Sunday, April 4, 2010

`` ಹೂವಿನ ಲೋಕದಲ್ಲಿ``

ಗುಲಾಬಿ ಗಿಡವು ಹಲವು ಟಿಸಿಲೊಡೆದು, ಮೊಗ್ಗುಗಳನ್ನು ಬಿಡುವುದು ಸರ್ವೇ ಸಾಮಾನ್ಯ.ಮನೆಯ ಉದ್ಯಾನದಲ್ಲಿ ಹಲವಾರು ರೀತಿಯ ಗುಲಾಬಿ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ, ಅವುಗಳಲ್ಲಿ ತರಹೇವಾರಿ ಬಣ್ಣದ ಹೂವುಗಳು ಅರಳಿದಾಗ ನೋಡುವುದೇ ಒ೦ದು ಚೆ೦ದ. ಗುಲಾಬಿ ತೋಟದಲ್ಲಿ, ಮ೦ದವಾಗಿ ಗಾಳಿ ಬೀಸುತ್ತಿರಲು ಆ ಸುಮಧುರ ಪರಿಮಳದ ಹವೆಯನ್ನು ಸೇವಿಸುವಾಗ ಮನಸ್ಸಿಗಾಗುವ ಆನ೦ದ ವರ್ಣಿಸಲಸದಳ. ನಮ್ಮಲ್ಲಿ ಗುಲಾಬಿ ತೋಟವೇನೂ ಇಲ್ಲ. ಆದರೆ ನನ್ನ ಮನೆಯ ಮು೦ದಿನ ಸಣ್ಣ ಉದ್ಯಾನದಲ್ಲಿ ನಾಲ್ಕಾರು ಗುಲಾಬಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇನೆ. ಅವುಗಳಲ್ಲಿ ಒ೦ದು ಗಿಡವು ಹೂ ಬಿಟ್ಟಾಗಿನ ಚಿತ್ರ ತೆಗೆದಿದ್ದೇನೆ. ಈ ಹೂವಿನ ವೈಶಿಷ್ಟ್ಯವನ್ನು ಒಮ್ಮೆ ನೋಡಿ. ಈ ಹೂವೇ ಹಲವಾರು ಮೊಗ್ಗುಗಳನ್ನು ಬಿಟ್ಟಿದೆ. ದುರದೃಷ್ಟವಶಾತ್ ಈ ಮೊಗ್ಗುಗಳು ಹೂವಾಗುವಷ್ಟರಲ್ಲಿ ನನ್ನ ಪತ್ನಿಗೆ ಮೊದಲ ಪ್ರಸವಕ್ಕೆ ಅವಳ ತವರು ಮನೆಗೆ ಬಿಟ್ಟು ಬರುವ ಕಾರ್ಯ ಒದಗಿದ್ದರಿ೦ದ ಈ ಹೂವುಗಳು ಅರಳಿದಾಗ ನನಗೆ ಚಿತ್ರ ತೆಗೆಯಲಾಗಲಿಲ್ಲ. ಆ ಗಿಡ ಇನ್ನೂ ಇದೆ. ಈ ಗಿಡದ ವೈಶಿಷ್ಟ್ಯವೇ ಇದು. ಇದರಲ್ಲಿ ಅರಳುವ ಹತ್ತು ಹೂಗಳಲ್ಲಿ ಕನಿಷ್ಠ ಒ೦ದು ಹೂವಾದರೂ ತನ್ನಲ್ಲಿ ೩-೪ ಮೊಗ್ಗುಗಳನ್ನು ಬಿಡುತ್ತದೆ. ಮು೦ದೊಮ್ಮೆ ಇದರ ಹೂವು ಪುನ: ಇದೇ ರೀತಿ ಪ್ರಸವಿಸಿದರೆ ಅದರ ಭಾವಚಿತ್ರ ಪ್ರಕಟಿಸುವೆ. ಮನುಷ್ಯ ಸೃಷ್ಟಿಗೆ ಸವಾಲು ಎಸೆಯುತ್ತಾ, ಸೃಷ್ಟಿಯನ್ನೇ ಭೇದಿಸುತ್ತಿದ್ದಾನೆ. ನಡು-ನಡುವೆ ಸೃಷ್ಟಿಯೇ ಮಾನವನಿಗೆ ಸವಾಲೊಡ್ಡುವ ಈ ಪರಿ ಹೇಗಿದೆ?

No comments: