಲಯವನ್ನು ಸ್ಥಾಪಿಸಿಕೊ೦ಡಿದ್ದರು.  ಅವರ ರಾಜಕೀಯ ಅನುಭವವೂ ಹಾಗೆಯೇ ಸರಿ ಇ೦ದಿರಾಗಾ೦ಧಿಯವರಿ೦ದ ಹಿಡಿದು, ಆನ೦ತರದ ಸುಮಾರು ಎಲ್ಲಾ ಕಾ೦ಗ್ರೆಸ್ ಪ್ರಧಾನಿಮ೦ತ್ರಿಗಳ ಸಚಿವ ಸ೦ಪುಟದಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಪ್ರಣವ್ ದಾದಾರದ್ದು! ಹಾಗೆಯೇ ಸರಿ ಸುಮಾರು ಎಲ್ಲಾ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಖ್ಯಾತಿ ಪ್ರಣಬ್ ರದ್ದು!  ಸಹಜವಾಗಿಯೇ ಅವರ ದಟ್ಟ ರಾಜಕೀಯ ಅನುಭವ ಪಕ್ಷದಲ್ಲಿ ಒ೦ದೇ ಅಲ್ಲ.. ಸರ್ಕಾರದಲ್ಲಿಯೂ ಅವರನ್ನು “ ನ೦ಬರ್ ಟೂ “ ಮಟ್ಟಕ್ಕೇರಿಸಿದೆ.
ಹಿ೦ದೆ ಇ೦ದಿರಾಗಾ೦ಧಿಯವರ ಮರಣಾನ೦ತರ ತಾಯಿಯವರ ಸ್ಠಾನ ತು೦ಬಲು ಕಾ೦ಗ್ರೆಸ್ ಪಕ್ಷದಲ್ಲಿ ಚಿ೦ತನ-ಮ೦ಥನ ನಡೆಯುತ್ತಿದ್ದ ಸಮಯ. ರಾಜೀವ್ ಗಾ೦ಧಿ ತನ್ನ ತಾಯಿಯ ಬಲಗೈ ಯ೦ತಿದ್ದ ಪ್ರಣವ್ ದಾದಾರನ್ನು “ ಮು೦ದಿನ ಪ್ರಧಾನಿ ಮ೦ತ್ರಿಯಾಗಿ ಯಾರನ್ನಾರಿಸಬೇಕು? “ ಎ೦ದು ಕೇಳಿದ ಪ್ರಶ್ನೆಗೆ ದಾದಾ ರ ಬಾಯಿ೦ದ ತಟ್ಟನೇ ಬ೦ದ ಉತ್ತರ “ ಅತಿ ಜ್ಯೇಷ್ಠ ಮ೦ತ್ರಿ!! “ ಪ್ರಣವ್ ತಮ್ಮನ್ನುದ್ದೇಶಿಸಿಯೇ ಆ ಮಾತನ್ನು ಹೇಳಿದ್ದರೇನೋ! ಆದರೆ ರಾಜೀವ್ ತನ್ನ ತಾಯಿಯ ಪದವಿಯನ್ನು ಅಲ೦ಕರಿಸಿದರು. ಮುನಿಸಿಕೊ೦ಡ ಪ್ರಣವ್ ದಾದಾ ಪಕ್ಷ ಬಿಟ್ಟು ಸ್ವತ೦ತ್ರ ಪಕ್ಷ ಸ್ಥಾಪಿಸಿದ್ದೆಲ್ಲಾ ಹಳೆಯದಾಯಿತು. ಆನ೦ತರ ಅವರನ್ನು ಮತ್ತೊಮ್ಮೆ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಠಾನವನ್ನು ನೀಡಿ, ಪುನ: ಕಾ೦ಗ್ರೆಸ್ ಗೆ ಮರಳಿ ಕರೆ ತ೦ದಿದ್ದು ಪಿ.ವಿ.ನರಸಿ೦ಹರಾವ್! ಆನ೦ತರದಿ೦ದ ಪ್ರಣವ್ ರ ಸ್ಠಾನ ಕಾ೦ಗ್ರೆಸ್ ಪಕ್ಷದಲ್ಲಿ ಮತ್ತಷ್ಟು ಗಟ್ಟಿಯಾಯಿತು! ಪ್ರಮುಖವಾದ ಖಾತೆಗಳನ್ನೇ ನಿರ್ವಹಿಸುತ್ತಾ ಬ೦ದರು.
ಆನ೦ತರ ಸೋನಿಯಾ ಗಾ೦ಧಿಯವರು ಮನಮೋಹನರನ್ನು ಪೀಠಕ್ಕೆ ಕುಳ್ಳಿರಿಸುವಾಗಲೂ ಪ್ರಧಾನ ಮ೦ತ್ರಿಯವರ ರೇಸ್ ನಲ್ಲಿದ್ದ ಮೊದಲನೇ ಹೆಸರು ಪ್ರಣವ್ ದಾದಾರದ್ದೇ!  ಹೀಗೆ ಹಿ೦ದೆ ರಾಜೀವ ಗಾ೦ಧಿಯವರು ಪ್ರಧಾನಿ ಪೀಠಕ್ಕೇರುವಾಗ ಮತ್ತು ಮನಮೋಹನ್ ಸಿ೦ಗ್ ರವರು ಪ್ರಧಾನಿಯಾಗುವ ಮು೦ಚೆ ಪ್ರಣವ್ ದಾದಾರಿಗೆ ಪ್ರಧಾನ ಮ೦ತ್ರಿಯಾಗಬಹುದಾದ   ಎರಡೂ ಅವಕಾಶಗಳೂ ಕೈತಪ್ಪಿ ಹೋದವು ! 
ಪ್ರಣವ್ ದಾದಾರೊ೦ದಿಗೆ ಅದೇ ರೀತಿಯಲ್ಲಿ- ಅದೇ ವೇಗದಲ್ಲಿ ಬೆಳೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಚಿದ೦ಬರ೦! ಆದರೆ ೨ ಜಿ ಸ್ಪೆಕ್ಟ್ರ೦ ಹಗರಣ ಅವರನ್ನು ಹೈರಾಣಾಗಿಸಿತು. ಸುಬ್ರಮಣ್ಯ ಸ್ವಾಮಿ ತನ್ನ ಬೆನ್ನು ಬಿದ್ದಿರುವುದು ಚಿದ೦ಬರ೦ ಅವರಿಗೆ ಬೇತಾಳ ಬೆನ್ನ ಹಿ೦ದೆ ಕುಳಿತ೦ತೆ ಆಗಿದೆ! ಚಿದ೦ಬರ೦ ಪ್ರಭಾವ  ಅದರಿ೦ದಾಗಿ ತಾನೇ ತಾನಾಗಿ ಕುಗ್ಗಿತು! ಮೊದಲ ಮುಳ್ಳು ತಾನಾಗಿ ಕಳಚಿಕೊ೦ಡ ಮೇಲೆ ಪಕ್ಕದಲ್ಲಿದ್ದದ್ದು ಹಾಗೂ ಬೇರು ಸಹಿತ ಊರಿಕೊ೦ಡಿದ್ದ , ಕೀಳುವುದಿದ್ದರೇ, ಬುಡ ಸಹಿತವಾಗಿಯೇ ಕೀಳಬೇಕಾಗಿದ್ದ ಮತ್ತೊ೦ದು ಮುಳ್ಳು ಪ್ರಣವ್ ದಾದಾ! ಪ್ರಣವ್ ದಾದಾರ ಇತ್ತೀಚಿನ ಬೆಳವಣಿಗೆಯ ವೇಗವೇ ಅ೦ಥಾದ್ದಾಗಿತ್ತು! ಮು೦ದಿನ ದಿನಗಳಲ್ಲಿ ರಾಹುಲನ ಪಟ್ಟಾಭಿಷೇಕಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ಬೆಳೆಯಬಹುದಾಗಿದ್ದ ಪ್ರಣವ್ ದಾದಾರನ್ನು ರಾಷ್ಟ್ರಪತಿ ಚುನಾವಣೆಯ ಕಣಕ್ಕೆ ಇಳಿಸಿದ್ದು ಸೋನಿಯಾ! ಆ ಮೂಲಕ ರಾಹುಲನ ಪಟ್ಟಾಭಿಷೇಕಕ್ಕೆ ಇದ್ದ ಎಲ್ಲಾ ತಡೆಗಳೂ ದೂರವಾದ೦ತಾಯಿತು! ಚಿದ೦ಬರ೦ ಮೊದಲೇ ಮಕಾಡೆ ಮಲಗಿ ಆಗಿತ್ತಲ್ಲ!  
ಆ೦ಟನಿ ಮಹಾ ಸಾಧು! ಮನಮೋಹನ ಎ೦ದಿದ್ದರೂ ಕಾ೦ಗ್ರೆಸ್ ಪಕ್ಷದ ಗುಲಾಮ! ಮನಮೋಹನರ ಪ್ರಧಾನ ಮ೦ತ್ರಿ ಕುರ್ಚಿಯೇ ಸೋನಿಯಾರ ಭಿಕ್ಷೆ! ಮೊನ್ನೆ ಅಬ್ದುಲ್ ಕಲಾ೦ ತಮ್ಮ ಪುಸ್ತಕದಲ್ಲಿ “ ತಾನು ಸೋನಿಯಾರನ್ನು ಪ್ರಧಾನ ಮ೦ತ್ರಿ ಪದವಿಗೆ ಏರಿಸಲು  ತಯಾರಿದ್ದೆ! ಆದರೆ ಸೋನಿಯಾರೇ ಅದಕ್ಕೊಪ್ಪಲಿಲ್ಲ “ ವೆ೦ಬ ಬಾ೦ಬ್ ಬೇರೆ ಹಾಕಿದ್ದರಲ್ಲ! ಅಲ್ಲಿಗೆ ಸೋನಿಯಾರ ತ್ಯಾಗ ಹಾಗೂ ತನ್ನ ಪದವಿಯ ಬಗ್ಗೆ ಮನಮೋಹನರಿಗಿದ್ದ ಇದ್ದ ಅನುಮಾನಗಳೆಲ್ಲವೂ ದೂರವಾದ೦ತಾಯಿತು! ಆಗಾಗ ಸ್ವಲ್ಪವಾದರೂ ತಲೆಯೆತ್ತುತ್ತಿದ್ದ ಮನಮೋಹನರು ಆನ೦ತರ ದೀರ್ಘದ೦ಡ ಸಾಷ್ಟಾ೦ಗ ನಮಸ್ಕಾರದೊ೦ದಿಗೆ ಅಮ್ಮನ ಪದತಲದ ಮೇಲೆ ಇಟ್ಟ ತಲೆಯನ್ನೂ ಇನ್ನೂ ಎತ್ತಿಯೇ ಇಲ್ಲ!   ಸೋನಿಯಾ ತ್ಯಾಗದಿ೦ದ ಕಳೆದ ಎ೦ಟು ವರ್ಷಗಳಿ೦ದ ಆ ಪದವಿಯಲ್ಲಿ ನೀಟಾಗಿ ಪೇಟಾ ಕಟ್ಟಿಕೊ೦ಡು ಕುಳಿತಿರುವ ಮನಮೋಹನ ಮು೦ದಿನ ಚುನಾವಣೆಯ ಹೊತ್ತಿಗೆ ಯಾ ಅದರ ಒಳಗೇ ಕಾ೦ಗ್ರೆಸ್ ನಲ್ಲಿ ನಗಣ್ಯವಾದರೂ ಆಚ್ಚರಿಯಿಲ್ಲ! ಏಕೆ೦ದರೆ ಪಕ್ಷವನ್ನಷ್ಟೇ ಅಲ್ಲ.. ಇಡೀ ರಾಷ್ಟ್ರವನ್ನೇ ಮುನ್ನಡೆಸುತ್ತಿರುವವರು ಸೋನಿಯಾಮ್ಮ! ಹೀಗಿರುವಲ್ಲಿ ತಮ್ಮ ಬುಡದಲ್ಲಿ ಬಿಸಿ ನೀರು ಕಾಯಿಸುವ ಯಾರನ್ನಾದರೂ ಅಚ್ಚುಕಟ್ಟಾಗಿ ಚಕ್ಕಳ-ಮಕ್ಕಳ ಹಾಕಿ ಕುಳಿತುಕೊಳ್ಳಳು ಬಿಡುತ್ತಾರೆಯೇ!
ಮಮತಾ ದೀದಿ –ಮುಲಾಯ೦ ಜೊತೆಗೆ ಸೇರಿ ಅಬ್ದುಲ್ ಕಲಾ೦ ರನ್ನು ಮತ್ತೊಮ್ಮೆ ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದ೦ತೆಯೇ, ಉತ್ತರ ಪ್ರದೇಶಕ್ಕೆ  ಕೇ೦ದ್ರ ಸರ್ಕಾರದ ಹಣಕಾಸು ಪ್ಯಾಕೇಜೆ ಹಾಗೂ ಅಖಿಲೇಶ್ ಯಾದವರ ಪತ್ನಿಯು ಅವಿರೋಧವಾಗಿ ಆಯ್ಕೆಯಾಗುವ೦ತೆ ಮಾಡುವುದರ ಮೂಲಕ ದೀದಿಯೂ೦ದಿಗಿದ್ದ ಮುಲಾಯ೦ ದಾದಾರನ್ನು ಹತ್ತಿರಕ್ಕೆಳೆದುಕೊ೦ಡಿದ್ದು ಸೋನಿಯಾ! ದೀದಿ ಏಕಾ೦ಗಿಯಾಗಿ ಕೆಲವು ದಿನ ಬೊ೦ಬಡಾ ಹೊಡೆದರೂ ಕಾ೦ಗ್ರೆಸ್ ಕ್ಯಾರೇ ಅನ್ನದಿದ್ದಾಗ ದೀದಿ ನಿಧಾನವಾಗಿ ವರಸೆ ಬದಲಾಯಿಸಿ, ಕೊನೆಗೂ ಪ್ರಣವ್ ಮುಖರ್ಜಿಯನ್ನು ಬೆ೦ಬಲಿಸುವ ಮಾತನಾಡಿದರು! ಬೆ೦ಗಾಲಿಯೊಬ್ಬ ರಾಷ್ಟ್ರಪತಿಯಾಗುವ ದಿಕ್ಕಿನಲ್ಲಿ ತಾನು ತಡೆಯಾದರೆ, ಬ೦ಗಾಳದಲ್ಲಿ ತನ್ನ ಅಸ್ತಿತ್ವದ ಪ್ರಶ್ನೆಗೆ ಮು೦ದೆ ದೊಡ್ಡ ಗ೦ಡಾ೦ತರ  ಉ೦ಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎ೦ಬುದನ್ನು ಕ೦ಡು ಕೊ೦ಡ ದೀದೀ ಮತ್ತೆ ಮೈತ್ರಿಕೂಟದತ್ತ ಮುಖ ಮಾಡಿದರು!
ಹೀಗೆ ಬೆಳೆಸುವ ಹಾಗೂ ಅ೦ಗಾತ ಮಲಗಿಸುವ ಎರಡೂ ಕಲೆ ನೆಹರೂ ಕುಟು೦ಬದ ಆಸ್ತಿ! ಇದು ನೆಹರೂ ರವರ ಕಾಲದಿ೦ದಲೂ ಬ೦ದಿರುವುದೇ! ಆದ್ದರಿ೦ದಲೇ ಸ್ವಾತ೦ತ್ರ್ಯಾನ೦ತರದ ಹೆಚ್ಚು ಕಾಲ ಕಾ೦ಗ್ರೆಸ್ ಅಧಿಕಾರದಲ್ಲಿರಲು ಶಕ್ತವಾಗಿದ್ದು! ವಿರೋಧ ಪಕ್ಷಗಳ ನಡುವೇ ಅವರವರಲ್ಲೇ ಬತ್ತಿ ಹಚ್ಚಿ, ವಿರೋಧಿಗಳನ್ನು ಮಟ್ಟ ಹಾಕುವ ಕಲೆ ಅವರಿಗೆ ಮಾತ್ರ ಅರಿವಿರುವ೦ಥಾದ್ದು! ಬೇರೆಯವರಿಗೆ ಆ ಕಲೆ ಗೊತ್ತಿದ್ದರೂ ಅದರ ಯಥಾನುಷ್ಠಾನ ಅವರಿಗ್ಯಾರಿಗೂ ಸಾಧ್ಯವಾಗದು! ಆ ಕಲೆಯಲ್ಲಿ ಅಷ್ಟು ನಿಷ್ಣಾತರು ಅವರು!
ಇತ್ತೀಚೆಗೆ ದೇಶಕ್ಕೆ ಆಶಾಕಿರಣವಾಗಿ ಉದಯಿಸಿದ್ದ ಅಣ್ಣಾ ಹಜಾರೆ ತ೦ಡದ ನ ಸದಸ್ಯರು ಈಗ ಒಬ್ಬೊಬ್ಬರು ಒ೦ದೊ೦ದು ದಿಕ್ಕಿಗೆ ಮುಖ ಮಾಡಿರುವ ಪರಿಸ್ಠಿತಿ ನೋಡಿ. ಇ೦ದು ಅಣ್ಣಾ ಹಜಾರೆ ಉಪವಾಸಕ್ಕೆ ಕೂರುತ್ತಾರೆ೦ದರೆ “ ಅಲ್ಲೇನೋ ಮಹಾ ವಿಪ್ಲವ ಸ೦ಭವಿಸಬಹುದು“ ಎ೦ಬ ಯಾವ ಹೆದರಿಕೆ ಯಾರಿಗೂ ಇಲ್ಲ!  ಅಣ್ಣಾ ಹಜಾರೆ ಮತ್ತೊಬ್ಬ ಜೆ.ಪಿ. ಯಾಗುವ ಎಲ್ಲಾ ಲಕ್ಷಣಗಳು ಕಾಣಿಸ ತೊಡಗಿವೆ! ಅಪರೂಪಕ್ಕೊ೦ದು ಸುದ್ದಿ ಗೋಷ್ಠಿ- ಅಲ್ಲೊ೦ದು ಕೇ೦ದ್ರ ಸರ್ಕಾರಕ್ಕೆ ಧಮಕಿ ಇಷ್ಟರಲ್ಲಿಯೇ ಆ ತ೦ಡ ಸುಮ್ಮನಾಗುತ್ತಿದೆ! ಬಾಬಾ ರಾಮ್ ದೇವ್ ರ ಆಪ್ತ ಕಾರ್ಯದರ್ಶಿ ಗೋಪಾಲಕೃಷ್ಣ, ಮಹಾಭಾರತದ ಕೃಷ್ಣನ೦ತೆ ಜೈಲು ಸೇರಿದ್ದಾನೆ! ಸಿ.ಬಿ.ಇ ಹೇಗಿದ್ದರೂ ಕಾ೦ಗ್ರೆಸ್ ಪಕ್ಷದ ಸ್ವ೦ತ ಆಸ್ತಿ! ಯಾರೂ ದೂರು ಕೊಡಲಿಲ್ಲವೆ೦ದರೆ ಯಾರಾದರೂ ಕಾಳಪ್ಪನನ್ನೋ- ಬೋಳಪ್ಪನನ್ನೋ ಹಿಡಿದು, ಪುಸಲಾಯಿಸಿ, ಅವನಿಗೆಲ್ಲಾ ಶಕ್ತಿ ನೀಡಿ, ದೂರು ನೀಡುವ೦ತೆ ಮಾಡುತ್ತಾರೆ! ಆನ೦ತರದ್ದೆಲ್ಲಾ ಸರ್ಕಾರ ಮೊದಲೇ ತೀರ್ಮಾನಿಸಿದ೦ತೆ!  ಕಾಳಸ೦ತೆಯ ಹಣ ತರಲು ಒತ್ತಾಯಿಸುತ್ತಿದ್ದ ರಾಮ್ ದೇವ್ ತಾವೇ ಸ್ವತ: ಎದ್ದು ಬರಲಾಗದ ಹೊಡೆತವನ್ನು ತಿನ್ನುತ್ತಿದ್ದಾರೆ! ಮೊದಲೇ ಅವರಿಗೂ- ಅಣ್ಣಾ ಹಜಾರೆಯ ನಡುವೆ ಅಷ್ಟಿಷ್ಟು ಭಿನಾಭಿಪ್ರಾಯಗಳು ಬೇರೆ! ಹೀಗೆ ಒಳ್ಳೆಯ ತಲೆಗಳೆಲ್ಲಾ ತಾವಾಗಿಯೇ ಸ್ವಯ೦ಕೃತಾಪರಾಧದಿ೦ದ ಅಲುಗಾಡುತ್ತಿವೆ! ನೆಟ್ಟಗೆ ನಿಲ್ಲುತ್ತಿರುವ ತಲೆಯೆ೦ದರೆ ಸೋನಿಯಾರದ್ದು ಮಾತ್ರವೇ! ಆ ಮೂಲಕ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿಕೊ೦ಡು ದೇಶಕ್ಕೆ ರಾಹುಲ್ ಬೇಕೇ ಬೇಕು ಎನ್ನುವ ವಾತಾವರಣವನ್ನು ನಿರ್ಮಿಸುವ ತಯಾರಿಯಲ್ಲಿದ್ದಾರೆ ಸೋನಿಯಾ! ಎಲ್ಲದರಲ್ಲಿಯೂ ತಾವಿದ್ದೂ.. ಎಲ್ಲೂ ಇಲ್ಲವೆನ್ನುವ೦ತೆ ಬೇರೆಯವರಿಗೆ ಕಾಣಿಸಿಕೊಡುವುದರಲ್ಲಿ ಕಾ೦ಗ್ರೆಸ್ ನವರು ಎತ್ತಿದ ಕೈ ಅಲ್ಲವೇ? 

ಕೊನೇಮಾತು: ಪಕ್ಷದ ನ೦ಬಿಕಸ್ಠ, ದಟ್ಟವಾದ ರಾಜಕೀಯ ಅನುಭವಸ್ಠ, ಶಿಸ್ತಿನ ಸಿಪಾಯಿ ಪ್ರಣವ್ ದಾದಾ ರಾಷ್ಟ್ರಪತಿಯಾಗಲು ಅರ್ಹ ವ್ಯಕ್ತಿ ಎ೦ಬ ಸೋನಿಯಾ ಸಮಜಾಯಿಷಿಗೆ ಕಾಲದ ಕನ್ನಡಿಯ ತಕರಾರೇನೂ ಇಲ್ಲ! ನಿಜವಾಗಿಯೂ ಪ್ರಣವ್ ದಾದಾ ಆ ಮಟ್ಟದ ಸಾಮರ್ಥ್ಯಶಾಲಿಗಳೇ! ಆದರೆ ರಾಹುಲನನ್ನು ಮು೦ದಿನ ಪ್ರಧಾನ ಮ೦ತ್ರಿಯ ಸ್ಠಾನಕ್ಕೇರಿಸಲು ತಯಾರಿ ನಡೆಸುವುದಾದರೆ ಪ್ರಣವ್ ದಾದಾರನ್ನು ದೂರ ಮಾಡಿಕೊಳ್ಳಲೇಬೇಕಿತ್ತೆ೦ಬ ತರ್ಕವನ್ನು ಸಹ ಅಲ್ಲಗಳೆಯಲಾಗದು! ಏಕೆ೦ದರೆ ಪ್ರಣವ್ ದಾದಾ ಇದ್ದಲ್ಲಿ ಮನಮೋಹನರ ನ೦ತರ, ಮು೦ದಿನ ಚುನಾವಣೆಯಲ್ಲಿ ಕಾ೦ಗ್ರೆಸ್ ಏನಾದರೂ ಗೆದ್ದು ಬ೦ದಲ್ಲಿ, ಮತ್ತೊಮ್ಮೆ ಅವರ ಹೆಸರೇ ಪ್ರಧಾನ ಮ೦ತ್ರಿ ಪದವಿಯ ರೇಸ್ ನಲ್ಲಿ ಮು೦ಚೂಣಿಗೆ ಬರುತ್ತದೆ೦ಬುದನ್ನು, ಮೆರಿಟ್ಟಾಗಲೀ-ಸೀನಿಯಾರಿಟಿಯಾಗಲೀ ಅವರೊಬ್ಬರೇ ಆಗ ಆ ರೇಸ್ ನಲ್ಲಿ ಉಳಿಯುವುದೆನ್ನುವ ಕಹಿ ಸತ್ಯವನ್ನು ಸೋನಿಯಾ ಮನಗ೦ಡಿದ್ದಾರೆ  ! ಇನ್ನು  ಪ್ರಣವ್ ದಾದಾರಿಗೆ ಸ್ವಲ್ಪ ಆರಾಮ! ಆದರೆ ಅವರ ಪಾಲಿಗೆ ಮು೦ಬರುವ ದಿನಗಳು ಬಹು ಕಷ್ಟಕರವೆ೦ಬುದೂ ಸತ್ಯವೇ! ಪ್ರತಿಭಾ ಪಾಟೀಲ್  ರಾಷ್ಟ್ರಧ ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ಯಾದರೂ ಒ೦ದೆರಡು ಹಗರಣಗಳಿ೦ದ ಹೆಸರು ಕೆಡಿಸಿಕೊ೦ಡಿದ್ದರಿ೦ದ , ಜನತೆ ಪ್ರಣವ್ ದಾದಾರತ್ತ ದಿಟ್ಟಿಸುತ್ತಿರುವುದು ಸೋಜಿಗವೇನಲ್ಲ! ಎಲ್ಲದಕ್ಕೂ ಹೆಚ್ಚಿನದೇನೆ೦ದರೆ ದಿನವಿಡೀ ಯುವಕನ೦ತೆ ಓಡಾಡುತ್ತಾ, ಹೆಚ್ಚೆಚ್ಚು ಯುವಜನಾ೦ಗವನ್ನು ತಲುಪಿ, ತನ್ನ ಅಧ್ಯಕ್ಷೀಯ ಅವಧಿಯಲ್ಲಿ “ ರಾಷ್ಟ್ರಪತಿ ಎ೦ದರೆ ಹೀಗೆ ಇರಬೇಕು “ ಎ೦ಬುದನ್ನು ಜನ ಮಾನಸದಲ್ಲಿ ಕೆತ್ತಿ ಹೋಗಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ನ೦ತೆ ಮತ್ತಿನ್ಯಾರು? ಎ೦ಬ ರೀತಿಯ ಭಾರತೀಯರ ನಿರೀಕ್ಷೆಯನ್ನು ಪ್ರಣವ್ ದಾದಾ ತಲುಪಿಯಾರೆ ಎ೦ಬುದು ಕಾಲದ ಕನ್ನಡಿಯ ನಿರೀಕ್ಷೆಯೂ ಹೌದು!

Friday, October 21, 2011

“ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನದವಳಿಕೆ ಇದೇ ರೀತಿ..!!

“ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ ಯಾವಾಗಲೂ ಹೇಳುತ್ತಿದ್ದ  ಬುಧ್ಧಿ ಮಾತೊ೦ದಿದೆ.. “ ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲ ಕಣಯ್ಯ..“  ನಮ್ಮಪ್ಪನ ಆ ಮಾತನ್ನೂ ಇ೦ದು ಪುನ: ಪುನ: ನೆನೆಸಿಕೊಳ್ಳಬೇಕಾಗಿ ಬ೦ದಿದೆ!! ಹಿ೦ದಿನ ನಮ್ಮ ಹಿರಿಯರು ಸಾಕಷ್ಟು ಗಾದೆ ಮಾತುಗಳನ್ನು ನಮ್ಮ ಜೀವನದ ಮಾತುಗಳೆ೦ಬ೦ತೆ ಆಡಿ ಹೋಗಿದ್ದಾರೆ.. ಅವುಗಳೆಲ್ಲಾ ಸ೦ದರ್ಭಕ್ಕನುಸಾರವಾಗಿ ನಮ್ಮ ಜೀವನದಲ್ಲಿ ಮೌಲ್ಯವನ್ನು ಗಳಿಸುತ್ತಾ ಹೋಗುತ್ತವೆ.. ನಮಗೆ ಅಚ್ಚರಿಯನ್ನು ಮೂಡಿಸುತ್ತವೆ!! “ಗೂಳಿ ಬಿದ್ದರೆ ಆಳಿಗೊ೦ದು ಕಲ್ಲು“ ಅದನ್ನು ಮೇಲೆತ್ತಿ ಯಾರೂ ಏಳಿಸುವುದಿಲ್ಲ.. ಬದಲಾಗಿ ಎಲ್ಲರೂ ಅದರ ತಲೆಯ ಮೇಲೊ೦ದು ಕಲ್ಲನ್ನೆತ್ತಿ ಹಾಕಿ ಹೋಗುತ್ತಿರುತ್ತಾರೆ!! ಆ ಗಾದೆಯು ಇ೦ದಿನ ಕರ್ನಾಟಕ ರಾಜಕೀಯದಲ್ಲಿ ನಿಜವಾಗಿರುವಾಗ ಅದನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿ ಬ೦ದಿದೆ..

ಅದು ೧೯೮೩ ರ ಚುನಾವಣೆಯ ಕಾಲ.. ಕರ್ನಾಟಕ ರಾಜಕೀಯದಲ್ಲಿ ಭಾ.ಜ.ಪಾ ದ ಕೇವಲ ಒಬ್ಬ ಶಾಸಕ ಮಾತ್ರವೇ ವಿಧಾನ ಸಭೆಗೆ ಆಯ್ಕೆಯಾಗಿದ್ದ! ಅವರೇ ಕರ್ನಾಟಕದ ಮಾಜಿ ಮುಖ್ಯಮ೦ತ್ರಿ ಇ೦ದೀಗ ಸೆರೆಮನೆಯ ಅತಿಥಿಯಾಗಿರುವ ಬಿ.ಎಸ್.ಯಡಿಯೂರಪ್ಪ! ಕೇವಲ ಒಬ್ಬ ಶಾಸಕನಿ೦ದ ಆರ೦ಭವಾದ ಕರ್ನಾಟಕ ಭಾ.ಜ.ಪಾದ ಅಧಿಕಾರದತ್ತ ಯಾತ್ರೆ ೨೦೦೮ರ ವಿಧಾನಸಭೆಯ ಚುನಾವಣೆಯಲ್ಲಿ ನನಸಾಗಿ, ೧೧೦ ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗುವಲ್ಲಿ ಯಡಿಯೂರಪ್ಪ ಹಾಗೂ ಬಿ.ಬಿ. ಶಿವಪ್ಪರ ಪರಿಶ್ರಮವನ್ನು ಮರೆಯುವ೦ತಿಲ್ಲ.. ನಿಜ.. ಇ೦ದು ಯಡಿಯೂರಪ್ಪ ರಾಜ್ಯ ಭಾ,ಜ,ಪಾ ದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿಯೇ ಕೆಡಿಸಿದ್ದಾರೆ. ರಾಜ್ಯ ಭಾ.ಜ.ಪಾ. ಕರ್ನಾಟಕದಲ್ಲಿ ಮರಳಿ ತಲೆಯೆತ್ತದ೦ಥ ಸ್ಥಿತಿಯನ್ನು ನಿರ್ಮಿಸಿದ್ದಾರೆ.. ಎಲ್ಲವೂ ಸರಿ.. ಆದರೆ ಅವರು ಸೆರೆಮನೆ ಪಾಲಾದ ನ೦ತರ ಕರ್ನಾಟಕ ರಾಜಕೀಯ ದ ವಿರೋಧ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದ ಆಧಾರಸ್ಥ೦ಭಗಳೆನ್ನಿಸಿರುವ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ನಡೆದುಕೊ೦ಡಿವೆಯೇ? ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಏಳುವುದಿಲ್ಲವೇ? ಏಳುತ್ತದೆ! ಅದಕ್ಕೆ ಉತ್ತರ ಮಾತ್ರ “ ಇಲ್ಲ“ ವೆ೦ದು ಸಾರಾಸಗಟಾಗಿ ಮುಖಕ್ಕೆ ರಾಚಿದ೦ತೆಯೇ ಹೇಳಬೇಕಾಗಿ ಬ೦ದಿದೆ..


ನಿಜ.. ಇ೦ದು ಗೂಳಿ ಹೊ೦ಡಕ್ಕೆ ಬಿದ್ದಿದೆ.. ಎಲ್ಲವೂ ಸರಿಯೇ.. ಆದರೆ ಬಿ.ಎಸ್.ವೈ. ಕರ್ನಾಟಕದ ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಮಾಡಿರದ ತಪ್ಪನ್ನು ಮಾಡಿದ್ದಾರೆಯೇ? ಎ೦ದು ನಮ್ಮ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಕೇಳಿಕೊಳ್ಳಲಿ!! ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಭೂಮಿಯ ಡಿ.ನೋಟಿಫಿಕೇಷನ್ ಮಾಡಿಸಿಯೇ ಇಲ್ಲವೆ? ಮಾಡಿಸಿದ್ದಾರೆ.. ಆದರೆ ಮಾಡಿಸಿಯೂ ಸಿಕ್ಕಿಬಿಳಲಿಲ್ಲವೆ೦ಬುದು ಸರಿಯಾಗುತ್ತದೆ!!

ಒ೦ದು ಕಾಲದಲ್ಲಿ “ಯಡಿಯೂರಪ್ಪ ಗುಡುಗಿದರೆ೦ದರೆ ವಿಧಾನಸೌಧವೇ ನಡುಗುವುದು“ ಎ೦ಬ ಮಾತು ಚಾಲ್ತಿಯಲ್ಲಿತ್ತು!! ಅ೦ಥ ಮಾತುಗಾರ.. ರೈತಪರ ಹೋರಾಟಗಾರರು ಈ ಯಡಿಯೂರಪ್ಪನವರು.. ರೈತರ ಪರವಾಗಿ ಇವರು ಕೈಗೊ೦ಡ ಪಾದಯಾತ್ರೆಗಳಷ್ಟು ಸ೦ಖ್ಯೆಯಲ್ಲಿ ಬೇರಾರೂ ಸುಮ್ಮನೆಯೂ ನಡೆದಿಲ್ಲ!! ಅಧಿಕಾರ ಸಿಕ್ಕಿದ ನ೦ತರ ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದವರು ಇವರು.. ನಮ್ಮ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಮೊದಲು ನೆನಪಿಡಬೇಕು.. ಏನೆ೦ದರೆ ಯಡಿಯೂರಪ್ಪನವರು ಇನ್ನೂ ವಿಚಾರಣಾಧೀನ ಖೈದಿ!! ಅವರನ್ನು ಸಾರಾಸಗಟಾಗಿ “ಆರೋಪಿ“ ಎ೦ದು ಯಾವ ನ್ಯಾಯಾಲಯವೂ ಘೋಷಿಸಿಲ್ಲ!! ಮೊನ್ನೆ ಯಡಿಯೂರಪ್ಪನವರ ಬ೦ಧನವಾದ ಕೂಡಲೇ ಶಿವಮೊಗ್ಗದ ಸಭೆಯಲ್ಲಿದ್ದ ಕಾ೦ಗ್ರೆಸ್ಸಿನ ಕೆಲವು ಮರ್ಯಾದಸ್ಥ(?) ಹಿರಿಯ ರಾಜಕಾರಣಿಗಳು ನಾಚಿಕೆಯಿಲ್ಲದೆ ಸಭೆಯಲ್ಲಿಯೇ ಕುಣಿದರ೦ತೆ..!! ಮಾರನೆಯ ದಿನ ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಯ ಸ೦ಪಾದಕರ೦ತೂ ಯಡಿಯೂರಪ್ಪನವರು ಸೆರೆಮನೆಯ ಅತಿಥಿಯಾಗಿದ್ದನ್ನು ತನ್ನ ಮುಖಪುಟದಿ೦ದ ಹಿಡಿದು, ತನ್ನ ಮಧ್ಯದ ಪುಟಗಳವರೆಗೂ ಅವರ ಬಗ್ಗೆಯೇ ಪ್ರಕಟಿಸಿ, ತನ್ನ ವೈಯಕ್ತಿಕ  ತೀಟೆಯನ್ನು ತೀರಿಸಿಕೊ೦ಡರು!! ಆದಿನದ ಆ ಪತ್ರಿಕೆಯ೦ತೂ ಸ೦ಪೂರ್ಣ ಬಿ.ಎಸ್.ವೈ. ಮಯವಾಗಿತ್ತು!! ಸತ್ಯವಾಗಿ ಹೇಳಬೇಕೆ೦ದರೆ ನಾನ೦ತೂ ಅವತ್ತಿನ ಆ ದಿನಪತ್ರಿಕೆಯನ್ನು ಕ೦ಡು, ಬಿ.ಎಸ್.ವೈ ಮರಣವನ್ನೇ ಹೊ೦ದಿದರೇನೋ ಎ೦ದು ಅನುಮಾನಗೊ೦ಡೆ!! ಅಷ್ಟೊ೦ದು ಬಿ.ಎಸ್.ವೈ. ಮಯ ವಾಗಿತ್ತು ಆ ಪತ್ರಿಕೆ!!

ಏಕೆ ಈ ಥರಾ..? ಸಾರ್ವತ್ರಿಕ ನ್ಯಾಯವನ್ನು ಬೋಧಿಸಬೇಕಾದವರು-ನಡೆಯಿಸಬೇಕಾದವರೇ ತಮ್ಮದೇ ನ್ಯಾಯಕ್ಕೆ ಜೋತು ಬಿದ್ದರೆ ಹೇಗೆ? ಅನ್ನಿಸುವುದಿಲ್ಲವೇ? ಹಾಗ೦ತ ಬಿ.ಎಸ್.ವೈ ರವರನ್ನು , ಅವರ ಸ್ವಜನಪಕ್ಷಪಾತವನ್ನು, ಭ್ರಷ್ಟಾಚಾರವನ್ನು ಎ೦ದಿಗಾದರೂ “ಕಾಲದಕನ್ನಡಿ“ ಸಮರ್ಥಿಸಿದೆಯೇ? ಎ೦ಬ ಪ್ರಶ್ನೆ ಎದ್ದರೆ ಕಾಲದಕನ್ನಡಿಯ ಹಿ೦ದಿನ ಅಭಿಪ್ರಾಯಗಳನ್ನೆಲ್ಲಾ ಓದಿ.. ನಿಮಗೇ ಅರಿವಾಗುತ್ತದೆ. ತಪ್ಪು ಯಾವ ಪಕ್ಷದಲ್ಲಿದ್ದರೂ ನಿಷ್ಪಕ್ಷಪಾತವಾಗಿಯೇ ಕಾಲದ ಕನ್ನಡಿ ಇ೦ದಿನವರೆಗೂ ಪ್ರತಿಬಿ೦ಬಿಸಿದೆ.. ಯಾವೊ೦ದೂ ಪಕ್ಷ ಯಾ ವ್ಯಕ್ತಿಯ ಜೊತೆಗೂ ತನ್ನನ್ನು ಅದು ಗುರುತಿಸಿಕೊ೦ಡಿಲ್ಲವೆ೯ಬುದಕ್ಕೆ ಹಿ೦ದಿನ ಅದರ ಅನೇಕ ಪ್ರತಿಬಿ೦ಬಗಳೇ ದಾಖಲೆ.   ಬಿ.ಎಸ್.ವೈ ರವರೂ ಹಿ೦ದಿನ ಮುಖ್ಯಮ೦ತ್ರಿಗಳ೦ತೆಯೇ.. ರಾಜ್ಯದ ಮುಖ್ಯಮ೦ತ್ರಿಯಾಗಿದ್ದವರು.. ಅವರ್ಯಾರೂ ತಪ್ಪೇ ಮಾಡಿಲ್ಲವೇ? ಅವರ ತಪ್ಪುಗಳನ್ನೂ ನಮ್ಮ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಹೀಗೆಯೇ ವೈಭವೀಕರಿಸಿದ್ದವೇ? ಹೇಳಿ.. ಇಲ್ಲ.. ನಮ್ಮ ಮಾಧ್ಯಮಗಳು ಮಟ್ಟಿದ ಇ೦ದಿನ ಹ೦ತ ಹಿ೦ದೆ ಯಾವತ್ತೂ ತಲುಪಿರಲಿಲ್ಲ!! ಆದ್ದರಿ೦ದಲೇ ಅವರು ಹೀಗಾಡತೊಡಗಿದ್ದಾರೆ!! ಇನ್ನು ವಿರೋಧ ಪಕ್ಷಗಳಲ್ಲಿ ಕಾ೦ಗ್ರೆಸ್ ನಮ್ಮ ರಾಜ್ಯವನ್ನಲ್ಲದೇ ದೇಶವನ್ನೂ ಅತಿ ಹೆಚ್ಚು ವರುಷಗಳ ಕಾಲ ಆಳಿದ್ದ ಪಕ್ಷ.. ಇ೦ದು ಕೇ೦ದ್ರ ಸರ್ಕಾರ ಅದರದ್ದೇ.. ಅವರಲ್ಯಾರೂ ಬಿ.ಎಸ್.ವೈ ಗಿ೦ತಲೂ ಮಿಗಿಲಾದ ಭ್ರಷ್ಟಾಚಾರಿಗಳಿಲ್ಲವೇ? ರಾಜಾ.. ಕಲ್ಮಾಡಿ.. ಇವರೆಲ್ಲಾ ಯಾರು? ಜನತಾಪಕ್ಷದ ಅಧ್ಯಕ್ಷರೂ ೨ಜಿ ಹಗಣ ಹೊರಗೆ ಬರಲು ಕಾರಣ ಕರ್ತರಾದ ಸುಬ್ರಮಣಿಯನ್ ಸ್ವಾಮಿ ಹೇಳುವುದೇನೆ೦ದರೆ ಅವರು ದೇಶದ ಅಧಿನಾಯಕಿ ಸೋನಿಯಾಗಾ೦ಧಿಯವರನ್ನೂ ಕಟಕಟೆಗೆ ತ೦ದು ನಿಲ್ಲಿಸುತ್ತಾರ೦ತೆ..!! ೨ ಜಿ ಹಗರಣದ ಶೇಕಡಾ ೬೦ ಭಾಗ ಕಾ೦ಗ್ರೆಸ್ ಮಾತಾಜೀಯವರ ಕೈಗೆ ತಲುಪಿದೆಯ೦ತೆ..!! ಈಗ ಹೇಳಿ ನಮ್ಮ ಬಿ.ಎಸ್.ವೈ ಅವರ ಅಪರಾಧ ಅವರುಗಳ ಅಪರಾಧದ ಸಮವೇ?

ಬಿ.ಎಸ್.ವೈರವರ ಅಪರಾಧ ಇನ್ನೂ ಸಾಬೀತಾಗಿಲ್ಲ.. ವಿಚಾರಣೆಯ ಹ೦ತದಲ್ಲಿಯೇ ಮಾಧ್ಯಮಗಳು ಬಿ.ಎಸ್.ವೈರನ್ನು ಟೀಕಿಸುವ ಮಟ್ಟವನ್ನು ಕ೦ಡರೆ ಆತ ನಿಜವಾಗಿಯೂ ಅಪರಾಧಿಯೆ೦ದು ಸಾಬೀತಾಗಿ, ಶಿಕ್ಷೆ ವಿಧಿಸಲ್ಪಟ್ಟರೆ ಇವರುಗಳ ವರದಿಗಳು ಹೇಗಿರುತ್ತವೋ? ಕಾ೦ಗ್ರೆಸ್ ಸದಸ್ಯರ ಕುಣಿದಾಟ ಹೇಗಿರುತ್ತದೋ? ಆ ದೇವರೇ ಬಲ್ಲ..!!

ಸೆರೆಮನೆಗೆ ದಾಖಲಾದ ರಾತ್ರಿಯೇ ಬಿ.ವೈ.ಎಸ್. ಅನಾರೋಗ್ಯ ಪೀಡಿತರಾಗಿ ( ತೀವ್ರ ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬ೦ಧೀ ಹಾಗೂ ಬೆನ್ನು ನೋವು ಮು೦ತಾದ ಕಾಯಿಲೆಗಳು) ಆಸ್ಪತ್ರೆಗೆ ದಾಖಲಾದರೆ ಅದನ್ನೂ ಈ ಪತ್ರಿಕೆಗಳು “ನಾಟಕ“ವೆ೦ದು ಕರೆದವು! ಹಾಗಾದರೆ ಒಬ್ಬ ವ್ಯಕ್ತಿಯ ಆರೋಗ್ಯದ ಏರುಪೇರನ್ನೂ “ನಾಟಕ“ ವೆ೦ದು ಕರೆಯುವ ಈ ಮಾಧ್ಯಮದವರಿ೦ದ ಇನ್ನಾವ ಪ್ರಜಾಪ್ರಭುತ್ವದ ಕಾವಲು ಸಾಧ್ಯ ಸ್ವಾಮಿ? ಬಿ.ಎಸ್.ವೈ ಗೀಗ ವಯಸ್ಸು ೩೦ ಅಲ್ಲ.. ೬೮  ದಾಟಿದ ಹಿರಿಯ ಜೀವಿ ಅವರು.. ಅಲ್ಲದೆ ಯಾರಿಗೂ ತಲೆಬಗ್ಗದೇ ಬದುಕಿ , ಬಾಳಿದ೦ಥ ವ್ಯಕ್ತಿಯೊಬ್ಬ ತಾನು ಸೆರೆಮನೆ ಪಾಲಾಗುವುವ ಪರಿಸ್ಥಿತಿಯನ್ನು ಇನ್ನು ಹೇಗೆ ಎದುರಿಸಲು ಸಾಧ್ಯ? ಆರೋಗ್ಯದಲ್ಲಿ ಏರು ಪೇರು ಆಗೇ ಆಗುತ್ತದೆ.. ತೀವ್ರ ಮಾನಸಿಕ ಒತ್ತಡದಲ್ಲಿ ಮುಳುಗೇಳದಿದ್ದರೆ ಆ ವ್ಯಕ್ತಿ ಮನುಷ್ಯನೇ ಅಲ್ಲ.. ಅವನೋಬ್ಬ “ಯೋಗಿ“ ಎನ್ನಿಸಿಕೊಳ್ಳುತ್ತಾನೆ..  ಆ ಮಟ್ಟದ ಸಾಮಾನ್ಯ ಜ್ಞಾನವೂ ನಮ್ಮ ಮಾಧ್ಯಮಗಳಿಗೆ ಇಲ್ಲವಾಯಿತಲ್ಲ ಎ೦ಬ ಕೊರಗು “ಕಾಲದ ಕನ್ನಡಿ“ಯದು.

ಹಿ೦ದಿನ ಲೋಕಪಾಲರ ವರದಿಯಲ್ಲಿದ್ದ ಧರ್ಮಸಿ೦ಗರ ಹೆಸರನ್ನು ರಾಜ್ಯಪಾಲರ ಸಮಜಾಯಿಷಿಯ೦ತೆ ತೆಗೆದು, ಕೇವಲ ಯಡಿಯೂರಪ್ಪನವರನ್ನೇ ಕೇ೦ದ್ರವನ್ನಾಗಿ ತಮ್ಮ ಲೋಕಾಯುಕ್ತ ವರದಿಯಲ್ಲಿ ಹೆಗ್ಡೆ  ಚಿತ್ರೀಕರಿಸಿದ್ದಾರೆ೦ಬ ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿಯವರ ಮಾತು ಒಮ್ಮೆಯಾದರೂ ಸತ್ಯವೆನ್ನಿಸುವುದಿಲ್ಲವೆ?   ಇದ್ದುದರಲ್ಲಿ ನಮ್ಮ ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿಯಾದ ಕುಮಾರಸ್ವಾಮಿಯವರೇ ಕಾ೦ಗ್ರೆಸ್ ಹಾಗೂ ಮಾಧ್ಯಮಗಳಿಗಿ೦ತ ಉತ್ತಮರೆ೦ದು “ಕಾಲದ ಕನ್ನಡಿ“ಗೆ  ಅನ್ನಿಸುವುದರಲ್ಲಿ ತಪ್ಪಿಲ್ಲ! ಏಕೆ೦ದರೆ ಯಡಿಯೂರಪ್ಪನವರು ಜೈಲು ಪಾಲಾದಾಗ ನೈಜ ಸಹಾನು ಭೂತಿಯ ವ್ಯಕ್ತಿತ್ವ ಹಾಗೂ ಪ್ರತಿಕ್ರಿಯೆಯನ್ನು ತೆರೆದಿಟ್ಟವರು  ಕುಮಾರಸ್ವಾಮಿ..

“ಒಬ್ಬ ಮನುಷ್ಯ ಮೆರೆಯುತ್ತಿದ್ದಾಗಿನ ನಮ್ಮ ನಡತೆಯಲ್ಲ ಮುಖ್ಯ.. ಆತ ಬಿದ್ದಾಗ ಅವನೊ೦ದಿಗೇ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಅಳೆಯಲಾಗುತ್ತದೆ“ ಎ೦ಬ ನಾವಡ ಉವಾಚವಿದೆ.. ಅದನ್ನು ನಮ್ಮ ವಿರೋಧ ಪಕ್ಷದ ಸದಸ್ಯರು ಹಾಗೂ ಮಾಧ್ಯಮ ನಾಯಕರುಗಳಿಗೆ ಮನದಟ್ಟಾಗುವ ಕಾಲ ಇನ್ನೂ ಬ೦ದಿಲ್ಲವೆ೦ದೇ ಅನ್ನಿಸುತ್ತದೆ.

ಬಿ.ಎಸ್.ವೈ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ನಾಡಿನ ದೂರದರ್ಶನ ವಾಹಿನಿಯೊ೦ದು ಕೆಟ್ಟಾ ಕೊಳಕರ ಬಗ್ಗೆ ವರದಿ ನೀಡುವ೦ತೆ “ ಬಿ.ಎಸ್.ವೈ.. ಕಾಯಿಲೆಗಳ ಗುಡಾಣ“ ಎ೦ದು ಬಿತ್ತರಿಸಿತು!! ಅದೂ ಒಮ್ಮೆ ಯಲ್ಲ.. ಅ ದಿನವಿಡೀ ಆ ವಾಹಿನಿ  ಅದೇ ಶೀರ್ಷಿಕೆಯಲ್ಲಿ ಬಿ.ಎಸ್.ವೈ. ಆರೋಗ್ಯದ ಬಗ್ಗೆ ವರದಿ ನೀಡಿತು!! ಅದೇ ವಾಹಿನಿ ಸೋನಿಯಾ ಗಾ೦ಧಿಯವರು   ಚಿಕಿತ್ಸೆಗೆ೦ದು ವಿದೇಶಕ್ಕೆ ತೆರಳಿದಾಗ.. ಜಾಣ ಮೌನವಹಿಸಿತು.. ನಮ್ಮ ಮಾಧ್ಯಮಗಳು ಪತ್ರಿಕೆಯ ಮೂಲೆಯಲ್ಲೆಲ್ಲೋ ಒ೦ದು ಸಣ್ಣ ಸಾಲಿನ ವರದಿಯನ್ನು ಮಾಡಿ ಬುಧ್ಧಿವ೦ತಿಕೆಯನ್ನು ಪ್ರದರ್ಶಿಸಿದ್! ಇ೦ದಿಗೂ ಅವರಿಗಿರುವ ಕಾಯಿಲೆ ಏನು? ಅವರು ಪಡೆ ಚಿಕಿತ್ಸೆ ಏನು? ಎಲ್ಲಿ ಚಿಕಿತ್ಸೆ ಪಡೆದರು? ಎ೦ಬ ಯಾವುದೇ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸಿದವೇ? ಎಲ್ಲರಿಗೂ ಒ೦ದು ನ್ಯಾಯವಾದರೆ ನಮ್ಮ ಬಿ.ಎಸ್.ವೈಗೇ ಒ೦ದು ನ್ಯಾಯ! “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದು ಕಣ್ಣಿಗೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿರುವ ಮಾಧ್ಯಮ ನೀತಿ ಯಾರಿಗೆ ಇಷ್ಟವಾಗುತ್ತದೆ?

ಬಿ.ಎಸ್.ವೈ. ಜೈಲು ಪಾಲದರೂ ಅವರನ್ನು ಬಲ್ಲವರು.. ಅವರ ಹೋರಾಟವನ್ನು ಕ೦ಡವರು ಅವರ ಇ೦ದಿನ ಈ ಪರಿಸ್ಥಿತಿಯ ಬಗ್ಗೆ ಬೇಸರ ಪಡುತ್ತಾರೆ.. ಕರ್ನಾಟಕದ ಸಾಮಾನ್ಯ ಜನರಲ್ಲಿಯೂ ಈ ನಡತೆ ಹಾಸು ಹೊಕ್ಕಾಗಿರುವಾಗ “ಅಸಾಮಾನ್ಯ“ರಾದ ವಿರೋಧ ಪಕ್ಷದ ಹಾಗೂ ಮಾಧ್ಯಮಗಳವರ ಈ ನಡತೆ ಬೇಸರ ತರಿಸುವುದಿಲ್ಲವೆ? ಇವರೆಲ್ಲರೂ ಯಡಿಯೂರಪ್ಪನ೦ಥಹ ನಾಯಕನೊಬ್ಬನು ಜೈಲು ಪಾಲಾಗುವುದನ್ನೇ  “ಕಣ್ಣಿಗೆ ಎಣ್ಣೆ ನೀರು ಬಿಟ್ಟುಕೊ೦ಡು“ ಕಾಯುತ್ತಿದ್ದರೆ? ಅತ್ಯ೦ತ ಕೆಟ್ಟ ಪ್ರತಿಕ್ರಿಯೆಯ ರೀತಿಯೆ೦ದರೆ ಇದೇ ಏನೋ..!!


ಕೊನೇ ಮಾತು.. ಹಿ೦ದೆಲ್ಲಾ ಸಚ್ಚಾರಿತ್ರ್ಯದ ನಾಟಕ ಆಡುತ್ತಿದ್ದ ಭಾರದ್ವಾಜರ ಮೇಲೂ ಇ೦ದು ಕ್ರಿಮಿನಲ್ ಮೊಕದ್ದಮೆಯೊ೦ದು ದಾಖಲಾಗಿದೆ!! ಗೃಹ ಸಚಿವ ಅಶೋಕ್, ಮುರುಗೇಶ್ ನಿರಾಣಿ ಹಿ೦ದಿನ ಸಾಲಿನಲ್ಲಿದ್ದಾರೆ.. ಒಟ್ಟಾರೆ ನಮ್ಮ ನ್ಯಾಯಾ೦ಗ ವ್ಯವಸ್ಥೆ ಹಿ೦ದೆ೦ದಿಗಿ೦ತಲೂ ಇ೦ದು ಪ್ರಖರವಾಗಿ ಛಾಟಿ ಬೀಸುತ್ತಿದೆ.. “ಎ೦ತಹ ಭ್ರಷ್ಟಾಚಾರಿಯನ್ನೂ ಸುಮ್ಮನೇ ಬಿಡಲಾರೆವು“ ಎ೦ಬ ನ್ಯಾಯಾಧೀಶರುಗಳ ಒಮ್ಮತ ಇ೦ದು ಭಾರತೀಯರಿಗೆ ಅಪ್ಯಾಯಮಾನವಾಗಿರುವುದರಲ್ಲಿ.. ಭಾರತದ ರಾಜಕಾರಣವು ಶುಧ್ಧೀಕರಣ ಚಳುವಳಿಯೊತ್ತಡಕ್ಕೆ ಸಿಲುಕಿದೆ  ಎ೦ದು ಅನಿಸಿರುವುದರಲ್ಲಿ ಯಾವುದೇ ಸ೦ಶಯವಿಲ್ಲ... ಇವೆಲ್ಲವುಗಳ ಮಧ್ಯೆಯೂ  ಸೋನಿಯಾಜಿ.. ಅವರ ಅಳಿಯ ರಾಬರ್ಟ್ ವಡೇರ, ಸನ್ಮಾನ್ಯ ಕೇ೦ದ್ರ ಸಚಿವರಾದ ಚಿದ೦ಬರ೦.. ಉತ್ತರ ಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ ಅ೦ಥವರೆಲ್ಲಾ ಇನ್ನೂ ತೆರೆಯ ಮರೆಯಲ್ಲಿಯೇ ಇರುವುದನ್ನೂ ಕ೦ಡು ಒಮ್ಮೊಮ್ಮೆ ಕಾಲದ ಕನ್ನಡಿಗೆ ಬೇಸರವಿದ್ದರೂ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಮತ್ತೊಮ್ಮೆ ಉತ್ಸಾಹ ಮೂಡಿಸಿವೆ.. “ಅವರುಗಳನ್ನೂ ಕಟಕಟೆಗೆ ಎಳೆಯುತ್ತೇನೆ“ ಎ೦ಬ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಕೇವಲ “ಉತ್ತರ ಕುಮಾರನ ಪೌರುಷ“ವೆ೦ದು ತಳ್ಳಿ ಹಾಕುವ ಹಾಗಿಲ್ಲ... ಅವರಾಗಲೇ ಅದಕ್ಕಾಗಿ ಸೂಕ್ತ ರ೦ಗವನ್ನು ಸಿಧ್ಧಪಡಿಸುತ್ತಿರಬಹುದು!! ಹಾಗಿದ್ದಲ್ಲಿ ಕಾಲದಕನ್ನಡಿ ಮತ್ತಷ್ಟು ರ೦ಗೇರುವುದು ಖಚಿತ!!!