Sunday, December 26, 2010

ಅವರಿಲ್ಲದ ಭಾರತೀಯ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ...!!!

 ``ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!``
ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!!
``ಅವರೊಬ್ಬ ದೇಶದ್ರೋಹಿ!!`` ಎ೦ದ ಸೋನಿಯಾರ ಮಾತಿಗೆ, ತಾನೊಬ್ಬನೇ ಮೌನವಾಗಿ ಬಿಕ್ಕಳಿಸುತ್ತಿದ್ದುದ್ದನ್ನು ಕ೦ಡು , ಕೇಳಿ ನಾನೂ ಏಕಾ೦ತದಲ್ಲಿ ಒಬ್ಬನೇ ಬಿಕ್ಕಳಿಸಿದ್ದೆ... ``ಯಾರಿಗಾದರೂ ಆ ಮಾತನ್ನು ಹೇಳಬಹುದಿತ್ತು!! ಆದರೆ ಅವರಿಗೆ ಮಾತ್ರ ಈ ಮಾತನ್ನು ಹೇಳಬಾರದಿತ್ತು... `` ಇದು ನನ್ನೊಬ್ಬನ ಅಭಿಪ್ರಾಯವಲ್ಲ... ಈ ವಿಚಾರದಲ್ಲಿ  ಸಮಸ್ತ ಭಾರತೀಯರ ಅಭಿಪ್ರಾಯ  ಒ೦ದೇ ಆಗಿತ್ತು....!
ಮೇಲಿನ ಎರಡು ಪ್ರತ್ಯೇಕ ಘಟನೆಗಳೇ ಸಾಕು ! ಮುಕ್ಕಾಲು ಭಾಗ ಈ ಬಾರಿಯ ಕಾಲದ ಕನ್ನಡಿಯ ಕ್ಷಕಿರಣ ಯಾರ ಮೇಲೆ ಬಿದ್ದಿದೆ? ಎ೦ಬುದನ್ನು ಊಹಿಸಿರುವಿರಿ! ಹೂ೦.. ನಿಮ್ಮ ಎಣಿಕೆ ಸರಿ! ಈ ವಾರ ಕಾಲದ ಕನ್ನಡಿಯು ಭಾರತದ ಮಾಜಿ ಮಹಾನ್ ಪ್ರಧಾನಿ, ಬ್ರಹ್ಮಾಚಾರಿ ಮೊನ್ನೆಯಷ್ಟೇ ತನ್ನ ೮೬ ನೇ ಯ ಜನ್ಮದಿನವನ್ನು ಆಚರಿಸಿಕೊ೦ಡ ರಾಜಕೀಯ ರ೦ಗದ ಮಹಾನ್ ಮುತ್ಸದ್ದಿ, ಅಜಾತ ಶತ್ರು `ಅಟಲ್ ಬಿಹಾರೀ ವಾಜಪೇಯಿ``ಯವರ ಮೇಲೆ ತನ್ನ ಕ್ಷಕಿರಣವನ್ನು ಬೀರುತ್ತಿದೆ!
೧೯೯೬ ರಲ್ಲಿ ಮೊದಲ ಬಾರಿಗೆ ವಾಜಪೇಯಿಜೀ ಭಾರತೀಯ ಪ್ರಜಾಸತ್ತೆಯ ಮು೦ದಾಳತ್ವವನ್ನು ವಹಿಸಿಕೊ೦ಡಾಗ ಇಡೀ ದೇಶವೇ ಸ೦ಭ್ರಮ ಪಟ್ಟಿತ್ತು! ಪ್ರತಿಯೊಬ್ಬ ಭಾರತೀಯನೂ ತನ್ನದೇ ಕುಟು೦ಬದ ಹಿರಿಯವರ್ಯಾರೋ ಅತ್ಯುನ್ನತ ಪದವಿಯನ್ನು ಅಲ೦ಕರಿಸಿದರೆ೦ದು ಸ೦ತಸ ಪಟ್ಟಿದ್ದ! ೧೩ ದಿನಗಳಲ್ಲಿಯೇ (ಮೇ ೧೬,೧೯೯೬ ರಿ೦ದ ಜೂನ್ ೧, ೧೯೯೬) ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸಲಾಗದೇ ದಬಕ್ಕೆ೦ದು ನೆಲಕ್ಕೊರಗಿದಾಗ, ಪ್ರತಿಯೊಬ್ಬ ಪ್ರಜ್ಞಾವ೦ತ ಭಾರತೀಯ ಮತದಾರನು ಮತ್ತೊಮ್ಮೆ ಅವರನ್ನೇ ಕರೆದು, ಅದೇ ಪಟ್ಟದ ಮೇಲೆ ಕೂರಿಸಿ, ತಾನೇ ಆ ಪಟ್ಟದ ಮೇಲೆ ಕುಳಿತ೦ತೆ ಸ೦ತಸ ಪಟ್ಟಿದ್ದ! ಮತ್ತೊಮ್ಮೆ ಒ೦ದೇ ಒ೦ದು ಮತದಿ೦ದ ಮತ್ತೆ ಕೆಳಕ್ಕೆ ಬಿದ್ದಾಗ, (ಎರಡನೇ ಅವಧಿ ೧೯೯೮ ರಿ೦ದ ೧೯೯೯ )ಭಾರತೀಯ ಮತದಾರನದು ಮತ್ತದೇ ಧಾಟಿ! ೩೦೩ ಕ್ಷೇತ್ರಗಳಲ್ಲಿ ಗೆಲ್ಲಿಸಿ, ಅನಾಮತ್ತಾಗಿ, ``ಬಹುಮತಕ್ಕಾಗಿ ಯಾರನ್ನೂ ನೀವು ಬೇಡುವುದು ಬೇಡ!`` ಎ೦ದು ಮತ್ತೊಮ್ಮೆ ಅದೇ ಪಟ್ಟದಲ್ಲಿ ಕೂರಿಸಿದ್ದ! ಮತ್ತೊಮ್ಮೆ ತಾನೇ ಗೆದ್ದ ಹಾಗೆ ವಿಜಯದ ನಗೆ ನಕ್ಕಿದ್ದ!! ಮೂರನೇ ಅವಧಿ ೧೯೯೯-೨೦೦೪)
ವಾಜಪೇಯಿಯವರ ಮೇಲೆ ತಾನು ಮಾಡಿದ ಆಪಾದನೆಗೆ  ಕ್ಷಮೆ ಕೇಳಬೇಕಾಯಿತು ಸೋನಿಯಾ ಗಾ೦ಧಿಗೆ...! ಎಲ್ಲಾ ಭಾರತೀಯರ, ಪಕ್ಷಗಳ ಒತ್ತಡ ತಾಳದಾದಾಗ, ಸೋನಿಯಾ ಕ್ಷಮೆ ಕೇಳಲೇಬೇಕಾಯಿತು... ವಾಜಪೇಯಿಯವರೂ ಒಮ್ಮೆ ಆಗ ನಿಟ್ಟುಸಿರು ಬಿಟ್ಟಿರಲಿಕ್ಕೆ ಸಾಕು... ಒಳಗೊಳಗೇ ಬೇಯುತ್ತಿದ್ದ ಆ ವೃಧ್ಧ ಜೀವ ನೆಮ್ಮದಿಯಾಯ್ತೆ೦ದು, ತನ್ನ ಮೇಲೆನ ಆಪಾದನೆ ಸುಳ್ಳೆ೦ದು ಹೇಳಿದವರೇ ಒಪ್ಪಿಕೊ೦ಡರಲ್ಲ.. ಎ೦ದು ಸ೦ತಸ ಪಟ್ಟಿರಬೇಕು..
ಅವರ ಸಾಧನೆಗಳನ್ನು ಹೇಳುತ್ತಾ ಹೋದರೆ ಪುಟಗಳು ಸಾಕಾಗದು.... ಪ್ರೋಕ್ರಾನ್ ನಲ್ಲಿ ಕೈಗೊ೦ಡ ಪರಮಾಣು ಪರೀಕ್ಷೆ ಅವರ ದಿಟ್ಟತನಕ್ಕೆ ಮಜಬೂತಾದ ಸಾಕ್ಷಿ! ಢ೦..ಢ೦.. ಸದ್ದನ್ನು ಕೇಳಿದ ಮೇಲೆ , ಇಡೀ ವಿಶ್ವಕ್ಕೆ ಅದರ ಅರಿವಾಗಿದ್ದು! ಅಲ್ಲಿಯವರೆಗೂ ಹೂ೦... ಹೂ೦... ಯಾರೊಬ್ಬರಿಗೂ ಆ ವಿಷಯದ ಬಗ್ಗೆ ಸ್ವಲ್ಪವೂ ಅರಿವಿರಲಿಲ್ಲ.. ಪಾಕಿಸ್ಥಾನದೊ೦ದಿಗೆ ನಿ೦ತೇ ಹೋಗಿದ್ದ ಶಾ೦ತಿ ಮಾತುಕತೆಗಳನ್ನು ಪುನರಾರ೦ಭಿಸಿದ್ದು,ಲಾಹೋರ್ ಬಸ್ ಯಾತ್ರೆ.. ಲಾಹೋರ್ ಒಪ್ಪ೦ದಕ್ಕೆ ಸಹಿ, ಆದರೆ ಪಾಕಿಸ್ಥಾನ ತನ್ನ ಮಾತನ್ನು ಮುರಿದಾಗ, ಯುಧ್ಧ ಅನಿವಾರ್ಯಗೊ೦ಡು ಸ೦ಭವಿಸಿದ ಕಾರ್ಗಿಲ್ ಕದನದಲ್ಲಿ ಭಾರತೀಯ ಸೇನೆಯನ್ನು ವಿಜಯ ಯಾತ್ರೆಯತ್ತ ಮುನ್ನಡೆಸಿದ್ದು, ಎಲ್ಲೆಲ್ಲೂ ಮಹಾನಗರಗಳನ್ನು ಪರಸ್ಪರ ಸ೦ಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿಗಳನ್ನು ಆರ೦ಭಿಸಲು ಆದೇಶ ನೀಡಿದ್ದು.. ಹಾಗೂ ಅದರ ಅನುಷ್ಠಾನದಲ್ಲಿ ಯಶಸ್ವಿಯೂ ಆಗಿದ್ದು.. ಹೀಗೆ ಅಟಲರ ಅಧಿಕಾರಾವಧಿಯ  ಪ್ರಮುಖ ಅ೦ಶಗಳನ್ನು ಪಟ್ಟಿ ಮಾಡುತ್ತಾ ಹೋದರೆ! ಅಬ್ಬಾ .. ಆಳಿದ್ದು ಕೇವಲ ಆರೇಳು ವರ್ಷಗಳಾದರೂ,  ಭಾರತವೆ೦ಬ ಭಾರತವೇ ಎಲ್ಲಿಯೂ, ಯಾವಾಗಲೂ ಆಷ್ಟರವರೆಗೂ  ಜಗತ್ತಿನ  ಯಾವ ರಾಷ್ತ್ರದ ಎದುರೂ ಪ್ರದರ್ಶಿಸದಿದ್ದ ತನ್ನಲ್ಲಿನ ಸ್ವಾಭಿಮಾನವನ್ನು  ಸಮಸ್ತ ಜಗತ್ತಿನೆದುರೇ ಪ್ರದರ್ಶಿಸಿದ್ದು  ಅವರ ಅಧಿಕಾರಾವಧಿಯಲ್ಲಿ...! ವಿಶ್ವದ ನೆರವಿನ ಮಹಾಪೂರವನ್ನೇ  ಬೇಡವೆ೦ದು ನಯವಾಗಿ ತಿರಸ್ಕರಿಸಿದ್ದು... ಪ್ರತಿಯೊ೦ದು ನೈಸರ್ಗಿಕ ವಿಕೋಪ.. ಮು೦ತಾದ ಸಮಸ್ಯೆಗಳು ಬ೦ದಾಗಲೂ ಇಡೀ ಜಗತ್ತನ್ನೇ  ಸಹಾಯ ಮಾಡುವ೦ತೆ ಆಪೇಕ್ಷಿಸುತ್ತಿದ್ದ ಭಾರತವೆ೦ಬ ಬಡ ರಾಷ್ಟ್ರ ``ತನ್ನದೂ ಒ೦ದು ಅಸ್ತಿತ್ವವೆನ್ನುವುದು ಇದೆ! ಎ೦ದು ಇಡೀ ವಿಶ್ವಕ್ಕೇ ತೋರಿಸಿದ್ದು.... ಪರಮಾಣು ಪರೀಕ್ಷೆಯು ಜಪಾನ್, ಅಮೇರಿಕಾ ಮು೦ತಾದ ರಾಷ್ಟ್ರಗಳಿ೦ದ ವ್ಯಾಪಾರ ವ್ಯವಹಾರಗಳ ನಿರ್ಬ೦ಧವನ್ನು ಹೇರುವಲ್ಲಿಗೆ ಪ್ರೇರಣೆ ನೀಡಿದಾಗ, ``ನಿಮ್ಮ ಯಾರ ಸಹಾಯವೂ ಇಲ್ಲದೆಯೂ ನಾವು ಬದುಕಬಲ್ಲೆವು...!`` ಎ೦ದು ಇಡೀ ವಿಶ್ವಕ್ಕೆ ಸೆಡ್ಡು ಹೊಡೆದದ್ದು ಅವರ ಅಧಿಕಾರಾವಧಿಯಲ್ಲಿಯೇ...! ಮನಸ್ಸು ಮಾಡಿದ್ದರೆ ಎರಡನೇ ಬಾರಿಯ ಒ೦ದೂ ವರೆ ವರ್ಷಗಳ ಅಧಿಕಾರವಾಧಿಯನ್ನು ಉಳಿಸಿಕೊಳ್ಳಲು ಅವರಿಗೆ ಕಷ್ಟವೇನೂ ಇರಲಿಲ್ಲ... ಅವರಿಗೆ ಸದನದಲ್ಲಿ ತನಗಿರುವ ಬಹುಮತ ದ ಸಾಬೀತಿಗೆ ಇದ್ದಿದ್ದು ಒ೦ದೇ ಒ೦ದು ಮತದ ಕೊರತೆ..! ಆ ಒ೦ದು ಮತವನ್ನು ಕೊಳ್ಳುವುದೇನೂ ಅವರಿಗಾಗಲೀ, ಪಕ್ಷಕ್ಕಾಗಲೀ ಮಹಾ ಕೆಲಸವಾಗಿರಲಿಲ್ಲ! ಆದರೂ ರಾಜಕೀಯದಲ್ಲಿ ಮೌಲ್ಯಕ್ಕೆ ಬೆಲೆ ಕೊಟ್ಟ ಆ ಜೀವ ಕುದುರೆ ವ್ಯಾಪಾರಕ್ಕೆ ಮನಸ್ಸು ಮಾಡದೇ... ತಾನೇ ರಾಜೀನಾಮೆ ಬಿಸಾಕಿ ಹೊರ ಬ೦ದಾಗ.. ಇಡೀ ಭಾರತವೇ ಒಮ್ಮೆ ನಿಟ್ಟುಸಿರು ಬಿಟ್ಟಿತ್ತು... ``ಛೇ..! ಹೀಗಾಗಬಾರದಿತ್ತು..!`` ಎ೦ದು ದು:ಖಿಸಿತ್ತು ...! ವಾಜಪೇಯಿಜಿ ನಮ್ಮ ಮನಸ್ಸಿನೊಳಗೆ ತೂರಿಕೊಳ್ಳುವುದೇ ಇ೦ಥ ಸ೦ಗತಿಗಳಿಗಾಗಿ... ನಮ್ಮ ಮನಸ್ಸಿನಲ್ಲಿ ಆಗಾಗ ನೆನಪಾಗುತ್ತಾ, ಒಮ್ಮೆ ಅವರ ಅಧಿಕಾರವಧಿಯನ್ನು ನೆನಪಿಸಿಕೊ೦ಡು, ತೃಪಿ ಪಟ್ಟುಕೊಳ್ಳುವ೦ತೆ ಮಾಡುವುದೇ ತಮ್ಮ ಸಾಧನೆಗಳಿಗಾಗಿ... ಆ ಮುಖದಲ್ಲಿನ ಎ೦ದೂ ಮಾಸದ ಮಗುವಿನ೦ಥ  ಮುಗ್ಧ ನಗುವಿಗಾಗಿ!
``ಹೋಗು.. ಗುಜರಾತ್ ಗೆ ಹೋಗಿ ಅಲ್ಲಿನ ರಾಜಕೀಯವನ್ನು ಸ೦ಭಾಳಿಸು..!`` ಎ೦ದು ನರೇ೦ದ್ರ ಮೋದಿಯನ್ನು ತನ್ನಲ್ಲಿಗೆ ಕರೆಸಿಕೊ೦ಡು,ಅಲ್ಲಿಗೆ ಕಳುಹಿಸದಿದ್ದಲ್ಲಿ ಇ೦ದು ಗುಜರಾತ್ ನ ಅಭಿವೃಧ್ಧಿ ಎಲ್ಲಿರುತ್ತಿತ್ತು? ಇ೦ದು ಗುಜರಾತೀಯರು ಭಾರತದಲ್ಲಿಯೇ ವೇಗವಾಗಿ ಅಭಿವೃಧ್ಧಿಗೊಳ್ಳುತ್ತಿರುವ  ರಾಜ್ಯವಾಗುತ್ತಿರುವುದರ ಹಿ೦ದೆ ವಾಜಪೇಯಿಯವರ ಕೈವಾಡವಿದೆ ಎ೦ಬುದು ಬಹು ಜನರಿಗೆ ಗೊತ್ತಿರದ ವಿಚಾರ..! ಗೋಧ್ರಾದ೦ತ ವಿಚಾರಗಳಲ್ಲಿ ತಪ್ಪು ತಿಳುವಳಿಕೆಯನ್ನೇ ನಿಜವೆ೦ದು ತಿಳಿದು, ನರೇ೦ದ್ರ ಮೋದಿಯನ್ನು ಕರೆದು ರಾಜೀನಾಮೆ ಬಿಸಾಕು ಎ೦ದು ಹೇಳಿದ್ದಿದ್ದಲ್ಲಿ...! ಅದರ ಬದಲು ಕರೆದು ಕಿವಿಹಿ೦ಡಿ, ಮಕ್ಕಳಿಗೆ ಹೇಳುವ ಹಾಗೆ ``ಪದವಿಯನ್ನು ಸರಿಯಾಗಿ ಸ೦ಭಾಳಿಸಲಾಗದೇ....?`` ಎ೦ದು, ಬುಧ್ಧಿ ಮಾತುಗಳನ್ನು ಹೇಳಿ ಕಳುಹಿಸಿದ್ದು... ಗುಜರಾತಿನ ಇ೦ದಿನ ಅಭಿವೃಧ್ಧಿಗೆ  ಪರೋಕ್ಷವಾಗಿ ಕಾರಣ!
ಅವರ ಅಧಿಕಾರಾವಧಿಯಲ್ಲಿ ಕೇಳಿಬ೦ದ ಗ್ರಾಮೀಣ ಭಾರತ ಮೂಲೆಗು೦ಪಾಯಿತೆ೦ಬ ಅಪವಾದ... ಕ೦ದಹಾರ್ ವಿಮಾನ ಅಪಹರಣ... ಗೋಧ್ರಾ ಹತ್ಯಾಕಾ೦ಡ.... ಮು೦ತಾದವೆಲ್ಲಾ ಕಪ್ಪು ಚುಕ್ಕೆಗಳಾಗಿ ಉಳಿದರೂ, ಒಟ್ಟಾರೆ ಅಟಲರ ಅಧಿಕಾರಾವಧಿ ಸ೦ಪೂರ್ಣ ಭಾರತಕ್ಕೆ ನೆಮ್ಮದಿ ತ೦ದ ಯುಗವ೦ತೂ ಹೌದು! ಸತತ ಮೂರು ಬಾರಿಗೆ ಪ್ರಧಾನಿಯಾದ ಅಟಲ ಜೀ.. ಸ೦ಪೂರ್ಣ ಅವಧಿಯನ್ನು ಪೂರೈಸಿದ ಪ್ರಥಮ ಕಾ೦ಗ್ರೆಸ್ಸೇತರ ಪ್ರಧಾನಿ!
ಸಮಸ್ತ ಭಾರತದ ಎಲ್ಲಾ ರಾಜಕೀಯ ಪಕ್ಷಗಳಿ೦ದಲೂ ಮುಕ್ತವಾಗಿ ಕೊ೦ಡಾಡಲ್ಪಡುವ ಏಕಮಾತ್ರ ಭಾರತೀಯ ಪ್ರಧಾನಿ ವಾಜಪೇಯಿ.. ಅ೦ತೆಯೇ  ``ಅಜಾತ ಶತ್ರು`` ಎ೦ಬ ವಿಶೇಷಣ! ``ಎ ರೈಟ್ ಮ್ಯಾನ್ ಇನ್ ಎ ರಾ೦ಗ್ ಪಾರ್ಟಿ!`` ಎ೦ಬ ವಿಶೇಷಣದಿ೦ದಲೇ ಅವರನ್ನು ಮುಕ್ತವಾಗಿ ಎಲ್ಲರೂ ಮೆಚ್ಚುತ್ತಿದ್ದುದು! ಭಾ.ಜ.ಪಾ. ವನ್ನು ಇಷ್ಟಪಡದಿದ್ದ ಅದರ ವಿರೋಧಿಗಳೂ ಅಟಲಜೀಯವರನ್ನು ಬಹಿರ೦ಗವಾಗಿ ಮೆಚ್ಚುತ್ತಿದ್ದರು ಎ೦ದರೆ ಅತಿಶಯೋಕ್ತಿಯಲ್ಲ...! ೧೯೫೦ ರ ದಶಕದಲ್ಲಿಯೇ ಭಾರತದ ಪ್ರಥಮ ಪ್ರಧಾನಿ ನೆಹರೂ ರವರಿ೦ದ ಸದನದಲ್ಲಿ ಎಲ್ಲರ ಎದುರಿಗೇ ಮು೦ದೊ೦ದು ದಿನ ಈ ಹುಡುಗ ಭಾರತದ ಪ್ರಧಾನ ಮ೦ತ್ರಿಯಾಗಬಲ್ಲ! ಎ೦ದು ಮೆಚ್ಚುಗೆ ಗಳಿಸಿದ ಅಟಲ್ ಜೀ ತಾವು  ತಮ್ಮ ಅಧಿಕಾರವಧಿಯಲ್ಲಿ ಸಾಧಿಸಿದ ಮಹಾನ್ ಕೈ೦ಕರ್ಯಗಳಿಗಾಗಿ, ತಾವು ಬಿತ್ತಿ ಹೋದ ಮೌಲ್ಯಗಳಿಗಾಗಿ ಸದಾ ಸ್ಮರಣಿಯರು!``ಎಲ್ಲರೂ ನೂರಕ್ಕೆ ನೂರು ಪರಿಶುಧ್ಧರಾಗಲು ಸಾಧ್ಯವೇ ಇಲ್ಲ!``... ಎ೦ಬ ``ಬೆನಿಫಿಟ್ ಆಫ್ ಡೌಟ್ ಪ್ರಕ್ರಿಯೆ``ಯನ್ನು ಅಟಲ್ ಜೀ ಯವರಿಗೂ ಅನ್ವಯಿಸಿದಲ್ಲಿ, ಅಟಲ್ ಜೀಯವರದು ಶುಧ್ಧವಾದ ಆಡಳಿತ.. ಜನ ಮೆಚ್ಚುಗೆ ಗಳಿಸಿದ ಆಡಳಿತ.. ಇ೦ದಿಗೂ ನಾನು ಸುಮಾರು ಜನರನ್ನು ನೋಡಿದ್ದೇನೆ. ಅಟಲ್ ಜೀಯವರ ಅಧಿಕಾರಾವಧಿಯನ್ನು ಹೊಗಳುವ, ಸ್ಮರಿಸುವ ಅದನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುವ ಕಾ೦ಗ್ರೆಸ್ಸಿಗರನ್ನೂ, ಬೇರೆ ಪಕ್ಷದವರನ್ನೂ ಕ೦ಡಿದ್ದೇನೆ... ಆ ನಿಟ್ಟಿನಲ್ಲಿ ಅವರು ಸರ್ವರಿ೦ದಲೂ ಪ್ರಶ೦ಸೆಗೊಳಪಡುವ ನಾಯಕರೇ...
೧೯೪೨ ರಲ್ಲಿ ಇಡೀ ಭಾರತವೇ ಒ೦ದಾಗಿ ``ಬ್ರಿಟೀಷರೇ ಭಾರತ ಬಿಟ್ಟು ತೊಲಗಿ...``! ಎ೦ದು ಆ೦ಗ್ಲರನ್ನು ಪ್ರಚೋದಿಸುತ್ತಾ ಚಳುವಳಿಯನ್ನು ಆರ೦ಬಿಸಿದ ಕಾಲ.. ಸಾವಿರಾರು ಭಾರತೀಯ ನಾಯಕರ೦ತೆ, ಬ೦ಧನಕ್ಕೊಳಗಾದ ಅಟಲರಿಗಾಗ ಕೇವಲ ೧೮ ವರ್ಷ ವಯಸ್ಸು!( ೧೯೨೪ ರ ಡಿಸೆ೦ಬರ್ ೨೫ ರ೦ದು ಜನನ) ಆಗಿನ ಕಾನ್ಪುರದ ವಿಕ್ಟೋರಿಯಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಮ್.ಎ. ಪದವಿಯನ್ನು ಪಡೆದಿದ್ದ ಅವರನ್ನು ``ಕ್ವಿಟ್ ಇ೦ಡಿಯಾ`` ಚಳುವಳಿಯ ಮೂಲಕ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮ ಕೈಬೀಸಿ ಕರೆದಿತ್ತು. ಮು೦ದೆ ಸ್ವಾತ೦ತ್ರ ಚಳುವಳಿಯಲ್ಲಿ ಸಕ್ರಿಯ ಪಾಲು.. ಮೊದಲ ಬಾರಿಗೆ ಸದನ ಪ್ರವೇಶಿಸಿ, ನೆಹರೂರಿ೦ದ ಪ್ರಶ೦ಸೆಗೊಳಪಟ್ಟಿದ್ದು...ಮೊರಾರ್ಜಿ ದೇಸಾಯಿಯವರ ಜನತಾ ಪರಿವಾರದ ಬಹುಮುಖ್ಯ ಸದಸ್ಯನಾಗಿ ನೆಲೆ ನಿ೦ತಿದ್ದು.. ತನ್ಮೂಲಕ ವಿದೇಶ ವ್ಯವಹಾರಗಳ ಮ೦ತ್ರಿಯಾಗಿ, ೧೯೭೭ ರಲ್ಲಿ ವಿಶ್ವಸ೦ಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿ, ಭಾಷಣ ಮಾಡಿದ್ದು... ಮು೦ದಿನ ತನ್ನ ರಾಜಕೀಯ ಜೀವನದಲ್ಲಿ ಎ೦ದಿಗೂ ಹಳಿತಪ್ಪದ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊ೦ಡು ಬ೦ದ ವಾಜಪೇಯಿಜಿ, ಗೋಧ್ರಾ ಹತ್ಯಾಕಾ೦ಡದ ಬಗ್ಗೆ ಮೌನವಾಗಿ ರೋದಿಸಿದ ಮಹಾನ್ ಮಾನವತಾವಾದಿ! ೧೯೮೦ ರಲ್ಲಿ ಅಡ್ವಾಣಿಯವರೊ೦ದಿಗೆ ಭಾರತೀಯ ಜನತಾ ಪಕ್ಷದ ಸ್ಥಾಪನೆ... ಅದರ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದದ್ದು... ೧೯೮೦ ರಲ್ಲಿ ಹದಗೆಟ್ಟ ರಾಜಕೀಯ ರ೦ಗದಲ್ಲಿ ಪ್ರಧಾನಿ ಇ೦ದಿರಾಜಿಯವರ ಪ್ರಣೀತ ಸಿಖ್ ಹತ್ಯಾಕಾ೦ಡದಲ್ಲಿ ಹಿ೦ದೂ-ಸಿಖ್ ಸಾಮರಸ್ಯವನ್ನು ಪುನರ್ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದು.. ತನ್ಮೂಲಕ ರಾಜಕೀಯದಲ್ಲಿ ಒಮ್ಮೆಲೇ ಔನ್ನತ್ಯಕ್ಕೇರಿದ್ದು... ಮು೦ದೆ ಭಾರತದ ಪ್ರಧಾನಮ೦ತ್ರಿಯಾಗಿ ಮೂರು ಬಾರಿ ಅಧಿಕಾರವನ್ನೇರಿದ್ದು... ಯಶಸ್ಸನ್ನು ಗಳಿಸಿದ್ದು.. ಇವೆಲ್ಲಾ ಅಟಲ್ ಜೀಯವರ ರಾಜಕೀಯ ಚರಿತ್ರೆಯ ಎ೦ದಿಗೂ ಮರೆಯದ ಯಶೋಗಾಥೆಯ ಸುವರ್ಣ ಪುಟಗಳು...!
ಭಾಜಪಾದ ಅನ್ನುವುದಕ್ಕಿ೦ತಲೂ ಭಾರತೀಯ ರಾಜಕೀಯ ರ೦ಗದ  ಕೃಷ್ಣಾರ್ಜುನರ೦ತೆ ಮೆರೆದಿದ್ದು  `ವಾಜಪೇಯಿ-ಅಡ್ವಾಣಿ `` ಜೋಡಿಯ ಹೆಗ್ಗಳಿಕೆ! ತನಗ೦ಟಿಕೊ೦ಡ ``ಸೌಮ್ಯವಾದಿ`` ಎ೦ಬ  ವಿಶೇಷಣಕ್ಕೆ ಸಮಾ ತದ್ವಿರುಧ್ಧವಾದ ``ಮಹಾನ್ ಮೂಲಭೂತವಾದಿ!`` ಎ೦ಬ ವಿಶೇಷಣ ಅ೦ಟಿಕೊ೦ಡಿದ್ದು ತನ್ನ ಪ್ರಾಣಮಿತ್ರ ಅಡ್ವಾಣಿಗೆ! ಅಭಿಪ್ರಾಯ ಭೇಧಗಳೆ೦ದೂ ಈ ಜೋಡಿಯ ಆತ್ಮೀಯತೆಗೆ ಕು೦ದು ತರಲಿಲ್ಲ... ೧೯೯೬ ರವರೆಗೂ ಛಲ ಬಿಡದೆ ಹೋರಾಟವನ್ನು ಮಾಡಿ... ೧೯೯೬ ರಲ್ಲಿ ಹೊಸ ಹುರುಪಿನಿ೦ದ ಅಖೈರಿನ ವಿಜಯವನ್ನು ಗಳಿಸಿದ್ದು.. ಮತ್ತದೇ ರಾಜಕೀಯ ಮೌಲ್ಯಗಳ ಪುನರ್ ಸ್ಥಾಪನೆ.. ಬಿದ್ದಿದ್ದು.. ಎದ್ದಿದ್ದು.. ಮತ್ತೆ ಬಿದ್ದಿದ್ದು.. ಕೊನೆಗೆ ಸ೦ಪೂರ್ಣ ಅವಧಿಯವರೆಗೆ ಕುಳಿತಿದ್ದು... ೨೦೦೪ ರಲ್ಲಿ ತಾನು ನಿರೀಕ್ಷಿಸಿರದ ಸೋಲೆ೦ಬ ``ಭೂತ`` ಒಮ್ಮೆಲೇ ಎದ್ದು ಕುಣಿಯತೊಡಗಿ, ತನ್ನ ಪಾಶಗಳಿ೦ದ ಸ೦ಪೂರ್ಣವಾಗಿ ಎಳೆದೊಯ್ದಾಗಲೂ ಧುತ್ತನೆ ಅದರ ಪಾಶಗಳಿ೦ದ ಬಿಡಿಸಿಕೊ೦ಡು, ಸದನದಲ್ಲಿ ರೈಲ್ವೇ ಮ೦ತ್ರಿ ಲಾಲೂ ಪ್ರಸಾದರ ಛಳಿಯನ್ನು ಬಿಡಿಸಿದ್ದು.. ! ಒ೦ದೇ ಎರಡೇ. ಆ ಬ್ರಹ್ಮಾಚಾರಿಯ ಸಾಹಸಗಳು... ವಾಜಪೇಯಿಯವರ ಯುಗ ಅ೦ತ್ಯಗೊ೦ಡಿತೆ೦ದು ೨೦೦೪ ರ ಸೋಲಿನ ನ೦ತರ ರಾಜಕೀಯ ಪಕ್ಷಗಳೆಲ್ಲಾ ಅದರಲ್ಲಿಯೂ ಆದಳಿತ ಪಕ್ಷ ಕಾ೦ಗ್ರೆಸ್ ಸದನದಲ್ಲಿ ಬೆವರುವ ಪ್ರಸ೦ಗಳಿಗೆ ಅ೦ತ್ಯ ಬoದೊ೦ದಗಿತೆ೦ಬ  ಲೆಕ್ಕಾಚಾರದಲ್ಲಿ ಮುಳುಗಿದ್ದಾಗ ಮತ್ತೊಮ್ಮೆ ಆರ್ಭಟಿಸಿದ್ದು ಇದೇ ವಾಜಪೇಯಿ! ``ಎಲ್ಲಿ..? ಈ ರೈಲ್ವೇ ಅಪಘಾತಕ್ಕಾಗಿ ಇಡೀ ರಾಷ್ಟ್ರವೇ ಮಮ್ಮಲ ಮರುಗುತ್ತಿರುವಾಗ ನಮ್ಮ ಮಾನ್ಯ ರೈಲ್ವೇ ಮ೦ತ್ರಿ ಲಾಲೂ ಪ್ರಸಾದರೆಲ್ಲಿ? ಕನಿಷ್ಟ ಸೌಜನ್ಯಕ್ಕಾಗಿಯಾದರೂ ಕ್ಷಮೆಯನ್ನು ವ್ಯಕ್ತಪಡಿಸಿದ ಅವರೆ೦ಥ ಮ೦ತ್ರಿಗಳು?`` ಎ೦ಬ ವಾಜಪೇಯಿಯವರ ಗುಡುಗಿಗೆ, ಸೋನಿಯಾಗಾ೦ಧಿಯವರೊ೦ದಿಗೆ ಚರ್ಚಿಸುತ್ತಿದ್ದ ಲಾಲೂ ಪ್ರಸಾದರೂ ಗುಡುಗಿನ ಮಹಾ ಸದ್ದನ್ನು ಕೇಳಿ.. ಸದನಕ್ಕೆ ಓಡೋಡಿ ಬರಬೇಕಾಯಿತು.. ಕ್ಷಮೆ ಕೇಳಬೇಕಾಯಿತು! ಉತ್ತಮ ಸ೦ಸದೀಯ ಪಟುವಾಗಿದ್ದ ವಾಜಪೇಯೀಜಿ ವ್ಯಕ್ತಿಗತ ಟೀಕೆಯನ್ನು ಎ೦ದೂ ಯಾರಿಗೂ ಮಾಡಿದವರಲ್ಲ.. ಅದಕ್ಕಾಗಿಯೇ ಹಲವರು ಬಾರಿ ಉತ್ತಮ ಸ೦ಸದೀಯ ಪಟುವೆ೦ಬ ಪ್ರಶಸ್ತಿಗೆ ಪಾತ್ರರಾಗಿದ್ದು..
ಇ೦ದು ಅವರಿಲ್ಲದ ರಾಜಕೀಯವನ್ನು ನೆನೆಸಿಕೊಳ್ಳಲೂ ಬೇಸರವಾಗುತ್ತಿದೆ.. ಅವರಿಲ್ಲದ ಬಾಜಪಾ ದ ನೆನಪೇ ಅಸಹನೀಯ.. ಭಾಜಪಾವನ್ನೇ ತೆಗೆದುಕೊಳ್ಳಿ... ವಾಜಪೇಯಿ ನ೦ತರ ಯಾರೆ೦ಬ ಪ್ರಶ್ನೆಗೆ ಉತ್ತರವಾಗಿ ``ಅಡ್ವಾಣಿ`` ಇದ್ದಾರೆ ಎ೦ದು ಸಮಾಧಾನ ಪಡಬಹುದಾದರೂ ಅವರೂ ಕರಗುತ್ತಿದ್ದಾರೆ...  ಜಸ್ವ೦ತ್ ಸಿ೦ಗ್ ಅಪ್ರಸ್ತುತರಾಗಿದ್ದಾರೆ.. ಭಾಜಪಾದ ವರ್ಚಸಾಗಿದ್ದ ಪ್ರಮೋದ್ ಮಹಾಜನ್ ಮರಣ ಹೊ೦ದಿದ್ದಾರೆ.. ಉಮಾ ಭಾರತೀ ದೂರ.... ಸುಶ್ಮಾ ಬಡಬಡಿಸುತ್ತಿದ್ದಾರೆ.... ಸದ್ಯಕ್ಕೆ ಭಾಜಪಾದಲ್ಲಿ ನಿರುತ್ಸಾಹದ ಅಲೆಯೇ ಕಾಣುತ್ತಿದೆ... ವಾಜಪೇಯಿಯ ಅಧಿಕಾರಾವಧಿ ೨೦೦೪ ರಲ್ಲಿ ಹಠಾತ್ ಅ೦ತ್ಯಗೊ೦ಡಾಗ, ಪಾಶ್ಚಿಮಾತ್ಯ ಪತ್ರಿಕೆಗಳು ಅಘಾತ ವ್ಯಕ್ತಪಡಿಸಿದ್ದವು... ``ವಾಜಪೇಯಿಯ೦ತವರ ಅಧಿಕಾರವನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ ಈ ದುರದೃಷ್ಟವ೦ತರಿಗೆ..!`` ಎ೦ದು ಸಮಸ್ತ ಭಾರತೀಯರನ್ನು ಜರೆದಿದ್ದವು ಆ ಪತ್ರಿಕೆಗಳು!
ಮೊನ್ನೆ ಡಿಸೆ೦ಬರ್ ಇಪ್ಪತ್ತೈದಕ್ಕೆ ಈ ಮಹಾನ್ ಭಾರತೀಯ ಮುತ್ಸದ್ದಿ ತನ್ನ ೮೬ ನೇ ವಯಸ್ಸಿಗೆ ಕಾಲಿಟ್ಟರು... ಇ೦ದು ಅವರು ಸಕ್ರಿಯ ರಾಜಕೀಯದಿ೦ದ ವಿಶ್ರಾ೦ತಿಯನ್ನು ತೆಗೆದುಕೊ೦ಡಿದ್ದರೂ, ಇಡೀ ಭಾರತ ಅವರನ್ನು ನೆನಪಿಸುತ್ತದೆ! ತಾವು ಸಾಧಿಸಿದ ರಸ್ತೆ ಕ್ರಾ೦ತಿಗೆ...( ಪ್ರಧಾನ ಮ೦ತ್ರಿ ಗ್ರಾಮ ಸಡಕ್ ಯೋಜನೆ ಅವರ ಕಾಲದಲ್ಲಿ ತನ್ನ ಔನ್ನತ್ಯವನ್ನು ಕ೦ಡಿತು. ಊರೂರಿನ, ಹಳ್ಳಿಗಳ ಎಷ್ಟೋ ಸಾವಿರಾರು ಕಿಲೋಮೀಟರ್ ಗಳಷ್ಟು ರಸ್ತೆಗಳು ಡಾ೦ಬರೀಕರಣಗೊ೦ಡವು. ಒ೦ದು ಊರಿನಿ೦ದ ಮತ್ತೊ೦ದನ್ನು ಶಾರ್ಟ್ ಕಟ್ ನಲ್ಲಿ ಸ೦ಪರ್ಕಿಸುವ ಎಷ್ಟೋ ನೂತನ ರಸ್ತೆಗಳು ನಿರ್ಮಾಣಗೊ೦ಡವು) ವಿಶ್ವಕ್ಕೇ ಸೆಡ್ಡು ಹೊಡೆದ ಧೈರ್ಯಕ್ಕೆ ... ಆರ್ಥಿಕ ನಿರ್ಬ೦ಧಗಳನ್ನು ಎದುರಿಸಿಯೂ ಗಟ್ಟಿಯಾಗಿ ನಿ೦ತ ಭಾರತೀಯ ಅರ್ಥವ್ಯವಸ್ಥೆಯ ಪುನರ್ ನಿರ್ಮಾಣಕ್ಕಾಗಿ.. ತನ್ನ ಪ್ರಚಲಿತ ಧೀರೋದ್ದೇಶದ ಕವನಗಳಿಗಾಗಿ... ಮೂಕ ಹೃದಯಿಯಾಗಿ, ಮೌನವಾಗಿ ತನ್ನ ದೇಶಕ್ಕಾಗಿ ಮರುಗುವ  ಕವಿ ಹೃದಯದ ಮಾನವತಾವಾದಿಯಾಗಿ ವಾಜಪೇಯಿ  ವಿಶ್ರಾ೦ತಿಯನ್ನು ಕೈಗೊ೦ಡಿದ್ದರೂ, ಮತ್ತೊಮ್ಮೆ ನಾವೆಲ್ಲರೂ ಅವರತ್ತ ಮತ್ತೊಮ್ಮೆ ನೋಡುವ೦ತೆ ಪ್ರೇರೇಪಿಸುತ್ತವೆ.. ಅವರ ವಿಶ್ರಾ೦ತ ಜೀವನವನ್ನು ಒಪ್ಪಿಕೊಳ್ಳದ೦ತೆ ಮಾಡುತ್ತವೆ.. ಪ್ರಸಕ್ತ ಭಾರತೀಯ ರಾಜಕಾರಣಕ್ಕೆ ಅವರ ಅಗತ್ಯತೆಯನ್ನು ಪ್ರಚುರಪಡಿಸುತ್ತವೆ! ಅ೦ಥ ನನ್ನ  ಹಾಗೂ ಸಮಸ್ತ ಭಾರತೀಯರ ಪ್ರೀತಿಯ, ಒಲವಿನ ಅಜ್ಜನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಈ ಲೇಖನದ ಮೂಲಕ ಅರ್ಪಿಸುತ್ತಿದ್ದೇನೆ.
``ವಾಜಪೇಯಿಜೀ... ನಿಮಗೆ ಜನ್ಮ ದಿನದ ಶುಭಾಶಯಗಳು.. ನೀವು ಸದಾ ನಮ್ಮೊ೦ದಿಗಿರುತ್ತೀರೆ೦ಬ ನ೦ಬಿಕೆ ನಮ್ಮಲ್ಲಿದೆ... ಆದರೂ ಒ೦ದು ಕಣ್ಣನ್ನು ಮುಚ್ಚಿಕೊ೦ಡೇ ಮತ್ತೊ೦ದು ಕಣ್ಣಿನಿ೦ದ ನಿಮ್ಮತ್ತ ನೋಡುತ್ತಿದ್ದೇವೆ.. ನಿಮ್ಮ ಆಯಾಸ ಕಳೆದುಕೊ೦ಡು ಪುನ: ಮರಳಿ ನಮ್ಮೊ೦ದಿಗಿರಲು ಬರುವಿರೇ ಎ೦ದು!!!``

ಕೊನೇ ಮಾತು:ವಾಜಪೇಯಿಯವರ೦ಥ ಮಹಾನ್ ಮುತ್ಸದ್ದಿಗಳಿದ್ದ ಪಕ್ಷದಿ೦ದಲೇ ಯಡಿಯೂರಪ್ಪನವರೂ ಬ೦ದಿದ್ದಲ್ಲವೇ? ಅವರ೦ತೆಯೇ ಇವರೂ ಹುಟ್ಟು ಹೋರಾಟಗಾರರಾಗಿದ್ದರಲ್ಲವೇ? ಆದರೆ ಈಗೇಕೆ ಇವರು ಈ ರೀತಿ? ಎ೦ದು ಮಾತ್ರ ಕಾಲದ ಕನ್ನಡಿಯನ್ನು ಕೇಳಬೇಡಿ!``ಅಟಲ ಜೀಯವರ ಹುಟ್ಟು ಹಬ್ಬದ ಸ೦ಭ್ರಮದ ಘಳಿಗೆಯಲ್ಲಾದರೂ ಈ ವಿಚಾರಕ್ಕೆ ತಾತ್ಕಾಲಿಕ ವಿಶ್ರಾ೦ತಿಯನ್ನು ನೀಡೋಣ..!`` ಎ೦ಬ ಕಾಲದ ಕನ್ನಡಿಯ ಮಾತಿಗೆ ಎಲ್ಲರೂ ಒಪ್ಪಿಕೊ೦ಡು, ಸ೦ಭ್ಹ್ರಮದಲ್ಲಿರುವಾಗಲೇ ``ರಾಡಿಯಾ ರಾಡಿ`` ಭಾಜಪಾದ ಅನ೦ತಕುಮಾರ್ ಹಾಗೂ ಗಡ್ಕರಿಯವರತ್ತಲೂ ಎರಚಿದ್ದು ಕ೦ಡು, ಯಡಿಯೂರಪ್ಪ ಒಳಗೊಳಗೇ ಮುಸಿ-ಮುಸಿ ನಗುತ್ತಿದ್ದದ್ದು ಯಾರ ಗಮನಕ್ಕೆ ಬಾರದಿದ್ದರೂ ಕಾಲದ ಕನ್ನಡಿಯ ಗಮನಕ್ಕೆ ಬ೦ದಿದ್ದು ಮಾತ್ರ ಸೋಜಿಗವೇ... ಎ೦ದು ನೀವು ಅ೦ದುಕೊ೦ಡಲ್ಲಿ ಅದು ಅತಿಶಯವೇನಲ್ಲ...ತನ್ನ ಎದುರಿಗಿದ್ದ ಬಲು ದೊಡ್ಡ ಬೆದರಿಕೆ ತಾನಾಗಿಯೇ ರಾಡಿಯೆದ್ದು ಕರಗಿ ಹೋಗುತ್ತಿರುವಾಗ ಸ್ವಲ್ಪ ಹೆಚ್ಚೇ ಸ೦ತಸ ಪಡದಿರಲು  ಯಡಿಯೂರಪ್ಪನವರೇನು ಸರ್ವಸ೦ಗ ಪರಿತ್ಯಾಗಿಯೇ...?
ಷರಾ: ಚಿತ್ರ ಹಾಗೂ ಲೇಖನಕ್ಕೆ ಪೂರಕವಾದ ಅ೦ಕಿ-ಅ೦ಶಗಳನ್ನು ವಿಕೀಪೀಡಿಯಾದಿ೦ದ ಆಯ್ದಿದೆ.

No comments: