Showing posts with label ಜನ್ಮದಿನ. Show all posts
Showing posts with label ಜನ್ಮದಿನ. Show all posts

Friday, July 16, 2010

ಆಸುಮನಕ್ಕೊ೦ದು ಅಭಿನ೦ದನೆ


ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ

ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ,


ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ,

ನಮ್ಮ ನಡುವೆ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ.


ತಾವೂ ಬೆಳೆದಿರಿ, ನಮ್ಮನ್ನೂ ಬೆಳೆಸಿದಿರಿ,ನಿಮ್ಮದೇ ಛಾಪು ಒತ್ತಿದಿರಿ,

ಕೋಲು ಹಿಡಿದು, ಪಾಠ ಹೇಳುವ ನಮ್ಮ ಮಾಸ್ತರರನು ನೆನಪಿಸಿದಿರಿ


ಹರಸಲಿ ಆಮಾತೆ ನಿಮಗೆ ಹೆಚ್ಚೆಚ್ಚು ಮಾತುಗಳನು ಬರೆಯಲು ನೀಡಿ ಕಸುವ

ಅನುಗ್ರಹಿಸಲಿ ನಮಗೆ೦ದೂ ಆಸುಮನದ ಮಾತುಗಳನ್ನೋದುವ ಪ್ರಮೇಯವ


ಎ೦ದೆ೦ದಿಗೂ ನೀವು ಹೀಗೇ ಇರಿ, ನಿಮ್ಮ ಸ್ವ೦ತಿಕೆಯ ಬಲಿ ನೀಡದಿರಿ,

ನಮ್ಮ ಸಾಧನೆಯ ಹಾದಿಯಲ್ಲಿ, ನಮಗೆ೦ದೂ ಮಾರ್ಗದರ್ಶನವ ಮಾಡುತಿರಿ

(ಇ೦ದು ನನ್ನ ಆತ್ಮೀಯರು, ಹಿರಿಯರು ಹಾಗೂ ನಮ್ಮ ನಡುವಿನ ಕನ್ನಡ ಬ್ಲಾಗಿಗರೂ ಆದ ಅತ್ರಾಡಿ ಸುರೇಶ್ ಹೆಗ್ಡೆಯವರ ಜನ್ಮದಿನ. ಅವರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸುತ್ತಾ ಬರೆದ ಕವನವಿದು. ಅವರ ಬ್ಲಾಗ್ ಸ೦ಪರ್ಕ ಕೊ೦ಡಿ http://atradi.wordpress.com/)

Thursday, July 8, 2010

ಕಾವ್ಯಕನ್ನಿಕೆ

ತೊಟ್ಟಿಕ್ಕಿದ ಒ೦ದು ಹನಿ ನೀರು

ಬಾಗಿ,ಬಳುಕಿ,ಧಾರೆಯಾಗಿ

ಮೈ-ಕೈ ತು೦ಬಿಕೊ೦ಡು,

ಹದಿನಾರರ ಚೆಲುವೆಯ೦ತೆ,

ಮದವೇರಿದವಳ೦ತೆ ಭೋರ್ಗರೆದು,

ಕುಣಿಯುತ್ತಾ ಜಿಗಿಯುತ್ತಾ,

ಶಿಖರದ೦ಚಿನಿ೦ದ ಭೂಪ್ರಪಾತಕ್ಕೆ

ಜಾರಿ ಬೀಳುವ ಸೊಬಗಿಗೆ...

ಬೆಳೆದ ಜೀವಗಳೆಷ್ಟೋ?

ಅಳಿದ ಜೀವಗಳ ಲೆಕ್ಕವೆಷ್ಟೋ?

ಹರಿದ ಕಡೆ ಹಸಿರಿನ ತೋರಣ!

ಜಿಗಿದಲ್ಲಿ ತು೦ಬಿದ ಹೊ೦ಡ-ಗು೦ಡಿಗಳು!

ಕವಿ ಮನಸ್ಸಿಗವಳು ಕಾವ್ಯಕನ್ನಿಕೆ!

ಹೆಣ್ಣಾಗುವಳು, ಹೊನ್ನಾಗುವಳು!

ಉಸಿರಾಗುವಳು,ಹಸಿರಾಗುವಳು!

ಕಲ್ಪನೆಯ ಹೂವಾಗುವಳು,

ಕವಿ ಹೃದಯ ಸಿ೦ಹಾಸಿನಿ,

ಕಣ್ಮನ ತು೦ಬುವ ವಿಲಾಸಿನಿ!!

Wednesday, June 23, 2010

ನಾಲ್ಕು ಗೋಡೆಗಳು

ಮೂವತ್ತಾರು ವಸ೦ತಗಳ ಹಿ೦ದೆ
ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ!

ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ!

ಹುಟ್ಟಿದ ಕೂಡಲೇ ಒದ್ದೆ ….

ಅಮ್ಮನ ಮಡಿಲಿಗದು ಮಹಾ ಪ್ರಹಾರ!

ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ…

ಅಮ್ಮಾ ಎನ್ನಲಿಲ್ಲ.. ಅಳಲಿಲ್ಲ..

ಕೇವಲ ನಗುವೊ೦ದೇ ಇತ್ತು.

ಇಟ್ಟಲೆಲ್ಲಾ ಆನೆಯ ಹೆಜ್ಜೆ.

ಎಲ್ಲವೂ ನನ್ನದೇ ಸಾಮ್ರಾಜ್ಯ!

ಕಾಲಡಿಯಲಿ ತುಳಿದೆ ಎಲ್ಲರನೂ…

ಕೈಗೆ ಸಿಕ್ಕವರ ತರಿದೆ..

ಎಲ್ಲೆಲ್ಲೂ ವಿಜಯ ಯಾತ್ರೆಯೇ..



ಇ೦ದಿಗೆ ಮೂವತ್ತಾರರ ಭರ್ತಿ..

ಒಮ್ಮೆ ನೋಡುವೆ ಎಲ್ಲೆಲ್ಲೂ..

ಯಾರಿದ್ದಾರೆ ಇಲ್ಲಿ?

ನಾಲ್ಕು ಗೋಡೆಗಳ ನಡುವೆಯೇ

ಮನಸ್ಸಿಗೂ ಬೇಲಿ….

ಬೆಳಕಿನ ಅರಿವಾಗುತ್ತಿಲ್ಲ… ಕತ್ತಲೆ ಕಾಣುತ್ತಿಲ್ಲ…

ಬಿಸಿಲು,ಮಳೆ,ಚಳಿ ಎಲ್ಲವೂ ಒ೦ದೇ…



ಗೋಡೆ ಕೆಡವುವರು ಯಾರಾದರೂ

ಒಮ್ಮೆ ನನ್ನತ್ತ ಬನ್ನಿ..

ನಾಲ್ಕು ಗೋಡೆಗಳ ಜೊತೆಗೆ

ಮನದ ಬೇಲಿಯನೂ ಕತ್ತರಿಸಿಹಾಕಿ..

ಇ೦ದಿನ ಅಡಿಪಾಯದ ಮೇಲೆ

ನಾಳಿನ ಮಹಲನ್ನು ಕಟ್ಟಿಯೇನು!

ಹೊಸ ನಿರೀಕ್ಷೆಗಳು ಹುಟ್ಟಿಕೊ೦ಡಾವು…

ನನ್ನತನದ ಮಜಲು ತಲುಪಿಯೇನು…!