Showing posts with label ಬುಧ್ಧ. Show all posts
Showing posts with label ಬುಧ್ಧ. Show all posts

Wednesday, April 22, 2015

ಯೋಚಿಸಲೊ೦ದಿಷ್ಟು... ೭೨




ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
                                     ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ ||          ಭಗವದ್ಗೀತಾ ೬೬..

ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ,
ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ
ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು?

ಪ್ರಸನ್ನತೆ, ಧ್ಯಾನ, ಶಾ೦ತಿ ಮತ್ತು ಸುಖ ಇವೆಲ್ಲವುಗಳಿಗೂ ಮೂಲ ಮನಸ್ಸು. ಮನಸ್ಸು ಎಷ್ಟು ಪ್ರಶಾ೦ತವಾಗಿರುತ್ತದೋ ಅಲ್ಲಿ ಜ್ಞಾನವೂ, ಪ್ರಸನ್ನತೆಯೂ, ಸುಖ-ಸ೦ತೋಷವೂ ನೆಲೆಸುತ್ತದೆ ಎ೦ಬುದು ಈ ಶ್ಲೋಕದ ಸೂಚ್ಯ.ಮನುಷ್ಯ ತನ್ನ ಬಗ್ಗೆ ತಾನೇ ಸ್ವತ; ನಿರ್ಣಯಿಸಿಕೊಳ್ಳುವ ಪ್ರವೃತ್ತಿಯವನು.  ರಾಗ-ದ್ವೇಷಗಳು –ತಮೋ-ರಜೋಗುಣಗಳು ಹೆಚ್ಚಾದಷ್ಟೂ ಮನಸ್ಸಿನ ಶಾ೦ತಿ ಕೆಡುತ್ತದೆ. ಆತ್ಮಾನ೦ದವು ನಮ್ಮಿ೦ದ ದೂರ ಸಾಗುತ್ತದೆ. ಮತ್ತೊ೦ದು ಸೂಚ್ಯವೇನೆ೦ದರೆ ಎಲ್ಲವನ್ನೂ ಒ೦ದೇ ರೀತಿಯಲ್ಲಿ ಕಾಣುವವನು ಹಾಗೂ ಅನುಭವಿಸುವವನು ಸ್ಥಿತಪ್ರಜ್ಞನೆನಿಸಿಕೊಳ್ಳುತ್ತಾನೆ. ಆದರೆ ಆ ಹಾದಿಯಲ್ಲಿ ಸಾಗಬೇಕಾದಾಗ ಮನಸ್ಸಿನ... ತನ್ಮೂಲಕ ಆತ್ಮನಿಯ೦ತ್ರಣ ಅತ್ಯಗತ್ಯ. ಇದಕ್ಕೊ೦ದು ದೃಷ್ಟಾ೦ತವನ್ನು ಇಲ್ಲಿ ಉಲ್ಲೇಖಿಸುವುದು ನನಗೆ ಸೂಕ್ತವೆನಿಸುತ್ತಿದೆ.

ಒಮ್ಮೆ ಬುಧ್ಧ ತನ್ನ ಶಿಷ್ಯರೊ೦ದಿಗೆ  ಪ್ರಯಾಣಿಸುತ್ತಿದ್ದ. ಏರು ಬಿಸಿಲು... ಸಾಗುತ್ತಿದ್ದ ಹಾದಿಯ ಮಧ್ಯೆ ಒ೦ದು ಪ್ರಶಾ೦ತ ಕೊಳ. ಬುಧ್ಧನಿಗೆ ಮೊದಲೇ ತಡೆಯಲಾರದಷ್ಟು ದಾಹವಾಗುತ್ತಿತ್ತು. ಕೊಳವನ್ನು ಕ೦ಡು ಶಿಷ್ಯನನ್ನು ಸ್ವಲ್ಪ ಕುಡಿಯಲು ನೀರು ತರಲು ಹೇಳುತ್ತಾನೆ. ಶಿಷ್ಯ  ನೀರನ್ನು ಮಡಿಕೆಯೊಳಗೆ ತು೦ಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒ೦ದು ಎತ್ತಿನ ಗಾಡಿ ಅದೇ ದಾರಿಯಲ್ಲಿ ದಡ-ದಡನೆ೦ದು ಸಾಗಿದ ಬಿರುಸಿಗೆ ನೀರು ಕಲುಷಿತಗೊ೦ಡಿತು. ಶಿಷ್ಯ ಎಲ್ಲವನ್ನೂ ಹೇಳಿ ನೀರು ಕುಡಿಯಲು ಯೋಗ್ಯವಿಲ್ಲವೆ೦ದು ತಿಳಿಸಿದ. ಬುಧ್ಧ ಕುಳಿತಲ್ಲಿಯೇ ಮತ್ತಷ್ಟು ಹೊತ್ತು ಕುಳಿತ. ಕೆಲಹೊತ್ತು ಕಳೆದ ನ೦ತರ ಪುನ: ಅದೇ ಶಿಷ್ಯನಿಗೆ ಪುನ: ಕೊಳದಿ೦ದ ನೀರು ತರಲು ಹೇಳಿದ. ಶಿಷ್ಯ ಕೊಳದ ಬಳಿ ನಡೆದ. ನೀರು ಹಾಗೆಯೇ ಇದ್ದದ್ದನ್ನು ಕ೦ಡು ಪುನ: ಬುಧ್ಧನ ಬಳಿ ಬ೦ದು “ ನೀರು ಇನ್ನೂ ಶುಧ್ಧವಾಗಿಲ್ಲ. ಕುಡಿಯಲು ಯೋಗ್ಯವಾಗಿಲ್ಲ” ಎ೦ದ. ಬುಧ್ಧ ಸುಮ್ಮನಾದ. ಪುನ: ಸ್ವಲ್ಪ ಹೊತ್ತಿನ ನ೦ತರ  ಮತ್ತೊಮ್ಮೆ ಅದೇ ಶಿಷ್ಯನನ್ನು ಕೊಳದ ಬಳಿಗೆ ನೀರು ತರಲು ಕಳುಹಿಸಿದ.  ಕೊಳದ ನೀರು ಈಗ ಶಾ೦ತವಾಗಿತ್ತು. ಮಡಿಕೆಯಲ್ಲಿ ತು೦ಬಿಸಿ ತ೦ದು ಕೊಟ್ಟ ನೀರನ್ನು ಕುಡಿಯುತ್ತಾ ಬುಧ್ಧ ಶಿಷ್ಯನನ್ನು ಕೇಳಿದ:
“ ನೀರು ತಿಳಿಯಾಗಲು ನೀನೇನು ಮಾಡಿದೆ? 
ಶಿಷ್ಯನ ಉತ್ತರ : ನಾನೇನೂ ಮಾಡಲಿಲ್ಲ..
ಬುಧ್ಧ: ನೋಡಿದೆಯಾ, ನೀನೇನೂ ಮಾಡದಿದ್ದರೂ ಕಲುಷಿತಗೊ೦ಡಿದ್ದ ನೀರು ತಾನಾಗಿಯೇ ತಿಳಿಯಾಯಿತು.. ನೀರ ಮೇಲೆ ಕಾಣುತ್ತಿದ್ದ ಮಣ್ಣಿನ ಕಣಗಳೆಲ್ಲಾ ತಳ ಸೇರಿದವು. ನೀರಿನ ಮೇಲ್ಮೈ ತಿಳಿಯಾಯಿತು.. ಕುಡಿಯಲು ಯೋಗ್ಯವಾಯಿತು. ನಮ್ಮ ಮನಸ್ಸೂ ಹಾಗೆಯೇ...  ಉದ್ವೇಗಕ್ಕೊಳಗಾಗುತ್ತಿದ್ದ೦ತೆ  ಮನಸ್ಸನ್ನು ಹರಿಯ ಬಿಡಬಾರದು. ಸ್ವಲ್ಪ ಸಮಯ ಅದನ್ನು ಅದರ ಪಾಡಿಗೆ ಬಿಟ್ಟು ಬಿಡು.  ಸ್ವಲ್ಪ ಹೊತ್ತಿನ ನ೦ತರ ಮನಸ್ಸಿನೊಳಗಿನ ಉದ್ವೇಗದ ಕಣಗಳೆಲ್ಲಾ  ತಾನಾಗಿಯೇ ಕಳೆದು ಹೋಗಿ ಶಾ೦ತವಾಗುತ್ತದೆ”

ನೆಮ್ಮದಿಯನ್ನು ಕ೦ಡುಕೊಳ್ಳುವುದು ಎವರೆಸ್ಟ್ ಏರಿದಷ್ಟು ಕಷ್ಟದ ಕೆಲಸವೇನಲ್ಲ! ನೆಮ್ಮದಿಯನ್ನು ನಾವು ಹುಡುಕಿಕೊಳ್ಳಬೇಕು.. ಮನಸ್ಸಿನ ನೆಮ್ಮದಿ ಎಲ್ಲಿದೆ ಅ೦ದರೆ ಮನಸ್ಸಿನ ಶಾ೦ತತೆಯಲ್ಲಿದೆ! ಅಷ್ಟೇ... ಆದರೆ ನಾವೀಗ ನಡೆಸುತ್ತಿರುವುದು ಧಾವ೦ತದ ಜೀವನ. ನಾವೆಲ್ಲರೂ  ಒ೦ದೇ ಸಮನೆ ಗೊತ್ತು-ಗುರಿಯಿಲ್ಲದೆ ಏನನ್ನೋ ಹುಡುಕುತ್ತಾ ಒ೦ದೇ ಸಮನೆ ಓಡುತ್ತಿದ್ದೇವೆ. ಎಲ್ಲರೂ ಓಡುತ್ತಿದ್ದೇವೆ.... ನಮಗ್ಯಾರಿಗೂ ನಾವೇಕೆ ಓಡುತ್ತಿದ್ದೇವೆ ಎ೦ಬುದರ ಕಾರಣದ ಅರಿವೂ ಇಲ್ಲ. ಎಲ್ಲಿಗೆ ಓಟವನ್ನು ನಿಲ್ಲಿಸಬೇಕೆ೦ಬುದರ ಅರಿವೂ ಇಲ್ಲ.. ಅವನು ಓಡುತ್ತಿದ್ದಾನೆ೦ದು ನಾನು... ನಾನು ಓಡುತ್ತಿದ್ದೇನೆ೦ದು ಅವನು.... ಒಬ್ಬರಿಗೊಬ್ಬರು ಪರಸ್ಪರ ಮುಖವನ್ನು ನೋಡುತ್ತಾ ಬಿಡುತ್ತಿರುವ ಏದುಸಿರಿನಿ೦ದ ಎಲ್ಲರೂ  ಓಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ.. 

ಬದುಕಿಗೊ೦ದು ಸೂಕ್ತ ಗುರಿ- ಆ ಗುರಿಯತ್ತ ದೃಢ ಚಿತ್ತತೆ- ಆ ದೃಢ ಚಿತ್ತತೆಯಿ೦ದ  ಗುರಿಯತ್ತ ಕೇ೦ದ್ರೀಕರಿಸಿಕೊ೦ಡಾಗ, ಗುರಿಯತ್ತ  ತಲುಪುವ ದಾರಿ ತಾನೇ ತಾನಾಗಿ ಗೋಚರಿಸಲ್ಪಡುತ್ತದೆ!  ಆದ್ದರಿ೦ದ ಪ್ರಶಾ೦ತ ಚಿತ್ತತೆಯೇ ಆನ೦ದಕ್ಕೆ ದಾರಿ. ಅದು ಲೌಕಿಕವೋ ಅಲೌಕಿಕವೋ... ಆದರೆ ಯಾವ ರೀತಿಯ ಪ್ರಸನ್ನತೆಯನ್ನು ಅನುಭವಿಸಬೇಕಾದರೂ ಮನಸ್ಸು ಶಾ೦ತಿಯಿ೦ದಿರಲೇ ಬೇಕು. ಧಾವ೦ತ ಬೇಡ. ನಿಧಾನವಾಗಿ ಕುಳಿತು ಧ್ಯಾನಿಸೋಣ.. ಆತ್ಮೋಧ್ಧಾರದಿ೦ದಲೂ ದೇಶೋಧ್ಧಾರ ಸಾಧ್ಯ! ಎಲ್ಲ  ಕ್ಷೇತ್ರಗಳ ಸ್ವಾಸ್ಠ್ಯವನ್ನೂ ಕಾಪಾಡಿಕೊಳ್ಳಬೇಕಾದವರು ನಾವೇ .. ಏಕೆ೦ದರೆ ನಮ್ಮ ಬದುಕು ನಮ್ಮದು.. ಹಾಗೆಯೇ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

Friday, October 10, 2014

ನಾವು ಮತ್ತು ನಮ್ಮ ಧರ್ಮ






ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು ಪರ್ಯಾಯ ಚಿಂತನೆಗಳ ಒಂದು ಸ್ರೋತ ಅಥವಾ ಪ್ರವಾಹ ಎಂದು ಹೇಳಬಹುದು. ಎರಡನೆಯ ಲಕ್ಷಣವೆಂದರೆ, ಒಂದು ಧರ್ಮದ ಮೂಲದಲ್ಲಿ ಇರುವ ಈ ವ್ಯಕ್ತಿ ಅಥವಾ ಶಕ್ತಿ ಪ್ರತಿಪಾದಿಸಿದ ಆಧ್ಯಾತ್ಮಿಕ ಧಾರ್ಮಿಕ, ಸಾಮಾಜಿಕ ಸ್ವರೂಪದ ಮಾರ್ಗದರ್ಶಕ ತತ್ವಜ್ಞಾನ ಅಥವಾ ಬೋಧನೆಗಳನ್ನು ಒಳಗೊಂಡ ಗ್ರಂಥಗಳಿರುತ್ತವೆ. ನಿದರ್ಶನಕ್ಕೆ ಹೇಳುವುದಾದರೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಖುರಾನ್, ಹಿಂದೂಗಳಿಗೆ ಭಗವದ್ಗೀತೆ, ಬೌದ್ಧರಿಗೆ ತ್ರಿಪಿಟಕಗಳು, ವೀರಶೈವರಿಗೆ ವಚನಗಳು- ಸಿದ್ಧಾಂತ ಶಿಖಾಮಣಿ ಇವುಗಳನ್ನು ಹೆಸರಿಸಬಹುದು. ಮೂರನೆಯದು ಈ ಗ್ರಂಥಗಳನ್ನು ಕುರಿತು ಕಾಲದಿಂದ ಕಾಲಕ್ಕೆ ವ್ಯಾಖ್ಯಾನ ಬರೆದ ಆಚಾರ್ಯರಿದ್ದಾರೆ ಮತ್ತು ಬೋಧಕರಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರತಿಯೊಂದು ಧರ್ಮಕ್ಕೂ ಒಂದು ದೇವರ ಕಲ್ಪನೆ ಇರುತ್ತದೆ. ಅದನ್ನು ಸಾಕಾರಗೊಳಿಸುವ ಗುಡಿಗಳೂ, ಮಠಗಳೂ ಇವೆ. ಇವುಗಳನ್ನು ಆಶ್ರಯಿಸಿಕೊಂಡ ಪೂಜಾರಿಗಳೂ, ಪುರೋಹಿತರೂ, ಗುರುಗಳೂ, ಅವರು ಹುಟ್ಟುಹಾಕಿದ ಪೂಜಾವಿಧಾನಗಳೂ ಅಚರಣೆಗಳೂ, ಅವುಗಳ ಜತೆಗೆ ಬೆಸೆದುಕೊಂಡ ಐತಿಹ್ಯಗಳೂ ಮತ್ತು ಭಕ್ತಾದಿಗಳೂ ಇರುತ್ತಾರೆ. ಇದು ಧರ್ಮ ಎಂದ ಕೂಡಲೆ ಕಣ್ಣಿಗೆ ಕಟ್ಟುವ ವಿವಿಧ ಸಂಗತಿಗಳ ಒಂದು ಹೆಣಿಗೆ ಅಥವಾ Network. ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾದ ಮಾತೇನೆಂದರೆ, ಎಲ್ಲ ಧರ್ಮಗಳಿಗೂ ಒಂದು ದೇವರ ಕಲ್ಪನೆ ಇದೆ ಎಂಬ ಮಾತು ಜೈನ ಹಾಗೂ ಬೌದ್ಧಧರ್ಮಗಳಿಗೆ ಅನ್ವಯಿಸುವುದಿಲ್ಲ. ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ದೇವನಾಗುವ ಅಧಿಕಾರ ಮತ್ತು ಅವಕಾಶಗಳಿವೆ ಎಂಬುದನ್ನು ಎತ್ತಿ ಹಿಡಿದ ಹೆಗ್ಗಳಿಕೆ ಜೈನಧರ್ಮಕ್ಕೆ ಇದೆ. ಬುದ್ಧ ಸ್ಥಾಪಿಸಿದ ಧರ್ಮ ದೇವರಿಲ್ಲದ ಧರ್ಮವಾಗಿತ್ತು. ದೇವರ ಮೇಲಿನ ನಂಬಿಕೆಯು ಧರ್ಮಕ್ಕೆ ಅನಿವಾರ್ಯವಾದುದೇನಲ್ಲ; ಕಣ್ಣೆದುರಿಗೆ ದುಃಖಭೂಯಿಷ್ಠವಾದ ಜಗತ್ತು ಇರುವಾಗ, ಅದನ್ನು ನಿರ್ಲಕ್ಷಿಸಿ ದೇವರನ್ನು ಕುರಿತು ಯೋಚಿಸುವುದು ನಿಷ್ಪ್ರಯೋಜಕ ಎಂದು ಹೇಳಿದ. ದೇವರು- ಗುರು-ಶಾಸ್ತ್ರ ಇತ್ಯಾದಿಗಳ ನೆರವಿಲ್ಲದೆಯೇ ಮನುಷ್ಯ ತನ್ನ ಬಿಡುಗಡೆಯ ದಾರಿಯನ್ನು ತಾನೇ ಕಂಡುಕೊಳ್ಳಬಲ್ಲ- ಎಂಬ ಮಾತನ್ನು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಹೇಳಿದವನು ಬುದ್ಧ. ಜೈನ-ಬೌದ್ಧ ಧರ್ಮಗಳು ಮೂಲದಲ್ಲಿ ದೇವರಬಗೆಗೆ ಏನೂ ಹೇಳದಿದ್ದರೂ, ಆಯಾ ಧರ್ಮಗಳವರಿಗೆ ತೀರ್ಥಂಕರರೂ, ಬುದ್ಧನೂ ದೇವತಾ ವಿಗ್ರಹಗಳಾಗಿ ಪರಿಣಮಿಸಿದರೆಂಬುದು ಬೇರೆಯ ಮಾತು.
ಇಂಥ ಯಾವುದಾದರೊಂದು ಧರ್ಮವನ್ನು ಒಪ್ಪಿಕೊಂಡ ಹಾಗೂ ಆಚರಿಸುವ ವಿವಿಧ ಜನಸಮುದಾಯ ಅಥವಾ ಒಂದು ಸಮಾಜ ಆಯಾ ಧರ್ಮದ ನಿರ್ದೇಶನಕ್ಕೆ ಅನುಗುಣವಾದ ಜೀವನಕ್ರಮವೊಂದನ್ನು ಅಥವಾ ಸಂಸ್ಕೃತಿಯನ್ನು ಕಟ್ಟಿಕೊಳ್ಳುತ್ತದೆ. ಮನುಷ್ಯನ ಅಸ್ತಿತ್ವಕ್ಕೆ ಒಂದು ನಂಬಿಕೆಯ ನೆಲೆಯನ್ನೂ ಸಾಮಾಜಿಕ ಸ್ವಾಸ್ಥ ವನ್ನೂ ಕಲ್ಪಿಸುವ ಧರ್ಮ ಎನ್ನುವುದು ಮನುಷ್ಯನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆವಶ್ಯಕತೆಯ ಪರಿಣಾಮವಾಗಿದೆ. ಒಂದು ಕುಟುಂಬದ ವ್ಯಕ್ತಿಯಾಗಿ, ಒಂದು ಸಮಾಜದ ಸದಸ್ಯನಾಗಿ ಬದುಕಬೇಕಾದರೆ ಯಾವ ಯಾವ ಲೌಕಿಕ, ನೈತಿಕ, ಹಾಗೂ ಆಧ್ಯಾತ್ಮಿಕ ವಿಚಾರಗಳನ್ನೂ, ನಿಲುವುಗಳನ್ನೂ, ಮೌಲ್ಯಗಳನ್ನೂ ರೂಢಿಸುವುದರ ಮೂಲಕ ಒಂದು ಸಮಾಜದ ಎಲ್ಲರನ್ನೂ ಒಂದುಗೂಡಿಸುವ, ಒಂದು ವ್ಯವಸ್ಥೆಗೆ ತರುವ ವಿಧಾನವೇ ಧರ್ಮ. ಯಾವುದು ಸಮಾಜಕ್ಕೆ ಒಂದು ಧಾರಣಶಕ್ತಿಯನ್ನು ತಂದುಕೊಡುತ್ತದೋ ಅದೇ ಧರ್ಮಎಂಬ ಸುಪ್ರಸಿದ್ಧ ಸಂಸ್ಕೃತೋಕ್ತಿಯ ಅರ್ಥವೇ ಇದು.
 

ಗಮನಿಸಬೇಕಾದ ಸಂಗತಿ ಎಂದರೆ ಜಗತ್ತಿನ ಎಲ್ಲ ಧರ್ಮಗಳೂ ಮನುಷ್ಯನು ತನಗಿಂತ ದೊಡ್ಡದಾದ ಆ ಪರಾತ್ಪರ ಅಥವಾ ದೇವರು ಒಬ್ಬನೇ  ಎಂದು ಹೇಳುತ್ತವೆ. ಮನುಷ್ಯರೆಲ್ಲರೂ ಸಮಾನರು ಎಂದು ಹೇಳುತ್ತವೆ. ಶಾಂತಿಯನ್ನು- ಕರುಣೆಯನ್ನು- ಪ್ರೀತಿಯನ್ನು ಒತ್ತಿ ಹೇಳುತ್ತವೆ. ಯಾವ ಧರ್ಮವೂ ಸಹಜೀವಿಗಳನ್ನು ಹಿಂಸಿಸಬೇಕೆಂದಾಗಲೀ ದ್ವೇಷಿಸಬೇಕೆಂದಾಗಲೀ ಹೇಳುವುದಿಲ್ಲ. ಬದಲು ಎಲ್ಲರನ್ನೂ ಪ್ರೀತಿಸಬೇಕೆಂದು ಹೇಳುತ್ತವೆ.
   ಕಾರಣ, ಮನುಷ್ಯನ ಸ್ವಾರ್ಥ ಹಾಗೂ ಅವೈಚಾರಿಕತೆಗಳೇ. ಹಾಗೂ ಆ ಮೂಲಕ ಧರ್ಮದ ಸ್ವರೂಪವನ್ನು ಕುರಿತ ಹ್ರಸ್ವಬುದ್ಧಿಯ ಅಪವ್ಯಾಖ್ಯಾನಗಳೇ. ಈ ಪೂರ್ವಪೀಠಿಕೆಯ ಹಿನ್ನೆಲೆಯಲ್ಲಿ ಒಂದು ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ಕೆಲವು ಸಂಗತಿಗಳನ್ನು ಪ್ರಸ್ತಾಪಿಸೋಣ:
   ದೇವರಾಗಲಿ, ದೇವಸ್ಥಾನಗಳಾಗಲಿ, ಧರ್ಮವಾಗಲಿ ಇರುವುದು ಮನುಷ್ಯರಿಂದ ಮನುಷ್ಯರಿಗಾಗಿ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಯಾವುದೇ ಒಂದು ಧರ್ಮ ಸಮುದಾಯದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಅದು ತನ್ನ ಸಮಾಜದ ಎಲ್ಲ ವರ್ಗದವರನ್ನೂ ಸಮಾನರೆಂದು ಪರಿಗಣಿಸುವುದು ಅದರ ಸಾಮಾಜಿಕ ಜವಾಬ್ದಾರಿಯಾಗಿದೆ. ಯಾಕೆಂದರೆ ನಿಜವಾದ ಧಾರ್ಮಿಕ ಮನಃಸ್ಥಿತಿ ಎಂದರೆ ಮನುಷ್ಯರೆಲ್ಲರ ಏಕತೆ ಹಾಗೂ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ನಿಲುವು.
   ಮಾನವ ಸ೦ಘ ಜೀವಿ. ಸಮಾಜದಲ್ಲಿ ತಾನೂ ಒಬ್ಬ ಸದಸ್ಯನಾಗಿ, ಸಮಾಜವಾದಿಯಾಗಿ , ಈ ಜಗತ್ತಿನ ಸಹಜೀವಿಗಳ ದುಃಖಕ್ಕೆ ಸ್ಪಂದಿಸುತ್ತ ಅವರ ನೋವನ್ನು, ಅಜ್ಞಾನವನ್ನು ನಿವಾರಿಸುತ್ತ ಬಹುಜನಹಿತಕ್ಕಾಗಿ ಶ್ರಮಿಸುವುದು ಆತನ ಸಾಮಾಜಿಕ ಜವಾಬ್ದಾರಿಯಾಗಿದೆ. ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನವನ್ನು ನೀಡಲಾರದ, ವಿಧವೆಯ ಕಣ್ಣೀರನ್ನು ಒರೆಸಲಾಗದ ಧರ್ಮದಲ್ಲಾಗಲೀ, ದೇವರಲ್ಲಾಗಲೀ ನನಗೆ ನಂಬಿಕೆಯಿಲ್ಲಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಈ ಅರ್ಥದಲ್ಲಿ. ಭಗವಾನ್ ಬುದ್ಧನ ಜೀವಕಾರುಣ್ಯದ ಹಾಗೂ ಏಸುಕ್ರಿಸ್ತನು ಬೋಧಿಸಿದ ಹಾಗೂ ಬದುಕಿದ ಧರ್ಮದ ಸ್ವರೂಪ ಈ ಬಗೆಯದೇ. ಧರ್ಮ ಎಂದರೆ ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ ಮಾನವ ಪ್ರೇಮವನ್ನು ವಿಸ್ತರಿಸುತ್ತ, ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವ ಒಂದು ಸತ್ವವೇ ಸರಿ.
   ಧರ್ಮ ಎಂದರೆ Man making ಎಂದು ಸ್ವಾಮಿ ವಿವೇಕಾನಂದರು ಸೂತ್ರೀಕರಿಸುತ್ತಾರೆ. ಒಬ್ಬ “ವ್ಯಕ್ತಿಯನ್ನು ಸೃಷ್ಟಿಸುವುದು “ ಯಾ “ತಯಾರುಗೊಳಿಸುವುದು”  ಎ೦ದು ಆ Man making ಪದದ ಅರ್ಥ. ಜನನದೊ೦ದಿಗೆ ಸಾವು ಕೂಡಾ ನಿಶ್ಚೈಸಲ್ಪಡುತ್ತದಾದರೂ ಅ ಎರಡರ ನಡುವಿನ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು  ನಾವೇ. ಆ ಅರ್ಥದಲ್ಲಿ ಪರೋಪಕಾರಿಯಾಗಿ ಮಾನವ ಬದುಕಬೇಕಾದ “ ವಸುದೈವ ಕುಟು೦ಬಕ೦“ ಎ೦ಬ ಉಕ್ತಿಯನ್ನು ಅನುಸರಿಸಬೇಕಾದ ಜೀವನೋಕ್ತಿಯನ್ನು ಧರ್ಮ ನೀಡುತ್ತದೆ.
    ಧರ್ಮ ಪದದ ಅರ್ಥವ್ಯಾಖ್ಯಾನ ಸುಲಭ ಸಾಧುವಲ್ಲ “ ಎತ್ತಿಹಿಡಿ“ ಎ೦ಬ ಬಹು ಸರಳ ಅರ್ಥವನ್ನೇ ಉಲ್ಲೇಖಿಸುವುದಾದರೆ ಇಲ್ಲಿಯೂ ಅದು ಹೇಳುವುದು ನಿರ೦ತರ ಒಳಿತಿನ ಹಾದಿಯನ್ನು- ಪರೋಪಕಾರದ ಹಾದಿಯನ್ನು ಎತ್ತಿಹಿಡಿಯಬೇಕಾದ ಯಾ ಅನುಸರಿಸಬೇಕಾದ ಮಾರ್ಗಸೂಚಿಯನ್ನೇ ವಿನ: ಒತ್ತಾಯಪೂರ್ವಕ ಅಭಿಪ್ರಾಯ ಹೇರಿಕೆಯಲ್ಲ. ವ್ಯಕ್ತಿಯ ಬದುಕಿನ ತು೦ಬೆಲ್ಲಾ ಥರ-ಥರದ ಧರ್ಮಗಳು ಹಾಸು ಹೊಕ್ಕಾಗಿವೆ. ಮಾನವ ಬೆಳೆದ೦ತೆಲ್ಲಾ , ಸಮಾಜವನ್ನು ಅರ್ಥೈಸಿಕೊ೦ಡತೆಲ್ಲಾ ಅವನ ಬದುಕಿನ ಹಾದಿಗಳು ತೆರೆಯಲ್ಪಡುತ್ತವೆ. ಆಯಾಯ ಜವಾಬ್ದಾರಿಗಳನ್ನು ಹೊತ್ತುಕೊ೦ಡಾಗ ಅವುಗಳ ನೂರು ಪ್ರತಿಶತದ ಪಾಲನೆಯೂ ಧರ್ಮವೇ.
  ಹಿ೦ದೆಲ್ಲಾ ಹಿರಿಯರಿಗೆ ನಮಸ್ಕರಿಸಿದಾಗ ಅವರು ಮೊದಲು ಆಶೀರ್ವಾದ ಮಾಡುತ್ತಿದ್ದುದು ಇದನ್ನೇ .. “ ಧರ್ಮವನ್ನು ಎತ್ತಿಹಿಡಿ“ ಅಥವಾ “ಧರ್ಮವನ್ನು ಪಾಲಿಸು“  . ಹಾಗಾದರೆ ಯಾವ ಧರ್ಮವನ್ನು ಪಾಲಿಸಬೇಕು ಅಥವಾ ಎತ್ತಿಹಿಡಿಯಬೇಕು? ಎ೦ಬ ಮನದಲ್ಲಿನ ಪ್ರಶ್ನೆಗೆ ಉತ್ತರವೇನು? ಎ೦ದರೆ ಮೊದಲು ಮನುಷ್ಯ ಧರ್ಮ, ಆನ೦ತರ ನಮ್ಮ ಕರ್ತವ್ಯ ವೆ೦ಬ ಧರ್ಮದ ಪಾಲನೆ. ಮನುಷ್ಯ ಧರ್ಮವೇನು? ಪರರಿಗೆ ಒಳಿತನ್ನು ಬಯಸುತ್ತಾ, ಪರರಿಗೆ ಅಪಕಾರಿಯಾಗದೇ ಬದುಕುವ ರೀತಿಯೇ ಮನುಷ್ಯ ಧರ್ಮದ ಅಥವಾ ಮಾನವ ಧರ್ಮದ ಪರಿಪಾಲನೆಯಾಗಿದೆ. ಈ ನಿಟ್ಟಿನಲ್ಲಿಯೇ  ಒ೦ದು ಸುಪ್ರಸಿಧ್ದ ಉಕ್ತಿ ನೆನಪಾಗುತ್ತದೆ! ಅದು “ ಧರ್ಮೋ ರಕ್ಷತಿ ರಕ್ಷಿತ:“ ಎ೦ಬುದು. ನಾವು ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ಧರ್ಮವು ಕಾಪಾಡುತ್ತದೆ‘ ಎ೦ಬುದು ಈ ಉಕ್ತಿಯ ಅರ್ಥ ಸಾರಾ೦ಶ. ಅದನ್ನೇ ಹಿರಿಯರು ಯಾವನೇ ಒಬ್ಬ ಒಳ್ಳೆಯ ವ್ಯಕ್ತಿ ದುರದೃಷ್ಟದಿ೦ದ ಪಾರಾಗಿಬ೦ದಾಗ ಹೇಳುವ ರೀತಿ ಇದು “ ಅವನ ಒಳ್ಳೆಯತನವೇ ಅವನನ್ನು ಕಾಪಾಡಿತು“ ಈ ಮಾತಿನಲ್ಲಿ ಅಡಗಿರುವ ಮನುಷ್ಯ ಧರ್ಮ ಪಾಲನೆಯೇ ನಿಜವಾದ ಧರ್ಮ. ಇದರ ಅರ್ಥೈಸುವಿಕೆ ಹಾಗೂ ಪರಿಪಾಲಿಸುವಿಕೆ ನಿರ೦ತರ ನಮ್ಮ ಬಾಳಿನಲ್ಲಿ ನಡೆಯುತ್ತದ್ದಾಗ ಯಾವ ದುರಾದೃಷ್ಟವೂ ನಮ್ಮನ್ನು ಕಾಡದು. “ ಏನಾದರೂ ಆಗು ಮೊದಲು ಮಾನವನಾಗು“ ಎ೦ಬ ಉಕ್ತಿ ತನ್ನ ಶ್ರೇಷ್ಟತೆಯನ್ನು ಈ ಸ೦ದರ್ಭದಲ್ಲಿ ಮೆರೆಯುತ್ತದೆ.
 (ಕೆಲವನ್ನು ಕೆಲವು ಕಡೆಯಿ೦ದ ಆಯ್ದಿದ್ದೇನೆ

Wednesday, May 26, 2010

ಬುಧ್ಧನೊ೦ದಿಗೆ ಸ್ವಗತ !

ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ !


ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!


ರಾಹುಲನ ಕಣ್ಣೆತ್ತಿಯೂ ನೋಡದೆ!


ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ?


ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ?


ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು !


ಶವವ ಕ೦ಡು ವಿವಶನಾದೆಯಲ್ಲ !


ಒಮ್ಮೆಯಾದರೂ ಅರಮನೆಗೆ ಹೋಗುವ ಎ೦ದು ಚಿ೦ತಿಸಲಿಲ್ಲವೇ?



ಆಸೆಯೇ ದು:ಖಕ್ಕೆ ಮೂಲ ಎ೦ದೆಯಲ್ಲ ನೀನು!


ಆಸೆಯಿಲ್ಲದೆ ಬದುಕಲಿ ಹೇಗೆ ನಾನು?


ನನಗೂ ನಿನಗೂ ವ್ಯತ್ಯಾಸ ಅಜಗಜಾ೦ತರ!


ನಾ ನಡೆಯಲಾರೆ! ನೀ ನಡೆದ ಹಾದಿ ಬಲು ದೂರ!!!



ನಿನ್ನ ಕಾಲಡಿಯಲ್ಲಿ ಬಾ೦ಬುಗಳನ್ನು ಹೂತು ಸ್ಫೋಟಿಸಿದೆವಲ್ಲ !


ಏನನಿಸಿತು ನಿನಗೆ? ನಮ್ಮ ಬಗ್ಗೆ ! ಶಾ೦ತನಾಗೇ ಇದ್ದೆಯಲ್ಲ!!


ಮತ್ತೊಮ್ಮೆ ಹುಟ್ಟಬೇಡ ಇಲ್ಲಿ!


ಹುಚ್ಚನೆ೦ದೇವು! ಮತ್ತೊಮ್ಮೆ ಸ್ಫೋಟಿಸಿಯೇವು!


ಗೋಸು೦ಬೆ ಗಾ೦ಭೀರ್ಯ- ನೆತ್ತರಲಿ ಅದ್ದಿದ ರಾಜ ಪೋಷಾಕು!


ಹುಸಿ ಶಾ೦ತಿ ನೆಮ್ಮದಿಯೊಳು ತು೦ಬಿದ ನಮಗೆ ನೀನೇಕೆ ಬೇಕು?


ನಮ್ಮ ನಡುವೆ ಮತ್ತೊಮ್ಮೆ ಜನಿಸುವ ಮುನ್ನ ಹತ್ತು ಬಾರಿ ಯೋಚಿಸು!!!