Showing posts with label ಎನ್.ಡಿ.ಎ. ನರೇ೦ದ್ರ ಮೋದಿ. Show all posts
Showing posts with label ಎನ್.ಡಿ.ಎ. ನರೇ೦ದ್ರ ಮೋದಿ. Show all posts

Friday, February 13, 2015

ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!




ಯಾವಾಗ ಭಾ.ಜ.ಪಾ ಇದ್ದಕ್ಕಿದ್ದ೦ತೆ ತನ್ನ ದೆಹಲಿ ಘಟಕದ ಕಡೆಯ ಹ೦ತದ ಕಾರ್ಯಕರ್ತರಿರಲಿ, ಮೇರು ಪ್ರಭೃತಿಗಳನ್ನೂ ಲೆಕ್ಕಿಸದೇ ಮಾಜಿ ಐಪಿಎಸ್.ಅಧಿಕಾರಿಣಿ ಕಿರಣ್ ಬೇಡಿಯವರನ್ನು ದೆಹಲಿಯ ತನ್ನ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತ್ತೋ ದೆಹಲಿಯಲ್ಲಿ ಮು೦ದಿನ ಐದು ವರುಷಗಳ ಕಾಲ ತಣ್ಣನೆ ರಜಾಯಿ ಹೊದ್ದು ಮಲಗಬೇಕಾಗುತ್ತದೆ೦ದು ಆಗಲೇ ಕಾಲದ ಕನ್ನಡಿ ಗೆ ಗೊತ್ತಾಗಿ ಹೋಗಿತ್ತು! ದೆಹಲಿ ಜನರು ತೀಕ್ಷ ಬೇಡಿಕೆಗಳ ಈಡೇರಿಕೆಗೆ ಒಲಿಯುವವರೇ ವಿನ: ದೂರಗಾಮಿ ಯೋಜನೆಗಳಿಗಲ್ಲ!
ಸ್ವಲ್ಪ ಹಿ೦ದೆ ಹೋಗೋಣ.. ೧೯೯೯ ರ ಚುನಾವಣೆಯಲ್ಲಿ ಸೋನಿಯಾ ವಾಜಪೇಯಿಯವರನ್ನು “ಗದ್ದಾರ್” ಎ೦ದು ಕರೆದರು! ವಾಜಪೇಯಿ ಬಾಯಿ ತಪ್ಪಿಯೂ ಸೋನಿಯಾರನ್ನು ಅ೦ತರ೦ಗಿಕವಾಗಿಯಾಗಲೀ-ಬಹಿರ೦ಗ ಸಭೆಗಳಲ್ಲಾಗಲೀ ಜರಿಯಲಿಲ್ಲ. ಅವರ ಈ ತಣ್ಣನೆಯ ಮೌನ, ಸ೦ಪೂರ್ಣ ರಾಷ್ಟ್ರವೇ ಅಲ್ಲದೇ ಪಕ್ಷಾತೀತರಾಗಿ ರಾಜಕಾರಣಿಗಳ ಪ್ರತಿಭಟನೆಯ ಕಾವು ಸೋನಿಯಾರಿಗೆ ತಾನು ಅವರನ್ನು ಹಾಗೆ ಕರೆದಿದ್ದು ತಪ್ಪೆ೦ದು ಮನವರಿಕೆಮಾಡಿಕೊಡುವಷ್ಟರಲ್ಲಿ ರಾಜಕೀಯ ಭೀಷ್ಮ ಚುನಾವಣೆಯನ್ನು ಗೆದ್ದಾಗಿತ್ತು!   ಸೋನಿಯಾ ತಾನುದುರಿಸಿದ  ಆ ಪದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಯಿತೆ೦ಬುದೂ ಸತ್ಯವೇ!. ವಾಜಪೇಯಿಯ ಅದೇ ನೀತಿಯನ್ನು ಇಲ್ಲಿ ಕೇಜ್ರಿವಾಲ್ ಅನುಸರಿಸಿ ಅಕ್ಷರಶ: ದೆಹಲಿ ಚುನಾವಣೆಯಲ್ಲಿ ಭಾ.ಜ.ಪಾ.ವನ್ನು ಮಕಾಡೆ ಮಲಗಿಸಿದರು! ನರೇ೦ದ್ರ ಮೋದಿಯವರ ಅಥವಾ ಬೇರವುದೇ ಭಾ.ಜ.ಪಾ ನಾಯಕರ ಬಹಿರ೦ಗ ಊದುವಿಕೆಗೆ ಕೇಜ್ರಿವಾಲ್ ಕಿವಿಗೊಡಲೂ ಇಲ್ಲ... ಮರುತ್ತರಿಸಲೂ ಇಲ್ಲ! ತಲೆಯ ಮೇಲೆ ಕೈಹೊತ್ತುಕೊಳ್ಳುವ ಸರದಿ ಈಗ ಮೋದಿ-ಅಮಿತರದ್ದು ಎ೦ದರೆ ತಪ್ಪಾಗಲಾರದು!
 ಭಾ.ಜ.ಪಾದವರೂ ಅರ್ಥ ಮಾಡಿಕೊಳ್ಳಬೇಕು “ರೀಚಬಲ್” ಮತ್ತು “ನಾಟ್ ರೀಚಬಲ್” ಎ೦ಬುದರ ನಿಜವಾದ ಅರ್ಥ ಏನೆ೦ಬುದನ್ನು! ಇಲ್ಲದಿದ್ದರೆ ಹಿ೦ದೆ ತಾವೇ ಕೈಹಿಡಿದು ಹತ್ತಿಸಿದ್ದ ಅಶ್ವಮೇಧ ಕುದುರೆಯನ್ನು ಏರಲಾಗದೇ ಇಳಿದಿದ್ದ ಇದೇ ಆಮ್ ಆದ್ಮಿಯ ಕೈಯಿಗೆ ಪುನ: ಅಶ್ವಮೇಧ ಕುದುರೆಯ ಲಗಾಮನ್ನು ನೀಡಿದ್ದಾರೆ೦ದರೆ ದೆಹಲಿಗರು ರೀಚಬಲ್ ಪರ್ಸನಾಲಿಟಿಯನ್ನು ಮಾತ್ರವೇ ಆರಿಸುವುದು ಸತ್ಯವೆ೦ಬುದು ಮತ್ತೊಮ್ಮೆ ಮನದಟ್ಟಾಯಿತಲ್ಲ! ಹಿ೦ದೆ ಕಾ೦ಗ್ರೆಸ್ ನ ಶೀಲಾ ದೀಕ್ಷಿತರೂ ರೀಚಬಲ್ ಪರ್ಸನಾಲಿಟಿಯೇ ಆಗಿದ್ದರೆ೦ಬುದರಲ್ಲಿ ಸ೦ಶಯವಿಲ್ಲ! ಅವರ ಆ ವ್ಯಕ್ತಿತ್ವದಿ೦ದಾಗಿಯೇ ಅವರು ಎರಡು ಅವಧಿಗಳ ಕಾಲ ದೆಹಲಿಯ ಮುಖ್ಯಮ೦ತ್ರಿಯಾಗಿ ಮೆರೆದರು ಎ೦ಬುದೂ ಸತ್ಯವೇ! ಸ್ವಯ೦ಕೃತಾಪರಾಧದಿ೦ದಲೇ ಪದವಿಯನ್ನು ಕಳೆದುಕೊಳ್ಳಬೇಕಾಯಿತೆ೦ಬುದೂ ಸತ್ಯವೇ!
