Sunday, May 10, 2015

ಮತ್ತೆ ಹಾಡಲಾಗದು ಸಖೀಗೀತ.....


( ದ.ರಾ.ಬೇ೦ದ್ರೆಯವರ ಸಖೀಗೀತ, ನಾಕುತ೦ತಿ ಹಾಗೂ ನೀ ಹಿ೦ಗ ನೋಡಬ್ಯಾಡ ನನ್ನ… ಇವುಗಳನ್ನು ಮನಸ್ಸಿನಲ್ಲಿ ನೆನೆಸಿಕೂ೦ಡ ಕವಿಯ ಕಲ್ಪನೆ ಈ ಸಖೀ ಗೀತ)

ಸಖೀ,
ನಾವು ಮತ್ತೆ ಹಾಡಲಾಗದು
ಎಂದಿನಂತೆ ತನ್ಮಯತೆಯಿಂದ
ನಿರ್ಮಲ ಸ್ನೇಹದ ಆ ಮಧುರಗಾನ..
ದೂರದಲ್ಲಿ ಎಲ್ಲೋ ಕೇಳಿ ಬರುತ್ತಿರುವ
ಅಪಸ್ವರವನ್ನು ಕೇಳಿಸಿಕೊಳ್ಳದಿರು ಎನ್ನುವ ಧೈರ್ಯ ನನ್ನಲಿಲ್ಲ...

ಸಖೀ,ಕಣ್ಮುಂದೆ  ಓಡಿ ಆಡಿದ ದಿನಗಳ ಸವಿನೆನಪುಗಳಿಗಿಂತಲು
 ಹೆಚ್ಚು ಕಾಡಿದ ನಿನ್ನ ಭವಿಷ್ಯ ಎಂಬ ಮೂರಕ್ಷರದ
ಬದುಕಿನ ಹಾದಿಗಾಗಿ ಹರಿದೇ ಹಾಕಿದೆಯಲ್ಲ
ಸ್ನೇಹ ವೀಣೆಯ ಉಳಿದಿದ್ದ ಆ ನಾಕೂತಂತಿಗಳನ್ನು..

ಇನ್ನು ಹಾಡು ಎಂದರೆ ನಾ ಹಾಡುವುದು ಹೇಗೆ?
ತಬಲವೆ ಜೊತೆಯಿಲ್ಲದ ಬರೀ ಗಾನಮೇಳದೊಳಗೆ.....

ಸಖೀ.... ನೀಡಿ ಹೋಗು ಕಾರಣ...
ನಿರ್ಮಲ ಸ್ನೇಹಕ್ಕೆ ನೀ ನೀಡಿದಾ ಮೌಲ್ಯವನು...
ತಿಳಿಸಿ ಹೋಗು ಜಗಕ್ಕೆ...ನಿನಗೀಗ ನನ್ನಿಂದ್ಯಾವ ಉಪಯೋಗವೂ ಇಲ್ಲವೆಂದು...
ಅಳಿಸಿ ಹಾಕಿದ ಸೀಮೆಸುಣ್ಣದ ಗೀರುಗಳ ಲೆಕ್ಕ ಹಾಕುವುದಿಲ್ಲ ಇನ್ನು...

ಮತ್ತೆ ಹಾಡಲಾಗದು ಸಖೀ ನಾವೆಂದಿಗೂ.
ನೀನಾಗಿ ಹರಿದು ಹಾಕಿದ ಆ ನಾಕು ತಂತಿಗಳ ಸೇರಿಸುವ ಆಸೆಯೇ ನನ್ನಲ್ಲಿ
ಉಳಿದಿಲ್ಲದಿರುವಾಗ ಮತ್ತೆ ಹೇಗೆ ಹಾಡುವುದು ಸಖಿ ಗೀತ?



No comments: