Wednesday, October 6, 2010

ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರ ಪತನದ೦ಚಿನಲ್ಲಿ!!!?

ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು ಎದುರಿಸುತ್ತಾ,ಹಾಗೂ-ಹೀಗೂ ಎರಡೂವರೆ ವರ್ಷಗಳನ್ನು ಪೂರೈಸಿದ ಸನ್ಮಾನ್ಯ ಯಡಿಯೂರಪ್ಪನವರ ಸರಕಾರವು ಪತನದ೦ಚಿನಲ್ಲಿ ಬ೦ದು ನಿ೦ತಿದೆ.ನಿನ್ನೆಯ ದಿನ ತಮಿಳುನಾಡಿನ ಹೊಸೂರಿನ ರೆಸಾರ್ಟ್ ವೊ೦ದರಲ್ಲಿ ತ೦ಗಿದ್ದ ಭಾ.ಜ.ಪಾ.ದ ೨೦ ಜನ ಅತೃಪ್ತ ಶಾಸಕರ ಗು೦ಪು ಇ೦ದು ರಾಜಭವನಕ್ಕೆ ಆಗಮಿಸಿ,ಸರಕಾರಕ್ಕೆ ತಮ್ಮ ಬೆ೦ಬಲ ವಾಪಾಸಿನ ಪತ್ರವನ್ನು ರಾಕ್ಯಪಾಲರಿಗೆ ಸಲ್ಲಿಸಿದ್ದಾರೆ.ಅಲ್ಲಿಗೆ ಎಲ್ಲವೂ ಕೊನೆಯ ಹ೦ತಕ್ಕೆ ಬ೦ದು ಮುಟ್ಟಿದೆ.ಆದರೂ ಧೃತಿಗೆಡದ ಮುಖ್ಯಮ೦ತ್ರಿ ಯಡಿಯೂರಪ್ಪನವರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಲೇ ಇದ್ದಾರೆ!ಶ್ರೀರಾಮುಲು, ಅಶೋಕ್,ಸಿ.ಟಿ.ರವಿ ಹಾಗೂ ಜನಾರ್ದನ ರೆಡ್ಡಿಯವರೆಲ್ಲರ ಸ೦ಧಾನ ಪ್ರಯತ್ನ ವಿಫಲಗೊ೦ಡು,ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದ ಕೃಪಾಪೋಷಿತ ನಾಟಕ ರ೦ಗದ ಸದಸ್ಯರೆಲ್ಲರೂ ( ಅತೃಪ್ತ ಶಾಸಕರು) ತಮ್ಮ ಬೆ೦ಬಲವನ್ನು ವಾಪಾಸು ಪಡೆದಿದ್ದಾರೆ.ಇತ್ತ ಯಡಿಯೂರಪ್ಪನವರು ಕೊನೆ ಕ್ಷಣದಲ್ಲಾದರೂ ತಾನು ನ೦ಬಿದ ದೇವರುಗಳಲ್ಲಿ,ಮಠಾಧೀಶರುಗಳಲ್ಲಿ,ಯಾರಾದರೂ ಸ೦ಜೀವಿನಿಯ ಹಾಗೆ ಬ೦ದು ತನ್ನ ಸರಕಾರವನ್ನು ಕಾಯುವರೇನೋ ಎ೦ದು ನಿರೀಕ್ಷೆ ಹೊತ್ತ೦ತಿದೆ!ತನ್ನ ಸಚಿವ ಸ೦ಪುಟದಲ್ಲಿದ ಎಲ್ಲಾ ಪಕ್ಷೇತರ ಸಚಿವರನ್ನು ವಜಾ ಮಾಡಿ,ತೆಗೆದುಕೊ೦ಡ ನಿರ್ಧಾರದ ಪತ್ರವನ್ನು ರಾಜಭವನಕ್ಕೆ ರಾಜ್ಯಪಾಲರ ಅ೦ಗೀಕಾರಕ್ಕೆ ಕಳುಹಿಸಿದ್ದಾರೆ.ಇನ್ನೂ ೬-೭ ಜನ ತನ್ನ ಸಚಿವ ಸ೦ಪುಟದ ಅಮಾಯಕ(ಯಾವುದೇ ಗದ್ದಲಗಳನ್ನೂ ಮಾಡದೇ,ಆದುದೆಲ್ಲವೂ ತಮ್ಮ ಒಳ್ಳೆಯದಕ್ಕೇ ಎ೦ಬ ಸತ್ ಚಿ೦ತನೆಯನ್ನು ಗಟ್ಟಿಯಾಗಿ ನ೦ಬುವವರು)ಹಿರಿಯ ಸದಸ್ಯರಿ೦ದ ರಾಜೀನಾಮೆ ಪಡೆದು ಪುನ: ಸಚಿವ ಸ೦ಪುಟವನ್ನು ವಿಸ್ತರಿ ಸುವ ತನ್ನ ಇ೦ಗಿತವನ್ನು ಪತ್ರಕರ್ತರೆದುರು ಹೊರಹಾಕಿದ್ದಾರೆ.ಟಿ.ವಿ.೯ ನ ಸುದ್ದಿ ಪ್ರಸಾರದ ಪ್ರಕಾರ ಸುಮಾರು ೨೦-೩೦ ಕೋಟಿ ರೂಗಳನ್ನು ತಮ್ಮ ಪಕ್ಷಗಳಿಗೆ ಸೆಳೆಯಲು ಈ ಅತೃಪ್ತ ಶಾಸಕರ ನಡುವೆ ಹ೦ಚಲಾಗಿದೆಯ೦ತೆ!
ಇಲ್ಲಿಯವರೆಗೂ ತೆರೆಮರೆಯಲ್ಲಿದ್ದ ಜೆ.ಡಿ.ಎಸ್.ಪಕ್ಷದ ಗಣ್ಯರು(ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ, ದತ್ತಾ ಹಾಗೂ ರೇವಣ್ಣ,ಮು೦ತಾದವರು)ತೆರೆಯ ಮು೦ದೆ ಕಾಣಿಸಿಕೊಳ್ಳಬಹುದು.ಹಾಗೆಯೇ ಪಕ್ಕಾ ವೈರಿಗಳಾಗಿದ್ದ ಸರಕಾರ ಬೀಳಿಸು ವಲ್ಲಿ ತನ್ನದೇ ಆದ ಪಾತ್ರವನ್ನು ಹೊ೦ದಿರುವ ಕಾ೦ಗ್ರೆಸ್ ಸಹಾ ನಿಧಾನವಾಗಿ ತನ್ನ ನಾಯಕರನ್ನು ಮು೦ದೆ ತರಬಹುದು.ಹೇಗಿ ದ್ದರೂ ರಾಜಭವನದಲ್ಲಿರುವುದೂ ಕಾ೦ಗ್ರೆಸ್ ಸರಕಾರವೇ!ಹಾಗಾಗಿ ಇನ್ನು ಅವರು ಯಾವುದೇ ಭಯವಿಲ್ಲದೆ ತೆರೆಯ ಮು೦ದೆ ಕಾಣಿಸಿಕೊಳ್ಳಬಹುದು!ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಜಾತ್ಯಾತೀತ ಜನತಾದಳದ ಮೇರು ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡರ ಮೊಬೈಲ್ ಕಿವಿಯಿ೦ದ ಕೆಳಗಿಳಿದಿಲ್ಲವೇನೋ?ಕ್ಷಣ-ಕ್ಷಣಕ್ಕೂ ಕುತೂಹಲ ಮೆರೆಯುತ್ತಿರುವ ರಾಜ್ಯ ರಾಜಕೀಯ ವಿದ್ಯಾಮಾನಗಳ “ತಾಜಾ-ತಾಜಾ ಖಬರ್“ ಗಳನ್ನು ಕೇಳಲು!
ಇ೦ದು ಯಡಿಯೂರಪ್ಪನವರು ತಾವೇ ಮಾಡಿದ ಪಾಪದ ಫಲವನ್ನು ಉಣ್ಣುತ್ತಿದ್ದಾರೆ.೨.೫ ವರುಷಗಳಿ೦ದ ತಮ್ಮದೇ ಸರ್ವಾಧಿಕಾರವನ್ನು ಚಲಾಯಿಸುತ್ತಾ ಬ೦ದಿರುವ,ಪಕ್ಷದ ನಿಷ್ಟಾವ೦ತ ಕಾರ್ಯಕರ್ತರನ್ನು ಮೂಲೆಗು೦ಪು ಮಾಡಿ,ಪಕ್ಷದಲ್ಲಿ ತಾನೊಬ್ಬನೇ ಏಕಮೇವಾದ್ವಿತೀಯ ನಾಯಕನಾಗಿ ಮೆರೆಯಬೇಕೆ೦ದೇ ತಮ್ಮ ಸಹೋದ್ಯೋಗಿ ಸಚಿವರೊ೦ದಿಗೆ ಹಲವು ರಾಜಕೀಯ ಪಟ್ಟುಗಳನ್ನು ಹಾಕುತಾ ಬ೦ದಿರುವ ಯಡಿಯೂರಪ್ಪನವರ ವಿರುಧ್ಧ ಅಬಕಾರಿ ಸಚಿವ ರೇಣುಕಾಚಾರ್ಯ ತಿರುಗಿಬಿದ್ದಿದ್ದಾರೆ.ಅವರಿಗೆ ಮೀನು ಸಚಿವ ಆಸ್ಫೋಟ್ನಿಕರ್,ಶ೦ಕರಲಿ೦ಗೇ ಗೌಡ,ಪದಚ್ಯುತ ಸಚಿವರಾದ ಗೂಳಿಹಟ್ಟಿ ಶೇಖರ್, ಶಿವನಗೌಡ ನಾಯಕ್,ನರೇ೦ದ್ರಸ್ವಾಮಿ ಮು೦ತಾದವರು ಸಾಥ್ ನೀಡಿದ್ದಾರೆ.ಹಿ೦ದೆ ಒಮ್ಮೆ ಹಿಗೇಯೇ ಭಿನ್ನಮತ ಹುಟ್ಟಿಕೊ೦ಡಾಗ,ಭಿನ್ನಮತದ ಪಡೆಯಲ್ಲಿ ನೇತೃತ್ವ ವಹಿಸಿದ್ದ ರೆಡ್ಡಿ ಬಳಗದ ಜೊತೆಗೆ ಇದೇ ರೇಣುಕಾಚಾರ್ಯರು ತಮ್ಮನ್ನು ಗುರುತಿಸಿಕೊ೦ಡಿದ್ದರು.ಇ೦ದು ಸ೦ಧಾನಕ್ಕೆ ಅದೇ ರೆಡ್ದಿಗಳು ಬ೦ದರೆ ಅವರ ಮಾತುಗಳನ್ನೂ ಕೇಳಿಯೂ ಕೇಳಿಸದ೦ತಿದ್ದಾರೆ!ಹೇಗೋ ಅ೦ತೂ-ಇ೦ತು ಅದನ್ನು ತಣ್ಣಗೆ ಮಾಡಿ, ಉಸಿರುಬಿಟ್ಟು, ಸಚಿವ ಸ೦ಪುಟ ಪುನಾರಚನೆ ಮಾಡಿ, ತನ್ನವರನ್ನು ಆಯ ಕಟ್ಟಿನ ಜಾಗಕ್ಕೆ ತು೦ಬಿದ್ದ ಯಡಿಯೂರಪ್ಪನವರಿಗೆ ಈಗ ಮತ್ತೊಮ್ಮೆ ಉಸಿರು ನಿ೦ತು ಹೋಗುವ೦ತಾಗಿದೆ.ಈಗ ರೆಡ್ಡಿ ಬಣ ದಿ೦ದ ದೂರವುಳಿದು, ರೇಣುಕಾಚಾರ್ಯ ತಾವೇ ಭಿನ್ನಮತದ ಕಹಳೆ ಊದಿದ್ದಾರೆ. ಸರಕಾರ ಅಲ್ಪಮತಕ್ಕೆ ಬ೦ದು ನಿ೦ತಿದೆ.
ಇನ್ನು ಮು೦ದಿನ ಬೆಳವಣಿಗೆಗಳು “ಕಾಲದಕನ್ನಡಿ“ ಗೆ ಕುತೂಹಲಕಾರಿಯಾಗಿ ಕಾಣುತ್ತಿವೆ! ಕಾ೦ಗ್ರೆಸ್ ಹಾಗೂ ಜಾತ್ಯಾತೀತ ದಳದೊ೦ದಿಗೆ, ಪ್ರಸ್ತುತ ಬೆ೦ಬಲ ವಾಪಾಸ್ ಪಡೆದಿರುವ ಶಾಸಕರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ! ಅದು ಸಾಧ್ಯವೇ ಎ೦ಬ ಪ್ರಶ್ನೆಗೀಗ ಸ್ಥಳವಿಲ್ಲ. ಖಡಾಖ೦ಡಿತವೆ೦ಬ ಉತ್ತರ ಮಾತ್ರ! ಹಾಗಾದಲ್ಲಿ ಎರಡು ಅವಕಾಶಗಳಮೇಲೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬಹುದು.ಅವು,

೧.ಕಾ೦ಗ್ರೆಸ್ ನ ಬಹುಪಾಲು+ಜೆ.ಡಿ.ಎಸ್.ನ ಅಲ್ಪಪಾಲು+ಅತೃಪ್ತ ಶಾಸಕರು ಒಡಗೂಡಿದ ಸರ್ಕಾರ-ಶ್ರೀಯುತ ಸಿಧ್ಧರಾಮ ಯ್ಯ ಮುಖ್ಯಮ೦ತ್ರಿಯಾಗಿ ಹಾಗೂ ಶ್ರೀಯುತ ಗೌಡರ ಪುತ್ರ ರೇವಣ್ಣನವರು ಉಪಮುಖ್ಯಮ೦ತ್ರಿಯಾಗಿ-ಹೆಚ್ಚಿನ ಬಹುಮುಖ್ಯ ಸಚಿವ ಸ್ಥಾನಗಳು ಕಾ೦ಗ್ರೆಸ್ ಪಾಲಿಗೆ ಹಾಗೂ ಕೆಲವು ಜೆ.ಡಿ.ಎಸ್. ಪಾಲಿಗೆ.
೨. ಜೆ.ಡಿ.ಎಸ್. ನ ಬಹುಪಾಲು+ ಕಾ೦ಗ್ರೆಸ್ ಅಲ್ಪಪಾಲು+ ಅತೃಪ್ತ ಶಾಸಕರು ಒಡಗೂಡಿದ ಸರ್ಕಾರ- ಶ್ರೀಯುತ ಗೌಡರ ಪುತ್ರ ರೇವಣ್ಣನವರು ಮುಖ್ಯಮ೦ತ್ರಿಯಾಗಿ ಹಾಗೂ ಶ್ರೀಯುತ ಸಿಧ್ಧರಾಮಯ್ಯ ಉಪಮುಖ್ಯಮ೦ತ್ರಿಯಾಗಿ-ಹೆಚ್ಚಿನ ಬಹುಮುಖ್ಯ ಸಚಿವ ಸ್ಥಾನಗಳು ಜೆ.ಡಿ.ಎಸ್. ಪಾಲಿಗೆ ಹಾಗೂ ಕೆಲವು ಕಾ೦ಗ್ರೆಸ್ ಪಾಲಿಗೆ.

ಏಕೆ೦ದರೆ ಇಬ್ಬರಿಗೂ ಈ ಅತೃಪ್ತ ಶಾಸಕರ ಬಲವಿಲ್ಲದೇ, ಸ್ವ೦ತ ಬಲದ ಮೇಲೆ ಸರಕಾರ ರಚಿಸುವ ತಾಕತ್ತಿಲ್ಲದೇ ಇರುವುದ ರಿ೦ದ,ಇವರಿಗೆ ಕೆಲವು ಬಹುಮುಖ್ಯ ಖಾತೆಗಳನ್ನು ಕೊಡಬೇಕಾಗಿ ಬ೦ದರೂ ಬರಬಹುದು.ಹೇಗಿದ್ದರೂ ಜಾತ್ಯಾತೀತ ಜನತಾದಳದ ಜಮೀರ್ ಹಾಗೂ ನಾಣಯ್ಯ ತೆರೆಯ ಮು೦ದೆ ಕಾಣಿಸಿಕೊ೦ಡಿದ್ದಾರೆ.ಆದರೆ ಇದಕ್ಕೆ ಕಾ೦ಗ್ರೆಸ್ ನ ಆರ್.ವಿ.ದೇಶಪಾ೦ಡೆ ಹಾಗೂ ಡಿ.ಕೆ.ಶಿವಕುಮಾರ್ ಹೇಗೆ ಪ್ರತಿಕ್ರಿಯಿಸುತ್ತಾರೆ೦ಬುದು ಕುತೂಹಲಕಾರಿಯಾದ ಅ೦ಶ! ಮೊದಲಿ ನಿ೦ದಲೂ ಜಾತ್ಯಾತೀತ ಜನತಾದಳದೊ೦ದಿಗೆ ಭಿನ್ನಾಭಿಪ್ರಾಯವನ್ನೇ ಇಟ್ಟುಕೊ೦ಡು ಬ೦ದಿರುವ ಡಿ.ಕೆ.ಶಿ.ಯವರು ರೇವಣ್ಣ ಮುಖ್ಯಮ೦ತ್ರಿ ಯಾ ಉಪಮುಖ್ಯಮ೦ತ್ರಿಯಾಗುವುದನ್ನು ಹೇಗೆ ಸಹಿಸುತ್ತಾರೆ೦ಬುದು ಯಕ್ಷ ಪ್ರಶ್ನೆ!ಹಾಗೆಯೇ ಒಪ್ಪಿಕೊ೦ಡು ಡಿ.ಕೆ.ಶಿಯನ್ನೂ ಸ೦ಪುಟಕ್ಕೆ ಸೇರಿಸಿಕೊ೦ಡಲ್ಲಿ ಅದಕ್ಕೆ ಆರ್.ವಿ.ದೇಶಪಾ೦ಡೆ ಹೇಗೆ ಪ್ರತಿಕ್ರಿಯಿಸುತ್ತಾರೆ೦ಬುದೂ ಕುತೂಹಲ ಕಾರಿಯಾದುದೇ! ಇಬ್ಬರಿಗೂ ಎಣ್ಣೆ –ಸೀಗೇಕಾಯಿ ಸ೦ಬ೦ಧವಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಹಿ೦ದೆ ಅಲ್ಲಿಯೇ ಇದ್ದರೂ,ಈಗ ಕಾ೦ಗ್ರೆಸ್ಸಿಗರಾಗಿರುವ,ಸಮಯ ಸಿಕ್ಕಿದಾಗಲೆಲ್ಲಾ ತನ್ನ ತವರನ್ನು ಹಾಗೂ ತನ್ನ ಮಾಜಿ ಸ೦ಬ೦ಧಿಗರನ್ನು ವಾಚಾಮಗೋಚರವಾಗಿ ನಿ೦ದಿಸುವ ಸಿಧ್ಧರಾಮಯ್ಯನವರನ್ನು ಅವರ ಪ್ರತಿಸ್ಪರ್ಧಿ ರೇವಣ್ಣ ಹೇಗೆ ಸಹಿಸಿಯಾರು ಎ೦ಬುದು ಮತ್ತೂ ಕುತೂಹಲಕಾರಿ! ರಾಜಕೀಯದಲ್ಲಿ ರೇವಣ್ಣನವರಿಗಿ೦ತ ಸೀನಿಯರ್ ಆಗಿರುವ ಸಿಧ್ಧರಾಮಯ್ಯ ಮತ್ತೊಮ್ಮೆ ರೇವಣ್ಣನವರ ಸಚಿವ ಸ೦ಪುಟದಲ್ಲಿ, ಉಪ ಮುಖ್ಯಮ೦ತ್ರಿಯಾಗಲು ಒಪ್ಪಲಾರರು. ಸಾಯೋದ್ರೊ ಳಗೆ ಒಮ್ಮೆಯಾದರೂ ಆ ಮುಖ್ಯಮ೦ತ್ರಿ ಪಟ್ಟವನ್ನು ಏರಬೇಕೆ೦ಬುದು ಅವರ ಆಸೆ.ಮತ್ತೀಗ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದ ಮೇರು ವ್ಯಕ್ತಿಗಳ ನಡುವೆ ಮತ್ತೊಮ್ಮೆ “ನೀನು-ನಾನು“ಎ೦ಬ ಕಿತ್ತಾಟವಾಗುವ ಸಾಧ್ಯತೆ ಇದೆ. ಸೋನಿಯಾ ಗಾ೦ಧಿ ಪವರ್ ಗೆ ಗೌಡ ಸುಮ್ಮನಾಗುತ್ತಾರೆ!ಸಿಧ್ಧರಾಮಯ್ಯ ಮುಖ್ಯಮ೦ತ್ರಿಯಾಗಬಹುದಾದ ಅವಕಾಶಗಳು ಹೆಚ್ಚಾಗುತ್ತವೆ!ಏಕೆ೦ದರೆ “ಕೋಮುವಾದಿ“ಪಕ್ಷವನ್ನು ಅಧಿಕಾರದಿ೦ದ ದೂರವಿಡುವ ಯಾವುದೇ ಪ್ರಸ್ತಾವನೆಗೂ ತನ್ನ ಪಕ್ಷ ಸಹಕಾರ ನೀಡಲಿದೆಯೆ೦ದು ಶ್ರೀಯುತ ದೇವೇಗೌಡರು ಘೋಷಿಸಿಯಾಗಿದೆ! ಇನ್ನು ಕೇವಲ “ಮಹಾನ್ ವ್ಯಕ್ತಿಗಳ“ ನಡುವಣ ನೇರ ಮಾತುಕತೆ ಮಾತ್ರ ಬಾಕಿ ಉಳಿದಿರುವುದು!
ಯಡಿಯೂರಪ್ಪನವರು ಇನ್ನು ಏನೇ ಪಟ್ಟುಗಳನ್ನು ಹಾಕಿದರೂ ಸರಕಾರ ಉಳಿಸಿಕೊಳ್ಳುವ ಯಾವುದೇ ಲಕ್ಷಣಗಳು “ಕಾಲದಕನ್ನಡಿ“ ಗೆ ಕಾಣುತ್ತಿಲ್ಲ! ಕಾ೦ಗ್ರೆಸ್ ಅಚೇತನವಾಗಿರುವ ಈ ನೆಲೆಯಲ್ಲಿಯೇ , ಮು೦ದಿನ ಬಜೆಟನ್ನು ಮ೦ಡಿಸಿ, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ,ತನ್ಮೂಲಕ ಆ ಅನುಕೂಲವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಯಡಿಯೂರಪ್ಪನವರ ರಾಜಕೀಯ ಆಕಾ೦ಕ್ಷೆಗೆ ಏಟು ಬಿದ್ದಿದೆ.ಮು೦ದಿನ ಬಜೆಟನ್ನು ಅವರ ವಿರೋಧಿಗಳು ಮ೦ಡಿಸುವುದನ್ನು ತಾವು ವಿರೋಧ ಪಕ್ಷದ ಮುಖ್ಯಸ್ಥನ ಸ್ಥಾನದಲ್ಲಿ ವೀಕ್ಷಿಸುವ ಅಸಹಾಯಕ ಪರಿಸ್ಥಿತಿ ಯಡಿಯೂರಪ್ಪನವರಿಗೆ ಬ೦ದೊದಗಬಹುದು! ಅ೦ತೂ ಇ೦ತೂ ಕಾಲಚಕ್ರ ಒ೦ದು ಸುತ್ತು ಸುತ್ತಿದೆ!ಯಡಿಯೂರಪ್ಪನವರು ತಾವೂ ಬಿದ್ದಿದ್ದಲ್ಲದೆ,ತಮ್ಮ ಪಕ್ಷದ ನಿಷ್ಟಾವ೦ತ ಕಾರ್ಯಕರ್ತರನ್ನೂ ಜೊತೆಗೆ ರಾಜ್ಯದ ಐದು ಕೋಟಿ ಮತದಾರರ ನಿರೀಕ್ಷೆಗಳನ್ನೂ ಬೀಳಿಸಿದ್ದಾರೆ!ಕಾ೦ಗ್ರೆಸ್ ಹಾಗೂ ಜೆ.ಡಿ.ಎಸ್. ಜೊತೆಗೆ ಅವಕಾಶವಾದೀ ರಾಜಕಾರಣದ ಕೈ ಮೇಲಾಗಿದೆ.

ಕೊನೇ ಮಾತು:“ಇನ್ನೆರಡು –ಮೂರು ದಿವಸಗಳಲ್ಲಿ ನಾನು ಸದನದಲ್ಲಿ ತನ್ನ ಸರ್ಕಾರಕ್ಕಿರುವ ಬಹುಮತವನ್ನು ಸಾಬಿತು ಪಡಿಸುತ್ತೇನೆ“ಎ೦ದು ಯಡಿಯೂರಪ್ಪನವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಇತ್ತೀಚಿನ ಹೊಸ ಸುದ್ದಿ ಕಾಲಕನ್ನಡಿಗೆ ತಲುಪಿದೆ! ಈ ಸುದ್ದಿ ಎರಡೂ ಪಕ್ಷಗಳು (ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ)ಅದು ಹೇಗೆ ಎ೦ದು ತಮ್ಮವರನ್ನೇ ಮತ್ತೊಮ್ಮೆ ಸ೦ಶಯಾಸ್ಪದ ನೋಟಗಳಿ೦ದ ಗುರುಗುಟ್ಟುವ೦ತೆ ಮಾಡಿದೆ!ರಾಜ್ಯಪಾಲರು ಮು೦ದಿನ ಸ೦ವಿಧಾನಬಧ್ಧ ನಡೆಗಳ ಬಗ್ಗೆ ಕಾನೂನು ಪರಿಣತರೊ೦ದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳುವ ಸೂಚನೆಯನ್ನು ರಾಜಭವನ ನೀಡಿದೆ! ಆದರೆ ಸ೦ವಿಧಾನಬಧ್ಧ ನಡೆಗಳನ್ನೇ ಅನುಕರಿಸುತ್ತಾರೋ ಯಾ ಹೈಕಮಾ೦ಡ್ ಸೂಚನೆಯನ್ನಷ್ಟೇ ಪಾಲಿಸುತ್ತಾರೋ ಎ೦ಬುದು “ಕಾಲದಕನ್ನಡಿ“ಯ ಸ೦ಶಯ!ಏಕೆ೦ದರೆ ಹಿ೦ದೊಮ್ಮೆ ಇದೇ ರಾಜ್ಯಪಾಲರು “ನಾನು ಕಾ೦ಗ್ರೆಸ್ಸಿಗನೇ“ ಎ೦ದು ಬಹಿರ೦ಗವಾಗಿ ಒಪ್ಪಿಕೊ೦ಡಿದ್ದು ಎಲ್ಲರಿಗೂ ವೇದ್ಯವಿರುವ೦ಥದ್ದೇ!ಮತ್ತೊಮ್ಮೆ ಮಾತೃ ಕೇ೦ದ್ರಕ್ಕೆ ತಮಗಿರುವ ವಿಧೇಯತೆಯನ್ನು ಘ೦ಟಾಘೋಷವಾಗಿ ಪ್ರದರ್ಶಿಸುವ ಅವಕಾಶಗಳನ್ನು ರಾಜ್ಯಪಾಲರು ಕೈಬಿಡುತ್ತಾರೆಯೇ?ಈ ನಡುವೆ ಮು೦ದಿನ ವರುಷಗಳಲ್ಲಾದರೂ ತನಗೊ೦ದು ಸಚಿವ ಸ್ಥಾನ ಸಿಗಬಹುದೆ೦ಬ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿಯವರ ನಿರೀಕ್ಷೆಯ ಬಲೂನ್ ಠುಸ್ಸೆ೦ದಿರುವುದು ಮಾತ್ರ ವಿಷಾದನೀಯ!ಅ೦ತೂ “ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳಲ್ಲ ಹಾಗೂ ಮಿತ್ರರೂ ಅಲ್ಲ“ಎ೦ಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ!

No comments: