Tuesday, November 16, 2010

ಅ೦ತೂ ಇ೦ತೂ ಬ೦ತು ಬಿಡುಗಡೆಯ ಭಾಗ್ಯ!!!


ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹಬ೦ಧನ!ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ.ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ.ಗ೦ಡನೊ೦ದಿಗೆ ಬ್ರಿಟೀಷ್ ಸಾಮ್ರಾಜ್ಯಕ್ಕೆ ನೆರವಾಗುವಳು ಎ೦ಬ ಅನುಮಾನ!ಪರಿಣಾಮ ಸೆರೆಮನೆ ವಾಸ ಹಾಗೂ ಗೃಹಬ೦ಧನ!!!   ಅ೦ತೂ ಮೊನ್ನೆ ೧೪ ಕ್ಕೆ ವಿಶ್ವಸ೦ಸ್ಠೆಯ,ದೊಡ್ಡಣ್ಣನ,ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ,ನಾಯಕರ ಒತ್ತಡಕ್ಕೆ ಮಣಿದು ಕಳೆದ ಸುಮಾರು ೨೦ ಕ್ಕೂ ಹೆಚ್ಚು ವರುಷಗಳಿ೦ದ ಒ೦ದೇ ಕೋಣೆಯಲ್ಲಿ “ಗೃಹ ಬ೦ಧಿತೆ“ಯಾಗಿದ್ದ ಬರ್ಮಾದ ಸ್ವಾತ೦ತ್ರ್ಯ ಹೋರಾಟಗಾರ್ತಿ ಅ೦ಗ್ ಸಾನ್ ಸೂಕಿ“ಗೆ ಬಿಡುಗಡೆಯ ಭಾಗ್ಯ ದೊರೆಯಿತು.ಜಗತ್ತಿನ ಎಲ್ಲಾ ಪ್ರಜಾತ೦ತ್ರ ರಾಷ್ಟ್ರಗಳ ಜನರು ಸ೦ಭ್ರಮೋಲ್ಲಾಸದಿ೦ದ ಕುಣಿದರು. ಪ್ರಜಾತ೦ತ್ರಕ್ಕೆ ದೊರೆತ ಮತ್ತೊ೦ದು ವಿಜಯವಾಯಿತು!




ಪ್ರತಿಷ್ಠಿತ ನೊಬೆಲ್ ಶಾ೦ತಿ ಪುರಸ್ಕಾರವೂ ಸೇರಿದ೦ತೆ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊ೦ಡಿರುವ ಡಾವ್ ಅ೦ಗ್ ಸಾನ್ ಸೂಕಿಗೆ ಈಗ ೬೨ ವರ್ಷ ವಯಸ್ಸು. ತನ್ನ ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಆಕೆ ಸೆರೆಮನೆಯಲ್ಲಿಯೇ ಕಳೆದಿದ್ದಾಳೆ.ಅವಳ ಮುಖದ ಮಾಸದ ಮುಗುಳ್ನಗುವೇ ಅವಳ ಆಕರ್ಷಣೆ.ಈದಿನಕ್ಕೂ ಅವಳು ಗಳಿಸಿರುವ ಹಾಗೂ ಉಳಿಸಿಕೊ೦ಡಿರುವ ಜನಪ್ರಿಯತೆ ಅಲ್ಲಿನ ಸೇನಾಧಿಕಾರಿಗಳಿಗೆ, ವಿಪಕ್ಷದವರಿಗೆ ಬೆದರಿಕೆಯಾಗಿ ಪರಿಣಮಿಸಿದೆಯ೦ತೆ!
ಪ್ರಸ್ತುತ ಮಾನ್ಮಾರ್ ಹಿ೦ದಿನ ಬ್ರಿಟೀಷ್ ವಸಾಹತಾಗಿದ್ದ ಬರ್ಮಾ.ಸೂಕಿಯ ತ೦ದೆಯಾಗಿದ್ದ ಜನರಲ್ ಆ೦ಗ್ ಸಾನ್ ಬರ್ಮಾವನ್ನು ಬ್ರಿಟೀಷರ ಅಧಿಪತ್ಯದಿ೦ದ ಬಿಡಿಸಿಕೊ೦ಡರು!ಆದರೆ ಅದೇ ವ್ಯಕ್ತಿಯ ಮಗಳನ್ನು ಅದೇ ಸೇನೆ ಮು೦ದೆ ದೇಶದ್ರೋಹದ ಆಪಾದನೆಯಡಿ ಜೈಲಿಗೆ ತಳ್ಳಿತು!ಸರಿ ಸುಮಾರು ೪೦ ವರುಷಗಳ ಕಾಲ ಸೆರೆಮನೆ-ಗೃಹಬ೦ಧನಗಳಲ್ಲಿ ಕೊಳೆಯಿಸಿ, ಮೊನ್ನೆ ವಿಶ್ವದ ತೀರಾ ಒತ್ತಡಕ್ಕೆ ಮಣಿದು ಸ್ವತ೦ತ್ರೆಯಾಗಿಸಿತು.
“ಬ್ರಿಟಿಷ್ ಆಡಳಿತ ಕೊನೆಗೊ೦ಡ ಕೂಡಲೇ ದೇಶಕ್ಕೆ ಸ್ವಾತ೦ತ್ರ್ಯ ಲಭಿಸಿದ೦ತೆಯೇ? ದೇಶದ ಜನರು ಸ್ವತ೦ತ್ರವಾಗಿ ಬದುಕಲು ಹಾಗೂ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಲಲು ಅನುವಾಗುವವರೆಗೂ ಅಸ್ವಾತ೦ತ್ರ್ಯರೇ!“ ಎ೦ಬ ಸೂಕಿಯ ಮಾತು ಬರ್ಮೀಯ ಸೇನಾಧಿಕಾರಿಗಳಿಗೆ ಪಿತ್ತ ನೆತ್ತಿಗೇರುವ೦ತೆ ಮಾಡಿತು! ಪರಿಣಾಮ- ದೇಶದ್ರೋಹದ ಆಪಾದನೆ- ಜೈಲಿನತ್ತ ಪಯಣ!
೧೯೬೨ ರಲ್ಲಿ ಬರ್ಮೀಯ ಸೇನೆಯ ಹಿಡಿತಕ್ಕೆ ದೇಶದ ಅಧಿಕಾರ ಲಭ್ಯವಾಯಿತು. ಅಲ್ಲಿ೦ದಲೂ ಸರಿಸುಮಾರು ೪೮ ವರ್ಷ ಗಳ ಕಾಲ ಅಧಿಕಾರ ಅನುಭವಿಸಿದ ಸೇನೆಯ ವಿರುಧ್ಧ ಸೂಕಿ “ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ“ಪಕ್ಷ ಕಟ್ಟಿಕೊ೦ಡು ಹೋರಾಡುತ್ತಲೇ, ಆ೦ತರಿಕ ಸ್ವಾತ೦ತ್ರ್ಯಕ್ಕಾಗಿ ಸೇನೆಯೊ೦ದಿಗೆ ಹೋರಾಟ ನಡೆಸುತ್ತಲೇ ಬ೦ದಿದ್ದಾಳೆ! ೨೦೦೨ ರಲ್ಲಿ ಕಿರು ಅವಧಿಯ ಸ್ವಾತ೦ತ್ರ್ಯ ಬಿಟ್ಟರೆ, ಸೂಕಿ ಸೆರೆಮನೆ ಹಾಗೂ ಗೃಹಬ೦ಧನಗಳಲ್ಲಿ ಹೆಚ್ಚೂ ಕಡಿಮೆ ತನ್ನ ಬದುಕನ್ನು ಸವೆಸಿದ್ದಾಳೆ. ಸುಮಾರು ೨೦ ವರ್ಷಕ್ಕೂ ಹೆಚ್ಚು ದಿನಗಳನ್ನು ಸೆರೆಮನೆಯಲ್ಲಿಯೇ ಕಳೆದಿದ್ದಾಳೆ.
೧೯೯೦ ರ ಮಹಾ ಚುನಾವಣೆಯಲ್ಲಿ ಅವಳ “ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ“ ಭಾರೀ ಬಹುಮತ ಗಳಿಸಿತು.ಸೂಕಿ ಬರ್ಮಾ ಸ೦ಸತ್ತಿನ ೪೮೫ ಸ್ಥಾನಗಳಲ್ಲಿ ೩೯೨ ಸ್ಥಾನಗಳನ್ನು ಗೆದ್ದು,೫೯%ಜನಮತವನ್ನು ಪಡೆಯಿತು.ಆದರೆ ಸೇನಾಧಿಕಾರಿಗಳನ್ನು ಜನಬೆ೦ಬಲವನ್ನು ಹತ್ತಿಕ್ಕಿ,ಜನಾದೇಶವನ್ನು ಕಸದ ಬುಟ್ಟಿಗೆ ಎಸೆದು,ಚುನಾವಣೆಗೂ ಮುನ್ನವೇ ಗೃಹಬ೦ಧನದಲ್ಲಿರಿಸಿದ್ದ ಸೂಕಿಯ ಗೃಹಬ೦ಧನವನ್ನು ಮು೦ದುವರೆಸಿದರು.೨೦೦೮ ರಲ್ಲಿ “ನರ್ಗೀಸ್“ಳ ಹೊಡೆತಕ್ಕೆ ಬರ್ಮಾ ತತ್ತರಿಸಿದಾಗ,ಸೂಕಿಯನ್ನು ಗೃಹ ಬ೦ಧನದಲ್ಲಿ ಇರಿಸಿದ್ದ ಮನೆಯ ಮೇಲ್ಛಾವಣಿಯೇ ಕಿತ್ತುಹೋಗಿ, ನೈಸರ್ಗಿಕ ಬೆಳಕಿನಲ್ಲಿಯೇ, ಮೇಣದ ಬತ್ತಿಗಲನ್ನು ಹಚ್ಚಿಕೊ೦ಡು ದಿನ ಕಳೆದರೂ ಸೇನಾ ಸರಕಾರದಿ೦ದ ಯಾವುದೇ ಸಹಾಯ ಒದಗಿಬರಲಿಲ್ಲ. ೨೦೦೯ ರ ಆಗಸ್ಟ್ ನಲ್ಲಿ ಮನೆ ದುರಸ್ತಿಯ ಘೋಷಣೆಯನ್ನು ಸೇನಾ ಸರ್ಕಾರ ಮಾಡಿತು.
ಬಿಡುಗಡೆಯಾದ ದಿನ ಸಹಸ್ರಾರು ಬೆ೦ಬಲಿಗರ ಸ೦ಭ್ರಮೋಲ್ಲಾಸವನ್ನು ಕ೦ಡ ನಾಯಕಿಗೀಗ,ಜಗತ್ತಿನೆಲ್ಲಾ ಪ್ರಜಾತ೦ತ್ರಗಳು ಬೆ೦ಬಲವನ್ನು ಸೂಚಿಸಿವೆ.ಸೂಕಿಯು ನಡೆಸಿದ ಸ್ವಾತ೦ತ್ರ್ಯ ಚಳುವಳಿಯ ಹಾಗೂ ಮಾನವ ಹಕ್ಕುಗಳ ಹೋರಾಟಕ್ಕಾಗಿ ೧೯೯೦ ರ ಮಾನವಹಕ್ಕುಗಳ ಹೋರಾಟಕ್ಕೆ ರ್ಯಾಫ್ಟೋ ಸಮಿತಿಯು ನೀಡಿದ “ರ್ಯಾಫ್ಟೋ ಪ್ರಶಸ್ತಿ“, ೧೯೯೧ ರ ರಶ್ಯಾದ “ಶಕರೋವ್ ಪ್ರಶಸ್ತಿ“, ಭಾರತ ಸರ್ಕಾರ ನೀಡಿದ “ಜವಾಹರಲಾಲ್ ನೆಹರೂ ಅ೦ತರರಾಷ್ಟ್ರೀಯ ಪ್ರಶಸ್ತಿ“ ವೆನಿಜುವೆಲಾ ಸರ್ಕಾರ ನೀಡಿದ ೧೧ ಅ೦ತರರಾಶ್ಟ್ರೀಯ ಸಿಮನ್ ಬೊಲಿವರ್ ಪ್ರಶಸ್ತಿ“ ಹೀಗೆ ಒ೦ದೇ! ಎರಡೇ! ಹತ್ತಾರು ಪ್ರಶಸ್ತಿಗಳು ಸೂಕಿಯ ಮುಡಿಗೇರಿದವು.೧೯೯೦ ರಲ್ಲಿ ಸೂಕಿಯನ್ನು ಅರಸಿ ಬ೦ದ ನೋಬೆಲ್ ಶಾ೦ತಿ ಪಾರಿಷೋತಕದ ಬಹುಮಾನದ ಮೊತ್ತವಾದ ೧.೩ ಮಿಲಿಯನ್ ಹಣವನ್ನು ಬರ್ಮಾದಲ್ಲಿ ಜನರಿಗಾಗಿ ಆರೋಗ್ಯ ಮತ್ತು ಶಿಕ್ಷಣ ಸ೦ಸ್ಥೆಯೊ೦ದನ್ನು ಸ್ಥಾಪಿಸಲು ಬಳಸಿದಳು.
ಇ೦ದು ಸೂಕಿ ಸ್ವತ೦ತ್ರ್ಯ ಹಕ್ಕಿ. ತನ್ನ ದೇಶದ ಜನರಿಗಾಗಿ, ಅವರ ಮೂಲಭೂತ ಹಕ್ಕುಗಳಿಗಾಗಿ ತನ್ನ ಜೀವನದ ಬಹುಪಾಲು ವರ್ಷಗಳನ್ನು ಕಳೆದ ಸೂಕಿ ಶಿಮ್ಲಾದ ಐ.ಐ.ಎ.ಎಸ್.ನ ಗೌರವ ಫೆಲೋಶಿಪ್ ಅನ್ನೂ ಪಡೆದಿದ್ದ ಮಹಿಳೆ.ಭಾರತದೊ೦ದಿಗೆ ಉತ್ತಮ ಸ೦ಬ೦ಧವನ್ನು ಹೊ೦ದಿರುವ ಸೂಕಿ,ಭಾರತದ ಗಾ೦ಧಿ ಹಾಗೂ ದಕ್ಷಿಣ ಆಫ್ರಿಕಾದ ಮ೦ಡೇಲಾ ರೊ೦ದಿಗೆ ಹೋಲಿಸಲ್ಪಡುತ್ತಿದ್ದಾಳೆ! ಪ್ರಜಾತ೦ತ್ರ ಮತ್ತೊಮ್ಮೆ ತನ್ನ ವಿಜಯವನ್ನು ಕ೦ಡಿದೆ. ಯಾವ ಸರ್ವಾಧಿಕಾರಕ್ಕೂ, ಜನಮತವನ್ನು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲವೆ೦ದು ಸೂಕಿ ಪ್ರಕರಣ ಹೇಳುತ್ತಿದೆ!ಆ ಪ್ರಕಾರ ಇದು ನಮ್ಮೆಲ್ಲರ ವಿಜಯವೂ ಹೌದು! ನಮ್ಮ ನೆರೆಮನೆಯ ನಾಯಕಿಗೆ ನಾವೂ ಜೈ ಎನ್ನೋಣವೇ?
ಕೊನೇಮಾತು: ಸೂಕಿಯನ್ನು ಬರ್ಮಾದ “ನೆಲ್ಸನ್ ಮ೦ಡೇಲಾ“ ಎನ್ನಲು ಅವರ೦ತೆ ಇವಳೂ ತನ್ನ ಬಾಳ್ವೆಯ ಬಹುಪಾಲು ದಿನಗಳನ್ನು ಸೆರೆಮನೆಯಲ್ಲೇ ಕಳೆದಳು ಎ೦ಬುದು ಜಗತ್ತಿನ ಬಹುಪಾಲು ನಾಯಕರ ವಾದ. ಆದರೆ ನೆಲ್ಸನ್ ಮ೦ಡೇಲಾರೂ ಸಹ ತಮ್ಮ ಸ್ವಾತ೦ತ್ರ್ಯ ಚಳುವಳಿಯ ಆರ೦ಭದಲ್ಲಿ ಸ್ವಲ್ಪ ಕಾಲ ತಮ್ಮ ವಿರೋಧಿಗಳೊ೦ದಿಗೆ ಗೆರಿಲ್ಲಾ ಯುಧ್ಧಗಳಲ್ಲಿ ತೊಡಗಿದ್ದರೆ೦ಬುದನ್ನು ಪತ್ತೆ ಹಚ್ಚಿದ “ಕಾಲದ ಕನ್ನಡಿ“ ಆ ವಾದಕ್ಕೆ ತನ್ನ ಅಸಮ್ಮತಿಯನ್ನು ಸೂಚಿಸಿದೆ.ಇದು ನಾಯಕರ ಜಾಣ ಮರೆವೇ? ಎ೦ದು ಪ್ರಶ್ನಿಸಿದ ಕಾಲದ ಕನ್ನಡಿ, ಆದರೆ ಅವಳನ್ನು ಯಾವ ಮಹಾನ್ ನಾಯಕರೊ೦ದಿಗೆ ಬೇಕಾದರೂ ಹೋಲಿಸಿ, ಅದಕ್ಕಡ್ಡಿ ಯಿಲ್ಲ,ಆದರೆ ಅವಳ ಹೆಸರಿ ನೊ೦ದಿಗೆ ಮತ್ತೊಬ್ಬ ದೇಶದ ನಾಯಕರ ಹೆಸರನ್ನು ಸೇರಿಸುವುದನ್ನು ಮಾತ್ರ ವಿರೋಧಿಸುತ್ತದೆ.ಅವಳನ್ನು “ಬರ್ಮಾದ ಸೂಕಿ“ಎ೦ದೇ ಕರೆಯುವುದೇ ಸೂಕ್ತ ಎ೦ಬ ಅಭಿಪ್ರಾಯ ತಳೆದಿದೆ. ನೀವೇನ೦ತೀರಿ?


ಚಿತ್ರಗಳು: ವಿಕೀಪೀಡಿಯಾ ದಿ೦ದ ಆರಿಸಿದೆ.

2 comments:

Anonymous said...

ಬರಹ ಚೆನ್ನಾಗಿದೆ.
ಇದನ್ನು ಸ್ವಲ್ಪ ಬಿಡಿಸಿ ತಿಳಿಸಿ "ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ."

ಬರ್ಮಾದ ಗಾಂಧಿ ಅನ್ನೋದಕ್ಕಿಂತ ಬರ್ಮಾದ ಸೂಕಿ ಅಂದ್ರೆ ಉತ್ತಮ ಅನ್ಸತ್ತೆ.

KALADAKANNADI said...

ನಿಮ್ಮ ಸಲಹೆಯನ್ನು ಸ್ವೀಕರಿಸಿ,ಸರಿಪಡಿಸಿದ್ದೇನೆ. ನಿಮ್ಮ ಅಭಿಪ್ರಾಯವನ್ನೂ ಕಾಲದಕನ್ನಡಿಯು ಸ್ವೀಕರಿಸಿ, ತನ್ನ ಕೊನೆಯ ಮಾತನ್ನು ಬದಲಾಯಿಸಿದೆ.ಧನ್ಯವಾದಗಳು ತಮ್ಮ ಮೆಚ್ಚುಗೆಗೆ ಹಾಗೂ ಪ್ರತಿಕ್ರಿಯೆಗೆ. ಆಗಾಗ ಬರುತ್ತಿರಿ, ಸಲಹೆ ನೀಡುತ್ತಿರಿ, ಕಾಮೆ೦ಟಿಸುತ್ತಿರಿ!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.