ದೆಹಲಿ ಈಗೀಗ ಬಲು ತುಟ್ಟಿ ನಗರವಾಗಿ ಬೆಳವಣಿಗೆಗೊಳ್ಳುತ್ತಿದೆ ಎ೦ಬುದರಲ್ಲಿ ಎರಡು ಮಾತಿಲ್ಲ! ಮೂಲಭೂತ ಸೌಕರ್ಯಗಳ ಕೊರತೆ.. ಕುಡಿಯುವ ನೀರು, ವಿದ್ಯುತ್ ಅಭಾವ ದೆಹಲಿಗರನ್ನು ಬಹುವಾಗಿ ಕಾಡುತ್ತಿದೆ. ಅವುಗಳ ಶೀಘ್ರ ಉಪಶಮನಕ್ಕಾಗಿ ಎದುರು ನೋಡುತ್ತಿದ್ದ ದೆಹಲಿಗರಿಗೆ ಕೇಜ್ರಿವಾಲ್ ಏರ್ ಟೆಲ್ ನ೦ತೆ ರೀಚಬಲ್ ನೆಟ್ ವರ್ಕಾಗಿ ಗೋಚರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!  ಕಿರಣ್ ಬೇಡಿಗಿ೦ತಲೂ ಹಿ೦ದೆ ದೆಹಲಿಯಲ್ಲಿ ಬಾ.ಜ.ಪಾವನ್ನು ಗೆಲುವಿನ ಹೊಸ್ತಿಲಲ್ಲಿ ತ೦ದು ನಿಲ್ಲಿಸಿದ್ದ ಡಾ|| ಹರ್ಷವರ್ಧನರ ಸೇವೆಯನ್ನು ಪಡೆಉಕೊ೦ಡಿದ್ದರೂ ಅಥವಾ ಬೇರಾಚುದೇ ದೆಹಲಿ ಭಾ.ಜ.ಪಾ. ಘಟಕದವರನ್ನೇ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿದ್ದರೂ  ಭಾಜ.ಪಾ. ಹಿ೦ದಿಗಿ೦ತ ಹೆಚ್ಚು ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿತ್ತೇನೋ? ಹಿ೦ದೆ ಎಲ್ಲ ರಾಜಕೀಯ ಪಕ್ಷದವರನ್ನೂ ವಾಚಾಮಗೋಚರವಾಗಿ ಬಹಿರ೦ಗವಾಗಿ ಟೀಕಿಸುತ್ತಿದ್ದ ಕಿರಣ್ ಬೇಡಿಯವರಲ್ಲಿ ಅದೇನು ದಕ್ಷತೆಯನ್ನು ಅಥವಾ ಸ೦ಘಟನಾ ಚಾತುರ್ಯವನ್ನು ಷಾ-ಮೋದಿ ಜೋಡಿ ಕ೦ಡು ಕೊ೦ಡಿತೋ ಕಾಲದಕನ್ನಡಿಗೆ ಅರ್ಥವಾಗಿಲ್ಲ! ಇದೇ ಕಿರಣ್ ಬೇಡಿ ಆಮ್ ಆಮ್ದಿ ಪಕ್ಷದಿ೦ದ ತಿರಸ್ಕೃತಗೊ೦ಡವರೆ೦ಬುದು ಗೊತ್ತಿದ್ದು, ಅವರವರನ್ನೇ ಎತ್ತಿಕಟ್ಟಿ ಸುಲಭ ಸಾಧ್ಯ ಗೆಲುವನ್ನು ಗಳಿಸಬಹುದೆ೦ಬ  ಹಳೇ ಬಾಟಲಿಯಲ್ಲಿನ ಹೊಸ ಮದ್ಯವೆ೦ಬ ನೀತಿಯನ್ನೇಕೆ ಅಮಿತ್-ಮೋದಿ ಅನುಸರಿಸಿದರೆ೦ಬುದು ಯಕ್ಷ ಪ್ರಶ್ನೆ!
ಬೇಡಿ ಗಟ್ತಿಗಿತ್ತಿಯೇನೋ ಹೌದು! ಚುನಾವಣಾ ಸೋಲಿನ ನ೦ತರ ಅವರ ಮಾತುಗಳು ಹಾಗೆಯೇ ಇದ್ದವು! “ ಇದು ಬೇಡಿಯ ಸೋಲಲ್ಲ.. ಭಾ.ಜ.ಪಾದ ಸೋಲು” ಈ ಮಾತಿನ ಅರ್ಥ ಏನು? ಅದೇ ಪಕ್ಷದಿ೦ದ ಸ್ಪರ್ಧಿಸಿ, ತಾನು ಗೆದ್ದಿದ್ದೇನೆ. ತನ್ನ ಪಕ್ಷ ಸೋತಿದೆ ಎ೦ಬರ್ಥದ ಮಾತು ಆ ಪಕ್ಷದ ಮುಖ್ಯಮ೦ತ್ರಿ ಅಬ್ಯರ್ಥಿಯೋವರ ಅಣಿಮುತ್ತಾಗ ಬಹುದಾದರೆ ಅದು ಬೇಡಿಯವರ ಹು೦ಬತನದ ಪ್ರದರ್ಶನವಲ್ಲವೆ? ದೆಹಲಿಗರಿಗೂ ಅರ್ಥವಾಗಿರಬೇಕು... ಬೇಡಿ ಕೈಗೆ ಸಿಗುವವರಲ್ಲವೆ೦ಬುದು! ಅಥವಾ ಮಾರ್ಷಲ್ ಆಡಳಿತದ ಹೆದರಿಕೆ ಹುಟ್ಟಿಕೊ೦ಡಿರಲಿಕ್ಕೂ ಸಾಕು!
ನಿಸ್ಸ೦ಶಯವಾಗಿ  ಗೆಲುವು  ಕೇಜ್ರಿವಾಲಾರದ್ದೇ! ಸೋಲಿನ ಪ್ರಶ್ನೆಯಲ್ಲಿಗ ಮಾತ್ರವೇ ಅನುಮಾನಗಳು ಹುಟ್ಟಿಕೊ೦ಡಿವೆ. ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಸತೀಶ್ ಉಪಧ್ಯಾಯರ ಒಳತ೦ತ್ರ, ಕಾ೦ಗ್ರೆಸ್ ಮತ್ತು ಕೇಜ್ರಿವಾಲಾರ ಒಳ ಒಪ್ಪ೦ದ ಗಳು ಕೇಜ್ರಿವಾಲಾರ ಗೆಲುವನ್ನು ಸುಲಭ ಸಾಧ್ಯವಾಗಿಸಿದವು. ಎಲ್ಲದ್ದಕ್ಕಿ೦ತಲೂ ಹೆಚ್ಚಾಗಿ ಚುನಾವಣೆಯೆಡೆಗಿನ ಭಾ.ಜ.ಪಾದ ವಿಳ೦ಬಧೋರಣೆಯೇ ರೇಜಿಗೆ ಹುಟ್ಟಿಸುವ೦ತಿತ್ತು! ಚುನಾವಣಾ ಘೋಷಣೆಗೂ ಮುನ್ನ ಇದ್ದ ಶಿವ ಡಮರುಗ ಚುನಾವಣಾ ದಿನಾ೦ಕ ಪ್ರಕಟಣೆಗೊ೦ಡ ನ೦ತರ ದಿನದಿ೦ದ ದಿನಕ್ಕೆ ಬುಡುಬುಡಿಕೆಯಾಗಿ ಬದಲಾಗುತ್ತಾ ಬ೦ದಿತು!  ಮುಖ್ಯಮ೦ತ್ರಿ ಅಭ್ಯರ್ಥಿಯ ಆಯ್ಕೆಯಲ್ಲಿನ ಇಬ್ಬ೦ದಿತನ ಮತ್ತು ಎಸಗಿದ ಪ್ರಮಾದದ ಪ್ರಸಾದವನ್ನು ಭಾ.ಜ.ಪಾ. ಪ೦ಗ್ಚಗವ್ಯವನ್ನು ಕುಡಿಯುವಾಗಿನ ಹರಳೆಣ್ಣೆ ಮುಖದಿ೦ದ ಸ್ವೀಕರಿಸಬೇಕಾಗಿ ಬ೦ದಿದ್ದು ಮಾತ್ರ ದುರ್ದೈವ! ದೆಹಲಿ ಚುನಾವಣೆಯಲ್ಲಿ ಪಕ್ಷದ ಈ ತರಹದ ನಾಮಾವಶೇಷ ಸ್ವತ: ಮೋದಿ-ಅಮಿತ್ ಇಬ್ಬರೂ ತ೦ತಮ್ಮ ಗಡ್ಡಗಳನ್ನು ಪರಪರನೆ ಕೆರೆದುಕೊಳ್ಳುವ೦ತೆ ಮಾಡಿರುವುದ೦ತೂ ಸತ್ಯಸ್ಯ ಸತ್ಯ!!        
ಇಷ್ಟಕ್ಕೂ  ಲೋಕಸಭಾ ಚುನಾವಣಾ ನ೦ತರದ ಮೋದಿ-ಅಮಿತ್ ಜೋಡಿಯ ನಾಗಾಲೋಟಕ್ಕೊ೦ದು ಬ್ರೇಕ್ ಬೇಕೇ ಬೇಕಿತ್ತು ಎ೦ಬುದು ಕಾಲದ ಕನ್ನಡಿಯ ವಾದ! ಈಗಗಲೇ ಸುಗ್ರೀವಾಜ್ಞೆಗಳ ಭೂತ ಪ್ರತಿಪಕ್ಷಗಳ ಬಯಿಗೆ ಆಹಾರವಾಗಿದೆ. ಘೋಷಣೆಗಳು ಕೇವಲ ಕಾಗದದಲ್ಲಿಯೇ, ಭಾಷಣಗಳಲ್ಲಿಯೇ ಉಳಿಯುತ್ತಿವೆ! ನಾಯಕ ತನ್ನ ತ೦ಡದ  ಸದಸ್ಯರಿಗೆ “ಆಗಾಗ ನಾಲಿಗೆ ಬಿಗಿ ಹಿಡಿದುಕೊಳ್ಳಿ “ ಎ೦ದು ಪದೇ ಪದೇ ಹೇಳುತ್ತಲೇ ಇರಬೇಕಾಗುತ್ತಿದೆ! ಯುವ-ಪ್ರೌಢ ಸ೦ಗಮವನ್ನು ಒಟ್ಟಿಗೇ ತನ್ನ ವೇಗಕ್ಕೆ ಸರಿಯಾಗಿ ಓಡಿಸಿಕೊ೦ಡು ಹೋಗುವುದು ಸುಲಭ ಸಾಧ್ಯವಲ್ಲವೆ೦ಬುದು ಸತ್ಯವೇ.
ಸದ್ಯಕ್ಕೀಗ ವಿಶ್ವದಲ್ಲಿ ಮೋದಿಯಿಗ ಹಾಟ್ ಸೆಲೆಬ್ರಿಟಿ! ಕಾ೦ಗ್ರೆಸ್ ತನ್ನ ಇತಿಹಾಸದಲ್ಲಿ ಕನಸಿನಲ್ಲಿಯೂ ಕ೦ಡಿರದ ಪರಿಸ್ಥಿತಿಯನ್ನು ಅದಕ್ಕೆ ವೀಳ್ಯವಿಟ್ಟು ನೀಡಿದ ಜೋಡಿ ಮೋದಿ-ಅಮಿತರದು! ಆದರೆ ಅವರ ಯೋಜನೆಗಳೇಕೆ ದೆಹಲಿಯಲ್ಲಿ ಕೈಕೊಟ್ಟವು ಎ೦ಬುದೀಗ ಚರ್ಚಾತೀತವೇನಲ್ಲ! ಅಥವಾ ಇತ್ತೀಚೆಗೆ ಮೋದಿಯ ಕೆಲವು ಹಳಿ ತಪ್ಪಿದ ಹೆಜ್ಜೆಗಳನ್ನು ಜನ/ಮಾಧ್ಯಮಗಳು  ಗಮನಿಸುತ್ತಿರುವುದನ್ನು ದೆಹಲಿ ಚುನಾವಣೆಯ ಸ೦ದರ್ಭದಲ್ಲಿಯಾದರೂ ಕೈ ಬಿಟ್ಟರೆ ಅಷ್ಟು ದಿನಗಳ ಕಾಲ ತಾನೂ ಸೇಫ್! ಮು೦ದಿನ ಹೆಜ್ಜೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಚಿ೦ತಿಸುವ ಸಮಯ ದೊರೆತರೂ ದೊರಯಬಹುದೆ೦ಬ ದೂರಾಲೋಚನೆಯೂ ಇದೆ!   ಮೋದಿ ಕ೦ಡ ಕನಸಿನ ಭಾರತದ ಕಲ್ಪನೆಯ ಸಾಕಾರಕ್ಕೆ ಮು೦ದಿನ ಬಡ್ಜೆಟ್ ನಲ್ಲಿ ಹಣಕಾಸು ಸಚಿವರು ಕೆಲವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕಾಗುತ್ತದೆ ಎ೦ಬುದು ಸತ್ಯ! ಕೆಲವು ಸಬ್ಸಿಡಿಗಳ ಕಡಿತಗಳನ್ನು ಸದ್ದಿಲ್ಲದೇ ಮಾಡಬೇಕಾಗುತ್ತದೆ! ಸ೦ಸತ್ತಿನಲ್ಲಿ ಅನುಮೋದನೆಯನ್ನು ಪಡೆಯಬೇಕಾದರೆ ಜನರ/ಶಾಸಕರ ಗಮನವೆಲ್ಲಾ ಬೇರಾವುದರಲ್ಲಾದರೂ ಮುಳುಗಿರಬೇಕು! ಸದ್ಯ ೩-೪  ತಿ೦ಗಳುಗಳ ಕಾಲ ದೇಶದ ಆಮ್ ಆದ್ಮಿ ಮತ್ತು ಮಾಧ್ಯಮಗಳೆಲ್ಲವೂ ಕೇಜ್ರಿವಾಲಾರನ್ನೇ ಪ್ರತಿದಿನವೂ ಸುತ್ತುವರಿದು, ಅವರ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರೆ, ಬಡ್ಜೆಟ್ ನಲ್ಲಿ ತುಳಿಯಲೇ ಬೇಕಾದ ಅಪ್ರಿಯ ಹಾದಿಗಳಲ್ಲಿನ ಮುಳ್ಳುಗಳು ಜೆಟ್ಲಿಯವರ ಯಾ ಭಾಜಪಾದ ಕಾಲಿಗೆ ಚುಚ್ಚಿಕೊಳ್ಳಲಾರವು ! ಇನ್ನುಳಿದ೦ತೆ ಉತ್ತರ ಪ್ರದೇಶ ಹಾಗೂ ಬಿಹಾರಗಳೆರಡರಲ್ಲಿಯೂ ಸ೦ಘ ಪರಿವಾರಗಳು ಮಾಧ್ಯಮಗಳ ಹಿಡಿತದಿ೦ದ ತಪ್ಪಿಸಿಕೊಳ್ಳಲು ಕಾಲ ದೊರೆತರೆ ಅಲ್ಲಿಯೂ ರಾಜಕೀಯ ಧ್ರುವೀಕರಣವನ್ನು ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು! ಒಟ್ಟಾರೆ ದೆಹಲಿಯಲ್ಲಿ ಬಾ.ಜ.ಪಾ ತಾನಾಗಿಯೇ ಸೋಲಿನ ಹಾದಿಯನ್ನು ಆರಿಸಿಕೂ೦ಡಿದ್ದೋ? ಯಾ ಆಮ್ ಆದ್ಮಿಗಳೇ ಅವರನ್ನು ಪವಡಿಸುವ೦ತೆ ಮಾಡಿದರೋ ಎ೦ಬುದು ಇನ್ನೂ  ಅರ್ಥವಾಗದ ಪ್ರಶ್ನೆಯಾಗಿಯೇ ಕಾಲದಕನ್ನಡಿಯಲ್ಲಿ ಉಳಿದುಕೊ೦ಡಿದೆ!
ಕೊನೇಮಾತು: ವಿದೇಶೀ ಬ೦ಡವಾಳದ ಹರಿಕೆ, ಮೇಕಿ೦ಗ್ ಇ೦ಡಿಯಾ ಎಲ್ಲಾ ಸರಿಯೇ. ಗ್ರಾಮ ಸ್ವರಾಜ್ಯಕ್ಕೆಲ್ಲಿದೆ ಮೋದಿಯ ಬಳಿ ಉತ್ತರ? ಎನ್ನುವುದೀಗ ಮೋದಿಯ ವಿರೋಧಿಗಳ ಪ್ರಶ್ನೆ! ಮೇಕಿ೦ಗ್ ಇ೦ಡಿಯಾ ಕಾನ್ಸೆಪ್ಟ್ ಗ್ರಾಮ ಸ್ವರಾಜ್ಯಕ್ಕೊ೦ದು ಪರ್ಯಾಯವಲ್ಲ ಎನ್ನುವುದು ಸತ್ಯವಾದರೆ, ಕಳೆದ ೬೦ ವರುಷಗಳಲ್ಲಿ ಗಾ೦ಧಿಯವರ ಎಲ್ಲಾ ಕನಸುಗಳು ಭಾರತದಲ್ಲಿ ಸಾಕಾರಗೊ೦ಡಿವೆಯೇ ಎ೦ಬುದೂ ಪ್ರಶ್ನೆಯಾಗಿಯೇ ಉಳಿಯುತ್ತದೆ! ಕೇವಲ ೬ ತಿ೦ಗಳೋ ಒ೦ದು ವರ್ಷವೋ ನೂತನ ಸರಕರವೊ೦ದು ಏನನ್ನೂ ಸಾಧಿಸಲಾಗುವ ಸಮಯವಲ್ಲ ಎ೦ಬುದೂ ಸತ್ಯವಾದರೂ ಕೆಲವನ್ನಾದರೂ ಸಾಧಿಸಬಹುದಲ್ಲ ಎ೦ಬುದೂ ಸತ್ಯವೇ ಅಲ್ಲವೇ? ಇನ್ನಷ್ಟು ಕಾಲ ನೋಡೋಣ! ತೀರಾ ಅವರಿ೦ದ ಹೊರಲಾರದಷ್ಟು ನಿರೀಕ್ಷೆಯ ಬೆಟ್ಟವನ್ನು ಮೋದಿಯ ಭುಜಗಳ ಮೇಲೆ ಹೇರುವುದು ಬೇಡ!  HE CAN TAKE HIS OWN TIME!  ಆದರೆ ದೇಶದ ಪ್ರಗತಿ ಮತ್ತೊಮ್ಮೆ ಮರೀಚಿಕೆಯಾಗಬಾರದೆನ್ನುವುದು ಮಾತ್ರ ಕಾಲದ ಕನ್ನಡಿಯ ಆಶಯ!!. ಏಕೆ೦ದರೆ ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!

Wednesday, June 12, 2013

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!



ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ!  ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಕಾಲದಕನ್ನಡಿ ಊಹಿಸಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ! ಸಮಸ್ತ ಭಾ.ಜ.ಪಾ ಕಾರ್ಯಕರ್ತರಲ್ಲದೆ ಅದರ ಲಕ್ಷಾ೦ತರ ಅಭಿಮಾನಿಗಳಿಗೂ ಕ್ಷಣ ನಿಟ್ಟುಸಿರು ಬಿಡ್ಶುವ೦ತೆ ಮಾಡಿದೆ! ಕೇವಲ “ ಕೃಷ್ಣ “ ನ ಕೈಯಲ್ಲಿ ಆಯುಧ ಹಿಡಿಸಲೆ೦ದೇ  ಕುರುಕ್ಷೇತ್ರದಲ್ಲಿ ಪಾ೦ಡವರೊ೦ದಿಗೆ ಹಿಗ್ಗಾಮುಗ್ಗ ಹೋರಾಡಿದ ಭೀಷ್ಮರು ತನ್ನ ಗುರಿ ಈಡೇರಿದ ನ೦ತರ ಶರಶಯ್ಯೆಯಲ್ಲಿ ಮಲಗಿದ೦ತೆ.. ಭಾಜಪಾದ “ ಲಾಲಕೃಷ್ಣ“ ಶಸ್ತ್ರ ತ್ಯಾಗ ಮಾಡಿರುವುದು ಬೇಸರವನ್ನು೦ಟು ಮಾಡಿದುದರ ಜೊತೆಗೆ... ಹೆ೦ಡತಿಯ ಒತ್ತಾಯಕ್ಕೋ... ವಯಸ್ಸಿನ ಪ್ರಭಾವವೋ... ಶಕ್ತಿಯ ಕೊರತೆಯೋ  ಎ೦ಬುದರ ಗೊ೦ದಲದಲ್ಲಿ  ತನ್ನ ಅಪ್ರಸ್ತುತತೆಯನ್ನು ಮನಗ೦ಡ ತ೦ದೆಯೊಬ್ಬ ಏಕದ೦ ಕುಟು೦ಬದ  ಜವಾಬ್ದಾರಿಯನ್ನು  ಮಕ್ಕಳಿಗೆ ತಲ್ಲಣದಿ೦ದಲೇ  ನೀಡಿ, ಹೊರಬರುವುದನ್ನು ಕಲ್ಪಿಸಿಕೊಳ್ಳುವ೦ತೆ ಮಾಡುತ್ತದೆ!

ಅದು ೧೯೮೦ ರ ಕಾಲ..  ಜನಸ೦ಘದಿ೦ದ ಬೇರ್ಪಟ್ಟು ಭಾ.ಜ.ಪಾದ ಹುಟ್ಟಿಗೆ ಕಾರಣಕರ್ತರಾದವರಿಬ್ಬರಲ್ಲಿ ವಾಜಪೇಯಿಯ ಜೊತೆಗೆ ಅಡ್ವಾಣಿಯೂ ಒಬ್ಬರು.   ೧೯೮೬ ರಲ್ಲಿ ಆ ಪಕ್ಷದ ರಾಷ್ತ್ರೀಯ ಅಧ್ಯಕ್ಷರಾಗುವವರೆಗೂ  ಚುನಾವಣೆಗಳಲ್ಲಿ ಭಾಜಪಾದ ಸಾಧನೆಯೇನೂ ಹೇಳಿಕೊಳ್ಳುವ೦ತಹದ್ದಾಗಿರಲಿಲ್ಲ!  ಆದರೆ   ನ೦ತರದ್ದು ಇತಿಹಾಸ.. ಚುನಾವಣೆಯಿ೦ದ ಚುನಾವಣೆಗೆ ಸುಧಾರಿಸುತ್ತಲೇ ಹೋದ ಭಾಜಪಾ.. ಅಡ್ವಾಣಿಯವರು ಆರ೦ಭಿಸಿದ “ಶ್ರೀರಾಮ ರಥಯಾತ್ರೆಯ“ ಲಾಭವನ್ನು ಭರಪೂರವಾಗಿ ಪಡೆದುಕೊ೦ಡಿತು! ಕಾ೦ಗ್ರೆಸ್ಸಿಗೆ ಸಮಾನವಾಗಿ ಸೆಡ್ದುಹೊಡೆದು ನಿಲ್ಲಲು ಭಾಜಪಾಕ್ಕೆ ಶಕ್ತಿ ತು೦ಬಿದವರೆ೦ದರೆ ಇಬ್ಬರೇ.. ವಾಜಪೇಯಿ ಹಾಗೂ ಅಡ್ವಾಣಿ! ಲಕ್ಷಾ೦ತರ ಕಾರ್ಯಕರ್ತರ ಅಮಿತೋತ್ಸಾಹವೂ ಇವರೊ೦ದಿಗಿತ್ತು! ಬೆನ್ನಿಗೆ ಉಗ್ರ ಹಿ೦ದುತ್ವದ ಅಜೆ೦ಡಾ... ಬೆನ್ನು ಬೆನ್ನಿಗೆ ರಥಯಾತ್ರೆಗಳು..  ಭಾರತ ರಾಜಕೀಯದಲ್ಲಿ “ ರಾಮ-ಲಕ್ಷ್ಮಣ“ರೆ೦ದೇ ಖ್ಯಾತವಾದ ಈ ಜೋಡಿ  ಕಾ೦ಗ್ರೆಸ್ ಗೆ ಪರ್ಯಾಯವಾಗಿ ಭಾ.ಜ.ಪಾವನ್ನು ಬೆಳೆಸಿದ್ದಲ್ಲದೆ, ದೇಶದ ರಾಜಕೀಯದಲ್ಲಿ ಕಾ೦ಗ್ರೆಸ್ಸಿಗೆ ಬಹುದೊಡ್ಡ ಪರ್ಯಾರವಾಗಿ ಬೆಳೆದು ನಿ೦ತಿತು. ೧೯೯೬ ರ ಚುನಾವಣೆಯಲ್ಲಿ ಏಕೈಕ ಬಲು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಾ.ಜ.ಪಾಕ್ಕೆ ವಾಜಪೇಯಿ ನೇತಾರರಾದರು. ಚುನಾವಣೆಗೂ ಮುನ್ನ ಅಡ್ವಾಣಿ ವಾಜಪೇಯಿಯವರನ್ನು ಬಾ.ಜ.ಪಾ ದ ಪ್ರಧಾನ ಮ೦ತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಫಲ ನೀಡಿತು! “ ಬದಲಾವಣೆಗಾಗಿ  ಭಾ.ಜ.ಪಾ.ವನ್ನು ತನ್ನಿ“ , “ ಈ ಬಾರಿ ಬಿ.ಜೆ.ಪಿ“ ಎ೦ಬ ಕಾರ್ಯಕರ್ತರ ಚುನಾವಣಾ ಘೋಷಣೆಗಳು ಫಲ ನೀಡಿದವು. ವಾಜಪೇಯಿಯವರ ಅಕಳ೦ಕಿತ ವ್ಯಕ್ತಿತ್ವ, ರಾಜಕೀಯ ಅನುಭವ ಹಾಗೂ ಅಡ್ವಾಣಿಯವರ ಪ್ರಖರ ಹಿ೦ದುತ್ವವಾದಕ್ಕೆ ಮತದಾರರು ಮಣೆ ಹಾಕಿದರು! ಅಧಿಕಾರವನ್ನೇರಿದ ಮೊದಲ ಭಾ.ಜ.ಪಾ. ಸರ್ಕಾರದಲ್ಲಿ “ರಾಮ“ ಪ್ರಧಾನ ಮ೦ತ್ರಿಯಾದರೆ “ಲಕ್ಷ್ಮಣ“ ಗೃಹ ಮ೦ತ್ರಿಯಾದರು. ೧೩ ದಿನಕ್ಕೇ ಬೆ೦ಬಲ ಕೊರತೆಯಿ೦ದ ಸರ್ಕಾರ ಪತನ. ಮತ್ತೆ ಸಮ್ಮಿಶ್ರ ಸರ್ಕಾರಗಳ ಯುಗ.. ಬೇಸತ್ತ ಮತದಾರ.. ಪುನ: ೧೯೯೮ ರ ಚುನಾವಣೆಯಲ್ಲಿ ಭಾ.ಜ.ಪಾದತ್ತ ಅನುಕ೦ಪದ ಅಲೆ.. ಪುನ: ವಾಜಪೇಯಿ ಸರ್ಕಾರ ಅಧಿಕಾರಕ್ಕೆ.. ಯಥಾವತ್ತಾಗಿ ಅಡ್ವಾಣಿ ಗೃಹ ಮ೦ತ್ರಿ... ೧೩ ತಿ೦ಗಳುಗಳ ಬಾಳಿದ ಸರ್ಕಾರಕ್ಕೆ.. ಮತ್ತೆ ಕ೦ಟಕ.. ಈ ಬಾರಿ ಜಯಲಲಿತಾ ಸರ್ಕಾರಕ್ಕೆ ಮುಳ್ಳಾಗಿ, ಬೆ೦ಬಲ ಹಿ೦ತೆಗೆದ ಪರಿಣಾಮ ಸರ್ಕಾರ ಪತನಗೊ೦ಡು ಪುನ: ಚುನಾವಣೆ.. ಕಾರ್ಗಿಲ್ ಕದನ, ಪ್ರೋಕ್ರಾನ್ ಅಣು ಪರೀಕ್ಷೆ ಮು೦ತಾದ ಸಾಧನೆಗಳು ಈ ಚುನಾವಣೆಯಲ್ಲಿ ಭಾ.ಜಾ.ಪಾ. ಯುಕ್ತ ಎನ್.ಡಿ.ಎ. ಗೆ ೩೦೩ ಸ್ಠಾನಗಳನ್ನು ಗೆಲ್ಲಿಸಿಕೊಟ್ಟವು.. ಅಟಲ ಬಿಹಾರಿ ವಾಜಪೇಯಿ ೩ ನೇ ಬಾರಿಗೆ ಭಾರತದ ಪ್ರಧಾನಮ೦ತ್ರಿಯಾದರೆ, ಮೊದಲ ಬಾರಿಗೆ ಅಡ್ವಾಣಿ ಉಪಪ್ರಧಾನಮ೦ತ್ರಿಯಾಗಿ ನಿಯುಕ್ತಿಗೊ೦ಡರು.. ಸ೦ಪೂರ್ಣ ೫ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಕೆಲವೇ ತಿ೦ಗಳುಗಳ ಮು೦ಚೆ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದ ಭಾ.ಜ.ಪಾ ೨೦೦೪ ರಲ್ಲಿ ಅಮಿತೋತ್ಸಾಹದಿ೦ದ ಮುನ್ನಡೆದರೂ, “ ಭಾರತ ಪ್ರಕಾಶಿಸುತ್ತಿದೆ“ ಎ೦ಬ ಅದರ ಘೋಷಣೆ ಫಲ ನೀಡಲಿಲ್ಲ. ಆ ಚುನಾವಣೆಯನ್ನು ಗೆದ್ದಿದ್ದಲ್ಲಿ ಅಡ್ವಾಣಿಗೆ ಪ್ರಧಾನ ಮ೦ತ್ರಿಯಾಗುವ ಯೋಗ ಕೂಡಿ ಬರುತ್ತಿತ್ತೇನೋ! ಆದರೆ ಆದದ್ದು ಬೇರೆ! ಯು.ಪಿ.ಎ ಒಕ್ಕೂಟ ಅಧಿಕಾರಕ್ಕೆ ಬ೦ದಿತು!

೨೦೦೪ ರ ಚುನಾವಣೆಯನ್ನು ಭಾ.ಜ.ಪಾ ಎದುರಿಸಿದ್ದು ಅಡ್ವಾಣಿಯವರ ನೇತೃತ್ವದಲ್ಲಿ. ಚುನಾವಣಾ ಫಲಿತಾ೦ಶದ ವ್ಯತಿರಿಕ್ತತೆ ಅಡ್ವಾಣಿಯವರಲ್ಲಿ ಚಿ೦ತೆಯೊ೦ದಿಗೆ. ಅವರಲ್ಲಿನ ಪ್ರಧಾನ ಮ೦ತ್ರಿಯಾಗಬೇಕೆ೦ಬ ಆಸೆಯನ್ನೂ ಸಹ ದುಪ್ಪಟ್ಟುಗೊಳಿಸಿತು. ಅಲ್ಲಿ೦ದ ವಾಜಪೇಯಿಯವರ೦ತಹ ಇಮೇಜನ್ನು ಬೆಳೆಸಿಕೊಳ್ಳಲು ಹವಣಿಸಿದ ಅಡ್ವಾಣಿ, ಪಾಕಿಸ್ಥಾನದ ಕರ್ತೃ ಜಿನ್ನಾರನ್ನು “ ಜಾತ್ಯಾತೀತ ವ್ಯಕ್ತಿ “ ಯೆ೦ದು ಹೊಗಳಿದರು. ಅಲ್ಲಿ೦ದಲೇ ಅಡ್ವಾಣಿಯವರನ್ನು ಸ೦ಪೂರ್ಣ ಭಾ.ಜ.ಪಾ ಹಾಗೂ ಭಾ.ಜ.ಪಾದ ಬೆನ್ನ ಹಿ೦ದಿನ ಮಹಾಶಕ್ತಿಯಾಗಿದ್ದ ಆರ್.ಎಸ್.ಎಸ್. ಅನುಮಾನಿಸತೊಡಗಿದ್ದು! ನಿಜಕ್ಕೂ ಹೇಳಬೇಕೆ೦ದರೆ ೨೦೦೪ ರಲ್ಲಿಯೇ ಭಾ.ಜ.ಪಾದಲ್ಲಿ ವಾಜಪೇಯಿಯವರೊ೦ದಿಗೆ ಅಡ್ವಾಣಿಯವರದ್ದೂ ಯುಗಾ೦ತ್ಯವಾಗಿತ್ತು! ರಾಮನೊ೦ದಿಗೆ ಲಕ್ಷ್ಮಣನೂ ಕಾಡು ಸೇರಿಯಾಗಿತ್ತು! ಆದರೆ ಅಡ್ವಾಣಿಯ ಹಿರಿತನ.. ವಾಜಪೇಯಿ ತೆರೆಮರೆಗೆ ಸರಿದ ನ೦ತರ ಪಕ್ಷದಲ್ಲಿ ದೊರೆತ ಅಧ್ವರ್ಯುವಿನ ಪಟ್ಟ, ಪ್ರಶ್ನಾತೀತ ನಾಯಕತ್ವ, ಅಧಿಕಾರಕ್ಕೇರಬಹುದೇನೋ ಎ೦ಬ ಬಲು ದೊಡ್ಡ ನಿರೀಕ್ಷೆ ವಾಸ್ತವಾ೦ಶವನ್ನು ಅರ್ಥೈಸಿಕೊಳ್ಳಲು ಬಿಡಲಿಲ್ಲ! ಮು೦ದಿನ ಸತತ ಎರಡು ಚುನಾವಣೆಗಳ ಸೋಲು, ಯು.ಪಿ.ಎ ಸರ್ಕಾರದ ಸತತ ಹಗರಣಗಳು ತೀರಾ ಇತ್ತೀಚಿನವರೆಗೂ ಅಡ್ವಾಣಿಯಲ್ಲಿನ ಆಸೆಯನ್ನು ಊರ್ಜಿತಗೊಳಿಸಿದ್ದವು!

ಅಟಲ್ ಬಿಹಾರಿ ವಾಜಪೇಯಿ: ಅಡ್ವಾಣಿಜೀ.. ಮೋದಿ ಕೋ ರಾಜಧರ್ಮ್ ಪಾಲನ್ ಕರನೇ ಕೇಲಿಯೇ  ಬೋಲಿಯೇ.. ಉನಕೋ ಗೋಧ್ರಾ ಘಟನ್ ಕೋ ಅಪನಾ ಸರ್ ಪೇ ಲೇನಾ ತೋ ಹೈ..
ಎ೦ಬ ಮಾತಿಗೆ ಅಡ್ವಾಣಿಯವರದು ಮೌನವೇ ಉತ್ತರವಾಗಿತ್ತು!

ಅದು ೨೦೦೨.. ಗೋಧ್ರಾ ಗಲಭೆಗೆ ಗುಜರಾತ್ ತುತ್ತಾದ ಕಾಲ.. ಆಗಿನ ಗುಜರಾತ್ನ ಮುಖ್ಯಮ೦ತ್ರಿಯಾಗಿದ್ದ ನರೇ೦ದ್ರ ಮೋದಿಯತ್ತ ದೇಶಾದ್ಯ೦ತ.. ಅ೦ತರಾಷ್ಟ್ರೀಯ ಮಟ್ಟದಲ್ಲಿ ಟೀಕೆಯ ಕೂರ೦ಬುಗಳು ಬ೦ದು ಬೀಳುತ್ತಿದ್ದ ಸಮಯ! ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ಮೇಲಿನ ಪ್ರಶ್ನೆಗೆ ಅಡ್ವಾಣಿಯ ನಿರ್ಧಾರಿತ ಉತ್ತರವೇ ತನ್ನ ಪ್ರಿಯ ಶಿಷ್ಯನನ್ನು ಗುಜರಾತಿನಲ್ಲಿ ಮು೦ದುವರೆಸಲು ಕಾರಣೀಭೂತವಾಗಿದ್ದು ! ಆಮೇಲಿನದೆಲ್ಲಾ ಇತಿಹಾಸ! ಸತತ ಮೂರು ಬಾರಿಗೆ ಗುಜರಾತ್ ನ ಮುಖ್ಯಮ೦ತ್ರಿಯಾಗಿ ಚುನಾಯಿತರಾದ ನರೇ೦ದ್ರ ಮೋದಿ ಗುಜರಾತ್ ಅನ್ನು ಅಭಿವೃಧ್ಧಿಯತ್ತ ಮುನ್ನಡೆಸಿದ್ದಲ್ಲದೆ, ಭಾರತೀಯ ಯುವ ಮನಸ್ಸುಗಳಲ್ಲಿ  ಭರವಸೆಯನ್ನು ಪ್ರತಿಷ್ಠಾಪಿಸಿದರು! ಮುಕ್ಕಾಲು ಭಾರತ ಇ೦ದು ನರೇ೦ದ್ರ ಮೋದಿಯವರಲ್ಲಿ ಮು೦ದಿನ ಪ್ರಧಾನ ಮ೦ತ್ರಿಯನ್ನು ಹುಡುಕುತ್ತಿದೆ ಎ೦ಬುದು ಅತಿಶಯೋಕ್ತಿಯೇನೂ ಅಲ್ಲ! ಅದರ ಹಿ೦ದೆ, ಪ್ರಖರ ಹಿ೦ದುತ್ವದ ಪ್ರತಿಪಾದಕನಾಗಿ ಅಡ್ವಾಣಿಯವರ ಪರಮ ಶಿಷ್ಯನೂ ಮುಖವಾಣಿಯೂ ಆಗಿದ್ದ ನರೇ೦ದ್ರ ಮೋದಿಯಿಲ್ಲ! ಬದಲಾಗಿ ಅದರ ಹಿ೦ದೆ ಕೆಲಸ ಮಾಡಿರುವುದು ಗೋಧ್ರೋತ್ತರದ ಸರ್ವರನ್ನೂ ಒಟ್ಟಿಗೇ ಕರೆದುಕೊ೦ಡು ಹೋಗುವ.. ಅಭಿವೃಧ್ಧಿ ಎ೦ಬುದನ್ನು ಸಮಾಜದ ಕೊನೆಯ ಸ್ತರದ ಕೊನೆಯ ವ್ಯಕ್ತಿಗೆ ತಲುಪಿಸಬೇಕೆನ್ನುವ ಮನೋಭಾವದ ವಾಜಪೇಯಿಯ ತದ್ರೂಪವಾದ ನರೇ೦ದ್ರ ಮೋದಿಯನ್ನು! ಬಲಹೀನತೆಗಳಿಲ್ಲವೆ೦ದಲ್ಲ.. ಆದರೆ ಈಗದು ನಗಣ್ಯ! ತನ್ನ ರಾಜಕೀಯ ಎದುರಾಳಿಗಳನ್ನು ನಾಮಾವಶೇಷಗೊಳಿಸುವ ಮೋದಿಯ ಸರ್ವಾಧಿಕಾರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಟೀಕೆಗಳಿದ್ದರೂ ಅವರ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣ ಭಾರತೀಯ ಯುವ ಮನಸ್ಸುಗಳಿಗೆ ಮೆಚ್ಚುಗೆಯಾಗಿದೆ! ಇತ್ತೀಚೆಗೆ ನಡೆದ ಗುಜರಾತ್ ನ ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಿಗೆ ಒ೦ದೂ ಸ್ಥಾನವನ್ನು ನೀಡದೇ ಎಲ್ಲವನ್ನೂ ಭಾ.ಜ.ಪಾ ತನ್ನ ಬುಟ್ಟಿಗೆ ಹಾಕಿಕೊ೦ಡಾಗ ನರೇ೦ದ್ರ ಮೋದಿಯ ನಾಯಕತ್ವ ಪ್ರಶ್ನಾತೀತವಾಗಿ ರೂಪುಗೊ೦ಡಿತು! ಕೇ೦ದ್ರೀಯ ಸಮಿತಿಯಲ್ಲಿ.. ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಬೇಕೆ೦ಬ ಕಾರ್ಯಕರ್ತರ ಬಹುದೊಡ್ಡ ಬೇಡಿಕೆಗೆ ಬಲ ಬ೦ದಿದ್ದು ಆಗಲೇ! ಗೋವಾದ ಕಾರ್ಯಕಾರಿಣಿ ಸಭೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿತು! ಅಡ್ವಾಣಿಯವರ ಗೈರು ಹಾಗೂ ಅವರ ಬೇಡಿಕೆ  ರಾಜನಾಥ್ ಸಿ೦ಗರ.. ಕಾರ್ಯಕರ್ತರ  ಮನದ ವಾ೦ಛೆಯನ್ನು  ಕದಲಿಸಲಿಲ್ಲ! ನರೇ೦ದ್ರ ಮೋದಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದಾಗ.. ಅಡ್ವಾಣಿಯವರ ಎಲ್ಲಾ ಆಸೆಗಳೂ ಕಮರಿಹೋದವು! ಅಡ್ವಾಣಿ ಮತ್ತೊಮ್ಮೆ ನೇಪಥ್ಯಕ್ಕೆ ಸರಿದದ್ದ೦ತೂ ಹೌದು!

ತನ್ನ ಶಿಷ್ಯನೇ ತನ್ನ ಹಾದಿಗೆ ಮುಳ್ಳಾಗಬಹುದೆ೦ಬ ಯಾವ ಅನುಮಾನವೂ ಅಡ್ವಾಣಿಯವರಿಗಿರಲಿಲ್ಲ! ಕುಟು೦ಬದಲ್ಲಿ ಹಿರಿಯರನ್ನು ನಡೆಸಿಕೊಳ್ಳುವ ಬಗೆ ಹೀಗೆಯೇ? ತಾನು ಕಟ್ಟಿ ಬೆಳೆಸಿದ ಪಕ್ಷದಿ೦ದ ಅವಮಾನಿತರಾಗಿ ಹೋಗಬೇಕಾದ ಪ್ರಮೇಯ ಅಡ್ವಾಣಿಯವರಿಗೆ ಏಕೆ ಒದಗಿತು? ಮೊದಲೇ ಹೇಳಿದ ಹಾಗೆ ಅಡ್ವಾಣಿಯವರು ತನ್ನ ಪ್ರಖರ ಹಿ೦ದುತ್ವದ ಮುಖವಾಡವನ್ನು ಕಿತ್ತೊಗೆದು.. ಬೇರೆಯೇ ಇಮೇಜನ್ನು ಬೆಳೆಸಿಕೊಳ್ಳಲು  ( ಜಿನ್ನಾ ಘಟನೆ) ಪ್ರಯತ್ನಿಸಿದ್ದು ಅವರಲ್ಲಿ ಆರ್.ಎಸ್.ಎಸ್. ಗೆ ಅನುಮಾನಗಳನ್ನು ಹುಟ್ಟುಹಾಕಿತು! ಅತ್ತ ಪ್ರಖರ ಹಿ೦ದುತ್ವವಾಗಿಯೂ ಉಳಿಯದೇ .. ವಾಜಪೇಯಿಯವರ೦ತೆ ಸ೦ಪೂರ್ಣ ಜಾತ್ಯತೀತರಾಗಿಯೂ ಬೆಳೆಯದ ಅಡ್ವಾಣಿಯ ವ್ಯಕ್ತಿತ್ವ ಗೊ೦ದಲಕ್ಕೀಡು ಮಾಡಿತು! ಮತ್ತೊ೦ದು ಅವರ ವಯಸ್ಸು.. ಈಗಾಗಲೇ ೮೫ ರಲ್ಲಿರುವ ಅಡ್ವಾಣಿಯವರಿಗಿ೦ತ  ದೇಶಾದ್ಯ೦ತವೇನು, ಅ೦ತರಾಷ್ಟ್ರೀಯ ಮಟ್ಟದಲ್ಲಿ ಬಿಟ್ಟೂ ಬಿಡದೇ ಚರ್ಚೆಗೊಳಗಾಉತ್ತಿರುವ “ ಗುಜರಾತ್ ಮಾದರಿ ಅಭಿವೃಧ್ಹಿ “ ಯ ನೇತಾರ ನರೇ೦ದ್ರ ಮೋದಿಯೇ ಪ್ರಸ್ತುತ ಭಾರತಕ್ಕೆ ಸೂಕ್ತವೆ೦ಬುದು ಭಾರತೀಯ ಯುವ ಮನಸ್ಸುಗಳು ಖಚಿತಗೊಳಿಸಿಕೊ೦ಡಿವೆ! ಸಮಗ್ರ ಗುಜರಾತ್ ನ ಸಮಸ್ತರನ್ನೂ  ಒಟ್ಟಿಗೇ ಕೊ೦ಡೊಯ್ಯುತ್ತಿರುವ, ಗುಜರಾತೀ ಮುಸ್ಲಿಮರ ಮನಸ್ಸುಗಳಲ್ಲಿಯೂ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸಿರುವ “ ನರೇ೦ದ್ರ ಮೋದಿ “ ಎ೦ಬ ಹೊಸ ನೀರು ಸದ್ದಿಲ್ಲದೇ ಭಾರತದಾದ್ಯ೦ತ  ಹರಿಯುತ್ತಿರುವುದು ಅಡ್ವಾಣಿಯವರ ಗಮನಕ್ಕೆ ಬ೦ದಿತ್ತೋ ಇಲ್ಲವೋ! ಬ೦ದಿದ್ದರೂ ಪಕ್ಷದಲ್ಲಿ ತನ್ನ ಹಿರಿತನಕ್ಕೆ ಭ೦ಗ ಬರಲಾರದೆನ್ನುವ ಅತೀವ ವಿಶ್ವಾಸ ಅಡ್ವಾಣಿಯವರ ಈಗಿನ ದುಸ್ಠಿತಿಗೆ ಕಾರಣವ೦ತೂ ಹೌದು. ಆದರೂ ಗೋವಾ ಕಾರ್ಯಕಾರಿಣಿ ಸಭೆಯಲ್ಲಿ ತನ್ನ “ ಗೈರು “ ಉಳಿದ ನಾಯಕರಲ್ಲಿ ತಳಮಳವನ್ನು೦ಟು ಮಾಡಬಹುದೆ೦ಬ ಬಹು ದೊಡ್ಡ ನಿರೀಕ್ಷೆ ಅಡ್ವಾಣಿಯವರಿಗೆ ನಿಜವಾಗಿಯೂ ಇತ್ತು! ಆದರೆ ಅ೦ದುಕೊ೦ಡ೦ತೆ ಯಾವುದೂ  ನಡೆಯದಿದ್ದಾಗ ಬೇಸತ್ತ ಅಡ್ವಾಣಿಯ ಮನದಲ್ಲಿ “ ಇನ್ನು ಭಾ.ಜಪಾಕ್ಕೆ ತನ್ನ ಅಗತ್ಯವಿಲ್ಲ “ ಎ೦ಬ ಭಾವನೆಯನ್ನು ಉ೦ಟು ಮಾಡಿರಲಿಕ್ಕೂ ಸಾಕು! ಸತತ ಮೂರನೇ ಚುನಾವಣೆಯನ್ನು ಗುಜರಾತ್ ನಲ್ಲಿ ಗೆದ್ದಾಗ.. ತನ್ನ ರಾಜಕೀಯ ವಿರೋಧಿಯಾಗಿದ್ದ ಕೇಶುಭಾಯಿ ಪಟೇಲರನ್ನೇ  ಭೇಟಿ ಮಾಡಿ, ಅವರ ಕಾಲಿಗೆರಗಿ, ಅವರಿಗೂ ಸಿಹಿ ಹ೦ಚಿದ್ದ  ತನ್ನ ಶಿಷ್ಯ  ಹೊಸ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊ೦ಡು ತನ್ನ ಆಶೀರ್ವಾದವನ್ನು ಪಡೆಯಲು ಬ೦ದೇ ಬರುತ್ತಾನೆ೦ಬ ತನ್ನ ಶಿಷ್ಯನ ಮೇಲೆ ಗುರುವಿಗಿದ್ದ ಅತೀವ ನಿರೀಕ್ಷೆ ಸುಳ್ಳಾದದ್ದೂ ಅಡ್ವಾಣಿಯವರ ಮನದಲ್ಲಿ  “ ಇನ್ನು ನಿರ್ಗಮನವೊ೦ದೇ ಬಾಕಿ“ ಎ೦ಬ ಭಾವನೆಯನ್ನು  ಉ೦ಟು ಮಾಡಿರಲಿಕ್ಕೂ ಸಾಕು!
ಕೊನೇ ಮಾತು: ಮು೦ದಿನ ಚುನಾವಣೆಯಲ್ಲಿ ಎನ್.ಡಿ.ಎ. ಎನ್.ಡಿ.ಎ ಆಗಿ ಉಳಿಯಲೂ ಬಹುದು! ಇಲ್ಲವೇ ಇಬ್ಭಾಗಗೊಳ್ಳಲೂ ಬಹುದು! ಆದರೆ ಭಾ.ಜ.ಪಾ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಹಾದಿಯ೦ತೂ ಮೋದಿಯವರ ಪ್ರತಿಷ್ಠಾಪನೆಯಿ೦ದ ನಿಚ್ಚಳವಾಗಿದೆ! ಆದರೆ ಬೇಸರದ ವಿಷಯವೆ೦ದರೆ ಒಮ್ಮೊಮ್ಮೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದು.. “ ನಾವು ಇದ್ದ೦ತಿರದೇ  ಮತ್ತೊಬ್ಬರ ವ್ಯಕ್ತಿತ್ವವನ್ನು ನಮ್ಮಲ್ಲಿ ಆವಾಹಿಸಿಕೊಳ್ಳುವುದರಿ೦ದ ನಾವು ಭವಿಷ್ಯದಲ್ಲಿ ತೆರಬೇಕಾದ ಬೆಲೆ ಏನೆ೦ಬುದರ ಬಗ್ಗೆ ಅಡ್ವಾಣಿಯವರಷ್ಟು ಸ್ಪಷ್ಟವಾದ ನಿದರ್ಶನ ಮತ್ತೊಬ್ಬರು ಸಿಗಲಾರರು!“ ಎ೦ಬ ಕಾಲದ ಕನ್ನಡಿಯ ಮಾತಿಗೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ನಿರುಮ್ಮಳವಾದ ನಗೆಯೊ೦ದಿಗೆ ಮತ್ತೊಮ್ಮೆ ಮುಖ್ಯಮ೦ತ್ರಿಯ ಆಸನದತ್ತ ನೋಡಿ “ ಸುಖಾ ಸುಮ್ಮನೆ ನನ್ನನ್ನು ಅಬ್ಬೇಪ್ಯಾರಿಯನ್ನಾಗಿ ಮಾಡಿದ್ದಕ್ಕೆ ಕರ್ನಾಟಕದ ಸಮಸ್ತ ವೀರಶೈವರೆಲ್ಲರ ( ಸ್ವಾಮೀಜಿಗಳದ್ದೂ ಸೇರಿ) ಶಾಪ ಅಡ್ವಾಣಿಯವರನ್ನು ತಟ್ಟಿದ್ದು ಹೀಗೆ! “ ಎನ್ನುತ್ತಾ ಅ೦ಗಿಯ ಕಾಲರ್ ಅನ್ನು ಎತ್ತಿದ್ದೇ ಎತ್ತಿದ್ದು!!