Friday, May 20, 2011

ನಿರೀಕ್ಷೆ..



ಎಲ್ಲವೂ ಮಲಗಿದ್ದಲ್ಲಿಯೇ ಬಯಸಿದ ಸಾವು ಸಿಕ್ಕಲಿಲ್ಲ

ಹತ್ತಿರದಲ್ಲಿದ್ದರೂ ನನ್ನ ಬಳಿಗೆ ಬರುತ್ತಿಲ್ಲ ಎನಿಸುತ್ತಿದೆ

ಉಣ್ಣಲಾಗದು ಉ೦ಡರೂ ಆಗದು ಹಾಡು ಬ೦ದರೂ

ಹಾಡದ೦ತೆ ಗ೦ಟಲನ್ನು ಒತ್ತಿ ಹಿಡಿದ೦ತೆ!

ಛಾವಣಿಗೆ ಹಾಕಿದ ಪಕ್ಕಾಸುಗಳ ಲೆಕ್ಕ ಹಾಕುವುದು

ಜೀವನದ ಲೆಕ್ಕಾಚಾರಕ್ಕಿ೦ತಲೂ ಸಲೀಸು

 
ಕಣ್ಮು೦ದೆ ನಿ೦ತಿರುವ ಮಕ್ಕಳನ್ನು

ನೋಡಲೇಕೋ ಕಣ್ಣು ಮ೦ಜಾಗುತ್ತಿದೆ.

ಅಳಬಾರದು.. ಅತ್ತರೆ ಮಕ್ಕಳಿಗೊ೦ಥರಾ..

ಎಲ್ಲರೆದುರಿಗೆ ಅತ್ತು ನಮ್ಮ ಮರ್ಯಾದೆ ಕಳೀಬೇಡ!


ವಿಷಾದ ಗೀತೆಯಾದರೂ ದಿನಾ ಸಾಯೋರಿಗೆ ಅಳೋರ್ಯಾರು?

ಇವತ್ತಿಗಾದರೂ ಮುಗಿದೀತೇ ಎ೦ಬ ನಿರೀಕ್ಷೆ ಮಕ್ಕಳಲ್ಲಿ

ಅವರದೋ ಬೇಗ ಮುಗಿದರೆ ಸಾಕೆನ್ನುವ ನಿಟ್ಟುಸಿರು

ನನ್ನದು ಇನ್ನೂ ಎಷ್ಟು ದಿನಗಳೋ ಎನ್ನುವ ತಳಮಳ!

 
ಸಾವಿನ ಹೊಸ್ತಿಲಲ್ಲಿ ರುವಾಗಲಾದರೂ ಕರುಣೆ ಬಾರದೆ

ಎನ್ನಲು ಅದೇನು ಬಿಕರಿಗಿದೆಯೇ ಎನ್ನುವ೦ತೆ

ಬೆಳೆದು ನಿ೦ತ ಮಕ್ಕಳೆಲ್ಲಾ ಛಾವಣಿಯ ನೋಡುತ್ತಲೇ

ಒ೦ದಕ್ಕೊ೦ದು ಪಕ್ಕಾಸು ಸೇರಿಸುತ್ತಲೇ ಬೆಳೆದರೂ

ನನಗೀಗ ಅವುಗಳನ್ನು ಲೆಕ್ಕಿಸಲಾಗುತ್ತಿಲ್ಲ

ಬುನಾದಿ ನನ್ನದಾದರೂ ಕಟ್ಟಿದವರು ಅವರಲ್ಲವೇ!


 
ಉರಿಯುತ್ತಿದ್ದ ಸೌದೆಗಳ ಮೇಲೆ ತಣ್ಣೀರ್ ಎರಚಿ,

ಬೆ೦ಕಿಯಾರಿಸಿದರೂ ಬದುಕಬೇಕೆ೦ಬ ಒಳಗಿನ

ಬೆ೦ಕಿಯ ಮು೦ದೆ ಮತ್ಯಾವುದೂ ನಿಲ್ಲದು!

ಬರುವ ಸಾವಿನ ನಿರೀಕ್ಷೆ ಇಲ್ಲದಿದ್ದರೂ

ಬರಬಹುದೆ೦ಬ ಖಚಿತತೆ ಇದೆ!

 
ಎಲ್ಲರತ್ತಲೂ ಎಲ್ಲವುಗಳತ್ತಲೂ ದಿವ್ಯ ನಿರ್ಲಕ್ಷ್ಯ

ತಾಳುವುದನ್ನು ಅಭ್ಯಾಸ ಮಾಡುಕೊಳ್ಳುತ್ತಿದ್ದೇನೆ..

ಈಗೀಗ ಒಮ್ಮೊಮ್ಮೆ ನಗುತ್ತಿದ್ದೇನೆ..

ಅಳುವುದನ್ನು ಕಡಿಮೆ ಮಾಡಿದ್ದೇನೆ..

ಅ೦ತಿಮ ಹ೦ತದ ವೈಭವಕ್ಕೆ

ಈಗಲೇ ತಯಾರಾಗುತ್ತಿದ್ದೇನೆ.

1 comment:

ಕ್ಷಣ... ಚಿಂತನೆ... said...

ಸರ್‍, ಬಹಳ ದಿನಗಳಿಂದ ನಿಮ್ಮ ಬ್ಲಾಗಿಗೆ ಬರಲಾಗಿರಲಿಲ್ಲ. ಇಂದು ಬಂದೆ. ನಿರೀಕ್ಷೆ ಕವನ ಓದಿದಾಗ, ಸರಳವಾದ ಕವನ. ವಾಸ್ತವಿಕತೆಗೆ ಹತ್ತಿರ ಎನಿಸಿತು.

ಧನ್ಯವಾದಗಳು

ಚಂದ್ರಶೇಖರ ಬಿ.ಎಚ್.