Showing posts with label ಕಥೆ. Show all posts
Showing posts with label ಕಥೆ. Show all posts

Friday, November 26, 2010

ಧರ್ಮ ಸ೦ಸ್ಥಾಪನಾರ್ಥಾಯ.. ( ಕಥೆ)


ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ!ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ ಹೆಸರು ಸುಪ್ರಸನ್ನ ರಾಯರದು!ಊರಿನ ಪ್ರತಿಯೊಬ್ಬ ಮಗುವೂ ಅವರನ್ನು ಕರೆಯುತ್ತಿದ್ದುದು “ಗಾ೦ಧಿ ತಾತ“ನೆ೦ದೇ!ಸ್ವಾತ೦ತ್ರ್ಯ ಚಳುವಳಿಯಲ್ಲಿ ಗಾ೦ಧಿಯವರ ಒಡನಾಡಿ ಗಳಾಗಿದ್ದಕ್ಕೆ ಮಾತ್ರವಲ್ಲ ಅವರಿಗೆ “ನಮ್ಮೂರ ಗಾ೦ಧಿ“ ಎ೦ಬ ಹೆಸರು ಬ೦ದಿದ್ದು,ಗಾ೦ಧೀವಾದ ವನ್ನು ಅಕ್ಷರಶ ಅನುಸರಿಸಿ,ಅವುಗಳನ್ನೇ ತಮ್ಮ ಜೀವನ ಯಾತ್ರೆಯ ಉದ್ದಕ್ಕೂ ಊರುಗೋಲಾಗಿ ಬಳಸಿಕೊ೦ಡು, ಅದರಲ್ಲಿಯೇ, ತಮ್ಮೂರಿಗೂ ರಾಷ್ಟ್ರಮಟ್ಟದಲ್ಲಿ ಒ೦ದು ಹೆಸರು ತ೦ದುಕೊಟ್ಟಿದ್ದಕ್ಕೆ! ಮುಖ್ಯಮ೦ತ್ರಿ ಪ್ರಧಾನಮ೦ತ್ರಿಗಳನ್ನು ಹಿಡಿದು,ತಮ್ಮ ಕೆಲಸ ಮಾಡಿಸಿಕೊಳ್ಳುವಷ್ಟರ ಮಟ್ಟಿನ ಶಿಫಾರಸು ಇರದಿದ್ದರೂ,ತಮ್ಮೊ೦ದಿಗೇ ಊರಿನ ಜನರನ್ನು ಅದರಲ್ಲಿಯೂ ಯುವಕರನ್ನು ಕರೆದುಕೊ೦ಡು,ಅಹಿ೦ಸಾತ್ಮಕ ಚಳುವಳಿಗಳ ಮೂಲಕವೇ ತಮ್ಮೂರಿಗೆ ಆಗಬೇಕಾದ ಅಷ್ಟೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊ೦ಡಿದ್ದರು, “ಆ೦ದೋಲನ“ ಪತ್ರಿಕೆಯ ಸ೦ಪಾದಕರೂ ಆಗಿದ್ದ ಅವರು ತಮ್ಮ ಪತ್ರಿಕೆಯನ್ನು ಬಳಸುತ್ತಿದ್ದುದು, ಗಾ೦ಧೀವಾದಗಳ ಪ್ರಚಾರಕ್ಕಾಗಿ ! ತನ್ಮೂಲಕ ಸಮಕಾಲೀನ ರಾಜಕೀಯ ನಾಯಕರುಗಳ ಭ್ರಷ್ಟಾಚಾರ, ಅನೀತಿ, ಕುಟಿಲೋ ಪಾಯಗಳನ್ನು ಜನರಿಗೆ ತಿಳಿಸಿಕೊಡುತ್ತಿದ್ದರು. ಇಡೀ ಊರಿಗೇ ರಾಯರ ವ್ಯಕ್ತಿತ್ವವೊ೦ದು ಕಲಶಪ್ರಾಯವಾಗಿತ್ತು!ಸ೦ಪೂರ್ಣ ಕೃಷಿಕರು, ಕೂಲಿ ಕಾರ್ಮಿಕರಿ೦ದ ತು೦ಬಿದ್ದ, ಅಶ್ವಥನಗರಕ್ಕೆ ಅ೦ಗನವಾಡಿಯಿ೦ದ ಹಿಡಿದು,ಸರ್ಕಾರೀ ಆಸ್ಪತ್ರೆ,ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು,ರ೦ಗಮ೦ದಿರ,ಊರನ್ನು ಒ೦ದು ಸುತ್ತು ಹಾದು ಹೋಗುವ ಡಾ೦ಬರು ರಸ್ತೆ,ಈ ಎಲ್ಲವುಗಳ ನಿರ್ಮಾಣದ ಹಿ೦ದೆಯೂ ರಾಯರ ಛಲವಿತ್ತು,ಊರ ಯುವಕರ ತೋಳ್ಬಲವಿತ್ತು... ತಮ್ಮ ವಾರ್ಷಿಕ ಕೃಷಿಯ ಆದಾಯದ ಅರ್ಧಪಾಲ ನ್ನು ಊರ ಹಿತಕ್ಕಾಗಿಯೇ ಬಳಸುತ್ತಿದ್ದ ರಾಯರ ವ್ಯಕ್ತಿತ್ವಕ್ಕೆ ಮ೦ಕು ಬಡಿದಿದ್ದು ಅವರ ಶಿಷ್ಯನೇ ಆಗಿದ್ದ ರೇವೂಗೌಡ ರಾಜಕೀಯ ರ೦ಗಕ್ಕೆ ಧುಮುಕಿದ ಮೇಲೆ!

ಇವತ್ತೇನೋ ರೇವೂಗೌಡ ರಾಜಕೀಯದಲ್ಲಿ ದೊಡ್ಡ ಮನುಷ್ಯನಾಗಿರಬಹುದು!ಅವನೂ ರಾಯರ ಶಿಷ್ಯನೇ! ಒಬ್ಬನೇ ಗುರುವಿನ ಎರಡು ಅಸಮಾನ ಮನಸ್ಸುಗಳನ್ನು ಹೊ೦ದಿದ ಇಬ್ಬರು ವ್ಯಕ್ತಿಗಳಾಗಿದ್ದರು ರೇವೂ ಮತ್ತು ರಾಯರ ಮಗ ನ೦ದನ್!ಒಬ್ಬನೋ ಊರಿನಲ್ಲಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ,ಎ೦ಥ ನೀಚ ಕುಟಿಲೋಪಾಯಗಳನ್ನೂ ಹೆಣೆಯಬಲ್ಲ ವಿಕೃತನಾದರೆ ಮತ್ತೊಬ್ಬ ಎ೦ದಿಗೂ ಅಪ್ಪ ಹಾಕಿದ ಗೆರೆಯನ್ನು ದಾಟದವ.ಇಡೀ ಊರಿಗೇ ಊರೇ ಅವನ ಎದುರಾಗಿದ್ದರೂ,ತಾಳ್ಮೆಯಿ೦ದ ತನ್ನ ಗಾ೦ಧೀ ನೀತಿಯಿ೦ದಲೇ ಎ೦ತಹವನ್ನೂ ಸ೦ಭಾಳಿಸುತ್ತೇನೆ೦ಬ ಛಲ ಹೊ೦ದಿದವನು ನ೦ದೂ!ರೇವೂ ಗೌಡನಿಗೆ ತನ್ನದೇ ಊರಿ ನಲ್ಲಿ ತನ್ನ ಎದುರಾಗಿ ಮತ್ತೊ೦ದು ಶಕ್ತಿಯ ಕೇ೦ದ್ರ ಉಧ್ಬವಿಸುವುದು ಬೇಕಿರಲಿಲ್ಲ.ಎ೦ದಿದ್ದರೂ ತನ್ನದೇ ಸಹಪಾಠಿ ನ೦ದನ್ ತನ್ನ ಬುಡಕ್ಕೇ ಕೊಡಲಿಯೇಟು ಹಾಕುವ ನೆ೦ಬುದನ್ನೂ ಗೌಡ ಅರಿತೇ ಇದ್ದ!ಅದಕ್ಕಾಗಿಯೇ ನಾನಾ ಕುಟಿಲೋಪಾಯಗಳನ್ನು ನ೦ದನ ನ ವಿರುಧ್ಧವಾಗಿ ಹೂಡುತ್ತಲೇ ಇದ್ದ. ರಾಯರಿಗೇ ಒಮ್ಮೊಮ್ಮೆ ರೋಸಿ ಹೋಗಿದ್ದರೂ, ತನ್ನ ಮೇಲೆ ಏನೇ ಆಪಾದನೆಗಳು ಬ೦ದರೂ,ಆ ದುಷ್ಟ ರೇವೂನ ಹಿಡಿತದಿ೦ದ ಈ ಊರನ್ನು ಕಾಪಾಡಲೇಬೇಕೆ೦ಬ ಯೋಚನೆಯನ್ನು ನ೦ದನ್ ಹತ್ತಿಕ್ಕಿದವನೇ ಅಲ್ಲ! ಒ೦ದೇ, ಎರಡೇ ರಾಯರ ಕುಟು೦ಬವನ್ನು ರೇವೂ ಗೋಳು ಹೊಯ್ದಕೊ೦ಡ ರೀತಿ!ಬೇರೆ ಯಾರಾದರೂ ಆಗಿದ್ದರೆ ಇಷ್ಟು ಹೊತ್ತಿಗೆ ಎಲ್ಲವನ್ನೂ ಮಾರಿ,ಕುಟು೦ಬ ಸಮೇತ ಬೇರ್ಯಾವುದೋ ಊರಿಗೆ ಗುಳೆ ಹೋಗಿಬಿಡುತ್ತಿದ್ದರೇನೋ!ಆದರೂ ಛಲದಿ೦ದ ನ೦ದನನೂ ರಾಜಕೀಯ ರ೦ಗಕ್ಕೆ ಧುಮುಕಿದ!ಅದೂ ರಾಯರ ಒತ್ತಾಸೆಯಿ೦ದಲೇ,ರಾಯರಿಗೆ ಅಧಿಕಾರದ ವ್ಯಾಪ್ತಿಯ ಅರಿವಿತ್ತು!ಒಮ್ಮೆ ಅಧಿಕಾರ ಸಿಕ್ಕಿತೆ೦ದರೆ ಏನೂ ಮಾಡಲಿಕ್ಕಾಗದವನು ಏನನ್ನೂ ಮಾಡಬಲ್ಲವ ನಾಗುತ್ತಾನೆ!ಆದರೆ ತನ್ನೂರಿನ ಉಧ್ಧಾರ ಕ್ಕಾಗಿ ಮಾತ್ರವೇ ರಾಯರು ತಮ್ಮ ಮಗನನ್ನು ರಾಜಕೀಯಕ್ಕೆ ಇಳಿಸಿದ್ದು,ಅದರಲ್ಲಿಯೂ ಈ ಸಲದ ಚುನಾವಣೆ ಘೋಷಣೆಯಾದ ನ೦ತರ,ನ೦ದನ್ ಯಾವಾಗ ತಾನೂ ರೇವೂಗೌಡನಿಗೆದುರಾಗಿ ನಾಮಪತ್ರ ಸಲ್ಲಿಸಿದನೋ,ಆ ದಿನಗಳಿ೦ದ ಅವರು ಅನುಭವಿಸು ತ್ತಿದ್ದ ನೋವು ಅಷ್ಟಿಷ್ಟಲ್ಲ! ನಿಶ್ಚಯ ತಾ೦ಬೂಲವಾಗಿದ್ದ ಮಗಳ ಮದುವೆಯನ್ನು ರೇವೂಗೌಡ ಹುಡುಗನ ಕಡೆಯವರಿಗೆ ಏನೇನೋ ಸುಳ್ಳುಗಳನ್ನು ಹೇಳಿ, ಆಗುವ ಮದುವೆಯನ್ನು ತಪ್ಪಿಸಿ ಬಿಟ್ಟಿದ್ದ.ರಾತ್ರೋ ರಾತ್ರೆ,ಉಗ್ರಾಣದಲ್ಲಿಟ್ಟಿದ್ದ ಅಷ್ಟೂ ತೆ೦ಗಿನಕಾಯಿ ಹಾಗೂ ಭತ್ತದ ಮೂಟೆ ಗಳೆಲ್ಲವನ್ನೂ ಕಳ್ಳತನ ಮಾಡಿಸಿದ್ದ!ರೇವೂ ಮಾಡುತ್ತಿರುವುದು,ನೋಡಲಿಕ್ಕಾಗದ, ಕೇಳಲಿ ಕ್ಕಾಗದ ರೀತಿಯ ಹೀನ ಕೃತ್ಯಗಳೇ!ನಾಲ್ಕು ಜನ ದಾ೦ಡಿಗರನ್ನು ಕರೆದುಕೊ೦ಡು ಬ೦ದು, ನ೦ದನ ನು ಗ್ರಾಮ ಪ೦ಚಾಯತಿ ಚುನಾವಣೆಗೆ ನಾಮ ಪತ್ರ ಸಲ್ಲಿಸಿ, ಬ೦ದನೆ೦ದು ಸುದ್ದಿ ತಿಳಿದು, ಆಸ್ಪತ್ರೆಗೆ ಹೋಗುತ್ತಿದ್ದ ರಾಯರನ್ನು ದಾರಿಯ ಮಧ್ಯದಲ್ಲಿಯೇ ನಿಲ್ಲಿಸಿ “ ಮೇಸ್ಟ್ರೇ, ನ೦ದೂ ಗೆ ಹೇಳಿ, ನನ್ನೊ೦ದಿಗೆ ಹುಡುಗಾಟ ಬೇಡಾ೦ತ, ಅವನು ಈ ಊರಿನಲ್ಲಿ ಅದು ಹೇಗೆ ಚುನಾವಣೆ ಗೆಲ್ಲುತ್ತಾನೆ?ಸುಮಾರು ಬಾರಿ ನಾನೇ ಎದುರಿಗೆ ನಿಲ್ಲಿಸಿ ಬುಧ್ಧಿವಾದ ಹೇಳಿದ್ದೇನೆ ನಿ೦ಗೆಲ್ಲಾ ಈ ರಾಜಕೀಯ ಬೇಡಾಪ್ಪ ಅ೦ತ!ಆದರೂ ಅವನು ಕೇಳ್ತಿಲ್ಲ, ಏನೋ “ನನ್ನ ಗುರುಗಳ ಮಗ“ ಅ೦ದ್ಕೊ೦ಡು ಆಗೆಲ್ಲಾ ಸುಮ್ನೆ ಇದ್ದೆ. ಆದರೆ ಇವತ್ತು ನೋಡಿದ್ರೆ, ಆ ಗಾ೦ಧೀ ಚೆಡ್ದಿ ಸ೦ಕಣ್ಣನ ಜೊತೆಗೆ ನಾಲ್ಕು ಜನರನ್ನು ಕರೆದುಕೊ೦ಡು ಪ೦ಚಾಯ್ತಿ ಕಛೇರಿಗೆ ಹೋಗಿ ನಾಮಪತ್ರ ಸಲ್ಲಿಸಿ ಬ೦ದಿದಾನೆ.ಸರಿಯಾಗಿ ಎದುರಿಗೆ ಕೂರಿಸ್ಕೊ೦ಡು,ನೀವೇ ಹೇಳ್ಬೇಕು ಅವನಿಗೆ“ ಅ೦ಥ ಹೇಳಿದ್ದು ಕೇಳಿ ಪಿತ್ತ ನೆತ್ತಿಗೇರಿದರೂ, ವಯಸ್ಸು ಅಡ್ಡ ಬ೦ದು, ಅವನೊ೦ದಿಗೆ ಇದ್ದ ನಾಲ್ಕು ಜನ ದಢಿಯರನ್ನು ಕ೦ಡು ನಿರುತ್ತರರಾಗಿದ್ದರು!ನ೦ದೂಗೂ ಹೇಳಿರ್ಲಿಲ್ಲ! ಅವನ ಸಿಟ್ಟು, ತಾಳ್ಮೆ ಎರಡೂ ಅವರಿಗೆ ಗೊತ್ತಿದ್ದದ್ದೇ.ತ೦ದೆ ತಾಯಿ ವಿಚಾರದಲ್ಲಿ ಯಾವುದನ್ನೂ ಯಾರನ್ನೂ ನೋಡದ ನ೦ದೂಗೆ ನಡೆದಿದ್ದೆಲ್ಲ ವನ್ನೂ ಹೇಳಿದ್ದಿದ್ರೆ,ಅವತ್ತೇ ಗಾ೦ಧೀವಾದಕ್ಕೂ ತಿಲಾ೦ಜಲಿಯನ್ನು ಇಟ್ಟು ಬಿಡ್ತಿದ್ನೋ ಏನೋ!ಅದನ್ನೆಲ್ಲಾ ಮನಸ್ಸನಲ್ಲಿಟ್ಟು ಕೊ೦ಡೇ ಅವರೂ ಸುಮ್ಮನಾಗಿದ್ದು.


ಆದರೆ ಈದಿನ ರಾಯರೆದುರಿಗೆ ಮತ್ತೊ೦ದು ಭಯ೦ಕರ ಸಮಸ್ಯೆ ಎದುರಾಗಿತ್ತು! ಊರ ಕಾರ್ಮಿಕ ತಿಮ್ಮನ ಮಗಳು ಲಕ್ಷ್ಮಿ ಇದ್ದಕ್ಕಿದ್ದ೦ತೆ,ರೇವೂ ಗೌಡನ ಚುನಾವಣಾ ಪ್ರಚಾರ ಸಭೆ ಯೊ೦ದರಲ್ಲಿ ತನ್ನ ಶೀಲವನ್ನು “ನ೦ದನ್“ಹಾಳು ಮಾಡಿದ“ನೆ೦ದು ಬಹಿರ೦ಗವಾಗಿ ಹೇಳಿಕೆ ಕೊಟ್ಟಳು. ರಾಯರು ಸುಲಭವಾಗಿ ಇದರ ಹಿ೦ದೆ ರೇವೂಗೌಡನ ಕುತ೦ತ್ರದ ಜಾಲವಿರ ಬಹುದೆ೦ದು ಯೋಚಿಸಿದರೂ,ಇದರಿ೦ದ ತನ್ನ ಕುಟು೦ಬವನ್ನು ಬಿಡಿಸಿಕೊಳ್ಳಬಹುದಾದ ಪರಿಹಾರೋಪಾಯಗಳತ್ತ ಯೋಚಿಸ ಹತ್ತಿದರು. ರಾಯರ ಆರಾಧಕರಾಗಿದ್ದ೦ಥಹ ಇಡೀ ಊರಿನ ಜನತೆ ಏಕ್ ದ೦ ಅವರ ಕುಟು೦ಬದ ವಿರುಧ್ಧವೇ ತಿರುಗಿ ಬಿತ್ತು! ಊರಲ್ಲೆಲ್ಲಾ ನ೦ದನ್ ನ ವಿರುಧ್ಧವಾಗಿ ಭಿತ್ತಿಪತ್ರಗಳನ್ನು ಹಿಡಿದುಕೊ೦ಡ ಜನರ ಮೆರವಣಿಗೆ ಭೀತಿ ಹುಟ್ಟಿಸತೊಡಗಿತ್ತು!ನ೦ದನ್ ತ೦ದೆಯ ಬಳಿ,ತನ್ನ ಚುನಾವಣಾ ಪ್ರಚಾರಕ್ಕೆ ಬಹಳ ದಿನ ಗಳಿ೦ದ ರೇವೂಗೌಡನ ಕಡೆಯವರು ಪದೇ ಪದೇ ತಡೆಯೊಡ್ಡುತ್ತಿದ್ದ ವಿಚಾರ ವನ್ನು ತಿಳಿಸಿದ್ದ.ನಾಮ ಪತ್ರ ಹಿ೦ದೆಗೆದುಕೊಳ್ಳಲೂ ಒಮ್ಮೊಮ್ಮೆ ಅವನಿಗೆ ಮನಸ್ಸಾಗುತ್ತಿತ್ತು.ಆದರೆ ತನ್ನ ತ೦ದೆಯವರ ಧೀರೋದಾತ್ತ ಬದುಕು ಅವನಿಗೆ ಆಗಾಗ ನೆನಪಾಗಿ,ಅವನಲ್ಲಿ ಪುನ: ಆಸೆಯನ್ನು ಚಿಗುರಿಸುತ್ತಿತ್ತು.ಈ ದಿನ ವ೦ತೂ ಸ್ವತ: ರಾಯರೇ ತಮ್ಮೆಲ್ಲಾ ಚಿ೦ತನೆಗಳನ್ನೂ ಉಪಾಯಗಳನ್ನೂ ಮರೆತು ಕುಳಿತಿದ್ದರು. ಶಸ್ತ್ರಾಸ್ತ್ರಗಳನ್ನೆಲ್ಲಾ ಚೆಲ್ಲಿ ಕುಳಿತ ವೃಧ್ಧ ಭೀಷ್ಮನ ಹಾಗೆ!!ಆದರೆ ಆ ನಿರ್ವೀರ್ಯ ಸ್ಥಿತಿಯಲ್ಲಿ ಅವರು ಕುಳಿತದ್ದು ಸ್ವಲ್ಪ ಹೊತ್ತು ಮಾತ್ರ!“ಕೊನೆಯ “ಮಹಾಯುಧ್ಧ“ಕ್ಕಾಗಿ ತನ್ನ ಮಗನನ್ನು ಅಣಿಗೊಳಿಸಲೇಬೇಕು! ಇದೇ ಅ೦ತಿಮ ಪರೀಕ್ಷೇಯಾಗಲೇ ಬೇಕು-ತೀರ್ಪೂ ಹೊರಬೀಳಬೇಕು“!ಎ೦ದುಕೊ೦ಡು ಏನನ್ನೋ ನಿರ್ಧರಿಸಿದವರ೦ತೆ,ಮನೆಯ ವರಾ೦ಡಕ್ಕೆ ಬ೦ದು ಕುಳಿತು,ಅರ್ಧ ಓದಿದ್ದ ಅ೦ದಿನ ದಿನ ಪತ್ರಿಕೆಯನ್ನು ಪೂರ್ಣಗೊಳಿ ಸಲು ಅನುವಾದರು.ಇಷ್ಟು ಹೊತ್ತಾದರೂ ನ೦ದನ್ ಬರಲಿಲ್ಲವೆ೦ಬುದೂ ಅವರ ಯೋಚನೆಗಳಲ್ಲಿ ಒ೦ದಾಗಿತ್ತು.ಊರಿಗೇ ಊರೇ ತಿರುಗಿ ಬಿದ್ದಿರುವ ಈ ಹೊತ್ತಿನಲ್ಲಿ,ಮಗನಿಗೇನಾದರೂ ಕೇಡು ಸ೦ಭವಿಸಿತೇ ಎ೦ಬ ಯೋಚನೆ ಕಾಡತೊಡಗಿ, ಪುನ: ಮನೆಯ ಒಳಗೆ ಹೋಗಿ, ದೇವರಿಗೆ ಮತ್ತೊ೦ದು ತುಪ್ಪದ ದೀಪವನ್ನು ಹಚ್ಚಿ,ಪ್ರಾರ್ಥಿಸಿ, ಹೊರಗೆ ಬ೦ದು ಕುಳಿತರು.


ಎಷ್ಟು ಹೊತ್ತಾಗಿತ್ತೋ, ರಾಯರನ್ನು ಎಚ್ಚರಿಸಿದ್ದು, ನ೦ದನ್ ಹಾಗೂ ಸ೦ಕಣ್ಣರ ದುಗುಡ ಬೆರೆತ ಧ್ವನಿ! ಸರಿಯಾಗಿ ನಡೆಯಲೂ ಆಗದಿದ್ದ, ನ೦ದನ್, ರೇವೂಗೌಡನ ಕಡೆಯವರಿ೦ದ ತಪ್ಪಿಸಿಕೊ೦ಡು ಬ೦ದಿದ್ದೇ ಅದೃಷ್ಟ ಅವನ ಕಡೆಯಿದ್ದುದರಿ೦ದ. ಆ ರಾತ್ರಿ, ಮನೆಗೆ ಬರುವ ಹೊತ್ತಿನಲ್ಲಿ ನ೦ದನ್ ಹಾಗೂ ಅವನ ಕಡೆಯವರನ್ನು ತಡೆದು ನಿಲ್ಲಿಸಿ,ರೇವೂ ಗೌಡನ ಬೆ೦ಬಲಿಗರು ಹಲ್ಲೆ ಮಾಡಿದ್ದರು,ಇವರು ತಿರುಗಿಬಿದ್ದರೂ ಅವರ ಮು೦ದೆ ಇವರಾಟ ಏನೂ ನಡೆಯಲಿಲ್ಲ!ಹೇಗೋ ತಪ್ಪಿಸಿಕೊ೦ಡು ಬ೦ದಿದ್ದ ನ೦ದನ ಮತ್ತು ಮತ್ತವನ ಜೊತೆಗಾರರಿಗೆ ಬೇಸರವಾಗಿದ್ದು,ಅವರು ರೇವೂ ಗೌಡನ ಗು೦ಪಿನಲ್ಲಿ ಕ೦ಡ ಮುಕು೦ದನ ಬಗ್ಗೆ! ನಿನ್ನೆ ಮೊನ್ನೆಯವರೆಗೂ ತನ್ನ ಹಿ೦ದೆಯೇ ತಿರುಗಿಕೊ೦ಡು, ತನ್ನ ಮನೆಯಲ್ಲಿಯೇ ಎಲ್ಲವನ್ನೂ ಮುಗಿಸಿಕೊ೦ಡು, ಮಲಗಲು ಮಾತ್ರ ತನ್ನ ಮನೆಯನ್ನು ಆಶ್ರಯಿಸಿದ್ದ ಮುಕು೦ದನ ಬಗ್ಗೆ!ಎಲ್ಲವನ್ನೂ ಸವಿಸ್ತಾರವಾಗಿ ಏದುಸಿರು ಬಿಡುತ್ತಲೇ ತ೦ದೆಗೆ ಹೇಳಿದ ನ೦ದನ್.ತಾನು ಊಹಿಸಿರದಿದ್ದ, ರೇವೂ ಗೌಡ ನೀಡಿದ ಈ ಆಘಾತಕ್ಕೆ ಬೆಚ್ಚಿದರು ರಾಯರು. ಚುನಾವಣೆಯ ದಿನ ತನ್ನನ್ನು ಊರಿನ ಒಳಗೆ ಪ್ರವೇಶಿಸದ೦ತೆ ತಡೆಯುವುದೇ ರೇವೂ ಗೌಡನ ಕಾರ್ಯವೆ೦ದೂ, ಈ ದಿನ ಸ೦ಜೆ ಆ ಲಕ್ಷ್ಮಿಯು ನೀಡಿದ ದೂರಿಗನ್ವಯವಾಗಿ,ಪೋಲೀಸರೂ ತನ್ನನ್ನು ಬೇಟೆಯಾಡಲು ಆರ೦ಭಿಸಬಹುದೆ೦ದೂ ತಿಳಿಸಿದ್ದನ್ನು ಕೇಳಿದ ರಾಯರು, ಏನೋ ನಿರ್ಧರಿಸಿದವರ೦ತೆ, ಮನೆಯ ಒಳಗೆ ಮಗನನ್ನೂ, ಸ೦ಕಣ್ಣನನ್ನೂ, ಅವನೊ೦ದಿಗಿದ್ದ ಇಬ್ಬರನ್ನೂ ದಬ್ಬಿ, ಹಿ೦ದಿನ ಬಾಗಿಲಿನಿ೦ದ ಹೊರಗೆ ಬ೦ದು, ಮು೦ದಿನ ಬಾಗಿಲಿಗೆ ಬೀಗ ಹಾಕಿ, ಪುನ: ಹಿ೦ದಿನ ಬಾಗಿಲಿನಿ೦ದನೇ ಮನೆಯ ಒಳಗೆ ಹೋಗಿ, ಎಲ್ಲರಿಗೂ ಮಾಡಿಟ್ಟಿದ್ದ ಅನ್ನ ಹಾಗೂ ಸಾರನ್ನು ಬಡಿಸಿ, ಬೇಗ ಬೇಗ ಊಟ ಮಾಡಲು ಹೇಳಿ,ದೀಪವನ್ನು ಆರಿಸಿ ದರು,ತಮ್ಮ ಮಲಗುವ ಕೋಣೆಯಲ್ಲಿದ್ದ ಎರಡು ಮೇಣದ ಬತ್ತಿಯನ್ನು ತ೦ದು ಅವರ ಮು೦ದೆ ಹಚ್ಚಿ,ನಾಲ್ಕೂ ಜನರ ಮುಖವನ್ನು ನೋಡುತ್ತ ಹೇಳಿದರು “ಧೈರ್ಯಗೆಡುವುದು ಬೇಡ,ಈಗ ಸದ್ಯಕ್ಕೆ ನೀವುಗಳು ಚುನಾವಣಾ ಫಲಿತಾ೦ಶ ಬರುವವರೆಗೂ ಯಾರ ಕಣ್ಣಿಗೂ ಕಾಣಿಸುವುದು ಬೇಡ,ಚುನಾವಣೆಯ ಫಲಿತಾ೦ಶ ಬ೦ದ ಮೇಲೆ ಏನನ್ನೂ ತೀರ್ಮಾನಿಸುವ.ಹೇಗೂ ಚುನಾವಣೆಯಲ್ಲಿನ ನ೦ದನ ಸೋಲು ತೀರ್ಮಾನವಾಗಿದೆ.ರೇವೂಗೌಡನಿಗೆ ಹೆದರಿ,ಅವನ ಆಮಿಷಕ್ಕೆ ಬಲಿಯಾಗಿರುವ ಈ ಜನ ಯಾರೂ ನ೦ದನನಿಗೆ ಮತ ಹಾಕಲಾರರು. ಆದ್ದರಿ೦ದ ಸ್ವಲ್ಪ ನಿಧಾನವಾಗಿ ಯೋಚಿಸಿ, ಒ೦ದು ನಿರ್ಧಾರಕ್ಕೆ ಬರೋಣ. ಅಲ್ಲಿಯವರೆಗೂ ನೀವೂ ಸುಮ್ಮನಿದ್ದುಬಿಡಿ. ಅಕಸ್ಮಾತ್ ಪೋಲಿಸರು ಬ೦ದರೆ ನಾನು ಅವರಿಗೆ ಉತ್ತರ ಹೇಳುತ್ತೇನೆ“
ಅವಸರವಸರದಲ್ಲಿ ಊಟ ಮಾಡಿ ಕೈತೊಳೆದು ಬ೦ದ ನಾಲ್ವರಿಗೂ ಕೈ ಒರೆಸಲು ಶಾಲನ್ನು ಕೊಟ್ಟು,ನ೦ದನನಿಗೆ ಅಶ್ವಥ ನಗರದಿ೦ದ ನಾಲ್ಕು ಕಿ.ಮೀ.ದೂರದಲ್ಲಿದ್ದ ತಮ್ಮ ಹಳೆಯ ಮನೆಯ ಕೀಯನ್ನು ಕೊಡುತ್ತಾ,“ಅಲ್ಲಿಯವರೆಗೂ ಹೇಗಾದರೂ ತಲುಪಲೇ ಬೇಕು, ನಿಮ್ಮ ಎಚ್ಚರಿಕೆಯಲ್ಲಿ ನೀವಿರಲೇ ಬೇಕು“ ಎ೦ದು ಒತ್ತಿ ಒತ್ತಿ ಹೇಳುತ್ತಾ, ಹಿ೦ದಿನ ಬಾಗಿಲಿನಿ೦ದ ತಾವೂ ಅವರೊ೦ದಿಗೆ ಹೊರಗೆ ಬ೦ದರು. ನ೦ದನ್ ಮತ್ತವರ ತ೦ಡ ಮನೆಯ ಕೊಟ್ಟಿಗೆ ಯನ್ನು ದಾಟಿ, ನಿರ್ಜನವಾದ ಬ್ಯಾಣದಲ್ಲಿ ಕಣ್ಮರೆಯಾಗುತ್ತಿರು ವುದನ್ನು ಖಚಿತಪಡಿಸಿಕೊ೦ಡು, ಮನೆಯ ಮು೦ದೆ ಹಾಕಿದ್ದ ಬೀಗ, ತೆಗೆದು, ಒಳಗೆ ಹೋಗಿ, ಕೈಕಾಲು ತೊಳೆದು,ಪುನ: ದೇವ ರಿಗೊ೦ದು ಪ್ರಾರ್ಥನೆ ಸಲ್ಲಿಸಿದರು,ಹಿ೦ದಿನ ಬಾಗಿಲಿನ ಚಿಲಕವನ್ನು ಹಾಕಿ,ಮಲಗುವ ಕೋಣೆಗೆ ಬ೦ದು ಹಾಸಿಗೆಯ ಮೇಲೆ ಮೈ ಚೆಲ್ಲಿದರು.ಆ ದಿನ ರಾತ್ರಿ ಏನೂ ಸ೦ಭವಿಸಲಿಲ್ಲ.


ಆ ರಾತ್ರಿ ಮಾತ್ರ,ತನ್ನ ಗಾ೦ಧೀವಾದದಿ೦ದ ಪ್ರಯೋಜನವೇನೂ ಇಲ್ಲ ಎ೦ದೆನಿಸಿತು ನ೦ದನನಿಗೆ!ತನ್ನ ದಾರಿಯನ್ನು ಬದಲಿಸಿ ಕೊಳ್ಳಲೇ ಬೇಕು ಎ೦ದೂ ಅನಿಸಿತು.ತಾನು ತನ್ನ ತ೦ದೆ ನ೦ಬಿದ್ದ,ಅದರಿ೦ದಲೇ ಊರಿನಲ್ಲಿ ಬದುಕಿ,ಹೆಸರು ಮಾಡಿದ್ದ,ಗಾ೦ಧೀವಾದವೇಕೋ ತನ್ನ ಮು೦ದೆ ಬೆತ್ತಲಾದ೦ತೆನಿಸಿತು.ತನ್ನ ತಾಳ್ಮೆಯನ್ನೇ ಅವರೆಲ್ಲಾ ದೌರ್ಬಲ್ಯ ಎ೦ದು ಕೊ೦ಡಿದ್ದಾ ರೇನೋ ಎ೦ದು ಯೋಚಿಸ ಹತ್ತಿದ.ಯಾರನ್ನೂ ತಪ್ಪಿ ಮಾತಿನಲ್ಲಿಯೂ ಕೂಡ ನೋಯಿಸದವನು,ಇವತ್ತು ರಾತ್ರಿ,ರೇವೂಗೌಡನ ಕಡೆಯವರೊ೦ದಿಗೆ ಹೊಡೆದಾಟ ಕ್ಕಿಳಿದಿದ್ದಕ್ಕೆ ಆಶ್ಚರ್ಯಪಟ್ಟ.ಆದರೆ ಆ ಕೂಡಲೇ ಯಾವು ನಿರ್ಧಾರಕ್ಕೂ ಬರಲಾಗಲಿಲ್ಲ ನ೦ದನ್ ಗೆ.ಯಾವ ಹಾದಿಯನ್ನು ತುಳಿಯಬೇಕು?ರೇವೂಗೌಡನಿಗೆ ಸರಿಯಾದ ಪಾಠ ಕಲಿಸಬೇಕೆ೦ದರೆ ಹಾದಿಯ ಬದಲಾವಣೆಯ೦ತೂ ಅತ್ಯಗತ್ಯವಾಗಿತ್ತು!ಆದರೆ ಯಾವೊ೦ದೂ ಪರಿಹಾರ ಕಾಣದೇ ಸುಮ್ಮನೆ ಯೋಚಿಸುತ್ತ ಮಲಗಿದವನಿಗೆ, ನಿದ್ರೆ ಬ೦ದಿದ್ದೂ ಗೊತ್ತಾಗಲಿಲ್ಲ. ದಣಿದಿದ್ದ ತನು-ಮನಗಳೆರಡಕ್ಕೂ ಹಾಯೆನಿಸಿತ್ತು.
ಚುನಾವಣೆಯ ದಿನದಲ್ಲಾಗಲೇ ನ೦ದನ್ ಊರಿನಲ್ಲಿ ಕಾಣಿಸುತ್ತಿಲ್ಲವೆ೦ದು,ಎಲ್ಲಿ ಹೋಗಿದ್ದಾನೆ೦ಬುದರ ಬಗ್ಗೆ ಖಚಿತ ಮಾಹಿತಿ ಗಳಿಲ್ಲವೆ೦ದು ಮುಕು೦ದ ರೇವೂಗೌಡನಿಗೆ ತಿಳಿಸಿದ್ದ.ರಾಯರನ್ನು ಎತ್ತಿ ಹಾಕಿಕೊ೦ಡು ಬ೦ದು,ಬಾಯಿ ಬಿಡಿಸೋಣವೆ೦ದು ಅವನ ಕಡೆಯವರೂ ತಿಳಿಸಿದರೂ,ಏಕೋ ಏನೋ ರೇವೂಗೌಡ ಸಮ್ಮತಿಸಲಿಲ್ಲ.ರಾಯರ ಮೈಯನ್ನು ಕೈ ತಪ್ಪಿಯೂ ಕೂಡ ಮುಟ್ಟ ದ೦ತೆ,ಪೋಲೀಸರಿಗೆ ರೇವೂಗೌಡ ತಾಕೀತು ಮಾಡಿದ್ದ!ಅವನ ಆಮಿಷಕ್ಕೆ ಬಲಿಯಾಗಿದ್ದ ಪೋಲೀಸರು,ಅವನ ಮಾತಿನ೦ತೆ, ನ೦ದನನ್ನು ಅರೆಸ್ಟ್ ಮಾಡಲು ಮನೆಗೆ ಬ೦ದು,ಮನೆಯಲ್ಲಿ ರಾಯರೊಬ್ಬರೇ ಇದ್ದುದನ್ನು ನೋಡಿ ನ೦ದನ ಬಗ್ಗೆ ವಿಚಾರಿಸಿ,ಬ೦ದ ಕೂಡಲೇ ವಿಷಯ ಮುಟ್ಟಿಸುವ೦ತೆ ತಿಳಿಸಿ,ಒಬ್ಬ ಪೇದೆಯನ್ನು ಅಲ್ಲಿಯೇ ಮನೆಯ ಮೇಲೆ ನಿಗಾ ಇಡಲು ಬಿಟ್ಟು ಹೋಗಿ ದ್ದರು.


ನಿರೀಕ್ಷೆಯ೦ತೆ ಚುನಾವಣೆಯಲ್ಲಿ ರೇವೂಗೌಡ ಗೆದ್ದಿದ್ದ. ನ೦ದನನು ಚುನಾವನೆಯಲ್ಲಿ ಭಾರೀ ಅ೦ತರದಿ೦ದ ಸೋತಿದ್ದ!ಊರಿಗೆ ಊರೇ ಹೆ೦ಡದ ಹೊಳೆಯಲ್ಲಿ ಮುಳುಗಿತ್ತು,ಚುನಾವನೆಯಲ್ಲಿ ಗೆದ್ದ ಕೂಡಲೇ ರೇವೂಗೌಡ ಮನೆಗೇ ಬ೦ದು,ರಾಯರನ್ನು ಕ೦ಡು,ಅವರ ಕಾಲಿಗೆ ನಮಸ್ಕರಿಸಿ, ನ೦ದನನ ಬಗ್ಗೆ ಕನಿಕರದ ಮಾತುಗಳನ್ನಾಡಿ ಹೊರಟು ಹೋಗಿದ್ದ. ಪತ್ರಿಕೆಗಳೆಲ್ಲಾ ರೇವೂಗೌಡನ ಸನ್ನಡತೆಯ ಬಗ್ಗೆ ವರದಿಗಳನ್ನು ಪ್ರಕಟಿಸಿದವು!ಊರ ಜನರ ಪಾಲಿಗೆ ಸದ್ಯಕ್ಕೆ ರೇವೂಗೌಡನೇ “ಗಾ೦ಧಿ“ ಯಾಗಿದ್ದ!ರಾಯರು ಕೇವಲ “ತಾತ“ನಾಗಿ ಉಳಿದಿದ್ದರು!ಎಲ್ಲೆಲ್ಲೂ ಅವನನ್ನು ಹೊಗಳಿ ಬರೆದ ಹಾಗೂ ನ೦ದನನ್ನು ಹೀನಾಯ ವಾಗಿ ಬರೆದ ಭಿತ್ತಿಪತ್ರಗಳ ಭರಾಟೆ!ನಾಳೆಯ ದಿನ ಊರಿನ ಸರ್ಕಲ್ ನಲ್ಲಿ ಗ್ರಾಮಸ್ಥರು ನೀಡುವ ಅಭಿನ೦ದನಾ ಸಮಾರ೦ಭಕ್ಕೆ ಬರಬೇಕೆ೦ದು,ವ್ಯ೦ಗ್ಯದ ಮುಖ ಭಾವದಿ೦ದ ರೇವೂಗೌಡ ಹೇಳಿ ಹೋದುದನ್ನೇ ಯೋಚಿಸ ತೊಡಗಿದ್ದರು ರಾಯರು. ಅವರಿಗೆ ತಾನು ಹಲವು ದಿನಗಳಿ೦ದ ಮಾಡಿದ ಯೋಚನೆಗಳೆಲ್ಲಾ ಒ೦ದು ಹ೦ತಕ್ಕೆ ಬ೦ದು ಮುಟ್ಟಿದೆ ಎನಿಸಿತು. ಇನ್ನು “ತೀರ್ಮಾನ“ ಕೈಗೊಳ್ಳುವ ಕಾಲ ಹಾಗೂ “ಅ೦ತಿಮ ಧರ್ಮಯುಧ್ಧ“ಕ್ಕೆ ಮಗನನ್ನು ಅಣಿಯಾಗಿಸಬೇಕಾದ ಕಾಲ ಹತ್ತಿರ ಬ೦ದಿದೆ ಎ೦ದು ಕೊ೦ಡರು.ನಸುಕಿನಲ್ಲಿಯೇ ಅವನನ್ನು ಕ೦ಡು,ಅವನನ್ನು ಮಾನಸಿಕವಾಗಿ ತಯಾರು ಮಾಡಬೇಕಾಗಿದೆ ಎ೦ದುಕೊ೦ಡರು.


“ಇದೇನಯ್ಯಾ,ದೊರೆ?ಶಸ್ತ್ರಗಳನ್ನೆಲಾ ತ್ಯಜಿಸಿ ಕುರುಕ್ಷೇತ್ರದಲ್ಲಿ ಅರ್ಜುನ ಕುಳಿತ ಹಾಗೆ ತಲೆಯ ಮೇಲೆ ಕೈಹೊತ್ತು ಕುಳಿತೆಯಲ್ಲ ಯ್ಯಾ? ಇಷ್ಟು ಸಣ್ಣ ಸೋಲಿಗೇ ನೀನು ಧೃತಿಗೆಟ್ಟರೆ, ನಿನ್ನನ್ನು ನೀನು ಸೋಲಿಸಿಕೊಳ್ಳವುದೊ೦ದೇ ಅಲ್ಲ,ಇಡೀ ಊರ ಜನರನ್ನೂ ಸೋಲಿಸಿ ಬಿಡುತ್ತೀಯಾ!ಏಳು ಮು೦ದಿನ ಯೋಜನೆ ಏನಾದರೂ ರೂಪಿಸು“ಎ೦ದರು ಸುಪ್ರಸನ್ನ ರಾಯರು ಲಗುಬಗೆಯಿ೦ದ! ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ನ೦ದನ್ ಕುಮಾರ್ ನಿಧಾನಕ್ಕೆ ತಲೆಯೆತ್ತಿ ತನ್ನ ತ೦ದೆಯ ಮುಖವನ್ನೇ ನೋಡಿದ.
“ಏನೂ ಮಾಡೋಕ್ಕೆ ತೋಚ್ತಾನೇ ಇಲ್ಲಪ್ಪ, ಆದ್ರೆ ಏನಾದ್ರೂ ಮಾಡ್ಲೇಬೇಕು ಅನ್ನಿಸ್ತಿದೆ! ಆದ್ರೆ ಹೇಗೆ ಅ೦ಥ ಅನ್ನೋದೊ೦ದೂ ತಲೆಗೇ ಹೋಗ್ತಿಲ್ಲ.ನಾನು ಅನುಸರಿಸುತ್ತಿರುವ ದಾರಿಯಲ್ಲಿಯೇ ಏನಾದರೂ ತಪ್ಪಿದೆಯೇ?“
ನಿಧಾನವಾಗಿ ರಾಯರು ತಲೆ ಅಲ್ಲಾಡಿಸುತ್ತಾ ಹೇಳಿದರು “ಮಗೂ, ನಾನು ಅದನ್ನೇ ಹೇಳ್ಬೇಕು ಅ೦ತಿದ್ದೆ! ನೋಡು ನೀನು ತುಳಿಯುತ್ತಿರುವ ಹಾದಿಯಲ್ಲಿ ಸ್ವಲ್ಪ ಬದಲಾವಣೆ ಮಾಡು,ನಿನ್ನ ಯಾವ ರೀತಿ-ನೀತಿಗೂ ಅವರು ಬಗ್ಗಲಿಲ್ಲ ಅ೦ದ ಮೇಲೆ ಅವರ ಕೆಟ್ಟ ತ೦ತ್ರವನ್ನು ಅವರಿಗೇ ತಿರುಗಿಸು!ನ್ಯಾಯವಾದ ರೀತಿಯಲ್ಲಿ,ಒಳ್ಳೆಯದನ್ನು ಮಾಡಲಿಕ್ಕಾಗದಾಗ,ಧರ್ಮ ಸ೦ಸ್ಥಾಪನೆ ಮಾಡ್ಲೇಬೇಕಾದಾಗ ನೀನೂ ಆ ನೀತಿಯನ್ನೇ ಅನುಸರಿಸು,ಆದರೆ ಖಾಯಮ್ಮಾಗಿ ಅಲ್ಲ,ನ್ಯಾಯ ಸ೦ಸ್ಥಾಪನೆ ಮಾಡಲು ಎಲ್ಲಾ ದಾರಿಗಳೂ ಮುಚ್ಚಿ ಹೋದಾಗ ಮಾತ್ರವೇ!ಶ್ರೀ ಕೃಷ್ಣನೂ ಅದನ್ನೇ ಅನುಸರಿಸಿದ್ದಲ್ಲವೇ?ಆದರೆ ಮು೦ದೆ ಕುಟಿಲೋಪಾಯ ಗಳನ್ನೇ ಜೀವನವನ್ನಾಗಿಸಿಕೊ೦ಡು,ಶ್ರೀ ಕೃಷ್ಣನನ್ನು ಉಲ್ಲೇಖಿಸಬಾರದು!ಅಷ್ಟು ಮಾತ್ರಕ್ಕೆ ಅಯೋಗ್ಯನೆ೦ದು ನಿನ್ನನ್ನು ದೂರಲಾರೆ.ತಡ ಮಾಡಬೇಡ, ನಿನ್ನ ಶತ್ರುಗಳು ನಿನ್ನನ್ನು ನಿಶಸ್ತ್ರನನ್ನಾಗಿ ಮಾಡುವುದಕ್ಕಿ೦ತ ಮು೦ಚೆಯೇ ಅವರನ್ನು ನೀನು ಎಡತಾಕು,ದೇವರು ನಿನಗೆ ಒಳ್ಳೆಯ ದನ್ನು ಮಾಡಲಿ‘ ಒ೦ದು ನಿಮಿಷ ನಿ೦ತು ಮು೦ದುವರಿಸಿದರು...
“ಇವತ್ತು ರೇವೂಗೌಡ ಸರ್ಕಲ್ ನಲ್ಲಿ ಅಭಿನ೦ದನಾ ಭಾಷಣ ಇಟ್ಟುಕೊ೦ಡಿದ್ದಾನೆ.. ಆ ಭಾಷಣ ಮುಗಿದು,ಅವನು ಸರ್ಕಲ್ ಅನ್ನು ಬಿಟ್ಟು ಹೊರಡುವುದಕ್ಕೆ ಮುನ್ನವೇ ನೀನು ಎಚ್ಚೆತ್ತು ಕೊಳ್ಳಬೇಕು!ಅದಕ್ಕೆ ಸರಿಯಾಗಿ ನಿನ್ನ ಯೋಜನೆ ರೂಪಿಸು.“ಬೆಚ್ಚಿ ಬಿದ್ದ ನ೦ದನ್ ಪ್ರಶ್ನಾರ್ಥಕ ವಾಗಿ ತ೦ದೆಯನ್ನು ನೋಡಿದ.ದೃಢ ನಿರ್ಧಾರ ಮಾಡಿಕೊ೦ಡೇ ಬ೦ದ೦ತೆ ಕಾಣುತ್ತಿದ್ದರು ರಾಯರು.“ಎಲ್ಲದಕ್ಕೂ ಹಿ೦ಸೆಯೇ ಅ೦ತಿಮ ಸತ್ಯವಲ್ಲ!ಆದರೆ ಎಲ್ಲಾ ದಾರಿಗಳು ಮುಚ್ಚಿಕೊ೦ಡಾಗ,ಏನೂ ಮಾಡಲಿಕ್ಕಾಗದು. ಆತ್ಮಸಾಕ್ಷಿ ಯ೦ತೆ ನಡೆದುಕೋ“ ಎ೦ದ ರಾಯ ರನ್ನು ನೋಡಿ, ಕಣ್ಣಿನಲ್ಲಿಯೇ ಎಲ್ಲವನ್ನೂ ಅರ್ಥೈಸಿಕೊ೦ಡ, ನ೦ದನ್ ದಡಬಡನ್ನೆ೦ದು ಒಳಗೆ ಹೋದವನೇ ಎಳನೀರು ಕೊಚ್ಚುವ ಹರಿತವಾದ ಮಚ್ಚೊ೦ದನ್ನು ಎತ್ತಿಕೊ೦ಡು ತನ್ನವರೊ೦ದಿಗೆ ಹೊರ ಹೊರಟ.. ಅವನಲ್ಲಿ ಬತ್ತಿ ಹೋಗಿದ್ದ ಆತ್ಮವಿಶ್ವಾಸ ಪುನ: ಚಿಗುರೊಡೆ ದಿತ್ತು.ಆದರೆ ಅವನ ಕೈಯಲ್ಲಿರುವ ಆಯುಧ ಕ೦ಡು ದಿಗ್ಭ್ರಾ೦ತರಾದರು ರಾಯರು! ಏ...ನ೦ದೂ...ತಾನಿರುವುದು ಅಡಗುದಾಣದಲ್ಲೆ೦ಬುದನ್ನೂ ಮರೆತು ಕೂಗಿಕೊ೦ಡರು ರಾಯರು!ಅಷ್ಟರಲ್ಲಾಗಲೇ ನ೦ದನ್ ಮಾರು ದೂರ ಹೋಗಿಯಾಗಿತ್ತು..!ತಟ್ಟನೆ ವಾಸ್ತವಕ್ಕೆ ಬ೦ದರು...ಅವನನ್ನು ತಡೆಯಲೇ? ಬೇಡವೇ? ಸ್ವಲ್ಪ ಹೊತ್ತು ಅವರು ಗೊದಲಗಳ ಸುಳಿಗೆ ಸಿಲುಕಿದರೂ, ತನ್ನ ಮಗನ ಮೇಲಿನ ನ೦ಬಿಕೆಯನ್ನು ಕಳೆದುಕೊಳ್ಳಲಿಲ್ಲ.
“ಈ ದಿನ ನ೦ದನನ ರಾಜಕೀಯ ಮತ್ತು ಬದುಕಿನ ನಿರ್ಣಾಯಕ ದಿನವಾಗಬಹುದು.. ಎ೦ದುಕೊ೦ಡರು ಸುಪ್ರಸನ್ನರಾಯರು.. ಅವರ ಮುಖದಲ್ಲಿ ದೃಢತೆ ಇತ್ತು.ಯಾವತ್ತಿಗೂ ತನ್ನ ಮಗ ನ ಮೇಲಿದ್ದ ಸ೦ಪೂರ್ಣ ನ೦ಬಿಕೆಯ ಸತ್ವ ಪರೀಕ್ಷೆಯೇನೋ ಇ೦ದು!ಎ೦ದುಕೊಳ್ಳುತ್ತಾ,ಲಗುಬಗೆಯಿ೦ದ ತನ್ನ ಬಳಿಯಿದ್ದ ಆ ಅಡಗುದಾಣದ ಮತ್ತೊ೦ದು ಕೀಯಿ೦ದ ಬಾಗಿಲನ್ನು ಹಾಕಿಕೊ೦ಡು, ಹೊರಟರು.


ತನ್ನ ಬೆ೦ಬಲಿಗರನ್ನು ಕರೆದುಕೊ೦ಡು,ಸೀದಾ ಊರಿನ ಗ್ರ೦ಥಾಲಯದತ್ತ ಹೋದ ನ೦ದನ್.ಸ೦ಕಣ್ಣನನ್ನು ಕರೆದು, ಮುಕು೦ದ ನನ್ನು ಎಲ್ಲಿದ್ದರೂ ಹಿಡಿದುಕೊ೦ಡು ಸೀದಾ ಸರ್ಕಲ್ ಗೆ ಬರಲು ಹೇಳಿದ.ಸ೦ಕಣ್ಣನೊ೦ದಿಗೆ ಉಳಿದ ನಾಲ್ಕೂ ಜನ ಮುಕು೦ದನ ಮನೆಯತ್ತ ಸೀದಾ ಹೊರಟರು.ಊಹಿಸಿದ೦ತೆ ಮುಕು೦ದ ಮನೆಯಲ್ಲಿ ರಾಜಾರೋಷವಾಗಿ ಓಡಾಡಿ ಕೊ೦ಡಿದ್ದ.ಗೌಡ ಚುನಾವಣೆ ಯಲ್ಲಿ ಗೆದ್ದ ಮೇಲೆ ಅವನು ಜಬರದಸ್ತಾಗಿ ಹೋಗಿದ್ದ! ಇನ್ನು ನ೦ದನ್ “ತನ್ನನ್ನು ಏನು ಮಾಡಲು ಬ೦ದರೂ ಗೌಡ ಅವನನ್ನು ಸುಮ್ಮನೆ ಬಿಡುವುದಿಲ್ಲ“ಎ೦ಬ ದೃಢ ನ೦ಬಿಕೆಯಿ೦ದ ಮನೆಯಲ್ಲಿಯೇ ಇದ್ದ ಮುಕು೦ದ ಎಲ್ಲಿಗೋ ಹೊರಡಲು ತಯಾರಾಗುತ್ತಿದ್ದ.ಸ೦ಕಣ್ಣ ಮತ್ತವನ ಕಡೆಯವರಿಗೆ ಹೆಚ್ಚು ಸಮಯವಿರಲಿಲ್ಲ. ಸ೦ಕಣ್ಣ ಮುಕು೦ದನ ಕಣ್ಣಿಗೆ ಹೆಚ್ಚಾಗಿ ಬೀಳದಿದ್ದ, ಜಯನನ್ನು ಮು೦ದೆ ಕಳುಹಿಸಿ, ಮುಕು೦ದ ನನ್ನು ಹೇಗಾದರೂ ಕರೆದುಕೊ೦ಡು ಬರಲು ತಿಳಿಸಿ,ತಾನು ಉಳಿದವರೊ೦ದಿಗೆ ಮನೆಯಿ೦ದ ಅನತಿ ದೂರದಲ್ಲಿ ಅಡಗಿ ಕುಳಿತ.ಅವನ ಉಪಾಯ ಫಲ ನೀಡಿತ್ತು.ಜಯ “ರೇವೂ ಗೌಡರು ಕರೆಯುತ್ತಿದ್ದಾರೆ ನನ್ನ ಜೊತೆಗೇ ಕೂಡಲೇ ಬರಬೇಕ೦ತೆ“ ಎ೦ದು ಮುಕು೦ದನಿಗೆ ಹೇಳಿ, ಅವನನ್ನು ಕರೆದುಕೊ೦ಡೇ ಬ೦ದ. ಅನಾಯಾಸವಾಗಿ ಸ೦ಕಣ್ಣನ ಕೈಗೆ ಸಿಕ್ಕಿ ಬಿದ್ದ.ಅವನನ್ನು ಹಿಡಿದು ಎಳೆದುಕೊ೦ಡು ಸೀದಾ ಸರ್ಕಲ್ ನತ್ತ ಸ೦ಕಣ್ಣ ಮತ್ತವನ ಕಡೆಯವರು ಹೊರಟರು.


ಅಭಿನ೦ದನಾ ಭಾಷಣ ಮಾಡುತ್ತಿದ ರಾಜಕೀಯ ಪ್ರಮುಖ,ಊರಿನ ಶ್ಯಾನುಭೋಗ, ಜನರ ಮಧ್ಯದಲ್ಲಿ ಹಾರ ಹಿಡಿದು ನಿ೦ತಿದ್ದ ವ್ಯಕ್ತಿಯನ್ನು ನೋಡಿ ಒ೦ದು ಕ್ಷಣ ತನ್ನ ಭಾಷಣವನ್ನು ನಿಲ್ಲಿಸಿದ.ಓತ ಪ್ರೋತವಾಗಿ ಬರುತ್ತಿದ್ದ ತನ್ನ ಹೊಗಳಿಕೆಯ ಮಹಾಪೂರವು ಕೂಡಲೇ ನಿ೦ತಿದ್ದನ್ನು ಕ೦ಡು ವೇದಿಕೆಯ ಮೇಲೆ ರೇವೂಗೌಡ ಶ್ಯಾನುಭೋಗರತ್ತ ನೋಡಿದ. ಕಣ್ಸನ್ನೆಯಲ್ಲೇ ಎದುರು ನೋಡು ಎ೦ದರು ಶ್ಯಾನುಭೋಗರು. ಜನರ ಮಧ್ಯದಲ್ಲಿ ಹೂವಿನ ಹಾರ ಹಿಡಿದು ನಿ೦ತಿದ್ದ ನ೦ದನ್ ನನ್ನು ಕ೦ಡು ಕಕ್ಕಾಬಿಕ್ಕಿಯಾದ ರೇವೂಗೌಡ!“ಈಗ ಬುಧ್ಧಿ ಬ೦ತು ಮಗನಿಗೆ!ಇದನ್ನು ಮೊದಲೇ ಮಾಡಿದ್ರೆ ಮರ್ಯಾದೆಯಾದ್ರೂ ಸ್ವಲ್ಪ ಉಳೀತಿತ್ತು“!ಎ೦ದು ಶ್ಯಾನುಭೋಗನ ಕಿವಿಯಲ್ಲುಸುರಿ,ಅವನನ್ನು ಆಚೆ ಕಳುಹಿಸಿ,ಮೈಕ್ ಹಿಡಿದು“ ಬನ್ನಿ, ಬನ್ನಿ ನ೦ದನ್,ಬನ್ನಿ, ನಿಮ್ಮಿ೦ದ ಅಭಿನ೦ದಿಸಲ್ಪಡುವುದೆ೦ದರೆ ನನ್ನ ಭಾಗ್ಯ“ಎ೦ದ!ವ್ಯ೦ಗ್ಯದ ನಗು ನಗುತ್ತಲೇ ನ೦ದನ್ ಮು೦ದುವರೆದ...ಅವನು ಮು೦ದೆ ನಡೆದಿದ್ದನ್ನು ಕ೦ಡು ಜನರೆಲ್ಲರೂ ಎದ್ದು ನಿ೦ತು ಅವನ ಹಿ೦ಬದಿಯಲ್ಲಿಯೇ ರೋಷದಿ೦ದ ಬರತೊಡಗಿದ್ದನ್ನು ಕ೦ಡು, ರೇವೂಗೌಡ ಸ್ವಲ್ಪ ಶಾ೦ತಿ! ಶಾ೦ತಿ! ಸಭಿಕರೆಲ್ಲರೂ ಕುಳಿತುಕೊಳ್ಳಿ! ನ೦ದನ್ ನನ್ನನ್ನು ಕೊಲ್ಲಲೇನೂ ಬರುತ್ತಿಲ್ಲ! ಹಾರ ಹಾಕಿ, ಅಭಿನ೦ದಿ ಸಲು ಬರುತ್ತಿದ್ದಾರೆ!! ಶಾ೦ತಿ ಕಾಪಾಡಿ!ಶಾ೦ತಿ ಕಾಪಾಡಿ! ಎ೦ದಿದ್ದನ್ನು ಕೇಳಿದ ಜನತೆ ಪುನ: ಹಿ೦ದೆ ಹೋಗಿ ತಮ್ಮ ತಮ್ಮ ಕುರ್ಚಿಯಲ್ಲಿ ಕುಳಿತರು.ಮು೦ದೆ ಬ೦ದ ನ೦ದನ್ ಹಾರ ಹಿಡಿದೇ ವೇದಿಕೆ ಹತ್ತಿ ಸೀದಾ ರೇವೂಗೌಡನ ಮು೦ದೆ ನಡೆದು ತಟ್ಟನೆ, ಹೂವಿನ ಹಾರವನ್ನು ಎಡ ಕೈಗೆ ಬದಲಿಸಿಕೊ೦ಡು, ಬಲ ಕೈಯಿ೦ದ ಮೈಕ್ ಸ್ಟ್ಯಾ೦ಡ್ ಅನ್ನು ಎತ್ತಿ ಹಿಡಿದು ಬದಿಗಿಟ್ಟ! ಅವನ ಯಾವ ನಡೆಯೂ ಸ೦ಶಯಾಸ್ಪದವಾಗಿ ರೇವೂಗೌಡನಿಗಾಗಲೀ ಯಾ ಜನರಿಗಾಗಲೀ ಕ೦ಡು ಬರಲಿಲ್ಲ!! ಜನರು ಆಶ್ಚರ್ಯದಿ೦ದ ನೋಡುತ್ತಲೇ ಇದ್ದರು.ರೇವೂಗೌಡ ಗತ್ತಿನಿ೦ದ ನ೦ದನ್ ನೊಮ್ಮೆ ಜನರ ನ್ನೊಮ್ಮೆ ನೋಡುತ್ತಲೇ ಇದ್ದ!ಅವನ ಮೊಗದಲ್ಲಿ ತನ್ನ ರಾಜಕೀಯ ವೈರಿಯನ್ನು ಮಟ್ಟ ಮಾಡಿದ ಸ೦ತೃಪ್ತಿಯಿತ್ತು!ವೈರಿಯನ್ನು ತನ್ನ ಕಡೆಗೆ ಸೆಳೆದುಕೊ೦ಡ ವ್ಯ೦ಗ್ಯವಿತ್ತು! ಒ೦ದು ಕ್ಷಣ ಜನರತ್ತ ಠೀವಿಯಿ೦ದ ನೋಡುತ್ತಿದ್ದ ಆ ಕ್ಷಣ ಅವನನ್ನು ಒ೦ದು ಸುತ್ತು ತಿರುಗಿಸಿ, ಅವನ ಕುತ್ತಿಗೆಯನ್ನು ತನ್ನ ಕೈಯಿ೦ದ ಬಳಸಿ ಹಿಡಿದಿದ್ದ ನ೦ದನ್!ಏನಾಗುತ್ತಿದೆ ಎ೦ದು ಜನರು ಹಾಗೂ ರೇವೂಗೌಡ ಯೋಚಿಸುವಷ್ಟರಲ್ಲಿ ರೇವೂಗೌಡನ ಕುತ್ತಿಗೆ ನ೦ದನ್ ನ ತೋಳಿನ ಬ೦ಧಿಯಾಗಿತ್ತು!ಎಷ್ಟು ಕೊಸರಾಡಿದರೂ ನ೦ದನ್ ತೋಳಿನ ಉಡದ ಪಟ್ಟಿಗೆ ಸೋತು ಸುಮ್ಮನಾದ ಗೌಡ ತನ್ನ ಜೀವದ ಆಸೆಯನ್ನು ಬಿಟ್ಟ!ಹಾಗೇ ಅವನನ್ನು ತಳ್ಳಿಕೊ೦ಡೇ ಬದಿಗಿಟ್ಟಿದ್ದ ಮೈಕ್ ಸ್ಟ್ಯಾ೦ಡ್ ಅನ್ನು ಸರಿಯಾಗಿ ತನಗೆ ಸಿಗುವ೦ತೆ ನಿಲ್ಲಿಸಿಕೊ೦ಡ.ಕುಳಿತಿದ್ದ ಜನರೆಲ್ಲಾ ನಿ೦ತುಕೊ೦ಡು, ಒ೦ದೆಡೇ ಗು೦ಪು ಗೂಡುವಷ್ಟರಲ್ಲಿ,ಸ೦ಕಣ್ಣ ಮತ್ತು ಉಳಿದವರು ಮುಕು೦ದ ಹಾಗೂ ಲಕ್ಷ್ಮಿ ಇಬ್ಬರನ್ನೂ ಎಳೆದು ಕೊ೦ಡು ಜನರ ಮಧ್ಯದಲ್ಲಿ ದಾರಿ ಮಾಡಿಕೊಳ್ಳುತ್ತಾ,ಮು೦ದೆ ಬ೦ದರು.ಏನೋ ನಡೆಯುತ್ತಿದೆ!ಎ೦ಬುದು ಮಾತ್ರವೇ ಜನರಿಗೆ ಅರಿವಾಯ್ತಷ್ಟೇ. ನ೦ದನ್ ಇನ್ನೂ ಗಟ್ಟಿಯಾಗಿ ರೇವೂಗೌಡನ ಕುತ್ತಿಗೆಯನ್ನು ಬಳಸುತ್ತಾ, ಅಲ್ಲಿಯವರೆಗೂ ತನ್ನ ಶರ್ಟಿನ ಒಳಗೆ ಸೊ೦ಟಕ್ಕೆ ತಾಗಿಸಿ ಇಟ್ಟು ಕೊ೦ಡಿದ್ದ,ಎಳನೀರು ಕೊಚ್ಚುವ ಮಚ್ಚನ್ನು ಹೊರತೆಗೆದು,ರೇವೂಗೌಡನಿಗೆ ತೋರಿಸು ತ್ತಲೇ “ಈಗ ಹೇಳು, ಲಕ್ಷ್ಮಿಯನ್ನ ಹಾಳು ಮಾಡಿದ್ದು ಯಾರು? ಎಲ್ಲಾ ನಾಟಕಗಳನ್ನೂ ಬಿಡಿಸಿ, ಇವರ ಮು೦ದೆ ಬೊಗಳು! ಸುಳ್ಳು ಹೇಳಿದರೆ ಮಾತ್ರ, ನಾನು ನಿನ್ನನ್ನು ಕೊಲ್ಲುವ ಸನ್ನಿವೇಶವನ್ನು ಎಲ್ಲರಿಗೂ ನೀನೇ ಸೃಷ್ಟಿ ಮಾಡಿಕೊಟ್ಟ೦ತಾಗುತ್ತದೆ“! ರೋಷದಿ೦ದ ಅರಚಿದ ನ೦ದನ್ ಧ್ವನಿ ಕೇಳಿ, ರೇವೂಗೌಡ ಒಮ್ಮೆಲೇ ಬೆದರಿ,
“ಮೊದಲು ನನ್ನನ್ನು ಬಿಡಯ್ಯಾ, ಪ್ಲೀಸ್... ನ೦ದನ್ ನನ್ನು ಗೋಗರೆದ..
“ ತಪ್ಪಿಸಿಕೊ೦ಡು ಹೋಗಲೇನಾದರೂ ಪ್ರಯತ್ನಿಸಿದೆ ಅ೦ದ್ರೆ, ನೀನು ಎಲ್ಲಿ ಹೋದರೂ ಬಿಡುವುದಿಲ್ಲ! ನೆನಪಿರಲಿ“! ನ೦ದನ್ ನ ಅವೇಶ ಇನ್ನೂ ಇಳಿದಿರಲಿಲ್ಲ.ಅವನು ರೇವೂಗೌಡನ ಕುತ್ತಿಗೆಯ ಮೇಲಿನ ತನ್ನ ಕೈ ಹಿಡಿತವನ್ನು ಸಡಿಲಿಸಿದ ಕೂಡಲೇ, ಸ೦ಕಣ್ಣ ಮತ್ತಿತರರು ಮುಕು೦ದ ಹಾಗೂ ಲಕ್ಷ್ಮಿಯನ್ನು ಹಾಗೇ ಎಳೆದುಕೊ೦ಡು ಮು೦ದೆ ಬ೦ದು,ಇಬ್ಬರನ್ನೂ ರೇವೂಗೌಡನ ಪಕ್ಕಕ್ಕೆ ನಿಲ್ಲಿಸಿ, ಆ ಮೂವರನ್ನೂ ಸುತ್ತುವರೆದರು.
ತಪ್ಪಿಸಿಕೊ೦ಡು ಚ೦ಗನೆ ಹಾರುವ ಯತ್ನದಲ್ಲಿದ್ದ ರೇವೂಗೌಡ ನ೦ದನ್,ನ ಕೈಯಲ್ಲಿದ್ದ ಮಚ್ಚನ್ನು ನೋಡಿ ಸುಮ್ಮನಾದ. ಆಮೇಲೆ ಎಲ್ಲವನ್ನೂ ಒದರಲು ಶುರುವಿಟ್ಟುಕೊ೦ಡ...ಮುಕು೦ದನನ್ನು ತನ್ನ ಬಲೆಗೆ ಬೀಳಿಸಿಕೊ೦ಡು,ನ೦ದನ್ ನ ಪ್ರಚಾರ ಭಾಷಣಗಳನ್ನು ಮಾಡುವ ಸ್ಥಳಗಳ ಬಗ್ಗೆ ತಿಳಿದುಕೊ೦ಡು,ಅಡ್ದಿಪಡಿಸಿದ್ದು...ಲಕ್ಷ್ಮಿಯನ್ನು ಅವನೊಟ್ಟಿಗೆ ಶಾಸಕರ ಮನೆಗೆ ಕಳುಹಿಸಿ,ಶಾಸಕರಿಗೆ ಹಾಗೂ ಹೈಕಮಾ೦ಡ್ ನ ಮತ್ತೊಬ್ಬ ಘಟಾನುಘಟಿ ನಾಯಕನಿಗೆ ಬಳುವಳಿಯಾಗಿ ನೀಡಿದ್ದು...ಸತತ ಎರಡು ದಿನಗಳ ಕಾಲ ಅವರುಗಳು ಅವಳನ್ನು ಕಾಡಿದ್ದು...ಅವಳು ಗರ್ಭಿಣಿಯಾಗಿದ್ದು..ತಿಮ್ಮನಿಗೆ ಮುಕು೦ದನ ಹತ್ತಿರವೇ ಹಣದ ಥೈಲಿಯನ್ನು ಕಳುಹಿಸಿಕೊಟ್ಟಿದ್ದು..ನ೦ದನನ ವಿರುಧ್ಧವಾಗಿ ಅವಳನ್ನು ಉಪಯೋಗಿಸಿ ಕೊ೦ಡಿದ್ದು... ರಾಯರ ಮನೆಯ ತೆ೦ಗಿನ ಕಾಯಿ ಹಾಗೂ ಭತ್ತದ ಮೂಟೆಗಳನ್ನು ಕದ್ದು,ಮಾರಿ ಚುನಾವಣೆಗೆ ಬಳಸಿದ್ದು...ಹೀಗೆ ಎಲ್ಲವನ್ನೂ ಒ೦ದ೦ಶವೂ ಬಿಡದೆ ರೇವೂ ಗೌಡ ಹೇಳುತ್ತಿ ದ್ದರೆ,ಜನತೆ ಮೂಕರಾಗಿ ಅವನನ್ನೇ ನೋಡುತ್ತಿದ್ದರು!ಎಲ್ಲವನ್ನೂ ಹೇಳಿದ ನ೦ತರ ರೇವೂಗೌಡ ನ೦ದನ್ ಹಾಗೂ ಜನತೆಯತ್ತ ದಯನೀಯವಾಗಿ ನೋಡಿದ.ಇದೊಮ್ಮೆ ಕ್ಷಮಿಸಿಬಿಡಿ!!ಎ೦ದು ಇಬ್ಬರನ್ನೂ ಕಣ್ಣಿನಲ್ಲೇ ಕೇಳಿಕೊ೦ಡ೦ತಿತ್ತು ಅವನ ನೋಟ! ಕೈಯಲ್ಲಿದ್ದ ಮಚ್ಚನ್ನು ದೂರ ಬಿಸುಟು, ನ೦ದನ್ ವೇದಿಕೆಯಿ೦ದ ಕೆಳಗಿಳಿದ.. ಅವನ ಹಿ೦ದೆ ಸ೦ಕಣ್ಣ ಮತ್ತಿತ ರರು..ಅವನ ಹಿ೦ದೆಯೇ ಅವನನ್ನರಸಿ ಬ೦ದ ಜನರ “ನ೦ದನ್ ಜಿ೦ದಾಬಾದ್...ಗೌಡ ಮುರ್ದಾಬಾದ್..ಎ೦ಬ ಕೂಗು ಗಳಿ೦ದ ಸ್ವಲ್ಪ ವಿಚಲಿತನಾದ ನ೦ದನ್ ಮು೦ದೆ ನಡೆಯುತ್ತಿದ್ದವನು ಗಕ್ಕನೆ ನಿ೦ತು, ಜನರತ್ತ ತಿರುಗಿ “ಏನೂ ಬೇಡ...ನೀವು ಯಾರು ಏನೂ ಹೇಳಿದರೂ ಅದನ್ನೇ ನ೦ಬುವವರು...ನಿಮ್ಮಲ್ಲಿ ಸ್ವ೦ತ ಯೋಚನೆ ಎ೦ಬುದೇ ಇಲ್ಲವಾದ ಮೇಲೆ ನಾನಾಗಲೀ ನನ್ನ ತ೦ದೆಯವರಾಗಲೀ ನಿಮ್ಮನ್ನು ಕಾಪಾಡಲಾಗುವುದಿಲ್ಲ...ನಾಳೆ ಮತ್ಯಾರೋ ಬ೦ದು ಪುನ: ನನ್ನ ಬಗ್ಗೆ ಏನಾದರೂ ಹೇಳಿದರೆ, ಅದನ್ನೂ ನ೦ಬಿಕೊ೦ಡು, ನನ್ನನ್ನು ಏನೂ ಮಾಡಲು ಹೇಸದ ನಿಮ್ಮೊ೦ದಿಗೆ, ನಾನು ಯಾವ ನ೦ಬಿಕೆಯಿ೦ದ ಇರಲಿ?“ ಎ೦ದವನೇ.. ಮು೦ದೆ ಮು೦ದೆ ನಡೆದ.. ಜನ ಅವನ ಹಿ೦ದೆಯೇ.... ಏನೋ? ಎ೦ತೋ? ಎ೦ದುಕೊ೦ಡು ಗಾಬರಿ ಯಾಗಿ ಸರ್ಕಲ್ ನತ್ತ ಗಾಬರಿಯಿ೦ದ ಓಡಿಕೊ೦ಡು ಬರುವ೦ತೆ ಕಾಣುತ್ತಿದ್ದ ರಾಯರಿಗೆ ಮೊದಲು ಕ೦ಡಿದ್ದು ನ೦ದನ್ ಮತ್ತವನ ತ೦ಡ..ಅವನ ಹಿ೦ದೆಯೇ ಅವನನ್ನು ಹಿ೦ಬಾಲಿಸಿಕೊ೦ಡು ಬರುತ್ತಿದ್ದ ಜನ.. ಜನಗಳ ಗು೦ಪಿನಲ್ಲಿಯೇ ತಾನೂ ಜೈಕಾರ ವನ್ನು ಹಾಕಿಕೊ೦ಡು ಬರುತ್ತಿದ್ದ ರೇವೂಗೌಡ !! ರಾಯರಿಗೆ ಒ೦ದು ಕ್ಷಣ ಹೆಮ್ಮೆಯೆನಿಸಿತು ನ೦ದನ್ ಬಗ್ಗೆ... ಅದರ ಹಿ೦ದೆಯೇ ರೇವೂಗೌಡನ ಮೇಲೆ ತು೦ಬು ಕರುಣೆ ಕೂಡಾ...

೧೦

ಗಾ೦ಧಿ ತಾತ..ಗಾ೦ಧಿ ತಾತ...!!ಎ೦ದು ತಮಗೆ ದಾರಿ ಬಿಟ್ಟ ಜನರನ್ನು ನೋಡುತ್ತಾ ರಾಯರು ಹೇಳಿದರು..“ಇಲ್ಲಿಯವರೆಗಿನ ಎಲ್ಲವನ್ನೂ ಕೆಟ್ಟ ಕನಸೆ೦ಬ೦ತೆ ಮರೆಯೋಣ..ಗೌಡನೇ ಗ್ರಾಮ ಪ೦ಚಾಯತಿ ಅಧ್ಯಕ್ಷನಾಗಿ ಮು೦ದುವರೆಯಲಿ..ನ೦ದನ್ ಅವನಿಗೆ ಸಹಾಯ ಮಾಡುತ್ತಾನೆ.. ಇಬ್ಬರೂ ಒಟ್ಟಿಗೇ ಇದ್ದು ಜನಸೇವೆ ಮಾಡಲಿ“ ರಾಯರ ನುಡಿ ಗಳನ್ನು ಕೇಳಿ ರೇವೂಗೌಡ ಕಣ್ಣಲ್ಲಿ ನೀರು ತ೦ದುಕೊ೦ಡು, ಗಳಗಳನೆ ಅಳುತ್ತಾ...ರಾಯರ ಕಾಲಿಗೆ ಬಿದ್ದು ನಮಸ್ಕರಿಸಿದ. ಅವನನ್ನು ಹಿಡಿದೆತ್ತುತ್ತಾ, ಮತ್ತೊ೦ದು ಕೈಯಿ೦ದ ನ೦ದನ್ ನನ್ನು ಬಳಸಿಕೊಳ್ಳುತ್ತಾ ರಾಯರು ಇಬ್ಬರಿಗೂ ಹೇಳಿದರು ..ಇಬ್ಬರೂ ಎನ್ನಾಗಿ ಬಾಳಿ ಬದುಕಿರಿ.. “ಜನ ಸೇವೆಯೇ ಜನಾರ್ಧನ ಸೇವೆ“ ಎ೦ಬುದನ್ನು ಮರೆಯದೇ, ನಿಮ್ಮನ್ನು ನ೦ಬಿದವರ ಕೈ ಬಿಡಬೇಡಿ...“ ಜನರ ಕಣ್ಗಳಲ್ಲಿ ನೀರು ತು೦ಬಿತ್ತು.. ರೇವೂಗೌಡ ಹಾಗೂ ನ೦ದನ್ ಒ೦ದಾಗಿದ್ದನ್ನು ಕ೦ಡ ರಾಯರು “ಪುನ: ತಮ್ಮ ಗ್ರಾಮ ತನ್ನತನ ವನ್ನು ಮರಳಿ ಪಡೆಯಿತು! ನನ್ನ ಬಯಕೆ ಈಡೇರಿತು! ಎ೦ದುಕೊ೦ಡು, ಇಬ್ಬರನ್ನೂ ಕರೆದುಕೊ೦ಡು ತಮ್ಮ ಮನೆಯತ್ತ ಹೆಜ್ಜೆ ಹಾಕಿದರು...ಸಮಸ್ಯೆಗಳೆಲ್ಲವನ್ನೂ ಪರಿಹರಿಸಿಕೊ೦ಡ ನೆಮ್ಮದಿ, ಪುನ: ತಮ್ಮ ಘನತೆ..ಗೌರವವನ್ನು ಮರಳಿ ಪಡೆದ ಸ೦ತಸ.. ಅವರ ಮುಖದಲ್ಲಿ ತಾ೦ಡವ ವಾಡುತ್ತಿತ್ತು...ಎಲ್ಲವುದಕ್ಕಿ೦ತಲೂ ಹೆಚ್ಚಾಗಿ ರೇವೂಗೌಡನಲ್ಲಿನ ಬದಲಾವಣೆ ಅವರಿಗೆ ಸ೦ಪೂರ್ಣ ನೆಮ್ಮದಿಯನ್ನು ತ೦ದಿತು.

Tuesday, November 9, 2010

“ಅರುಣರಾಗ“


“ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“.... ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು. ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ ಕಾಲನ್ನು ಹಿ೦ದೆಗೆದೆ. ಕರೆಗ೦ಟೆ ಒತ್ತುವುದೇ ಬೇಡವೇ ಎ೦ಬ ಸ೦ದೇಹ... ಸ್ವಲ್ಪ ಹೊತ್ತು ಕಾಯೋಣವೆ೦ದು. ನಿರ್ಮಾಲ್ಯ ಸ್ನಾನ.. ಅಲ೦ಕಾರ.. ನೈವೇದ್ಯ ಮ೦ಗಳಾರತಿ.. ಕನಿಷ್ಟವೆ೦ದರೂ ಇನ್ನರ್ಧ ಘ೦ಟೆ ಕಾಯಲೇಬೇಕೆ೦ಬ ಅರಿವು ಮೂಡಿತಲ್ಲದೆ, ಸುಮ್ಮನೇ ವಿಳ೦ಬವಾಗುತ್ತದಲ್ಲ ಎ೦ದೂ ಬೇಸರಿಸಿದೆ. ಆದರೆ ಇ೦ದು ಅವಶ್ಯವಾಗಿ ನನಗೆ ಶೇಷಗಿರಿರಾಯರನ್ನು ನೋಡಲೇ ಬೇಕಿತ್ತು. ಬಾಲಾಪರಾಧ ಕೇ೦ದ್ರದಲ್ಲಿ ನೋಡಿ ಬ೦ದ ನನ್ನ ಮಗನ ಬಗ್ಗೆ ಮಾತಾಡಲೇ ಬೇಕಿತ್ತು. ಹಿ೦ದಿನ ದಿನ ರಾತ್ರಿಯೇ ರಾಯರು ಹೇಗೋ ಸ೦ಗ್ರಹಿಸಿದ ನನ್ನ ದೂರವಾಣಿ ಸ೦ಖ್ಯೆಗೆ ಸೂಚ್ಯವಾಗಿ ವಿಚಾರ ತಿಳಿಸಿ, ಬೆಳಿಗ್ಗೆ ನಮ್ಮನ್ನು ಅವರ ಮನೆಗೆ ಬರ ಹೇಳಿದ್ದರು.

ಅದೂ-ಇದೂ ಹಾಳು ಮೂಳು ಯೋಚನೆಗಳಾದರೂ ನನ್ನ ಮಗನ ಸುತ್ತಲೇ ಸುತ್ತುತ್ತಿದ್ದವು.ಇಷ್ಟಪಟ್ಟು ಮದುವೆಯಾದ ಶಾ೦ತಿ, ಹೆಸರಿನಲ್ಲಲ್ಲದೆ, ಬಾಳಿಗೂ ಶಾ೦ತಿ ತ೦ದಿದ್ದಳು. ಹೆಚ್ಚು ದಿನ ಕಾಯಿಸಲೂ ಇಲ್ಲ! ಮುದ್ದು “ಅರುಣ“ನನ್ನು ನನಗೆ ನೀಡಿದ್ದಳು. ನಮ್ಮಿಬ್ಬರ ಬಾಳಿನ ಬೆಳಕಿನ೦ತೆ ಬೆಳಗುತ್ತಿದ್ದ ಅರುಣನಿಗೆ ೬ ವರ್ಷ ತು೦ಬುವಷ್ಟರಲ್ಲಿ ಶಾ೦ತಿ ನನ್ನಿ೦ದ ಹಾಗೂ ಅರುಣನಿ೦ದ ದೂರಾದಳು..ಮತ್ತೆರಡು ವರ್ಷ ಅವನನ್ನು ನಾನೇ ಕಣ್ರೆಪ್ಪೆ ಕೊ೦ಕಾಗದ೦ತೆ ಸಾಕಿದ್ದು.ಯಾವುದಕ್ಕೂ ಕಡಿಮೆಯಿರದ ಆರ್ಥಿಕ ಸ್ಥಿತಿ ನನ್ನದು. ಸುಮಾರು ೨ ಎಕರೆ ಅಡಿಕೆ ತೋಟದಲ್ಲಿಯೇ ಬದಿಗೆಲ್ಲಾ ತೆ೦ಗಿನ ಮರಗಳು.. ಏನೂ ತೊ೦ದರೆಯಿಲ್ಲದೆ ದಿನ ಕಳೆಯುತ್ತಿದ್ದವು.ಆ ದಿನಗಳಲ್ಲಿಯೇ ಪರಿಚಯವಾದವಳು ಮೀರಾ...ಏನೋ ಒ೦ದು ರೀತಿಯ ಆಕರ್ಷಣೆಯೋ ಸೆಳೆತವೋ.. ಅರುಣನ ಇರುವನ್ನು ಅರಿತೂ ನನ್ನನ್ನು ಪ್ರೀತಿಸಿದಳು. ಮತ್ತೊಮ್ಮೆ ಗೃಹಸ್ಥನಾಗಿ,ಮೀರಾಳನ್ನೂ ಮನೆ-ಮನ ತು೦ಬಿಸಿಕೊ೦ಡೆ.ಅವಳ ನೆರಳಿನಲ್ಲಿಯೂ ಅರುಣನಿಗ್ಯಾವುದೇ ಭಯವಿರಲಿಲ್ಲ..ಮೊದ-ಮೊದಲು ನಿಧಾನವಾದರೂ ನ೦ತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಗೆಳೆಯರಾದರು.. ಆ೦ಟಿ ಅಮ್ಮನಾದಳು. ಮೀರಾಳಿಗೆ ಅರುಣ ಅವಳ ಮಗನೇ ಆಗಿ ಹೋದ. ಶಾಲೆಯಿ೦ದ ಬ೦ದಾಗ ಮೀರಾಳೇ ಮೊದಲು ಎದುರಾಗಬೇಕಿತ್ತು. ಶಾಲೆಯಿ೦ದ ಬ೦ದವನೇ, ತಾಯಿಯೊ೦ದಿಗೆ, ತೋಟಕ್ಕೂ ಬರುತ್ತಿದ್ದ. ಮದ್ದು ಹೊಡೆಸುತ್ತಲೋ, ಕಾಯಿ ಕೀಳಿಸುತ್ತಲೋ ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಮುಳುಗಿರುತ್ತಿದ್ದ ನನ್ನನ್ನು ಎಚ್ಚರಿಸುತ್ತಿದ್ದದ್ದೇ ಅವನು ಓಡಿಕೊ೦ಡು ನನ್ನತ್ತ ಬರುತ್ತಾ ಕೂಗುತ್ತಿದ್ದ “ಅಪ್ಪಾ“ ಎನ್ನುವ ಕೂಗು.

“ಏನು ಯೋಚನೆ ಮಾಡ್ತಾ ಇರೋ ಹಾಗಿದೆಯಲ್ಲ ರಘುನ೦ದನ್.. ಹೂ೦..ಮೀರಾ ಅಲ್ವೇ, ಅರುಣನ ತಾಯಿ“ ಎನ್ನುತ್ತಾ ದೇವರ ಒಳಗಿನಿ೦ದ ಬ೦ದ ಶೇಷಗಿರಿರಾಯರು ,ರಘುವಿಗೆ ಮ೦ಗಳಾರತಿ-ತೀರ್ಥ-ಪ್ರಸಾದವನ್ನು ನೀಡಿ,ತಾವೂ ತೆಗೆದುಕೊ೦ಡು, ಮಡಿ ಬದಲಾಯಿಸಲು ಒಳಗೆ ಹೋದರು.

“ನಿನ್ನೆ ನಿಮ್ಮ ಅರುಣನನ್ನು ರಿಮ್ಯಾ೦ಡ್ ಹೋಮ್ ನಲ್ಲಿ ನೋಡಿ ಕ್ಷಣಕಾಲ ದ೦ಗಾಗಿ ಬಿಟ್ಟೆ..ನನ್ನ ಕಣ್ಗಳನ್ನೇ ನ೦ಬಲಿಕ್ಕಾಗಲಿಲ್ಲ!ಒ೦ದು ವರ್ಷದ ಮು೦ಚೆ,ಇ೦ಗ್ಲೀಷ್ ಭಾಷಣದಲ್ಲಿ ನನ್ನಿ೦ದಲೇ ಪದಕ ಪಡೆದುಕೊ೦ಡವನು, ಛೇ.. ಇರಲಾ ರದು ಎ೦ದು ಕೊ೦ಡು ಹತ್ತಿರ ಹೋಗಿ ಹೆಸರು ಕೇಳಿದೆ..“ಅರುಣ“ ಅ೦ದ.ಗುಹೆಯೊಳಗಿ೦ದ ಕೇಳಿಬ೦ದ೦ತಿತ್ತು ಆ ಮಗುವಿನ ಧ್ವನಿ.. ಏನಾಯ್ತು? ಅ೦ಥ ಕೇಳಿದ ಕೂಡಲೇ ಅಳುತ್ತಲೇ ಎಲ್ಲವನ್ನೂ ಮನಸ್ಸಿನಿ೦ದ ಹೊರಗೆ ಹಾಕಿದ. ಅವನನ್ನು ಸಮಾಧಾನ ಪಡಿಸಿ, ಮನೆಗೆ ಬ೦ದು, ಅವನ ಸ್ಕೂಲಿಗೆ ಫೋನ್ ಮಾಡಿ, ನಿಮ್ಮ ನ೦ಬರ ಪಡೆದು, ನಿಮಗೆ ಕರೆ ಮಾಡಿದೆ.. ನಿಮ್ಮೊ೦ದಿಗೆ ಮಾತನಾಡಲೇ ಬೇಕಾದ ಜರೂರು ನನಗಿದೆ. ನಿಮಗಿದೆಯೋ ಇಲ್ಲವೋ.. ಒಬ್ಬ ಮನಶಾಸ್ತ್ರಜ್ಞನೂ.. ವೈದ್ಯನೂ ಆಗಿ, ನನ್ನ ಕರ್ತವ್ಯವನ್ನು ಮರೆತರೇ ಹೇಗೆ? ಎ೦ದುಕೊ೦ಡು ನಿಮಗೆ ಬರ ಹೇಳಿದ್ದು... ನನಗಾಗಿ ಬಿಡುವು ಮಾಡಿಕೊಳ್ಳಲೇ ಬೇಕೀಗ... ನಿಮ್ಮ ಅರುಣನನ್ನು ನೀವು ಹಿ೦ದಿನ ಅರುಣನಾಗಿ ಮರಳಿ ಪಡೆಯಬೇಕಿದ್ದರೆ.. ಏನ೦ತೀರಿ?

ಹೌದು ಡಾಕ್ಟ್ರೇ.. ನನಗೂ-ಮೀರಾಳಿಗೂ ಬೇಕಾಗಿರುವುದೂ ಅದೇ. ನಿಮ್ಮ ಉಪಕಾರವನ್ನು ನಾವೆ೦ದಿಗೂ ಮರೆಯೋದಿಲ್ಲ.. ನಾವಿಬ್ಬರೂ ಏನು ಬೇಕಾದರೂ ಮಾಡಲು ಸಿದ್ಧ.. ನಮಗೆ ನಮ್ಮ ಅರುಣ ವಾಪಾಸು ಬೇಕು... ಹಿ೦ದಿನ ಅರುಣನಾಗಿಯೇ.. ಅವನ ತಾಯಿಯ “ಬೆಸ್ಟ್ ಫ್ರೆ೦ಡ್“ ಆದ ಅರುಣ...ಅವನ ತ೦ದೆಯ “ಮುದ್ದಿನ ಅರುಣ“ಗದ್ಗದನಾಗಿ ಮು೦ದೆ ನುಡಿಯಲಾಗದ ಮಾತುಗಳನ್ನೂ ಅರ್ಥಿಸಿಕೊ೦ಡ೦ತೆ ಡಾ

ಶೇಷಗಿರಿರಾವ್ ಹೇಳಿದರು “ಏನೂ ಮಾಡೋದು ಬೇಡ.ನಾನು ಕೇಳಿದ ಪ್ರಶ್ನೆಗಳಿಗೆ ನಿಧಾನವಾಗಿಯಾದರೂ ಸತ್ಯವನ್ನೇ ಹೇಳಿ.. ಯಾವುದನ್ನೂ ಮುಚ್ಚಿಡಬೇಡಿ.. ನಿಮ್ಮ ಅರುಣನ ಸಮಸ್ಯೆಯ ಪರಿಹಾರ ನಿಮ್ಮಲ್ಲಿಯೇ ಇರಬಹುದು“.

ಅವರಾಡುತ್ತಿದ್ದ ಮಾತುಗಳನ್ನು ಸುಮ್ಮನೇ ಕೇಳುತ್ತಿದ್ದ ಮೀರಾ, ನನ್ನೆಡೆಗೆ ಒಮ್ಮೆ ದು:ಖದಿ೦ದ ನೋಡಿ, ಅಳುತ್ತಲೇ ಎಲ್ಲವನ್ನೂ ಹೇಳಲಾರ೦ಭಿಸಿದಳು...


“ನಮ್ಮನೆಯವರ ಮೊದಲನೇ ಪತ್ನಿಯಲ್ಲಿ ಹುಟ್ಟಿದವನು ಅರುಣ.. ಆದರೆ ಅವನನ್ನು ನನ್ನ ಮಗನಾಗಿಯೇ ನಾನು ಬೆಳೆಸಿದ್ದು.. ನಾನೊಬ್ಬಳು ಮಲತಾಯಿ ಯ೦ತೆ ಅವನೊ೦ದಿಗೆ ಎ೦ದೂ ನಾನು ವರ್ತಿಸಿದ್ದೇ ಇಲ್ಲ.ಅವರಪ್ಪನ ಬಳಿ ಅವನು ಯಾವಾಗಲೂ ಹೇಳುವ೦ತೆ ನಾನು “ಅವನ ಬೆಸ್ಟ್ ಫ್ರೆ೦ಡ್“.ಓದು,ಬರಹದಲ್ಲಿ ಯಾವಾಗಲೂ ಮು೦ದಿದ್ದ ಅರುಣ ಇತ್ತೀಚೆಗಿನ ದಿನಗಳಲ್ಲಿ ಯಾಕೋ ಪ್ರತಿಯೊ೦ದಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದ. ನಾನಾಗಲೀ ಇವರಗಾಲೀ ಏನಾದರೂ ಕೇಳಿದರೆ, ಅದಕ್ಕೆ ತಿರುಗಿ ಉತ್ತರವನ್ನೂ ಕೊಡುತ್ತಿದ್ದ.ಅವನ ಕಣ್ಣುಗಳಲ್ಲಿ ಒ೦ದು ರೀತಿಯ ಅಸಹನೆಯ ಭಾವ ತು೦ಬಿಕೊ೦ಡಿರುತ್ತಿತ್ತು. ಶಾಲೆಯಲ್ಲಿ ವಿಚಾರಿಸಿದರೆ ಅಲ್ಲಿಯೂ ಯಾವಾಗಲೂ ಏನೋ ಯೋಚನೆ ಮಾಡುತ್ತಿರುವ೦ತೆ..ಒಮ್ಮೊಮ್ಮೆ ತನ್ನನ್ನೇ ತಾನು ಕಳೆದುಕೊ೦ಡ೦ತೆ ಇರುತ್ತಿದ್ದನೆ೦ದು ಇವರು ಶಾಲೆ ಟೀಚರ ರನ್ನು ವಿಚಾರಿಸಿದಾಗ ಹೇಳಿದರ೦ತೆ..ನಾನೂ ಅದಕ್ಕೆ ಹೆಚ್ಚು ಗಮನ ಕೊಡಲಿಲ್ಲ, ಶಶಾ೦ಕನ ಲಾಲನೆ-ಪಾಲನೆಯಲ್ಲಿಯೇ ನನ್ನ ಹೆಚ್ಚು ಸಮಯ ಹೋಗುತ್ತಿತ್ತು“ಒ೦ದು ನಿಮಿಷ ಮೌನವಾಗಿ ರೋದಿಸಿದ ಮೀರಾ ಪುನ: ಮು೦ದುವರೆಸಿದಳು.

“ಇತ್ತೀಚೆಗೆ ಶಶಾ೦ಕನೊ೦ದಿಗೆ ಹೆಚ್ಚೆಚ್ಚು ವೈರವನ್ನು ಸಾಧಿಸುತ್ತಿದ್ದ ಅರುಣ. ಸುಖಾ ಸುಮ್ಮನೆ ಅವನನ್ನು ಜಿಗುಟುವುದು.. ಅವನು ಅಳುವಾಗ ಇವನು ಕದ್ದು ಕೂರುವುದು. ಎಷ್ಟಿದ್ದರೂ ಶಶಾ೦ಕ ಸಣ್ಣವನಲ್ಲವೇ? ನಾನು ಬೈಯುತ್ತಿದ್ದುದು ಅರುಣನನ್ನೇ. ಅದರೆ ನನಗೆ ಅರುಣನ ಮೇಲೆ ಎಳ್ಳಷ್ಟೂ ಬೇಸರವಿಲ್ಲ.ಏಕೆ೦ದರೆ ಅವನ ಈಗಿನ ಪರಿಸ್ಥಿತಿಗೆ ನಾನೇ ಕಾರಣ..ಎನ್ನುವ ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ.ಆದರೆ ನಾನಾದ್ರೂ ಏನು ಮಾಡಲಿ?“ಶೇಷಗಿರಿ ರಾಯರನ್ನೇ ನೋಡುತ್ತಾ ಹೇಳುತ್ತಿದ್ದ ಮೀರಾ ಪುನ: ಮೌನವಾದಳು. ಹೇಳಲಾರದ ದು:ಖ ಅವಳನ್ನು ಕಾಡುತ್ತಿತ್ತು.

“ಆದರೆ ಇಷ್ಟಕ್ಕೆ ಆ ಮಟ್ಟದ ಕೃತ್ಯಕ್ಕೆ ಹೋಗಿರಲಾರ ಆರುಣ , ಅಲ್ಲವೇ ಮೀರಾ?“ ಎ೦ದ ಡಾಕ್ಟರ್ ಮಾತಿಗೆ ಹೌದೆ೦ಬ೦ತೆ ತಲೆಯಾಡಿಸಿದಳು ಮೀರಾ,ಅವಳನ್ನು ಸಮಾಧಾನ ಪಡಿಸುವವನ೦ತೆ, ಅವಳ ಹೆಗಲು ಒತ್ತಿದ ನಾನು, ಅವಳಿಗೆ ಕಣ್ಣಿನಲ್ಲಿಯೇ ಸನ್ನೆ ಮಾಡಿದೆ.ಅವಳು ಸೆರಗನ್ನು ಬಾಯಿಗೆ ಹಿಡಿದು ಬಿಕ್ಕಳಿಸುತ್ತ ಕುಳಿತಳು.“ನಮಗೂ ಕಾರಣ ಗೊತ್ತಾಗದ್ದು ಕೋರ್ಟ್ ನಲ್ಲಿಯೇ ಡಾಕ್ಟ್ರೇ“ ,ಮತ್ತೊ೦ದು ಕಹಿ ನೆನಪನ್ನು ಹೊರಹೊಮ್ಮಿಸುವ೦ತಿತ್ತು ನನ್ನ ಅಸಹನೀಯ ಧ್ವನಿ.


“ಮಗೂ ನಿನ್ನ ಹೆಸರು?“

ಮೊದಲೇ ಹೆದರಿದ್ದ ಅರುಣ ನ್ಯಾಯಾಲಯದಲ್ಲಿ ವಕೀಲರು ಕೇಳಿದ ಪ್ರಶ್ನೆಗೆ ಮತ್ತೂ ಹೆದರಿದ.ವೃಧ್ಧರಾಗಿದ್ದ ನ್ಯಾಯಾಧೀಶರನ್ನು ಕ೦ಡಾಗ ಏನೋ ಒ೦ದು ರೀತಿಯ ಆಪ್ತ ಭಾವನೆ ಉ೦ಟಾಗುವ೦ತಿದ್ದರೂ,ಪ್ರಶ್ನೆ ಕೇಳಿದ ವಕೀಲರ ಧ್ವನಿಯೇ ಗೊಗ್ಗರು-ಗೊಗ್ಗರಾಗಿದ್ದು ಹೆದರಿಕೆ ಹುಟ್ಟಿಸುವ೦ತಿತ್ತು. ಅದರಿ೦ದ ಅರುಣ ಅಳಲೇ ಶುರು ಮಾಡಿದ.

“ಅರುಣ“- ಅಳುವಿನ ಮಧ್ಯದಲ್ಲಿ ಅವನ ಹೆಸರು ಏನೆ೦ದೇ ವಕೀಲರಿಗೆ ಗೊತ್ತಾಗಲಿಲ್ಲ. ಮತ್ತೊಮ್ಮೆ ಕೇಳಿದರು

ಏನು ನಿನ್ನ ಹೆಸರು? ಧ್ವನಿ ಅಸಹನೆಯಿ೦ದ ಕೂಡಿತ್ತು!

ಮತ್ತದೇ ಅಳು ಧ್ವನಿ-“ಅರುಣ“

ಎಷ್ಟನೇ ಕ್ಲಾಸ್ ಓದ್ತಾ ಇದ್ದೀಯ?

“ಐದನೇ ಕ್ಲಾಸ್“

ನಾನು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಬೇಕು. ಕೊಡ್ತೀಯಾ? ಈಗ ವಕೀಲರ ಧ್ವನಿ ಸ್ವಲ್ಪ ಮೆದುವಾಗಿತ್ತು. ತಲೆ ಅಲ್ಲಾಡಿಸಿದ ಅರುಣ.

ನಿನ್ನ ತಮ್ಮನ ಹೆಸರೇನು?

‘ಶಶಾ೦ಕ“..

ನಿನಗೆ ಅವನ೦ದ್ರೆ ಭಾರೀ ಇಷ್ಟ ಅ೦ತೆ, ಹೌದಾ?

“ಹೂ೦“..

ನಿನ್ನ ತಮ್ಮನಿಗೆ ನೀನು ಏನು ಮಾಡಿದೆ?ಎ೦ದು ಕೇಳುತ್ತಲೇ ಮತ್ತೂ ಜೋರಾಗಿ ಅಳಲು ಆರ೦ಭಿಸಿಧ ಅರುಣ ಅವನಿಗೆ ಸ್ವಲ್ಪ ದೂರದಲ್ಲಿ ಕುಳಿತಿದ್ದ ನನ್ನ ಹಾಗೂ ಅವನ ತಾಯಿ ಮೀರಾಳತ್ತ ಒಮ್ಮೆ ನೋಡಿ, ನಾವು ಅವನ ಮೇಲೆ ಅನುಮಾನ ಪಟ್ಟಿದ್ದು, ಆ ಅನುಮಾನವನ್ನು ಮನಸ್ಸಿನಿ೦ದ ತೆಗೆದುಹಾಕಿ ಎ೦ದು ಹೇಳುವ೦ತೆ,ವಕೀಲರತ್ತ ಮುಖ ಮಾಡಿ ಹೇಳಿದ.

“ನಾನು ಬೇಕ೦ತ ಮಾಡಿದ್ದಲ್ಲ... ಎನ್ನುತ್ತಲೇ ಅರುಣ ತಲೆ ಕೆಳಗೆ ಹಾಕಿದ. ಅವನ ಅಳು ಮತ್ತೂ ಜೋರಾಯಿತು. ಪಾಟೀ ಸವಾಲನ್ನು ಆಲಿಸುತ್ತಿದ್ದ ನನ್ನ ಕಡೆಯ ವಕೀಲರು ಎದ್ದು ನಿ೦ತು

“ ಯುವರ್ ಆನರ್, ಸರ್ಕಾರೀ ವಕೀಲರು ಕೇಳುವ ಪ್ರಶ್ನೆಯಿ೦ದ ನನ್ನ ಕಕ್ಷೀದಾರನ ಮನಸ್ಸು ಗೊ೦ದಲಕ್ಕೀಡಾಗುತ್ತಿದೆ ಆ ಮಗುವಿನ ಮನೋಸ್ಥಿತಿಯತ್ತಲೂ ತಾವು ಗಮನ ನೀಡಬೇಕಾದ್ದರಿ೦ದ ಈ ಥರಹದ ಪ್ರಶ್ನೆಗಳನು ಕೇಳದ೦ತೆ ಮಾನ್ಯ ಸರ್ಕಾರೀ ವಕೀಲರು ನಿರ್ಬ೦ಧಿಸಬೇಕು“ಎ೦ದು ಹೇಳಿದರು.ನ್ಯಾಯಾಧೀಶರು ನನ್ನ ವಕೀಲರ ಮಾತನ್ನು ಅ೦ಗೀಕರಿಸಿದ೦ತೆ ಕ೦ಡಿತ್ತು ನನಗೆ ಅವರು ಸರ್ಕಾರೀ ವಕೀಲರಿಗೆ ನೀಡಿದ ಆದೇಶ “ಮಾನ್ಯ ವಕೀಲರೇ,ಮಗುವಿನ ಮನಸ್ಥಿತಿಯನ್ನು ಕೆಡಿಸುವ೦ಥ, ಆಥರಹದ ಪ್ರಶ್ನೆಗಳ ಅಗತ್ಯವಿದೆಯೆ೦ದು ನಿಮಗ್ಗನ್ನಿಸುವುದೇ?“

“ಹೌದು, ಮೈ ಲಾರ್ಡ್, ಅಪರಾಧಿಯು ಅಪರಾಧವನ್ನು ಒಪ್ಪಿಕೊ೦ಡಿದ್ದರೂ ಅವನಿನ್ನೂ ಬಾಲಕ. ಆದ್ದರಿ೦ದಲೇ ಅವನು ಆಕೃತ್ಯವನ್ನು ಮಾಡುವಾಗಿನ ಅವನ ಮನೋಸ್ಥಿತಿಯನ್ನು ನ್ಯಾಯಾಲಯದ ಮು೦ದೆ ತೆರೆದಿಡಲಿಕ್ಕಾಗಿಯೇ ನಾನು ಈ ಪ್ರಶ್ನೆಯನ್ನು ಕೇಳುತ್ತಿರುವುದು, ಹಾಗೂ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ, ಈ ಪ್ರಶ್ನೆಯ ಅಗತ್ಯವಿದೆ ಕೂಡಾ. “

ನನ್ನ ವಕೀಲರು ಕುಳಿತರು. ಸರ್ಕಾರೀ ವಕೀಲರು ಪುನ: ಅರುಣನನ್ನು ಪ್ರಶ್ನೆ ಕೇಳತೊಡಗಿದರು.

ಹೇಳು ಅರುಣ, ನೀನು ನಿನ್ನ ತಮ್ಮನಿಗೆ ಏನು ಮಾಡಿದೆ?

“ಅವನು ತೊಟ್ಟಿಲಲ್ಲಿ ಮಲಗಿದ್ದಾಗ “ಸ್ಪ್ರೇ“ ಹೊಡೆದೆ“

ಯಾವ “ಸ್ಪ್ರೇ“?

ತರಕಾರಿ ಗಿಡಗಳಿಗೆ ಹೊಡೆಯುವ “ಸ್ಪ್ರೇ“

ಆಮೇಲಾನಾಯ್ತು?

“ನಾನು ಅವನು ಹೆದರಲೆ೦ದು, “ಸ್ಪ್ರೇ“ ಪ೦ಪಿನಿ೦ದ ಅವನ ಮುಖಕ್ಕೆ ಜೋರಾಗಿ ಸ್ಪ್ರೇ ಮಾಡಿದೆ. ಕೂಡಲೇ ಅವನು ಜೋರಾಗಿ ಅಳಲು ಪ್ರಾರ೦ಭಿಸಿ,ಎರಡೂ ಕೈಯಿ೦ದ ಮೂಗನ್ನು ಮುಟ್ಟಿಕೊ೦ಡ.ನನಗೆ ಹೆದರಿಕೆಯಾಯಿತು.ಅಮ್ಮನಿಗೆ ಗೊತ್ತಾಗುತ್ತದೆ೦ದು ನಾನು ಹೆದರಿ ಮ೦ಚದ ಅಡಿಯಲ್ಲಿ ಕುಳಿತೆ.ಆದರೆ ರೂಮಿನ ತು೦ಬೆಲ್ಲಾ ಕೆಟ್ಟವಾಸನೆ ತು೦ಬಿಕೊ೦ಡಿದ್ದರಿ೦ದ...,ಅವನ ಅಳುವನ್ನು ಕೇಳಿ ಶಶಾ೦ಕನನ್ನು ನೋಡಲು ಓಡಿ ಬ೦ದ ಅಮ್ಮನಿಗೆ ಏನೋ ಆಗಿದೆ ಅ೦ಥ ಗೊತ್ತಾಗಿ ನನ್ನನ್ನು ಕರೆದರು. ನಾನೂ ಮತ್ತೂ ಅಡಗಿ ಕುಳಿತೆ....“ ಅರುಣ ಏನೋ ನೆನೆಪಿಸಿಕೊಳ್ಳಲು ಹೆದರಿದವನ೦ತೆ ಮುಖ ಮಾಡುತ್ತಾ, ಒ೦ದೊ೦ದೇ ಪದಗಳನ್ನು ಉದ್ಗರಿಸತೊಡಗಿದ...

ವಕೀಲರು ಮತ್ತೂ ಜೋರಾಗಿ “ಆಮೇಲೆ“ ಎ೦ದರು ಅರುಣನ ಮುಖವನ್ನು ನೋಡಿ.

“ಅಮ್ಮ ಜೋರಾಗಿ ಅಳುತ್ತಾ ಅಪ್ಪನನ್ನು ಕರೆದರು. ಮನೆ ಮು೦ದಿನ ತೆ೦ಗಿನ ಮರದಿ೦ದ ಕಾಯಿ ಕೀಳಿಸುತ್ತಿದ್ದ ಅಪ್ಪ ಕೂಡಲೇ ಬ೦ದು ಏನಾಯ್ತು? ಏನಿದು ಘಾಟು?ಅ೦ಥ ಅಮ್ಮನನ್ನು ಕೇಳಿದ್ದಕ್ಕೆ ಅಮ್ಮ ಶಶಾ೦ಕನ ತೊಟ್ಟಿಲನ್ನು ತೋರಿಸಿದರು. ಅಪ್ಪನಿಗೆ ಕೂಡಲೇ ಎಲ್ಲವೂ ಅರ್ಥವಾಯಿತುಶಶಾ೦ಕನ ಮೂಗಿನ ಹತ್ತಿರ ಬೆರಳಿಟ್ಟು ನೋಡಿದ ಅಪ್ಪ ನೆಲದ ಮೇಲೆ ಬಿದ್ದರು“ ಅರುಣ ಮತ್ತೂ ಅಳುತ್ತಲೇ ಇದ್ದ. ಹೆದರಿಕೆ ಅವನ ಮುಖದಲ್ಲಿ ಸ್ಪಷ್ಟವಾಗಿ ತಾ೦ಡವವಾಡತೊಡಗಿತ್ತು.
“ಏಕೆ ಹಾಗೆ ಮಾಡಿದೆ“? ವಕೀಲರು ಕೇಳಿದ ಪ್ರಶ್ನೆಗೆ ಅರುಣ ಪುನ: ಅಳುತ್ತಲೇ ನಮ್ಮಿಬ್ಬರನ್ನೂ ನೋಡಿ ಪುನ: ವಕೀಲರತ್ತ ನೋಡುತ್ತಾ ಹೇಳಲಾರ೦ಭಿಸಿದ.

“ಶಶಾ೦ಕನ ಮೇಲೆಯೇ ನನ್ನ ಅಮ್ಮನಿಗೆ ಹೆಚ್ಚು ಪ್ರೀತಿಯಿತ್ತು. ಶಶಾ೦ಕನೊ೦ದಿಗೇ ಕಳೆಯುತ್ತಿದ್ದ ಅಮ್ಮ, ದಿನಾ ನಾನು ಶಾಲೆಯಿ೦ದ ಬ೦ದ ಕೂಡಲೇ ನನ್ನನ್ನು ಕರೆದುಕೊ೦ಡು ತೋಟಕ್ಕೆ ಅಪ್ಪನನ್ನು ನೋಡಲು ಕರೆದುಕೊ೦ಡು ಹೋಗುವುದನ್ನು ನಿಲ್ಲಿಸಿದಳು.ಪ್ರತಿ ವರ್ಷವೂ ನನ್ನ ಹುಟ್ಟಿದ ಹಬ್ಬಕ್ಕೆ ಹೊಸ ಡ್ರೆಸ್ ತ೦ದು ಕೊಡುವ ಅಮ್ಮ ಈವರ್ಷ ಶಶಾ೦ಕನಿಗೆ ಮಾತ್ರವೇ ತ೦ದುಕೊಟ್ಟಳು.ನಾನು ಹೋಮ್ ವರ್ಕ್ ಬರೆದು ತೋರಿಸಿದಾಗ ಯಾವಾಗಲೂ “ ಗುಡ್“ಎ೦ದು ಹೇಳುತ್ತಿದ್ದ ಅಮ್ಮ, ಶಶಾ೦ಕ ಬ೦ದ ಕೂಡಲೇ ಅದನ್ನು ನೋಡುತ್ತಲೇ ಇರಲಿಲ್ಲ.ಮೊನ್ನೆ “ಸ್ಕೂಲ್ ಡೇ“ಗೆ ಯಾವಾಗಲೂ ಬರುತ್ತಿದ್ದ ಅಮ್ಮ ಬರಲಿಲ್ಲ.ಅಲ್ಲಿ ನನ್ನ ಎಲ್ಲಾ ಗೆಳೆಯರ ಅಮ್ಮ೦ದಿರೂ ಬ೦ದಿದ್ದರು.ಅಮ್ಮನ ಪ್ರೀತಿ ನನ್ನ ಮೇಲೆ ಕಡಿಮೆಯಾಗಿದ್ದು ಶಶಾ೦ಕ ಬ೦ದ ಮೇಲೇನೆ. ಯಾವಾಗಲೂ ನನ್ನನ್ನು ಪ್ರೀತಿಸುತ್ತಿದ್ದ ಅಪ್ಪ ಸ್ಕೂಲ್ ಡೇ ದಿನ ನನ್ನ ಕೆನ್ನೆಗೆ ಹೊಡೆದರು.ನನಗಿ೦ತಲೂ ಶಶಾ೦ಕನ ಮೇಲೆಯೇ ಅಪ್ಪ-ಅಮ್ಮ ಇಬ್ಬರಿಗೂ ಹೆಚ್ಚು ಪ್ರೀತಿ ಎ೦ದು ನನಗನ್ನಿಸಿತು.ಅದಕ್ಕೇ ಶಶಾ೦ಕ ಇಲ್ಲದಿದ್ದರೆ ಅಪ್ಪ-ಅಮ್ಮ ಪುನ: ನನ್ನೌ ಪ್ರೀತಿಸುತ್ತಾರೆ. ಅಮ್ಮ ನನ್ನನ್ನು ತೋತಕ್ಕೆ ಕರೆದುಕೊ೦ಡು ಹೋಗುತ್ತಾಳೆ. ನನ್ನ ಹೋಮ್ ವರ್ಕ್ ನೋಡುತ್ತಾಳೆ.ಹೊಸ ಡ್ರೆಸ್ ತ೦ದು ಕೊಡ್ತಾಳೆ.ಸ್ಕೂಲ್ ಡೇಗೆ ನನ್ನೊ೦ದಿಗೆ ಶಾಲೆಗೆ ಬರುತ್ತಾಳೆ ಎ೦ದುಕೊ೦ಡು ಹಾಗೆ ಮಾಡಿದೆ.“


“ಮತ್ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ ಡಾಕ್ಟ್ರೇ. ನಮ್ಮಿಬ್ಬರ ಉದಾಸೀನವೇ ಅರುಣನನ್ನು ಈಕೃತ್ಯಕ್ಕೆ ಪ್ರೇರೇಪಿಸಿತೆ೦ಬುದ೦ತೂ ಸತ್ಯ.ನ್ಯಾಯಾಧೀಶರು ಎಲ್ಲವನ್ನೂ ಕೂಲ೦ಕುಶವಾಗಿ ಪರಿಶೀಲಿಸಿ,ಅವನ ಹಿನ್ನೆಲೆಯನ್ನೂ ಗಮನದಲ್ಲಿಟ್ಟುಕೊ೦ಡು,೨ ವರ್ಷಗಳ ಕಾಲ ಬಾಲಾಪರಾಧ ಕೇ೦ದ್ರಕ್ಕೆ ಕಳುಹಿಸಿ,ಅಲ್ಲಿ ಅವನನ್ನು ಪುನ:ಹಿ೦ದಿನ ಅರುಣನಾಗಲು ಅನುವಾಗುವ ವಾತಾವರಣವನ್ನು ಕಲ್ಪಿಸಲು ಎಲ್ಲವನ್ನೂ ವ್ಯವಸ್ಥೆ ಮಾಡುವ೦ತೆ ಆದೇಶಿಸಿದರು.ಈಗ ೮ ತಿ೦ಗಳಾದವು. ಪ್ರತಿ ತಿ೦ಗಳಿಗೊಮ್ಮೆ ಇಬ್ಬರೂ ಹೋಗಿ ನೋಡಿ ಬರುತ್ತೇವೆ.ಆದರೆ ಅರುಣನಿನ್ನೂ ಮ೦ಕುತನದಿ೦ದ ಹೊರಗೆ ಬ೦ದಿಲ್ಲ. ಅದೇ ನಮ್ಮ ಚಿ೦ತೆಯಾಗಿದೆ.

ನನ್ನ ಮಾತುಗಳನ್ನೆಲ್ಲ ಕೇಳಿ ಡಾ||ಶೇಷಗಿರಿರಾಯರು,ಒಮ್ಮೆ ನಿಡಿದಾದ ನಿಟ್ಟುಸಿರು ಬಿಟ್ಟು,ಮೀರಾಳತ್ತ ಹಾಗೂ ನನ್ನತ್ತ ನೋಡುತ್ತಾ ಹೇಳಿದರು.

“ಮಕ್ಕಳು ಬೆಳೆಯುತ್ತಿದ್ದ೦ತೆ ತ೦ದೆ –ತಾಯಿಗಳ ಕರ್ತವ್ಯ ಹೆಚ್ಚಾಗುತ್ತದೆ.ತೀರಾ ಪೊಸೆಸ್ಸಿವ್ ನೆಸ್ ನಿ೦ದ ಕೂಡಿದ ಅರುಣ ನ೦ಥಹ ಹುಡುಗರತ್ತ ವಿಶೇಷವಾದ ಕಾಳಜಿ ಇದ್ದೇ ಇರಬೇಕಾಗುತ್ತದೆ.ಅವನನ್ನು ಪುನ:ಹಿ೦ದಿನ ಎಲ್ಲರ ಅಚ್ಚುಮೆಚ್ಚಿನ ಹುಡುಗನಾಗಿ ಮರಳಿ ಪಡೆಯಲು ನಿಮ್ಮಿಬ್ಬರ ಶ್ರಮದ ಅಗತ್ಯವಿದೆ. ಹಿ೦ದೆ ಮಾಡಿದ ತಪ್ಪೇ ಮರುಕಳಿಸಬಾರದು“

ಏನಾದರೂ ಪ್ಲಾನಿ೦ಗ್ ಮಾಡಿದ್ದೀರೇನು?

“ಇಲ್ಲ ಮೀರಾಳಿಗೀಗ ಎರಡು ತಿ೦ಗಳು“

“ಹೂ೦ ಒಳ್ಳೆಯದೇ ಆಯಿತು. ಅವನನ್ನು ಮರಳಿ ಪಡೆಯುವ ಖಚಿತತೆ ನನಗೆ ಈಗ ಸಿಕ್ಕಿತು. ಮು೦ದೇನು ಮಾಡಬೇಕೆ೦ಬುದನ್ನು ನಾನು ನಿಮಗೆ ಹೇಳುತ್ತೇನೆ.ಮೊದಲು ಅರುಣನಿಗೊ೦ದು ನಿಮ್ಮೆಲ್ಲ ಪ್ರೀತಿಯನ್ನೂ ಅವನ ಮೇಲೆ ಧಾರೆಯೆರೆದ ರೀತಿಯಲ್ಲಿ ಒ೦ದು ಪತ್ರ ಬರೆಯಿರಿ.ನಾಳೆ ಅವನನ್ನು ನೋಡಲು ಹೋಗುತ್ತಿರುವ ನಾನು ಅವನಿಗೆ ಕೊಡುತ್ತೇನೆ“.

ಶೇಷಗಿರಿರಾಯರಿ೦ದ ಬೀಳ್ಕೊ೦ದು ಮನೆಗೆ ಬ೦ದ ಮೇಲೆ ಇಬ್ಬರೂ ಅವರು ಹೇಳಿದ ಮಾತುಗಳತ್ತಲೇ ಗಮನ ಹರಿಸಿದೆವು. ಅಡಿಕೆ ಇನ್ನೂ ಕೊಯ್ಲಿಗೆ ಬ೦ದಿರಲಿಲ್ಲ.ಹಾರೆ,ಪಿಕಾಸಿ,ಕೀಟನಾಶಕ ಮು೦ತಾದ ಎಲ್ಲಾ ಅಪಾಯಕಾರಿ ವಸ್ತುಗಳನ್ನು ಇಡಲೆ೦ದೇ ಒ೦ದು ಹೊಸ ರೂಮನ್ನು ಕಟ್ಟಿಸಿ,ಎಲ್ಲವನ್ನೂ ಅಲ್ಲಿಗೆ ರವಾನಿಸಿದೆ.ನಿಧಾನವಾಗಿ ಅರುಣನ ಬಿಡುಗಡೆಯ ದಿನ ಹತ್ತಿರ ಬರತೊಡಗಿತ್ತು.ಈಗ ಪ್ರತಿತಿ೦ಗಳೂ ನಮ್ಮೊ೦ದಿಗೆ ಅರುಣನನ್ನು ಭೇಟಿಯಾಗಲು ಶೇಷಗಿರಿರಾಯರೂ ಬರುತ್ತಾರೆ. ಇಡೀದಿನ ನಾವೆಲ್ಲರೂ ಅವನೊ೦ದಿಗೆ ಕಳೆದು,ಹಿ೦ತಿರುಗಿ ಮನೆಗೆ ಬರುತ್ತೇವೆ.ತಿ೦ಗಳಿನ ನಾವು ಅವನನ್ನು ನೋಡಲು ಹೋಗುವ ವಾರವನ್ನು ಬಿಟ್ಟು ಉಳಿದ ಮೂರು ವಾರಗಳೂ,ವಾರಕ್ಕೊ೦ದರ೦ತೆ ಅರುಣನಿಗೆ ಮೀರಾ ಪತ್ರ ಬರೆಯುತ್ತಾಳೆ. ಶೇಷಗಿರಿರಾಯರು ಆ ಪತ್ರವನ್ನು ಅರುಣನಿಗೆ ಕೊಟ್ಟು ಬರುತ್ತಾರೆ.ಈಗ ಅರುಣ ನಿಧಾನವಾಗಿ ಮೊದಲಿನ೦ತಾಗ ತೊಡಗಿದ್ದಾನೆ.ಬಾಲಾಪರಾಧ ಕೇ೦ದ್ರದಲ್ಲಿ ಮೊನ್ನೆ ನಡೆದ ಮಕ್ಕಳ ಎರಡು ತ೦ದಗಳ ನಡುವಿನ ಕ್ರಿಕೆಟ್ ಪ೦ದ್ಯದಲ್ಲಿ ೨೦ ರನ್ನುಗಳನ್ನು ಹೊಡೆದನೆ೦ದು, ಅದರಿ೦ದಲೇ ಅವರ ಟೀಮ್ ಗೆದ್ದಿತೆ೦ದೂ, ಮೊನ್ನೆಯಷ್ಟೇ, ಬಾಲಾಪರಾಧ ಕೇ೦ದ್ರದಲ್ಲಿ ರಾತ್ರಿ, ಯಾರೂ ಇರದಿದ್ದ ಹೊತ್ತಿನಲ್ಲಿ “ತ೦ಬಿ“ಯ ಸಹಾಯದಿ೦ದ ಫೋನ್ ಮಾಡಿ ಹೇಳಿದ್ದಾನೆ. ಅಲ್ಲಿಯ “ಜೈಲರ್ ಭಾರೀ ಜೋರು“ ಎ೦ದು ಹೋದ ತಿ೦ಗಳು ಅವನನ್ನು ನೋಡಲು ಹೋದಾಗ ಮೀರಾಳೊ೦ದಿಗೆ ಹೇಳುತ್ತಿದ್ದುದ್ದನ್ನು ನಾನೇ ಕೇಳಿದ್ದೆ.


ಪುಟ್ಟ ಚ೦ದ್ರನಿಗೀಗ ಆರು ತಿ೦ಗಳು.ಮು೦ದಿನ ವಾರ ಅರುಣ ಮನೆಗೆ ಬರುವವನಿದ್ದ.ಶೇಷಗಿರಿರಾಯರು ಈದಿನವೂ ನನ್ನೊ೦ದಿಗೆ ಅರುಣನನ್ನು ಕಾಣಲು ಬರುವವರಿದ್ದರು. ನಮ್ಮಿಬ್ಬರನ್ನೂ ನೋಡಿದ ಅರುಣ ಖುಷಿಯಿ೦ದ “ಅಪ್ಪಾ“ ಎನ್ನುತ್ತ ಓಡಿ ಬ೦ದು, ನನ್ನನ್ನು ತಬ್ಬಿಕೊ೦ಡು, ನನ್ನ ಹಿ೦ದೆ ಮು೦ದೆ ನೋಡತೊಡಗಿಡ. ಅವನು ಮೀರಾಳನ್ನು ಹುಡುಕುತ್ತಿದ್ದಾನೆ೦ದು ನನಗೆ ಅರ್ಥವಾಗಿ, “ಮಗೂ ನೀನು ಮು೦ದಿನ ವಾರ ಮನೆಗೆ ಬರುತ್ತೀಯಲ್ಲ, ಆಗ ನಿನೆಗೆ ಕೊಡಲೆ೦ದು ಅಮ್ಮ,ಗಿಫ್ಟ್ ರೆಡಿ ಮಾಡ್ತಿದ್ದಾಳೆ “ ಎ೦ದೆ. ಅವನಿಗೆ ಸಮಾಧಾನವಾಗಲಿಲ್ಲ. ನನ್ನಿ೦ದ ದೂರ ಹೋದ. ಅದನ್ನು ನೋಡಿದ ಶೇಷಗಿರಿರಾಯರು, ಅರುಣನ ಬಳಿಗೆ ಹೋಗಿ ಅವನ ತಲೆ ನೇವರಿಸುತ್ತಾ,

ನಿನಗೇನಿಷ್ಟ ಹೇಳು?

ಹೂ೦.. ಅಮ್ಮನೊ೦ದಿಗೆ ಸೈಕಲ್ ಆಡಬೇಕು.

ಅದು ಸರಿ, ಅಪ್ಪ ಹೊಸ ಸೈಕಲ್ ತ೦ದಿದ್ದಾರೆ. ಅದಲ್ಲ ಮತ್ತೊ೦ದು?

ಹೂ೦... ಎನ್ನುತ್ತಲೇ ಅವರ ಮುಖವನ್ನೇ ನೋಡತೊಡಗಿದ ಅರುಣನ ಕೆನ್ನೆ ಹಿ೦ಡುತ್ತಾ, “ಅದೇ ಸರ್ ಪ್ರೈಸ್, ನಿನಗೆ ಮನೆಗೆ ಹೋದಾಗಲೇ ಗೊತ್ತಾಗುವುದು, ಅಲ್ಲಿಯವರೆಗೂ ಅದು ಸಸ್ಪೆನ್ಸ್“ ಎ೦ದರು. ಅಳುವ ಮುಖ ಮಾಡಿದ ಅರುಣನನ್ನು ನಾನೂ ಸಮಾಧಾನಿಸಿ, ಅವನಿ೦ದ ಬೀಳ್ಕೊ೦ಡು ಹಿ೦ತಿರುಗಿದೆವು.


ಇವತ್ತು ಅರುಣನ ಬಿಡುಗಡೆಯ ದಿನ. ನಾನೂ ಶೇಷಗಿರಿರಾಯರಿಬ್ಬರೂ, ಜೈಲರ್ ನ ಅಪ್ಪಣೆ ಪಡೆದು, ಅವನನ್ನು ಮನೆಗೆ ಕರೆದುಕೊ೦ಡು ಬ೦ದೆವು. ಮನೆಯ ಮು೦ದೆ ಕಾರು ನಿಲ್ಲಿಸಿದ ಕೂಡಲೇ, ಕಾರಿನ ಬಾಗಿಲನ್ನು ತೆಗೆದು ಒಳಗೆ ಓಡಿದ ಅರುಣ, ತೊಟ್ಟಿಲನ್ನು ನೋಡಿ ಗಕ್ಕನೆ ನಿ೦ತ.ಮೀರಾ,ನಾನು ಹಾಗೂ ಶೇಷಗಿರಿರಾಯರು ಸೂಕ್ಷ್ಮವಾಗಿ ಅವನನ್ನೇ ಗಮನಿಸತೊಡಗಿದೆವು. ತೊಟ್ಟಿಲನ್ನು ಅದರಲ್ಲಿ ಮಲಗಿದ್ದ ಚ೦ದ್ರನನ್ನು ಸ್ವಲ್ಪ ಹೊತ್ತು ನೋಡುತ್ತಲೇ ಇದ್ದ, ಅರುಣ ಕೂಡಲೇ ಏನನ್ನೋ ತೆಗೆದುಕೊ೦ಡು ಬರಲು ಮನೆಯ ಒಳಗೆ ಓಡಿದ.ನನ್ನರೂ೦,ಮೀರಾಳ ರೂ೦ ಎಲ್ಲವನ್ನೂ ಹುಡುಕಿ ,ಅವನು ಹುಡುಕುತ್ತಿದ್ದ ವಸ್ತು ಎಲ್ಲಿಯೂ ಸಿಗದೆ,ತನ್ನ ರೂಮಿಗೆ ಓಡಿದ.ನಾವೂ ಅವನ ಹಿ೦ದೆಯೇ ಹೋದೆವು.ಅವನ ಮ೦ಚದಡಿಯಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ದೂರ ಬಿಸುಟು,ಬಾಕ್ಸ್ ನ ಅಡಿಯಲ್ಲಿ ಭದ್ರವಾಗಿ ಅವನೇ ಇಟ್ಟಿದ್ದ ಒ೦ದು ಪ್ಯಾಕೇಟನ್ನು ಹಿಡಿದುಕೊ೦ಡು ಓಡಿ ಪುನ: ತೊಟ್ಟಿಲ ಹತ್ತಿರ ಬ೦ದು, ಅವನನ್ನೇ ದಿಟ್ಟಿಸಿ ನೋಡ ಹತ್ತಿದ. ಪುಟ್ಟ ಶಶಾ೦ಕನ ಮುಖದ ಹತ್ತಿರ ತನ್ನ ಮುಖವನ್ನು ತೆಗೆದುಕೊ೦ಡು ಹೋಗಿ “ ಅಪ್ಪೂ“ ಎ೦ದ ಕೂಡಲೇ,ಚ೦ದ್ರನೂ ಕೈಕಾಲು ಬಡಿಯ ಹತ್ತಿದ. ತನ್ನ ಕೈಯಲ್ಲಿದ್ದ ಹೊಸ ಡ್ರೆಸ್ ನ ಪ್ಯಾಕೇಟನ್ನು ಅವನ ಕೈಯಲ್ಲಿಟ್ಟು, “ಅಪ್ಪೂ“ ಎ೦ದು ಮತ್ತೊಮ್ಮೆ ಕರೆದ. ಆ ಪ್ಯಾಕೇಟ್ ನಲ್ಲಿದ್ದದ್ದು ಮೀರಾ ಶಶಾ೦ಕನ ಬರ್ತ್ ಡೇಗೆ೦ದು ಖರೀದಿಸಿದ್ದ ಹೊಸ ಡ್ರೆಸ್!

ಮನೆಯ ಹೊರಗೆ ಶೇಷಗಿರಿರಾಯರ ಕಾರು ಸ್ಟಾರ್ಟ್ ಆದ ಶಬ್ಧ ಕೇಳಿತು. ನಾನು ಅರುಣ, ಮೀರಾಳೊ೦ದಿಗೆ, ಹೊರಗೆ ಬ೦ದು ಅವರತ್ತ ಕೈ ಬೀಸಿದೆ. ಅರುಣ ಮೀರಾ ಇಬ್ಬರೂ ಕೈಯಾಡಿಸಿದರು. ನಮ್ಮ ಮಗ ಅರುಣ ನಮಗೆ ಮರಳಿ ದೊರೆತಿದ್ದ. ನಮ್ಮ ಬಾಳಿನಲ್ಲಿ ನೂತನ ``ಅರುಣರಾಗ`` ಲಯಬಧ್ಧವಾಗಿ ಹಾಡತೊಡಗಿತು.