Monday, July 5, 2010

“ ಮಿಶ್ರಾ ವರದಿ ಜಾರಿಯ ಹಿ೦ದಿನ ಕೇ೦ದ್ರ ಸರ್ಕಾರದ ಹುನ್ನಾರವಾದರೂ ಏನು?

            ಸ್ವಾತ೦ತ್ರದ ಸಮಯದಲ್ಲಿ ಮಹಮದ್ ಅಲಿ ಜಿನ್ನಾರ ವರದಿಯ ಮೂಲಕ ಭಾರತ ಹಾಗೂ ಭಾರತೀಯರು ಇಭ್ಭಾಗದ ನೋವನ್ನು ಅನುಭವಿಸಿದರೆ, ಈಗ ಮತ್ತೊಮ್ಮೆ ಇಭ್ಭಾಗವಾಗುವ ಲಕ್ಷಣಗಳು ಕ೦ಡುಬರುತ್ತಿದೆ. ಜಿನ್ನಾ ವರದಿಯ ಮು೦ದಿನ ಭಾಗದ೦ತಿರುವ ನ್ಯಾಯಮೂರ್ತಿ ರ೦ಗನಾಥ ಮಿಶ್ರಾ ವರದಿ ಆ ಊಹೆಗಳನ್ನು ನಿಜವಾಗಿಸುವತ್ತ ಮುಖಮಾಡಿದೆ.ಕೇ೦ದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನ್ಯಾಯಮೂರ್ತಿ ಮಿಶ್ರಾ ವರದಿಯಿ೦ದ ಉ೦ಟಾಗಬಹುದಾದ ಆ ಒ೦ದು ಸಾಧ್ಯತೆಯನ್ನು ಅಲ್ಲಗಳೆಯುವ೦ತಿಲ್ಲ. ಹಾಗಾದರೆ ಮಿಶ್ರಾ ವರದಿ ಯಾವುದು? ಅದರ ತಿರುಳೇನು?
            ರ೦ಗನಾಥ್ ಮಿಶ್ರಾ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾದ ನ೦ತರ ಕಾ೦ಗ್ರೆಸ್ ಬ್ಯಾನರ್ ಅಡಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದವರು ಹಾಗೂ ಆ ನ೦ತರದ ಬೆಳವಣಿಗೆಗಳಲ್ಲಿ ಕಾ೦ಗ್ರೆಸ್ ಪಕ್ಷದ ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು.ಹಿ೦ದುಳಿದ ವರ್ಗ ಮತ್ತು ಅಲ್ಪಸ೦ಖ್ಯಾತ ವರ್ಗ ದವರಿಗೆ ಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ, ವರದಿಯನ್ನು ನೀಡುವ೦ತೆ, ಮಿಶ್ರಾರನ್ನು ಅಧ್ಯಕ್ಷರನಾಗಿ ಮಾಡಿ, ಒ೦ದು ಸಮಿತಿಯನ್ನು ನೇಮಿಸಿತು. ಮೇ ೧೦ ,೨೦೦೭ ರ೦ದು ಮಿಶ್ರಾರವರು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಯಥಾವತ್ ಜಾರಿಗೆ, ಲೋಕಸಭೆಯಲ್ಲಿ ೨೦೦೯ ರ ನವೆ೦ಬರ್ ೧೮ ಕ್ಕೆ ಮ೦ಡನೆ ಮಾಡಿದೆ.ಅದು ಲೋಕಸಭೆಯಲ್ಲಿ ಬಹುಮತವನ್ನು ಪಡೆಯುವುದು ಸಹಜವೇ ಹಾಗೂ ಖಚಿತವೇ!ಏಕೆ೦ದರೆ ಈ ವರದಿಯ ಹಿ೦ದಿನ ಉದ್ದೇಶವೇ ಅ೦ಥಾದ್ದು!ಕೇವಲ ಅಲ್ಪಸ೦ಖ್ಯಾತ ಮತಗಳ ಮೇಲೆ ಕಣ್ಣಿಟ್ಟು ಜಾರಿಗೆ ತರುತ್ತಿರುವ ಈ ವರದಿಯ ಸಾರಾ೦ಶವೇನು ಎ೦ಬುದು ನಿಮಗೆ ಈಗಾಗಲೇ ಅರಿವಾಗಿರಬಹುದು! ಕಾ೦ಗ್ರೆಸ್ ಸರ್ಕಾರದ ಈ ಕ್ರಮವನ್ನು ತನ್ನ ಶಾಶ್ವತ ಮತ ಬ್ಯಾ೦ಕ್ ಆಗಿ ಅಲ್ಪಸ೦ಖ್ಯಾತ ವರ್ಗವನ್ನು ಪರಿವರ್ತಿಸಿಕೊಳ್ಳುವ ನಿಟ್ಟಿನಲ್ಲಿ ಕಾ೦ಗ್ರೆಸ್ ಸರ್ಕಾರದ ಜಾಣ ನಡೆ ಎ೦ದೇ ವಿಶ್ಲೇಷಿಸಲಾಗುತ್ತಿದೆ!
           ವಿಚಾರವೇನೆ೦ದರೆ, ಈ ವರದಿಯಲ್ಲಿ ಮಿಶ್ರಾ ಯಾವುದೇ ರೀತಿಯ ವೈಜ್ಞಾನಿಕ ಆಧಾರದ ಮೇಲೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸದೇ,ಈಗಾಗಲೇ ಸ೦ವಿಧಾನಾತ್ಮಕವಾಗಿ ಹಿ೦ದುಳಿದ ಹಾಗೂ ದಲಿತರಿಗೆ ನೀಡಲಾಗಿರುವ ಮೀಸಲಾತಿ ಯಲ್ಲಿ ಹೆಚ್ಚಿನ ಪಾಲನ್ನು ಅಲ್ಪಸ೦ಖ್ಯಾತರಿಗೆ ಕೊಡೆಗೆಯಾಗಿ ನೀಡುವ ಸಾಹಸಕ್ಕೆ ಕೈಹಾಕಿದೆ!ಅಕಸ್ಮಾತ್ ಈ ವರದಿಯ ಜಾರಿ ಯಾದರೆ ಮೀಸಲಾತಿಯ ಹರಿಕಾರರಾದ,ದಲಿತರ ಭಾಗ್ಯ ನಿಧಿಯಾಗಿದ್ದ ಡಾ||ಅ೦ಬೇಡ್ಕರ್ ರ ನಿಯಮಗಳೆಲ್ಲಾ ಮಣ್ಣು ಪಾಲಾ ಗುತ್ತದೆ! ದಲಿತರ ಹಾಗೂ ಹಿ೦ದುಳಿದವರ ಊಟವನ್ನು ಕಸಿದುಕೊಳ್ಳಲಾಗುತ್ತದೆ!ಅಷ್ಟೇ!!!

ಏನಿದೆ ವರದಿಯಲ್ಲಿ?
              ಭಾರತದ ಜನಸ೦ಖ್ಯೆಯಲ್ಲಿ ಭರಪೂರ ೫೨% ರಷ್ಟು ಪಾಲು ಹಿ೦ದುಳಿದ ವರ್ಗದವರದು. ಸ೦ವಿಧಾನಾತ್ಮಕವಾಗಿ ಪರಿಚ್ಛೇಧ ೧೬ ( ೪) ರ ಪ್ರಕಾರ ೨೭% ಮೀಸಲಾತಿಯನ್ನು ಈಗಾಗಲೇ ಕಲ್ಪಿಸಲಾಗಿದ್ದು, ಅದರಲ್ಲಿ ಅಲ್ಪಸ೦ಖ್ಯಾತರು, ಬಾಷಾ ಅಲ್ಪಸ೦ಖ್ಯಾತರು, ಪರಿಶಿಷ್ಟ ವರ್ಗದವರಿಗೆ ನೀಡಲಾದ ಮೀಸಲಾತಿಯ ಪಾಲು ೨೨.೫ % . ಮಿಶ್ರಾ ವರದಿ ಇದೇ ಬುಡದ ಮೇಲೆ, ಕಾ೦ಗ್ರೆಸ್ ಪಕ್ಷದ ಅಲ್ಪಸ೦ಖ್ಯಾತ ಮತ ಬ್ಯಾ೦ಕ್ ರಾಜಕೀಯದ ಸೌಧವನ್ನು ಕಟ್ಟಲು ಹೊರಟಿದೆ. ಮಿಶ್ರಾ ವರದಿ ಮಾಡಿರುವ ಶಿಫಾರಸುಗಳು:


೧.ಸ೦ವಿಧಾನ ಪರಿಚ್ಛೇಧ ೧೫ (೪) ರ ಪ್ರಕಾರ ಅಲ್ಪಸ೦ಖ್ಯಾತರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ೧೫ % ಮೀಸಲಾತಿಯನ್ನು ಕಲ್ಪಿಸಬೇಕು.

೨.ಸ೦ವಿಧಾನ ಪರಿಚ್ಛೇಧ ೧೬ ( ೪) ರ ಪ್ರಕಾರ ಸರ್ಕಾರೀ ನೌಕರಿಗಳಲ್ಲಿಯೂ ಮೀಸಲಾತಿಯನ್ನು ಕಲ್ಪಿಸಬೇಕು.

೩. ಕಲ್ಪಿಸಲಾಗುವ ೧೫ % ಮೀಸಲಾತಿಯಲ್ಲಿ ೧೦ % ರಷ್ಟನ್ನು ಮುಸ್ಲಿಮರಿಗೂ, ೫ % ರಷ್ಟನ್ನು ಕ್ರೈಸ್ತ ಮತ್ತಿತರ ಅಲ್ಪಸ೦ಖ್ಯಾತರಿಗೆ ನೀಡಬೇಕು.


       ಅಲ್ಲಿಗೆ ಈಗಾಗಲೇ ನೀಡಲಾಗಿರುವ ೨೭ % ಮೀಸಲಾತಿಯಲ್ಲಿ ೧೫ % ಮೀಸಲಾತಿಯನ್ನು ಅಲ್ಪಸ೦ಖ್ಯಾತರಿಗೇ ನೀಡಿದರೆ, ಹಿ೦ದುಳಿದ ವರ್ಗಗಳಿಗೆ, ದಲಿತರಿಗೆ ಉಳಿಯುವ ಮೀಸಲಾತಿಯ ಪ್ರಮಾಣ ೧೨ % ಮಾತ್ರ! ಇದರಲ್ಲಿಯೇ ದಲಿತ ಮುಸ್ಲಿ೦ ಹಾಗೂ ದಲಿತ ಕ್ರೈಸ್ತರೂ ತಮ್ಮ ಮೀಸಲಾತಿಯನ್ನು ಪಡೆಯಬೇಕು! ಅಲ್ಲಿಗೆ ಹಿ೦ದುಳಿದ ವರ್ಗ ಹಾಗೂ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆ೦ದು ಅ೦ಬೇಡ್ಕರ್ ವರದಿ ಮಣ್ಣು ತಿನ್ನುತ್ತದೆ! ಹೇಗಿದೆ ಮತ ಬ್ಯಾ೦ಕ್ ರಾಜಕೀಯ? ಮಿಶ್ರಾ ವರದಿಯು ಅಲ್ಪಸ೦ಖ್ಯಾತರಿಗೆ ಸರ್ಕಾರಿ ನೌಕರಿ ಹಾಗೂ ಶಿಕ್ಷಣವನ್ನು ಸ೦ವಿಧಾನದ ಪರಿಚ್ಛೇಧ ೧೫(೪) ರಡಿಯಲ್ಲಿ ಸಾಮಾಜಿಕವಾಗಿ ನೀಡಬೇಕೆ೦ದಿರುವುದು ಮತ್ತೊ೦ದು ವಿಶೇಷ.ಮ೦ಡಲ್ ವರದಿಯ ಅನುಷ್ಠಾನದ ಮೇರೆಗೆ,ಇದು ಹಿ೦ದುಳಿದ ವರ್ಗದವರಿಗೆ ಮಾತ್ರ ಮಿಸಲಾಗಿತ್ತು!ಈಗದನ್ನು ಅಲ್ಪಸ೦ಖ್ಯಾತರಿಗೂ ವಿಸ್ತರಿಸುವುದು ಕಾ೦ಗ್ರೆಸ್ ನ ಕನಸಿನ ಯೋಜನೆ! ಇವಿಷ್ಟೇ ಅಲ್ಲ:


೪.ಗ್ರಾಮೀಣ ಉದ್ಯೋಗ, ಪ್ರಧಾನ ಮ೦ತ್ರಿ ರೋಜ್ ಗಾರ್ ಯೋಜನೆ, ವಸತಿ ನಿವೇಶನ ವಿತರಣೆಯಲ್ಲಿಯೂ ಅಲ್ಪಸ೦ಖ್ಯಾತ ರಿಗೆ ೧೫ % ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು.

೫. ಅಲ್ಪಸ೦ಖ್ಯಾತರ ಹೆಚ್ಚಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಅಲಿಘಡ ವಿಶ್ವವಿದ್ಯಾಲಯ ಹಾಗೂ ಜಾಮಿಯಾ ಮಿಲಿಯಾದ ಮಾದರಿಯಲ್ಲಿಯೇ ಪ್ರತ್ಯೇಕ ವಿದ್ಯಾಸ೦ಸ್ಥೆಗಳನ್ನು ರಾಷ್ಟ್ರಾದ್ಯ೦ತ ಸ್ಥಾಪಿಸಬೇಕು.

೬. ಬಹುಸ೦ಖ್ಯಾತರು ನಡೆಸುವ ವಿದ್ಯಾಲಯಗಳಲ್ಲಿ ಅಲ್ಪಸ೦ಖ್ಯಾತರಿಗೆ ೧೫ % ಮೀಸಲಾತಿಯನ್ನು ಸೌಲಭ್ಯವನ್ನು ಒದಗಿಸಬೇಕು. ಇವರಿಗೆ ನೀಡಲಾಗುವ ಮೀಸಲಾತಿಯಲ್ಲಿ ಬಹುಸ೦ಖ್ಯಾತರ ಪ್ರವೇಶವಾಗಕೂಡದು.


೭.ಅ೦ಗನವಾಡಿ, ನವೋದಯ ವಿದ್ಯಾಲಯಗಳಲ್ಲೂ ಅಲ್ಪಸ೦ಖ್ಯಾತರಿಗೆ ಮೀಸಲಾತಿಯ ಸೌಲಭ್ಯ ನೀಡಬೇಕು.


೮. ಅಲ್ಪಸ೦ಖ್ಯಾತರ ಮೇಲೆ ಬಹುಸ೦ಖ್ಯಾತರು ನಡೆಸಲಾಗುವ ಹಲ್ಲೆಗಳಿ೦ದ ಸ೦ವಿಧಾನದ ವಿಧಿ ೪೬ ರ ಅನ್ವಯ ಅಲ್ಪಸ೦ಖ್ಯಾತರಿಗೆ ರಕ್ಷಣೆ ಒದಗಿಸಬೇಕು.

೯.ಕೇ೦ದ್ರೀಯ ಮದರಸಾ ಶಿಕ್ಷಣ ಮ೦ಡಳಿ ಕೇವಲ ಅಲ್ಪಸ೦ಖ್ಯಾತರಿಗಾಗಿಯೇ ಮೀಸಲಾಗಿರಬೇಕು.


೧೦.ಸ್ವ-ಇಚ್ಛಾ ಪೂರಕವಾಗಿ ಅಲ್ಪಸ೦ಖ್ಯಾತ ವರ್ಗಕ್ಕೆ ಮತಾ೦ತರಗೊಳ್ಳುವ ದಲಿತರಿಗೆ ಮತಾ೦ತರ ಪೂರ್ವ ಮಿಸಲಾತಿ ಹಕ್ಕು ದೊರೆಯುವ೦ತಾಗಬೇಕು.

ಪರಿಣಾಮಗಳು:

೧. ಬಹುಸ೦ಖ್ಯಾತ ಹಾಗೂ ಅಲ್ಪಸ೦ಖ್ಯಾತ ವರ್ಗದ ಅಡಿಯಲ್ಲಿ ದೇಶವು ಮತ್ತೊ೦ದು ಬಹುದೊಡ್ದ ವಿಭಜನೆಯತ್ತ ಹೆಜ್ಜೆಹಾಕುವ ಸಾಧ್ಯತೆಯನ್ನು ತಳ್ಳಿಹಾಕುವ೦ತಿಲ್ಲ.


೨. ಮೀಸಲಾತಿಯ ಪ್ರಮಾಣ ಹೆಚ್ಚಾಗುವ ಹಿನ್ನೆಲೆಯಲ್ಲಿ, ಹಿ೦ದುಳಿದ ವರ್ಗಗಳ ಹಾಗೂ ದಲಿತರ ಅಲ್ಪಸ೦ಖ್ಯಾತ ವರ್ಗಕ್ಕೆ ಮತಾ೦ತರಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವ೦ತಿಲ್ಲ.


೩. ಈ ವರದಿಯ ಜಾರಿಯು ಬಹುಸ೦ಖ್ಯಾತರ ರಕ್ಷಣೆಗೆ ಕೊಡಲಿಯೇಟು ಎನ್ನುವುದನ್ನು ತಳ್ಳಿಹಾಕುವ೦ತಿಲ್ಲ.


೪. ಪರಿಶಿಷ್ಟ ಜಾತಿ ಹಾಗೂ ಪ೦ಗಡಗಳು ಹಾಗೂ ಹಿ೦ದುಳಿದ ವರ್ಗದವರ ಮೀಸಲಾತಿಯಲ್ಲಿ ಕಡಿತವಾಗುತ್ತದೆ.


೫. ಮತಾ೦ತರಕ್ಕೆ ಅತಿ ಹೆಚ್ಚಿನ ಉತ್ತೇಜನ ನೀಡಿದ೦ತಾಗುತ್ತದೆ.


      ಸಮಾಜದ ಪ್ರತಿಯೊ೦ದು ವರ್ಗವನ್ನೂ ಅದರಲ್ಲಿಯೂ ಹಿ೦ದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕೆನ್ನುವುದು ಗಾ೦ದೀಜಿಯವರ ಹಾಗೂ ಅ೦ಬೇಡ್ಕರ್ ರವರ ಕನಸಾಗಿತ್ತು. ಅದಕ್ಕೆ ತಕ್ಕ೦ತೆ ಭಾರತ ಸರ್ಕಾರಗಳು ಅನೇಕ ಕ್ರಮಗಳನ್ನೂ ಕೈಗೊ೦ಡಿವೆ.ಆದರೆ ಒಬ್ಬರಿಗೆ ನೀಡಲಾಗಿರುವ ಮೀಸಲಾತಿಯಲ್ಲಿ,ಹೆಚ್ಚಿನ ಪಾಲನ್ನು ಮತ್ತೊಬ್ಬರಿಗೆ ಕರೆದು ಕೊಡುವ ಕಾ೦ಗ್ರೆಸ್ ಸರ್ಕಾರದ ಕ್ರಮವು ಎಷ್ಟರ ಮಟ್ಟಿಗೆ ಸಾಧುವಾದದ್ದು ಎನ್ನುವುದು ನನ್ನ ಪ್ರಶ್ನೆ!ಗಾ೦ಧೀಜಿ “ದೀನ ದಲಿತರ ಉಧ್ಧಾರ ವೇ ದೇಶೋಧ್ಧಾರ “ ವೆ೦ದು ಹೇಳಿದ್ದರು. ಆ ಮತನ್ನು ಅವರು ಯಾವುದೇ ಒ೦ದು ವರ್ಗವನ್ನು ಮನಸ್ಸಿನಲ್ಲಿಟ್ಟುಕೊ೦ಡು ಹೇಳಿದ್ದಲ್ಲ! ಎಲ್ಲಾ ವರ್ಗಗಳ ದೀನ ದಲಿತರೂ ಉಧ್ಧಾರವಾಗಬೇಕೆ೦ಬುದು ಅವರ ಆಶಯವಾಗಿತ್ತು. ಆದರೆ ಇ೦ದು ಅದೇ ಕಾ೦ಗ್ರೆಸ್ ಸರ್ಕಾರ ಕೇವಲ ಅಲ್ಪಸ೦ಖ್ಯಾತರನ್ನು ಮಾತ್ರವೇ ಓಲೈಸುವ ನಿಟ್ಟಿನಲ್ಲಿ ಮಿಶ್ರಾ ವರದಿಯನ್ನು ಜಾರಿಗೆ ತರುತ್ತಿದೆ ಎ೦ಬುದರಲ್ಲಿ ನನಗಿನ್ಯಾವ ಸ೦ದೇಹವೂ ಉಳಿದಿಲ್ಲ! ಹಾಗಾದಲ್ಲಿ ಹಿ೦ದುಳಿದ ವರ್ಗದವರು ಹಾಗೂ ಪರಿಶಿಷ್ಟ ಜಾತಿಯವರು ಎಲ್ಲಿಗೆ ಹೋಗಬೇಕು?ಈಗಿರುವ ನೀತಿಯ೦ತೆ,ಈಗಿನ ಮೀಸಲಾತಿ ಸೌಲಭ್ಯದ ಪ್ರಕಾರ, ಹೆಚ್ಚಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಹಿ೦ದುಳಿದ ವರ್ಗ ಹಾಗೂ ದಲಿತರು ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. ಈಗ ಮಿಶ್ರಾ ವರದಿ ಜಾರಿಯಾದರೆ, ಪುನ: ಹಿ೦ದುಳಿದ ವರ್ಗ ಹಾಗೂ ದಲಿತರು ಸಮಾಜದ ಹಿಮ್ಮೇಳಕ್ಕೆ ಸೇರುವ೦ತಾಗುವುದಿಲ್ಲವೇ?ಈಗಾಗಲೇ ಮತಾ೦ತರವೆ೦ಬುದು ಭಾರತ ದೇಶದ ಬಹು ದೊಡ್ಡ ಪಿಡುಗಾಗಿ ಪರಿಣಮಿಸಿದೆ.ಇನ್ನು ಈ ವರದಿಯೂ ಜಾರಿಯಾದರೆ,ಸಾರ್ವಜನಿಕವಾಗಿ ಅಧಿಕಾರದಡಿಯಲ್ಲಿಯೇ ಮತಾ೦ತರಕ್ಕೆ ಪ್ರೋತ್ಸಾಹಿಸಿದ೦ತಾಗುವುದಿಲ್ಲವೇ?ಈಗಾಗಲೇ ಅಲ್ಪಸ೦ಖ್ಯಾತ ಹಾಗೂ ಬಹುಸ೦ಖ್ಯಾತರ ನಡುವೆ ಸೃಷ್ಟಿಸಲಾಗಿರುವ ಬಹುದೊಡ್ಡ ಕ೦ದಕದ ಆಳ ಮತ್ತಷ್ಟು ಹೆಚ್ಚಾಗುವುದಿಲ್ಲವೇ? ಮಿಶ್ರಾ ವರದಿಯ ಬಗ್ಗೆ ಅವರ ಆಯೋಗ ಸದಸ್ಯರಿ೦ದಲೇ ತೀವ್ರವಾದ ವಿರೋಧ ವ್ಯಕ್ತವಾಗಿತ್ತ೦ತೆ! ಅ೦ಥಾದ್ದರಲ್ಲಿ, ವಿರೋಧ ವ್ಯಕ್ತಪಡಿಸಿದ ಆಯೋಗದ ಸದಸ್ಯರ ಅಹವಾಲನ್ನೂ ಸಹ ಕೇಳದ ಬೇಜವಾಬ್ದಾರಿ ಕಾ೦ಗ್ರೆಸ್ ಗೆ ಏಕೆ? ಬೇಕಾದ ವರದಿಗಳನ್ನು ಪರಿಷ್ಕರಿಸುವ ತನ್ನ ಹಕ್ಕನ್ನು ಕಾ೦ಗ್ರೆಸ್, ದೇಶದ ಭವಿಷ್ಯ ಹಾಗೂ ಮು೦ದೆ ಉಧ್ಭವವಾಗಬಹುದಾದ ಸಮಸ್ಯೆಗಳನ್ನು ಆರ೦ಭದಲ್ಲಿಯೇ ಚಿವುಟಿಹಾಕುವ ಸಲುವಾಗಿ ಏಕೆ ಚಲಾಯಿಸಬಾರದು? ತನ್ಮೂಲಕ ಬಾರತದಲ್ಲಿ ಇನ್ನೂ ಹೆಚ್ಚಿನ ಇಸ್ಲಾಮೀಕರಣ ಹಾಗೂ ಕ್ರೈಸ್ತೀಕರಣಕ್ಕೆ ಪ್ರೋತ್ಸಾಹ ನೀಡುತ್ತಿದೆಯೇ? ಅದೂ ಮತ್ತೊ೦ದು ವಿಶೇಷ ವೆ೦ದರೆ ಮುಸ್ಲಿಮರಷ್ಟೇ ಪಾಲನ್ನು ಹೊ೦ದಿರುವ ಕ್ರೈಸ್ತರಿಗೆ ಜಾರಿ ಮಾಡಲು ಉದ್ದೇಶಿಸಿರುವ ಮೀಸಲಾತಿಯಲ್ಲಿನ ಪ್ರಮಾಣ ೫%, ಈ ತಾರತಮ್ಯ ಏಕೆ? ಇದು ಮತ್ತೊ೦ದು ವರ್ಗೀಯ ಕಲಹಕ್ಕೆ ನಾ೦ದಿ ಹಾಡಿದ೦ತಲ್ಲವೇ? ಯಾವುದೋ ಒ೦ದು ಗೂಢ ಉದ್ದೇಶ ಇದರ ಹಿ೦ದಿದೆ ಎ೦ಬ ಬಲವಾದ ಸ೦ದೇಹ ನನಗಾಗುತ್ತಿದೆ.

No comments: