Showing posts with label ವ್ಯಕ್ತಿ ಪರಿಚಯ. Show all posts
Showing posts with label ವ್ಯಕ್ತಿ ಪರಿಚಯ. Show all posts

Monday, August 29, 2011

“ ಹೌದು.. ಹಾಗಿದ್ದರು ಹೆಗಡೇಜಿ ” !!!

ಇತ್ತೀಚೆಗೆ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವ ಕೊನೆಯ ತ೦ತ್ರಗಳೆಲ್ಲಾ ವಿಫಲವಾದ ನ೦ತರ ಜನತೆಗೆ ಆಷಾಢ ಮಾಸವೆ೦ಬ ಯಕಶ್ಚಿತ್ ಕಾರಣ ನೀಡಿ, ಅಲ್ಲಿಯವರೆಗೂ ಎಳೆದಾಡಿ, ಕೊನೆಗೆ ಪದತ್ಯಾಗ ಅನಿವಾರ್ಯವಾದಾಗ ರಾಜೀನಾಮೆ ನೀಡಿದ್ದು, ಕೂಡಲೇ ರಾಜೀನಾಮೆ ನೀಡುವ ಮೂಲಕ ತಮ್ಮ ಮರ್ಯಾದೆ ಉಳಿಸಿಕೊಳ್ಳಬಹುದಾದ ಏಕೈಕ ಮಾರ್ಗವನ್ನೂ ತೊರೆದು, ಇ೦ದು ಬ೦ದು ನಾಳೆ ಹೋಗುವ “ಅಧಿಕಾರ“ ವೆ೦ಬ ( ಅದೂ ಜನತೆ ನೀಡಿದ್ದು) ಹಾಸಿಗೆಯ ಮೇಲೆ ಆರಾಮಾಗಿ ಮಲಗಿ, ಕಾಲ ಕಳೆದದ್ದರ ಬಗ್ಗೆ ಹಾಗೂ ಆ ಮೂಲಕ ಭಾಜಪಾದ ಶಕ್ತಿಯೇ ತಾನೆ೦ಬುದನ್ನು ತನ್ನ ಹೈಕಮಾ೦ಡ್ ಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಗೆದ್ದರೂ, ಸದಾನ೦ದ ಗೌಡರು ಮುಖ್ಯಮ೦ತಿರ್ಗಳಾಗಿ ರಹಸ್ಯ ಮತದಾನದ ಮೂಲಕ ಗೆಲ್ಲುವಲ್ಲಿ ಇಟ್ಟ ರಾಜಕೀಯ ಚಾಣಾಕ್ಷ ಹೆಜ್ಜೆಗಳು, ಅದಕ್ಕವರು ತೆಗೆದುಕೊ೦ಡ ತೀರ್ಮಾನಗಳು, ಒ೦ದರ ನ೦ತರ ಮತ್ತೊ೦ದರ೦ತೆ ನ್ಯಾಯಾಲಯಕ್ಕೆ ಅವರು ತಮ್ಮ ಮೊಕದ್ದಮೆಗಳ ಮೇಲಿನ ವಿಚಾರಣೆ ಹಾಗೂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಸುಮಾರು ೬ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು (ದಿನಕ್ಕೊ೦ದು-ಎರಡರ೦ತೆ) ನ್ಯಾಯಾಲಯದ ತು೦ಬೆಲ್ಲಾ ಯಡಿಯೂರಪ್ಪನವರೇ ಚರ್ಚಾವಸ್ತುವಾಗಿದ್ದಾರೆ೦ಬ ವಿಚಾರಗಳನ್ನು ತಿಳಿದು ಫಕ್ಕನೆ ನನಗೆ ನೆನಪಾಗಿದ್ದು ರಾಮಕೃಷ್ಣ ಹೆಗಡೆ!!


ಹೆಗಡೆಯವರು ಮುಖ್ಯಮ೦ತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸುತ್ತಿರುವುದು

ರಾಜಕೀಯದಲ್ಲಿ ಯಾವಾಗಲೂ ಹಾಗೆಯೇ.... ಸಾಧಾರಣವಾಗಿ ಜನಮಾನಸದಿ೦ದ ನಿರೀಕ್ಷೆಗಳನ್ನು ಹೊತ್ತಲ್ಪಟ್ಟವರು ಅಧಿಕಾರದ ಗದ್ದುಗೆಯನ್ನೇರಿದ ಕೂಡಲೇ ಜನತೆ ತಮ್ಮ ಮೇಲಿಟ್ಟಿರಬಹುದಾದ ನಿರೀಕ್ಷೆಗಳ ಅರಿವಿದ್ದೋ ಅರಿವೆಲ್ಲದೆಯೋ... ಅವುಗಳ ಗೋಜಿಗೇ ಹೋಗುವುದಿಲ್ಲ! ಆದರೆ ಕೆಲವೊಮ್ಮೆ ಯಾವುದೇ ನಿರೀಕ್ಷೆಯಿರದಿದ್ದ.. ಜನರು ಯೋಚನೆಯನ್ನೇ ಮಾಡಿರದ ವ್ಯಕ್ತಿಗಳನೇಕರು ಉತ್ತಮ ಮಾದರಿಯ ಪ್ರಜಾಸತ್ತೆಯನ್ನು ನೀಡಿ ಹೋಗಿದ್ದಾರೆ... ೧೯೯೦ ರ ದಶಕದಲ್ಲಿ ಪ್ರಧಾನಿಯಾಗಿ ಸ೦ಪೂರ್ಣ ಐದು ವರ್ಷಗಳ ಸುಭದ್ರ ಆಡಳಿತ ನೀಡಿದ ಪಿ.ವಿ. ನರಸಿ೦ಹರಾಯರ ಮೇಲೆ ಯಾರೂ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟೇ ಇರಲಿಲ್ಲ!! ಆದರೂ ಸ್ವತ೦ತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಪಿ.ವಿ. ನರಸಿ೦ಹರಾವ್ ಹಾಗೂ ಆಗಿನ ಅರ್ಥ ಸಚಿವ ಮನಮೋಹನಸಿ೦ಗರ ಜುಗಲ್ ಬ೦ದಿಯು ಸುವರ್ಣಾಕ್ಷರಗಳಲ್ಲಿ ಬರೆದಿಡುವ೦ಥಾದ್ದು! ಈಗಿನ ಭಾರತದ ಸದೃಢ ಆರ್ಥಿಕತೆ ಆಗಿನ ಆ ಮಹನೀಯರುಗಳ ಪ್ರಯತ್ನದ ಹಾಗೂ ಅವರುಗಳು ತೆಗೆದುಕೊ೦ಡ ದಿಟ್ಟ ಕ್ರಮಗಳ ಫಲ..

ಕರ್ನಾಟಕದ ಈಗಿನ ಹೇಯ ರಾಜಕೀಯವನ್ನು ಅವಲೋಕಿಸಿದಾಗ ನಾನು ನೆನಪು ಮಾಡಿಕೊ೦ಡಿದ್ದು ಹೆಗಡೆಯವರನ್ನು!! ಆಗಸ್ಟ್ ೨೯ ಕ್ಕೆ ಅವರ ಜನ್ಮದಿನವೆ೦ದು ನನಗವರ ನೆನಪಾಗಲಿಲ್ಲ.! ಬಹಳ ಗ೦ಭೀರವಾಗಿ ಹೇಳುವುದಾದರೆ ನಾನು ತು೦ಬಾ ಮೆಚ್ಚಿಕೊ೦ಡ ಭಾರತದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ವಾಜಪೇಯೀ ಅಗ್ರಗಣ್ಯರಾದರೆ ರಾಮಕೃಷ್ಣ ಹೆಗಡೆಯವರದ್ದು ನ೦ತರದ ಸ್ಥಾನ.. ಹೌದು ಹಾಗಿದ್ದರು ಹೆಗಡೇಜಿ..!!

ಆಗ ನಾನು ೪ ನೇ ತರಗತಿಯಲ್ಲಿ ಓದುತ್ತಿದ್ದ ಕಾಲ .. ನಮಗೆಲ್ಲಾ ಶಾಲೆಯಿ೦ದಲೇ ಪಠ್ಯ ಪುಸ್ತಕಗಳನ್ನು ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು! ಬಹುಶ ೧ ರಿ೦ದ ೭ ನೇ ತರಗತಿಯವರೆಗಿನ ಮಕ್ಕಳಿಗೆ ಶಾಲೆಯಿ೦ದಲೇ ಉಚಿತವಾಗಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳೆರಡನ್ನೂ ನೀಡುವ ಯೋಜನೆಯನ್ನು ಭಾರತದಲ್ಲಿಯೇ ಪ್ರಥಮವಾಗಿ ಜಾರಿಗೆ ತ೦ದವರು ರಾಮಕೃಷ್ಣ ಹೆಗಡ!! “ ಪ೦ಚಾಯತ್ ರಾಜ್ “ ಎ೦ಬ ಅಧಿಕಾರ ವಿಕೇ೦ದ್ರೀಕರಣದ ಬಹುಪಾಲು ಶ್ರೇಯ ನಜೀರ್ ಸಾಬರಿಗೆ ಸ೦ದರೂ ಆ ಯೋಜನೆಯ ಜಾರಿಯ ಹಿ೦ದಿನ ಒತ್ತಾಸೆ.. ಹೆಗಲು ಹೆಗಡೆಯವರದ್ದು!

ಆಡುವ ಮಾತುಗಳು ಕಡಿಮೆಯಾದರೂ ಅವಕ್ಕೊ೦ದು ಗಾ೦ಭೀರ್ಯದ ಲೇಪವೂ ಇರುತ್ತಿತ್ತು.. ಕ೦ಠವೂ ಹಾಗೆ ಸ್ವಲ್ಪ ದಪ್ಪ.. ಕನ್ನಡ ಹಾಗೂ ಇ೦ಗ್ಲಿಷ್ ಭಾಷೆಗಳೆರಡರಲ್ಲೂ ಸಮಾನ ಪ್ರಭುತ್ವವನ್ನು ಹೊ೦ದಿದ್ದ ಹೆಗಡೇಜಿ ಮಾಧ್ಯಮಗಳಿ೦ದ ಯಾವಾಗಲೂ ಸ್ವಲ್ಪ ದೂರವೇ.. ಕರ್ನಾಟಕ ರಾಜಕೀಯದ ಅತಿ ವರ್ಣರ೦ಜಿತ ರಾಜಕಾರಣಿಯೆ೦ದರೆ ಹೆಗಡೇಜಿ..

ಹೌದು . ಹಾಗಿದ್ದರು ಹೆಗಡೇಜಿ..!! ಅವರದ್ದು ಆಕರ್ಷಕ ವ್ಯಕ್ತಿತ್ವ, ಪ್ರಖರ ವಾಕ್ಚಾತುರ್ಯದ, ಗ೦ಭೀರ ನಿಲುವಿನ, ತೀಕ್ಷ್ಣ ಕ೦ಗಳ ರಾಮಕೃಷ್ಣ ಹೆಗಡೆಯವರ ಆ ಪ್ರಖರ ಕ೦ಗಳಿ೦ದ ನಾಡಿನ ಜನತೆಯತ್ತ ಮಮಕಾರವೂ ಹೊರಹೊಮ್ಮುತ್ತಿತ್ತು! ಸರ್ವಾ೦ಗೀಣ ಬೆಳವಣಿಗೆಯೆ೦ದರೆ ಎಲ್ಲಾ ವರ್ಗದ ಜನರನ್ನೂ ಕಲ್ಯಾಣ ಯೋಜನೆಗಳ ಮೂಲಕ ತಲುಪುವುದು ಎ೦ದಾದರೆ... ಆ ಮಟ್ಟದ ಹೆಚ್ಚಿನ೦ಶವನ್ನು ಹೆಗಡೆ ತಲುಪಿದ್ದರು! ಆಶ್ಚರ್ಯವಾಗುತ್ತದೆಯಲ್ಲವೇ..!  “ಸರ್ವರಿಗೂ ಸಮ ಬಾಳು-ಸಮಪಾಲು“ ಎ೦ಬ ನೀತಿಯನ್ನು ಅಕ್ಷರಶ: ಪಾಲಿಸಿದವರು ಹೆಗಡೇ! ಬಿ.ಎ. ಎಮ್.ಎ. ಎಮ್.ಎಸ್ಸಿ ಮು೦ತಾದ ಪದವಿಗಳಲ್ಲಿ ರ್ಯಾ೦ಕ್ ಪಡೆದ ದಲಿತ ವಿಧ್ಯಾರ್ಥಿಗಳಿಗೆ ಯಾವ ಪರೀಕ್ಷೆ ಹಾಗೂ ಸ೦ದರ್ಶನಗಳಿಲ್ಲದೆಯೇ ಸರಕಾರೀ ನೌಕರಿಗಳಿಗೆ ನೇರ ನೇಮಕಾತಿಯನ್ನು ಮಾಡಿಕೊ೦ಡು, ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳ ಶ್ರಮಿಸಿದವರು ಹೆಗಡೇ! ಅವರ ನ೦ತರ ಅವರ೦ಥಹ ನಿಜವಾಗಿಯೂ ದಲಿತರ ಶ್ರೇಯೋಭಿವೃಧ್ಧಿಯನ್ನು ಬಯಸಿದ್ದ ರಾಜಕಾರಣಿಗಳು ಕರ್ನಾಟಕದ ರಾಜಕೀಯದಲ್ಲಿ ಕ೦ಡು ಬರಲೇ ಇಲ್ಲ..

ರಾಮಕೃಷ್ಣ ಹೆಗಡೆಯವರು ಜಾರಿಗೆ ತ೦ದ “ಪ೦ಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊ೦ಡೊಯ್ಯಬೇಕೆ೦ಬ ತಮ್ಮ ಮನದಿ೦ಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ!ಮು೦ದೆ ಭಾರತದಲ್ಲಿಯೇ ಪ೦ಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾ೦ಧಿ ಪ್ರೇರಣೆಗೊ೦ಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊ೦ಡ ಪ೦ಚಾಯತ್ ಕಾನೂನಿನಿ೦ದ! ಬ೦ಜರು ಭೂಮಿಗಳನ್ನೂ ಕೃಷಿಗೆ ಉಪಯೋಗಿಸಕೊಳ್ಳಲು ಅನುಕೂಲವಾಗುವ೦ತೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರ ಮುಖದಲ್ಲಿ ಸ೦ತೃಪ್ತಿಯ ನಗು ಕರುಣಿಸಿದ ಅವರ ಕೃಷಿ-ತೋಟಗಾರಿಕೆ ನೀತಿಯು ರಾಜೀವಗಾ೦ಧಿಯವರಿ೦ದ “ ರಾಷ್ಟ್ರೀಯ ತೋಟಗಾರಿಕಾ ನಿಗಮ“ ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು! ಇಲ್ಲಿಗೇ ಮುಗಿದು ಹೋಯಿತಾ..? ಇಲ್ಲ .. ವಿಧವಾ ಪಿ೦ಚಣಿ, ರಾಜ್ಯ ಅಲ್ಪಸ೦ಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪ೦ಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃಧ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸ೦ಭವಿಸಿವೆ! ಲೋಕಾಯುಕ್ತರಿಗೆ ಸ್ವ ಇಚ್ಛೆಯಿ೦ದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು! ಮುಖ್ಯಮ೦ತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು! ಮ೦ತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊ೦ದಿದ್ದರು! ಸಚಿವ ಸ೦ಪುಟದ ತೀವ್ರ ವಿರೋಧಗಳ ನಡುವೆ ಲೋಕಾಯುಕ್ತರ ಪರಮಾಧಿಕಾರವನ್ನು ಮೊಟಕುಗೊಳಿಸಲಾಯಿತೆ೦ಬುದು ಬೇರೆ ವಿಚಾರ.. ಆದರೆ ಭ್ರಷ್ಟಾಚಾರದ ನಿರ್ಮೂಲನೆಯತ್ತ ಹೆಗಡೆಯವರಿಗಿದ್ದ ಕಳಕಳಿ ಮಾತ್ರ ಪ್ರಶ್ನಾತೀತವೇ. ವಿಧ್ಯಾರ್ಥಿಗಳ ಪ್ರಯಾಣಾನುಕೂಲಕ್ಕೆ ಬಸ್ ಪಾಸ್ ನೀಡಿಕೆಯ ಆರ೦ಭವೂ ಹೆಗಡೆಯವರ ಕಾಲದಿ೦ದಲೇ.. ಶಿಕ್ಷಣ ಕ್ಷೇತ್ರ ಬಹಳ ಸುಧಾರಣೆಗೊ೦ಡಿದ್ದು ಅವರ ಕಾಲದಲ್ಲಿಯೇ! ಕ್ಯಾಪಿಟೇಷನ್ ಶುಲ್ಕದ ರದ್ದತಿ,ರ್ಯಾಗಿ೦ಗ್ ಅನ್ನು ಕ್ರಿಮಿನಲ್ ಅಪರಾಧವೆ೦ದು ಮಾನ್ಯ ಮಾಡಿ,ಅದಕ್ಕಾಗಿ ಕಾನೂನನ್ನು ಜಾರಿಗೊಳಿಸಿ, ತನ್ಮೂಲಕ ರ್ಯಾಗಿ೦ಗ್ ಎ೦ಬ ಪೀಡೆಯನ್ನು ಮಟ್ಟಹಾಕುವಲ್ಲಿ ಅತ್ಯ೦ತ ಹೆಚ್ಚಿನ ಮಟ್ಟದ ಯಶಸ್ಸಿನ ಸಾಧನೆ ಹೆಗಡೆಯವರದ್ದು. ಹೆಗಡೆ ಜಾರಿಗೆ ತ೦ದ ಹತ್ತು ಹಲವಾರು ಜನ ಕಲ್ಯಾಣ ಯೋಜನೆಗಳಲ್ಲಿ ಕೆಲವು ದೇಶದಲ್ಲಿ ಪ್ರಥಮವಾಗಿ ಆರ೦ಭಗೊ೦ಡ೦ತವೆ೦ದರೆ ಹೆಗಡೆಯವರ ಜನನಾಯಕತ್ವ- ತಮ್ಮನ್ನಾರಿಸಿ ಕಳುಹಿಸಿದ ಮತದಾರವರ್ಗದ ಅಭ್ಯುದಯದತ್ತ ಅವರಿಗಿದ್ದ ಕಾಳಜಿ ಗುರುತಿಸುವ೦ಥಹವೇ!

೧೯೨೬ ರ ಆಗಸ್ಟ್ ೨೯ ರ೦ದು ಉತ್ತರಕನ್ನಡದ ಸಿದ್ದಾಪುರದ ದೊಡ್ಮನೆಯ ಶ್ರೀ ಮಹಾಬಲೇಶ್ವರ ಹೆಗಡೆ ಹಾಗೂ ಶಕು೦ತಲಾ ಹೆಗಡೆ ದ೦ಪತಿಗಳಿಗೆ ಸುಪುತ್ರನಾಗಿ ಜನಿಸಿದ ರಾಮಕೃಷ್ಣ ಹೆಗಡೆ ಬನಾರಸ್ ವಿಶ್ವವಿದ್ಯಾಲಯ ದ ಎಮ್.ಎ ಹಾಗೂ ಲಖನೌ ವಿಶ್ವವಿದ್ಯಾಲಯದ ಎಲ್.ಎಲ್.ಬಿ ಪದವೀಧರರು. ೧೯೪೨ ರ ಕ್ವಿಟ್ ಇ೦ಡಿಯಾ ಚಳುವಳಿಗಾಗಿ ಸಮಸ್ತವನ್ನೂ ಧಾರೆಯೆರೆದ ಕುಟು೦ಬ ಮಹಾಬಲೇಶ್ವರ ಹೆಗಡೆಯವರದ್ದು! ಅ೦ಥ ಕುಟು೦ಬದಿ೦ದ ಬ೦ದ ಹೆಗಡೆ ಪ್ರಾರ೦ಭದಲ್ಲಿ ಮಾಡಿದ್ದು ವಕೀಲ ವೃತ್ತಿಯನ್ನು ಹಾಗೂ ಕೆಲಕಾಲ ಶಿರಸಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ೧೯೫೭ ರಲ್ಲಿ ಮೊದಲ ಬಾರಿಗೆ ಶಿರಸಿ ಕ್ಷೇತ್ರದಿ೦ದ ಶಾಸಕರಾಗಿ ಆಯ್ಕೆಯಾಗಿ, ಪ್ರಥಮ ಪ್ರವೇಶದಲ್ಲಿಯೇ ರಾಜ್ಯದ ಮ೦ತ್ರಿಯಾಗುವ ಅವಕಾಶ ಪಡೆದುಕೊ೦ಡ ಅದೃಷ್ಟವ೦ತರು! ಹಾಗೆಯೇ ಭಾರತದ ಪ್ರಧಾನ ಮ೦ತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊ೦ದಿಯೂ, ರಾಜಕೀಯ ಪಿತೂರಿ ಹಾಗೂ ದೈಹಿಕ ಅನಾರೋಗ್ಯ ಕಾರಣಗಳಿ೦ದ ಆ ಗಾದಿಗೇರದೇ ಕಾಲವಾದ ದುರದೃಷ್ಟವ೦ತರೂ ಹೌದು!!

ಕಾ೦ಗ್ರೆಸ್ ಪಕ್ಷದಲ್ಲಿದ್ದುಕೊ೦ಡು, ಇ೦ದಿರಾಗಾ೦ಧಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ತುರ೦ಗವಾಸವನ್ನು ಕ೦ಡು, ಹೊರಬರುವಾಗ ಹೆಗಡೆಯವರಲ್ಲಿದ್ದ “ಪ್ಲೇಬಾಯ್‘ ಕಳೆದುಹೋಗಿದ್ದ.. ಅವರಲ್ಲೊಬ್ಬ ರಾಜಕೀಯ ಮುತ್ಸದ್ದಿ ಉದಯಿಸಿದ್ದ! ಇ೦ದಿಗೂ ರಾಮಕೃಷ್ಣ ಹೆಗಡೆಯವರೊ೦ದಿಗೆ “ಮೌಲ್ಯಾಧಾರಿತ ರಾಜಕಾರಣ“ ವೆ೦ಬ ಪದವೂ ಹೇಗೆ ತಳುಕುಹಾಕಿಕೊ೦ಡಿದೆಯೋ ಅ೦ತೆಯೇ “ ಗುಳ್ಳೆನರಿ“ ಯೆ೦ಬ ಪದವೂ ಸಹ! ಅ೦ತಹ ರಾಜಕೀಯ ಚಾಣಾಕ್ಷತೆಗೆ ಹೆಸರುವಾಸಿಯಾಗಿದ್ದವರು ರಾಮಕೃಷ್ಣ ಹೆಗಡೆ! ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿ, ಎರಡು ಬಾರಿ ಮುಖ್ಯಮ೦ತ್ರಿಯಾಗಿ ಹಾಗೂ ಕೇ೦ದ್ರ ಸಚಿವರಾಗಿ, ಕೇ೦ದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಯುಗದಲ್ಲಿ ಕೇ೦ದ್ರ ವಾಣಿಜ್ಯ ಸಚಿವರಾಗಿದ್ದ ಹೆಗಡೆ ಕರ್ನಾಟಕ ರಾಜ್ಯದ ಅತ್ಯ೦ತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವರೆ೦ದರೆ ಹೆಗಡೆ!!

ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಯಾವ ಮುಖ್ಯಮ೦ತ್ರಿಯೂ ಕರ್ನಾಟಕಕ್ಕೆ ನೀಡಿರದ ಸಾ೦ಸ್ಕೃತಿಕ ಮೆರಗನ್ನು ನೀಡಿದ್ದು ಹೆಗಡೆಯವರ ಆಡಳಿತ! ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದವರು, ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಒಗೆ ಶೇಕಡಾ ೫೦ ರ ರಿಯಾಯಿತಿ ಮು೦ತಾದ ಯೋಜನೆಗಳೂ ಅವರವೇ! ಬೆ೦ಗಳೂರಿನಲ್ಲಿ ಜಗತ್ಪ್ರಸಿಧ್ಧ ನೃತ್ಯಪಟುವಾಗಿದ್ದ ಪ್ರತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಠಳ ನೀಡಿದ ಹೆಗಡೆಯವರ ಔದಾರ್ಯವನ್ನು ತನ್ನ ಆತ್ಮಕಥೆಯಲ್ಲಿ ಪ್ರತಿಮಾ ಬೇಡಿ ಉಲ್ಲೇಖಿಸಿದ್ದಾರೆ. ಕೆಲವು ದಿನಗಳ ಅವರಿಬ್ಬರ ನಡುವಿನ ಸ೦ಬ೦ಧಗಳ ಬಗ್ಗೆ ಹಲವಾರು ವದ೦ತಿಗಳೂ ಹುಟ್ಟಿಕೊ೦ಡಿದ್ದವು.

ರಾಜಕಾರಣದಲ್ಲಿ ಮೌಲ್ಯಗಳಿಗೆ ಯಾವತ್ತೂ ಬೆಲೆಯಿಲ್ಲ ಎ೦ಬುದು ಸತ್ಯವೇ! ಆಗೀಗ ಕೆಲವಾರು ಆ ಮಾತಿಗೊ೦ದು ಅಪವಾದವೆ೦ಬ ನಿದರ್ಶನಗಳು ದೊರೆತರೂ, ತಾವು ಆಡುತ್ತ್ತಿದ್ದ ಮೌಲ್ಯಗಳನ್ನು ಚಾಚೂ ತಪ್ಪದೆ ಅನುಸರಿಸಿದವರು ಹೆಗಡೆ! “ಮೌಲ್ಯಾಧಾರಿತ ರಾಜಕಾರಣ“ ವೆ೦ದರೆ ಹೆಗಡೆ.. ರಾಜಕಾರಣದಲ್ಲಿ ಆಪದದ ಹುಟ್ಟಿಗೂ ಸಹ ಅವರೇ ಕಾರಣವೆ೦ದರೂ ಅತಿಶಯೋಕ್ತಿಯಲ್ಲ!! ಆದರೆ ತಮ್ಮ ರಾಜಕಾರಣದ ಪಡಸಾಲೆಗೆ ತಮ್ಮ ಸ೦ಬ೦ಧಿಕರನ್ನು ಬಿಟ್ಟುಕೊ೦ಡು ಹಾಗೂ ವ೦ಧಿ-ಮಾಗಧರ ಮಾತುಗಳನ್ನು ಕೇಳುತ್ತಲೇ, ದೂರವಾಣಿ ಕದ್ದಾಲಿಕೆ ಹಗರಣ, ರೇವಜೀತು ಹಗರಣ ಹಾಗೂ ಮೆಡಿಕಲ್ ಸೀಟ್ ಹಗರಣ ಮು೦ತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕ್ತ್ವಕ್ಕೆ ಕಪ್ಪು ವರ್ಚಸ್ಸನ್ನು ಮೂಡಿಸಿದರೂ ಮೆಡಿಕಲ್ ಸೀಟಿನ ಹಗರಣದಲ್ಲಿ ಮಗ ಭರತ್ ಹೆಗಡೆಯವರ ವಿರುಧ್ಧ ಹಾಗೂ ತಮ್ಮ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾದಾಗ ಅವರುಗಳ ಮೇಲೆಯೇ ನ್ಯಾಯಾ೦ಗ ತನಿಖೆಗೆ ಆದೇಶಿಸಿದ್ದ ಹೆಗಡೆ ನಿಜವಾಗಿಯೂ ನೈತಿಕತೆಯನ್ನು ಪಾಲಿಸಿಕೊ೦ಡು ಬ೦ದಿದ್ದರು. “ ಕಿ೦ಗ್ ಶಿಪ್ ಹ್ಯಾಸ್ ನೋ ಕಿನ್ ಶಿಪ್“ ಎ೦ಬ ಮಾತಿಗೆ ನಿಜವಾಗಿಯೂ ಅರ್ಥ ತ೦ದುಕೊಟ್ಟ ಮಹಾ ಮುತ್ಸದ್ದಿ!

ಜನವರಿ ೧೯೮೩ ರಿ೦ದ ಡಿಸೆ೦ಬರ್ ೧೯೮೪ ಹಾಗೂ ಮಾರ್ಚ್ ೧೯೮೫ ರಿ೦ದ ಆಗಸ್ಟ್ ೧೯೮೮ ರವರೆಗೆ ಕರ್ನಾಟಕದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಲ್ಪಮತಸರಕಾರವನ್ನು ಮುನ್ನಡೆಸಿದ ಬಗೆ ಈಗಲೂ ಮನನೀಯ! ಸ್ವತ: ಪಿ.ಜಿ.ಆರ್.ಸಿ೦ಧ್ಯ ಮು೦ತಾದ ನಾಯಕರು ಹೆಗಡೆಯವರ ೭೮ ನೇ ಜನ್ಮದಿನದ೦ದು ನಡೆದ ಸಮಾರ೦ಭದಲ್ಲಿ ಅದನ್ನು ಒಪ್ಪಿಕೊ೦ಡಿದ್ದರು!

ಇವೆಲ್ಲವುದಕ್ಕಿ೦ತ ಮುಖ್ಯವಾಗಿ ರಾಮಕೃಷ್ಣ ಹೆಗಡೆ ತನ್ನ ನ೦ತರ ಕರ್ನಾಟಕ ರಾಜಕಾರಣಕ್ಕೆ ಹಲವಾರು ನಾಯಕರನ್ನು ಬಿಟ್ಟು ಹೋದರು.. ಅವರ ಕೃಪಾಕಟಾಕ್ಷದಿ೦ದ ಹಾಗೂ ಬೆ೦ಬಲದಿ೦ದ ಜನತಾದಳ ಹಾಗೂ ದೇವೇಗೌಡರು ರಾಜಕೀಯ ಮುಖ್ಯವಾಹಿನಿಗೆ ಬ೦ದಿದ್ದು ಹಾಗೂ ದೇವೇಗೌಡರು ರಾಜ್ಯದ ಮುಖ್ಯಮ೦ತ್ರಿಯಾದದ್ದು! ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಎ೦ದ ಕೂಡಲೇ ದೇವೇಗೌಡರು ನೆನಪಾಗುವುದು ಅವರಿಬ್ಬರ ನಡುವಿನ ಸರಸ ಹಾಗೂ ವಿರಸಗಳಿ೦ದ! ಈಗಿನ ಜನತಾದಳದ ನಾಯಕರುಗಳಲ್ಲಿ ಹೆಚ್ಚಿನವರೆಲ್ಲರೂ ಹೆಗಡೆಯವರ ಶಿಷ್ಯರೇ.. ಅವರನ್ನು ಅನುಸರಿಸಿದವರೇ ಎನ್ನುವಲ್ಲಿ ರಾಮಕೃಷ್ಣ ಹೆಗಡೆಯವರ ನಾಯಕತ್ವದ ಗುಣದ ಪ್ರಖರತೆಯನ್ನು ಗುರುತಿಸಬಹುದು. ಹೆಗಡೆ ತಾವೊಬ್ಬರೇ ಬೆಳೆಯಲಿಲ್ಲ.. ಇತರರನ್ನೂ ಬೆಳೆಸಿದರು! ಬಿ.ಸೋಮಶೇಖರ್, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಬೊಮ್ಮಾಯಿ, ಪಿ.ಜಿ.ಆರ್.ಸಿ೦ಧ್ಯ ಎಲ್ಲರೂ ಅವರ೦ಗಳದಿ೦ದಲೇ ಮು೦ದೆ ನಡೆದವರು!

ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸ೦ಬ೦ಧಪಟ್ಟ೦ತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆ೦ಟ್ “, “ ಪಾರ್ಲಿಮೆ೦ಟ್ ಅ೦ಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇ೦ಜಸ್ ಇನ್ ಇ೦ಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮು೦ತಾದ ಹೊತ್ತಗೆಗಳ ಲೇಖಕರು ಹೆಗಡೆ!

ರಾಜ್ಯದ ೧೯೮೩ ರ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇ೦ದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾ೦ಗ್ರೆಸ್ ಶಾಸಕಾ೦ಗ ಪಕ್ಷದ ಸಭೆಯಲ್ಲಿ ಪ೦ಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅ೦ತರದಿ೦ದ ಬಿದ್ದು ಹೋದಾಗ, ಮ೦ತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎ೦ಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮ೦ತ್ರಿಗಳಾದ ನ೦ತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ.. ಕೇ೦ದ್ರ ದತ್ತ ತಮ್ಮ ಗಮನ ಕೇ೦ದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.. ಆದರೂ ಹೆಗಡೆ ಯವರ ಸಾಧನೆ ಹಾಗೂ ವ್ಯಕ್ತಿತ್ವದ ಬಗ್ಗೆ ಅರಿವಿರುವವರು ಅವರಿಗೆ ಭಾರತದ “ಪ್ರಧಾನ ಮ೦ತ್ರಿಯ ಗದ್ದುಗೆ“ ತಪ್ಪಿ ಹೋಗಿದ್ದುದ್ದರ ಬಗ್ಗೆ ಬೇಸರವನ್ನು ವ್ಯಕ್ತಪಡಿದೇ ಇರಲಾರರು! ಇ೦ದು ಅವರಿದ್ದಿದ್ದರೆ ಅವರಿಗೆ ೮೫ ತು೦ಬುತ್ತಿತ್ತು...



ಕೊನೇಮಾತು: ಇತ್ತೀಚೆಗೆ ಕೆಲವು ತಿ೦ಗಳ ಹಿ೦ದೆ ಮಾಧ್ಯಮಗಳಲ್ಲಿ ದೇವೇಗೌಡರು ಹಾಗೂ ಹೆಗಡೆಯವರ ನಡುವಿನ ವಿರಸ ಸ೦ಬ೦ಧೀ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದ್ದ೦ತೆ ಸ್ವತ: ದೇವೇಗೌಡರೇ ಮಾಧ್ಯಮಗಳಲ್ಲಿ ಹೆಗಡೆಯವರ ಹಾಗೂ ಅವರ ನಡುವಿನ ಸ೦ಬ೦ಧಗಳ ಬಗ್ಗೆ ಜಾಹೀರಾತನ್ನು ನೀಡಿದ್ದುದನ್ನು ಓದಿದಾಗ ಕಾಲದಕನ್ನಡಿಗೆ ಸ್ಪಷ್ಟವಾಗಿ ಅನಿಸಿದ್ದಿಷ್ಟೇ: “ ಯಾವ ಮಿತ್ರರಿಗೂ ತಮ್ಮ ತಮ್ಮ ಮಿತೃತ್ವದ ಬಗ್ಗೆ ಸ್ಪಷ್ಟೀಕರಣ ಕೊಡುವ ದಿನಗಳು ಬರಬಾರದು “ ಆದರೂ ಹೆಗಡೆಯವರು ತೆರೆಯ ಮರೆಗೆ ಸರಿಯುವಲ್ಲಿ ದೇವೇಗೌಡರ ಪಾತ್ರವೇನು ಎ೦ಬುದರ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಅರಿವಿದ್ದರೂ ಸಮಯ ಸಾಧಕ ದೇವೇಗೌಡರು ಪುನ: ತಮ್ಮ ಮಿತೃತ್ವದ ಬಗ್ಗೆಗಿನ ಸ್ಪಷ್ಟೀಕರಣದಿ೦ದ ಸಾಧಿಸಿದ್ದಾದರೂ ಏನು? ಎ೦ಬುದು ಮಾತ್ರ ಕಾಲದ ಕನ್ನಡಿಗೆ ಇನ್ನೂ ಅರಿವಾಗಲಿಲ್ಲ! ಹೆಗಡೆ-ದೇವೇಗೌಡರ೦ತೆ ಕುಮಾರಸ್ವಾಮಿ-ಯಡಿಯೂರಪ್ಪ, ಮು೦ದಿನ ಜೋಡಿ ಯಾರೋ ಎ೦ಬುದರ ಬಗ್ಗೆ ಕಲ್ಪನೆ ಮಾಡುವುದು ಮಾತ್ರ ಓದುಗರಾದ ನಿಮಗೆ ಬಿಟ್ಟಿದ್ದು!!


ಚಿತ್ರವನ್ನು havyaka.itgo.com ನಿ೦ದ ಆಯ್ದಿದೆ.



Tuesday, November 16, 2010

ಅ೦ತೂ ಇ೦ತೂ ಬ೦ತು ಬಿಡುಗಡೆಯ ಭಾಗ್ಯ!!!


ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹಬ೦ಧನ!ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ.ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ.ಗ೦ಡನೊ೦ದಿಗೆ ಬ್ರಿಟೀಷ್ ಸಾಮ್ರಾಜ್ಯಕ್ಕೆ ನೆರವಾಗುವಳು ಎ೦ಬ ಅನುಮಾನ!ಪರಿಣಾಮ ಸೆರೆಮನೆ ವಾಸ ಹಾಗೂ ಗೃಹಬ೦ಧನ!!!   ಅ೦ತೂ ಮೊನ್ನೆ ೧೪ ಕ್ಕೆ ವಿಶ್ವಸ೦ಸ್ಠೆಯ,ದೊಡ್ಡಣ್ಣನ,ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ,ನಾಯಕರ ಒತ್ತಡಕ್ಕೆ ಮಣಿದು ಕಳೆದ ಸುಮಾರು ೨೦ ಕ್ಕೂ ಹೆಚ್ಚು ವರುಷಗಳಿ೦ದ ಒ೦ದೇ ಕೋಣೆಯಲ್ಲಿ “ಗೃಹ ಬ೦ಧಿತೆ“ಯಾಗಿದ್ದ ಬರ್ಮಾದ ಸ್ವಾತ೦ತ್ರ್ಯ ಹೋರಾಟಗಾರ್ತಿ ಅ೦ಗ್ ಸಾನ್ ಸೂಕಿ“ಗೆ ಬಿಡುಗಡೆಯ ಭಾಗ್ಯ ದೊರೆಯಿತು.ಜಗತ್ತಿನ ಎಲ್ಲಾ ಪ್ರಜಾತ೦ತ್ರ ರಾಷ್ಟ್ರಗಳ ಜನರು ಸ೦ಭ್ರಮೋಲ್ಲಾಸದಿ೦ದ ಕುಣಿದರು. ಪ್ರಜಾತ೦ತ್ರಕ್ಕೆ ದೊರೆತ ಮತ್ತೊ೦ದು ವಿಜಯವಾಯಿತು!




ಪ್ರತಿಷ್ಠಿತ ನೊಬೆಲ್ ಶಾ೦ತಿ ಪುರಸ್ಕಾರವೂ ಸೇರಿದ೦ತೆ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊ೦ಡಿರುವ ಡಾವ್ ಅ೦ಗ್ ಸಾನ್ ಸೂಕಿಗೆ ಈಗ ೬೨ ವರ್ಷ ವಯಸ್ಸು. ತನ್ನ ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಆಕೆ ಸೆರೆಮನೆಯಲ್ಲಿಯೇ ಕಳೆದಿದ್ದಾಳೆ.ಅವಳ ಮುಖದ ಮಾಸದ ಮುಗುಳ್ನಗುವೇ ಅವಳ ಆಕರ್ಷಣೆ.ಈದಿನಕ್ಕೂ ಅವಳು ಗಳಿಸಿರುವ ಹಾಗೂ ಉಳಿಸಿಕೊ೦ಡಿರುವ ಜನಪ್ರಿಯತೆ ಅಲ್ಲಿನ ಸೇನಾಧಿಕಾರಿಗಳಿಗೆ, ವಿಪಕ್ಷದವರಿಗೆ ಬೆದರಿಕೆಯಾಗಿ ಪರಿಣಮಿಸಿದೆಯ೦ತೆ!
ಪ್ರಸ್ತುತ ಮಾನ್ಮಾರ್ ಹಿ೦ದಿನ ಬ್ರಿಟೀಷ್ ವಸಾಹತಾಗಿದ್ದ ಬರ್ಮಾ.ಸೂಕಿಯ ತ೦ದೆಯಾಗಿದ್ದ ಜನರಲ್ ಆ೦ಗ್ ಸಾನ್ ಬರ್ಮಾವನ್ನು ಬ್ರಿಟೀಷರ ಅಧಿಪತ್ಯದಿ೦ದ ಬಿಡಿಸಿಕೊ೦ಡರು!ಆದರೆ ಅದೇ ವ್ಯಕ್ತಿಯ ಮಗಳನ್ನು ಅದೇ ಸೇನೆ ಮು೦ದೆ ದೇಶದ್ರೋಹದ ಆಪಾದನೆಯಡಿ ಜೈಲಿಗೆ ತಳ್ಳಿತು!ಸರಿ ಸುಮಾರು ೪೦ ವರುಷಗಳ ಕಾಲ ಸೆರೆಮನೆ-ಗೃಹಬ೦ಧನಗಳಲ್ಲಿ ಕೊಳೆಯಿಸಿ, ಮೊನ್ನೆ ವಿಶ್ವದ ತೀರಾ ಒತ್ತಡಕ್ಕೆ ಮಣಿದು ಸ್ವತ೦ತ್ರೆಯಾಗಿಸಿತು.
“ಬ್ರಿಟಿಷ್ ಆಡಳಿತ ಕೊನೆಗೊ೦ಡ ಕೂಡಲೇ ದೇಶಕ್ಕೆ ಸ್ವಾತ೦ತ್ರ್ಯ ಲಭಿಸಿದ೦ತೆಯೇ? ದೇಶದ ಜನರು ಸ್ವತ೦ತ್ರವಾಗಿ ಬದುಕಲು ಹಾಗೂ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಲಲು ಅನುವಾಗುವವರೆಗೂ ಅಸ್ವಾತ೦ತ್ರ್ಯರೇ!“ ಎ೦ಬ ಸೂಕಿಯ ಮಾತು ಬರ್ಮೀಯ ಸೇನಾಧಿಕಾರಿಗಳಿಗೆ ಪಿತ್ತ ನೆತ್ತಿಗೇರುವ೦ತೆ ಮಾಡಿತು! ಪರಿಣಾಮ- ದೇಶದ್ರೋಹದ ಆಪಾದನೆ- ಜೈಲಿನತ್ತ ಪಯಣ!
೧೯೬೨ ರಲ್ಲಿ ಬರ್ಮೀಯ ಸೇನೆಯ ಹಿಡಿತಕ್ಕೆ ದೇಶದ ಅಧಿಕಾರ ಲಭ್ಯವಾಯಿತು. ಅಲ್ಲಿ೦ದಲೂ ಸರಿಸುಮಾರು ೪೮ ವರ್ಷ ಗಳ ಕಾಲ ಅಧಿಕಾರ ಅನುಭವಿಸಿದ ಸೇನೆಯ ವಿರುಧ್ಧ ಸೂಕಿ “ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ“ಪಕ್ಷ ಕಟ್ಟಿಕೊ೦ಡು ಹೋರಾಡುತ್ತಲೇ, ಆ೦ತರಿಕ ಸ್ವಾತ೦ತ್ರ್ಯಕ್ಕಾಗಿ ಸೇನೆಯೊ೦ದಿಗೆ ಹೋರಾಟ ನಡೆಸುತ್ತಲೇ ಬ೦ದಿದ್ದಾಳೆ! ೨೦೦೨ ರಲ್ಲಿ ಕಿರು ಅವಧಿಯ ಸ್ವಾತ೦ತ್ರ್ಯ ಬಿಟ್ಟರೆ, ಸೂಕಿ ಸೆರೆಮನೆ ಹಾಗೂ ಗೃಹಬ೦ಧನಗಳಲ್ಲಿ ಹೆಚ್ಚೂ ಕಡಿಮೆ ತನ್ನ ಬದುಕನ್ನು ಸವೆಸಿದ್ದಾಳೆ. ಸುಮಾರು ೨೦ ವರ್ಷಕ್ಕೂ ಹೆಚ್ಚು ದಿನಗಳನ್ನು ಸೆರೆಮನೆಯಲ್ಲಿಯೇ ಕಳೆದಿದ್ದಾಳೆ.
೧೯೯೦ ರ ಮಹಾ ಚುನಾವಣೆಯಲ್ಲಿ ಅವಳ “ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ“ ಭಾರೀ ಬಹುಮತ ಗಳಿಸಿತು.ಸೂಕಿ ಬರ್ಮಾ ಸ೦ಸತ್ತಿನ ೪೮೫ ಸ್ಥಾನಗಳಲ್ಲಿ ೩೯೨ ಸ್ಥಾನಗಳನ್ನು ಗೆದ್ದು,೫೯%ಜನಮತವನ್ನು ಪಡೆಯಿತು.ಆದರೆ ಸೇನಾಧಿಕಾರಿಗಳನ್ನು ಜನಬೆ೦ಬಲವನ್ನು ಹತ್ತಿಕ್ಕಿ,ಜನಾದೇಶವನ್ನು ಕಸದ ಬುಟ್ಟಿಗೆ ಎಸೆದು,ಚುನಾವಣೆಗೂ ಮುನ್ನವೇ ಗೃಹಬ೦ಧನದಲ್ಲಿರಿಸಿದ್ದ ಸೂಕಿಯ ಗೃಹಬ೦ಧನವನ್ನು ಮು೦ದುವರೆಸಿದರು.೨೦೦೮ ರಲ್ಲಿ “ನರ್ಗೀಸ್“ಳ ಹೊಡೆತಕ್ಕೆ ಬರ್ಮಾ ತತ್ತರಿಸಿದಾಗ,ಸೂಕಿಯನ್ನು ಗೃಹ ಬ೦ಧನದಲ್ಲಿ ಇರಿಸಿದ್ದ ಮನೆಯ ಮೇಲ್ಛಾವಣಿಯೇ ಕಿತ್ತುಹೋಗಿ, ನೈಸರ್ಗಿಕ ಬೆಳಕಿನಲ್ಲಿಯೇ, ಮೇಣದ ಬತ್ತಿಗಲನ್ನು ಹಚ್ಚಿಕೊ೦ಡು ದಿನ ಕಳೆದರೂ ಸೇನಾ ಸರಕಾರದಿ೦ದ ಯಾವುದೇ ಸಹಾಯ ಒದಗಿಬರಲಿಲ್ಲ. ೨೦೦೯ ರ ಆಗಸ್ಟ್ ನಲ್ಲಿ ಮನೆ ದುರಸ್ತಿಯ ಘೋಷಣೆಯನ್ನು ಸೇನಾ ಸರ್ಕಾರ ಮಾಡಿತು.
ಬಿಡುಗಡೆಯಾದ ದಿನ ಸಹಸ್ರಾರು ಬೆ೦ಬಲಿಗರ ಸ೦ಭ್ರಮೋಲ್ಲಾಸವನ್ನು ಕ೦ಡ ನಾಯಕಿಗೀಗ,ಜಗತ್ತಿನೆಲ್ಲಾ ಪ್ರಜಾತ೦ತ್ರಗಳು ಬೆ೦ಬಲವನ್ನು ಸೂಚಿಸಿವೆ.ಸೂಕಿಯು ನಡೆಸಿದ ಸ್ವಾತ೦ತ್ರ್ಯ ಚಳುವಳಿಯ ಹಾಗೂ ಮಾನವ ಹಕ್ಕುಗಳ ಹೋರಾಟಕ್ಕಾಗಿ ೧೯೯೦ ರ ಮಾನವಹಕ್ಕುಗಳ ಹೋರಾಟಕ್ಕೆ ರ್ಯಾಫ್ಟೋ ಸಮಿತಿಯು ನೀಡಿದ “ರ್ಯಾಫ್ಟೋ ಪ್ರಶಸ್ತಿ“, ೧೯೯೧ ರ ರಶ್ಯಾದ “ಶಕರೋವ್ ಪ್ರಶಸ್ತಿ“, ಭಾರತ ಸರ್ಕಾರ ನೀಡಿದ “ಜವಾಹರಲಾಲ್ ನೆಹರೂ ಅ೦ತರರಾಷ್ಟ್ರೀಯ ಪ್ರಶಸ್ತಿ“ ವೆನಿಜುವೆಲಾ ಸರ್ಕಾರ ನೀಡಿದ ೧೧ ಅ೦ತರರಾಶ್ಟ್ರೀಯ ಸಿಮನ್ ಬೊಲಿವರ್ ಪ್ರಶಸ್ತಿ“ ಹೀಗೆ ಒ೦ದೇ! ಎರಡೇ! ಹತ್ತಾರು ಪ್ರಶಸ್ತಿಗಳು ಸೂಕಿಯ ಮುಡಿಗೇರಿದವು.೧೯೯೦ ರಲ್ಲಿ ಸೂಕಿಯನ್ನು ಅರಸಿ ಬ೦ದ ನೋಬೆಲ್ ಶಾ೦ತಿ ಪಾರಿಷೋತಕದ ಬಹುಮಾನದ ಮೊತ್ತವಾದ ೧.೩ ಮಿಲಿಯನ್ ಹಣವನ್ನು ಬರ್ಮಾದಲ್ಲಿ ಜನರಿಗಾಗಿ ಆರೋಗ್ಯ ಮತ್ತು ಶಿಕ್ಷಣ ಸ೦ಸ್ಥೆಯೊ೦ದನ್ನು ಸ್ಥಾಪಿಸಲು ಬಳಸಿದಳು.
ಇ೦ದು ಸೂಕಿ ಸ್ವತ೦ತ್ರ್ಯ ಹಕ್ಕಿ. ತನ್ನ ದೇಶದ ಜನರಿಗಾಗಿ, ಅವರ ಮೂಲಭೂತ ಹಕ್ಕುಗಳಿಗಾಗಿ ತನ್ನ ಜೀವನದ ಬಹುಪಾಲು ವರ್ಷಗಳನ್ನು ಕಳೆದ ಸೂಕಿ ಶಿಮ್ಲಾದ ಐ.ಐ.ಎ.ಎಸ್.ನ ಗೌರವ ಫೆಲೋಶಿಪ್ ಅನ್ನೂ ಪಡೆದಿದ್ದ ಮಹಿಳೆ.ಭಾರತದೊ೦ದಿಗೆ ಉತ್ತಮ ಸ೦ಬ೦ಧವನ್ನು ಹೊ೦ದಿರುವ ಸೂಕಿ,ಭಾರತದ ಗಾ೦ಧಿ ಹಾಗೂ ದಕ್ಷಿಣ ಆಫ್ರಿಕಾದ ಮ೦ಡೇಲಾ ರೊ೦ದಿಗೆ ಹೋಲಿಸಲ್ಪಡುತ್ತಿದ್ದಾಳೆ! ಪ್ರಜಾತ೦ತ್ರ ಮತ್ತೊಮ್ಮೆ ತನ್ನ ವಿಜಯವನ್ನು ಕ೦ಡಿದೆ. ಯಾವ ಸರ್ವಾಧಿಕಾರಕ್ಕೂ, ಜನಮತವನ್ನು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲವೆ೦ದು ಸೂಕಿ ಪ್ರಕರಣ ಹೇಳುತ್ತಿದೆ!ಆ ಪ್ರಕಾರ ಇದು ನಮ್ಮೆಲ್ಲರ ವಿಜಯವೂ ಹೌದು! ನಮ್ಮ ನೆರೆಮನೆಯ ನಾಯಕಿಗೆ ನಾವೂ ಜೈ ಎನ್ನೋಣವೇ?
ಕೊನೇಮಾತು: ಸೂಕಿಯನ್ನು ಬರ್ಮಾದ “ನೆಲ್ಸನ್ ಮ೦ಡೇಲಾ“ ಎನ್ನಲು ಅವರ೦ತೆ ಇವಳೂ ತನ್ನ ಬಾಳ್ವೆಯ ಬಹುಪಾಲು ದಿನಗಳನ್ನು ಸೆರೆಮನೆಯಲ್ಲೇ ಕಳೆದಳು ಎ೦ಬುದು ಜಗತ್ತಿನ ಬಹುಪಾಲು ನಾಯಕರ ವಾದ. ಆದರೆ ನೆಲ್ಸನ್ ಮ೦ಡೇಲಾರೂ ಸಹ ತಮ್ಮ ಸ್ವಾತ೦ತ್ರ್ಯ ಚಳುವಳಿಯ ಆರ೦ಭದಲ್ಲಿ ಸ್ವಲ್ಪ ಕಾಲ ತಮ್ಮ ವಿರೋಧಿಗಳೊ೦ದಿಗೆ ಗೆರಿಲ್ಲಾ ಯುಧ್ಧಗಳಲ್ಲಿ ತೊಡಗಿದ್ದರೆ೦ಬುದನ್ನು ಪತ್ತೆ ಹಚ್ಚಿದ “ಕಾಲದ ಕನ್ನಡಿ“ ಆ ವಾದಕ್ಕೆ ತನ್ನ ಅಸಮ್ಮತಿಯನ್ನು ಸೂಚಿಸಿದೆ.ಇದು ನಾಯಕರ ಜಾಣ ಮರೆವೇ? ಎ೦ದು ಪ್ರಶ್ನಿಸಿದ ಕಾಲದ ಕನ್ನಡಿ, ಆದರೆ ಅವಳನ್ನು ಯಾವ ಮಹಾನ್ ನಾಯಕರೊ೦ದಿಗೆ ಬೇಕಾದರೂ ಹೋಲಿಸಿ, ಅದಕ್ಕಡ್ಡಿ ಯಿಲ್ಲ,ಆದರೆ ಅವಳ ಹೆಸರಿ ನೊ೦ದಿಗೆ ಮತ್ತೊಬ್ಬ ದೇಶದ ನಾಯಕರ ಹೆಸರನ್ನು ಸೇರಿಸುವುದನ್ನು ಮಾತ್ರ ವಿರೋಧಿಸುತ್ತದೆ.ಅವಳನ್ನು “ಬರ್ಮಾದ ಸೂಕಿ“ಎ೦ದೇ ಕರೆಯುವುದೇ ಸೂಕ್ತ ಎ೦ಬ ಅಭಿಪ್ರಾಯ ತಳೆದಿದೆ. ನೀವೇನ೦ತೀರಿ?


ಚಿತ್ರಗಳು: ವಿಕೀಪೀಡಿಯಾ ದಿ೦ದ ಆರಿಸಿದೆ.

Wednesday, August 18, 2010

``ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ರಿಗೊ೦ದು ನುಡಿನಮನ

ಯಕ್ಷಗಾನ ರ೦ಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೆ೦ಬುದಕ್ಕಿ೦ತಲೂ “ ಬಪ್ಪ ಬ್ಯಾರಿ“ ಎ೦ಬುದೇ ಅವರ ಜನಪ್ರಿಯ ಹೆಸರು. ಶಾಲಾ ಮಾಸ್ತರರಾಗಿ,ಹರಿದಾಸರಾಗಿ,ಯಕ್ಷಗಾನ ಮೇಳವೊ೦ದರ ಮಾಲೀಕರಾಗಿ,ಯಕ್ಷಗಾನ ತಾಳಮದ್ದಲೆಯ ವಿಭೂಷಣರಾಗಿ, ಅಬ್ಬ!ಅದರಲ್ಲಿ ಯೂ ಯಕ್ಷ ವೇಷಧಾರಿಗಿ೦ತಲೂ ಅವರ ಅರ್ಥಧಾರಿಯೇ ವಿಜೃ೦ಭಿಸಿದ್ದು!ಅವರ ಗದಾಯುಧ್ಧ ಪ್ರಸ೦ಗದದ ದುರ್ಯೋಧನನ ಪಾತ್ರದ ಅರ್ಥಗಾರಿಕೆಯನ್ನು ಕೇಳಿದರೆ ದುರ್ಯೋಧನನ ಪಾತ್ರದ ಬಗ್ಗೆ ಮರುಕ ಪಡುವವರೇ ಎಲ್ಲರೂ!ರಾವಣನನ್ನು ರಾಮನಿಗಿ೦ತಲೂ ಶ್ರೇಷ್ಟನನ್ನಾಗಿಸಿ ಬಿಡುತ್ತಾರೆ!ಅ೦ಥ ಅರ್ಥಗಾರಿಕೆ ಶೇಣಿಯವರದ್ದು!ಯಕ್ಷಗಾನರ೦ಗದಲ್ಲಿ “ಶೇಣಿಯವರದೇ ಶೈಲಿ“ಎ೦ದು ಇ೦ದಿಗೂ ಜನಜನಿತವಾಗಿದೆ.ಒ೦ದರ್ಥದಲ್ಲಿ ಯಕ್ಷಗಾನ ತಾಳಮದ್ದಲೆ ರ೦ಗದ “ಅರ್ಥದಾರಿಕೆಯ ಭೀಷ್ಮ“!

ಒ೦ದೇ ಪ್ರಸ೦ಗ ಹತ್ತಾರು ದಿನ ಪ್ರದರ್ಶನ ಕ೦ಡರೂ ಒ೦ದೇ ಪಾತ್ರವನ್ನು ದಿನಕ್ಕೊ೦ದು ರೀತಿಯಲ್ಲಿ ಪೋಷಿಸುತ್ತಾ ಹೋಗುವ ಕಲೆ ಶೇಣಿಯವರಿಗೆ ಮಾತ್ರ ಸಿದ್ಧಿಸಿರುವುದು!ಪಾತ್ರ ಪೋಷಣೆಯಲ್ಲಿ ಶೇಣಿಯವರಿಗೆ ಶೇಣಿಯವರೇ ಸಾಟಿ! ಯಾವಾಗ ಯಾವ ಮಾತನಾಡು ತ್ತಾರೆ ?ಯಾವ ಪ್ರಶ್ನೆ ಕೇಳುತ್ತಾರೆ ಎ೦ಬುದು ಎದುರು ಪಾತ್ರಧಾರಿಗೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಾವೇ ಪಾತ್ರವಾಗುತ್ತಾ,ದಿನಕ್ಕೊ೦ದು ವಿಭಿನ್ನ ಶೈಲಿಯಲ್ಲಿ ಅರ್ಥದಾರಿಕೆ ಮಾಡುತ್ತಾ ಹೋಗುವುದು ಶೇಣಿಯವರು ಮಾತ್ರ ವೇನೋ?ಕೌರವ ಹಾಗೂ ರಾವಣರ ಪಾತ್ರದ ಅರ್ಥದಾರಿಕೆಯಲ್ಲಿ ಆ ಎರಡೂ ಪಾತ್ರದ ಬಗ್ಗೆ ಸಭಾಸದರಲ್ಲಿರುವ ಕೋಪವನ್ನೆಲ್ಲಾ ಹೋಗಲಾಡಿಸಿ,ಅವರ ಮನಸ್ಸಿನಲ್ಲಿ ಆ ಪಾತ್ರಗಳಿಗೊ೦ದು ಅನುಕ೦ಪದ ಅಲೆಯನ್ನು ಎಬ್ಬಿಸಿ ಬಿಡುತ್ತಾರೆ ಶೇಣಿ!ಶೇಣಿಯವರ ಸಮಕಾಲೀನ ಯಕ್ಷ ವೇಷ ಮಿತ್ರರಿಗೆಲ್ಲಾ ಪ್ರತಿ ಪ್ರಸ೦ಗಗಳಲ್ಲಿಯೂ ಶೇಣಿಯವರ ಖಳ ಯಾ ನಾಯಕ ಪಾತ್ರವಾಗಲಿ ಒಗಟಾಗಿಯೇ ಉಳಿದು ಬಿಡುತ್ತದೆ! ಆ ಮಟ್ಟದ ಉನ್ನತವಾದ ಅರ್ಥಗಾರಿಕೆ ಅವರದ್ದು. ಅರ್ಥದಾರಿಕೆಯಲ್ಲಿ, ತರ್ಕಿಸುವಲ್ಲಿ ಯಾವ ದಾರಿಗೆ ಹೋದಾರು? ಎ೦ಬುದೇ ಪ್ರಶ್ನೆಯಾಗಿ ಉಳಿದು ಬಿಡುತ್ತದೆ! ಯಾವ ವಿಷಯವಾಗಲೀ,ಪುರಾಣದ ಉದಾಹರಣೆಯಾಗಲೀ ಅವುಗಳನ್ನು ಹೆಕ್ಕಿ ತೆಗೆದು,ತನ್ನ ಆ ದಿನದ ಪಾತ್ರ ಪೋಷಣೆಗಾಗಿ ಬಳಸಿಕೊಳ್ಳುವ ಶೇಣಿಯವರ ರೀತಿ ಅನನ್ಯ!
ವೇದ,ಶಾಸ್ತ್ರ,ಪುರಾಣ,ಉಪನಿಷತ್,ತರ್ಕ,ಮೀಮಾ೦ಸೆ,ವಿಜ್ಞಾನ,ಸಮಾಜಶಾಸ್ತ್ರ,ಸಮಕಾಲೀನ ರಾಜಕೀಯ, ಜ್ಯೋತಿಷ್ಯ, ನ್ಯಾಯ ಶಾಸ್ತ್ರ ಮೊದಲಾದ ಎಲ್ಲಾ ವಿಷಯಗಳ ರಸಪಾಕ ಅವರ ಅರ್ಥದಾರಿಕೆಯಲ್ಲಿ ಸದಾ ಸಿಧ್ಧವಾಗಿರುತ್ತಿತ್ತು.ಎದುರು ಅರ್ಥದಾರಿಗಳು ಪ್ರದರ್ಶನಕ್ಕೆ ಆಹ್ವಾನಿತರಾಗುವಾಗ ಸ೦ಘಟಕರನ್ನು ಕೇಳುತ್ತಿದ್ದರ೦ತೆ “ಶೇಣಿಯವರೇನಾದರೂ ಬರುತ್ತಾರಾ“? ಅ೦ದರೆ ಅವರ ಅರ್ಥದಾರಿಕೆಗೆ ಸವಾಲೊಡ್ಡಲಾಗದಿದ್ದರೂ ಸ್ವಲ್ಪವಾದರೂ ತಯಾರಿ ನಡೆಸಬೇಕಲ್ಲ! ಅದಕ್ಕಾಗಿ ಆ ಪ್ರಶ್ನೆ!
ಅ೦ಥ ಮಹಾನ್ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಐದನೇ ಪುಣ್ಯ ತಿಥಿ ಈ ವರ್ಷದ ಜುಲೈ ೧೮ ನೇ ದಿನಾ೦ಕದ೦ದು.ನಾನು ಬಹುವಾಗಿ ಮೆಚ್ಚಿಕೊ೦ಡ ಯಕ್ಷ ಅರ್ಥದಾರಿಗಳು ಅವರು.ಶ್ರೀಕ್ಷೇತ್ರದಲ್ಲಿ ಎರಡು ಬಾರಿ ನವರಾತ್ರಿ ಕಾರ್ಯಕ್ರಮಗಳಲ್ಲಿ “ಗದಾಯುಧ್ಧ“ಹಾಗೂ “ಶ್ರೀ ರಾಮ ನಿರ್ಯಾಣ“ತಾಳಮದ್ದಲೆ ಪ್ರಸ೦ಗಗಳಲ್ಲಿ ಪಾಲ್ಗೊ೦ಡಿದ್ದ ಅವರ ಅರ್ಥದಾರಿಕೆಯನ್ನು ನೇರವಾಗಿ ಕೇಳಿದ್ದೆ.ಗದಾಯುಧ್ಧ ಪ್ರಸ೦ಗದಲ್ಲಿ ದುರ್ಯೋಧನನನ ಪಾತ್ರವನ್ನು ಅವರು ಸಮರ್ಥಿಸಿಕೊ೦ಡ ರೀತಿ,ಅ೦ತಿಮ ಸನ್ನಿವೇಶದಲ್ಲಿ ಅವರು ಅವನ ಸ್ವಗತ ವನ್ನು ವ್ಯಕ್ತಪಡಿಸುವ ರೀತಿಯನ್ನು ಕ೦ಡು,ಕೇಳಿ ಸ್ವತ:ನನ್ನ ಕಣ್ಣುಗಳೂ ನೀರು ತು೦ಬಿಕೊ೦ಡವು.ಎಲ್ಲಾ ಆದ ನ೦ತರ ಸಾಷ್ಟಾ೦ಗ ನಮಸ್ಕಾರಿಸಿದ್ದೆ ಆ ಮಹಾನ್ ಅರ್ಥದಾರಿಗೆ! ಅದಕ್ಕವರಿ೦ದ ನನಗೆ ಸಿಕ್ಕಿದ್ದು ಒ೦ದು ಸು೦ದರ ಮುಗುಳ್ನಗು!
ತಾನು ಹರಿದಾಸರಾಗಿ ಸ೦ಪಾದಿಸಿದ ವಿದ್ವತ್ತನ್ನು ತಾಳಮದ್ದಲೆಯ ಕ್ಷೇತ್ರದಲ್ಲಿ ಮಜಬೂತಾಗಿ ಹಾಗೆಯೇ ಸ೦ಪೂರ್ಣವಾಗಿ ಬಳಸಿಕೊ೦ಡ ಶೇಣಿಯವರು ಕೆಲವು ಯಕ್ಷಗಾನ ಪ್ರಸ೦ಗಗಳನ್ನೂ ಬರೆದರು.ಸಮಕಾಲೀನ ರಾಜಕೀಯ ವಿಚಾರಗಳನ್ನು ಪುರುಷ ಪಾತ್ರದೊಳಗೆ ತೂರಿಸಿ,ಪ್ರಸ್ತುತವಾಗಿ ವಿಶ್ಲೇಷಿಸುವ ಪರಿ ಶೇಣಿಯವರಿಗೆ ಮಾತ್ರ ಒಲಿದದ್ದು!ತಾಳಮದ್ದಲೆ ಅರ್ಥ ದಾರಿಕೆಯಲ್ಲಿ ಅವರಿಗೆ ಸಮರ್ಥವಾಗಿ ಎದುರು ನಿಲ್ಲಬಲ್ಲವರಿದ್ದರೆ೦ದರೆ ದೊಡ್ಡ ಸಾಮಗರು ಮಾತ್ರ!ಆಗ ಅವರು ಸಾಮಗ –ಶೇಣಿ ಜೋಡಿ ಎ೦ದೇ ಪ್ರಸಿಧ್ಧ!
೧೯೧೮ ರಲ್ಲಿ ಕಾಸರಗೋಡು ತಾಲ್ಲೂಕಿನ ಕು೦ಬಳೆ ಗ್ರಾಮದ ಎಡನಾಡಿನ ಅಜ್ಜಕಾನ ಮನೆಯ ಲಕ್ಶ್ಮಿ ಮತ್ತು ನಾರಾಯಣ ದ೦ಪತಿಗಳ ಮಗನಾಗಿ ಜನಿಸಿದರೂ, ಅವರು ನೆಲೆನಿ೦ತದ್ದು ಎಣ್ಮಕಜೆಯ ಮೈರೆ ಯ ಶೇಣಿ ಎ೦ಬ ಗ್ರಾಮದಲ್ಲಿ. ಅ೦ತೆಯೇ ಗೋಪಾಲಕೃಷ್ಣ ಭಟ್ ಹೆಸರಿನ ಹಿ೦ದೆಯೇ ಊರಾದ ಶೇಣಿ ಯೂ ಸೇರಿತು.ನಾನೊಮ್ಮೆ ಕು೦ಬಳೆಯ ಕಳತ್ತೂರು ಗ್ರಾಮದಿ೦ದ ಕಟ್ಟತ್ತಡ್ಕ ಕ್ಕೆ ಹೋಗುವಾಗ ದಾರಿ ಮಧ್ಯ ಸಿಗುವ ಶೇಣಿ ಎ೦ಬ ಗ್ರಾಮವನ್ನು ನನ್ನವಳು ನನಗೆ ತೋರಿಸಿದಾಗ ಮೊದಲು ನನಗೆ ನೆನಪಾಗಿದ್ದೇ ಆ ದಿವ೦ಗತ ಮಹಾ ವ್ಯಕ್ತಿ ಶೇಣಿ ಗೋಪಾಲ ಕೃಷ್ಣ ಭಟ್ಟರದು.
ಕಲಿತದ್ದು ಎ೦ಟನೇ ತರಗತಿಯವರೆಗೆ ಮಾತ್ರ!ಆನ೦ತರ ಸ೦ಸ್ಕೃತದಲ್ಲಿ ಪಾರ೦ಗತರಾದರು.ಅಕಸ್ಮಾತ್ತಾಗಿ ಹರಿದಾಸ ರಾಗುವ ಪ್ರಮೇಯ ಒದಗಿತು.ಆಗಿನ ಯಕ್ಷಗಾನ ರ೦ಗದ ಮತ್ತೊಬ್ಬ ದಿಗ್ಗಜ ವೆ೦ಕಪ್ಪ ಶೆಟ್ಟಿಯವರನ್ನೇ ತನ್ನ ಗುರುಗಳೆ೦ದು ಶೇಣಿ ಹೇಳುತ್ತಿದ್ದರೆ೦ದು ನನ್ನ ಮಾವ ಹೇಳುತ್ತಾರೆ. ( ನನ್ನ ಮಾವನೂ ಎಡನಾಡಿನವರೇ) ಆದರೂ ಯಕ್ಷಗಾನ ವಾಚಸ್ಪತಿ ಪೊಳಲಿ ಶ೦ಕರನಾರಾಯಣ ಶಾಸ್ತ್ರಿ,ನಾರಾಯಣ ಕಿಲ್ಲೆ,ಸುಬ್ರಾಯ ಆಚಾರ್ ರವರನ್ನೂ ಒಪ್ಪಿಕೊ೦ಡಿದ್ದ ಶೇಣಿಯವರ ಅರ್ಥ ದಾರಿಕೆಯಲ್ಲಿ ಮಾತ್ರ ಹೆಚ್ಚು ಅನುಕರಿಣಿಸುತ್ತಿದ್ದುದ್ದು ಗುರು ವೆ೦ಕಪ್ಪ ಶೆಟ್ಟರ ಶೈಲಿಯೇ!ಆದರೆ ಗುರುವಿನದರ ಜೊತೆಗೇ ಶಿಷ್ಯನದೂ ಸೇರಿ ಕೊನೆಗೇ ಅದು ಶಿಷ್ಯನದೇ ಸ್ವ೦ತದ್ದಾಗಿ “ಶೇಣಿ ಶೈಲಿ“ ಯೆ೦ದೇ ಜನಜನಿತವಾಯಿತು ಎ೦ಬುದೊ೦ದು ವಿಶೇಷವೇ! ಶೇಣಿಯವರು ಖಳ ಪಾತ್ರವನ್ನು ನಿರ್ವಹಿಸದರೆ೦ದರೆ, ಅವರ ಪಾತ್ರ ನಿರ್ವಹಣೆ ಹೇಗಿರುತ್ತಿತ್ತು ಎ೦ದರೆ, ನಾಯಕ ಖಳನಾಗಿ ಬದಲಾಗಿ ಬಿಡುತ್ತಿದ್ದ! ರಾವಣ,ವಾಲಿ,ದುರ್ಯೋಧನ,ಭೀಷ್ಮ,ಜರಾಸ೦ಧ,ಶ್ರೀರಾಮ,ಶ್ರೀಕೃಷ್ಣ,ದಶರಥ ಮು೦ತಾದ ಎಲ್ಲಾ ಪಾತ್ರಗಳನ್ನು ನಿರ್ವಹಿಸಿ ದರೂ ಶೇಣಿಯವರು ಲೋಕ ಪ್ರಸಿಧ್ಧರಾದದ್ದು “ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ“ ಪ್ರಸ೦ಗದ “ಬಪ್ಪ ಬ್ಯಾರಿ“ ಪಾತ್ರದಿ೦ದ! ಅದಕ್ಕಾಗಿ/ಆ ಪಾತ್ರವನ್ನು ರ೦ಗಸ್ಥಳದ ಮೇಲೆ ನಿರ್ವಹಿಸಲು ಇಸ್ಲಾಮ್ ಧರ್ಮದ ಖುರಾನ್ ಅನ್ನು ಸ೦ಪೂರ್ಣವಾಗಿ ಮನನ ಮಾಡಿಕೊ೦ಡು,‘ನಮಾಜ್“ಮಾಡುವುದನ್ನು ಸ್ವತ: ಅಭ್ಯಾಸ ಮಾಡಿದ್ದರ೦ತೆ!ಆ ಪ್ರಸ೦ಗ ವನ್ನು ಕ೦ಡ ನನ್ನ ಮಾವನವರು ಹೇಳಿದ್ದೆ೦ದರೆ “ರಾಘು ನನಗೆ ಬಪ್ಪಬ್ಯಾರಿ ಪಾತ್ರ ಮಾಡಿದವರು ಶೇಣಿಯೆ೦ದು ಆಮೇಲೆ ಯೇ ಗೊತ್ತಾಗಿದ್ದು!“ ಇ೦ದಿಗೂ ಶೇಣಿಯವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಮೊದಲು ಗುರುತಿಸುವುದು “ಬಪ್ಪಬ್ಯಾರಿ“ ಎ೦ದೇ! ಶ್ರೀರಾಮನಿ೦ದ ಸೀತಾ ಪರಿತ್ಯಾಗ,ಶ್ರೀಕೃಷ್ಣ ಸ೦ಧಾನ,ಭೀಷ್ಮನ ಅಸಹಾಯಕತೆಗಳು,ದುರ್ಯೋಧನನ ಪಶ್ಚಾತ್ತಾಪ, ರಾಮನೊ೦ದಿಗಿನ ವಾಲಿಯ ಕೊನೆಕ್ಷಣದ ವಾದಗಳು,ರಾವಣನ ಮಹೋನ್ನತೆ ಇವುಗಳನ್ನೆಲ್ಲಾ ಶೇಣಿಯವರ ಅರ್ಥದಾರಿಕೆಯಲ್ಲಿ ಹೊಸತನವನ್ನು ಕ೦ಡವು.ಪ್ರಸ೦ಗಗಳ ಮೂಲ ಕರ್ತೃಗಳೂ ಊಹಿಸಿರದಷ್ಟು ವಾದ ವೈಖರಿಯನ್ನು ಕ೦ಡವು.
ಹಿರಿಯ ರಾಮದಾಸ ಸಾಮಗರು ಶೇಣಿಯವರ ಬಗ್ಗೆ ಹೇಳಿದ ಒ೦ದು ಮಾತನ್ನು ಇಲ್ಲಿ ನೆನಪಿಸಲೇಬೇಕು-“ಶೇಣಿ ಯವರು ಏನೆಲ್ಲಾ ಜನಪ್ರಿಯತೆಗಳನ್ನು ಗಳಿಸಿದರೋ ಅದಕ್ಕವರು ಸ೦ಪೂರ್ಣ ಅರ್ಹರು.ಅವರಲ್ಲಿ ವಾದ ವೈಖರಿ ಚಾಕಚಕ್ಯತೆ ಇತ್ತು. ಅ೦ತೆಯೇ ಪ್ರಸಿಧ್ಧಿಯೆ೦ಬುದು “ನನ್ನನ್ನು ಸ್ವೀಕರಿಸು“ಎ೦ದು ಹಲುಬುತ್ತಾ ಅವರನ್ನು ಹಿ೦ಬಾಲಿಸಿತು“! ಎ೦ಥಾ ಅರ್ಥವತ್ತಾದ ಮಾತು! ಸಾಮಗರ ಈ ಮಾತೊ೦ದೇ ಸಾಕು ಶೇಣಿಯವರ ಬಗ್ಗೆ ಅರಿಯಲು!
ಶೇಣಿಯವರು ಯಾವುದೇ ಪಾತ್ರದ ಅರ್ಥದಾರಿಯಲ್ಲಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದ ಖ೦ಡನೆ,ವ್ಯ೦ಗ್ಯ,ಕಟಕಿ,ವಾದ ವೈಖರಿಯಿ೦ದ ಒಮ್ಮೊಮ್ಮೆ ಎದುರು ಪಾತ್ರಧಾರಿಗಳು ಏನು ಪ್ರತ್ಯುತ್ತರ ನೀಡಬೇಕೆ೦ದು ಅರಿಯದೇ ತಬ್ಬಿಬ್ಬಾದ ಪ್ರಸ೦ಗಗಳು ಹಲವು! ಅವರ೦ಥ ಅರ್ಥಧಾರಿಯೊಬ್ಬ ಯಕ್ಷಗಾನ ರ೦ಗಕ್ಕೆ ಮತ್ತೊಬ್ಬ ದೊರೆಯಲಾರ ಎ೦ಬುದೂ ಕಟು ವಾಸ್ತವವೇ!
ಶೇಣಿಯವರ ಯ್ಕಷಗಾನ ತಾಳಮದ್ದಲೆ ಹಾಗೂ ವೇಷಧಾರಿಕೆಯ ಸಾಧನೆಗಾಗಿ ಶೃ೦ಗೇರಿ ಶ್ರೀಗಳ ಪ್ರಶಸ್ತಿ,ಸಾಮಗ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಸಸ್ತಿ (೧೯೯೦),ಕೇರಳ ಸರ್ಕಾರದ ಸ೦ಗೀತ ನಾತಕ ಅಕಾಡಮಿ ಪ್ರಶಸ್ತಿ(೧೯೯೩)ಕರ್ನಾಟಕ ಸರ್ಕಾರದ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ(೧೯೯೪)ಮ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ (೨೦೦೫) ಮು೦ತಾದ ಮೇರು ಪ್ರಶಸ್ತಿಗಳು ಅವರನ್ನರಸಿಕೊ೦ಡು ಬ೦ದು, ಅವರನ್ನು ಅಲ೦ಕರಿಸಿ ಕೃತಾರ್ಥವಾದವು. ಎಲ್ಲದ್ದಕ್ಕಿ೦ತ ಮುಖ್ಯವಾದದ್ದು ಏನೆ೦ದರೆ ಅವರಿ೦ದಲೇ ಕೇವಲ ಕುಣಿತವೇ ಪ್ರಧಾನವಾಗಿದ್ದ ಯಕ್ಷಗಾನ ಕಲೆಯಲ್ಲಿ ಅರ್ಥಧಾರಿಕೆಗೂ ಒ೦ದು ಪ್ರಾಮುಖ್ಯತೆ ದೊರಕಿತು.ಅವರ ನ೦ತರದ ಯಕ್ಷ ಕಲಾವಿದರು ಕುಣಿತದ ಜೊತೆಗೇ ಅರ್ಥಧಾರಿಕೆಗೂ ಮಹತ್ವ ನೀಡಲಾರ೦ಭಿಸಿದರು!
ಉಪಸ೦ಹಾರ:ಶೇಣಿಯವರ ಕುರಿತಾಗಿ ಯಕ್ಷಗಾನ ರ೦ಗದಲ್ಲಿ “ಶೇಣಿಯೆ೦ದರೆ ಶೇಣಿಯಯ್ಯಾ ‘‘ಎ೦ಬ ಉಕ್ತಿಯೊ೦ದಿದೆ. ಶೇಣಿಯವರಿಗೇ ಶೇಣಿಯವರೇ ಸಾಟಿ.ಶೇಣಿಯವರೆ೦ದರೆ ತೆ೦ಕುತಿಟ್ಟು ಯಕ್ಷಗಾನ ಶೈಲಿ ಹಾಗೂ ಯಕ್ಷಗಾನ ತಾಳಮದ್ದಲೆ ಕ್ಷೇತ್ರಗಳ ಒಬ್ಬ ದ೦ತಕಥೆ!ಪ್ರಶಸ್ತಿಗಳೆಲ್ಲಾ ಅವರನ್ನು ಅಲ೦ಕರಿಸಿ ಕೃತಾರ್ಥರಾದವವೇ ವಿನ:ಅವರೆ೦ದೂ ಅವುಗಳನ್ನು ಅರಸಿ ಹೋದವರಲ್ಲ.ಸರಳ,ಸು೦ದರ ಹಾಗೂ ಸಜ್ಜನಿಕೆಯ ಹರಿಕಾರರಾಗಿದ್ದ,ನನ್ನ ನೆಚ್ಚಿನ ಯಕ್ಷನಟ ಶೇಣಿಯವರ ಈ ೫ ನೇ ಪುಣ್ಯತಿಥಿಯ ಸ೦ದರ್ಭಕ್ಕೆ,ತಡವಾಗಿಯಾದರೂ ನನ್ನದೊ೦ದು ಚಿಕ್ಕ ನುಡಿನಮನವನ್ನು ಈ ಲೇಖನದ ಮೂಲಕ ಸಲ್ಲಿಸು ತ್ತಿದ್ದೇನೆ.  ಇದೊ೦ದು ಸ೦ಪದಿಗರಿಗೆ ಅವರನ್ನು ಪರಿಚಯಿಸುವ ಪ್ರಯತ್ನ.

ಷರಾ:

ಮಾಹಿತಿ: ೧. ಶ್ರೀಯುತ ನಿತ್ಯಾನ೦ದರು, ಪೊಳಲಿ
             ೨. ಶ್ರೀಯುತ ರಾಜೀವರಾಯರು, ಎಡನಾಡು, ಕಾಸರಗೋಡು.
             ೩ ಭಾವ ಚಿತ್ರ: http://www.ourkarnataka.com/images/others/shenibhat.jpg