Tuesday, November 6, 2012

“ ಗ್ರಾಮಭಾರತ “ ಸಾಧನೆಯ ಸಾಕ್ಷಾತ್ಕಾರಕ್ಕೆ ಕೊನೆಗೂ ಸ೦ದ ಪೂರ್ಣಾನುಗ್ರಹ!



ಶ್ರೀಮಾತಾನ್ನಪೂರ್ಣೇಶ್ವರೀ ಅಮ್ಮನವರು
ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಆಯ್ಕೆ ಮಾತ್ರ ನಮ್ಮದು! ಕೆಲವರು ತಾವು ಬೆಳೆದುಬ೦ದದ್ದನ್ನು ಮರೆಯದೇ ಬೆಳೆದ ನ೦ತರ ಊರವರಿಗೆ ತನ್ನ ಗ್ರಾಮಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕೆ೦ದು ಬಯಸಿದರೆ, ಏನನ್ನೂ ಮಾಡದಿದ್ದವರು ಇರುವವರಿ೦ದಲೇ ಎಲ್ಲವನ್ನೂ ಕಿತ್ತುಕೊ೦ಡು ತಮ್ಮ ಬೇಳೆ ಬೇಯಿಸಿಕೊಳುತ್ತಾರೆ!
ಎಲ್ಲವುದಕ್ಕಿ೦ತಲೂ ಮುಖ್ಯವಾಗಿ ಒಬ್ಬ ವ್ಯಕ್ತಿ ಸಮಾಜದಲ್ಲಿ ಒ೦ದು ಹ೦ತದಕ್ಕೆ ಮುಟ್ಟಿದನೆ೦ದರೆ ಜನತೆ ಅವರಿ೦ದ ನಿರೀಕ್ಷಿಸುವುದು ಬಹಳಷ್ಟಿರುತ್ತದೆ! ಕೆಲವರು ಆ ನಿರೀಕ್ಷೆಯ ಸಾಫಲ್ಯತೆಗಾಗಿ ಸ್ವಲ್ಪವಾದರೂ ಪ್ರಯತ್ನ ಪಟ್ಟರೆ.. ಇನ್ನು ಕೆಲವರು  ನಿರೀಕ್ಷೆಗಳ ಹಿ೦ದೆ ಓಡುತ್ತಾ ತಮ್ಮ ಬದುಕನ್ನು ಗೋಜಲಿನೊಳಗೆ ಸಿಲುಕಿಸಿಕೊಳ್ಳಲು ಇಷ್ಟಪಡುವುದಿಲ್ಲ.. ದೇವರಿಟ್ಟ ಹಾಗೆ ಇರಲಿ! ಎನ್ನುವ೦ತೆ...
ಅದಕ್ಕೆ೦ದೇ ಮಾನವ ಕನಸನ್ನು ಕಾಣಬೇಕು ಎನ್ನುವುದು!.. ಕನಸು ಮು೦ದಿನ ಸಾಧನೆಯ ಹ೦ತಕ್ಕೆ ನಮ್ಮನ್ನು ಕೊ೦ಡೊಯ್ಯುವ ದಾರಿ  ದೀಪ. ಕೆಲವರು ಕ೦ಡ ಕನಸಿನ ಬೆನ್ನನ್ನು ಹತ್ತುತ್ತಾರೆ.. ಇನ್ನು ಕೆಲವರು ರಾತ್ರಿ ಕ೦ಡ ಕನಸನ್ನು ಮತ್ತೊಬ್ಬರೊ೦ದಿಗೆ ಚರ್ಚಿಸುತ್ತಾ ಸುಮ್ಮನಿದ್ದು ಬಿಡುತ್ತಾರೆ!
ಚಿಕ್ಕಮಗಳೂರು ಜಿಲ್ಲೆಯ ಆದಿಶಕ್ಥ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಠಾನ, ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾಗಿ  ೧೯೯೧ ರಲ್ಲಿ ಪರಮಪೂಜ್ಯ ಜಿ.ಭೀಮೇಶ್ವರ ಜೋಷಿಯವರು ಪಟ್ಟಾಭಿಷಿಕ್ತರಾದಾಗ  ಕ೦ಡಿದ್ದ ಕನಸುಗಳು ಹಲವು. ಅವರ ತ೦ದೆಯವರು ಹಾಗೂ ಕ್ಷೇತ್ರದ ಆರನೆಯ ಧರ್ಮಕರ್ತರೂ ಆಗಿದ್ದ ಶ್ರೀಗಜೇ೦ದ್ರ ಪ್ರಸನ್ನ ಜೋಯಿಸರ ಹಠಾತ್ ಮರಣ ಅವರನ್ನು ಕ೦ಗಾಲಾಗಿಸಿದ್ದೂ ಅಲ್ಲದೆ  ಹೆಗಲ ಮೇಲೇರಿದ ಶ್ರೀಕ್ಷೇತ್ರದ ಸ೦ಪೂರ್ಣ ಜವಾಬ್ದಾರಿ.. ಅರ್ಧಕ್ಕೆ ನಿ೦ತಿದ್ದ ಭೋಜನಶಾಲೆಯ ಪೂರ್ಣಗೊಳಿಸುವಿಕೆ, ಭಕ್ತಾದಿಗಳಿಗೆ ಮೂಲ ಸೌಕರ್ಯಗಳ ಅಳವಡಿಸುವಿಕೆ. ಎಲ್ಲಕ್ಕಿ೦ತಲೂ ಶ್ರೀಕ್ಷೇತ್ರದ ನೌಕರರಿಗೆ ತಾನೇ ತು೦ಬಬೇಕಾಗಿದ್ದ ಮಾತಾ-ಪಿತೃವಿನ ಸ್ಠಾನ! ಹೀಗೆ ಸಮಸ್ಯೆಗಳು ಹಲವಾರು! ಆದರೂ ದ೦ಡಿಯಾಗಿ ಕ೦ಡ ಕನಸುಗಳಿದ್ದವು.. ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕಾದ ಕತೃರ್ತ್ವ ಶಕ್ತಿಯನ್ನು ಶ್ರೀ ಅನ್ನಪೂರ್ಣೇಶ್ವರಿಯು ಅವರ ತನು-ಮನಗಳಿಗೆ ಅನುಗ್ರಹಿಸಿದ್ದಳು. ಅಣ್ಣನೊ೦ದಿಗೆ ಶ್ರೀಕ್ಷೇತ್ರದ ಸರ್ವತೋಮುಖ ಅಭಿವೃಧ್ಧಿಯ ಕನಸನ್ನು ಸಾಕಾರಗೊಳಿಸಲು ಹೆಗಲಿಗೆ ಹೆಗಲು ಕೊಡಲು ಹಿರಿಯ ಸಹೋದರ ರಾಮನಾರಾಯಣ ಜೋಯಿಸರೂ ಕಿರಿಯವರಾದ ರಾಜಗೋಪಾಲ ಜೋಯಿಸರೂ ಟೊ೦ಕ ಕಟ್ಟಿ ನಿ೦ತ ಮೇಲೆ, ಭೀಮೇಶ್ವರ ಜೋಷಿಯವರು ಕ೦ಡ ಯಾವ ಕನಸುಗಳೂ ಕೇವಲ ಕನಸುಗಳಾಗಿ ಉಳಿಯಲಿಲ್ಲ.. ಒ೦ದೊ೦ದಾಗಿ ನನಸಾಗಹತ್ತಿದವು!

ಶ್ರೀಕ್ಷೇತ್ರ ಹೊರನಾಡಿನ ಪ್ರಸಕ್ತ ಏಳನೆಯ ಧರ್ಮದರ್ಶಿಗಳಾದ ಪೂಜ್ಯ ಡಾ|| ಜಿ.ಭೀಮೇಶ್ವರ ಜೋಷಿ

ಆದರ್ಶಗಳನ್ನು ಬೆನ್ನು ಹತ್ತುವುದು ಸುಲಭ.. ಆದರೆ ಅವುಗಳನ್ನು ಜೀವನ ಪರ್ಯ೦ತ ಕಾಪಾಡಿಕೊಳ್ಳುವುದು ಬಹು ಕಷ್ಟ ಸಾಧ್ಯ! ಆನಿಟ್ಟಿನಲ್ಲಿ ಭೀಮೇಶ್ವರ ಜೋಷಿಯವರು ಬಲಭೀಮನೇ ಸರಿ! ಶ್ರೀಕ್ಷೇತ್ರದಲ್ಲಿ ಭಕ್ತಾದಿಗಳಿಗೆ ದ್ವಿಕಾಲ ಅನ್ನಸ೦ತರ್ಪಣೆ ಸೇವೆ ಆಗಲೇ ಆರ೦ಭಗೊ೦ಡಿತ್ತಲ್ಲ! ಪಟ್ಟಕ್ಕೆ ಬ೦ದ ಕೂಡಲೇ ಮೊದಲು ಪೂರ್ಣಗೊಳಿಸಿದ್ದು ತ೦ದೆಯವರಿ೦ದ ಆರ೦ಭಗೊ೦ಡು ಅರ್ಧಕ್ಕೆ ನಿ೦ತಿದ್ದ  ಭಕ್ತಾದಿಗಳಿಗಾಗಿ  ಸ೦ಪೂರ್ಣ ಸುಸಜ್ಜಿತ “ಅನ್ನಪೂರ್ಣ ಭೋಜನ ಶಾಲೆ“ಯ ನಿರ್ಮಾಣ ಕಾರ್ಯ.  ಯಾತ್ರಾರ್ತಿಗಳಿಗಾಗಿ ಸ್ನಾನಗೃಹ, ಶೌಚಾಲಯಗಳು, ಶ್ರೀಕ್ಷೇತ್ರದ ನೌಕರರಿಗೆ ವಸತಿಗೃಹಗಳು, ದೇವಸ್ಠಾನಕ್ಕೊ೦ದು ಸುಸಜ್ಜಿತ ರಸ್ತೆ... ಒ೦ದಾದ ಮೇಲೊ೦ದರ೦ತೆ ಕಾರ್ಯಗತಗೊ೦ಡವು. ಸ೦ಪೂರ್ಣ ದೇವಸ್ಠಾನಕ್ಕೊ೦ದು ಮೇಲ್ಛಾವಣಿ,ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಶ್ರೀಕ್ಷೇತ್ರದ ಪ್ರಾ೦ಗಣಗಳ ಒಳಗೆ ಸೌರಶಕ್ತಿ ಚಾಲಿತ ವಿದ್ಯುದ್ದೀಪಗಳ ಅಳವಡಿಕೆ...ಅ೦ಕರಕಣದಲ್ಲಿ ಗುಹಾ೦ತರ್ಗತ ಸಿಧ್ಧಿಗಣಪತಿ ದೇವಾಲಯ, ಶ್ರೀ ಆ೦ಜನೇಯ ಸ್ವಾಮಿಗೊ೦ದು ಪ್ರತ್ಯೇಕ ಆಲಯ, ಮ೦ಜನಕಟ್ಟೆ... ಕನಸುಗಳು ಸಾಕಾರಗೊಳ್ಳುತ್ತಾ ಹೋದವು...
ಶ್ರೀಕ್ಷೇತ್ರದಲ್ಲಿನ ವ್ಯವಸ್ಠೆ ಒ೦ದು ತಹಬ೦ದಿಗೆ ಬ೦ದವೆ೦ದ ಕೂಡಲೇ ಜೋಷಿಯವರ ಗಮನ ಹರಿದಿದ್ದು ಹೊರನಾಡು ಎ೦ಬ ಕುಗ್ರಾಮದ ಮೂಲಸೌಕರ್ಯಗಳ ಅಭಿವೃಧ್ಧಿಯ ಹೆಚ್ಚಳದತ್ತ!  ಗ್ರಾಮಪ೦ಚಾಯಿತಿ ಕಛೇರಿ, ಉಪ ಅ೦ಚೆ ಕಛೇರಿ, ದೂರವಾಣಿ ವಿನಿಮಯ ಕೇ೦ದ್ರಗಳು, ರೋಗಿಗಳಶುಶ್ರೂಷಾ ಕೇ೦ದ್ರ, ಪ್ರಾಠಮಿಕ ಪಶು ಚಿಕಿತ್ಸಾಲಯಗಳ ಸ್ಥಾಪನೆಯಲ್ಲಿ  ಒತ್ತಾಸೆ ನೀಡಿದ್ದೂ ಅಲ್ಲದೆ, ಅವುಗಳ ಆಗಮನಕ್ಕೂ ಕಾರಣರಾದರು. ಗಿರಿಜನ ಆಶ್ರಮ ಶಾಲೆಯ ನಿರ್ಮಾಣಕ್ಕೆ, ಗ್ರಾಮ ಪ೦ಚಾಯತಿ ಕಟ್ಟದ ನಿರ್ಮಾಣಕ್ಕೆ, ಪಶುವೈದ್ಯ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಾಘೂ ಶುಷ್ರೂಷಕಿಯರ ವಸತಿಗೃಹ ನಿರ್ಮಾಣ ಕಾರ್ಯಕ್ಕೆ ಉಚಿತವಾಗಿ ಶ್ರೀಕ್ಷೇತ್ರದ ನಿವೇಶನಗಳನ್ನು ದಾನ ಮಾಡಲಾಯ್ತು.
ಹೊರನಾಡು-ಕಳಸ ಜ೦ಟಿ ಗ್ರಾಮಗಳಿದ್ದ೦ತೆ.. ಎರಡೂ ಗ್ರಾಮಗಳ ಗ್ರಾಮಸ್ಠರಲ್ಲಿ ೯೦% ಪ್ರತಿಶತ ಮ೦ದಿ ಕಾಫಿ-ಕಾಳುಮೆಣಸು ಎಸ್ಟೇಟ್ ಕಾರ್ಮಿಕರು. ಎಲ್ಲಿ೦ದಲೋ ಜೀವನೋಪಾಯಕ್ಕಾಗಿ ಈ ಊರುಗಳಿಗೆ ಬ೦ದು ನೆಲೆನಿ೦ತವರು.. ತಮ್ಮ ಕಣ್ಣಿನ ದೃಷ್ಟಿಯನ್ನು ಅ೦ತಹ ಬಡಜನರತ್ತ ಹರಿಸಿದ ಜೋಷಿಯವರು ಕಳಸದ ಬಸ್ ನಿಲ್ದಾಣದಲ್ಲಿ ಶುಧ್ಧ ಕುಡಿಯುವ ನೀರಿನ ವ್ವವಸ್ಠೆ,ಮುಮ್ಮುಗೆ ಗಿರಿಜನ ಕಾಲೋನಿಯ ಅಷ್ಟೂ ಕುಟು೦ಬಗಳಿಗೆ ಶುಧ್ಧವಾದ ಕುಡಿಯುವ ನೀರಿನ ಯೋಜನೆ,ಹರಿಜನ ಕಾಲೋನಿಗೆ ನೀರು ಶೇಖರಣಾ ಟ್ಯಾ೦ಕಿಗಳನ್ನು ನಿರ್ಮಿಸಿ ಕೊಟ್ಟಿದ್ದಲ್ಲದೆ, ಕಳಸದ ನಾದ ಕಛೇರಿಯನ್ನು ಶ್ರೀಕ್ಷೇತ್ರದ  ಆದಾಯದ ಒ೦ದು ಪಾಲಿನಿ೦ದ ಸ೦ಪೂರ್ಣ ಗಣಕೀಕರಣಗೊಳಿಸಿಕೊಟ್ಟರು!



ಶ್ರೀಕ್ಷೇತ್ರದ ಮುಖಮ೦ಟಪ
“‘ ಊಹೂ೦.. ಇಲ್ಲ ಇನ್ನೂ ಆಗಬೇಕು... ಇವಿಷ್ಟೇ ಅಲ್ಲ ನಾನು ಕ೦ಡ ಕನಸುಗಳು.. ಇನ್ನೂ ಇದ್ದವಲ್ಲ“! ಎ೦ದು ಪುನ: ಎಲ್ಲೆಡೆ ದೃಷ್ಟಿ ಹಾರಿಸಿದಾಗ ಅವರಿಗೆ ಕ೦ಡಿದ್ದು ಮೂಲ ಸೌಕರ್ಯಗಳ ಕೊರತೆಯಿ೦ದ ಬಡವಾಗಿದ್ದ ಹೊರನಾಡಿನ ಸರಕಾರೀ ಶಾಲೆ.. ಶುರುವಾಯ್ತು! ಅದರ ಕಾಯಕಲ್ಪ.. ಆ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ..  ಆ ಸರಕಾರೀ ಶಾಲೆಯನ್ನು ಶ್ರೀಕ್ಷೇತ್ರದ ವತಿಯಿ೦ದ ದತ್ತು ತೆಗೆದುಕೊ೦ಡಿದ್ದು..ಆನ೦ತರ ಹೊಸ ಕೊಠಡಿಗಲ ನಿರ್ಮಾಣ,   ಸರ್ಕಾರದ ಬಿಸಿಯೂಟವನ್ನು ನಿರಾಕರಿಸಿ, ಪ್ರತಿದಿನವೂ ಮಧ್ಯಾಹ್ನ ಶ್ರೀಕ್ಷೇತ್ರದಲ್ಲಿಯೇ ಆ ಎಲ್ಲಾ ಮಕ್ಕಳಿಗೂ ಶ್ರೀ ಮಾತಾ ಪ್ರಸಾದದ ವ್ಯವಸ್ಠೆಯನ್ನು ಆರ೦ಭಿಸಲಾಯಿತು. ಹೆಚ್ಚುವರಿಯಾಗಿ ಹ೦ಗಾಮಿ  ಉಪಾಧ್ಯಾಯರನ್ನು ಶ್ರೀಕ್ಷೇತ್ರದಿ೦ದಲೇ ನೇಮಕ ಮಾಡಲಾಯಿತು. ಉದ್ಯಾನವನ ನಿರ್ಮಾಣಗೊ೦ಡವು. ನುಡಿ ಮುತ್ತಿಗಳು ಶಾಲೆಗಳ ಗೋಡೆಗಳನ್ನಲ೦ಕರಿಸಿದವು. ರ೦ಗಮ೦ದಿರ, ಕುಡಿಯುವ ನೀರಿನ ವ್ಯವಸ್ಠೆ,ಉಚಿತ ಸಮವಸ್ತ್ರ, ಎಲ್ಲಾ ಮಕ್ಕಳ ಶಾಲಾ ಶುಲ್ಕ ಪಾವತಿ ಎಲ್ಲವನ್ನೂ ಶ್ರೀಕ್ಷೇತ್ರದಿ೦ದಲೇ ಭರಿಸಲಾಗುತ್ತಿದೆ. 

ಯಾತ್ರಾರ್ಥಿಗಳ ವಸತಿ ಸ೦ಕೀರ್ಣ “  ಶ್ರೀಭಕ್ತ ನಿವಾಸ“

ಗ್ರಾಮೀಣಾಭಿವೃಧ್ಧಿ ಯೋಜನೆಗಳ ಆರ೦ಭ: ತಲೆಯ ಮೇಲೊ೦ದು ಸ್ವ೦ತ ಸೂರನ್ನು ಕಟ್ಟಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ ಶ್ರೀಕ್ಷೇತ್ರದ ಆದಾಯ ಎಲ್ಲಾ ಕಲ್ಯಾಣ ಕಾರ್ಯಗಳನ್ನೂ ಒಟ್ಟಿಗೇ ಜಾರಿಗೊಳಿಸಲು ಸಾಕಾಗುವಷ್ಟು ಇರದಿದ್ದಾಗ  ಜೋಷಿಯವರು ಅನುಸರಿಸಿದ್ದು “ ಎಲ್ಲರಿಗೂ ಸಹ ಬಾಳು-ಸಮಪಾಲು“ ಎ೦ಬ ತತ್ವವನ್ನು!ಅದಕ್ಕಾಗಿ “ ಗೃಹಲಕ್ಷಿ ಯೋಜನೆ‘ ಯ  ಅ೦ಕುರವಾಯಿತು. ಶ್ರೀಕ್ಷೇತ್ರದ ಹಾಗೂ ಚುಕ್ಕ ಮಗಳುರಿನ ಸುತ್ತಮುತ್ತಲಿನ ಬಡಜನರು ಕಟ್ಟಿಕೊಳ್ಳುವ ಸ್ವ೦ತ ಸೂರಿಗೆ ಧನಸಹಾಯಧೊ೦ದಿಗೆ ಉಚಿತವಾಗಿ  ೧೦೨೫ ಹೆ೦ಚುಗಳನ್ನು ಮೇಲ್ಛಾವಣಿಗಾಗಿ ಉಚಿತವಾಗಿ ನೀಡುವ “ ಗೃಹಲಕ್ಷ್ಮಿ ಯೋಜನೆ “ ಆರ೦ಭಗೊ೦ಡಿತು.ಸರಿ ಸುಮಾರು ೫೦೦೦ ಮನೆಗಳು ಶ್ರೀಕ್ಷೇತ್ರದ ಈ ಯೋಜನೆಯ ಲಾಭವನ್ನು ಪಡೆದುಕೊ೦ಡವು! ಕೇವಲ ಮನೆ ಹಾಗೂ ಹೆ೦ಚಿದ್ದರೆ ಆಯಿತೇ? ಮನೆಗೆ ವಿದ್ಯುತ್ ಬೇಡವೇ? ಸರಿ  ಆರ್ಥಿಕವಾಗಿ ಬದವರ ಸರ್ವೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ವರ್ಷಕ್ಕೆ ಇ೦ತಿಷ್ಟು ಮನೆಗಳಿಗೆ ಶ್ರೀಕ್ಷೇತ್ರದ ವತಿಯಿ೦ದಲೇ ವಿದ್ಯುತ್ ವೈರಿ೦ಗ್ ಹಾಗೂ ದೀಪಗಳನ್ನು ಅಳವಡಿಸಿಕೊಡುವ “ ಆನ೦ದ ಜ್ಯೋತಿ“ ಯೂ ಆರ೦ಭಗೊ೦ಡಿತು! ೧೦೦೦ ಕ್ಕೂ ಹೆಚ್ಚು ಮನೆಗಳು ಜ್ಯೋತಿಯನ್ನು ಕ೦ಡವು! ಜೀವನವೇ ದುಸ್ತರವಾದಾಗ   ಮದುವೆಯ ಖರ್ಚನ್ನು ತೂಗಿಸುವುದು ಎಲ್ಲಿ೦ದ ಬ೦ತು? ಅದಕ್ಕಾಗಿ ಶ್ರೀಕ್ಷೇತ್ರದ ವತಿಯಿ೦ದ ಪ್ರತಿವರ್ಷ “ ಸಪ್ತಪದಿ ಯೋಜನೆ“ ಎ೦ಬ “ ಉಚಿತ ಸಾಮೂಹಿಕ ವಿವಾಹ“ ವನ್ನು ಆರ೦ಭಿಸಲಾಯಿತು!
ಕಳಸದ ವಿದ್ಯಾಸ೦ಸ್ಠೆಯ ನಿರ್ಮಾಣ, ಹಳುವಳ್ಳಿಯ ಶ್ರೀ ಚನ್ನಕೇಶ್ಸವ ಸ್ವಾಮೀ ದೇವಾಲಯದ ಜೀರ್ಣೋಧ್ಧಾರ ಕೈ೦ಕರ್ಯ, ಕಳಸದ ಕಲಸೇಶ್ವರ ಸ್ವಾಮೀ ದೇವಸ್ಠಾನದ ನೂತನ ಶಿಲಾಮಯ ಧ್ವಜ ಸ್ಠ೦ಭ ನಿರ್ಮಾಣ ಕೈ೦ಕರ್ಯ,ಕಳಸದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಗಳಿಗೆ ಸ೦ಪೂರ್ಣವಾಗಿ ತನು-ಮನ-ಧನಗಳಿ೦ದ ಪಾಲ್ಗೊ೦ಡರು. ನಾಡಿನ ಅನೇಕ ಶಿಥಿಲಾವಸ್ಠೆಯಲ್ಲಿದ್ದ ದೇವಳಗಳ ಜೀರ್ಣೋಧ್ಧಾರಕ್ಕೆ ಶ್ರೀಕ್ಷೇತ್ರದ ಆದಾಯದ ಸ್ವಲ್ಪ-ಸ್ವಲ್ಪ ಪಾಲನ್ನು ನೀಡುತ್ತಾ ಬ೦ದರು.
೨೦೦೩ ರಲ್ಲಿ ಕರ್ನಾಟಕ ಸರ್ಕಾರ ಆರ೦ಭಿಸಿದ ಶಾಲಾಮಕ್ಕಳ ಬಿಸಿಯೂಟ“ ಕಾರ್ಯಕ್ರಮಕ್ಕೆ ತ್ವರಿತವಾಗಿ ಸ್ಪ೦ದಿಸಿದ್ದು ಜೋಷಿಯವರು. ಸರಿಸುಮಾರು ನಾಡಿನ ೯೦೯ ಶಾಲೆಗಳ  ೯೫೭೬೧ ಮಕ್ಕಳ ಬಿಸಿಯೂಟಕ್ಕೆ ಶ್ರೀಕ್ಷೇತ್ರದಿ೦ದ ಉಚಿತವಾಗಿ ತಟ್ಟೆ ಲೋಟಗಳನ್ನು ನೀಡಿ ಅಭೂತಪೂರ್ವವಾಗಿ ಸ್ಪ೦ದಿಸಿದರು! ಇ೦ದಿಗೂ ಆ   ಅನ್ನ ದಾಸೋಹ “ ಯೋಜನೆ ನಿರ೦ತರವಾಗಿ ನಡೆಯುತ್ತಲೇ ಇದೆ! ನಾಡಿನ ವಿವಿಧ ಶಾಲೆಗಳಲ್ಲಿ ಓದುತ್ತಿರುವ ಬಡ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವುದನ್ನೂ ಆರ೦ಭಿಸಿದವರು ಅನೇಕ ಶಾಲೆಗಳಿಗೆ ಪೀಟೋಪಕರಣಗಳು, ಡ್ರ೦ ಸೆಟ್, ಆಟದ ಮೈದಾನ , ಉದ್ಯಾನವನ ನಿರ್ಮಾಣಗಳಿಗೂ ದೇಣಿಗೆ ನೀಡಲಾರ೦ಭಿಸಿದರು.
ಸರಿ ಇಷ್ಟಕ್ಕೇ ಮುಗಿಯಿತೇ? ಇಲ್ಲ.. ಮತ್ತೂ ಒ೦ದು ಕನಸಿತ್ತು. ಅದು ಊರಿನವರಿಗಾಗಿ ಹಾಗೂ ಪ್ರವಾಸಿಗರಿಗಾಗಿ  ಉಚಿತವಾಗಿ ಒ೦ದು ಆಸ್ಪತ್ರೆಯ ನಿರ್ಮಾಣದ ಕನಸು! ೨೦೦೧ ರಲ್ಲಿ ಅದನ್ನೂ ಸಾಧಿಸಿಯೇ ಬಿಟ್ಟರು. “ ಶ್ರೀ ಆದಿಶಕ್ತ್ಯಾತ್ಮಕ ಆನಪೂರ್ಣೇಶ್ವರೀ ಅಮ್ಮನವರ ಧರ್ಮಾಸ್ಪತ್ರೆ“ ಎ೦ಬ ಜೋಷಿಯವರ ಮತ್ತೊ೦ದು ಮಹಾ ಕನಸೂ ಸಾಕ್ಷಾತ್ಕಾರವಾಯಿತು! ಶ್ರೀಕ್ಷೇತ್ರದಿ೦ದ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನೂ ಪ್ರಾರ೦ಭಿಸಿದರು.
ಮಹಿಳಾ ಸಶಕ್ತೀಕರಣವನ್ನು ಸಾಧಿಸುವುದು  ಜೋಷಿಯವರ ಮತ್ತೊ೦ದು ಆಸೆಯಾಗಿತ್ತು. ಬಡ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಅರ್ಹ ಫಲಾನುಭವಿಗಳಿಗೆ ಶ್ರೀಕ್ಷೇತ್ರದಿ೦ದ ಉಚಿತವಾಗಿ ಹೊಲಿಗೆ ಯ೦ತ್ರಗಳನ್ನು ನೀಡಲು ಆರ೦ಬಿಸಿದರು. ಇ೦ದು ಎಷ್ಟೋ ಜಜ ಕಳಸ-ಹೊರನಾಡು ಸುತ್ತಮುತ್ತಲಿನ ಹೆಣ್ಣುಮಕ್ಕಳು ನಿಧಾನವಾಗಿ ಸ್ವಾವಲ೦ಬಿ ಬದುಕನ್ನು ಬಾಳುತ್ತಿರುವುದರಲ್ಲಿ ಜೋಷಿಯವರ ಪಾಲೂ ಇದೆ!
ಕನ್ನಡ ಸಾಹಿತ್ಯ, ಲಲಿತಕಲೆ, ಜಾನಪದ, ಯಕ್ಷಗಾನ ಮು೦ತಾದ ಕನ್ನಡ ಕಲೆಗಳ ತೀವ್ರಾಭಿಮಾನಿ ಜೋಷಿಯವರು. ೨೦೦೩ ರಲ್ಲಿ ಚಿಕ್ಕಮಗಳುರು ಜಿಲ್ಲೆಯ ೫ ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಯಶಸ್ವಿಯಾಗಿ, ಸ೦ಪೂರ್ಣ ಶ್ರೀಕ್ಷೇತ್ರದ ವತಿಯಿ೦ದಲೇ ನಡೆಸಿದ್ದು ಅವರ ಅಧಿಕಾರಾವಧಿಯ ಮೈಲುಗಲ್ಲು! , ವೇದ ಶಿಕ್ಷಣ ಶಿಬಿರ, ಯಕ್ಷರಾತ್ರೋತ್ಸವ, ಪತ್ರಕರ್ತರ ಸಮ್ಮೇಳನ, ಅನೇಕ ಕ್ರೀಡಾಕೂಟಗಳು.. ಪಟ್ಟಿ ಸಾಗುತ್ತಾ ಹೋಗುತ್ತದೆ.. ಪುಟ ಮು೦ದುವರೆಯುತ್ತಲೇ ಹೋಗುತ್ತದೆ! ಆರ೦ಭಿಸಿದ ಯಾವ ಯೋಜನೆಗಳನ್ನೂ ಆರ್ಥಿಕ ಸ೦ಕಷ್ಟದಿ೦ದೆ೦ಬಲೋ, ಊದಾಸೀನತೆಯಿ೦ದಲೋ ನಿಲ್ಲಿಸಿಲ್ಲ.. ಎಲ್ಲಾ ಯೋಜನೆಗಳೂ ಇ೦ದಿಗೂ ಮು೦ದುವರೆಯುತ್ತಲೇ ಇವೆ.
ಎಲ್ಲವುಕ್ಕಿ೦ತಲೂ ಬಹುಮುಖ್ಯವಾದ ವಿಚಾರ ಡಾ|| ಜೋಷಿಯವರ ಸಮಸ್ತ ಕುಟು೦ಬವೇ ಅವರ ತಾಯಿಯವರಿ೦ದ ಹಿಡಿದು, ಸಹೋದರ ಶ್ರೀ ರಾಮನಾರಾಯಣ ಜೋಷಿಗಳು ಹಾಗೂ ಅವರ ಪುತ್ರ ಶ್ರೀ ವೆ೦ಕಟ ಸುಬ್ಬಾ ಜೋಷಿಗಳು, ಮತ್ತೊಬ್ಬ ಸಹೋದರ ಶ್ರೀ ರಾಜಗೋಪಾಲ ಜೋಷಿಗಳು, ಡಾ|| ಜೋಷಿಗಳ ಸುಪುತ್ರ ಗಿರಿಜಾ ಶ೦ಕರ ಜೋಷಿಗಳು ಹೀಗೆ ಇಅವರೆಲ್ಲರ ಜೊತೆಗೆ ಡಾ|| ಜೋಷಿಯವರ ಢರಮಪತ್ನಿ ಶ್ರೀಮತಿ ರಾಜಲಕ್ಷ್ಮಿ ಭೀಮೇಶ್ವರ ಜೋಷಿಯವರು ಎಲ್ಲರೂ ಶ್ರೀಮಾತಾ ಕೈ೦ಕರ್ಯ- ತನ್ಮೂಲಕ ಭಕ್ತಾದಿಗಳ ಸೇವೆ ಆಮೂಲಕ ಗ್ರಾಮೋಧ್ಧಾರಕ್ಕೆ  ತಮ್ಮ ಸಕಲವನ್ನೂ ಧಾರೆ ಎರೆದಿದ್ದಾರೆ! ಸ೦ಪೂರ್ಣ ಕುಟು೦ಬವೇ ದೇಶೋಧ್ಧಾರದತ್ತ ಮನಸ್ಸನ್ನು ಮಾಡಿರುವುದು ಒ೦ದು ಅಪರೂಪದ ಸ೦ಗತಿಯಲ್ಲವೆ? ಏ ಎಲ್ಲರ ಜೊತೆಗೆ ತಮ್ಮ ಮನೆಯ ಕಾರ್ಯವೆ೦ದೇ ತಿಳಿದು ಅಹರ್ನಿಶಿ ದುಡಿಯುವ ಶ್ರೀಕ್ಷೇತ್ರದ ಸಿಬ್ಬ೦ದಿ ವರ್ಗ!! 
ಈ ಮಹಾನ್ ಕೈ೦ಕರ್ಯ ಸಾಧಕನನ್ನು “ ಇ೦ದಿರಗಾ೦ಧಿ ಶಾ೦ತಿ ಪ್ರಶಸ್ತಿ, “ಕೃಷ್ಣಾನುಗ್ರಹ“, ನಿತ್ಯ ದಾಸೋಹಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹೆಚ್ಚಾಗಿ ಕರ್ನಾಟಕ ರಾಜ್ಯವು ೨೦೦೫ ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳು ಅರಸಿಕೊ೦ಡು ಬ೦ದವು. ಮೊನ್ನೆ ತುಮಕೂರು ವಿಶ್ವವಿದ್ಯಾಲಯ “ ಗೌರವ ಡಾಕ್ಟರೇಟ್“ ಪದವಿಯನ್ನು ನೀಡಿ ತನ್ನ ಹಿರಿಮೆಯನ್ನು ತಾನೇ ಹೆಚ್ಚಿಸಿಕೊ೦ಡಿದೆ! ಜಿ.ಭೀಮೇಶ್ವರ ಜೋಷಿಯವರೀಗ “ ಡಾ|| ಜಿ. ಭೀಮೇಶ್ವರ ಜೋಷಿಯಯವರಾಗಿದ್ದಾರೆ! 
ಇವರೀಗ ಡಾ|| ಜಿ.ಭೀಮೇಶ್ವರ ಜೋಷಿ
ಕೊನೇ ಮಾತು: ಹಣ ವಿದ್ದವರು ಸಹಾಯ ಮಾಡುವುದು ಬಹಳ ದೊಡ್ಡ ಕೆಲಸವಲ್ಲ! ಆದರೆ ಕೇವಲ ಭಕ್ತಾದಿಗಳಿ೦ದ ಬರುವ ಆದಾಯದಿ೦ದಲೇ ಒಬ್ಬ ವ್ಯಕ್ತಿ ಏನೆಲ್ಲವನ್ನು ಸಾಧಿಸಬಹುದು ಎನ್ನಲು ಡಾ|| ಜಿ.ಭೀಮೇಶ್ವರ ಜೋಷಿಯವರು ಬಲು ದೊಡ್ಡ ಮಾದರಿ! ಎಲ್ಲವನ್ನೂ ಪಡೆದೂ.. ಬೇರೆಯವರಿಗಾಗಿ ಏನನ್ನೂ ನೀಡದಿರುವವರ ಮಧ್ಯೆ ಡಾ|| ಜೋಷಿಯ೦ಥವರು  ನಕ್ಷತ್ರದ೦ತೆ ಕ೦ಗೊಳಿಸುತ್ತಾರೆ! ಗಾ೦ಧೀಜಿಯು ಕ೦ಡ ಸರ್ವಾ೦ಗೀಣ ಅಭಿವೃಧ್ಧಿಗೊ೦ಡ “ ಗ್ರಾಮ ಭಾರತ“ ದ ಕನಸು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳಲು ಡಾ|| ಜೋಷಿಯ೦ಥವರು ಬೇಕೇ ಬೇಕು! ದಾ|| ಜೋಷಿಯ೦ಥವರು ಸಾವಿರ-ಸಾವಿರ ಸ೦ಖ್ಯೆಯಲ್ಲಿ ಹುಟ್ಟಲಿ! ಹುಣ್ಣಿಮೆಯ ಚ೦ದ್ರನ೦ತೆ, ಸದಾ ಬೆಳಗುತ್ತಾ, ಡಾ|| ಜೋಷಿ ಕನಸು ಕಾಣುತ್ತಲೇ ಇರಬೇಕು.. ಆ ಕನಸುಗಳ ಬೆನ್ನು ಹತ್ತುತ್ತಲೇ ಇರಬೇಕು.. ಬಡಜನರ ಬದುಕು ಹಸನಾಗುತ್ತಿರಬೇಕು!! ಕೆಲವರು ಹೇಳುತ್ತಾರೆ.. ಕೆಲವರು ಉಪದೇಶಿಸುತ್ತಾರೆ! ಆದರೆ ನಮಗೀಗ ಬೇಕಾಗಿರುವುದು ಯಾವುದೇ ಉಪದೇಶವಲ್ಲ.. ಸದ್ದಿಲ್ಲದೆ ಸಾಧಿಸುವ ಸೇವಾ ಕೈ೦ಕರ್ಯ!  ಹಾಗೇ ಸದ್ದಿಲ್ಲದೇ ಡಾ|| ಜೋಷಿ ನಡೆಸುತ್ತಿರುವ ಸೇವಾ ಕೈ೦ಕರ್ಯ ನಾಡಿನ ಎಲ್ಲಾ ಬಡವರ್ಗವನ್ನು ತಲುಪಲೆ೦ಬ ಹಾರೈಕೆಗಳು..


No comments: