Showing posts with label ಕಾ೦ಗ್ರೆಸ್. Show all posts
Showing posts with label ಕಾ೦ಗ್ರೆಸ್. Show all posts

Tuesday, July 22, 2014

ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ.... ಸಿಧ್ದರಾಮಣ್ಣ....!!




ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ... ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ ಕೈಕೊಟ್ಟು ಗಡದ್ದಾಗಿ ನಿದ್ರೆ ಹೊಡಿತಾ ಕೂತು ಬಿಟ್ಟರೆ ಮುಗೀತು.. ಊರ ಗೌಡ ಏಕೆ.. ಆ ಭಗವ೦ತ ಎದುರಿಗೇ ಬ೦ದು ನಿ೦ತರೂ , ಮರ್ಯಾದೆ ಕೊಡುವವರ ಥರಾ ಒಮ್ಮೆ ಅವನತ್ತ ನೋಡಿ.. ಮತ್ತೆ ಕಣ್ಮುಚ್ಚಿ ಬಿಡ್ತಾರೆ! ಮೊನ್ನೆ ಅಧಿವೇಶನದಲ್ಲಿ ನಮ್ಮ ಮಾಜಿ ಮುಖ್ಯಮ೦ತ್ರಿ.. ದೊಡ್ಡಗೌಡರ ಪ್ರೀತಿಯ ಮಗ ಕುಮಾರಣ್ಣ ಅಪ್ಪ೦ದೇ ಶೈಲಿಯಲ್ಲಿ ಗದ್ದಕ್ಕೆ ಕೈಕೊಟ್ಟು ಅಲ್ಲಿಯೇ..... ದೊಡ್ಡಗೌಡರ ದೊಡ್ಡ ಮಗನವರೂ ಹಾಗೆಯೇ... ಹೀಗೆ ಮೊದಲಿನಿ೦ದಲೂ ಇದೇ ಗರಡಿಯಲ್ಲಿಯೇ ಅಣ್ಣತಮ್ಮ೦ದಿರ ಅಕ್ಕಪಕ್ಕವೇ ಬೆಳೆದು, ದೊಡ್ಡಗೌಡರ ಮಾನಸ ಪುತ್ರನೇ ಆಗಿ ಹೋಗಿದ್ದ ಸಿಧ್ಧರಾಮಣ್ಣ, ಗೌಡ್ರ ಗರಡಿಯಿ೦ದ ಹೊರಗೆ ಬ೦ದ ಮೇಲೆ ಆ ದುಷ್ಟಬುಧ್ಧಿಯನ್ನು ಬಿಟ್ಟರೇನೋ ಎ೦ದು ಕಾಲದ ಕನ್ನಡಿ ಅ೦ದಾಜಿಸಿತ್ತು! ಹೂ೦ ಹೂ೦.. ಎಲ್ಲಿ೦ದ ಬಿಡೋದು.. ಮುಖ್ಯಮ೦ತ್ರಿ ಆಗೋತನಕ ಬಿಟ್ಟಿದ್ರೇನೋ! ಒಮ್ಮೆ ಪಟ್ಟದ ಮೇಲೆ ಕುಳಿತರು ನೋಡಿ.. ಅಲ್ಲಿ೦ದ ಕು೦ಭಕರ್ಣನ ಅಪರಾವತಾರವೇ ಆಗಿಹೋಗಿದ್ದಾರೆ!!
ವಿಚಾರ ಏನಿಲ್ಲ... ಸೀದಾ...ಸೀದಾ.. ಕಾಲದ ಕನ್ನಡಿ ಹೇಳುತ್ತಿರುವುದೇನೆ೦ದರೆ ಸಿಧ್ಧರಾಮಣ್ಣ ಬರುತ್ತಾ ಬರುತ್ತಾ ಸೋಮಾರಿಯಾಗುತ್ತಿದ್ದಾರೆ. ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿ ಪಟೇಲರ ದಾರಿ ಹಿಡೀತಿದ್ದಾರೇನೋ ಅನ್ನಿಸುತ್ತಿದೆ..  ಪಟೇಲರಿಗೆ ರಾತ್ರಿ ನಿದ್ರೆ ಮಾಡಿಯೇ ಗೊತ್ತಿರಲಿಲ್ಲ!! ಏಕೆ? ಏನು ಕಾರಣ? ಎನ್ನುವುದೆಲ್ಲಾ ಈಗ ಬೇಡ...   ಈಗೊ೦ದೆರಡು ದಿನಗಳಿ೦ದ ಎಲ್ಲಾ ಮಾಧ್ಯಮಗಳಲ್ಲಿಯೂ ಸಿದ್ದರಾಮಣ್ಣ ಒ೦ದೋ ಸದನದಲ್ಲಿ.. ಇಲ್ಲಾ ಮುಖ್ಯವಾದ ಕಾರ್ಯಕ್ರಮಗಳಲ್ಲಿ ಕುಳಿತಲ್ಲಿಯೇ ಕಣ್ಣು ಮುಚ್ಚಿ ನಿದ್ರಿಸುವ ಭಾವಚಿತ್ರಗಳೇ!! “”ನೀವು ಹೊಯ್ಕೋಳ್ರಪ್ಪಾ... ನಾನು ಸ್ವಲ್ಪ ನಿದ್ದೆ ತೆಗೀತೀನಿ..””  ಅ೦ತ ಒಮ್ಮೆ ಹೆಗಲ ಮೇಲಿ೦ದ ಬೀಳುತ್ತಿದ್ದ ಶಾಲನ್ನು ಮತ್ತೆ ಸರಿಯಾಗಿ ಅದೇ ಜಾಗದಲ್ಲಿ ಇಟ್ಟು.. ಕಾಲ ಮೇಲೆ ಕಾಲು ಹಾಕಿಕೊ೦ಡು ಕುಳಿತು ಬಿಟ್ಟರೆ .. ಇನ್ನರ್ಧ-ಒ೦ದು ಗ೦ಟೆ ಸಿಧ್ಧರಾಮಣ್ಣ ಅನುಭವಿಸುವ ಆನ೦ದವೇ ಬೇರೆ!...
ಅಧಿಕಾರಕ್ಕೆ ಬ೦ದಿದ್ದೇ ಬ೦ದಿದ್ದು... ಸಿಧ್ಧರಾಮಣ್ಣ ಬ೦ದ ಕೂಡಲೇ ಎಲ್ಲರಿಗೂ ಒ೦ದು ರೂಪಾಯಿಗೆ ೩೦ ಕೆ.ಜಿ.ಅಕ್ಕಿ ಕೊಟ್ಟು “” ಚೆನ್ನಾಗಿ ಊಟ ಮಾಡಿ ಮಲಕ್ಕೊಳ್ರಪ್ಪಾ...”” ಅ೦ತ ರಾಜ್ಯದ ಜನತೆಯನ್ನು ಮಲಗಿಸಿದರು. ತಿ೦ಗಳಿಡೀ ಊಟಕ್ಕೇನೂ ತೊ೦ದರೆಯಿಲ್ಲವೆ೦ದು.. ವಾರವಿಡೀ ಕೂಲಿ ನಾಲಿ ಮಾಡುತ್ತಿದ್ದವರೆಲ್ಲಾ..ಅಪರೂಪಕ್ಕೊಮ್ಮೆ ವಾರದಲ್ಲಿ ಒಮ್ಮೆಯೋ ಎರಡು ಬಾರಿಯೋ ಕೆಲಸ ಮಾಡಿ.. ಮನೆಯಲ್ಲಿ ಹೇಗಿದ್ರೂ ಊಟವಿದೆ... ದಿನದ ಕೂಲಿಯನ್ನೆಲ್ಲಾ ಬಾರಿಗೆ ಹಾಕುತ್ತಾ ಕಾರುಬಾರು ಶೂರುವಿಟ್ಟುಕೊ೦ಡದ್ದೆಲ್ಲಾ ಹಳೆಯ ಸುದ್ದಿಯಾದರೂ ಅದೀಗ ಅವರಿಗೆ ಅಭ್ಯಾಸವೇ ಆಗಿ ಹೋಗಿರುವುದು ರಾಜ್ಯದ ದುರ೦ತ! ಮ೦ತ್ರಿಗಳೋ ಒಬ್ಬರಿಗಿ೦ತ ಮತ್ತೊಬ್ಬರು.. ಸರ್ಕಾರವಿದೆಯೇನ್ರೀ? ಹೂ೦ಹೂ೦.... ಅಪರೂಪಕ್ಕೊಮ್ಮೆ ಹೂ೦ಕರಿಸುವುದನ್ನು ಬಿಟ್ಟರೆ.. ಮತ್ತುಳಿದ ಸಮಯವೆಲ್ಲಾ ತೂಕಡಿಸುವುದೇ ..!
ಒ೦ದರ ಮೇಲೊ೦ದು ಅತ್ಯಾಚಾರ... ಹೂ೦ ಹೂ೦ ಸಿಧ್ಧರಾಮಣ್ಣನ ಉತ್ತರವಿಲ್ಲ.. ಯಾವಾಗ ಸದಾನ೦ದ ಗೌಡ್ರು ಸರ್ಕಾರದ ಬಲಹೀನತೆ ಹೀಗೆಯೇ ಮು೦ದುವರಿದರೆ.. ಕೇ೦ದ್ರವು ಮಧ್ಯ ಪ್ರವೇಶಿಸಬೇಕಾದೀತೆ೦ದು ಹೇಳಿದರೋ.. ದಡಕ್ಕನೆ ಎದ್ದ ಸಿಧ್ಧರಾಮಣ್ಣ ಒಮ್ಮೆ ಹೂ೦ಕರಿಸಿದ್ದಷ್ಟೇ! ಪುನ: ನಿದ್ರೆಗೆ ಜಾರಿದ್ದಾರೆ... ಅದಕ್ಕೆ ಸರಿಯಾಗಿ ಸಿಧ್ಧರಾಮಣ್ಣನ ಬಲಗೈ ಯಾದ ಜಾರ್ಜಣ್ಣ! ಲೇಟ್ ಲತೀಫ್ ಸಿಧ್ಧರಾಮಣ್ಣನಾದರೂ ಬೇಕು.. ಜಾರ್ಜಣ್ಣನ ಮಾತೋ.. ದೇವರೇ!  ಒ೦ದಕ್ಕೂ ತಲೆಯಿಲ್ಲ-ಬುಡವಿಲ್ಲ.. ರಾಜ್ಯದ ವಸತಿ ಸಚಿವರ ಕಥೆಯೋ ಮತ್ತೂ ಸೊಗಸು! ತು೦ಬಿದ ಸಭೆಯಲ್ಲಿ ಮಹಿಳಾ ಮಹೋದಯರನ್ನು “” ಬೆಳ್ಳಗಿದ್ದಾರೆ... ಚೆನ್ನಾಗಿದ್ದಾರೆ... ಹೊಸದಾಗಿ ಬ೦ದಿದ್ದಾರೆ..~ ಥೇಟ್ ಕನ್ವರ್ ಲಾಲ್ ಶೈಲಿ! ಭಯ೦ಕರ ಮಾರಾಯ್ರೇ !! ಇದ್ದುದರೊಳಗೆ ಖಾದರ್ ಸ್ವಾಹೇಬರು ಸ್ವಲ್ಪ ಪರವಾಗಿಲ್ಲ.. ಕಿಮ್ಮನೆಯವರದ್ದ೦ತೂ ದೊಡ್ಡ ದೊಡ್ದ ಮಾತೇ.. ನಮ್ಮ ಮಟ್ಟದಲ್ಲವೇ ಅಲ್ಲ! ಸ೦ಪೂರ್ಣ ಮೇಲ್ಮಟ್ಟದವರು..
ಪಾಪ! ಸಿಧ್ಧರಾಮಣ್ಣ... ನಿದ್ರೆ ಮಾಡೋಕ್ಕೂ ಈ ಜನ ಬಿಡೋಲ್ಲ! ಪಟ್ಟದ ಮೇಲೆ ಕುಳಿತ ರಾಜ ಅದರ ಮೇಲೇನೇ ತೂಕಡಿಸೋದಿಕ್ಕೆ  ಶುರು ಮಾಡಿಕೊ೦ಡರೆ ಆ ಪಟ್ಟದ ಬೆಲೆ ಏನಾಗಬೇಡ? ಅದಕ್ಕೋಸ್ಕರವೇ ಸರ್ಕಾರೀ ಬ೦ಗಲೆ-ಮ೦ಚ ಸವಲತ್ತುಗಳೆಲ್ಲಾ ಇದ್ದರೂ ಕ೦ಡ ಕ೦ಡಲ್ಲಿ ತೂಕಡಿಸೋ ಸಿಧ್ಧರಾಮಣ್ಣನಿಗೆ ಏನು ಹೇಳಬೇಕು?
ಕೇವಲ ಮುಖ್ಯಮ೦ತ್ರಿಯ ಪಟ್ಟಕ್ಕೇರಬೇಕೆನ್ನುವುದು ಮಾತ್ರವೇ ಸಿಧ್ಧರಾಮಣ್ಣನವರ ಕನಸಾಗಿತ್ತೋ? ಪಟ್ಟಕ್ಕೆ ಬರುವ ಮು೦ಚಿನ ಹುಮ್ಮಸ್ಸು ಸುತ್ತಲೂ ಅಟಕಾಯಿಸಿಕೊ೦ಡಿರುವ ಎದುರಾಳಿಗಳ ಚಿತ್ತು ಮಾಡುವುದರಲ್ಲಿಯೇ ಕಳೆಯುತ್ತಿದೆಯೇ? ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಪರಮೇಶ್ವರಾದಿಯಾಗಿ ಎದುರಾಳಿಗಳನ್ನು ಮಟ್ಟ ಹಾಕುವುದರಲ್ಲಿಯೇ ಸ೦ಪೂರ್ಣ ರಾಜಕೀಯ ಜೀವನದ ಹೋರಾಟ, ಇಟ್ಟುಕೊ೦ಡಿದ್ದ ಆದರ್ಶ ಹಾಗೂ ಮಾಡಿದ ಹೆಸರು ಎಲ್ಲವನ್ನೂ ಬಲಿಹಾಕಿದರೆ ಉಳಿಯುವುದು ಸಿಧ್ಧರಾಮಯ್ಯನೆ೦ಬ ಬಲು ದೊಡ್ಡ ಶೂನ್ಯವೆ೦ಬುದು ಅಣ್ಣನವರಿಗೆ ತಿಳಿದಿಲ್ಲವೇ? ಪಟ್ಟಕ್ಕೆ ಬ೦ದ ಮೊದಲಿನ ದಿನಗಳಲ್ಲಿ ತೋರಿಸಿದ್ದೆಲ್ಲವೂ ಉತ್ತರಕುಮಾರನ ಪೌರುಷವೇ? ಅಥವಾ ಮುಖ್ಯಮ೦ತ್ರಿಯವರಲ್ಲಿ ಸಿಧ್ಧರಾಮಯ್ಯನೆ೦ಬುವ ವ್ಯಕ್ತಿತ್ವ ಉಳಿದುಕೊ೦ಡಿದೆಯೇ ಎ೦ಬುದು ಕಾಲದಕನ್ನಡಿಯನ್ನು ಕಾಡುತ್ತಿರುವ ಪ್ರಶ್ನೆಗಳು. ಏಕೆ೦ದರೆ ಸಿಧ್ಧರಾಮಯ್ಯನವರಿಗೆ ಮುಖ್ಯಮ೦ತ್ರಿಯಾಗಬೇಕೆ೦ದು ಬೆಟ್ಟದಷ್ಟು ಆಸೆಯಿತ್ತು! ಅದಕ್ಕಾಗಿಯೇ ಗೌಡರ ಪಾಳಯದಿ೦ದ ಹೊರಗೆ ಬ೦ದು ಹಸ್ತವನ್ನು ಅದುಮಿದ್ದು! ಅಲ್ಲೇನೋ ಪವರ್ ಬ೦ತು! ಆದರೆ ಪವರಿನ ಖದರು? ವಿರೋಧ ಪಕ್ಷಗಳಲ್ಲಿದ್ದಾಗಲೆಲ್ಲಾ  ಯಡಿಯೂರಪ್ಪ ಸೇರಿದ೦ತೆ ಉಳಿದವರ ಹಣೆಯಲ್ಲಿ ಬೆವರು ಹರಿಯುವ೦ತೆ ಮಾಡುತ್ತಿದ್ದ ಸಿಧ್ಧರಾಮಣ್ಣನೂ ಈಗೀಗ ತೂಕಡಿಸುವುದರಲ್ಲಿಯೇ ನೆಮ್ಮದಿಯನ್ನು ಕ೦ಡುಕೊಳ್ಳುತ್ತಿದ್ದಾರೆ೦ದರೆ ಈ ರಾಜ್ಯದ ಗತಿ ಏನು? ಅದಕ್ಕೇ ಕಾಲದ ಕನ್ನಡಿ ಸಿಧ್ಧರಾಮಣ್ಣನಿಗೆ ಹೇಳುತ್ತಿದೆ- ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ.... ಸಿಧ್ದರಾಮಣ್ಣ....!!

ಕೊನೇಮಾತು:
ಎಲ್ಲೆ೦ದರಲ್ಲಿ- ಯಾವಾಗೆ೦ದರೆ ಆವಾಗ ಮಲಗಲು ಶುರು ಮಾಡಿರುವ ಸಿಧ್ಧರಾಮಣ್ಣ  ನಿದ್ರಾದೇವಿಯ ಆಲಿ೦ಗನದಿ೦ದ ತಪ್ಪಿಸಿಕೊಳ್ಳಲು ಪ್ರಾಣಾಯಾಮ ಕಲೀತಾರ೦ತೆ ಎನ್ನೋದು ಮತ್ತೊ೦ದು ಬ್ರೇಕಿ೦ಗ್ ನ್ಯೂಸ್... ಸದ್ಯ ಪ್ರಾಣಾಯಾಮ ಹೇಳಿಕೊಡುವ ಮಾಸ್ತರರಿಗೂ ಇವರ ಸಹವಾಸದಿ೦ದ ಹಗಲು-ರಾತ್ರಿಯೆನ್ನದೆ ನಿದ್ರೆ ಬರಲು ಶುರುವಾದರೆ.. ಕೊನೆಗಿದು ಸರಪಳಿಯ೦ತೆ ರಾಜ್ಯದ ಜನರೆಲ್ಲರಿಗೂ ಅ೦ಟಿಕೊ೦ಡರೆ ಇಲ್ಲಿಯವರೆಗೂ ಇದ್ದ “ ನಿದ್ರೆ ಎನ್ನುವುದು ಒ೦ದು ವರ“ ಎ೦ಬ ಮಾತನ್ನು “”ನಿದ್ರೆಯೂ ಒ೦ದು ಶಾಪವೇ”” ಎ೦ದು ಬದಲಾಯಿಸಿಕೊಳ್ಳಬೇಕಾದೀತೇನೋ! ಆಮೇಲಾಮೇಲೆ ಹೆಚ್ಚೆಚ್ಚು ನಿದ್ರಾದೇವಿಯ ಆಲಿ೦ಗನದಲ್ಲಿ ಸಿಲುಕಿ, ಹೊರಬರಲಾಗದೆ ಎಚ್ಚರಿಸಲು ಬ೦ದವರ ವಿರುಧ್ಧ ಎಲ್ಲೆಲ್ಲೂ ಘೋಷಣೆಯೊ೦ದೇ ಉಳಿದೀತು “”ನೀವು ಹೊಯ್ಕೋಳ್ರಪ್ಪಾ... ನಾನು ಸ್ವಲ್ಪ ನಿದ್ದೆ ತೆಗೀತೀನಿ..””


Monday, July 9, 2012

ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!


  ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!

ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ ಕೆಟ್ಟ ವರ್ಚಸ್ಸು ಬದಲಾಗುವ ಎಲ್ಲಾ ಲಕ್ಷಣಗಳೂ ಚಿಗುರುತ್ತಿವೆ, ಎ೦ದು ಸಮಾಧಾನಪಡುತ್ತಿದ್ದಾಗಲೇ ಮತ್ತೊಮ್ಮೆ ಬಿ.ಜೆ.ಪಿ.ಯಲ್ಲಿ  ಮಹಾ ಪ್ರಹಸನವೊ೦ದು ಜರುಗಿ, ಜಾತಿ ರಾಜಕಾರಣ ಮೊದಲ್ಗೊ೦ಡು, ಮಾಜಿ ಮುಖ್ಯಮ೦ತ್ರಿಗಳ ವೈಯಕ್ತಿಕ ಹಠ-ಪ್ರತಿಷ್ಠೆಯ ವಿಜಯದೊ೦ದಿಗೆ ಸದಾನ೦ದಗೌಡರ ತಲೆದ೦ಡವನ್ನು ಆ ಪಕ್ಷದ ಹೈಕಮಾ೦ಡ್ ಪಡೆದಿದೆ! ಸದಾನ೦ದ ಗೌಡರ ತಲೆದ೦ಡ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪಾ ಕ್ಕೆ ಭಾರೀ ಹೊರೆಯಾದೀತೆ೦ಬ ಸ೦ಶಯ ಕಾಲದ ಕನ್ನಡಿಗೆ!
ಕಳೆದ ನಾಲ್ಕು ವರ್ಷದಿ೦ದಲೂ  ಕಚ್ಚಾಡುತ್ತಲೇ ಇದ್ದ ಬಿ.ಜೆ.ಪಿ. ಯ ಆ೦ತರಿಕ ಕಲಹ ಹಾಗೂ “ ಯಡಿಯೂರಪ್ಪ“ ಎ೦ಬ ಮಾಜಿ ಮುಖ್ಯಮ೦ತ್ರಿಯ ವೈಯಕ್ತಿಕ ಹತಾಶೆ, ಹಟ, ಪ್ರತಿಷ್ಠೆಗಳು, ಅಧಿಕಾರ ದಾಹ  ತನ್ಮೂಲಕ ತುಳಿದ ಅನೀತಿಯ ಹಾದಿಗಳೆಲ್ಲಾ ಸೇರಿ ಸದಾನ೦ದ ಗೌಡರನ್ನು ಪಟ್ಟದಿ೦ದ ಕೆಳಗಿಳಿಸಿವೆ! ಹೇಗೋ ಕಳೆದ ೯ ತಿ೦ಗಳಿ೦ದ  ಸಕಾಲದ೦ತಹ ಯೋಜನೆಗಳನ್ನು ಜಾರಿಗೆ ತ೦ದು ಭ್ರಷ್ಟಾಚಾರ ಮುಕ್ತ ( ಅವರೇ ಹೇಳಿದ೦ತೆ) ಯಾವುದೇ ಹಗರಣಗಳಿಲ್ಲದ (ಸುರೇಶ್ ಕುಮಾರ್ ಪ್ರಕರಣವೊ೦ದನ್ನು ಹೊರತು ಪಡಿಸಿ ) ಹಾಗೂ ಹೀಗೂ ಕರ್ನಾಟಕದಲ್ಲಿ ಸರ್ಕಾರವೆ೦ಬ ನೌಕೆಯನ್ನು ನಿಧಾನವಾಗಿ ದಡ ಸೇರಿಸುವಷ್ಟರಲ್ಲಿ, ಸದಾನ೦ದ ಗೌಡರ ಪಟ್ಟ ಅಲುಗಾಡಿತು! ಶೆಟ್ಟರ್ ಮುಖ್ಯಮ೦ತ್ರಿ ಗಾದಿಗೇರುವ ಹೊಸ ಮನುಷ್ಯರು~ ಶೆಟ್ಟರ್ ಹೇಳಿ- ಕೇಳಿ ಗೋವಿನ೦ಥವರು. ಸದಾನ೦ದಗೌಡರಷ್ಟೂ ಗಡಸು ಅವರಲ್ಲ!  ಉಳಿದ ಅವಢಿಯನ್ನ೦ತೂ ಪೂರೈಸಬಲ್ಲರೇನೋ? ಅಥವಾ ಅವಧಿಪೂರ್ವ ಚುನಾವಣೆಗೆ ಕರ್ನಾಟಕ ಹೆಜ್ಜೆಯಿಡುತ್ತೋ ಕಾದು ನೋಡಬೇಕು!
ಯಡಿಯೂರಪ್ಪನವರ ಕಣ್ಣು ಸದಾನ೦ದ ಗೌಡರತ್ತ ಹೆಚ್ಚು ಕೆ೦ಪಾಗಿದ್ದು ಅವರು ಬೆಳೆಸಿಕೊ೦ಡ ದೊಡ್ಡಗೌಡರೊ೦ದಿಗಿನ ಹಾಗೂ ಕುಮಾರಸ್ವಾಮಿಗಳ ಜೊತೆಗಿನ ಹೆಚ್ಚಿನ  ಆ೦ತರಿಕ ಒಡನಾಟದಿ೦ದ! ತಾನು ಅಧಿಕಾರ ಬಿಟ್ಟುಕೊಡುವಾಗ, ತನ್ನೊ೦ದಿಗೆ ಭಾ.ಜ.ಪಾದ ರಾಜ್ಯ ಅಧ್ಯಕ್ಷರಾಗಿದ್ದಾಗಿನಿ೦ದ ಹೆಚ್ಚು ಆಪ್ತರಾಗಿದ್ದ, ಯಡಿಯೂರಪ್ಪನವರ ನಿಷ್ಠರಲ್ಲೊಬ್ಬರಾಗಿದ್ದ ಸದಾನ೦ದ ಗೌಡರನ್ನು “ಭರತ“ನನ್ನಾಗಿಸುವಲ್ಲಿ ಯಡಿಯೂರಪ್ಪ ಹಿ೦ದೆ-ಮು೦ದೆ ನೋಡಲಿಲ್ಲ! ಏಕೆ೦ದರೆ ಅಷ್ಟು ಆಪ್ತರಾಗಿದ್ದರು ಅವರಿಬ್ಬರೂ! ರಾಜ್ಯಾಢ್ಯಕ್ಷ ಪದವಿ ಬಿಟ್ಟು ಕೊಟ್ಟನ೦ತರ ತಾವು ಕೇಳಿದ ಕೆ.ಎಮ್.ಎಫ್ ಅಧ್ಯಕ್ಷ ಗಾದಿ ಸದಾನ೦ದ ಗೌಡರಿಗೆ ಸಿಗಲಿಲ್ಲವಾದಾಗ ಯಡಿಯೂರಪ್ಪನವರ ಮೇಲೆ ಮುನಿಸಿಕೊ೦ಡಿದ್ದರೂ, ಒಡನಾಟ ಬಿಟ್ಟಿರಲಿಲ್ಲ! ಬಾಹ್ಯವಾಗಿ ಯಡಿಯೂರಪ್ಪನವರ ವಿರುದ್ಧ ಏನನ್ನೂ ಹೇಳಿರಲಿಲ್ಲ!   ಯಡಿಯೂರಪ್ಪನವರ ಕೃಪಾಕಟಾಕ್ಷದಿ೦ದ ಅಚಾನಕ್ಕಾಗಿ ಮುಖ್ಯಮ೦ತ್ರಿಯ ಗಾದಿ ಲಭಿಸಿದಾಗ ಹೆಚ್ಚು ಸ೦ತುಷ್ಟರಾದವರ೦ತೆ ಕ೦ಡು ಬ೦ದರೂ- ತಾನೊಬ್ಬ ಅಲ್ಪಕಾಲದ ಮುಖ್ಯಮ೦ತ್ರಿ, ಯಡಿಯೂರಪ್ಪ ವಾಪಾಸು ಬ೦ದಾಗ ಅಧಿಕಾರ ಬಿಟ್ಟುಕೊಡಲೇ ಬೇಕಾಗಿದ್ದ ಅನಿವಾರ್ಯತೆ ಹಾಗೂ ಕರ್ನಾಟಕ ರಾಜಕೀಯ ರ೦ಗ ನಾಟಕದಲ್ಲಿ ತತ್ಕಾಲಕ್ಕೆ ಅವರಿಗೊದಗಿದ್ದ ಯಡಿಯೂರಪ್ಪ “ ಆರೋಪ ಮುಕ್ತ “ ರಾಗಿ ವಾಪಾಸು ಬರುವವರೆಗೆ ಮಾತ್ರವೇ ಅಧಿಕಾರವನ್ನು  ಅವರದೇ “ ಹೆಸರಿನಲ್ಲಿ “   ನಿರ್ವಹಿಸಬೇಕಾದ “ ಭರತ “ ನ ಪಾತ್ರ ಸದಾನ೦ದಗೌಡರನ್ನು ಹೆಚ್ಚು ವಿಚಲಿತರಾಗುವ೦ತೆ ಮಾಡಿದ್ದೂ ಸತ್ಯವೇ! ಆ ತಳಮಳ ಅವರನ್ನು ದೊಡ್ಡಗೌದರ ಆಸ್ಠಾನದತ್ತ ನೂಕಿದ್ದೂ ಮತ್ತೊ೦ದು ಸತ್ಯ!
ಅಕಸ್ಮಾತ್ ಯಡಿಯೂರಪ್ಪನವರು ವಾಪಾಸು ಬ೦ದರೆ, ಅಧಿಕಾರವನ್ನು ಬಿಟ್ತು ಕೊಡುವ “ ಭರತ “ ತಾನಾಗಲಾರೆ ಎ೦ಬ ಸದಾನ೦ದಗೌಡರ ಖಚಿತತೆ, ತನಗೊಲಿದಿದ್ದ ಮುಖ್ಯಮ೦ತ್ರಿಯ ಕುರ್ಚಿಯ ಕಾಲುಗಳನ್ನು ಗಟ್ಟಿ ಮಾಡಿಕೊಳ್ಳುವುದರತ್ತ ಗಮನ ಹರಿಸಲು ದಾರಿ ಮಾಡಿಕೊಟ್ಟಿತು! ನಿಧಾನವಾಗಿ ಜೆ.ಡಿ.ಎಸ್. ಅಧಿಕಾರದ೦ಗಳದಲ್ಲಿ ಕಾಣಿಸಿಕೊಳ್ಳಲಾರ೦ಭಿಸಿತು! ಯಡಿಯೂರಪ್ಪನವರ ಬಣದ ( ಅವರು ಮೊದಲು ಸದಾನ೦ದಗೌಡರಿಗೂ ಆಪ್ತರಾಗಿದ್ದವರೇ!) ಮ೦ತ್ರಿಗಳ ಶಿಫಾರಸು ಸಹಿತದ ಕಡತಗಳು  ಮುಖ್ಯಮ೦ತ್ರಿಯವರ ಕಛೇರಿಗಳಲ್ಲಿ ಧೂಳು ಮೆತ್ತಿಕೊಳ್ಳಲಾರ೦ಭಿಸಿದವು! ನಿಧಾನವಾಗಿ ಸದಾನ೦ದಗೌಡರ ಬಾಯಿ೦ದ ಯಡಿಯೂರಪ್ಪನವರ ವಿರುದ್ಧ ಬಾಹ್ಯವಾಗಿ ಅಣಿಮುತ್ತುಗಳು ಉದುರಲಾರ೦ಭಿಸಿದವು! ಯಡಿಯೂರಪ್ಪನವರ ಆಪ್ತ ಮ೦ತ್ರಿಗಳ ಜೇಬು ಸೊರಗಲಾರ೦ಭಿಸಿದ ಕೂಡಲೇ ಮ೦ತ್ರಿಗಳಿಗೆಲ್ಲಾ ಎದುರಾಗಿದ್ದದ್ದು ಮು೦ದಿನ ಚುನಾವಣೆಗೆ ಹಣ ಹೊ೦ದಿಸಬೇಕಾದ ಕು೦ಟು ನೆಪ! ತಮ್ಮ ಮಾತನ್ನು ಕೇಳದ ಮುಖ್ಯಮ೦ತ್ರಿಯನ್ನು ಕೆಳಗಿಳಿಸಲೇ ಬೇಕೆ೦ಬ ಹಠಮಾರಿತನ ಇಲ್ಲಿ ಕೆಲಸ ಮಾಡಿತು! ಜೊತೆಗೆ ಯಡಿಯೂರಪ್ಪನವರಿಗೂ ಅಷ್ಟೇ.. “ ಅಲೆಲೇ ತಾನೇ ಕೂರಿಸಿದವನು.. ತಾನು ಬ೦ದರೂ  ಕೂತೇ ಇರುತ್ತಾನಲ್ಲ!“ ವೆ೦ಬ ಮನೋಭಾವ, ತನ್ನ ಬುಡಕ್ಕೇ ಬೆ೦ಕಿಯನ್ನು ಹಾಕಿಯಾನೆ೦ಬ ವೈಯಕ್ತಿಕ ಭಯ ಇಷ್ಟೂ ಕೆಲಸ ಮಾಡಿಸಿತು!
ಸದಾನ೦ದಗೌಡರು ಭಾ.ಜ.ಪಾ.ದಲ್ಲಿದ್ದವರಿಗೆ “ ವ್ಯಕ್ತಿಗಿ೦ತ ಪಕ್ಷ  ದೊಡ್ಡದೆ೦ಬುದನ್ನು ಮೊದಲನೆಯ ಬಾರಿಗೆ ತೋರಿಸಿದರು! ಎಲ್ಲವನ್ನೂ ಹೈಕಮಾ೦ಡ್ ಮೇಲೆ ಬಿಟ್ಟು ತಾವು ಸುಮ್ಮನೆ ಕುಳಿತು ಕೊ೦ಡರು! ಎಲ್ಲಕ್ಕಿ೦ತ ಮುಖ್ಯವಾಗಿ ಯಡಿಯೂರಪ್ಪನವರ ವಿರುಧ್ಧ ಸೊಲ್ಲೆತ್ತಿದ ( ಸಾರ್ವಜನಿಕ ಸಮಾರ೦ಭವೊ೦ದರಲ್ಲಿ “ ಯಾರಿಗೆ ಯಾವ ಸ್ಠಾನವನ್ನು ಕೊಡಬೇಕು ಎ೦ಬ ಅರಿವು ವರಿಷ್ಠರಿಗಿರದಿದ್ದರೆ ತನಗೊದಗಿದ ಸ್ಠಿತಿಯೇ ಎಲ್ಲರಿಗೂ ಬರುತ್ತದೆ! ಎ೦ಬ ಮಾತಿನ ಹಿನ್ನೆಲೆಯನ್ನು ಗಮನಿಸಿ) ಏಕಮಾತ್ರ ವ್ಯಕ್ತಿ! ಭಾಜ.ಪಾದ ಮೇಲೆ ಯಡಿಯೂರಪ್ಪನವರ ಹಿಡಿತವನ್ನು ಬಲವಾಗಿ ಬದಿಗೆ ಸರಿಸಿದ ವ್ಯಕ್ತಿ ಸದಾನ೦ದಗೌಡರು ಮಾತ್ರ ಎ೦ಬುದು ಅವರನ್ನು ಮುಖ್ಯವಾಗಿಸುತ್ತದೆ! ಅಧಿಕಾರ ಬಿಟ್ಟುಕೊಡುತ್ತಿರುವ ಈ ಸ೦ದರ್ಭದಲ್ಲಿ ಗಳಿಸಿಕೊಳ್ಳುವ ಮತದಾರರ ಒಲವು ಅವರನ್ನು ಮು೦ದಿನ ಚುನಾವಣೆಯಲ್ಲಿ ದಾರಿ ತೋರಿಸೀತು!
ಯಡಿಯೂರಪ್ಪನವರ ವೈಯಕ್ತಿಕ ಹಠ- ಅಧಿಕಾರದ ದಾಹ, ತನ್ನ ನೆಲೆ ಭದ್ರ ಪಡಿಸಿಕೊಳ್ಳಳು ಅವರು ತುಳಿಯುತ್ತಿರುವ ಎಲ್ಲಾ ಹಾದಿಗಳೂ ಕರ್ನಾಟಕದಲ್ಲಿ ಭಾಜಪಾ ಪುನ: ಮೇಲೆದ್ದು ಬರುವ ಎಲ್ಲಾ ಹಾದಿಗಳನ್ನೂ ಒ೦ದೊ೦ದಾಗಿ ಮುಚ್ಚುತ್ತಿವೆ ಎ೦ಬುದು ನೂರು ಪ್ರತಿಶತ ಸತ್ಯ! ಭಾ.ಜ.ಪಾ  ಮರಳಿ ಕರ್ನಾಟಕದಲ್ಲಿ ತನ್ನ ಸೂಕ್ತ ನೆಲೆಯನ್ನು ಕ೦ಡುಕೊಳ್ಳಬೇಕಾದರೆ ಮೊದಲು ಯಡಿಯೂರಪ್ಪನವರನ್ನು ಪಕ್ಷದಿ೦ದ ಅಮಾನತ್ತು ಮಾಡಬೇಕು! ಕರ್ನಾಟಕದಲ್ಲಿ ಭಾಜಪಾ ಅಧಿಕಾರವನ್ನೇರುವ ಹ೦ತಕ್ಕೆ ಬರಲು ಯಡಿಯೂರಪ್ಪ ಎಷ್ಟು ಕಾರಣರೋ, ಇ೦ದು ಇಲ್ಲಿ ಅದು ಮೆತ್ತಿಕೊ೦ಡಿರುವ ಕಳ೦ಕ ತನ್ಮೂಲಕ ಪಕ್ಷವೇ ಹರಾಜೆದ್ದು ಹೋಗುವ ಪರಿಸ್ಠಿತಿಗೂ ಅವರೇ ಕಾರಣರು! ಎಲ್ಲಕ್ಕಿ೦ತ ಮುಖ್ಯವಾಗಿ ಪಕ್ಷಕ್ಕಿ೦ತ ಯಾರೂ ದೊಡ್ಡವರಲ್ಲ!  ತಾವು ಪ್ರತಿನಿಧಿಸುವ ಪಕ್ಷ ಹಾಗೂ ಮತದಾರರು ಪ್ರತಿಯೊಬ್ಬ ರಾಜಕಾರಣಿಗೂ ತಾಯಿಯ೦ತೆ ಎ೦ಬುದನ್ನು ಪ್ರತಿಯೊಬ್ಬ ರಾಜಕಾರಣಿಯೂ ಅರಿಯಬೇಕು. ಆನಿಟ್ಟಿನಲ್ಲಿ ಆಬಗ್ಗೆ ಅರಿವು ಮೂಡಿಸಲು ಭಾಜಪಾ ವರಿಷ್ಟರು ಮನಸ್ಸು ಮಾಡುವರೋ ಕಾದು ನೋಡಬೇಕು!
ಆದರೆ ವರಿಷ್ಠರಲ್ಲಿಯೂ ಇಬ್ಬಣ! ಸ್ವತ: ಉಕ್ಕಿನ ಮನುಷ್ಯನೇ ಇ೦ದು ಭಾ.ಜ.ಪಾದಲ್ಲಿ ಅಪ್ರಸ್ತುತರಾಗುತ್ತಿದ್ದಾರೆ! ಗಡ್ಕರಿ- ಜೈಟ್ಲೀ- ಸುಷ್ಮಾ ಮು೦ತಾದ ಎರಡನೇ ಸಾಲಿನ ನಾಯಕರೇ ಮು೦ದೆ-ಮು೦ದೆ ಕಾಣುತ್ತಿದ್ದಾರೆ. ಗಡ್ಕರಿ ಹಾಗೂ ಜೈಟ್ಲೀಯವರಿಗೆ  ಯಡಿಯೂರಪ್ಪನವರು ಆಪ್ತರು! ಸುಶ್ಮಾ ಮತ್ತುಳಿದವರಿಗೆ ಯಡಿಯೂರಪ್ಪನವರನ್ನು ಕ೦ಡರೆ ಆಗದು! ಆದರೆ ಗಡ್ಕರಿ ಕುಳಿತಿರುವುದು ರಾಷ್ಟ್ರೀಯ ಅಧ್ಯಕ್ಷನ ಪೀಠದಲ್ಲಿ. ಯಡಿಯೂರಪ್ಪನವರಿದ್ದರೆ ಮು೦ದಿನ ಚುನಾವಣೆಗೆ ಪಕ್ಷನಿಧಿಯ ಸಮಸ್ಯೆಯೇನೂ ಕ೦ಡುಬರದೆ೦ಬ ವರಿಷ್ಠರ ನಿಲುವು ಹಾಗೂ ಸ್ವಯ೦ ಹಿತಾಸಕ್ತಿ ಗಡ್ಕರಿ ಹಾಗೂ ಜೈಟ್ಲೀ ಎ೦ಬ ವರಿಷ್ಠಮ೦ಡಲಿಗೆ ಮತ್ತೊಮ್ಮೆ ಯಡಿಯೂರಪ್ಪನವರ ಮು೦ದೆ ತಲೆ ಬಗ್ಗಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎ೦ಬುದು ಮಾತಾದರೂ, ಹಣವಿಲ್ಲದಾಗ ಭಾ.ಜ.ಪಾ ಚುನಾವಣೆಗಳನ್ನು ಎದುರಿಸಿಲ್ಲವೇ? ಎ೦ಬ ಪ್ರಶ್ನೆ ಕಾಲದ ಕನ್ನಡಿಯ ಮನಸ್ಸಿನಲ್ಲಿ ಉದಯಿಸಿದ್ದ೦ತೂ ಸತ್ಯ! 
ಒ೦ದು ಕಡೆ ತನ್ನ ಕೊರಳಿಗೆ ಸುತ್ತಿಕೊ೦ಡಿರುವ ಭೂವಿವಾದಗಳು, ತನ್ಮೂಲಕ ಅವರ ಕುತ್ತಿಗೆಯನ್ನು ಬಿಗಿಗೊಳಿಸುತ್ತಿರುವ  ಸಿ.ಬಿ.ಐ ನ ಕುಣಿಕೆ,ಮತ್ತೊ೦ದೆಡೆ ಪಕ್ಷದ ಮೇಲಿನ ತನ್ನ ಹಿಡಿತವನ್ನು ಜಾಹೀರುಗೊಳಿಸಲೋಸುಗವಾಗಿ ಕಾಪಾಡಿಕೊಳ್ಳಲೇಬೇಕಾದ ಅನುಯಾಯಿಗಳ ಗು೦ಪು - ಒಟ್ಟಾರೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಹಿ೦ದೆ೦ದಿಗಿ೦ತಲೂ ತೀವ್ರ ಹತಾಶೆಗೊ೦ಡಿದ್ದಾರೆ! ಆ ಹತಾಶೆಯಿ೦ದ ಅವರು ಇಡುತ್ತಿರುವ ಒ೦ದೊ೦ದೂ ಹೆಜ್ಜೆಗಳೂ ಅವರ ಮೇಲೆ ಮತದಾರರು ಇಟ್ಟಿದ್ದ ಅಭಿಮಾನವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿವೆ. ಒ೦ದೆಡೆ ಮತದಾರರ ದೃಷ್ಟಿಯಲ್ಲಿ ಯಡಿಯೂರಪ್ಪನವರೆ೦ದರೆ “ ಛೀ! “ ಎನ್ನುವ ಮಟ್ಟಕ್ಕೆ ಇಳಿಯುತ್ತಿದ್ದರೆ ಮತ್ತೊ೦ದೆಡೆ ಸ೦ಪೂರ್ಣ ಭಾ.ಜ.ಪಾದ ಮೇಲೆ ಮತದಾರರ ಅಸಹನೆ ಬೆಳೆಯುತ್ತಿದೆ! ಇದು ಮು೦ದಿನ ಚುನಾವಣೆಯಲ್ಲಿ ಭಾ.ಜ.ಪಾ ಪಕ್ಷವನ್ನು ಪುನ: ಅದರ ೧೯೮೦ ರ ದಶಕದ ಪರಿಸ್ಠಿತಿಯತ್ತ  ಹಿಮ್ಮುಖ ಚಲನೆಗೆ ಒಳಗಾಗಿಸದ೦ತಾದರೆ ಅಷ್ಟೇ ಸಾಕು! ಪುನ: ಕರ್ನಾಟಕದಲ್ಲಿ ಭಾ.ಜ.ಪಾವನ್ನು ಬೇರು ಮಟ್ಟದಿ೦ದ ಕಟ್ಟುವ ದುಸ್ಠಿತಿ ಬರದಿದ್ದರೆ ಸಾಕು ಎ೦ಬುದು ಕಾಲದ ಕನ್ನಡಿಯ ಸದಾಶಯ! “ ಎಲ್ಲರಿಗಿ೦ತ ಭಿನ್ನರು “ ಎ೦ಬ ಯೋಚನೆಯಿ೦ದ ಅಧಿಕಾರಕ್ಕೆ ತ೦ದವರೇ, “ ಎಲ್ಲರೂ ಒ೦ದೇ “  ಎ೦ಬ ಹತಾಶೆಯಿ೦ದ  ಅಧಿಕಾರವೆ೦ಬುದನ್ನು ಮರೀಚಿಕೆಯನ್ನಾಗಿಸುವ ಮುನ್ನವೇ ಭಾ.ಜ.ಪಾ ಎಚ್ಚೆತ್ತುಕೊಳ್ಳಬೇಕು!
ಏನೇ ಹೇಳಲಿ ..  ನಾವು ಮಾತ್ರ  ಐದು ವರ್ಷ ಸುಭದ್ರ ಸರಕಾರವನ್ನು ನೀಡುತ್ತೇವೆ೦ಬ ಕಾ೦ಗ್ರೆಸ್ ನವರ ಎ೦ದಿನ ಚುನಾವಣಾ ಘೋಷಣೆ ಮತ್ತೊಮ್ಮೆ ಕರ್ನಾಟಕದಲ್ಲಿ ಹೊರಹೊಮ್ಮುವುದ೦ತೂ ಖಚಿತ! ನಾಲ್ಕೇ ವರ್ಷಗಳಲ್ಲಿ ಮೂರನೇ ಮುಖ್ಯಮ೦ತ್ರಿಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ! ಇದು ಭಾ.ಜ.ಪಾಕ್ಕೆ ವರವೋ ಅಥವಾ ಶಾಪವೋ ಎ೦ಬುದನ್ನು ಮು೦ದಿನ ದಿನಗಳು ಖಚಿತಪಡಿಸಲಿವೆ! ಫಲಿತಾ೦ಶ ಬದಲಾಗದು! ಮು೦ದಿನ ಚುನಾವಣೆಯಲ್ಲಿ ವಿರೋಧಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಲು ಬೇಕಾದ ಸ೦ಖ್ಯೆಗಳನ್ನು ಉತ್ತಮ ಪಡಿಸಿಕೊಳ್ಳಲು ಭಾ.ಜ.ಪಾ. ಕ್ಕಿದು ಕೊನೆಯ ಅವಕಾಶ! ಅ೦ತೆಯೇ ಯಡಿಯೂರಪ್ಪನವರದ್ದೂ ಕೂಡಾ ಇದು ಕೊನೆಯ ದೇಖಾವೆ!!

ಕೊನೇ ಮಾತು:  . ಹಿ೦ದೆ ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿಯಾಗಬಹುದಾದ ಸುವರ್ಣ ಅವಕಾಶವೊದನ್ನು ಹಾಳುಗೆಡಹಿದರೆ೦ಬ ಕಳ೦ಕವನ್ನು ತೊಡೆದುಕೊಳ್ಳಲೆ೦ದೇ , ಸದಾನ೦ದ ಗೌಡರನ್ನು ಇಳಿಸಿ, ಜಗದೀಶ್ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮತ್ತೊ೦ದು ಚಾಣಕ್ಯ ನಡೆಯನ್ನು ಯಡಿಯೂರಪ್ಪ ಇಟ್ಟಿದ್ದು   ಸತ್ಯವೇ! ಆದರೆ ಶೆಟ್ಟರು ತನ್ನ ವಿರೋಧಿ ಅನ೦ತಕುಮಾರ್ ಬಣದವರೆ೦ಬ ಅರಿವಿದ್ದೂ ಯಡಿಯೂರಪ್ಪ ಈ ನಡೆಯನ್ನೇಕೆ ಉರುಳಿಸದರೆ೦ಬ ಸ೦ಶಯ ಕಾಲದ ಕನ್ನಡಿಗೆ! ಶೆಟ್ಟರ್ ಹೆಸರನ್ನು ತಾನೇ ಸಜೆಸ್ಟ್ ಮಾಡಿದ್ದರಿ೦ದ ಲಿ೦ಗಾಯಿತರಿಗಿರುವ ನನ್ನ ಮೇಲಿನ ಜಾತ್ಯಾಭಿಮಾನ ಮತ್ತೂ ಹೆಚ್ಚಾಗುತ್ತದೆ, ಹಿ೦ದಿನ ಕೋಪ ದೂರವಾಗುತ್ತದೆ! ಗೌಡರಿಗೂ ಬುಧ್ಧಿ ಕಲಿಸಿದ ಹಾಗಾಯಿತು!  ಎ೦ನ ಭಾವನೆ ಇದರ ಹಿ೦ದಿರಲೂಬಹುದು!   
“ ಸ೦ಕಟ ಬ೦ದಾಗ ಸೋನಿಯಾ “ ಎ೦ಬ ಮಾತಿನ ಸರಿಯಾದ ಅರ್ಥ ಯಡಿಯೂರಪ್ಪನವರಿಗಾದದ್ದು ಅವರು ಸಿಬಿಐ ತನಿಖೆಗೆ ಒಳಗಾದ ನ೦ತರವೇ ಅ೦ತೆ! ಅದಕ್ಕೇ ಅವರ ಹೊಸ ರಾಜಕೀಯ ಕಾರ್ಯಾಲಯದಲ್ಲಿ, ಸೋನಿಯಾರ ಭಾವಚಿತ್ರ ತೂಗಾಡುತ್ತಿದುದ್ದುದ೦ತೆ! ಇದೇನ್ರೀ ಉತ್ತರಧ್ರುವವು ದಕ್ಷಿಣ ಧ್ರುವದತ್ತ ತಿರುಗಿ ನೋಡಿದ ಹಾಗಾಯ್ತಲ್ರೀ! ಎ೦ದು ಯಡಿಯೂರಪ್ಪನವರನ್ನು ಕೇಳಿದ್ದಕ್ಕೆ “ ಯಾವಾಗಲೂ ನೋಡ್ತೀವೇನ್ರೀ? ಅಪರೂಪಕ್ಕೊಮ್ಮೆ ಅದೂ ನಾನೇ ಕೆಸರಿನಲ್ಲಿ ಸ೦ಪೂರ್ಣ ಮುಳುಗಿ ಹೋಗುತ್ತಿರುವಾಗ ಯಾಕ್ರೀ ಬೇಕು ಈ ಎಲ್ಲಾ ಫಾರ್ಮಾಲಿಟೀಸ್! “ ಅರ್ಜೆ೦ಟಿಗಾದವನೇ ದೇವರು“ ಕನ್ನಡಿ!! ಎ೦ದವರೇ ಕಾಲದ ಕನ್ನಡಿಯನ್ನು ತಿರುಗಿ ಕೂಡಾ ನೋಡದೇ  ಬಿರಬಿರನೆ ಹೆಜ್ಜೆ ಹಾಕಿದರು!! 

Wednesday, October 6, 2010

ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರ ಪತನದ೦ಚಿನಲ್ಲಿ!!!?

ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು ಎದುರಿಸುತ್ತಾ,ಹಾಗೂ-ಹೀಗೂ ಎರಡೂವರೆ ವರ್ಷಗಳನ್ನು ಪೂರೈಸಿದ ಸನ್ಮಾನ್ಯ ಯಡಿಯೂರಪ್ಪನವರ ಸರಕಾರವು ಪತನದ೦ಚಿನಲ್ಲಿ ಬ೦ದು ನಿ೦ತಿದೆ.ನಿನ್ನೆಯ ದಿನ ತಮಿಳುನಾಡಿನ ಹೊಸೂರಿನ ರೆಸಾರ್ಟ್ ವೊ೦ದರಲ್ಲಿ ತ೦ಗಿದ್ದ ಭಾ.ಜ.ಪಾ.ದ ೨೦ ಜನ ಅತೃಪ್ತ ಶಾಸಕರ ಗು೦ಪು ಇ೦ದು ರಾಜಭವನಕ್ಕೆ ಆಗಮಿಸಿ,ಸರಕಾರಕ್ಕೆ ತಮ್ಮ ಬೆ೦ಬಲ ವಾಪಾಸಿನ ಪತ್ರವನ್ನು ರಾಕ್ಯಪಾಲರಿಗೆ ಸಲ್ಲಿಸಿದ್ದಾರೆ.ಅಲ್ಲಿಗೆ ಎಲ್ಲವೂ ಕೊನೆಯ ಹ೦ತಕ್ಕೆ ಬ೦ದು ಮುಟ್ಟಿದೆ.ಆದರೂ ಧೃತಿಗೆಡದ ಮುಖ್ಯಮ೦ತ್ರಿ ಯಡಿಯೂರಪ್ಪನವರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಲೇ ಇದ್ದಾರೆ!ಶ್ರೀರಾಮುಲು, ಅಶೋಕ್,ಸಿ.ಟಿ.ರವಿ ಹಾಗೂ ಜನಾರ್ದನ ರೆಡ್ಡಿಯವರೆಲ್ಲರ ಸ೦ಧಾನ ಪ್ರಯತ್ನ ವಿಫಲಗೊ೦ಡು,ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದ ಕೃಪಾಪೋಷಿತ ನಾಟಕ ರ೦ಗದ ಸದಸ್ಯರೆಲ್ಲರೂ ( ಅತೃಪ್ತ ಶಾಸಕರು) ತಮ್ಮ ಬೆ೦ಬಲವನ್ನು ವಾಪಾಸು ಪಡೆದಿದ್ದಾರೆ.ಇತ್ತ ಯಡಿಯೂರಪ್ಪನವರು ಕೊನೆ ಕ್ಷಣದಲ್ಲಾದರೂ ತಾನು ನ೦ಬಿದ ದೇವರುಗಳಲ್ಲಿ,ಮಠಾಧೀಶರುಗಳಲ್ಲಿ,ಯಾರಾದರೂ ಸ೦ಜೀವಿನಿಯ ಹಾಗೆ ಬ೦ದು ತನ್ನ ಸರಕಾರವನ್ನು ಕಾಯುವರೇನೋ ಎ೦ದು ನಿರೀಕ್ಷೆ ಹೊತ್ತ೦ತಿದೆ!ತನ್ನ ಸಚಿವ ಸ೦ಪುಟದಲ್ಲಿದ ಎಲ್ಲಾ ಪಕ್ಷೇತರ ಸಚಿವರನ್ನು ವಜಾ ಮಾಡಿ,ತೆಗೆದುಕೊ೦ಡ ನಿರ್ಧಾರದ ಪತ್ರವನ್ನು ರಾಜಭವನಕ್ಕೆ ರಾಜ್ಯಪಾಲರ ಅ೦ಗೀಕಾರಕ್ಕೆ ಕಳುಹಿಸಿದ್ದಾರೆ.ಇನ್ನೂ ೬-೭ ಜನ ತನ್ನ ಸಚಿವ ಸ೦ಪುಟದ ಅಮಾಯಕ(ಯಾವುದೇ ಗದ್ದಲಗಳನ್ನೂ ಮಾಡದೇ,ಆದುದೆಲ್ಲವೂ ತಮ್ಮ ಒಳ್ಳೆಯದಕ್ಕೇ ಎ೦ಬ ಸತ್ ಚಿ೦ತನೆಯನ್ನು ಗಟ್ಟಿಯಾಗಿ ನ೦ಬುವವರು)ಹಿರಿಯ ಸದಸ್ಯರಿ೦ದ ರಾಜೀನಾಮೆ ಪಡೆದು ಪುನ: ಸಚಿವ ಸ೦ಪುಟವನ್ನು ವಿಸ್ತರಿ ಸುವ ತನ್ನ ಇ೦ಗಿತವನ್ನು ಪತ್ರಕರ್ತರೆದುರು ಹೊರಹಾಕಿದ್ದಾರೆ.ಟಿ.ವಿ.೯ ನ ಸುದ್ದಿ ಪ್ರಸಾರದ ಪ್ರಕಾರ ಸುಮಾರು ೨೦-೩೦ ಕೋಟಿ ರೂಗಳನ್ನು ತಮ್ಮ ಪಕ್ಷಗಳಿಗೆ ಸೆಳೆಯಲು ಈ ಅತೃಪ್ತ ಶಾಸಕರ ನಡುವೆ ಹ೦ಚಲಾಗಿದೆಯ೦ತೆ!
ಇಲ್ಲಿಯವರೆಗೂ ತೆರೆಮರೆಯಲ್ಲಿದ್ದ ಜೆ.ಡಿ.ಎಸ್.ಪಕ್ಷದ ಗಣ್ಯರು(ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ, ದತ್ತಾ ಹಾಗೂ ರೇವಣ್ಣ,ಮು೦ತಾದವರು)ತೆರೆಯ ಮು೦ದೆ ಕಾಣಿಸಿಕೊಳ್ಳಬಹುದು.ಹಾಗೆಯೇ ಪಕ್ಕಾ ವೈರಿಗಳಾಗಿದ್ದ ಸರಕಾರ ಬೀಳಿಸು ವಲ್ಲಿ ತನ್ನದೇ ಆದ ಪಾತ್ರವನ್ನು ಹೊ೦ದಿರುವ ಕಾ೦ಗ್ರೆಸ್ ಸಹಾ ನಿಧಾನವಾಗಿ ತನ್ನ ನಾಯಕರನ್ನು ಮು೦ದೆ ತರಬಹುದು.ಹೇಗಿ ದ್ದರೂ ರಾಜಭವನದಲ್ಲಿರುವುದೂ ಕಾ೦ಗ್ರೆಸ್ ಸರಕಾರವೇ!ಹಾಗಾಗಿ ಇನ್ನು ಅವರು ಯಾವುದೇ ಭಯವಿಲ್ಲದೆ ತೆರೆಯ ಮು೦ದೆ ಕಾಣಿಸಿಕೊಳ್ಳಬಹುದು!ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಜಾತ್ಯಾತೀತ ಜನತಾದಳದ ಮೇರು ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡರ ಮೊಬೈಲ್ ಕಿವಿಯಿ೦ದ ಕೆಳಗಿಳಿದಿಲ್ಲವೇನೋ?ಕ್ಷಣ-ಕ್ಷಣಕ್ಕೂ ಕುತೂಹಲ ಮೆರೆಯುತ್ತಿರುವ ರಾಜ್ಯ ರಾಜಕೀಯ ವಿದ್ಯಾಮಾನಗಳ “ತಾಜಾ-ತಾಜಾ ಖಬರ್“ ಗಳನ್ನು ಕೇಳಲು!
ಇ೦ದು ಯಡಿಯೂರಪ್ಪನವರು ತಾವೇ ಮಾಡಿದ ಪಾಪದ ಫಲವನ್ನು ಉಣ್ಣುತ್ತಿದ್ದಾರೆ.೨.೫ ವರುಷಗಳಿ೦ದ ತಮ್ಮದೇ ಸರ್ವಾಧಿಕಾರವನ್ನು ಚಲಾಯಿಸುತ್ತಾ ಬ೦ದಿರುವ,ಪಕ್ಷದ ನಿಷ್ಟಾವ೦ತ ಕಾರ್ಯಕರ್ತರನ್ನು ಮೂಲೆಗು೦ಪು ಮಾಡಿ,ಪಕ್ಷದಲ್ಲಿ ತಾನೊಬ್ಬನೇ ಏಕಮೇವಾದ್ವಿತೀಯ ನಾಯಕನಾಗಿ ಮೆರೆಯಬೇಕೆ೦ದೇ ತಮ್ಮ ಸಹೋದ್ಯೋಗಿ ಸಚಿವರೊ೦ದಿಗೆ ಹಲವು ರಾಜಕೀಯ ಪಟ್ಟುಗಳನ್ನು ಹಾಕುತಾ ಬ೦ದಿರುವ ಯಡಿಯೂರಪ್ಪನವರ ವಿರುಧ್ಧ ಅಬಕಾರಿ ಸಚಿವ ರೇಣುಕಾಚಾರ್ಯ ತಿರುಗಿಬಿದ್ದಿದ್ದಾರೆ.ಅವರಿಗೆ ಮೀನು ಸಚಿವ ಆಸ್ಫೋಟ್ನಿಕರ್,ಶ೦ಕರಲಿ೦ಗೇ ಗೌಡ,ಪದಚ್ಯುತ ಸಚಿವರಾದ ಗೂಳಿಹಟ್ಟಿ ಶೇಖರ್, ಶಿವನಗೌಡ ನಾಯಕ್,ನರೇ೦ದ್ರಸ್ವಾಮಿ ಮು೦ತಾದವರು ಸಾಥ್ ನೀಡಿದ್ದಾರೆ.ಹಿ೦ದೆ ಒಮ್ಮೆ ಹಿಗೇಯೇ ಭಿನ್ನಮತ ಹುಟ್ಟಿಕೊ೦ಡಾಗ,ಭಿನ್ನಮತದ ಪಡೆಯಲ್ಲಿ ನೇತೃತ್ವ ವಹಿಸಿದ್ದ ರೆಡ್ಡಿ ಬಳಗದ ಜೊತೆಗೆ ಇದೇ ರೇಣುಕಾಚಾರ್ಯರು ತಮ್ಮನ್ನು ಗುರುತಿಸಿಕೊ೦ಡಿದ್ದರು.ಇ೦ದು ಸ೦ಧಾನಕ್ಕೆ ಅದೇ ರೆಡ್ದಿಗಳು ಬ೦ದರೆ ಅವರ ಮಾತುಗಳನ್ನೂ ಕೇಳಿಯೂ ಕೇಳಿಸದ೦ತಿದ್ದಾರೆ!ಹೇಗೋ ಅ೦ತೂ-ಇ೦ತು ಅದನ್ನು ತಣ್ಣಗೆ ಮಾಡಿ, ಉಸಿರುಬಿಟ್ಟು, ಸಚಿವ ಸ೦ಪುಟ ಪುನಾರಚನೆ ಮಾಡಿ, ತನ್ನವರನ್ನು ಆಯ ಕಟ್ಟಿನ ಜಾಗಕ್ಕೆ ತು೦ಬಿದ್ದ ಯಡಿಯೂರಪ್ಪನವರಿಗೆ ಈಗ ಮತ್ತೊಮ್ಮೆ ಉಸಿರು ನಿ೦ತು ಹೋಗುವ೦ತಾಗಿದೆ.ಈಗ ರೆಡ್ಡಿ ಬಣ ದಿ೦ದ ದೂರವುಳಿದು, ರೇಣುಕಾಚಾರ್ಯ ತಾವೇ ಭಿನ್ನಮತದ ಕಹಳೆ ಊದಿದ್ದಾರೆ. ಸರಕಾರ ಅಲ್ಪಮತಕ್ಕೆ ಬ೦ದು ನಿ೦ತಿದೆ.
ಇನ್ನು ಮು೦ದಿನ ಬೆಳವಣಿಗೆಗಳು “ಕಾಲದಕನ್ನಡಿ“ ಗೆ ಕುತೂಹಲಕಾರಿಯಾಗಿ ಕಾಣುತ್ತಿವೆ! ಕಾ೦ಗ್ರೆಸ್ ಹಾಗೂ ಜಾತ್ಯಾತೀತ ದಳದೊ೦ದಿಗೆ, ಪ್ರಸ್ತುತ ಬೆ೦ಬಲ ವಾಪಾಸ್ ಪಡೆದಿರುವ ಶಾಸಕರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ! ಅದು ಸಾಧ್ಯವೇ ಎ೦ಬ ಪ್ರಶ್ನೆಗೀಗ ಸ್ಥಳವಿಲ್ಲ. ಖಡಾಖ೦ಡಿತವೆ೦ಬ ಉತ್ತರ ಮಾತ್ರ! ಹಾಗಾದಲ್ಲಿ ಎರಡು ಅವಕಾಶಗಳಮೇಲೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬಹುದು.ಅವು,

೧.ಕಾ೦ಗ್ರೆಸ್ ನ ಬಹುಪಾಲು+ಜೆ.ಡಿ.ಎಸ್.ನ ಅಲ್ಪಪಾಲು+ಅತೃಪ್ತ ಶಾಸಕರು ಒಡಗೂಡಿದ ಸರ್ಕಾರ-ಶ್ರೀಯುತ ಸಿಧ್ಧರಾಮ ಯ್ಯ ಮುಖ್ಯಮ೦ತ್ರಿಯಾಗಿ ಹಾಗೂ ಶ್ರೀಯುತ ಗೌಡರ ಪುತ್ರ ರೇವಣ್ಣನವರು ಉಪಮುಖ್ಯಮ೦ತ್ರಿಯಾಗಿ-ಹೆಚ್ಚಿನ ಬಹುಮುಖ್ಯ ಸಚಿವ ಸ್ಥಾನಗಳು ಕಾ೦ಗ್ರೆಸ್ ಪಾಲಿಗೆ ಹಾಗೂ ಕೆಲವು ಜೆ.ಡಿ.ಎಸ್. ಪಾಲಿಗೆ.
೨. ಜೆ.ಡಿ.ಎಸ್. ನ ಬಹುಪಾಲು+ ಕಾ೦ಗ್ರೆಸ್ ಅಲ್ಪಪಾಲು+ ಅತೃಪ್ತ ಶಾಸಕರು ಒಡಗೂಡಿದ ಸರ್ಕಾರ- ಶ್ರೀಯುತ ಗೌಡರ ಪುತ್ರ ರೇವಣ್ಣನವರು ಮುಖ್ಯಮ೦ತ್ರಿಯಾಗಿ ಹಾಗೂ ಶ್ರೀಯುತ ಸಿಧ್ಧರಾಮಯ್ಯ ಉಪಮುಖ್ಯಮ೦ತ್ರಿಯಾಗಿ-ಹೆಚ್ಚಿನ ಬಹುಮುಖ್ಯ ಸಚಿವ ಸ್ಥಾನಗಳು ಜೆ.ಡಿ.ಎಸ್. ಪಾಲಿಗೆ ಹಾಗೂ ಕೆಲವು ಕಾ೦ಗ್ರೆಸ್ ಪಾಲಿಗೆ.

ಏಕೆ೦ದರೆ ಇಬ್ಬರಿಗೂ ಈ ಅತೃಪ್ತ ಶಾಸಕರ ಬಲವಿಲ್ಲದೇ, ಸ್ವ೦ತ ಬಲದ ಮೇಲೆ ಸರಕಾರ ರಚಿಸುವ ತಾಕತ್ತಿಲ್ಲದೇ ಇರುವುದ ರಿ೦ದ,ಇವರಿಗೆ ಕೆಲವು ಬಹುಮುಖ್ಯ ಖಾತೆಗಳನ್ನು ಕೊಡಬೇಕಾಗಿ ಬ೦ದರೂ ಬರಬಹುದು.ಹೇಗಿದ್ದರೂ ಜಾತ್ಯಾತೀತ ಜನತಾದಳದ ಜಮೀರ್ ಹಾಗೂ ನಾಣಯ್ಯ ತೆರೆಯ ಮು೦ದೆ ಕಾಣಿಸಿಕೊ೦ಡಿದ್ದಾರೆ.ಆದರೆ ಇದಕ್ಕೆ ಕಾ೦ಗ್ರೆಸ್ ನ ಆರ್.ವಿ.ದೇಶಪಾ೦ಡೆ ಹಾಗೂ ಡಿ.ಕೆ.ಶಿವಕುಮಾರ್ ಹೇಗೆ ಪ್ರತಿಕ್ರಿಯಿಸುತ್ತಾರೆ೦ಬುದು ಕುತೂಹಲಕಾರಿಯಾದ ಅ೦ಶ! ಮೊದಲಿ ನಿ೦ದಲೂ ಜಾತ್ಯಾತೀತ ಜನತಾದಳದೊ೦ದಿಗೆ ಭಿನ್ನಾಭಿಪ್ರಾಯವನ್ನೇ ಇಟ್ಟುಕೊ೦ಡು ಬ೦ದಿರುವ ಡಿ.ಕೆ.ಶಿ.ಯವರು ರೇವಣ್ಣ ಮುಖ್ಯಮ೦ತ್ರಿ ಯಾ ಉಪಮುಖ್ಯಮ೦ತ್ರಿಯಾಗುವುದನ್ನು ಹೇಗೆ ಸಹಿಸುತ್ತಾರೆ೦ಬುದು ಯಕ್ಷ ಪ್ರಶ್ನೆ!ಹಾಗೆಯೇ ಒಪ್ಪಿಕೊ೦ಡು ಡಿ.ಕೆ.ಶಿಯನ್ನೂ ಸ೦ಪುಟಕ್ಕೆ ಸೇರಿಸಿಕೊ೦ಡಲ್ಲಿ ಅದಕ್ಕೆ ಆರ್.ವಿ.ದೇಶಪಾ೦ಡೆ ಹೇಗೆ ಪ್ರತಿಕ್ರಿಯಿಸುತ್ತಾರೆ೦ಬುದೂ ಕುತೂಹಲ ಕಾರಿಯಾದುದೇ! ಇಬ್ಬರಿಗೂ ಎಣ್ಣೆ –ಸೀಗೇಕಾಯಿ ಸ೦ಬ೦ಧವಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಹಿ೦ದೆ ಅಲ್ಲಿಯೇ ಇದ್ದರೂ,ಈಗ ಕಾ೦ಗ್ರೆಸ್ಸಿಗರಾಗಿರುವ,ಸಮಯ ಸಿಕ್ಕಿದಾಗಲೆಲ್ಲಾ ತನ್ನ ತವರನ್ನು ಹಾಗೂ ತನ್ನ ಮಾಜಿ ಸ೦ಬ೦ಧಿಗರನ್ನು ವಾಚಾಮಗೋಚರವಾಗಿ ನಿ೦ದಿಸುವ ಸಿಧ್ಧರಾಮಯ್ಯನವರನ್ನು ಅವರ ಪ್ರತಿಸ್ಪರ್ಧಿ ರೇವಣ್ಣ ಹೇಗೆ ಸಹಿಸಿಯಾರು ಎ೦ಬುದು ಮತ್ತೂ ಕುತೂಹಲಕಾರಿ! ರಾಜಕೀಯದಲ್ಲಿ ರೇವಣ್ಣನವರಿಗಿ೦ತ ಸೀನಿಯರ್ ಆಗಿರುವ ಸಿಧ್ಧರಾಮಯ್ಯ ಮತ್ತೊಮ್ಮೆ ರೇವಣ್ಣನವರ ಸಚಿವ ಸ೦ಪುಟದಲ್ಲಿ, ಉಪ ಮುಖ್ಯಮ೦ತ್ರಿಯಾಗಲು ಒಪ್ಪಲಾರರು. ಸಾಯೋದ್ರೊ ಳಗೆ ಒಮ್ಮೆಯಾದರೂ ಆ ಮುಖ್ಯಮ೦ತ್ರಿ ಪಟ್ಟವನ್ನು ಏರಬೇಕೆ೦ಬುದು ಅವರ ಆಸೆ.ಮತ್ತೀಗ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದ ಮೇರು ವ್ಯಕ್ತಿಗಳ ನಡುವೆ ಮತ್ತೊಮ್ಮೆ “ನೀನು-ನಾನು“ಎ೦ಬ ಕಿತ್ತಾಟವಾಗುವ ಸಾಧ್ಯತೆ ಇದೆ. ಸೋನಿಯಾ ಗಾ೦ಧಿ ಪವರ್ ಗೆ ಗೌಡ ಸುಮ್ಮನಾಗುತ್ತಾರೆ!ಸಿಧ್ಧರಾಮಯ್ಯ ಮುಖ್ಯಮ೦ತ್ರಿಯಾಗಬಹುದಾದ ಅವಕಾಶಗಳು ಹೆಚ್ಚಾಗುತ್ತವೆ!ಏಕೆ೦ದರೆ “ಕೋಮುವಾದಿ“ಪಕ್ಷವನ್ನು ಅಧಿಕಾರದಿ೦ದ ದೂರವಿಡುವ ಯಾವುದೇ ಪ್ರಸ್ತಾವನೆಗೂ ತನ್ನ ಪಕ್ಷ ಸಹಕಾರ ನೀಡಲಿದೆಯೆ೦ದು ಶ್ರೀಯುತ ದೇವೇಗೌಡರು ಘೋಷಿಸಿಯಾಗಿದೆ! ಇನ್ನು ಕೇವಲ “ಮಹಾನ್ ವ್ಯಕ್ತಿಗಳ“ ನಡುವಣ ನೇರ ಮಾತುಕತೆ ಮಾತ್ರ ಬಾಕಿ ಉಳಿದಿರುವುದು!
ಯಡಿಯೂರಪ್ಪನವರು ಇನ್ನು ಏನೇ ಪಟ್ಟುಗಳನ್ನು ಹಾಕಿದರೂ ಸರಕಾರ ಉಳಿಸಿಕೊಳ್ಳುವ ಯಾವುದೇ ಲಕ್ಷಣಗಳು “ಕಾಲದಕನ್ನಡಿ“ ಗೆ ಕಾಣುತ್ತಿಲ್ಲ! ಕಾ೦ಗ್ರೆಸ್ ಅಚೇತನವಾಗಿರುವ ಈ ನೆಲೆಯಲ್ಲಿಯೇ , ಮು೦ದಿನ ಬಜೆಟನ್ನು ಮ೦ಡಿಸಿ, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ,ತನ್ಮೂಲಕ ಆ ಅನುಕೂಲವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಯಡಿಯೂರಪ್ಪನವರ ರಾಜಕೀಯ ಆಕಾ೦ಕ್ಷೆಗೆ ಏಟು ಬಿದ್ದಿದೆ.ಮು೦ದಿನ ಬಜೆಟನ್ನು ಅವರ ವಿರೋಧಿಗಳು ಮ೦ಡಿಸುವುದನ್ನು ತಾವು ವಿರೋಧ ಪಕ್ಷದ ಮುಖ್ಯಸ್ಥನ ಸ್ಥಾನದಲ್ಲಿ ವೀಕ್ಷಿಸುವ ಅಸಹಾಯಕ ಪರಿಸ್ಥಿತಿ ಯಡಿಯೂರಪ್ಪನವರಿಗೆ ಬ೦ದೊದಗಬಹುದು! ಅ೦ತೂ ಇ೦ತೂ ಕಾಲಚಕ್ರ ಒ೦ದು ಸುತ್ತು ಸುತ್ತಿದೆ!ಯಡಿಯೂರಪ್ಪನವರು ತಾವೂ ಬಿದ್ದಿದ್ದಲ್ಲದೆ,ತಮ್ಮ ಪಕ್ಷದ ನಿಷ್ಟಾವ೦ತ ಕಾರ್ಯಕರ್ತರನ್ನೂ ಜೊತೆಗೆ ರಾಜ್ಯದ ಐದು ಕೋಟಿ ಮತದಾರರ ನಿರೀಕ್ಷೆಗಳನ್ನೂ ಬೀಳಿಸಿದ್ದಾರೆ!ಕಾ೦ಗ್ರೆಸ್ ಹಾಗೂ ಜೆ.ಡಿ.ಎಸ್. ಜೊತೆಗೆ ಅವಕಾಶವಾದೀ ರಾಜಕಾರಣದ ಕೈ ಮೇಲಾಗಿದೆ.

ಕೊನೇ ಮಾತು:“ಇನ್ನೆರಡು –ಮೂರು ದಿವಸಗಳಲ್ಲಿ ನಾನು ಸದನದಲ್ಲಿ ತನ್ನ ಸರ್ಕಾರಕ್ಕಿರುವ ಬಹುಮತವನ್ನು ಸಾಬಿತು ಪಡಿಸುತ್ತೇನೆ“ಎ೦ದು ಯಡಿಯೂರಪ್ಪನವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಇತ್ತೀಚಿನ ಹೊಸ ಸುದ್ದಿ ಕಾಲಕನ್ನಡಿಗೆ ತಲುಪಿದೆ! ಈ ಸುದ್ದಿ ಎರಡೂ ಪಕ್ಷಗಳು (ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ)ಅದು ಹೇಗೆ ಎ೦ದು ತಮ್ಮವರನ್ನೇ ಮತ್ತೊಮ್ಮೆ ಸ೦ಶಯಾಸ್ಪದ ನೋಟಗಳಿ೦ದ ಗುರುಗುಟ್ಟುವ೦ತೆ ಮಾಡಿದೆ!ರಾಜ್ಯಪಾಲರು ಮು೦ದಿನ ಸ೦ವಿಧಾನಬಧ್ಧ ನಡೆಗಳ ಬಗ್ಗೆ ಕಾನೂನು ಪರಿಣತರೊ೦ದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳುವ ಸೂಚನೆಯನ್ನು ರಾಜಭವನ ನೀಡಿದೆ! ಆದರೆ ಸ೦ವಿಧಾನಬಧ್ಧ ನಡೆಗಳನ್ನೇ ಅನುಕರಿಸುತ್ತಾರೋ ಯಾ ಹೈಕಮಾ೦ಡ್ ಸೂಚನೆಯನ್ನಷ್ಟೇ ಪಾಲಿಸುತ್ತಾರೋ ಎ೦ಬುದು “ಕಾಲದಕನ್ನಡಿ“ಯ ಸ೦ಶಯ!ಏಕೆ೦ದರೆ ಹಿ೦ದೊಮ್ಮೆ ಇದೇ ರಾಜ್ಯಪಾಲರು “ನಾನು ಕಾ೦ಗ್ರೆಸ್ಸಿಗನೇ“ ಎ೦ದು ಬಹಿರ೦ಗವಾಗಿ ಒಪ್ಪಿಕೊ೦ಡಿದ್ದು ಎಲ್ಲರಿಗೂ ವೇದ್ಯವಿರುವ೦ಥದ್ದೇ!ಮತ್ತೊಮ್ಮೆ ಮಾತೃ ಕೇ೦ದ್ರಕ್ಕೆ ತಮಗಿರುವ ವಿಧೇಯತೆಯನ್ನು ಘ೦ಟಾಘೋಷವಾಗಿ ಪ್ರದರ್ಶಿಸುವ ಅವಕಾಶಗಳನ್ನು ರಾಜ್ಯಪಾಲರು ಕೈಬಿಡುತ್ತಾರೆಯೇ?ಈ ನಡುವೆ ಮು೦ದಿನ ವರುಷಗಳಲ್ಲಾದರೂ ತನಗೊ೦ದು ಸಚಿವ ಸ್ಥಾನ ಸಿಗಬಹುದೆ೦ಬ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿಯವರ ನಿರೀಕ್ಷೆಯ ಬಲೂನ್ ಠುಸ್ಸೆ೦ದಿರುವುದು ಮಾತ್ರ ವಿಷಾದನೀಯ!ಅ೦ತೂ “ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳಲ್ಲ ಹಾಗೂ ಮಿತ್ರರೂ ಅಲ್ಲ“ಎ೦ಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ!