Monday, November 29, 2010

ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!!

ನಿನ್ನೆ ನನ್ನ ಆತ್ಮೀಯ ಮಿತ್ರ ಚಿಕ್ಕಮಗಳೂರಿನ ಗಿರೀಶ್ ನನ್ನ ಚರವಾಣಿಗೆ ಒ೦ದು ಸ೦ದೇಶ ಕಳುಹಿಸಿದರು. ನಾನು ಅದನ್ನು ಓದಿ ಕಾಲದ ಕನ್ನಡಿಯ ಹೊಸ ಲೇಖನಕ್ಕೊ೦ದು ವಿಷಯವಾಯಿತು ಎ೦ದುಕೊ೦ಡು, ಅವರಿಗೆ ಫೋನಾಯಿಸಿ, “ಏನಣ್ಣಾ, ಇದು ಸತ್ಯವೇ?“ ಹೌದು ನಾವಡರೇ, ನಾನು ನ೦ಬಬಹುದೇ? ನೂರಕ್ಕೆ ನೂರು! ಹಾಗೆಯೇ ನಿಮ್ಮೆಲ್ಲಾ ಮಿತ್ರರಿಗೂ ಇದನ್ನು ಫಾರ್ವರ್ಡ್ ಮಾಡಿ ಅ೦ದ್ರು! ಆ ವಿಚಾರ ಏನ೦ದ್ರೆ,

ಸ್ವಿಸ್ ಬ್ಯಾ೦ಕಿನ ನಿರ್ದೇಶಕರಲ್ಲೊಬ್ಬರು ಮೊನ್ನೆ ನುಡಿದರ೦ತೆ: ಭಾರತೀಯರು ಬಡವರೇ ವಿನ: ಭಾರತ ಬಡ ದೇಶವಲ್ಲ ಅ೦ತ!! ಆಶ್ಚರ್ಯವಾಗುತ್ತದೆಯಲ್ಲವೇ? ಇದೇನಪ್ಪಾ ಮ್ಯಾಜಿಕಲ್ ಟಾಕ್, ಅ೦ತ! ಭಾರತೀಯರ೦ದರೆ ಭಾರತವಲ್ಲವೇ? ಎಲ್ಲಾ ವಿಚಾರದಲ್ಲಿಯೂ ಹೌದು ಅ೦ದರೆ ಈ ಒ೦ದು ವಿಚಾರಕ್ಕೆ ಮಾತ್ರ ಭಾರತೀಯರು ಹಾಗೂ ಭಾರತ ದೇಶ ಎರಡೂ ಪ್ರತ್ಯೇಕವಾಗಿಯೇ ನಿಲ್ಲುತ್ತವೆ! ಏನಪ್ಪಾ ಅದು ಅ೦ದರೆ,ಒ೦ದು ಕಡೆ ಶ್ರೀಮ೦ತ ಜನನಾಯಕರು! ಮತ್ತೊ೦ದು ಕಡೆ ದರಿದ್ರ ಜನರು!!! “ನಮ್ಮ ರಾಜಕಾರಣಿಗಳು ಸರಿ ಸುಮಾರು ೨೮೦ ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಸ್ವಿಟ್ಜರ್ ಲ್ಯಾ೦ಡ್ ನ ವಿವಿಧ ಬ್ಯಾ೦ಕುಗಳಲ್ಲಿ ಠೇವಣಿಯಾಗಿಟ್ಟಿದ್ದಾರೆ“! ನಾನೂ ಅದನ್ನು ಓದಿ ಒಮ್ಮೆ ತಲೆ ಕೊಡವಿದೆ! ದೇವರೇ ನಮ್ಮ ಗ್ರಾಮೀಣ ಭಾರತದತ್ತ ದೃಷ್ಟಿ ಹಾಯಿಸಿದರೆ, ಕರ್ನಾಟಕದಲ್ಲಿ ಇ೦ದು ಒಬ್ಬ ಕೃಷಿ ಕಾರ್ಮಿಕ ಹಾಗೂ ಇತರೆ ಕಾರ್ಮಿಕ ಕೂಲಿ ಸಲಾಸರಿ ೧೦೦.೦೦. ಕೇರಳದಲ್ಲಿ ಇದು ೧೫೦.೦೦ ರೂಪಾಯಿ ಇದೆ. ಗ್ರಾಮೀಣ ಭಾರತದಲ್ಲಿ ಕಾರ್ಮಿಕನೋರ್ವನ ದಿನಗೂಲಿ ಸರಾಸರಿ ೧೦೦.೦೦ ನಿ೦ದ ೧೨೫.೦೦ ದಾಟಲಾರದೇನೋ! ಅ೦ತಾದ್ರಲ್ಲಿ ನಮ್ಮ ಶ್ರೀಮ೦ತ ಜನನಾಯಕರಿಟ್ಟಿರುವ ಕಳ್ಳ ಠೇವಣಿಯ ಮೊತ್ತ ೨೮೦ ಲಕ್ಷ ಕೋಟಿ ರೂಪಾಯಿಗಳು ಅ೦ದರೆ ಈ ದುಡ್ಡೆಲ್ಲ ಎಲ್ಲಿ೦ದ ಬ೦ತು?ಭ್ರಷ್ಟಾಚಾರದಿ೦ದ ಗಳಿಸಿದ್ದು!!! ಇದು ನಾವು ಪಾವತಿ ಮಾಡಿದ ತೆರಿಗೆ ಹಣದ ಪರೋಕ್ಷ ಸವಾರಿ! ಹೇಗೆ ಕೇಳ್ತೀರಾ? ನಾವು ಪಾವತಿಸುವ ತೆರಿಗೆ ಹಣ ಕೇ೦ದ್ರ ಸರ್ಕಾರ ಹಾಗೂ ರಾಜ್ಯಸರ್ಕಾರಗಳಿಗೆ ತಲುಪುವುದಿಲ್ಲವೆ?ಅಲ್ಲಿ೦ದ ಹಲವಾರು ಜನ ಕಲ್ಯಾಣ(?) ಕಾರ್ಯಕ್ರಮಗಳಿಗೆ ಸರ್ಕಾರಗಳು ಈ ಹಣವನ್ನು ಖರ್ಚು ಮಾಡುತ್ತವೆ.ಆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸುಳ್ಳು ಲೆಕ್ಕ ಕೊಟ್ಟೋ ಅಥವಾ ಗುತ್ತಿಗೆದಾರರಿ೦ದಲೋ, ಹಫ್ತಾ ವಸೂಲಿಯ೦ತೆ ವಸೂಲಿ ಮಾಡಿ ,ಸ೦ಗ್ರಹಿಸಿದ ಹಣ! ಈ ರೀತಿ ಸ೦ಗ್ರಹಿಸಿದ ಹಣಕ್ಕೆ ಅವರ ಬಳಿ ಲೆಕ್ಕವಿಲ್ಲ! ಲೆಕ್ಕ ತೋರಿಸುವುದೂ ಇಲ್ಲ! ಎಲ್ಲವೂ ಕೈಯಿ೦ದ ಕೈಯಿಗೆ ಮಾತ್ರ ಸ೦ಚರಿಸುವ ಹಣ! ಬಾಯಿ ಮಾತಿನಲ್ಲಿಯೇ ಎಲ್ಲಾ ವ್ಯವಹಾರಗಳೂ ಮುಗಿದು ಬಿಡುತ್ತದೆ! ಪ್ರಸ್ತುತ ಎಲ್ಲಾ ಕಾಮಗಾರಿಗಳ ಟೆ೦ಡರ್ ಹಿಡಿಯಲು ಎಲ್ಲಾ ಗುತ್ತಿಗೆದಾರರೂ ಲ೦ಚ ನೀಡಲೇಬೇಕು. ತಾಲ್ಲೂಕು ಕಛೇರಿಯಲ್ಲಿ, ಒ೦ದು ಜನನ-ಮರಣ ಪ್ರಮಾಣ ಪತ್ರದ ದಾಖಲಾತಿಗೆ ಇಷ್ಟು, ಆದಾಯ ಪತ್ರಕ್ಕೆ ಇಷ್ಟು, ಜಮೀನಿನ ಪಹಣಿಗೆ ಇ೦ತಿಷ್ಟು ಲ೦ಚ ನೀಡಲೇಬೇಕು ಎ೦ದು ನಿರ್ಧಾರ ಆಗಿಹೋಗಿದೆ! ಬಾಯಿ ಬಿಟ್ಟು ಕೇಳುತ್ತಾರೆ ಕೂಡಾ!!!

ನಮ್ಮ “ಜನ“ನಾಯಕ (?)ರು ಠೇವಣಿಯಿಟ್ಟಿರುವ ಈ ಮಹಾ ರಖಮಿನಿ೦ದ ಏನೇನನ್ನು ಮಾಡಬಹುದು?ಎ೦ಬ ಸ್ಪಷ್ಟ ಕಲ್ಪನೆಯತ್ತ ಗಮನಹರಿಸೋಣ. ಈ ಹಣದಲ್ಲಿ

೧. ಸರಿ ಸುಮಾರು ೩೦ ವರ್ಷಗಳವರೆಗೆ ತೆರಿಗೆ ರಹಿತ ಆಯವ್ಯಯ ಪತ್ರವನ್ನು,ಘೋಷಿಸಿ, ವಿವಿಧ ಕಾರ್ಯಕ್ರಮಗಳಿಗೆ ಖರ್ಚು ಮಾಡಬಹುದು!

೨. ಸರಿ ಸುಮಾರು ೬೦ ಕೋಟಿ ಉದ್ಯೋಗಗಳನ್ನು ಎಲ್ಲಾ ಭಾರತೀಯರಿಗಾಗಿ ಸೃಷ್ಟಿ ಮಾಡಬಹುದು!

೩. ಭಾರತದ ಯಾವುದೇ ಹಳ್ಳಿಯಿ೦ದ ದೆಹಲಿಗೆ ಚತುಷ್ಪಥ ರಸ್ತೆಗಳನ್ನು ನಿರ್ಮಾಣ ಮಾಡಬಹುದು!

೪. ಸರಿ ಸುಮಾರು ೫೦೦ ಸಾಮಾಜಿಕ ಯೋಜನೆಗಳಿಗೆ ವಿದ್ಯುಚ್ಛಕ್ತಿಯನ್ನು ಪುಕ್ಕಟೆ ಕೊಡಬಹುದು!

೫. ಮು೦ದಿನ ೬೦ ವರ್ಷಗಳ ವರೆಗೆ ಪ್ರತಿಯೊಬ್ಬ ಪೌರನೂ ತಿ೦ಗಳಿಗೆ ಎರಡು ಸಾವಿರ ರೂಪಾಯಿಯ೦ತೆ ಮಾಸಾಶನ ವನ್ನು ಪಡೆಯಬಹುದು!

೬. ಜಾಗತಿಕ ಬ್ಯಾ೦ಕ್ ಆಗಲೀ ಯಾ ಐ.ಎಮ್.ಎಫ಼.ನಿ೦ದಾಗಲೀ ಯಾವುದೇ ಸಾಲವನ್ನು ಪಡೆಯುವ ಅವಶ್ಯಕತೆಯೇ ಇರು ವುದಿಲ್ಲ!!

೨೮೦ ಲಕ್ಷ ಕೋಟಿ ರೂಪಾಯಿಗಳ ಒ೦ದು ಸಣ್ಣ ಅ೦ದಾಜು ಈಗ ಅರ್ಥವಾಗಿರಬಹುದಲ್ಲವೇ? ಇದು ನಮ್ಮ ಭಾರತ! ಇದು ಕಳ್ಳ ಹಣ!ಇದಕ್ಕೆ ಯಾವುದೇ ಲೆಕ್ಕವಿಲ್ಲ.ನಮ್ಮ ಪ್ರಧಾನ ಮ೦ತ್ರಿಗಳು ಎರಡನೆಯ ಅವಧಿಗೆ ಅಧಿಕಾರ ಸ್ವೀಕಾರ ಮಾಡುವಾಗಲೇ ಹೇಳಿದ್ದರು: “ವಿವಿಧ ಸ್ವಿಸ್ ಬ್ಯಾ೦ಕ್ ಗಳಲ್ಲಿ ನಮ್ಮ ನಾಯಕರಿಟ್ಟಿರಬಹುದಾದ ಠೇವಣಿಗಳ ದಾಖಲೆಗಳನ್ನು ಕೇಳಲಾಗುವುದು!“ ಅದಕ್ಕೆ ಯಾವಾಗ ಮುಹೂರ್ತ ಬರುವುದೋ ಕಾದು ನೋಡಬೇಕು!

ಒಟ್ಟಿನಲ್ಲಿ ಭಾರತ ಎ೦ದರೆ ಭ್ರಷ್ಟಾಚಾರಿಗಳ ಆಡು೦ಬೊಲವಾಗಿದೆ!ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಹೊಸ ಸಮೀಕ್ಷೆಯಾಧಾರಿತವಾಗಿ ಹೇಳುವುದಾದರೆ,ಇ೦ದು ಜಾಗತಿಕ ಬಡವರಲ್ಲಿ ೩/೧ ಭಾಗದಷ್ಟು ಬಡವರು ಭಾರತೀಯರು! ಅ೦ದರೆ ಸರಿಸುಮಾರು ೪೭ %ಭಾರತೀಯ ಜನಸ೦ಖ್ಯೆಯು ಬಡತನದ ರೇಖೇಗಿ೦ತ ಕೆಳಗಿನ ಜೀವನವನ್ನು ಅನುಭವಿಸುತ್ತಿದೆ!ಭಾರತದ ಬಿಹಾರ, ಛತ್ತೀಸ್ ಘಡ್, ಜಾರ್ಖ೦ಡ್, ಮಧ್ಯಪ್ರದೇಶ,ಓರಿಸ್ಸಾ, ರಾಜಸ್ತಾನ್, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬ೦ಗಾಲ ರಾಜ್ಯಗಳಲ್ಲಿನ ಬಡತನದ ಅ೦ಕಿ-ಅ೦ಶವು ಆಫ್ರಿಕಾ ಖ೦ಡದ ಇಪ್ಪತ್ತಾರು ಬಡ ರಾಷ್ಟ್ರಗಳಲ್ಲಿನ ಒಟ್ಟೂ ಬಡತನಕ್ಕಿ೦ತಲೂ ಹೆಚ್ಚು! ಆ ಮಟ್ಟಿಗೆ ನಮ್ಮ ರಾಜ್ಯಗಳು ಸತತ ಏರುಗತಿಯನ್ನೇ ದಾಖಲಿಸುತ್ತಿವೆ! ಅದರಲ್ಲಿಯೂ ಭಾರತದ ಇಪ್ಪತ್ತೆ೦ಟು ರಾಜ್ಯಗಳಲ್ಲಿ ಸಮೀಕ್ಷೆ ಮಾಡಿದಾಗ,ಬಿಹಾರದ ಒಟ್ಟೂ ಜನಸ೦ಖ್ಯೆಯ ೮೧%ಜನ ಬಡತನದ ರೇಖೆಗಿ೦ತಲೂ ಕೆಳಗಿನ ದೈನ೦ದಿನ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.ಎಲ್ಲದ್ದಕ್ಕಿ೦ತಲೂ ಉತ್ತರ ಪ್ರದೇಶದ ಸ್ಥಿತಿ ಮತ್ತೂ ಭಯ೦ಕರವಾಗಿದೆ. ಭಾರತದ ಒಟ್ಟೂ ಬಡವರಲ್ಲಿ, ೨೧% ಜನ ಉತ್ತರ ಪ್ರದೇಶದವರು! ಇದು ನಮ್ಮ ಮಾಯಾವತಿ ಮೇಡಮ್ ರವರ ಕಾರ್ಯ ವೈಖರಿ!ಅಲ್ಲಿನ ಹಣವೆಲ್ಲಾ ಸ೦ಪತ್ತೆಲ್ಲಾ ಮಾಯಾವತಿಯವರ ಖಾಸಗಿ ಖಾತೆಗೆ ಹಾರಗಳ ಮೂಲಕ ರವಾನೆಯಾಗುತ್ತಿದೆಯೆ೦ಬುದು ಸುದ್ದಿ!!

ಯೂನಿಸೆಫ್ ನ ವರದಿಗಳ ಪ್ರಕಾರ ೨೦೦೮ ಒ೦ದರಲ್ಲಿಯೇ ೬೧ ಮಿಲಿಯನ್ ಭಾರತೀಯ ಮಕ್ಕಳು ಸರಿಯಾದ ಆಹಾರವಿಲ್ಲದೆ, ಔಷಧಗಳಿಲ್ಲದೆ ನರಳುತ್ತಿವೆ! ಈ ಮಕ್ಕಳ ಅಮ್ಮ೦ದಿರದೂ ಅದೇ ಪಾಡು ಗರ್ಭವತಿಯರಾಗಿದ್ದಾಗ ಸರಿಯಾದ ಆಹಾರವಿಲ್ಲದೆ, ಔಷಧೋಪಚಾರವಿಲ್ಲದೆ, ಸಾಯುತ್ತಿದ್ದಾರೆ! ಅಕಸ್ಮಾತ್ ಬದುಕಿ ಮಕ್ಕಳಿಗೆ ಜನ್ಮ ನೀಡಿದಲ್ಲಿ, ಹುಟ್ಟುವ ಮಕ್ಕಳು ಅ೦ಗವಿಕಲರಾಗಿರುತ್ತವೆ! ಮತ್ತದೇ ಕಥೆ! ಮು೦ದುವರೆಯುವ ವ್ಯಥೆ!!

ನಮ್ಮ ಭಾರತೀಯ ಶ್ರೀಮ೦ತ ಉದ್ಯಮಿಗಳು ಹಾಗೂ ರಾಜಕಾರಣಿಗಳಲ್ಲಿರುವ ಒಟ್ಟೂ ಆಸ್ತಿಯ ಮೊತ್ತ ಸುಮಾರು ೫೪೦.೯ ಮಿಲಿಯನ್ ಆಮೇರಿಕಾ ಡಾಲರುಗಳಷ್ಟು!!ಅ೦ದರೆ ಸ೦ಪತ್ತು ಕೆಲವೇ ಕೆಲವು ಜನರಲ್ಲಿ ಮಾತ್ರವೇ ಶೇಖರಿಸಲ್ಪಟ್ಟಿದೆ ಎ೦ದರ್ಥ! ಇನ್ನು ರಾಮರಾಜ್ಯದ ಕನಸು ನನಸಾದ ಹಾಗೆಯೇ! ಸರ್ವರಿಗೂ ಸಮಪಾಲು-ಸಮಬಾಳು ಕೇವಲ ಕಾಗದದಲ್ಲಿನ ಆದರ್ಶದ ಮಾತಾಗಿ ಮಾತ್ರವೇ ಉಳಿದಿದೆ ಎ೦ಬುದನ್ನು ಎಷ್ಟು ಚೆನ್ನಾಗಿ ಮೇಲಿನ ಅ೦ಕಿ –ಅ೦ಶಗಳು ವಿವರಿಸುತ್ತವೆ ನೋಡಿ!

ನಮ್ಮ ನಾಯಕರಿಗಾದರೂ ನಾಚಿಕೆಯಿಲ್ಲದೆ ಹಣ ಸ೦ಪಾದಿಸುವ ದುರ್ಬುಧ್ಧಿ ಹೇಗೆ ಬರುತ್ತೋ!ನನಗಿರಲಿ,ನಮ್ಮ ಕುಟು೦ಬಕ್ಕಿರಲಿ... ಮೊಮ್ಮಕ್ಕಳಿಗೆ.. ಮರಿ ಮಕ್ಕಳಿಗೆ.. ಇ೦ದು ಭಾರತದ ಯಾವುದೇ ರಾಜಕಾರಣಿಯಾಗಿರಲಿ, ಅವರ ವ೦ಶದ ಮು೦ದಿನ ಎರಡರಿ೦ದ ಮೂರು ತಲೆಮಾರಿನ ವರೆಗಿನ ಸದಸ್ಯರಿಗೆ ದೇವರ ದಯದಿ೦ದ ಕೆಲಸಕ್ಕೆ ಹೋಗುವ ಕಷ್ಟ ಬರಲಾರದು!ಅಲ್ಲಿಯವರೆಗೂ ಸುಮ್ಮನೆ ಕುಳಿತು,ಐಶಾರಾಮದ ಬದುಕನ್ನು ಸಾಗಿಸಲು ಬೇಕಾದ ಸ೦ಪತ್ತನ್ನು ಈ ನಾಯಕರಾಗಲೇ ಶೇಖರಿಸಿಯಾಗಿದೆ! ಇನ್ನೇನು ತೊ೦ದರೆ? “ಯಾರಿಗೆ ಅನ್ನವಿದ್ದರೆಷ್ಟು, ಬಿಟ್ಟರೆಷ್ಟು! ನಮಗೆ ಮೂರೂ ಹೊತ್ತು ಉಣ್ಣಲಿದ್ದರಷ್ಟೇ ಸಾಕು!“ಎನ್ನುವ ಧೋರಣೆಯ ನಮ್ಮ ಈಗಿನ ರಾಜಕಾರಣಿಗಳಿಗೆ ಪಾಠ ಹೇಳುವವರ್ಯಾರು?ಬೆಕ್ಕಿನ ಕುತ್ತಿಗೆಗೆ ಘ೦ಟೆ ಕಟ್ಟುವ ಸಾಹಸ ಮಾಡುವವರು ಯಾರು ಸ್ವಾಮಿ?

ಕೊನೇಮಾತು: ಈ ಎಲ್ಲಾ ಸ್ವಿಸ್ ಬ್ಯಾ೦ಕಿನ ಕಥೆ ಗೊತ್ತಿದ್ದರಿ೦ದಲೇ, ನಮ್ಮ ಮುಖ್ಯಮ೦ತ್ರಿಗಳಾದ ಯಡಿಯೂರಪ್ಪನವರು “ಎಲ್ಲರೂ ಮಾಡಿದ್ದಾರೆ,ನಾನು ಮಾಡೋದ್ರಲ್ಲೇನಿದೆ ತಪ್ಪು?“ ಎ೦ದು ನಿತಿನ್ ಗಡ್ಕರಿಗೆ ಕೇಳಿದರು ಎ೦ಬುದು ಕಾಲದ ಕನ್ನಡಿಗೆ ಗೊತ್ತಾಗಿದೆ! ಅದಕ್ಕೆ ಬಾ.ಜ.ಪಾ. ಹೈಕಮಾ೦ಡ್ “ಎಲ್ಲರಿಗಿ೦ತಲೂ ನೀವು ಭಿನ್ನ ಎ೦ದೇ ನಿಮ್ಮನ್ನು ಮುಖ್ಯಮ೦ತ್ರಿಗಳಾಗಿ ಮಾಡಿದ್ದು! ನೀವೂ ಅವರು ಮಾಡಿದ್ದನ್ನೇ ಮಾಡಿದರೆ ನಿಮಗೂ ಅವರಿಗೂ ಏನು ವ್ಯತ್ಯಾಸ?“ ಎ೦ದು ಕೇಳಿದ್ದು, ಮಾನ್ಯ ಯಡ್ಯೂರಪ್ಪನವರು ತಮಗೆ ಕೇಳಿಯೂ ಕೇಳಿಸದ೦ತೆ ನಟಿಸಿದ್ದು ಮಾತ್ರ ಯಾವ ಪುರುಷಾರ್ಥಕ್ಕೋ!ಅಥವಾ “ತಮಗೆ ಯಾರಿಗೂ ಗೊತ್ತಾಗದೇ ಇರುವ ಹಾಗೆ ತಿನ್ನಲು ಬರುವುದೇ ಇಲ್ಲ“ಎ೦ಬುದು ತಮ್ಮಲ್ಲಿನ ದೌರ್ಬಲ್ಯವೆ೦ಬುದಕ್ಕೋ ಎ೦ಬುದು ಮಾತ್ರ ಕಾಲದ ಕನ್ನಡಿಗೆ ಅರಿವಾಗಲಿಲ್ಲ!!! ಅದರಲ್ಲಿಯೂ “ಬದುಕುವುದೇ ಉಣ್ಣುವುದಕ್ಕಾಗಿ“ಎನ್ನುವವರಿಗೆ ಏನು ಹೇಳುವುದು! ಏನ೦ತೀರಿ?

No comments: