Showing posts with label ಸರಸ-ಸಲ್ಲಾಪ. Show all posts
Showing posts with label ಸರಸ-ಸಲ್ಲಾಪ. Show all posts

Saturday, May 16, 2015

ಮತ್ತೆ ಕೇಳಲಿದೆ ಕಲರವ..!!



ನಾವಿಬ್ಬರು-ನಮಗಿಬ್ಬರು....

ಇನ್ನೇನು ಅವಳು ಬರುತ್ತಿದ್ದಾಳೆ!
ಇ೦ದಿನಿ೦ದ ಮತ್ತೆ ತು೦ಬಲಿದೆ ಕಲರವ…
ನನ್ನ ಮರಿ ಹಕ್ಕಿಗಳದು.. ಜೊತೆಗೆ ಅವುಗಳ ತಾಯಿಯದ್ದು!
ಇನ್ನೆರಡು ದಿನಗಳ ಕಾಲ ಮನೆಯಲ್ಲೀಗ
ಗಡಿಬಿಡಿ-ಗಜಿಬಿಜಿ...ಮನೆಯ ತು೦ಬಾ ಹಕ್ಕಿಗಳ ಇ೦ಪಾದ ನಾದ!

ಅಪರೂಪದ ತ೦ಗಿ.. ಅಚ್ಚುಮೆಚ್ಚಿನ ಭಾವನೆ೦ಟ
ಇ೦ದಿನ ಮಧ್ಯಾಹ್ನದ ಮೇಲೀಗ ಸ೦ಪೂರ್ಣ ಭಾವಪರವಶತೆ.
ಮನೆಯ ತು೦ಬೆಲ್ಲಾ ಜನ.... ತು೦ಬಿದ ಮನಗಳ
ಸ೦ಪೂರ್ಣ ಸ೦ವಹನ...

ಇಲ್ಲಿಯವರೆವಿಗೂ ಎಣಿಸುತ್ತಿದ್ದ ದಿನಗಳ ಲೆಕ್ಕವಿಲ್ಲ..
ಇನ್ನು ಲೆಕ್ಕ ಹಾಕುವ ಗೋಜೇ ಇಲ್ಲ!
ಹತ್ತಿರ .. ಇನ್ನೂ ಹತ್ತಿರ.. ಎಲ್ಲರೂ ಮತ್ತಷ್ಟು ಹತ್ತಿರ..

ಇನ್ನು ಕಾಲು ಸೋಲುವುದಿಲ್ಲ.. ಜಡ್ಡುಗಟ್ಟುವುದಿಲ್ಲ
ಮನೆಯಿಡೀ ಬಿಕೋ ಎನ್ನುವುದಿಲ್ಲ..
ಇನ್ನೇನಿದ್ದರೂ ಮನೆಗೆ ಹೋಗುವುದೆ೦ದರೆ
ಮನದೊಳಗೊ೦ದು ಸ೦ತಸದ ತುಡಿತ!

ಅವಳು ಎಲ್ಲರೊಡಗೂಡಿ ಬರುತ್ತಿದ್ದಾಳೆ...
ವಿರಹದ ಬೇಗೆಯಲಿ ಬೆ೦ದು ಬಸವಳಿದು
ನನ್ನನ್ನು ಸೇರಲು ಬರುತ್ತಿದ್ದಾಳೆ...
ಇಷ್ಟು ದಿನ ಅಪ್ಪನೊ೦ದಿಗೆ ಬೆರೆಯಲಾಗದ ಮಕ್ಕಳು
ಅಪ್ಪನ ಕುತ್ತಿಗೆಗೆ ಜೋತು ಬೀಳಲು ,
ನನ್ನ ಕುತ್ತಿಗೆಗೊ೦ದು ಕ೦ಠೀಹಾರವ ತೊಡಿಸಲು ಬರುತ್ತಿದ್ದಾರೆ!!


Thursday, July 29, 2010

ನಾನೊ೦ದು ತುಳಸೀದಳವಾಗಲೇ..?

ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,
ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,
ಎ೦ತು ಪ್ರೇಮಿಸಲಿ ನಿನ್ನ ನಾ
ನಿನ್ನ ಪೂಜಿಸುವ ತುಳಸೀದಳವಾಗಲೇ?


ತಾವರೆ ಹೂವಿನ ಸಾವಿರ ದಳಗಳ೦ತೆ
ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ
ಕಾಣದ ವೇದನೆಯೇ ವೇದಾ೦ತವಾದಾಗ
ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು
ಮನಸಿಗೊ೦ದು ಸಮಾಧಾನವಾದಾಗ
ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ
ಬಳಿಗೆ ಹೋದ೦ತೆ, ಕೆಚ್ಚಲಿಗೇ
ಬಾಯಿ ಹಾಕಿ ಹಾಲನ್ನು ಕುಡಿದ೦ತೆ.
ಧನ್ಯತಾ ಭಾವವು ಮನದಲ್ಲಿ ತು೦ಬಿ
ಸ೦ಗೀತದಿ, ಸರಸ-ಸಲ್ಲಾಪದಿ
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?


ಪುಷ್ಪದ ಜೊತೆಗೆ ನಾರಿನ೦ತೆ
ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,
ಎನಿತು ಧ್ಯಾನಿಸಲಿ ನಿನ್ನ?
ಭಾವನೆಗಳ ಮಹಾಪೂರದಿ೦ದ
ಮನದಲ್ಲಿ ಹುಟ್ಟಿರುವ ಆ೦ದೋಲನಕ್ಕೆ,
ಎನಿತು ಸ೦ತೈಸಲಿ ಅದನ್ನು
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?

Monday, July 5, 2010

ಸರಸ-ಸಲ್ಲಾಪ-3

ನಲ್ಲೆ, ಮರಗಳ ಕಡಿದರೆ,

ಟನ್ನಿಗೆ ಮುನ್ನೂರು, ಮಾರಲು ಉರುವಲು

ಕುಟು೦ಬ ಸಾಕಲು ಧನ ಸ೦ಗ್ರಹ

ಮಕ್ಕಳ ಮದುವೆಗದು ಸಾಕಲ್ಲವೇ?



ನಲ್ಲ, ಮರಗಳ ಕಡಿದರೆ

ಎ೦ತು ಉಸಿರಾಡುವುದು?

ಉಸಿರಿದ್ದರಲ್ಲವೇ ಮಕ್ಕಳ ಮದುವೆ!

ಬಿಸಿಲು,ಮಳೆ, ಗಾಳಿ, ಭೀಕರತೆ

ಎಲ್ಲ ಇದ್ದರೂ ಚೆನ್ನ!

ಕಡಿದಲ್ಲೇ ಮತ್ತೊ೦ದ ನೆಟ್ಟರೆ

ಮು೦ದಿನ ಕಾಲಕೂ ಧನಸ೦ಗ್ರಹ!

ಸುತ್ತ-ಮುತ್ತ ಇರಲು ಹಸಿರು

ಮನೆಮ೦ದಿಗೆಲ್ಲಾ ಉಸಿರು!

Friday, July 2, 2010

ಸರಸ-ಸಲ್ಲಾಪ-೨

ನಲ್ಲೆ, ಇದೇನು ಬಚ್ಚಲು?

ಇಲ್ಲಿಡಲು ಕಾಲು!

ನಾ ಬಿದ್ದೆನಲ್ಲ ಬೋರಲು!

ಶುಭ್ರತೆ ಮನೆಗೆ ಚೆ೦ದ,

ಬಿಳಿ ಬಣ್ಣ ಅದರ ಗುರುತಲ್ಲವೇ?



ಹೌದು. ನಲ್ಲ,

ಮನೆಯಲ್ಲಿ ಇಲ್ಲ ಸಬೀನಾ!

ನಾ ಹೇಗೆ ತೊಳೆಯಲಿ ಬಚ್ಚಲನ?

ಮನೆಯೊ೦ದೇ ಶುಭ್ರವಾಗಿದ್ದರೆ ಸಾಕೇನು?

ಮನಸಿನ ತೂಕ ಅಳೆಯುವುದಿಲ್ಲವೇನು?

ಶುಭ್ರತೆ ಮನೆ-ಮನದ ಸ೦ಕೇತ!

ಹಾಕುವ ಸ್ವಚ್ಛತೆಗೆ ಅ೦ಕಿತ.

ಸರಸ-ಸಲ್ಲಾಪ

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು!

ಕವನವನು ಬರೆಯಬೇಕೆ೦ದಾಗಲೀ,

ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ,

ಪರಿಚಿತ ಮಿತ್ರರಿಗೆ ಕರೆ ಮಾಡಬೇಕೆ೦ದಾಗಲೀ

ಏನೂ ಅನ್ನಿಸ್ತಿಲ್ಲ !



ಈ ಹೊತ್ತು ನಿನ್ನ ಪ್ರೀತಿಸಬೇಕೆ೦ದೆನಿಸಿದೆ!

ಸರಸವಾಡುವ ಮನಸ್ಸಾಗುತ್ತಿದೆ!

ಈ ದಿನ ನಿನ್ನೊ೦ದಿಗೆ ಇರುಳು ತಾರೆಗಳ

ಎಣಿಸಬೇಕೆ೦ದಿದೆ!

ನನ್ನನೇ ನಾನು ಮರೆಯಬೇಕೆ೦ದಿನೆಸಿದೆ!



ನಲ್ಲ, ನಾ ಸ್ವಲ್ಪ ಸುಮ್ಮನಿದ್ದರೆ

ಹಾಲು ಉಕ್ಕಿಹೋದೀತು!

ಮಗು ಎದ್ದು ಬಿಟ್ಟೀತು!

ಹೊತ್ತಲ್ಲದ ಹೊತ್ತಿನಲ್ಲಿ

ಈ ನಿಮ್ಮ ಸರಸವೇನು?

ರಾತ್ರಿಯ ಬಯಕೆಗಳಿಗೆ ಉಪವಾಸವೇನು?

Wednesday, June 30, 2010

ಮಿಲನ

ಮನದ ಮಾತುಗಳೆಲ್ಲ

ತುಟಿಯಿ೦ದ ಹೊರ ಬ೦ದು,

ಕನಸು ನನಸಾಗಿ ನಲ್ಲೆಯನು

ರಮಿಸುವ ಬಿಸಿಯುಸಿರಾಗಿ!

ಸು೦ದರ ಸುವಿಹಾರ, ಮನಸುಗಳ ಚಿತ್ತಾರ!

ಸ್ಪರ್ಶದೊಳು ರೋಮಾ೦ಚನವೆನಿಸಿ,

ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ,

ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ,

ಒಮ್ಮೆ ಸುದೀರ್ಘ, ಮತ್ತೊಮ್ಮೆ ಹ್ರಸ್ವ

ರಜನೀ ತಟದೊಳು ವಿಹರಿಸುವ

ತಾರಾ ತರ೦ಗಗಳ

ಹೊನಲು ಬೆಳಕಿನಾಟದಲಿ

ಒ೦ದರ ಹಿ೦ದೊ೦ದು ಬರುವ

ಸ೦ತೃಪ್ತಿಯ ಏದುಸಿರುಗಳ ನಡುವೆ

ಕಳೆದು ಹೋದ ನರಳಿಕೆಗಳು!