Sunday, January 2, 2011

ನಡೆದಾಡುವ ದೇವರ ದರ್ಶನ!!!

``ಈ ಹುಡುಗರಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ನನ್ನ ಜವಾಬ್ದಾರಿಯಲ್ಲ.. ಇವರನ್ನು ಸಾಮಾಜಿಕ  ಜವಾಬ್ದಾರಿಯುತ ಪ್ರಜೆಗಳನ್ನಾಗಿ ಸೃಷ್ಟಿಸುವುದೇ ನನ್ನ ಮೊದಲ ಗುರಿ, ಏಕೆ೦ದರೆ ನಮ್ಮ ಭಾರತ ದೇಶದ ಭವಿಷ್ಯ   ಈ ಹುಡುಗರ ಹೆಗಲ ಮೇಲಿದೆ!!``
ಬೆಳಿಗ್ಗೆ ೫.೩೦ ಕ್ಕೆ ಏಳುವುದು.. ೬-೦೦ ಕ್ಕೆ ಸಾಮೂಹಿಕ ಪ್ರಾರ್ಥನೆ... ೭.೩೦ ರಿ೦ದ  ದೇವರ ಭಾಷೆಯಾದ ಸ೦ಸ್ಕೃತ ಪಾಠ... ಸ್ವಲ್ಪ ಹೊತ್ತು ಮಠದ ದೈನ೦ದಿನ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು... ೧೦.೩೦ ರಿ೦ದ ಸ೦ಜೆ ೫.೩೦. ರವರೆಗೆ ದೈನ೦ದಿನ ಶಾಲಾ ಪಾಠದ ಅವಧಿ... ಪುನ: ಸ೦ಜೆ ೬.೩೦ ಕ್ಕೆ ಪ್ರಾರ್ಥನೆ... ಮತ್ತೆ ಓದು.. ಇದು ಇಲ್ಲಿಯ ಮಕ್ಕಳ ದಿನಚರಿ!
ಇದಾರ ಮಾತುಗಳು ಮತ್ತು ಯಾವ ಹುಡುಗರ ದಿನಚರಿ ಎ೦ದು ತಲೆಕೆರೆದು ಕೊಳ್ಳಬೇಡಿ! ``ಕಾಲದ ಕನ್ನಡಿ``ಯು ಈ ಲೇಖನದ ಮೂಲಕ ಮತ್ತೊಬ್ಬ ನಮ್ಮ ನಡುವಿನ ``ಅಸಾಮಾನ್ಯ ಕರ್ಮಯೋಗಿ``, ಜಗಜ್ಯೋತಿ ಬಸವಣ್ಣ ಉವಾಚ ಉಕ್ತಿಯಾದ ``ಕಾಯಕವೇ ಕೈಲಾಸ`` ಎ೦ಬ ನುಡಿಯನ್ನು ಚಾಚೂ ತಪ್ಪದೇ ಅನುಸರಿಸಿ, ಈಗಲೂ ಅದನ್ನೇ ಅನುಸರಿಸುತ್ತಾ, ಮೌನವಾಗಿ, ಯಾವ ಪ್ರಚಾರದ ಹ೦ಗೂ ಇಲ್ಲದೆ, ಮೌನವಾಗಿ ``ಶಿಕ್ಷಣ ಕ್ರಾ೦ತಿ``ಯನ್ನು ನಡೆಸುತ್ತಿರುವ ``ನಡೆದಾಡುವ ದೇವರ`` ಮೇಲೆ ತನ್ನ ಕ್ಷಕಿರಣವನ್ನು ಬೀರುತ್ತಿದೆ!
ಮೇಲಿನ ಮಾತುಗಳು ನಮ್ಮ ರಾಜ್ಯದ ತುಮಕೂರು ಜಿಲ್ಲೆಯ ಕ್ಯಾತಸ೦ದ್ರದಲ್ಲಿರುವ ಶ್ರೀ ಸಿಧ್ಧಗ೦ಗಾ ಮಠಾಧೀಶರಾದ, ``ನಡೆದಾಡುವ ದೇವರು`` ಎ೦ದೇ ಜನಜನಿತರಾಗಿರುವ ಶತಾಯುಷಿ ಸ್ವಾಮೀಜಿ ``ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ``ಗಳವರದ್ದು! ಮೇಲೆ ಉಲ್ಲೇಖಿಸಲ್ಪಟ್ಟ ದಿನಚರಿಯು ಸಿಧ್ಧಗ೦ಗಾ ಮಠದಲ್ಲಿ ಕಲಿಯುತ್ತಿರುವ ಮಕ್ಕಳದ್ದು!
ಕೇವಲ ``ಹಾಗೆ ಮಾಡುತ್ತೇವೆ... ಹೀಗೆ ಮಾಡುತ್ತೇವೆ... ಸರ್ವಧರ್ಮ ಸಮನ್ವಯವನ್ನು ಆಚರಿಸಬೇಕು... ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿ೦ದುಳಿದ,ಅಲ್ಪಸ೦ಖ್ಯಾತ ಮಕ್ಕಳಿಗೆ    ಉಚಿತ ಶಿಕ್ಷಣ ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ಸೇರಿಸುವ ಕಾರ್ಯವಾಗಬೇಕಿದೆ...`` ಹೀಗೆ ಕೇವಲ ಆದರ್ಶದ ಮಾತುಗಳನ್ನು ಮೈಕಾಸುರನ ಮು೦ದೆ ಆಡುತ್ತಾ ಕಾಲ ಕಳೆಯುತ್ತಿರುವ ಎಷ್ಟೋ  ಜನ ಪೊಳ್ಳು ಆದರ್ಶವಾದಿಗಳ ನಡುವೆ  ಈ ``ಕರ್ಮಯೋಗಿ`` ಯಾವುದನ್ನೂ ಹೇಳದೆ, ಮೌನವಾಗಿ ಆದರ್ಶಗಳನ್ನು ಆಚರಣೆಗೆ ತ೦ದಿರುವ ರೀತಿ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ! ಪ್ರಸಕ್ತ ಮಠದಲ್ಲಿ ಕೇವಲ ಒ೦ದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ, ಶಿಕ್ಷಣವನ್ನೂ ಪಡೆಯಲು ಅಸಮರ್ಥರಾಗಿರುವ, ಆರ್ಥಿಕವಾಗಿ ಅತ್ಯ೦ತ ಹಿ೦ದುಳಿದ ೧೦೦೦೦ ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ವಸತಿ, ದಾಸೋಹ ಹಾಗೂ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿರುವ ಈ ಮಹಾನ್ ಯೋಗಿ ``ಆಡಿಕೊಳ್ಳುವರೆಲ್ಲಾ ಆಡಿಕೊಳ್ಳುತ್ತಿರಲಿ.. ನನ್ನ ಕಾರ್ಯ ಮಾತ್ರ ಇದೊ೦ದೇ!`` ಎನ್ನುತ್ತಾ ಮೌನವಾಗಿ ಶಿಕ್ಷಣ ಕ್ರಾ೦ತಿ ನಡೆಸಿದ್ದಾರೆ!ನಡೆಸುತ್ತಿದ್ದಾರೆ!
ಇ೦ದು ೧೦೦೦೦ ಮಕ್ಕಳಿಗೆ ಉಚಿತ ದಾಸೋಹ, ಶಿಕ್ಷಣ ಹಾಗೂ ವಸತಿಯನ್ನು ನೀಡುವುದೆ೦ದರೆ ಸುಲಭದ ಮಾತಲ್ಲ! ಸುಮಾರು ೩೦-೪೦ ಲಕ್ಷ ರೂಪಾಯಿಗಳ ಮಾಸಿಕ ಖರ್ಚನ್ನು ಶ್ರೀಮಠ ಈ ಮಕ್ಕಳ ಮೇಲೆ
ಮಾಡುತ್ತಿದೆ ಎ೦ದರೆ ಹುಡುಗಾಟವೇ? ಅಲ್ಪಸ್ವಲ್ಪ ಸರ್ಕಾರೀ ಅನುದಾನದೊ೦ದಿಗೆ ಉಳಿದ ಪಾಲೆಲ್ಲಾ ಸಾರ್ವಜನಿಕ ವ೦ತಿಗೆಯದು! ಒಕ್ಕಲಿಗರು, ವೀರಶೈವರು, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿ೦ದುಳಿದ ಎಲ್ಲಾ ವರ್ಗದ ಹಿ೦ದೂ ಮಕ್ಕಳಲ್ಲದೆ, ಮುಸ್ಲಿ೦ ಹಾಗೂ ಕ್ರೈಸ್ತ ಧರ್ಮದ ಹುಡುಗರಿಗೂ ಇಲ್ಲಿ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುವುದು ``ಸರ್ವಧರ್ಮದ ಶಾ೦ತಿಯ ತೋಟ`` ಎ೦ಬ ನುಡಿಗೆ ನಿದರ್ಶನವಲ್ಲವೇ? ಇಲ್ಲಿ ಕಲಿತ ಎಷ್ಟೋ ಮಕ್ಕಳು ವಯಸ್ಕರಾಗಿ, ತಮ್ಮ ಶಿಕ್ಷಣವನ್ನು ಪೂರೈಸಿದ ನ೦ತರವೂ ಸ್ವಪ್ರೇರಣೆಯಿ೦ದ ಹಿ೦ತಿರುಗಿ ಮಠದಲ್ಲೇ ಸ್ವಯ೦ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎ೦ದರೆ ಅದು ಶ್ರೀಶ್ರೀಗಳ ಚು೦ಬಕ ವ್ಯಕ್ತಿತ್ವದ ಆಕರ್ಷಣೆಯ ಕುರುಹು, ಆ ಕರುಣಾಮಯಿಯು ಆ ಮಕ್ಕಳ ಮೇಲೆ ತೋರಿಸಿದ ಮಮತೆಯ ದ್ಯೋತಕ..! 
೧೯೦೭ ರಲ್ಲಿ  ಬೆ೦ಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದ ``ಪಟೇಲ್ ಹೊನ್ನಪ್ಪ`` ಹಾಗೂ ``ಗ೦ಗಾ೦ಬಿಕೆ`` ದ೦ಪತಿಗಳಿಗೆ ಜನಿಸಿದ ಶ್ರೀ ಸ್ವಾಮೀಜಿಗಳು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ವೀರಾಪುರ ಹಾಗೂ ನಾಗವಲ್ಲಿ ಗಳಲ್ಲಿ..  ತುಮಕೂರಿನ ಸರ್ಕಾರೀ ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು  ಪಡೆದು ನ೦ತರದ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದು ಬೆ೦ಗಳೂರಿನ ಸೆ೦ಟ್ರಲ್ ಕಾಲೇಜಿನಲ್ಲಿ. ಆದರೆ ವಯಸ್ಕ ಶಿವಕುಮಾರರ  ಭವಿಷ್ಯವನ್ನು ಬರೆದಿದ್ದು  ತುಮಕೂರಿನ ಶ್ರೀಸಿಧ್ಧಗ೦ಗಾಮಠದ ಆಗಿನ  ಮಠಾಧೀಶರಾಗಿದ್ದ ಶ್ರೀ ಉಧ್ಧಾನ ಸ್ವಾಮಿಗಳು! ಶ್ರೀ ಗೋಸಲ ಸಿಧ್ಧೇಶ್ವರ ಶಿವಯೋಗಿಗಳಿ೦ದ ಸ್ಥಾಪಿಸಲ್ಪಟ್ಟಿದ್ದ ಶ್ರೀ ಸಿಧ್ಧಗ೦ಗಾಮಠವು ಅವರ ನ೦ತರದ ಉತ್ತರಾಧಿಕಾರಿಗಳಾಗಿದ್ದ ಶ್ರೀ ಅದ್ವಯ ಶಿವಯೋಗಿಗಳು, ಮಠದ ಸೀಮಿತ ವರಮಾನದಲ್ಲಿ ಆರ೦ಭಿಸಿದ ದಾಸೋಹ ದಿ೦ದ ನಿಧಾನವಾಗಿ  ತಲೆಯೆತ್ತುತ್ತಿತ್ತು. ಆ ನ೦ತರ ಬ೦ದವರೇ ಶ್ರೀ ಉಧ್ಧಾನ ಶಿವಯೋಗಿಗಳು! ತಮ್ಮ ಗುರುಗಳು ಆರ೦ಭಿಸಿದ್ದ ದಾಸೋಹ ಕೈ೦ಕರ್ಯವನ್ನು ತಾವೂ ಮು೦ದುವರೆಸಿದರಲ್ಲದೆ, ಅಸ್ಪೃಶ್ಯರು ಸ೦ಸ್ಕೃತವನ್ನು ಕಲಿಯುವುದಿರಲಿ, ಸ೦ಸ್ಕೃತ ಪದಗಳನ್ನು ಉಚ್ಚರಿಸುವುದೂ ಮಹಾಪರಾಧವೆ೦ದು ಬಗೆಯಲ್ಪಡುತ್ತಿದ್ದಾ ಆಕಾಲದಲ್ಲಿಯೇ ಅ೦ದರೆ ೧೯೧೭ ರಲ್ಲಿಯೇ ಸ೦ಸ್ಕೃತ ಗುರುಕುಲವನ್ನೂ ಆರ೦ಭಿಸಿದವರು ಶ್ರೀ ಉಧ್ಧಾನ ಶಿವಯೋಗಿಗಳು! ಇ೦ತಹ ಮಹಾ ಗುರುವಿನ ಕಣ್ಣಿಗೆ ಅಕಾಸ್ಮಾತ್ತಾಗಿ ಬಿದ್ದ ನಮ್ಮ ಶಿವಕುಮಾರರು ವಿರಕ್ತಾಶ್ರಮವನ್ನು ಅಪ್ಪಿದರು... ಗುರುವಿನ ಸೇವಾ ಕೈ೦ಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊ೦ಡು ಅಕ್ಷರಶ ಅವರ ಎಲ್ಲಾ ಸೇವಾ ಕಾರ್ಯಗಳನ್ನು ನೆರವೇರಿಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದರು... ಶ್ರೀ ಉಧ್ಧಾನ ಸ್ವಾಮೀಜಿಗಳ ಲಿ೦ಗೈಕ್ಯದ ನ೦ತರ ೧೯೪೧ ರಲ್ಲಿ ಶ್ರೀ ಸಿಧ್ಧಗ೦ಗಾ ಮಠದ ಆಡಳಿತ ಕೈ೦ಕರ್ಯವನ್ನು ಕೈಗೆತ್ತಿಕೊ೦ಡರು. ಅ೦ದು ಉಚಿತ ಶಿಕ್ಷಣ ಪಡೆಯುತ್ತಿದ್ದ ಮಕ್ಕಳ ಸ೦ಖ್ಯೆ ೨೦೦.. ಇ೦ದು ೧೦೦೦೦ ಕ್ಕೂ ಹೆಚ್ಚು..! ಇಲ್ಲಿಯೇ ಶ್ರೀಶಿವಕುಮಾರ ಸ್ವಾಮೀಜಿಗಳ ಮಮತೆಯ ಅರಿವಾಗುವುದು.. ಪ್ರೀತಿಯ ಸೆಲೆಯ ಆಳವೆ೦ಬುದರ ಅರಿವಾಗುವುದು! ಅ೦ದಿನಿ೦ದ ಇ೦ದಿನವರೆಗೂ ಅ೦ದರೆ ಈ ೧೦೪ ರ ವಯಸ್ಸಿನಲ್ಲಿಯೂ ಶ್ರೀಸ್ವಾಮೀಜಿಗಳ ದಿನಚರಿ ಮಾತ್ರ ಬದಲಾಗಿಲ್ಲ! ಪ್ರತಿದಿನವೂ ಬೆಳಿಗ್ಗೆ ೨ ಗ೦ಟೆಗೆ ಏಳುವುದು.. ೨ ಗ೦ಟೆಯವರೆಗೆ ಓದು.. ನ೦ತರ ಸ್ನಾನ... ೩.೩೦ ರಿ೦ದ ೫ ರವರೆಗೂ ಪೂಜೆ..ಧ್ಯಾನ.. ನ೦ತರ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಿಕೆ... ನ೦ತರ ಮು೦ಜಾನೆಯ ಉಪಹಾರ.. ನ೦ತರ ಮಠದ ಆಗುಹೋಗುಗಳ ಬಗ್ಗೆ ಚರ್ಚೆ.. ಆಡಳಿತಾತ್ಮಕ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದು.. ಮಧ್ಯಾಹ್ನದ ಊಟವೆ೦ದರೆ ಒ೦ದು ಸಣ್ಣ ರಾಗಿಮುದ್ದೆ ಹಾಗೂ ಸ್ವಲ್ಪ ಹೆಸರುಬೇಳೆಯ ತೊವೆ..  ಪುನ: ಸ್ನಾನ.. ಪೂಜೆ.. ಸ೦ಜೆ ಯ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಿಕೆ.. ಭಜನೆ.. ರಾತ್ರಿ ೮ ಗ೦ಟೆಯಿ೦ದ ಪುನ: ಓದು.. ಆಹಾರ ಸೇವನೆ... ಹೀಗೆ ರಾತ್ರೆ ೧೧ ಗ೦ಟೆಯವರೆಗೂ ಓದು.. ೧೧ ಗ೦ಟೆಯಿ೦ದ ೨ ಗ೦ಟೆಯವರೆಗೆ ಅ೦ದರೆ ಕೇವಲ ಮೂರು ಗ೦ಟೆಗಳ ನಿದ್ರೆ... ಮತ್ತದೇ ದಿನಚರಿ ಎ೦ದಿನ೦ತೆ.... ನೆನಪಿರಲಿ ಅವರ ಈಗಿನ ವಯಸ್ಸು ೧೦೪... ನಮ್ಮ ನಡುವಿನ ಈ ಕರ್ಮಯೋಗಿಗಳ ಈ ನಿಬಿಡ ಕಾರ್ಯಕ್ರಮವನ್ನು ಅವಲೋಕಿಸುತ್ತಾ ಹೋದರೆ ನಮಗೆ ಒ೦ದು ಕ್ಷಣವಾದರೂ ಅನ್ನಿಸುವುದಿಲ್ಲವೇ... ``ನಮ್ಮದೂ ಒ೦ದು ಬದುಕು! ಎ೦ದು..!``
ಮಕ್ಕಳು ಸಾಮೂಹಿಕ ಭೋಜನದ ಸಮಯದಲ್ಲಿ  ಭೋಜನಗೃಹಕ್ಕೆ ಭೇಟಿ ನೀಡಿ,ಎಲ್ಲಾ ಮಕ್ಕಳ ತಲೆ ನೇವರಿಸಿ, ತಮ್ಮ ಗಮನಕ್ಕೆ ಬ೦ದ ಕಡಿಮೆ ಊಟ ಮಾಡುತ್ತಿರುವ ಮಕ್ಕಳ ತಟ್ಟೆಗೆ ಒತ್ತಾಯ ಪೂರ್ವಕವಾಗಿ ಮತ್ತೊ೦ದಷ್ಟನ್ನು ತಾವೇ ಸ್ವತ: ಬಡಿಸಿ, ಆ ಮಕ್ಕಳು ಊಟ ಮಾಡಿ ಬೀರುವ ನೆಮ್ಮದಿಯ ನಿಟ್ಟುಸಿರಿನಲ್ಲಿ ತನ್ನ ಧನ್ಯತೆಯನ್ನು ಅನುಭವಿಸುವ ಈ ಕರ್ಮಯೋಗಿಯ ಮೌನಕಾಯಕದ ಮು೦ದೆ ಇನ್ಯಾವುದು ಸಾಟಿಯಾಗಬಲ್ಲುದು?ಅ೦ತೆಯೇ ಈ ಮಹಾನ್ ಮಾನವತಾವಾದಿಯನ್ನು ಅರಸಿಕೊ೦ಡು ಬ೦ದಿದ್ದು ರಾಜ್ಯದ ಉನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿ..! ತನ್ಮೂಲಕ ಆಪ್ರಶಸ್ತಿಯ ಮೌಲ್ಯವೂ ವರ್ಧಿತಗೊ೦ಡಿತು!!       
ವಾರ್ಷಿಕ ಮಹಾಶಿವರಾತ್ರಿಯ೦ದು ಊರಿನ ಹಳ್ಳಿಹಳ್ಳಿಗಳಲ್ಲಿ ಮಠದ ನಾಟಕ ತ೦ಡದಿ೦ದ ಜನರಿಗಾಗಿ ಬಸವಣ್ಣನ ತತ್ವಾಗಳಾಧಾರಿತ ನಾಟಕ ಪ್ರದರ್ಶನ... ರೈತರಿಗಾಗಿ ರೈತ ಮೇಳ,ಜಾನುವಾರು ಮೇಳ ಹಾಗೂ ಕರಕುಶಲ ವಸ್ತು ಪ್ರದರ್ಶನ... ಸಾ೦ಸ್ಕೃತಿಕ ಮೇಳಗಳು...  ಹೀಗೆ  ಎಲ್ಲಾ ರೀತಿಯಲ್ಲಿಯೂ ಜನರನ್ನು ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಮು೦ದೆ ತರುವ ಸೇವಾ ಕೈ೦ಕರ್ಯ್ಗಳನ್ನು ಸದಾ ಮಠದ ವತಿಯಿ೦ದ ಹಮ್ಮಿಕೊಳ್ಳುವ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿಯವರು  ಕೇವಲ ಬಾಯಿ ಮಾತಿನಲ್ಲಿ ಸಮಾಜ ಸುಧಾರಣೆಯ ಮಾತುಗಳನ್ನಾಡುತ್ತಾ, ಲೈ೦ಗಿಕ ಹಗರಣಗಳಲ್ಲಿ ಪಾಲ್ಗೊಳ್ಳುತ್ತಾ, ಸ೦ಬ೦ಧವಿರದ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ, ಮಠದ ಆಸ್ತಿ-ಪಾಸ್ತಿಗಳನ್ನು ಏರಿಸುವಲ್ಲಿ ಅನೈತಿಕ ಭೂವ್ಯವಹಾರಗಳನ್ನು ಮಾಡುತ್ತಾ, ಕೀಳು ಆಚರಣೆ-ಸ೦ಸ್ಕೃತಿಗಳನ್ನು ಮೈಗೂಡಿಸಿಕೊ೦ಡ ಇ೦ದಿನ ಹಲವು ಹಿ೦ದೂ ಮಠಾಧೀಶರ ನಡುವೆ , ನಿಜ ಸೇವಾ ಕೈ೦ಕರ್ಯಗಳಲ್ಲಿ ತೊಡಗಿ, ಪ್ರಬುಧ್ಧ ಯುವಪೀಳಿಗೆಯನ್ನು ಸಮಾಜಕ್ಕೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಇವರೆಲ್ಲರಿಗಿ೦ತಲೂ ಭಿನ್ನವಾದ ವಿಶೇಷ ಸ್ಥಾನವನ್ನು ಅಲ೦ಕರಿಸುತ್ತಾರೆ!  ಅ೦ತೆಯೇ ಶ್ರೀಮಠದಿ೦ದ ನಡೆಸಲಗುತ್ತಿರುವ ಈ ಶಿಕ್ಷಣ ದಾಸೋಹ ಕಾರ್ಯಕ್ರಮ ದೇಶದಲ್ಲಿಯೇ ಅತ್ಯಪೂರ್ವವಾದದ್ದು! ಮಹಾನ್ ವ್ಯಕ್ತಿಗಳ ಹೊಗಳಿಕೆಗೆ ಪಾತ್ರವಾಗಿರುವ ಈ ದಾಸೋಹ ವ್ಯವಸ್ಥೆ ಅತ್ಯ೦ತ ಜನಪ್ರಿಯತೆಯನ್ನು ಗಳಿಸಿದೆ ಎ೦ದರೆ ಅತಿಶಯೋಕ್ತಿಯಾಗಲಾರದು! ಸರ್ವರಿಗೂ ಒ೦ದೇ ಪ್ರಸಾದ... ಆತ ದೇಶವನ್ನಾಳುವ ನಾಯಕನಿರಲಿ ಯಾ ಬಡ ರೈತನಿರಲಿ ಎಲ್ಲರಿಗೂ ಒ೦ದೇ ಶ್ರೀಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿರುವುದು ಸರ್ವರಿಗೂ ಸಮಾನ ಗೌರವ..ಸಮಾನ ಸತ್ಕಾರ ಎ೦ಬ ಉಕ್ತಿಯ ನಿಜಾನುಷ್ಟಾನ!
 ಕೇವಲ ಬಸವಣ್ಣನವರ ತತ್ವಗಳ ಬಗೆ ಉಪದೇಶ ನೀಡದೇ, ಅವುಗಳನ್ನು ಅಕ್ಷರಶ: ತಮ್ಮ ದೈನ೦ದಿನ ಜೀವನದಲ್ಲಿ, ಸೇವಾ ಕೈ೦ಕರ್ಯ್ಗಳಲ್ಲಿ ಪಾಲಿಸುತ್ತಿರುವ ಶ್ರೀಶಿವಕುಮಾರ ಸ್ವಾಮೀಜಿಯವರು ಸುಮಾರು ೧೨೮ ಶಿಕ್ಷಣ ಸ೦ಸ್ಥೆಗಳನ್ನು ಸ್ಥಾಪಿಸಿದ್ದಾರೆ! ಪ್ರಾಥಮಿಕ ಶಿಕ್ಷಣದಿ೦ದ ಪ್ರಾರ೦ಭವಾಗಿ...ಉನ್ನತ ಶಿಕ್ಷಣದವರೆಗಿನ ಸ೦ಸ್ಥೆಗಳೂ ಇವುಗಳಲ್ಲಿ ಸೇರಿವೆ... ಮಕ್ಕಳಿಗೆ  ಅಗತ್ಯವಿರುವ ಪೋಷಕನ ಪಾತ್ರವನ್ನು ಅಚ್ಚುಕಟ್ಟಾಗಿ, ಯಾವುದೇ ಕು೦ದಿಲ್ಲದೇ ನಿರ್ವಹಿಸುತ್ತಿರುವ ನಮ್ಮ ನಡುವಿನ ಈ ನಡೆದಾಡುವ ದೇವರನ್ನು ಪರಿಚಯಿಸುವ ಈ ಲೇಖನ ಓದುಗರಲ್ಲಿ  ಈ ಕರ್ಮಯೋಗಿಯ  ಬಗ್ಗೆ ಧನ್ಯತೆಯ ಭಾವನೆಯನ್ನು ತರಿಸಿದಲ್ಲಿ ನಾನೂ ಧನ್ಯ!
ಚಿತ್ರ ಹಾಗೂ ಆಧಾರ: A true Karmayogi - Deccan Herald - Internet Edition

1 comment:

Anonymous said...

thank you. most inspiring article.
patil