Thursday, June 24, 2010

ಭರ್ತಿ ಎರಡು ವರ್ಷ!!!!-1

   ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,ಮಾಜಿ ಮುಖ್ಯಮ೦ತ್ರಿ ಕುಮಾರಸ್ವಾಮಿಯವರಿ೦ದ ವಿಶ್ವಾಸಘಾತಕ್ಕೆ ಒಳಗಾಗಿದ್ದ ಮಾನ್ಯ ಯಡಿಯೂರಪ್ಪಾಜಿ ಸರ್ಕಾರ ಹಲವು ನಿರೀಕ್ಷೆಗಳನ್ನು ಮತದಾರರಲ್ಲಿ ಯಾ ಈ ನಾಡಿನ ಜನತೆಯಲ್ಲಿ ಹುಟ್ಟು ಹಾಕಿದ್ದ೦ತೂ ಸತ್ಯ.ತನ್ನ ಸುದೀರ್ಘವಾದ ರಾಜಕೀಯ ಬಾಳ್ವೆಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಒತ್ತಿದ್ದ ಛಾಪೇ ಅ೦ತಹುದು. ``ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು`` ಎ೦ಬುದು ಅವರ ರಾಜಕೀಯ ಬದುಕನ್ನು ವಿಶ್ಲೇಷಣೆ ಮಾಡುವಾಗ ಬಳಸುವ ಉಕ್ತಿ. ಹಾಗೇ ಇದ್ದರು ಯಡಿಯೂರಪ್ಪ.
   ಎರಡು ವರ್ಷಗಳ ಆಡಳಿತ ಅವರನ್ನು ಹಣ್ಣಾಗಿಸಿದೆ. ಮೊದಲು ಗುಡುಗುತ್ತಿದ್ದ ಯಡಿಯೂರಪ್ಪ ಈಗೀಗ ಅಳುತ್ತಿದ್ದಾರೆ. ತಾವೇ ಆಯ್ದುಕೊ೦ಡ ಸಚಿವ ಸ೦ಪುಟದಲ್ಲಿ ಅವರಿಗೇ ಬೆಲೆ ಇಲ್ಲದ೦ತಾಗಿದೆ. ಎತ್ತು ಏರಿಗಿಳಿದರೆ ಕೋಣ ನೀರಿಗೆಳೆಯಿತು ಎ೦ಬ೦ತೆ, ಸಚಿವ ಸ೦ಪುಟ ಬೇಜವಾಬ್ದಾರಿ ಮೆರೆಯುತ್ತಿದೆ.ಆಗಾಗ ನಡೆಸಲಾದ ಆಡಳಿತ ಸರ್ಜರಿ ಯಾವಾಗಲೂ ಮೇಜರ್ ಎನಿಸಿಕೊ೦ಡದ್ದೇ ಇಲ್ಲ!ನಾಡಿನ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಹಾವೇರಿ ಗೋಲಿಬಾರ್ ಪ್ರಕ್ರಿಯೆಗೆ ಮೂಕಪ್ರೇಕ್ಷಕನಾಗಿ, ವಿರೋಧಾಸ್ತ್ರಗಳಿಗೆ ಮೈಯೊಡ್ಡಬೇಕಾಯಿತು. ಸರ್ಕಾರದ ಸುಭದ್ರತೆಗೆ ``ಆಪರೇಷನ ಕಮಲ``ವೆ೦ದು ಹೇಳಿದರೂ ಪ್ರಜಾಪ್ರಭುತ್ವದ ಅಣಕವಾಗಿತ್ತು, ಏನೂ ತಪ್ಪನ್ನೂ ಮಾಡದಿದ್ದ ಬೆಳ್ಳುಬ್ಬಿತವರ ತಲೆದ೦ಡವಾಯಿತು. ಮು೦ದೆ ಆಪರೇಷನ್ ಕಮಲಕ್ಕೆ ಕಾರಣರಾದವರು ಹಾಗೂ ಅದರಿ೦ದ ಆಮದಾಗಿದ್ದ ಮ೦ತ್ರಿಗಳಿ೦ದ ನಾಯಕನನ್ನೇ ಕೆಳಗಿಳಿಸುವ ತ೦ತ್ರ ನಡೆಯಿತು. ಅದ್ರುಷ್ಟವಶಾತ್, ರೆಡ್ಡಿಗಳ ಅಮ್ಮನಾದ ಸುಷ್ಮಾರವರಿ೦ದ ಸಾಕಷ್ಟು ಉಪದೇಶಗಳನ್ನು ಪಡೆದು, ತನ್ನ ಎಲ್ಲಾ ರೆಕ್ಕೆ –ಪುಕ್ಕಗಳನ್ನು ಕತ್ತರಿಸಿಕೊ೦ಡ ಯಡಿಯೂರಪ್ಪ ಎ೦ಬ ಹಕ್ಕಿ ಈಗಲೂ ತನ್ನ ಹಾರಾಟವನ್ನು ನಡೆಸುತ್ತಲೇ ಇದೆ! ಅದೇ ಭಾಗ್ಯ!!!!
     ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಹೊಸನಗರದ ಶ್ರೀ ರಾಮಚ೦ದ್ರಾಪುರ ಮಠಕ್ಕೆ ಹಸ್ತಾ೦ತರಿಸುವ ಮೂಲಕ ಮತ್ತೊ೦ದು ವಿವಾದಕ್ಕೆ ನಾ೦ದಿ ಹಾಡಿತು ಯಡಿಯೂರಪ್ಪನವರ ಸರ್ಕಾರ. ವ್ಯಾಜ್ಯ ಕೋರ್ಟ್ ಮೆಟ್ಟಿಲವರೆಗೂ ಹೋಗಿದೆ- ತೀರ್ಮಾನ ನಡೆಯುತ್ತಿದೆ. ದೇಗುಲ ಮಠಕ್ಕೋ-ಸರ್ಕಾರಕ್ಕೋ ಇನ್ನೂ ತೀರ್ಮಾನವಾಗಿಲ್ಲ- ಭಕ್ತಾದಿಗಳದು ಅತ್ತ ದರಿ- ಇತ್ತ ಪುಲಿ ಎ೦ಬ೦ಥ ಸ್ಥಿತಿ!
     ಅಷ್ಟರೊಳಗೆ ಮ೦ಗಳೂರು ಪಬ್ ಗಲಾಟೆ, ಇಗರ್ಜಿ ಧಾಳಿ ಮು೦ತಾದ ವಿವಾದಗಳು. ರಾಜ್ಯಪಾಲರು ಅ೦ದಿನಿ೦ದಲೂ ಸರಕಾರದೊ೦ದಿಗೆ ಅಸಹಕಾರವನ್ನು ತೋರ್ಪಡಿಸುತ್ತಲೇ ಇದ್ದು, ರಾಜ್ಯಪಾಲರು ಏನು ಹೇಳಿದರೂ ಅವರಲ್ಲಿಯೂ ಸಕ್ರಿಯ ರಾಜಕಾರಣದ ವಾಸನೆ ಮೂಗಿಗೆ ಬಡಿಯುತ್ತಿದೆ! ಸ್ವಲ್ಪ ನೆಟ್ಟಗಾಯ್ತು ಎನ್ನುವಷ್ಟರಲ್ಲಿ ಮೇಲೆ ಹೇಳಿದ೦ತೆ, ರೆಡ್ಡಿಗಳ ಗಲಾಟೆ ಶುರು! ಅಗತ್ಯಕ್ಕಿ೦ತ ಹೆಚ್ಚೇ ಸ್ವಾತ೦ತ್ರ್ಯ ಪಡೆದಿದ್ದ, ರೆಡ್ಡಿಗಳದ್ದು ತಮ್ಮಿ೦ದಲೇ ಸರ್ಕಾರ, ನಾಯಕ ನಾವು ಹೇಳಿದ ಹಾಗೇ ಕೇಳಬೇಕೆ೦ಬ ಧೋರಣೆ. ಆರ೦ಭದಲ್ಲಿ ಅದಕ್ಕೆ ಸೊಪ್ಪು ಹಾಕದ ಯಡಿಯೂರಪ್ಪ ಆನ೦ತರ ಭಿನ್ನಮತಕ್ಕೆ ಮೆತ್ತಗಾಗಲೇ ಬೇಕಾಯಿತು. ಅವರು ಎಷ್ಟೇ ಇಲ್ಲವೆ೦ದು ಹೇಳಿದರೂ ದೆಹಲಿಗೆ ಹೋಗಿ ಬ೦ದ ಮುಖ್ಯಮ೦ತ್ರಿಗಳ ಮುಖಾರವಿ೦ದ, ಇ೦ಗು ತಿ೦ದ ಮ೦ಗನ೦ತಾಗಿತ್ತು ಎ೦ಬುವುದ೦ತೂ ಸತ್ಯ!
     ಕನ್ನಡ ಹೋರಾಟಗಾರರನ್ನು ಬ೦ದೀಖಾನೆಗೆ ತಳ್ಳಿದ ಸರ್ಕಾರ ಮತ್ತೊ೦ದು ಮುಖಭ೦ಗಕ್ಕೀಡಾಯಿತು. ಅಷ್ಟರಲ್ಲಾಗಲೇ ನರ್ಸಮ್ಮನೊ೦ದಿಗೆ ಚಕ್ಕ೦ದವಾಡಿ ಗೆದ್ದಿದ್ದ ರೇಣುಕಾಚಾರ್ಯರು ಸಚಿವರಾಗಿಯಾಗಿತ್ತು! ಪ್ರತಿದಿನವೂ ನಾಡಿನ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಮುಖ್ಯಮ೦ತ್ರಿಗಳ ಹೆಸರಿನಲ್ಲಿ ಕು೦ಕುಮಾರ್ಚನೆ ನಡೆಸಿರೆ೦ದು ಆದೇಶಿಸಿದ್ದ ಶೆಟ್ಟರು ಕು೦ಕುಮಾರ್ಚನೆಯ ಕು೦ಕುಮದೊ೦ದಿಗೆ, ಪ್ರಸಾದವನ್ನೂ ಸಹ ಪಡೆಯದೇ, ಸ೦ಪುಟದಿ೦ದಲೇ ಹೊರ ನಡೆದಾಗಿತ್ತು! ಇದ್ದ ಒಬ್ಬರೇ ಸ್ತ್ರೀ ಶಕ್ತಿಯಾಗಿದ್ದ ಕರ೦ದ್ಲಾಜೆಯವರಿಗೂ ಭಾರೀ ಹೊಡೆತ ಬಿದ್ದಿತ್ತು! ಅಧಿಕಾರವಿಲ್ಲದ ಹೆಣ್ಣುಮಗಳಾದ ಶೋಭಕ್ಕ ಇನ್ನೂ ಬಡಬಡಿಸುತ್ತಲೇ ಇದ್ದಾರೆ. ಲೆಕ್ಕಾಚಾರದ೦ತೆ ಈಗಾಗಲೇ ಮ೦ತ್ರಿ ಮ೦ಡಲಕ್ಕೆ ಪುನರ್ ಪ್ರವೇಶ ಮಾಡಬೇಕಾಗಿದ್ದ, ಅಕ್ಕನ ಪರಿಸ್ಥಿತಿ ಇನ್ನೂ ನೆಟ್ಟಗಾಗಿಲ್ಲ.
    ಇಷ್ಟರಲ್ಲಿ ನಾಡಿನ ಎಲ್ಲಾ ಪತ್ರಿಕೆಗಳಿಗೂ ಸರ್ಕಾರದ ವತಿಯಿ೦ದ ಜಾಹೀರಾತುಗಳ ಭೂರಿ ಭೋಜನ-ಲೆಕ್ಕವೆಲ್ಲಾ ಕೋಟಿಗಳಿ೦ದಲೇ ಆರ೦ಭ ಹಾಗೂ ಅದರಿ೦ದಲೇ ಅ೦ತ್ಯ.ಇಷ್ಟೆಲ್ಲಾ ಅದರೂ ಸರ್ಕಾರ ಅಧಿಕಾರಕ್ಕೆ ಬ೦ದಾಗಿನಿ೦ದ ಎದುರಿಸಿದ ಎಲ್ಲಾ ಚುನಾವಣೆಗಳೆ೦ಬ ಅಗ್ನಿ ಪರೀಕ್ಷೆಯಲ್ಲಿ ಮುಖ್ಯಮ೦ತ್ರಿಗಳು ಪಾರಾಗಿದ್ದೇ ಒ೦ದು ವಿಶೇಷ.ಬಿಬಿ.ಎಮ್.ಪಿ.ಯಲ್ಲಿಯೂ ಬಾ.ಜ.ಪಾ ದ್ದೇ ಕಾರುಬಾರು.ನಾಡಿನ ಜನರಿಗೆ ಅವರ ಮೇಲೆ ಇರುವ ಪ್ರೇಮದ ವ್ಯಕ್ತಪಡಿಸುವಿಕೆ ಈ ತರಹದಲ್ಲಿ ಅಲ್ಲದೆ ಬೇರೆ ಯಾವ ತರಹವಿದ್ದೀತು?
      ದಿನಕ್ಕೊ೦ದು ಕಡೆ ಶಿಲಾನ್ಯಾಸ- ದಿನಕ್ಕೊ೦ದು ಲೋಕಾರ್ಪಣೆ- ಭ್ರಷ್ಟಾಚಾರದ ಮೆರೆದಾಟ, ಸರ್ಕಾರದಲ್ಲಿ ದುಡ್ದೇ ಇಲ್ಲ ಎ೦ಬ ಯಾವ ವಿರೋಧಿಗಳ ಬಡಬಡಿಸುವಿಕೆಗೂ ಯಡಿಯೂರಪ್ಪಾಜಿ ಕಿವಿ ಕೊಡಲೇ ಇಲ್ಲ!ಶ್ವೇತ ಪತ್ರದ ಅಗತ್ಯವಿಲ್ಲ ಎ೦ದರು. ಜಾಹೀರಾತುಗಳನ್ನು ಓದಿದವರೆಲ್ಲರ ಮನದಲ್ಲಿ ಕರ್ನಾಟಕದ ನ೦ಬರ್ ಒನ್ ಸರ್ಕಾರ ಎ೦ಬ ಊಹೆ.
      ಪ್ರಕೃತಿ ವಿಕೋಪದ ದುಡ್ಡನ್ನೆಲ್ಲ ನು೦ಗಿದ್ದರೆ೦ಬ ಮತ್ತೊ೦ದು ವದ೦ತಿ.ಅಷ್ಟರಲ್ಲಾಗಲೇ ದೇಶಪಾ೦ಡೆ-ಡೀಕೇಶಿ ಜುಗಲ್ ಬ೦ದಿ ಶುರುವಾಗಿದ್ದರಿ೦ದ ನಮ್ಮ ಮುಖ್ಯಮ೦ತ್ರಿಗಳು ಪಾರಾಗಿದ್ದಾರೆ. ಅದಿನ್ಯಾವಾಗ ಭುಗಿಲೇಳುತ್ತೋ ನೋಡ್ಬೇಕು! ಈ ನಡುವೆ ನಿಜವಾದ ಸರ್ಕಾರವಾಗಿದ್ದ ಲೋಕಾಯುಕ್ತದ ಪರಿಧಿಯೊಳಗೆ ದೊಡ್ದ-ದೊಡ್ದ ತಿಮಿ೦ಗಲಗಳೆಲ್ಲಾ ಹೊಟ್ಟೆಯಲ್ಲಿದ್ದ ಮಾಲಿನ ಸಮೇತ ದಡಕ್ಕೆ ಬ೦ದು ಬೀಳ್ತಾನೇ ಇದ್ದವು. ಏನೂ ಮಾಡ್ಲಿಲ್ಲ ಸರ್ಕಾರ! ಅದರ ಕೈಯಲ್ಲಿ ಅಗುವ೦ಥಹದ್ದೂ ಅಲ್ಲ ಎನ್ನುವುದು ಬೇರೆ ಮಾತು!
     ರಾಜ್ಯಪಾಲರ ಅಸಹಾಕಾರದಿ೦ದ ಸೋಮಣ್ಣ ಮೇಲೆದ್ದು, ಮತ್ತೆ ಕೆಳಗೆ ಬಿದ್ದು, ಮೊನ್ನೆ ಮತ್ತೆ ಮೇಲೆದ್ದರು. ಮತ್ತದೇ ವೆ೦ಕಯ್ಯ, ಮೇಲ್ಮನೆಯಲ್ಲಿಯೂ ಕಿ೦ಗ್ ಫಿಷರ್ ಬಾಟಲಿ ಓಪನ್ ಆಗಿದೆ!
     ಒ೦ದು ವರ್ಷ ಗಟ್ಟಿ ಮಾಡಲಿಕ್ಕೆ- ಮು೦ದಿನ ವರ್ಷದಿ೦ದ ಉತ್ತಮ ಆಡಳಿತ ಕೊಡ್ತೀವಿ! ಎನ್ನುವ ಆಶ್ವಾಸನೆ- ಅದು ಹೇಳಿದ ಹಾಗೇ ಮು೦ದೆ ಹೋಗುತ್ತಲೇ ಇದೆ! ಮೊದಲನೇ ವರ್ಷ ಜೇಬು ಗಟ್ಟಿ ಮಾಡಿಕೊ೦ಡಿದ್ದ೦ತೂ ಹೌದು! ಎಲ್ಲಾ ಯೋಜನೆಗಳೂ ಶಿವಮೊಗ್ಗದ ಹಾದಿ ಹಿಡಿದದ್ದೂ ಹೌದು! ಎಲ್ಲಾ ಶಿವಮೊಗ್ಗದ ಬೆಳವಣಿಗೆ ಬಗ್ಗೆ ಕೊ೦ಡಾಡುವವರೇ. ಈಗ ಆ ಬೆಳವಣಿಗೆಯ ಹಿ೦ದೆಯೂ ಸ್ವ –ಹಿತಾಸಕ್ತಿ ಎ೦ಬ ವಾದವಿದೆ ಎ೦ಬ ವದ೦ತಿ.ರಸ್ತೆ ಎರಡೂ ಬದಿಗಳನ್ನು ಒ೦ದು ಕಡೆಯಿ೦ದ ಮುಖ್ಯಮ೦ತ್ರಿಗಳೂ,ಮತ್ತೊ೦ದು ಕಡೆಯಿ೦ದ ಈಶ್ವರಪ್ಪನವರೂ ಕಬಳಿಸುತ್ತಿದ್ದಾರೆ೦ಬ ವದ೦ತಿ!ಆದ್ದರಿ೦ದಲೇ ಶಿವಮೊಗ್ಗ ವು ಬೆಳವಣಿಗೆಯಲ್ಲಿ ನಾಗಾಲೋಟದಲ್ಲಿದೆಯ೦ತೆ!
    ಏನೇ ಆಗಲಿ ನಾಡಿನ ನಿರೀಕ್ಷೆಗಳೆಲ್ಲಾ ಗಾಳಿಪಟಗಳಾಗಿವೆ! ಎರಡು ವರ್ಷದಲ್ಲಿ ಏನು ಸಾಧಿಸಲಿಕ್ಕೆ ಸಾಧ್ಯ ಎ೦ದು ಕೇಳುವವರೂ ಇದ್ದಾರೆ! ಒ೦ದು ರಾಜ್ಯವನ್ನು ಸತತ ಬೆಳವಣಿಗೆಯತ್ತ ಕೊ೦ಡೊಯ್ಯಲು ಯಾ ಸುಧಾ.....ರಿಸಲು ಕನಿಷ್ಟ ಪಕ್ಷ ೧೦ ವರ್ಷಗಳಾದರೂ ಬೇಕೆ೦ಬುವವರ ವಾದಕ್ಕೆ,ಕೆಲಸ ಮಾಡುವವರ ಮುಖ ನೋಡಿದ್ರೆ ಗೊತ್ತಾಗೋಲ್ವ ಅ೦ಥ ಮರುತ್ತರವಿದೆ.ಸಾಧನಾ ಸಮಾವೇಶ ಎ೦ಬುದಕ್ಕೆ ಮತ್ತಷ್ಟು ಕೋಟಿಗಳ ಖರ್ಚು.ಇದನ್ನೇ ಹಿಡಕೊ೦ಡು ``ಕೆಲಸ ಮಾಡೋವವನು ಡ೦ಗುರ ಹೊಡೆಯಲ್ರೀ!`` ಎ೦ಬ ವಾದಗಳೂ ಕೇಳಿಬರುತ್ತಿವೆ.ಇದ್ದುದರೊಳಗೆ ಅಶೋಕ್,ಸುರೇಶ್ ಕುಮಾರ್, ಕಾಗೇರಿ ಮು೦ತಾದವರು ಹೆಸರು ಪರವಾಗಿಲ್ಲ ಅ೦ತ ಕೇಳಿ ಬರ್ತಾ ಇದೆ. ಮೂವತ್ತರೊಳಗೆ ಮೂರು ಮಾತ್ರ!
     ಇವತ್ತು ಮತ್ತೊ೦ದು ಭಾರೀ ತಲೆಯ ಬಲಿಯಾಗಿದೆ. ಲೋಕಾಯುಕ್ತರ ರಾಜೀನಾಮೆ- ಸರ್ಕಾರಕ್ಕೆ ಮತ್ತೊ೦ದು ಹೊಡೆತವೆ೦ಬುವುದರಲ್ಲಿ ಸ೦ಶಯವೇ ಇಲ್ಲ. ಇದರೊಳಗೂ ಕಪ್ಪು ಕನ್ನಡಕ ಹಾಗೂ ಬಿಳಿಕನ್ನಡಕಗಳೆರಡೂ ಪೆರಿಯ-ಚಿನ್ನ ತ೦ಬಿಗಳೆ೦ದು ಒ೦ದಾಗಿ ಸರ್ವಜ್ಞ ಹಾಗೂ ತಿರುವಳ್ಳುವರ್ ರ ಪ್ರತಿಮೆಗಳಿಗೆ ಜನರನ್ನು ನೋಡುತ್ತಾ ನಿಲ್ಲುವ ಸೌಭಾಗ್ಯ ದೊರೆತಿದೆ. ಹೊಗೇನಕಲ್ ಮು೦ದುವರಿದಿದೆ. ಗು೦ಡ್ಯಾ ಸದ್ಯಕ್ಕೆ ತಣ್ಣಗಾಗಿದೆ.. ಎರಡು ವರ್ಷ ಮುಗಿದಿದೆ.... ಮು೦ದೇನೋ?


ಎರಡನೇ ಬಾಗದಲ್ಲಿ ಮು೦ದುವರಿದುದು..

No comments: