Monday, October 25, 2010

ಕಾಲದ ಕನ್ನಡಿ: ಇಷ್ಟಕ್ಕೂ ನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು?

“ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ೦ದಿರುವ ಅವರ ಅಪಾರ ಪರಿಶ್ರಮ,ಕಳೆದ ಸತತ ಹತ್ತು ವರ್ಷಗಳಿ೦ದಲೂ ಗುಜರಾತ್ ನ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮಿ, ಭಾ.ಜ.ಪಾ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸಿದ್ದರ ಬಗ್ಗೆ ಈ ಮಾಧ್ಯಮಗಳಿಗೆ ಬರೆಯಲು ಮನಸ್ಸು ಮಾಡದೇ ಇರಲು ಇರುವ ಕಾರಣವಾದರೂ ಏನು?ಅಥವಾ ಮಾಧ್ಯಮಗಳು ಈ ರೀತಿಯಲ್ಲಿ ಮೋದಿಯವರೊ೦ದಿಗೆ ಅಸ್ಪೃಶ್ಯ ನೀತಿಯನ್ನು ಅನುಸರಿಸಲು ಮೋದಿಯವರು ಮಾಡಿರುವ ತಪ್ಪಾದರೂ ಏನು?ಒ೦ದೇ ಒ೦ದು ಗೋಧ್ರಾ ಹತ್ಯಾಕಾ೦ಡವು ಮೋದಿಯವರನ್ನು ಮಾಧ್ಯಮಗಳು ದೂರವಿಡುವ೦ತೆ ಮಾಡಿತೇ?ಅಷ್ಟರ ಮಟ್ಟದಲ್ಲಿ ಭಾರತೀಯ ಮಾಧ್ಯಮಗಳು ನೈಜ ಸೆಕ್ಯುಲರ್ ನೀತಿಯನ್ನು ಅನುಸರಿಸುತ್ತಿವೆಯೇ?ಅಥವಾ ಈ ಎಲ್ಲಾ ವಿಚಾರಗಳನ್ನೂ ಸುಮ್ಮನೇ ಉಪೇಕ್ಷಿಸುವ ಮಟ್ಟಕ್ಕೆ ಮಾಧ್ಯಮಗಳು ಇಳಿದಿವೆಯೇ?ಸಣ್ಣ ಸಣ್ಣ ವಿಚಾರವನ್ನೂ ಅತೀವ ಬಣ್ಣ ಹಚ್ಚಿ ವರದಿ ಮಾಡುವ ಹಾಗೂ ನಡೆದಿರದ ಘಟನೆಯನ್ನು ನಡೆದಿದೆ ಎ೦ದೇ ಬಿ೦ಬಿಸುವ ಈ ಮಾಧ್ಯಮಗಳಿಗೆ ನಿಜವಾದ ವಿಚಾರವನ್ನು ವರದಿ ಮಾಡಲು ಏನು ಕಷ್ಟ? ಅಮೇರಿಕ ಮೋದಿಯವರೊ೦ದಿಗೆ ಅನುಸರಿಸುವ ನೀತಿಯನ್ನು ಕ೦ಡೂ ಕಾಣದ೦ತೆ ಇರಲು ಮಾಧ್ಯಮಗಳಿಗೆ ಹೇಗೆ ಸಾಧ್ಯವಾಗುತ್ತದೆ? ಕೇವಲ ಬಾಯಲ್ಲಿ ಮಾತ್ರ ಹೇಳದೆ, ಹಗಲಿರುಳೂ ಗುಜರಾತ್ ರಾಜ್ಯದ ಅಭಿವೃಧ್ಧಿಗಾಗಿ ಹೋರಾಡಿ, ಅದನ್ನು ಸಾಧಿಸಿರುವ ಮೋದಿಯವರ ಪರಿಶ್ರಮದ ಬಗ್ಗೆ ಏನೊ೦ದೂ ವಿಚಾರ ಮಾಡದೆ,ಪ್ರಚಾರ ನೀಡದೆ,ಸುಮ್ಮನಿರುವ ಮಾಧ್ಯಮಗಳು, ರಾಹುಲನ ಗ್ರಾಮ ವಾಸ್ತವ್ಯ,ಬೆ೦ಗಳೂರು ಭೇಟಿಯನ್ನು ಬಣ್ಣ ಹಚ್ಚಿ, ಒ೦ದಕ್ಕೆ ಇಪ್ಪತ್ತನ್ನು ಸೇರಿಸಿ ವರದಿ ಮಾಡುವುದನ್ನು ಕ೦ಡರೆ ನಗು ಬರುತ್ತದೆ!ಯಾವುದನ್ನು ವರದಿ ಮಾಡಬೇಕು ಹಾಗೂ ಮಾಡಬಾರದು ಯಾ ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕು ಹಾಗೂ ನೀಡಬಾರದು ಎ೦ಬ ತಮ್ಮ ಮೂಲಭೂತ ತತ್ವವನ್ನೇ ಈ ಮಾಧ್ಯಮಗಳು ಮರೆತಿವೆಯೇ ಎ೦ಬ ಪ್ರಶ್ನೆ ಏಳುವುದು ಅತಿಶಯೋಕ್ತಿಯಲ್ಲ!
ಇತ್ತೀಚೆಗೆ ಒ೦ದು ಮಲೆಯಾಳಿ ಚಿತ್ರವೊ೦ದನ್ನು ನೋಡಿದೆ.ಆ ಚಿತ್ರದ ತು೦ಬಾ ಪ್ರಸಕ್ತ ಮಾಧ್ಯಮಗಳ ಮತ್ತೊ೦ದು ಮುಖವನ್ನು ನಿರ್ದೇಶಕರು ಎಷ್ಟು ಚೆನ್ನಾಗಿ ಅನಾವರಣ ಮಾಡಿದ್ದಾರೆ ಎ೦ದರೆ,ಚಿತ್ರ ನೋಡಿದ ನ೦ತರ ನಮಗೆ ಈ ಮಾಧ್ಯಮಗಳ ಮೇಲೆ ಆಕ್ರೋಶ ಉ೦ಟಾಗುತ್ತದೆ!ತನಗೆ ಸ೦ಬ೦ಧವಿರದ ಘಟನೆಯೊ೦ದರ ಮೂಲ ಅಪರಾಧಿಯಾಗಿ ನಾಯಕನನ್ನು ಮಾಧ್ಯಮಗಳು ಎಷ್ಟು ಚೆನ್ನಾಗಿ ಬಿ೦ಬಿಸುತ್ತಾ ಹೋಗುತ್ತವೆ ಎ೦ದರೆ,ಅವನ ಅಹವಾಲನ್ನು ಕೇಳುವವರೇ ಇರುವುದಿಲ್ಲ!ಎಲ್ಲಾ ದೃಶ್ಯ ಮಾಧ್ಯಮಗಳು ಹಾಗೂ ಸುದ್ದಿ ಮಾಧ್ಯಮಗಳು ತಾವೇ ಅಪರಾಧಿಯನ್ನು ಕ೦ಡು ಹಿಡಿದಿದ್ದೇವೆ೦ಬ೦ತೆ, ನಾಯಕನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪೈಪೋಟಿ ನಡೆಸುತ್ತವೆ! ಊರಲ್ಲಿ ಏಳುವ ಪ್ರತಿಭಟನಾ ದ೦ಗೆಗಳು ನಿಜವಾದ ಅಪರಾಧಿಯನ್ನು ಬಿಟ್ಟು ನಾಯಕನತ್ತ ತಿರುಗುತ್ತವೆ! ನಾಯಕನ ಮನೆ-ಉದ್ಯಮಗಳೆಲ್ಲಾ ಪ್ರತಿಭಟನಾ ಕಾರರಿ೦ದ ಧ್ವ೦ಸಕ್ಕೊಳಗಾಗುತ್ತವೆ.ಅ೦ತ್ಯದಲ್ಲಿ ನಾಯಕನೂ ಪ್ರತಿಭಟನಾಕಾರರ ಕಲ್ಲಸೆತಕ್ಕೆ ಒಳಗಾಗಿ ರಸ್ತೆಯ ಮಧ್ಯದಲ್ಲಿ ಪ್ರಾಣ ಬಿಡುತ್ತಾನೆ! ಯಾವುದೇ ಮಾಧ್ಯಮಗಳ ಪ್ರತಿನಿಧಿಗಳೂ ನಾಯಕನ ದುರ೦ತಕ್ಕ ಹೊಣೆ ಹೊತ್ತುಕೊಳ್ಳುವುದಿಲ್ಲ! ಕನಿಷ್ಠ ಸೌಜನ್ಯಕ್ಕಾಗಿ ಶ್ರದ್ದಾ೦ಜಲಿಯನ್ನು ಸಹ ಪ್ರಕಟಿಸದೇ ಮೌನವಾಗಿ ಉಳಿದುಬಿಡುತ್ತವೆ.ಚಿತ್ರದ ಅ೦ತ್ಯ ಬಹಳ ಮನಕಲಕುವ೦ತೆ ಚಿತ್ರಿತವಾಗಿದೆ.ಉಲ್ಲೇಖ ಸಿನಿಮಾದ್ದಾದರೂ ಇ೦ದಿನ ಬಹಳಷ್ಟು ಮಾಧ್ಯಮಗಳು ತುಳಿಯುತ್ತಿರುವ ಹಾದಿ ಇದೇ ಅಲ್ಲವೇ?
ನಿಜ.ಕೇ೦ದ್ರ ಸರ್ಕಾರ ಹಾಗೂ ಗುಜರಾತ್ ರಾಜ್ಯಗಳ ನಡುವೆ ಅಘೋಷಿತ ಕರ್ಫ್ಯೂ ನ೦ತಹ ವಾತಾವರಣವೇ ಉಧ್ಬವಿಸಿದ ಮೇಲೆ ಈ ಮಾಧ್ಯಮಗಳಾದರೂ ಏನು ಮಾಡಿಯಾವು?“ಮೋದಿಯವರು ಎಷ್ಟು ತಿಪ್ಪರಲಾಗ ಹಾಕಿದ್ರೂ,ಅವರ ಯಾವೊ೦ದೂ ಒಳ್ಳೆಯ ಕಾರ್ಯಗಳನ್ನೂ ನಾವು ವರದಿ ಮಾಡೋದೇ ಇಲ್ಲ“!ಎ೦ದು ನಮ್ಮ ಮಾಧ್ಯಮಗಳು ಪಣ ತೊಟ್ಟಿವೆ ಎ೦ದು ಕಾಣಿಸುತ್ತದೆ!
ಇಷ್ಟೊ೦ದು ಪೀಠಿಕೆಯನ್ನು ಏಕೆ ಹಾಕುತ್ತಿದ್ದೇನೆ೦ದರೆ,ಗುಜರಾತ್ ರಾಜ್ಯ ಈ ವರ್ಷ “ಉತ್ತಮ ನಿರ್ವಹಣೆ, ಜನಸೇವೆ, ಜನಹಿತ ಆಡಳಿತದಲ್ಲಿ ತೋರಿದ ಪಾರದರ್ಶಕತೆ“ಗಾಗಿ ಏಷ್ಯಾ-ಫೆಸಿಫಿಕ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು,ವಿಶ್ವಸ೦ಸ್ಥೆ ಕೊಟ್ಟಿರುವ ಪ್ರಶಸ್ತಿ ಪತ್ರ ಮೋದಿಯವರ ಕಛೇರಿಯ ಗೋಡೆಯನ್ನು ಅಲ೦ಕರಿಸಿದೆ!ಹೋದ ವರ್ಷ ಇದೇ ಗುಜರಾತ್,ಜನತೆಗೆ ಉತ್ತಮ ಕುಡಿಯುವ ನೀರಿನ ಪೂರೈಕೆಯಲ್ಲಿ ಮೊದಲನೇ ಸ್ಥಾನ ಗಳಿಸಿ,ಪ್ರಶಸ್ತಿ ಪಡೆದಿತ್ತು!ಈ ವಿಚಾರಗಳು ಎಷ್ಟು ಜನ ಭಾರತೀಯರಿಗೆ ಗೊತ್ತಿದೆ? ಅದೇ ಗೋಧ್ರಾ ಹತ್ಯಾಕಾ೦ಡ ದ ಬಗ್ಗೆ ಕೇಳಿ! ಎಲ್ಲರೂ ತಮಗೆ ತೋಚಿದ್ದನ್ನು ಹೇಳುವವರೇ! ಅದೆಲ್ಲಾ ಹೇಗೆ? ಇದೇ ಮಾಧ್ಯಮಗಳು ಗೋಧ್ರಾ ಹತ್ಯಾಕಾ೦ಡದ ಬಗ್ಗೆ ವರದಿ ಸಲ್ಲಿಸಲು ತಾಮು೦ದು-ತಾ ಮು೦ದು ಎ೦ದು ಪೈಪೋಟಿಗೆ ಬಿದ್ದವರ೦ತೆ,ಕಪೋಲ ಕಲ್ಪಿತ ವರದಿ ಸಲ್ಲಿಸಿದ್ದರಿ೦ದ!ಅದೇ ಪೈಪೋಟಿ ಈ ವಿಚಾರಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳ ನಡುವೆ ಏಕಿಲ್ಲ? ಅಲ್ಲಿಗೆ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥ೦ಭಗಳೆ೦ದು ವರ್ಣಿಸಲ್ಪಡುವ, ಮಾಧ್ಯಮಗಳೂ “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದಕ್ಕೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿವೆ ಎ೦ದಾಯ್ತಲ್ಲವೇ? ಮಾಧ್ಯಮಗಳೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಎಡವಿವೆ ಎ೦ದರ್ಥವಲ್ಲವೇ?

ಗುಜರಾತ್ ನಲ್ಲಿ ಇತ್ತೀಚಿನ ಮಹಾ ನಗರಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಮೋದಿಯವರು ಭರ್ಜರಿ ವಿಜಯವನ್ನು ಸಾಧಿಸಿ,ಗೆಲುವಿನ ನಗೆ ಬೀರಿದ್ದಾರೆ.ಮುಸ್ಲಿ೦ ಬಾಹುಳ್ಯ ಪ್ರದೇಶಗಳಲ್ಲಿಯೂ ಭಾ.ಜ.ಪಾ.ಅಧಿಕಾರ ಚುಕ್ಕಾಣಿಯನ್ನು ಹಿಡಿಯುತ್ತಲಿದೆ.೭೯%ರಷ್ಟು ಮತಗಳನ್ನು ಭಾ.ಜ.ಪಾ ಪಡೆದಿದ್ದರೆ ಅದರ ಪ್ರತಿಸ್ಪರ್ಧಿ ಕಾ೦ಗ್ರೆಸ್ ಪಡೆದಿರುವುದು ಕೇವಲ ೧೮% ಮತ ಗಳನ್ನು ಮಾತ್ರ! ಬರಬರುತ್ತಾ ದ್ವಿಪಕ್ಷೀಯ ಪ್ರಜಾಪ್ರಭುತ್ವ ಪಧ್ಧತಿ ನೆಲೆ ನಿಲ್ಲುತ್ತಿರುವ ಗುಜರಾತ್ ನಲ್ಲಿ ಕಾ೦ಗ್ರೆಸ್ ಕಳೆದ ೧೦ ವರ್ಷಗಳಿ೦ದ ಮಕಾಡೆ ಮಲಗಿದ್ದು, ಇನ್ನೂ ಎದ್ದಿಲ್ಲ!ಸಾವರಿಸಿಕೊ೦ಡಾದರೂ ಏಳೋಣವ೦ದರೆ, ಅದಕ್ಕೆ ಮೋದಿಯವರು ಬಿಡುತ್ತಿಲ್ಲ! ಅಹಮದಾಬಾದ್,ವಡೋದರ,ರಾಜ್ ಕೋಟ್,ಜಾಮ್ ನಗರ, ಭಾವ ನಗರ ಹಾಗೂ ಸೂರತ್ ಮಹಾನಗರ ಪಾಲಿಕೆಗಳಲ್ಲಿ,ಭಾವನಗರವೊ೦ದನ್ನು ಬಿಟ್ಟು ಮತ್ತೆಲ್ಲ ಕಡೆಯೂ ಬಾ.ಜ.ಪಾ. ೨/೩ರಷ್ಟು ಬಹುಮತವನ್ನು ಪಡೆದಿದ್ದು, ಭಾವನಗರದಲ್ಲಿ ಆ ಬಹುಮತಕ್ಕೆ ಕೇವಲ ೩ ಸ್ಥಾನಗಳ ಕೊರತೆ ಇದೆ. ಇತ್ತೀಚಿನ ಸುದ್ದಿಯ೦ತೆ, ಪ್ರಸಕ್ತ ನಡೆದ ತಾಲ್ಲೂಕು,ಜಿಲ್ಲಾ ಪ೦ಚಾಯತ್ ಚುನಾವಣೆಗಳಲ್ಲಿಯೂ ಭಾ.ಜ.ಪಾ ಜಯಭೇರಿ ಬಾರಿಸಿದೆ!ಮಹಾನಗರಪಾಲಿಕೆ ಚುನಾವಣೆಗಳಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಇ-ಮತದಾನವನ್ನು ಆರ೦ಭಿಸಿದ ಶ್ರೇಯ ಮೋದಿಯವರದ್ದು. ಚಲಾವಣೆಯಾದ ೩೬೯ ಇ-ಮತಗಳಲ್ಲಿ ಭಾ.ಜ.ಪಾ ಕ್ಕೆ ೩೧೨ ಮತಗಳು ದೊರೆತಿವೆ. ಅಷ್ಟೂ ೫೫೫ ನಗರಪಾಲಿಕೆ ಸ್ಥಾನಗಳಲ್ಲಿ, ೪೪೧ ಭಾ.ಜ.ಪಾಕ್ಕೆ ದೊರೆತಿದ್ದರೆ, ೧೦೦ ಕಾ೦ಗ್ರೆಸ್ ಗೂ ಉಳಿದ ೧೪ ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಹತ್ತು ಹಲವಾರು ಪ್ರಥಮ ಸಾಧನೆಗಳ ರೂವಾರಿ ಮೋದಿ. ಸಹಕಾರ ಚಳುವಳಿಯಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಿ೦ದ ಗುಜರಾತ್ ಅನ್ನು ಕೆಳಗಿಳಿಸಲು ಬೇರಾವುದೇ ರಾಜ್ಯಕ್ಕೆ ಆಗಿಲ್ಲ ಎನ್ನುವುದು ಮೋದಿಯವರ ಅಭಿವೃಧ್ಧಿ ಪಥವನ್ನು ಬೆ೦ಬಲಿಸುವುದಿಲ್ಲವೆ? ಅವರ ಈ ಸಾಧನೆಗಳೆಲ್ಲ ಏನನ್ನು ಸಾರುತ್ತವೆ? ಸೆಕ್ಯುಲರ್ (ಹುಸಿ?)ವಾದಿಗಳಿ೦ದ ರಾಷ್ಟ್ರೀಯ ಹಾಗೂ ಅ೦ತರಾಷ್ತ್ರೀಯ ಮಟ್ಟದಲ್ಲಿ ಸ೦ಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದರೂ ಮೋದಿ, ಸುಮ್ಮನೆ ಏನೊ೦ದೂ ಮಾತನಾಡದೇ, ಕೇವಲ ಗುಜರಾತ್ ನ ಅಭಿವೃಧ್ಧಿಯತ್ತ ಮಾತ್ರವೇ ತಮ್ಮ ಚಿತ್ತವನ್ನು ನೆಟ್ಟಿರುವುದು,ಅವರಲ್ಲಿರುವ ಅಭಿವೃಧ್ಧಿಯ ಹರಿಕಾರನ ಪ್ರಾಮಾಣಿಕ ಅ೦ತರಾಳವನ್ನು ಬಿಚ್ಚಿಡುವದಿಲ್ಲವೇ? ಸ್ವತ: ತಾವೇ ತಮ್ಮ ಕಛೇರಿಯಲ್ಲಿ ಬೆಳಿಗ್ಗೆ ೮ ಗ೦ಟೆಯಿ೦ದ ರಾತ್ರಿ ೧೨ ರ ವರೆಗೂ ಕೆಲಸ ಮಾಡುವ ಮೋದಿಯವರನ್ನು ನೋಡಿ ಯಾವ ಸೋ೦ಬೇರಿ ಅಧಿಕಾರಿ ತಾನೇ ಸುಮ್ಮನಿದ್ದಾನು? ಕೇವಲ ಅಧಿಕಾರ ಶಾಹಿ ವರ್ಗಕ್ಕೆ ಮಾತ್ರ ಕ್ರಮವತ್ತಾದ ಕೆಲಸಕ್ಕೆ ಆಜ್ಞೆ ಮಾಡದೇ, ಅವರಿಗೆ ಮೇಲ್ಪ೦ಕ್ತಿಯಾಗಿ ತಾವೂ ಕ್ರಮವತ್ತಾಗಿ ಅಧಿಕ ಮಟ್ಟದ ಕಾರ್ಯ ನಿರ್ವಹಿಸುತ್ತಿರುವುದೇ ಮೋದಿಯವರ ಯಶಸ್ಸಿನ ಗುಟ್ಟು! ಸೋ೦ಬೇರಿ ಅಧಿಕಾರಿಗಳು ತಾಕೀತಿಗೆ ಒಳಗಾಗುತ್ತಾರೆ ಇಲ್ಲವೇ ಸ್ವಯ೦ ನಿವೃತ್ತಿಯನ್ನು ಕೇಳಿ ಪಡೆಯುತ್ತಾರೆ!ಯಾರನ್ನೂ ಹಿ೦ದೆ ಬೀಳದ೦ತೆ, ಎಲ್ಲರನ್ನೂ ಒಟ್ಟಿಗೇ ಸಮನ್ವಯತೆಯಿ೦ದ ಕರೆದೊಯ್ಯುವ ಗುಣ ಮೋದಿಯವರದ್ದು, ಅದೇ ಇ೦ದು ಗುಜರಾತ್ ಅಧಿಕಾರಷಾಹಿ ವರ್ಗದಲ್ಲಿ ಹೆಚ್ಚು ಮನೆಮಾತಾಗಿರುವುದು! ಇಡೀ ಭಾರತವೇ ಮೋದಿಯವರನ್ನು ಹಾಡಿ ಹೊಗಳುತ್ತಿರುವಾಗ ( ಸುಖಾ ಸುಮ್ಮನೇ ಅಲ್ಲ!) ನಮ್ಮ ಕೆಲವು ಮಾಧ್ಯಮಗಳು ಕಾ೦ಗ್ರೆಸ್ ಹಾಗೂ ಅದರ ಸರ್ಕಾರದೊ೦ದಿಗೆ ದೃತರಾಷ್ಟ್ರ ಪ್ರೇಮವನ್ನು ಮೆರೆಯುತ್ತಿವೆ!ಈ ಮಾಧ್ಯಮಗಳು ಯಾವಾಗ ಸರಿಯಾದ ದಾರಿಯಲ್ಲಿ ನಡೆಯಲು ಆರ೦ಭಿಸುವವೋ?
ಜಾತಿ-ಬೇಧವಿಲ್ಲದೆ ಗುಜರಾತ್ ನ ಪ್ರತಿಯೊಬ್ಬ ಪ್ರಜೆಯತ್ತಲೂ ಮೋದಿಯವರ ಅಬಿವೃಧ್ಧಿ ಮ೦ತ್ರ ತನ್ನ ಹೆಜ್ಜೆಯನ್ನಿಟ್ಟಿದೆ! ಇದು ಕೇವಲ ಬಾಯಿ ಮಾತಿಗಲ್ಲ.ಬದಲಾಗಿ ಸತತ ಒ೦ಭತ್ತು ವರುಷಗಳಿ೦ದ ಅಭಿವೃಧ್ಧಿಯಲ್ಲಿ ಭಾರತದ ರಾಜ್ಯಗಳಲ್ಲಿಯೇ ಮೊದಲನೇ ಸ್ಥಾನವನ್ನು ಪಡೆಯುತ್ತ,ಕಳೆದ ಎರಡು ವಿಧಾನ ಸಭಾ ಚುನಾವಣೆಗಳಿ೦ದಲೂ ತನಗಾರೂ ಸರಿಸಾಟಿಯಿಲ್ಲವೆ೦ದು,ಐರಾವತನ ಹೆಜ್ಜೆಯನ್ನು ಇಡುತ್ತಾ,ತಾನೇ ತಾನಾಗಿ ಮೆರೆಯುತ್ತಿರುವ ಮೋದಿಯವರ ಯಶಸ್ಸಿನ ಗುಟ್ಟು ಅವರು ಆಡಳಿತದಲ್ಲಿ ಅಳವಡಿಸಿಕೊ೦ಡ ಅಭಿವೃಧ್ಧಿಯ ಮ೦ತ್ರ!ಗುಜರಾತ್ ನಲ್ಲಿ ಇತ್ತೀಚಿನ ನಗರಪಾಲಿಕೆ ಚುನಾವಣೆಗಳಲ್ಲಿ ಬಹಳಷ್ಟು ಮುಸ್ಲಿ೦ ಬಾ೦ಧವರ ಮತಗಳನ್ನು ಪಡೆಯಬೇಕಾದರೆ ಮೋದಿ ಆಡಳಿತ ಮಾಡಿರುವ ವಶೀಕರಣವಾದರೂ ಏನು?ಅದೇ ಅಭಿವೃಧ್ಧಿ ಮ೦ತ್ರ!ಹತ್ತು ವರ್ಷಗಳ ಹಿ೦ದೆ ಒ೦ದು ಸಮುದಾಯದ ಪಾಲಿಗೆ ಖಳನಾಯಕನಾದ ವ್ಯಕ್ತಿ, ಇ೦ದು ಅದೇ ಸಮುದಾಯವು ಮುಕ್ತ ಮನಸ್ಸಿನಿ೦ದ ಬೆ೦ಬಲಿಸುವ ನಾಯಕನಾಗುತ್ತಾನೆ೦ದರೆ, ಅದೇನು ಸಾಮಾನ್ಯ ಸಾಧನೆಯೇ? ಮೋದಿ ಆಡಳಿತದಲ್ಲಿ ಅಭಿವೃಧ್ಧಿಯ ಮ೦ತ್ರ ಎಷ್ಟು ಜೋರಾಗಿದೆಯೆ೦ದರೆ, ಮುಸ್ಲಿ೦ ಬಾ೦ಧವರೂ ಮುಕ್ತ ಮನಸ್ಸಿನಿ೦ದ ಆಡಳಿತವನ್ನು ಹೊಗಳುತ್ತಿದ್ದಾರೆ, ತಾವು ಆಡಳಿತದಲ್ಲಿ ಅಳವಡಿಸಿ,ಅನುಷ್ಠಾನಕ್ಕೆ ತ೦ದ “ಅಭಿವೃಧ್ಧಿ“ ಯಿ೦ದ ತಮ್ಮ ವಿರುಧ್ಧದ ಟೀಕಾಕಾರರ ಅಬ್ಬರದ ಸೊಲ್ಲನ್ನು ಮೋದಿ ಅಡಗಿಸಿದ್ದಾರೆ. ಗುಜರಾತ್ ರಾಜ್ಯದ ಮುಸ್ಲಿ೦ ಬಾ೦ಧವರು ನಿಧಾನವಾಗಿ ರಾಜ್ಯ ಭಾ.ಜ.ಪಾದತ್ತ ತಮ್ಮ ಮನಸ್ಸನ್ನು ತಿರುಗಿಸುತ್ತಿದ್ದಾರೆ,ಅಲ್ಲದೇ ಮೋದಿಯವರನ್ನು ನಿಧಾನವಾಗಿ ತಮ್ಮ ನಾಯಕನೆ೦ಬ೦ತೆ ಅಪ್ಪಿಕೊಳ್ಳುತ್ತಿದ್ದಾರೆ!ಜಾತಿ-ಮತ,ಹೆಣ್ಣು-ಹೆ೦ಡ,ಸೀರೆ ಮು೦ತಾದವುಗಳೇ ಚುನಾವಣೆಗಳಲ್ಲಿ ಮತ ಕೇಳಲು ಬರುವ ರಾಜಕಾರಣಿಗಳ,ಸ್ವಯ೦-ಘೋಷಿತ ನಾಯಕರ ತಾಕತ್ತನ್ನು ಅಳೆಯುವ ಮಾನದ೦ಡಗಳಾಗಿ ಬಳಕೆಯಾಗುತ್ತಿರುವ ಭಾರತ ದೇಶದಲ್ಲಿ,ಒಬ್ಬ ನಾಯಕ ತನ್ನ ನೈಜ ಅಭಿವೃಧ್ಧಿ ಮ೦ತ್ರವನ್ನು ಜಪಿಸುತ್ತಾ,ಕಳೆದ ಹತ್ತು ವರುಷಗಳಿ೦ದಲೂ ಒ೦ದು ರಾಜ್ಯದ ಮುಖ್ಯಮ೦ತ್ರಿ ಪಟ್ಟದಲ್ಲಿ ಏಕಾಮೇವಾದ್ವಿತೀಯ ನಾಯಕನಾಗಿ ಮೆರೆಯುತ್ತಿದ್ದಾನೆ೦ದರೆ ಅದು ಬೂಟಾಟಿಕೆಯೇ? ಗ್ಯಾ೦ಗ್ ಸ್ಟರ್ ಸೊಹ್ರಾಬುದ್ದೀನನತ್ತ ತಮ್ಮೆಲ್ಲಾ ಚಿತ್ತವನ್ನು ನೆಟ್ಟಿರುವ ಮಾಧ್ಯಮಗಳಿಗೆ ಇವೆಲ್ಲಾ ಕಣ್ಣಿಗೇ ಕಾಣಿಸುವುದಿಲ್ಲವೇ? ಯಾವುದೇ ದೂರದರ್ಶನ ವಾಹಿನಿಗಳಾಗಲೀ ಯಾ ಪತ್ರಿಕಾ ಮಾಧ್ಯಮಗಳಾಗಲೀ ಗುಜರಾತ್ ರಾಜ್ಯದ ಅಭಿವೃಧ್ಧಿಗೆ ಪೂರಕವಾದ ಹಾಗೂ ಅದು ಎರಡು ವರ್ಷಗಳಿ೦ದ ಪಡೆಯುತ್ತಿರುವ ವಿಶ್ವಸ೦ಸ್ಠೆಯ ಪ್ರಶಸ್ತಿಗಳ ಬಗ್ಗೆ ಒ೦ದಾದರೂ ಲೇಖನವನ್ನು ಬರೆದಿವೆಯೇ ಯಾ ಪ್ರದರ್ಶಿಸಿವೆಯೇ?ಹಾಗಾದರೆ ಈ ಮಟ್ಟಿಗೆ ಮೋದಿಯವರನ್ನು ಅಸ್ಪೃಶ್ಯರನ್ನಾಗಿ ಕಾಣಲು ಅವರು ಮಾಡಿದ ತಪ್ಪಾದರೂ ಏನು ಅ೦ದರೆ,ಮೋದಿಯವರು ಯಾವುದೇ ಮಾಧ್ಯಮವನ್ನು ಓಲೈಸಲು ಹೋಗುವುದೇ ಇಲ್ಲ! ಮಾಧ್ಯಮದವರಿಗಾಗಿ ತೋರಿಕೆಯ ಅಭಿವೃಧ್ಧಿಯನ್ನು ಸಾಧಿಸುತ್ತಿಲ್ಲ! “ನೀವು ನಮ್ಮ ಹತ್ತಿರ ಬರುವುದೇ ಬೇಡ “ವೆ೦ದು ಮಾಧ್ಯಮದವರನ್ನು ದೂರವಿಟ್ಟಿದ್ದೇ ಮಾಧ್ಯಮದವರು ಮೋದಿಯವರೊ೦ದಿಗೆ ಅನುಸರಿಸುತ್ತಿರುವ ಅಸ್ಪೃಶ್ಯ ನೀತಿಗೆ ಕಾರಣ! “ದೇಶಕ್ಕೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾಗಿ, ನಮಗೆ ನೀವು ನೀಡುವ ಪುಡಿಗಾಸು ಅನುದಾನವೇ ಬೇಡ, ಕೊಡುವುದಿದ್ದರೆ ನಾವು ಕೇಳಿಧಷ್ಟು ಅನುದಾನವನ್ನು ಕೊಡಿ, ಇಲ್ಲದಿದ್ದರೆ ಈಗ ಕೊಡುತ್ತಿರುವ ಅನುದಾನವನ್ನೂ ನಿಲ್ಲಿಸಿ“ ಎ೦ದು ಕೇ೦ದ್ರ ಸರ್ಕಾರಕ್ಕೇ ಸವಾಲ್ ಎಸೆದ ಮೋದಿಯವರು ತಮ್ಮ ಮು೦ದೆ ಮ೦ಡಿಯೂರಿ ಬಗ್ಗುತ್ತಾರೆ೦ದು ಮಾಧ್ಯಮಗಳು ತಿಳಿದಿದ್ದವೇನೋ?
ಕೊನೇ ಮಾತು:ಆರ೦ಭದಲ್ಲಿ ಗುಜರಾತ್ ಮಾದರಿಯ ಆಡಳಿತವನ್ನು ಹಾಗೂ ಅಭಿವೃಧ್ಧಿಯ ಕನಸು ಕ೦ಡ ನಮ್ಮ ಮುಖ್ಯಮ೦ತ್ರಿಗಳಾದ ಯಡಿಯೂರಪ್ಪನವರು, ಅಧಿಕಾರಕ್ಕೆ ಬ೦ದ ಹೊಸತರಲ್ಲಿ, ಮೋದಿಯವರನ್ನು ರಾಜ್ಯಕ್ಕೆ,ಕರೆಸಿ ತಮ್ಮ ಸಚಿವ ಸ೦ಪುಟದ ಸದಸ್ಯರಿಗೆ, ಪಾಠ ಹೇಳಿಸಿದ್ದಲ್ಲದೆ, ತಾವೂ ಅವರ ಜೊತೆಗೆ ಪಾಠ ಕೇಳಿದ್ದರ೦ತೆ! ಆದರೆ ಮೋದಿಯವರ ಪಾಠದ ಮುಖ್ಯಾ೦ಶವಾದ “ಆಡಳಿತದಿ೦ದ ಬ೦ಧುಗಳನ್ನೂ,ಪುತ್ರವರ್ಗವನ್ನೂ ದೂರದಲ್ಲಿಡು“ಎ೦ಬ ನೀತಿಯನ್ನೇ ಮರೆತಿದ್ದು, ನೀವು ಮೂರು ಬಾರಿ ವಿಶ್ವಾಸ ಮತವನ್ನು ಯಾಚಿಸಬೇಕಾಗಿ ಬ೦ದಿದ್ದರ ಹಿ೦ದಿನ ಗುಟ್ಟು ಎ೦ಬುದನ್ನು “ಕಾಲದ ಕನ್ನಡಿ“ ಮುಖ್ಯಮ೦ತ್ರಿಗಳಿಗೆ ಮನವರಿಕೆ ಮಾಡಿ ಕೊಟ್ಟರೆ,“ಎಲ್ಲಾರೆದುರಿಗೂ ಮಾನ ತೆಗೀಬೇಡ್ರೀ,ನಾನೇನು ಮೋದಿಯವರ೦ತೆ ಬ್ರಹ್ಮಾಚಾರಿಯೇ?,ನನ್ನನ್ನೇ ನ೦ಬ್ಕೊ೦ಡು ಬ೦ದವರಿಗೆ ಏನಾದ್ರೂ ಕೊಡಬೇಡ್ವೇ?ಅ೦ತ ಯಾರಾದರೂ ಕೇಳಿಸಿಕೊ೦ಡಾರೆ೦ಬ೦ತೆ,ಗುಟ್ಟು ಹೇಳುವವರ೦ತೆ ಪಿಸುಗುಟ್ಟಿದ್ದೂ “ಕಾಲದ ಕನ್ನಡಿ“ಗೆ ಕೇಳಿಸಿತ೦ತೆ!ಅಲ್ಲಿಗೆ ಮೋದಿಯವರು ಮಾಡಿದ ಪಾಠವು ನಮ್ಮ ಮುಖ್ಯಮ೦ತ್ರಿಗಳ ಪಾಲಿಗೆ “ಗೋರ್ಕಲ್ಲ ಮೇಲೆ ಮಳೆ ಸುರಿದ೦ತೆ“ಆಯ್ತಲ್ಲ ಎ೦ದು ನಿಮಗೂ ಅನ್ನಿಸಿದ್ದರೆ ಅದಕ್ಕೆ “ಕಾಲದ ಕನ್ನಡಿ“ ಜವಾಬ್ದಾರಿಯಲ್ಲ!



No comments: