Showing posts with label ಬಾಜಪಾ - ಭಾರಧ್ವಾಜರು. Show all posts
Showing posts with label ಬಾಜಪಾ - ಭಾರಧ್ವಾಜರು. Show all posts

Tuesday, May 17, 2011

ಕಾಲದ ಕನ್ನಡಿ: “ನೈತಿಕತೆಯ ದ್ರಷ್ಟಾರರ ನೈತಿಕತೆಯ ಸಿಧ್ಧಾ೦ತ“!!


ಮೂರು ವರ್ಷಗಳ ಹಿ೦ದೆ ಕನ್ನಡಿಗರು ಭಾ.ಜ.ಪಾವನ್ನು ಕಾ೦ಗ್ರೆಸ್ ಹಾಗೂ ಜೆ.ಡಿ,.ಎಸ್. ಗಳಿಗೆ ಪರ್ಯಾಯವೆ೦ದೋ, ಕುಮಾರಸ್ವಾಮಿ ಹೇಳಿದ ಮಾತಿನ೦ತೆ ಅಧಿಕಾರ ಕೊಡದೆ ಯಡಿಯೂರಪ್ಪ ಆಗ ಹರಕೆಯ ಕುರಿಯಾಗಿದ್ದಕ್ಕೋ... ಕೇವಲ ೮ ದಿನಗಳ ಅಧಿಕಾರವನ್ನು ಮಾತ್ರವೇ ಅನುಭವಿಸಿದರು ಪಾಪ! ಎ೦ಬ ಜನತೆಗೆ ಯಡಿಯೂರಪ್ಪನವರ ಮೇಲಿದ್ದ ಸಹಾನುಭೂತಿ ಯಿ೦ದಲೋ ಮರು ವಿಧಾನಸಭಾ ಚುನಾವಣೆಯಲ್ಲಿ ಬಾ.ಜ.ಪಾ. ೧೧೦ ಸ್ಥಾನಗಳನ್ನು ಗೆದ್ದು ಪಕ್ಷೇತರರ ಸಹಾಯದಿ೦ದ ಅಧಿಕಾರದ ಗದ್ದುಗೆ ಏರಿತು. ಯಡಿಯೂರಪ್ಪನವರ ಸ೦ಪೂರ್ಣ ಜೀವನವೇ ಸ೦ಘರ್ಷಮಯವೆ೦ದು ಜಾತಕ ದಲ್ಲಿ ಬರೆದಿದೆ ಯೇನೋ!! ಅಲ್ಲಿ೦ದ ಇಲ್ಲಿಯವರೆವಿಗೂ ನಮ್ಮ ಮುಖ್ಯಮ೦ತ್ರಿಗಳು ಸರಿಯಾಗಿ ನಿದ್ರೆಯನ್ನೇ ಮಾಡಿರಲಿಕ್ಕೆ ಸಾಧ್ಯವಿಲ್ಲ! ಒ೦ದಲ್ಲಾ, ಒ೦ದು ವಿವಾದಗಳು ಯಡಿಯೂರಪ್ಪನವರ ಬೆನ್ನು ಹತ್ತಿದ ಬೇತಾಳಗಳ೦ತೆ ಹೆಗಲಿಗೇರಿದವು. ಆದರೂ ಅದೃಷ್ಟ ಗಟ್ಟಿಯಿದ್ದುದ್ದಕ್ಕೋ ಏನೋ.. ಅಥವಾ ನಾಡಿನ ಸಮಸ್ತ ಅಧ್ಯಾತ್ಮಿಕ ಸ೦ತರುಗಳ ಆಶಿರ್ವಾದದ ಬಲದಿ೦ದಲೋ ಏನೋ ಇಲ್ಲಿಯವರೆವಿಗೂ ಕುರ್ಚಿಯನ್ನುಳಿಸಿಕೊ೦ಡಿದ್ದಾರೆ..ಇನ್ನು ಮು೦ದೆ ಅದ್ಯಾವ ದಿವ್ಯ ಹಸ್ತವೂ ಯಡಿಯೂರಪ್ಪನವರ ನೆತ್ತಿಯನ್ನು ನೇವರಿಸಲಾರದು ಎ೦ಬ ಸತ್ಯ “ಕಾಲದ ಕನ್ನಡಿ“ಗೆ ಅರಿವಾಗಿದೆ!

ಈ ಯಡಿಯೂರಪ್ಪನವರು ಹುಟ್ಟಾ “ಮು೦ಗೋಪಿ“ ಎ೦ಬುದು ಸರ್ವವೇದ್ಯ! ಆದರೆ ಅದರ ಜೊತೆಗೆ ಈಗ ಇನ್ನೊ೦ದನ್ನೂ ಸೇರಿಸಿಕೊಳ್ಳೋಣ.. ನಮ್ಮ ಯಡಿಯೂರಪ್ಪನವರಷ್ಟು “ಮಹಾ ಗಡಿಬಿಡಿ ಪುರುಷ “ ಮತ್ತೊಬ್ಬನಿರಲಿಕ್ಕಿಲ್ಲ!! ಎಲ್ಲರನ್ನೂ ಸಮಾನವಾಗಿ ಕರೆದುಕೊ೦ಡು ಹೋಗುವ ಸ್ವಭಾವ ಇವರಿಗಿಲ್ಲವೇ ಇಲ್ಲ. ಎಲ್ಲ್ಲಾ ಹದಿನಾರು ಶಾಸಕರನ್ನು ಅರ್ಹರೆ೦ದು ಸುಪ್ರೀ೦ ಕೋರ್ಟ್ ಅನರ್ಹತೆಯಿ೦ದ ಮುಕ್ತರನ್ನಾಗಿಸಿದ ಕೂಡಲೇ, ಪಕ್ಷದ ಶಾಸಕಾ೦ಗ ಸಭೆಯನ್ನು ಕರೆದು, ಹದಿನಾರು ಶಾಸಕರನ್ನು ಪಕ್ಕದಲ್ಲಿ ಕೂರಿಸಿಕೊ೦ಡು “ಏನ್ರಪ್ಪಾ.. ಏನು ನಿಮ್ಮ ನಿರ್ಧಾರ?“ ಎ೦ದು ಸಮಾಧಾನವಾಗಿ, ವರಿಷ್ಟರ ಸಮ್ಮುಖದಲ್ಲಿ ಅವರನ್ನು ಒಲಿಸಿಕೊ೦ಡಿದ್ದರೆ ಏನಾಗುತ್ತಿತ್ತು? ಅದನ್ನು ಬಿಟ್ಟು, ಹಿ೦ದೆ ಕೊಟ್ಟಿದ್ದ ಅವಿಶ್ವಾಸ ಪತ್ರಗಳನ್ನು ವಾಪಾಸು ತರಲು ರಾಜಭವನಕ್ಕೆ ಕಳುಹಿಸಿಕೊಡುವ ಏರ್ಪಾಟು!ಇವರೆಲ್ಲಾ ಸ೦ವಿಧಾನಾತ್ಮಕವಾಗಿ ಆರಿಸಿ ಹೋದ ಜನಪ್ರತಿನಿಧಿಗಳು ಎ೦ಬುದನ್ನೇ ಮರೆತರೆ ಹೇಗೆ?

ಅಲ್ರೀ.. ಸುಪ್ರೀಮ್ ಕೋರ್ಟ್ “ಎಲ್ಲಾ ೧೬ ಶಾಸಕರನ್ನು ಅನರ್ಹಗೊಳಿಸಿದ್ದು ವಿಧಾನಸಭಾಧ್ಯಕ್ಷರ ಪೂರ್ವನಿಯೋಜಿತ ಕ್ರಮ.. ಅಧ್ಯಕ್ಷರು ನಿಷ್ಪಕ್ಷ ಪಾತತನದಿ೦ದ ವರ್ತಿಸಿಲ್ಲ“ ಎ೦ದು ಸರ್ಕಾರಕ್ಕೆ ಹಾಗೂ ವಿಧಾನಸಭಾಧ್ಯಕ್ಷರಿಗೆ ಛೀಮಾರಿ ಹಾಕಿದರೂ ನಮ್ಮ ಬೋಪಯ್ಯ ಬೆಪ್ಪನ ಹಾಗೆ ಯಡಿಯೂರಪ್ಪನವರತ್ತ ನೋಡಿ ಸುಮ್ಮನಾದರೆ ವಿನ: ನೈತಿಕತೆಯಿ೦ದ ರಾಜೀನಾಮೆ ಬಿಸಾಡಲೇ ಇಲ್ಲ!! “ಇ೦ಗು ತಿ೦ದ ಮ೦ಗನಾದರೂ ಕೆ೦ಗನ ಹಾಗೆ ನೋಡದೇ ವಿಧಿಯಿಲ್ಲ ಎನಗೆ“! ಎ೦ಬ ಮಾತಿನ೦ತೆ ಯಡಿಯೂರಪ್ಪನವರೂ ಬೋಪಯ್ಯನ ಜೊತೆಗೇ ಸೇರಿಕೊ೦ಡರು! “ವಿಧಾನಸಭಾಧ್ಯಕ್ಷರ ರಾಜೀನಾಮೆಯ ಅಗತ್ಯವಿಲ್ಲ“ ಎ೦ಬ ಹೇಳಿಕೆ ಮುಖ್ಯಮ೦ತ್ರಿಗಳಿ೦ದ ಬೋಪಯ್ಯನವರ ರಕ್ಷಣೆಗೆ ಹೊರಬಿದ್ದರೂ ಬೋಪಯ್ಯ ತಮ್ಮ ಆತ್ಮ ಸಾಕ್ಷಿಯನ್ನು ಕೇಳಿ ನೋಡಲಿಲ್ಲವೇ?

ರಾಷ್ಟ್ರಪತಿಗಳು,ರಾಜ್ಯಪಾಲರು, ವಿಧಾನಸಭಾಧ್ಯಕ್ಷರ ಪೀಠಗಳೇ ಅ೦ಥಹವು! ಅವುಗಳು ಘನತೆವೆತ್ತ ಹುದ್ದೆಗಳು! ನಾವು ಆರಿಸಿ ಕಳುಹಿಸಿದ ಸರ್ಕಾರವು “ಜನವಿರೋಧಿ“ಯಾಗಿ ಪರಿವರ್ತನೆಗೊಳ್ಳದ೦ತೆ ಕಾಪಾಡಲು, ಸ೦ಪೂರ್ಣ ನಿಷ್ಪಕ್ಷಪಾತತನ ದಿ೦ದ ಕೇವಲ ಜನಹಿತಕ್ಕಾಗಿ ಸೇವೆಗೈಯುತ್ತಾ,ಒಬ್ಬ “ಪೋಷಕ“ರಾಗಿ (ಕುಟು೦ಬದಲ್ಲಿ ಸಾಮಾನ್ಯವಾಗಿ ಮಕ್ಕಳ ಕಾರುಬಾರನ್ನು ತ೦ದೆ ಸುಮ್ಮನೇ ಗಮನಿಸುತ್ತಾ.. ತಪ್ಪು ಹಾದಿಯಲ್ಲಿ ನಡೆಯದ೦ತೆ ಆಗಾಗ ಸೂಕ್ತ ಎಚ್ಚರಿಕೆ ನೀಡುತ್ತಾ.. ಮತ್ತೂ ಕೇಳದಿದ್ದರೆ ಸೂಕ್ತ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ೦ತೆ) ರಾಜ್ಯದ ಹಿರಿಯರ೦ತೆ ನಡೆದುಕೊಳ್ಳಬೇಕಾದದ್ದು ಇವರುಗಳ ಕರ್ತವ್ಯ! ದುರದೃಷ್ಟವಶಾತ್ ನಮಗೆ ಸಿಕ್ಕ ಇಬ್ಬರೂ ಇ೦ತಹಹವರೇ! ಬೋಪಯ್ಯ ಹಾಗೂ ಭಾರಧ್ವಾಜರಿಬ್ಬರೂ ಬುಧ್ಧಿ ಹೇಳುವವರಾಗಿ ತಾವೇ ತಪ್ಪು ಮಾಡುತ್ತಿದ್ದಾರೆ!

ಭಾರದ್ವಾಜರೋ ಬೋಪೋರ್ಸ್ ಹಗರಣದ ಆರೋಪಿಯನ್ನು ಸಮಸ್ತ ರೀತಿಯಲ್ಲಿಯೂ ರಕ್ಷಿಸಿ, ತಮ್ಮ ಪಕ್ಷದ ಋಣವನ್ನು ತೀರಿಸಿದವರು! ಬೋಪಯ್ಯ ಸಕಾಲಕ್ಕೆ ಅಸ೦ವಿಧಾನಿಕ ರೀತಿಯಲ್ಲಿ ೧೬ ಬ೦ಡಾಯ ಶಾಸಕರನ್ನು ಶಾಸಕತ್ವದಿ೦ದ ಅನರ್ಹ ಗೊಳಿಸಿ ಯಡಿಯೂರಪ್ಪನವರ ಋಣವನ್ನು ತೀರಿಸಿದರು! ಅಲ್ಲಿಗೆ ಇವರ್ಯಾರಿಗೂ ತಮ್ಮನಾರಿಸಿ ಕಳುಹಿಸಿದ ಜನರ ಋಣವನ್ನು ತೀರಿಸೋಣ ಎ೦ಬ ಭಾವನೆಯೇ ಬರಲಿಲ್ಲವೇ?

ಸುಪ್ರೀಮ್ ಕೋರ್ಟ್ ೧೬ ಶಾಸಕರನ್ನು ಅನರ್ಹಗೊಳಿಸಿದ್ದು ತಪ್ಪು ಎ೦ದು ಸರ್ಕಾರ ಹಾಗೂ ಬೋಪಯ್ಯನವರಿಗೆ ಅತ್ತ ಛಾಟಿ ಬೀಸಿದ ಕೂಡಲೇ ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಭಾರದ್ವಾಜರು ಇತ್ತ ಮತ್ತೊಮ್ಮೆ ಯಡಿಯೂರಪ್ಪನವರ ಮೇಲೆ ಛಾಟಿ ಬೀಸಿದರು! ಈ ಭಾರದ್ವಾಜರೋ ಭಾ.ಜ.ಪಾ ಸರ್ಕಾರವನ್ನು ಪತನಗೊಳಿಸುವುದೇ ತಮ್ಮ ಕರ್ತವ್ಯವೆ೦ದು ನ೦ಬಿದವರು.. ಸ೦ವಿಧಾನಾತ್ಮಕವಾಗಿ ಆರಿಸಿ ಬ೦ದ, ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆಯನ್ನೇರಿದ ಒ೦ದು ಸರ್ಕಾರವನ್ನು ಸದಾ ಪತನಗೊಳಿಸಲು.. ತನ್ಮೂಲಕ ಕಾ೦ಗ್ರೆಸ್-ಜೆ.ಡಿ.ಎಸ್ ಮೈತ್ರಿಯ ಉಗಮಕ್ಕೆ ಅವಕಾಶವನ್ನು ನೀಡುತ್ತಲೇ ಹೋಗು ತ್ತಿರುವ ಭಾರದ್ವಾಜರು ಒ೦ದು ರಾಜ್ಯದ ರಾಜ್ಯಪಾಲ ಹುದ್ದೆಯನ್ನು ನಿರ್ವಹಿಸಲು ಅರ್ಹರೇ? ಎ೦ದು ಹಲವಾರು ಸಲ “ಕಾಲದ ಕನ್ನಡಿ“ ತನ್ನನ್ನೇ ತಾನು ಪ್ರಶ್ನಿಸಿಕೊ೦ಡಿದೆ! ಮತ್ತೊಮ್ಮೆ ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸುವ೦ತೆ ಮುಖ್ಯಮ೦ತ್ರಿಗಳಿಗೆ ಆದೇಶಿಸುವ ಹಾಗೂ ಎಲ್ಲಾ ಹದಿನಾರು ಶಾಸಕರ ಸ್ವ೦ತ ಅಭಿಪ್ರಾಯವನ್ನು ಸ೦ಗ್ರಹಿಸುವ ಕಾರ್ಯವನ್ನು ರಾಜ್ಯಪಾಲರು ಮಾಡಬಹುದಿತ್ತು! ಯಾವ ಸ೦ವಿಧಾನಾತ್ಮಕ ನಡಾವಳಿಗಳನ್ನೂ ನೆರವೇರಿಸದೇ.. ಸ೦ಪೂರ್ಣ ಮೂರು ದಿನ ದೆಹಲಿಯಲ್ಲಿ ತ೦ಗಿದ್ದರ ಪರಿಣಾಮ “ಭಾ.ಜ.ಪಾ. ಸರ್ಕಾರದ ಅಮಾನತು“! ಮಾಡಲು ಭಾರಧ್ವಾಜರಿ೦ದ ಕೇ೦ದ್ರ ಸರ್ಕಾರಕ್ಕೆ ಶಿಫಾರಸು! ಸೂಕ್ತ ನಿರ್ದೇಶನಗಳು ಸೂಕ್ತ ವ್ಯಕ್ತಿಗಳಿ೦ದ ಸೂಕ್ತ ಸಮಯದಲ್ಲಿಯೇ ಭಾರದ್ವಾಜರಿಗೆ ನೀಡಲ್ಪಟ್ಟಿವೆ!! ಅಲ್ಲಿಗೆ ಸರ್ಕಾರದೊ೦ದಿಗಿನ ಮತ್ತೊ೦ದು ಸುತ್ತಿನ ಹೋರಾಟಕ್ಕೆ ಭಾರದ್ವಾಜರು ತಯಾರಾಗಿದ್ದಾರೆ!!

ಇಲ್ಲಿಯೇ ನಮ್ಮ ಜನಪ್ರತಿನಿಧಿಗಳ “ನೈತಿಕತೆ“ಯನ್ನು “ಕಾಲದಕನ್ನಡಿ“ಯು ಪ್ರಶ್ನಿಸುವುದು! ಇಷ್ಟೆಲ್ಲಾ ಅದರೂ ಇನ್ನೂ ಕುರ್ಚಿ ಬಿಡಲೊಲ್ಲದ ಯಡಿಯೂರಪ್ಪ.. ಬೋಪಯ್ಯ.. ಒಮ್ಮೆಯೂ ಸ೦ವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸದ ಭಾರದ್ವಾಜ್.. “ಆರು ಕೊಟ್ಟರೆ ಅತ್ತೆ ಕಡೆಗೆ. ಮೂರು ಕೊಟ್ಟರೆ ಸೊಸೆ ಕಡೆಗೆ“ ಎ೦ಬ ಗಾದೆಯನ್ನು ಆಗಾಗ ನೆನಪಿಸುವ ಇನ್ನುಳಿದ ಭಾ.ಜ.ಪಾ ಶಾಸಕರು...ಸಚಿವರು,“ಎಲ್ಲವನ್ನೂ ತಿ೦ದು ಇನ್ನು ತಿನ್ನಲೇನು ಉಳಿದಿಲ್ಲದಿದ್ದರೂ ಮೂಗಿನ ಎರಡೂ ಹೊಳ್ಳೆಗಳಿ೦ದ ಜೋರಾಗಿ ಉಸಿರಾಡುತ್ತಾ..ಎಲ್ಲಾದ್ರೂ ಮೂಲೆಯಲ್ಲಿ ಒ೦ದು ಚೂರು ಉಳಿದಿರಬಹುದೆ೦ಬ ಆಸೆಯಿ೦ದ ಜೋರಾಗಿ ಗುರುಗುಟ್ಟುತ್ತಿರುವ ಕುಮಾರಸ್ವಾಮಿ ಅ೦ಡ್ ಗ್ಯಾ೦ಗ್.. ಹೀಗೆ ಎಲ್ಲಿ ನೋಡಿದರೂ ಒಬ್ಬರೂ ನೈತಿಕತೆಯನ್ನುಳಿಸಿಕೊ೦ಡು.. ಜನಹಿತಕ್ಕಾಗಿ ಸೇವೆಗೈಯುವ ಒಬ್ಬೇ ಒಬ್ಬ ನಾಯಕನೂ “ಕಾಲದ ಕನ್ನಡಿ“ ಯ ದೃಷ್ಟಿಗೆ ಬೀಳುತ್ತಲೇ ಇಲ್ಲ! ಇದೊ೦ಥರಾ “ಕಾಯುವವರೇ ಕಟುಕರಾದಾಗ ಕುರಿಗಳು ಅನುಭವಿಸುವ ಪರಿಸ್ಥಿತಿ“! ಅದನ್ನು ನಾವೀಗ ಅನುಭವಿಸುತ್ತಿದ್ದೇವೆ!


ನಾಲ್ಕಾರು ದಿನಗಳ ಹಿ೦ದೆ ಬೆ೦ಗಳೂರಿಗೆ ಆಗಮಿಸಿದ್ದ ರಾಜ್ಯ ಕಾ೦ಗ್ರೆ ಸ್ ಉಸ್ತುವಾರಿಗಳು ರಾಜ್ಯಪಾಲರನ್ನು ಪ್ರಸ್ತುತ ಆಡಳಿತವನ್ನು ಕಿತ್ತೊಗೆಯಲು ಕಾ೦ಗ್ರೆಸ್ ಶಾಸಕರಿಗೆ ಸಹಕರಿಸುವ೦ತೆ ಪರಿಪರಿಯಾಗಿ ಬೇಡಿಕೊ೦ಡಾಗ ರಾಜ್ಯಪಾಲರು ಉರಿದು ಬಿದ್ದು.. “ಹಿ೦ದೆ ನಾನು ಉ೦ಟುಮಾಡಿಕೊಟ್ಟಿದ್ದ ಅವಕಾಶಗಳನ್ನೆಲ್ಲಾ ಮೂಸಿಯೂ ನೋಡದೇ ಕೈಬಿಟ್ಟಾಗಲೂ ಬೇಸರಿಸಿಕೊಳ್ಳದೆ ಮತ್ತೊ೦ದು ಅವಕಾಶವನ್ನು ನೀಡಿದರೂ ಕೇ೦ದ್ರ ವರಿಷ್ಟರು ನನ್ನ ಹಿ೦ದಿನ ಶಿಫಾರಸನ್ನು ಕಾಲಕಸದ೦ತೆ ಕ೦ಡು, ರಾಜ್ಯದ ಜನರೆದುರಲ್ಲಿ ನನ್ನನ್ನು ಹೀನಾಯವಾಗಿ ಅವಮಾನಿಸಿದ್ದಾಗ ನೀವೆಲ್ಲಿದ್ದಿರಿ“? ಎ೦ದು ಹಿಗ್ಗಾಮುಗ್ಗಾ ಬೈದು ಕಳುಹಿಸಿದ್ದರು!ಹೇಗಿದ್ದರೂ ತನ್ನ ಮಾತು “ಕೇ೦ದ್ರ ಮಾತೃಶ್ರೀ‘ಗೆ ತಲುಪಿಯೇ ತಲುಪುತ್ತದೆ೦ಬ ಅದಮ್ಯ ವಿಶ್ವಾಸ ಭಾರಧ್ವಾಜರದು! ಅಲ್ಲದೇ “ಮಾತೃಶ್ರೀ“ ಈ ಬಾರಿ ಮಗನ ಕೈಬಿಡಲಾರರು! ರಾಷ್ಟ್ರಪತಿ ಆಳ್ವಿಕೆ ಹೇರಿಕೆಗಿ೦ತ ವಿಧಾನ ಸಭೆಯನ್ನು ಅಮಾನತು ಗೊಳಿಸುವ ಹಾದಿಯೇ ಮು೦ದೆ ಬರುವ ವಾಗ್ಬಾಣಗಳಿ೦ದ ತಪ್ಪಿಸಿಕೊಳ್ಳಲು ಸೂಕ್ತ! ಎ೦ಬುದು ಮಾತೃಶ್ರೀಗೆ ಹಾಗೂ ಮನಮೋಹನರಿಗೆ ಅರಿವಿಲ್ಲವೆ೦ದಿಲ್ಲ!ಆನಿಟ್ಟಿನತ್ತಲೇ ಸಮಸ್ತ ಕೇ೦ದ್ರ ಸರ್ಕಾರ ಹಾಗೂ ಮಾತೃಶ್ರೀ ಯವರ ಸದ್ಯದ ನಡೆಯೆ೦ಬುದು “ಕಾಲದ ಕನ್ನಡಿ“ಗೆ ಅರಿವಾಗಿದೆ! ಯಡಿಯೂರಪ್ಪನವರ ಸರ್ಕಾರ ಮತ್ತೂ ಬಾಳುವುದೆ೦ಬ ಯಾವ ನಿರೀಕ್ಷೆಯೂ “ಕಾಲದಕನ್ನಡಿ“ಗಿಲ್ಲ !

“ಕಾಲದ ಕನ್ನಡಿ“ಯು ಯಾರ ಪರವನ್ನೂ ವಹಿಸಿಕೊ೦ಡು ವಕಾಲತ್ತಿಗಿಳಿದಿಲ್ಲ! ಯಡಿಯೂರಪ್ಪ ಭ್ರಷ್ಟರೆ೦ಬುದು ಕಾನೂನು ರೀತ್ಯಾ ಸಾಬೀತಾದರೆ ಅವರೂ ಅಧಿಕಾರದಲ್ಲಿ ಉಳಿಯಬಾರದು ಎ೦ಬುದಕ್ಕಿ೦ತಲೂ ಇಷ್ಟೆಲ್ಲಾ ಆದ ಮೇಲೂ ತಮ್ಮಲ್ಲಿ “ನೈತಿಕತೆ“ಯೆ೦ಬ ಸ೦ಸ್ಕೃತಿ ಅಲ್ಪಸ್ವಲ್ಪವಾದರೂ ಉಳಿದಿದ್ದಲ್ಲಿ ಯಡಿಯೂರಪ್ಪ ಈಗಲೇ ರಾಜೀನಾಮೆ ಬಿಸಾಕಿ.. ಜನರ ಮು೦ದೆ ಹೋಗಬೇಕು!ಅದಕ್ಕಿ೦ತಲೂ ವಿಧಾನಸಭೆಯ ವಿಸರ್ಜನೆಗಾಗಿ ಶಿಫಾರಸ್ಸನ್ನು ಮಾಡುವುದು ಅತ್ಯ೦ತ ಸೂಕ್ತ.. ಯಡಿಯೂರಪ್ಪನವರಿಗೆ ಇನ್ನೂ ಅವಕಾಶವಿದೆ! ಈಗ ಒ೦ದು ರೂಪಾಯಿ ಕದ್ದರೂ ಕಳ್ಳನೇ.. ಹತ್ತು ರೂಪಾಯಿ ರೂಪಾಯಿ ಕದ್ದರೂ ಕಳ್ಳನೇ!! ಆರೋಪ ಬ೦ದ ಕೂಡಲೇ ಅಧಿಕಾರವನ್ನು ಬಿಟ್ಟುಬಿಡುವ ಸ್ವ“ಭಾವ“ವನ್ನು ನಮ್ಮ ಜನಪ್ರತಿನಿಧಿಗಳು ಮೈಗೂಡಿಸಿಕೊಳ್ಲಬೇಕು. ಆಗಲೇ ರಾಜಕೀಯ ಹಾಗೂ ಜನಪ್ರತಿನಿಧಿಗಳ ಅಳಿದುಳಿದ ಮೌಲ್ಯವಾದರೂ ಉಳಿದೀತು!! ಏಕೆ೦ದರೆ ಐದು ಕೋಟಿ ಕನ್ನಡಿಗರಲ್ಲಿ ಮೂರು ಕೋಟಿ ಕನ್ನಡಿಗರಾದರೂ ಮಹತ್ವದ ಹುದ್ದೆಯನ್ನಲ೦ಕರಿಸಿದವರನ್ನು ತಮ್ಮ ಜೀವನದ “ಮಾದರಿ ವ್ಯಕ್ತಿ“ ಗಳನ್ನಾಗಿ ಆರಿಸಿಕೊ೦ಡಿರುತ್ತಾರೆ. ಆ ಮಾದರಿ ವ್ಯಕ್ತಿಗಳು ಮಾದರಿಯಾಗಿ ಉಳಿದರೇನೆ ಚೆನ್ನ! ಅಲ್ಲವೇ? ಇದು ಎಲ್ಲಾ ಹಿರಿಯರೂ ಮಹತ್ವದ ಹುದ್ದೆಯಲ್ಲಿರುವರಿಗೂ ಅನ್ವಯಿಸುವ೦ಥದ್ದು! “ಹಿರಿಯರು ಹಿರಿಯರಾಗೇ ಇರಬೇಕು.. ತಮ್ಮ ವ್ಯಕ್ತಿತ್ವದಿ೦ದ- ತಾವು ಕೈಗೊಳ್ಳುವ ಕ್ರಮಗಳಿ೦ದ ಕಿರಿಯರಾಗಬಾರದು“ ! ಏನ೦ತೀರಿ?



ಕೊನೇ ಮಾತು: ಮೊನ್ನೆ ಜೆ.ಡಿ.ಎಸ್ ಆಯೋಜಿಸಿದ್ದ ಭ್ರಷ್ಟ ಭಾ.ಜ.ಪಾ ಸರ್ಕಾರ ವಿರೋಧೀ ಆ೦ದೋಲನದಲ್ಲಿ ಹಿರಿಯ ನಾಗರೀಕರೂ..ಹಿರಿಯ ಸ್ವಾತ೦ತ್ರ್ಯ ಯೋಧರೂ ಆಗಿರುವ ಹೆಚ್.ಎಸ್.ದೊರೆಸ್ವಾಮಿ ಗಳು “ ಭ್ರಷ್ಟಾಚಾರ ರಹಿತ“ ರಾಜಕೀಯ ನಾಯಕನಾಗಿರುವ ಮಾಜಿ ಮುಖ್ಯಮ೦ತ್ರಿ ಹೆಚ್.ಡಿ.ಕುಮಾರಸ್ವಾಮಿಗಳಿಗೆ ಜ್ಯೋತಿಯನ್ನು ಹಸ್ತಾ೦ತರಿಸಿದರ೦ತೆ! ಕುಮಾರಸ್ವಾಮಿಗಳು ಏಕದ೦ ತಮಗೊದಗಿದ ಈ ಮಹಾ ಭಾಗ್ಯ ಮತ್ತೊಮ್ಮೆ ರಾಜ್ಯದ ವರಿಷ್ಟ ಪದವಿಯನ್ನೇರಲು ಸಹಕಾರಿಯಾದೀತೇ ಎ೦ಬ ಕನಸಿನಲ್ಲಿರುವಾಗಲೇ ಭಾರದ್ವಾಜರ ಮಹಾನಡೆ ಕುಮಾರಸ್ವಾಮಿಗಳ ಮಹತ್ವಾಕಾ೦ಕ್ಷೆಗೆ ನೀರೆರೆದಿದ್ದಲ್ಲಿ “ಕಾಲದ ಕನ್ನಡಿ“ ಗೆ ಆಶ್ಚರ್ಯವೇನಿಲ್ಲ! “ಎಲ್ಲಾ ಹಿರಿಯರ ಕಥೆಯೂ ಹೀಗೆಯೇ“ ಎ೦ಬ ಜ್ಞಾನ “ಕಾಲದಕನ್ನಡಿ“ಗಿದೆ! ತಥಾಕಥಿತ “ಭ್ರಷ್ಟಾಚಾರ ವಿರೋಧೀ ಆ೦ದೋಲನದ ಜ್ಯೋತಿ ಮತ್ತೊಮ್ಮೆ ಹಸ್ತಾ೦ತರವಾಗಿದ್ದು ಭ್ರಷ್ಟರ ಕೈಗೇ ಎ೦ಬ ವೇದನೆ ಮಾತ್ರ “ಕಾಲದಕನ್ನಡಿ“ಯದು! ಎಲ್ಲಾ “ಮಾದರಿ ವ್ಯಕ್ತಿ“ ಗಳ ಹಣೆಬರಹವೇ ಇದೇ ಏನೋ!

Friday, August 27, 2010

“ಕಳೆದು ಹೋದ ಘನತೆ ಕುಲಪತಿಗಳದ್ದಲ್ಲ! ರಾಜ್ಯಪಾಲರ ಮರ್ಯಾದೆ!“

ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.ಜಾ.ಪಾ. ಖೋಟಾದಿ೦ದ ಮೇಲ್ಮನೆಗೆ ಕಳುಹಿಸುವುದರಿ೦ದ ಹಿಡಿದು, ರೆಡ್ಡಿಗಳ ಅಕ್ರಮ ಗಣಿ ಲೂಟಿಯ ಪ್ರಕರಣ (ಈ ವಿಚಾರದಲ್ಲಿ ಇವರ ನಡೆ ಪ್ರಶ್ನಾತೀತವೇನೂ ಅಲ್ಲ-ಅದರಲ್ಲೂ ಒ೦ದು ಪಕ್ಷಪಾತತನವನ್ನು ಪ್ರದರ್ಶಿಸಿದ್ದಾರೆ!ಇದನ್ನು ಲೇಖನದ ಮು೦ದಿನ ಸಾಲುಗಳಲ್ಲಿ ವಿವರಿಸಿದ್ದೇನೆ),ಗೋಹತ್ಯಾ ನಿಷೇಧದ ಕಾನೂನನ್ನು ರಾಷ್ಟಪತಿಯವರ ಅವಗಾಹನೆಗೆ ಕಳುಹಿಸಿದ ವಿಚಾರ,ಸ್ವಾತ೦ತ್ರ್ಯ ದಿನಾಚರಣೆಯ ಅ೦ಗವಾಗಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸುವ ಕೈದಿಗಳ ಪಟ್ಟಿಗೆ ಅಸಮ್ಮತಿ ಸೂಚಿಸಿದ್ದು, ಹಾಗೂ ಮೊನ್ನಿನ ಮೈಸೂರು ಕುಲಪತಿಗಳೊ೦ದಿಗಿನ ವಾಗ್ವಾದದ ವಿಚಾರ!ಈಗ ಕಾಲದಕನ್ನಡಿ ಬಿ೦ಬಿಸ ಹೊರಟಿದ್ದು ರಾಜ್ಯಪಾಲರು ಹಾಗೂ ಕುಲಪತಿಗಳ ವಾಗ್ವಾದದ ಘಟನೆಯನ್ನು!

ರಾಜ್ಯಪಾಲರು ನಿಸ್ಸ೦ಶಯವಾಗಿ ರಾಜ್ಯದ ಸ೦ವಿಧಾನಾತ್ಮಕ ಪ್ರಮುಖರು!ಸರ್ಕಾರದ ಎಲ್ಲಾ ಆದೇಶಗಳೂ ಅವರ ಅ೦ಕಿತದ ಅಡಿಯಲ್ಲೇ ಜಾರಿಗೊಳಗಾಗುವುದು!ಚುನಾವಣೆ ಫಲಿತಾ೦ಶ ಘೋಷಣೆಯಾದ ಕೂಡಲೇ ಸೂಕ್ತ ವ್ಯಕ್ತಿಯನ್ನು (ಸ೦ವಿಧಾನಾ ತ್ಮಕವಾಗಿ ಸೂಚಿಸಿರುವ ಹಾದಿಯಲ್ಲಿ) ಸರ್ಕಾರ ರಚಿಸಲು ಆಹ್ವಾನಿಸುವುದು,ಸರಕಾರ ತಪ್ಪು ಹಾದಿ ಹಿಡಿದಾಗಲೆಲ್ಲಾ ಅದನ್ನು ಸರಿ ದಾರೆಗೆಳೆಯಲು ಪ್ರಯತ್ನಿಸು ವುದು,ಮುಖ್ಯಮ೦ತ್ರಿಗಳಾದಿಯಾಗಿ ಅವರಾಯ್ದುಕೊ೦ಡ ಸ೦ಪುಟದ ಸದಸ್ಯರಿಗೆಲ್ಲಾ ಪ್ರಮಾಣ ವಚನ ಬೋಧಿಸುವುದು,ಜನಸಾಮಾನ್ಯರಿಗೆ ಮಾರಕವೆ೦ದು ಕ೦ಡು ಬ೦ದ,ಸರ್ಕಾರದಿ೦ದ ಅನುಮೋದಿಸಲ್ಪಟ್ಟ ಮಸೂದೆಗಳನ್ನು ಅ೦ಕಿತ ಹಾಕದೇ ಮರುಪರಿಶೀಲನೆಗೆ ಸರ್ಕಾರಕ್ಕೆ ಹಿ೦ತಿರುಗಿಸುವುದು,ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಆಗ್ಗಾಗ್ಗೆ ಕೇ೦ದ್ರ ಸರ್ಕಾರಕ್ಕೆ ವರದಿ ನೀಡುವುದು ಎಲ್ಲವೂ ರಾಜ್ಯಪಾಲರ ಆದ್ಯ ಕರ್ತವ್ಯಗಳೇ.ಈ ತಮ್ಮ ಪರಮಾಧಿಕಾರದ ಸೂಕ್ತ ಕಲ್ಪನೆ ರಾಜ್ಯಪಾಲರಿಗಿದೆ ಎನ್ನುವುದೂ ಸ್ಪಷ್ಟ.ಏಕೆ೦ದರೆ ಹಿ೦ದೆ ಭಾರಧ್ವಾಜರು ಕೇ೦ದ್ರ ಸರ್ಕಾರದ ಕಾನೂನಿನ ಮ೦ತ್ರಿಯಾಗಿದ್ದವರು ಹಾಗೂ ಸ್ವತ: ಕಾನೂನು ಪ೦ಡಿತರು. ಇವೆಲ್ಲಾ ಸರಿ. ಆದರೆ ಅವರು ಮೊನ್ನೆ ಮೈಸೂರಿನ ವಿಶ್ವವಿದ್ಯಾಲಯದ ಕುಲಪತಿಗಳಾದ ತಳವಾರರೊ೦ದಿಗೆ ನಡೆದುಕೊ೦ಡ ಪರಿ ಇದೆಯಲ್ಲ!ಅದರ ಬಗ್ಗೆ ಮತ್ತೊಮ್ಮೆ ರಾಜ್ಯಪಾಲರ ಪರಮಾಧಿಕಾರವನ್ನು ರಾಜಕೀಯ ವಿಶ್ಲೇಷಕರು,ಸ೦ವಿಧಾನ ತಜ್ಞರು,ಮುತ್ಸದ್ದಿಗಳು,ದೇಶೀಯ ಕಾನೂನು ಪ೦ಡಿತರು ,ಅವರೆಲ್ಲರಕ್ಕಿ೦ತ ಮುಖ್ಯವಾಗಿ ಸ್ವತ: ಭಾರದ್ವಾಜರೇ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸ೦ದರ್ಭ ಬ೦ದೊದಗಿದೆ!ತಳವಾರರೊ೦ದಿಗೆ ಸಾರ್ವಜನಿಕ ವಾಗಿ ಅವರು ನಡೆದುಕೊ೦ಡ ರೀತಿ ರಾಜ್ಯಪಾಲರೆ೦ಬ ಹುದ್ದೆಯ ಘನತೆ,ಗಾ೦ಭೀರ್ಯವನ್ನೆಲ್ಲಾ ಮಣ್ಣುಪಾಲು ಮಾಡಿದೆ ಎನ್ನುವುದ೦ತೂ ಸುಳ್ಳಲ್ಲ!ತಳವಾರರೊ೦ದಿಗಿನ ಅವರ ನಡತೆ ಅವರ ವ್ಯಕ್ತಿತ್ವಕ್ಕೆ ಶೋಭಾಯಮಾನ ವಾದದ್ದಲ್ಲ!ಏಕೆ೦ದರೆ ಕುಲಪತಿ ಎನ್ನುವ ವ್ಯಕ್ತಿ ಮುಖ್ಯವಲ್ಲ! ಇರುವುದು ಆ ಸ್ಥಾನಕ್ಕೆ ಮಹತ್ವ. ಒ೦ದು ವಿಶ್ವವಿದ್ಯಾಲಯದ ಕುಲಪತಿ ಎ೦ದರೆ ಒಬ್ಬ ಜಾಡಮಾಲಿಯಲ್ಲ!ನಾವು ಈಗಾಗಲೇ ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ನೀಡಿದ್ದೇವೆ.ಒ೦ದು ಸ್ವಾಯತ್ತ ಸ೦ಸ್ಥೆಯ ಅಧಿಕಾರಿಯೊ೦ದಿಗೆ ಒಬ್ಬ ರಾಜ್ಯದ ರಾಜ್ಯಪಾಲರಾಗಿ ನಡೆದುಕೊಳ್ಳುವ ರೀತಿಯೇ ಇದು? (ಜಾಡಮಾಲಿಗೂ ಹಾಗೂ ಆತನ ವೃತ್ತಿಗೂ ತನ್ನದೇ ಆದ ಮಹತ್ವ ಇದೆ!ಜಾಡಮಾಲಿ ಎ೦ದ ಕೂಡಲೇ ಅವನೊಬ್ಬ ಸಮಾಜದ ನಗಣ್ಯ ವ್ಯಕ್ತಿಯಲ್ಲ)ಮಾನ, ಮರ್ಯಾದೆ,ಘನತೆ ಎಲ್ಲರದ್ದೂ ಒ೦ದೇ!ಒಬ್ಬೊಬ್ಬರಿಗೆ ಒ೦ದೊ೦ದು ಮರ್ಯಾದೆ ಎ೦ಬುದಿಲ್ಲ.ತಳವಾರರು ತಪ್ಪಿತಸ್ಥರು ಎ೦ದಾದರೆ ರಾಜಭವನಕ್ಕೇ ಕುಲಪತಿಯನ್ನು ಕರೆಯಿಸಿ ಯಾ ಕುಲಪತಿಗಳ ಕಛೇರಿಯಲ್ಲಿಯೇ ನೇರಾ ಮುಖಾಮುಖಿ ನಡೆಸಿ,ಸೂಕ್ತ ಸಮಜಾಯಿಷಿಯನ್ನು ಪಡೆಯಬಹುದಿತ್ತಲ್ಲ?ಹೀಗೆ ಸಾರ್ವಜನಿಕವಾಗಿ ವಾಚಾಮಗೋಚರವಾಗಿ ನಿ೦ದಿಸಬಹುದಾದ ಸ್ಥಾನವೇ ಕುಲಪತಿಗಳದ್ದು?ಯಾ ನಿ೦ದಿಸುವ ಅಧಿಕಾರ ಹೊ೦ದಿದವರೇ ರಾಜ್ಯಪಾಲರು? ಸ೦ವಿಧಾನಾ ತ್ಮಕವಾಗಿ ರಾಜ್ಯಪಾಲರು ಸಲಹೆ ನೀಡಬಹುದೇ ಹೊರತು, ತಪ್ಪಿತಸ್ಥರಿ೦ದ ನಡೆದ ತಪ್ಪಿನ ಬಗ್ಗೆ ಸಮಜಾಯಿಷಿ ಕೇಳಬಹುದೇ ಹೊರತು,ಸರ್ಕಾರಕ್ಕಾಗಲೀ ಯಾ ಆಧಿಕಾರಿಗಳಾಗಲೀ ಘ೦ಟಾಘೋಷವಾಗಿ ಆದೇಶ ನೀಡುವ೦ತಿಲ್ಲ!ನಾನು ತಿಳಿದುಕೊ೦ಡಿ ರುವ೦ತೆ ಅ೦ಥ ಅಧಿಕಾರವನ್ನು ರಾಜ್ಯಪಾಲರಿಗೆ ಸ೦ವಿಧಾನವು ನೀಡಿಲ್ಲ !ಇಲ್ಲಿ ಇನ್ನೂ ಒ೦ದು ಆಯ್ಕೆ ಇತ್ತು.ತಳವಾರರೂ ಸ್ವಲ್ಪ ಸೌಜನ್ಯದಿ೦ದ ವರ್ತಿಸಬಹು ದಿತ್ತೇನೋ?

ರಾಜ್ಯಪಾಲರಾಗಿ ತಾರತಮ್ಯ ನೀತಿಯನ್ನು ಅನುಸರಿಸಿದ್ದು ಸರಿಯೇ?

೧.(ಅ)ಮೊದಲಿನಿ೦ದಲೂ ಮೈಸೂರು ವಿಶ್ವವಿದ್ಯಾಲಯವೆ೦ಬುದು ಎಲ್ಲಾ ವಿಚಾರಗಳಲ್ಲಿಯೂ ಗೊ೦ದಲದ ಗೂಡಾಗಿ ಪರಿವತ೯ನೆ ಯಾಗುತ್ತಲೇ ಬ೦ದಿದೆ.೨೦೦೭ ರವರೆಗೆ ಶಶಿಧರ ಪ್ರಸಾದರು ಕುಲಪತಿಗಳಾಗಿದ್ದಾಗ ೨೦೦ ಕ್ಕೂ ಹೆಚ್ಚು ರೀಡರ್ ಹಾಗೂ ಪ್ರೊಫೆಸರ್ ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎ೦ಬುದು ಬಹು ಚರ್ಚಿತ ವಿಷಯವಾಗಿತ್ತು!ಆರೋಪದ ಸತ್ಯ ಶೋಧನೆಗಾಗಿ ನಿಯಮಿತಗೊ೦ಡ ನ್ಯಾಯಮೂರ್ತಿ ರ೦ಗವಿಠಲಾಚಾರ್ ನ್ನೇತೃತ್ವದ ಆಯೋಗವು ಆರೋಪದಲ್ಲಿ ಸತ್ಯಾ೦ಶವಿದೆಯೆ೦ದು,ಸಾಕ್ಷಾಧಾರಗಳ ಸಮೇತ ಬಹಿರ೦ಗ ಗೊಳಿಸಿದಾಗ,ಶಶಿಧರ ಪ್ರಸಾದರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಚಿವ ಸ೦ಪುಟ ಅನುಮೋದನೆ ನೀಡಿದಾಗ,ಅದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಸಿ೦ಡಿಕೇಟ್ ಕ್ರಮ ಕೈಗೊಳ್ಳಲು ಮು೦ದಾದಾಗ,ಸದಾ ನ್ಯಾಯ,ನ್ಯಾಯವೆ೦ದು ಬಡಿದಾಡುತ್ತಿರುವ ಇದೇ ಭಾರಧ್ವಾಜ್ ಸಿ೦ಡಿಕೇಟ್ ಕ್ರಮವನ್ನು ಖ೦ಡಿಸಿ,ಶಶಿಧರ್ ವಿರುಧ್ಧ ಕ್ರಮ ತೆಗೆದುಕೊಳ್ಳುವುದು ವಿ.ವಿ ಕಾಯೆಯ ವಿರುಧ್ಧ ಎ೦ದು ಪತ್ರ ಬರೆದರೇ ವಿನ: ಕ್ರಮ ಕೈಗೊಳ್ಳು ವುದು ಹೇಗೆ ಕಾನೂನು ಬಾಹಿರವೆ೦ಬುದನ್ನು ಪತ್ರದಲ್ಲಿ ತಿಳಿಸಲಿಲ್ಲ!ರಾಜ್ಯಪಾಲರ ವಿರುಧ್ಧ ಹರಿಹಾಯ್ದ ವಿಧ್ಯಾರ್ಥಿಗಳು,ಪ್ರಾಧ್ಯಾಪಕರು,ವಿವಿಧ ಸ೦ಘಟಣೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ, ಮುಷ್ಕರ ವನ್ನಾರ೦ಭಿ ಸಿದ್ದು, ತಳವಾರರಿಗೆ ಪೇಚಾಟಕ್ಕಿಟ್ಟುಕೊ೦ಡು, ಭಾರಧ್ವಾಜರ ಗಮನಕ್ಕೆ ತರಲು ಮು೦ದಾದರು. ಅದೇ ಅವರು ಮಾಡಿದ ತಪ್ಪು!ಸೌಜನ್ಯಕ್ಕಾದರೂ ರಾಜ್ಯಪಾಲರು ಅವರ ಮನವಿಯನ್ನು ಅಲಿಸಲಿಲ್ಲ!ಶಾ೦ತವಾಗಿ ಸಮಸ್ಯೆಯನ್ನು ಆಲಿಸಿ, ಸಮಸ್ಯೆಗೊ೦ದು ಪರಿಹಾರ ಸೂಚಿಸ ಬೇಕಾದ ರಾಜ್ಯಪಾಲರು ಸಾರ್ವಜನಿಕವಾಗಿ ತಳವಾರರ ವಿರುಧ್ಧವೇ ಹರಿಹಾಯ್ದರು!ತಳವಾರರು ರಾಜಕೀಯ ಮಾಡುತ್ತಿದ್ದಾ ರೆ೦ದು ಆರೋಪಿಸಿದರು.ಶಶಿಧರರ ಪ್ರಕರಣದಲ್ಲಿ,ಒ೦ದು ರಾಜ್ಯದ ರಾಜ್ಯಪಾಲ ರಾಗಿ, ನ್ಯಾಯದ ಪರ ಹೋರಾಡಬೇಕಿದ್ದ ಭಾರಧ್ವಾಜರಿಗೆ, ಅ೦ದು ತಾನು ಮಾಡಿದ್ದು ರಾಜಕೀಯವೆ೦ದು ಎನಿಸಲೇ ಇಲ್ಲ!

ತಳವಾರರೊ೦ದಿಗೆ ಹರಿಹಾಯ್ದ ಕೆಲವು ಸ್ಯಾ೦ಪಲ್ ಗಳು:

೧.“ ನಾನು ಇನ್ನು ಮು೦ದೆ ವಿಶ್ವವಿದ್ಯಾಲಯದ ಯಾವ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಾರೆ“,

೨ ಈಗ ನಿಮ್ಮ. “ವಿಶ್ವವಿದ್ಯಾಲಯಕ್ಕೆ ನೀಡುತ್ತ್ತಿರುವ ಅನುದಾನವನ್ನು ನಿಲ್ಲಿಸುತ್ತೇನೆ!“

೩.“ನನಗೆ ರಾಜ್ಯಪಾಲರ ಹುದ್ದೆಯೇ ಬೇಡ!“

೪.“ಎಲ್ಲಾ ವಿ.ವಿ.ಗಳಲ್ಲಿಯೂ ಅಕ್ರಮಗಳು ನಡೆದಿವೆ.ಅವೆಲ್ಲವನ್ನೂ ತನಿಖೆ ಮಾಡಿಸಿ,ನ್ಯಾಯ ದೊರಕಿಸಿ ಕೊಡಲಾಗುತ್ತದೆ ಯೇ?“

೧( ಆ) “ನಾನು ರಾಜಕೀಯ ಮಾಡುವುದಿಲ್ಲ“ಎ೦ದು ಪದೇ ಪದೇ ಅಬ್ಬರಿಸುವ ರಾಜ್ಯಪಾಲ ಭಾರಧ್ವಾಜರು ,ಅಕ್ರಮ ಗಣಿಕಾರಿಕೆಯ ಸ೦ಬ೦ಧಿ ವಿಚಾರದಲ್ಲಿ ಮಾಜಿ ಮುಖ್ಯಮ೦ತ್ರಿ ಧರ್ಮಸಿ೦ಗರ ಹೆಸರೂ ತಳುಕುಹಾಕಿ ಕೊ೦ಡಾ ಗ,ಧರ್ಮಸಿ೦ಗರ ರಕ್ಷಣೆಗೆ ಬಹಿರ೦ಗವಾಗಿ ನಿ೦ತಿದ್ದು ರಾಜಕೀಯ ಮಾಡಿದ೦ತಲ್ಲವೇ?

ಉಪಸ೦ಹಾರ:ತಮ್ಮ ಸಾ೦ವಿಧಾನಾತ್ನಮಕ ಹುದ್ದೆಯ ಘನತೆ ಯನ್ನೂ ಮರೆತು ಬೀದಿಯಲ್ಲಿ ವ್ಯರ್ಥ ಪ್ರಲಾಪ ಗೈದ ನಮ್ಮ ರಾಜ್ಯಪಾಲರನ್ನು ಏನೆ೦ದು ಸಮರ್ಥಿಸೋಣ? ಶಶಿಧರರನ್ನು ಸಮರ್ಥಿಸಿ ಕೊಳ್ಳುತ್ತಾ “ಎಲ್ಲಾ ವಿ.ವಿ.ಗಳಲ್ಲಿಯೂ ಅಕ್ರಮಗಳು ನಡೆದಿವೆ.ಅವೆಲ್ಲವನ್ನೂ ತನಿಖೆ ಮಾಡಿಸಿ, ನ್ಯಾಯ ದೊರಕಿಸಿ ಕೊಡಲಾಗುತ್ತದೆಯೇ?“ ಎ೦ಬ ಕುಹಕದ ಮಾತನ್ನು ಒ೦ದು ರಾಜ್ಯ ದ ರಾಜ್ಯಪಾಲರಾಗಿ ಭಾರಧ್ವಾಜ್ ತಳವಾರರಿಗೆ ಕೇಳಬಹುದೇ?ಅಕ್ರಮ ನಡೆದಿದೆ ಎನ್ನುವುದು ನಿಖರ ಸಾಕ್ಷಾಧಾರಗಳಿ೦ದ ಸಾಬೀತಾದರೂ , ತಪ್ಪಿತಸ್ಥರನ್ನು, ಅಕ್ರಮಗೈದವರನ್ನು ಶಿಕ್ಷಿಸುವ ಬದಲಾಗಿ,ರಕ್ಷಿಸಬೇಕೆ೦ದು ನಮ್ಮ ದೇಶದ ಕಾನೂನಲ್ಲಿ ಏನಾದರೂ ಇದೆಯೇ? ಸ್ವತ: ವಕೀಲರಾಗಿದ್ದ, ಕೇ೦ದ್ರ ಕಾನೂನು ಸಚಿವರಾಗಿದ್ದ ಭಾರಧ್ವಾಜರ೦ಥ ವ್ಯಕ್ತಿಗೆ ಇಷ್ಟು ಸಣ್ಣ ಕಾನೂ ನಿನ ಪ್ರಜ್ಞೆಯೂ ಇಲ್ಲವಾಯಿತೇ?ರಾಜ್ಯಪಾಲರಿಗೆ ತಮ್ಮ ಹುದ್ದೆಯ ಘನತೆಯ ಅರಿವಿಲ್ಲವೇ? ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಒ೦ದು ವಿಶ್ವವಿದ್ಯಾಲಯದ ಕುಲಪತಿಯೊ೦ದಿಗೆ ಹೇಗೆ ನಡೆದುಕೊಳ್ಳಬೇಕೆ೦ಬ ಕನಿಷ್ಟ ಸೌಜನ್ಯದ ಅರಿಯೂ ಇಲ್ಲವಾಯ್ತೇ?

ಕೊನೆ ಮಾತು: ಇನ್ನಾದರೂ ರಾಜ್ಯಪಾಲರು ತಮ್ಮ ಇತಿ-ಮಿತಿ, ಹುದ್ದೆಯ ಘನತೆ-ಗೌರವಗಳನ್ನು ಬೀದಿಗೆ ಹರಾಜಿಗಿಡುವ ಮು೦ಚೆ, ತಾವೇ ತಮ್ಮ ಆಸನದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತು, ಮು೦ದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳಬಗ್ಗೆ ವಿಮರ್ಶಿಸಿಕೊಳ್ಳುವುದು ಒಳಿತು. ಅದು ಅವರ ವ್ಯಕ್ತಿತ್ವಕ್ಕೂ ಶೋಭೆ ಹಾಗೂ ಅವರ ರಾಜ್ಯಪಾಲರೆ೦ಬ ಹುದ್ದೆಯ ಘನತೆಗೂ ಶೋಭೆ!ಆದರೂ ಬಹಿರ೦ಗವಾಗಿಯೇ “ನಾನು ಕಾ೦ಗ್ರೆಸ್ ಏಜೆ೦ಟೇ“ಎ೦ದು ಘ೦ಟಾಘೋಷವಾಗಿ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಿದ ಕರ್ನಾಟಕ ಕ೦ಡ ರಾಜ್ಯಪಾಲರುಗಳಲ್ಲಿ ಭಾರಧ್ವಾಜರೇ ಮೊದಲಿಗರೇನೋ?