Friday, July 16, 2010

ದೇವರೋ-ನಾವೋ?

ರಾಧೆಗೆ, ಕೃಷ್ಣ ಪ್ರೇಮಿ.
ನಮಗೋ ಅವ ಸರ್ವಾ೦ತರ್ಯಾಮಿ!

ತಾಯಿಗೆ ಬಾಯಲ್ಲಿ ಮೂರು ಲೋಕ

ತೋರಿದವ ಪೋರ! ಅವ ನಮ್ಮಲ್ಲಿಯ ಧೀರ!

ನಮಗವನು ಸರ್ವಶಕ್ತನ೦ತೆ!

ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ?

ನ್ಯಾಯವೆ೦ದು ತಲೆತೆಗೆಯುತ್ತಾ ಹೋದನಲ್ಲವೇ?

ಶನಿಗೆ ಹೆದರಿ ಸುರ೦ಗ ಸೇರಿದ

ಶಿವನು, ಲಯಕಾರನ೦ತೆ!

ತನ್ನ ಸೃಷ್ಟಿಗೇ ಹೆದರಿ ಲೋಕವೆಲ್ಲಾ

ಸುತ್ತು ಹೊಡೆದವ ನಮಗೆ ದೇವರ೦ತೆ!

ಮಗಳನೇ ಮೋಹಿಸಿದ ಪ್ರಜಾಪಿತ ಬ್ರಹ್ಮ,

ನಮಗೆಲ್ಲಿಯ ಆದರ್ಶ?



ಗುಡಿಯಲ್ಲಿ ದೇವರಿಗೆ ಉಸಿರು

ನೀಡುವುದು ನಾವು.

ಕಾಪಾಡು ಎ೦ದು ಬೇಡುವುದೂ ನಾವೇ!

ಹೋಮ-ಹವನಗಳಿ೦ದ ವಿಗ್ರಹಕೆ

ಶಕ್ತಿ ನೀಡುವುದು ನಾವು!

ಕಷ್ಟಕಾಲದಲ್ಲಿ ಕರೆಯುವುದೂ ನಾವೇ!

ಬೇಕಾದಾಗ ಬರುವವರು ಯಾರು?

ದೇವರೋ-ನಾವೋ?

ದೇವರಿದ್ದರೆ ನಾವೋ? ನಾವಿದ್ದರೆ ದೇವರೋ?

ನಮಗೆ ದೇವರೇಕೆ?ನಾವೇ ದೇವರೇ?

ನಮಗೆ ನಾವೇ ಸಾಕೇ?

ಯಾರು ದೊಡ್ಡವರೆ೦ಬ ಪ್ರಶ್ನೆಗೆ

ಉತ್ತರ ಹುಡುಕುವುದು ಎಲ್ಲಿ?

No comments: