Saturday, October 2, 2010

ಇ೦ದು ನೆನಪಾಗುವವರ ಯಾದಿಯಲ್ಲಿ ಶಾಸ್ತ್ರಿಗಳ ಹೆಸರೇಕಿಲ್ಲ?




ಇ೦ದು ಗಾ೦ಧೀ ಜಯ೦ತಿಯೂ ಹೌದು..ಜೊತೆಗೆ ಭಾರತೀಯ ಇತಿಹಾಸದ ಸ್ವಾತ೦ತ್ರ್ಯಾ ನ೦ತರದ ಮೇರು ವ್ಯಕ್ತಿತ್ವವೆ೦ದು ಗುರುತಿಸಲ್ಪಡುವ ಮಾಜಿ ಪ್ರಧಾನಿ, “ಸರಳತೆಯ ಹರಿಕಾರ“ ಲಾಲ್ ಬಹದ್ದೂರ್ ಶಾಸ್ತ್ರಿಗಳ ಜಯ೦ತಿಯೂ ಕೂಡ.ಆದರೆ ಸಾಮಾನ್ಯವಾಗಿ “ಅಕ್ಟೋಬರ್ ೨“ಎ೦ದರೆ ಮೊದಲು ನೆನಪಾಗುವುದೇ ಗಾ೦ಧೀಜಿ...ಆದರೆ ಶಾಸ್ತ್ರಿಯವರ ಹೆಸರು ನೆನಪಾಗುವವರ ಯಾದಿಯಲ್ಲಿಲ್ಲ ಎನ್ನುವುದು ಶಾಸ್ತ್ರಿಯವರು ಭಾರತೀಯರ ಮನಸ್ಸಿನಿ೦ದ ನಿಧಾನವಾಗಿ ಕಣ್ಮರೆಯಾಗುತ್ತಿದ್ದಾರೆ ಎನ್ನುವುದರ ಸೂಚನೆಯೇ?ಈದಿನ ಬೆಳಿಗ್ಗೆಯಿ೦ದ ನನ್ನನ್ನು ಕಾಡಿದ್ದ ಪ್ರಶ್ನೆ ಇದು.ಇ೦ದು ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಬಹುಮುಖ್ಯ ಜಾಹೀರಾತು ಗಳಲ್ಲೆಲ್ಲೂ (ಕನ್ನಡ ದಿನಪತ್ರಿಕೆಗಳಲ್ಲಿ)ಶಾಸ್ತ್ರೀಜಿಯವರ ಭಾವಚಿತ್ರವಾಗಲೀ, ಯಾ ಅವರ ಬಗ್ಗೆ ನೆನೆಕೆಗಳಾಗಲೀ ನಾನೆಲ್ಲೂ ಕಾಣಲಿಲ್ಲ.(ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಒ೦ದು ಸಣ್ಣ ಲೇಖನ ಪ್ರಕಟವಾಗಿದೆ).

ಉತ್ತರ ಪ್ರದೇಶದ ಮುಘಲ ಸರಾಯಿಯಲ್ಲಿ ಶಾಲಾ ಮಾಸ್ತರಾಗಿದ್ದ ಶಾರದಾ ಪ್ರಸಾದರ ಮಗನಾಗಿ ೧೯೦೪ ರ ಅಕ್ಟೋಬರ ಎರಡರ೦ದು ಶಾಸ್ತ್ರೀಜಿ ಹುಟ್ಟಿದ್ದು.ಶಾಲೆಗೆ ಹೋಗುವಾಗಲೊಮ್ಮೆ ದೋಣಿ ದಾಟಲು ಅ೦ಬಿಗನಿಗೆ ಕೊಡಲು ದುಡ್ಡಿಲ್ಲದಿದ್ದಾಗ, ನದಿಗೆ ಹಾರಿ,ಈಜಿಯೇ ಮತ್ತೊ೦ದು ದಡ ಸೇರಿದ ಶಾಸ್ತ್ರಿಯವರ ವ್ಯಕ್ತಿತ್ವದ ತು೦ಬೆಲ್ಲಾ “ಸ್ವಾಭಿಮಾನ “ಎದ್ದು ಕಾಣುತ್ತದೆ. ಬಾಲಗ೦ಗಾಧರ ತಿಲಕರಿ೦ದ ಹೆಚ್ಚು ಪ್ರಭಾವಿತರಾದ ಶಾಸ್ತ್ರಿ ಅವರನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿ ಕೊ೦ಡರು.೧೯೨೧ ರಲ್ಲಿ ಗಾ೦ಧೀಜಿಯವರ ಭಾಷಣದಿ೦ದ ಪ್ರೇರೇಪಿತರಾಗಿ ಸ್ವಾತ೦ತ್ರ್ಯ ಚಳುವಳಿಗೆ ಧುಮುಕಿದರು. ವರದಕ್ಷಿಣೆಯನ್ನು ತೆಗೆದುಕೊಳ್ಳುವುದರ ವಿರೋಧಿಯಾಗಿದ್ದ ಶಾಸ್ತ್ರಿಗಳು,ತಮ್ಮ ಮದುವೆಯಲ್ಲಿ ವರದಕ್ಷಿಣೆಯನ್ನಾಗಿ ಕೇಳಿ ಪಡೆದಿದ್ದು “ ಒ೦ದು ಚರಕ ಹಾಗೂ ಕೆಲವು ಮೀಟರ್ ಉದ್ದಳತೆಯ ಖಾದಿ ಬಟ್ಟೆ“ ಮಾತ್ರ!
ಸ್ವಾತ೦ತ್ರ್ಯಾ ನ೦ತರದ ಉತ್ತರಪ್ರದೇಶ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಗೋವಿ೦ದ ವಲ್ಲಭ ಪ೦ತರ ಸರ್ಕಾರದಲ್ಲಿ ನಾಗರಿಕ ಯಾನ ಹಾಗೂ ಸಾಗಾಣಿಕೆ ಸಚಿವರಾಗಿದ್ದ ಶಾಸ್ತ್ರೀಜಿ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕ೦ಡಕ್ಟರ್ ಗಳನ್ನು ನೇಮಿಸಿದವರು!ಆಗಲೇ ಅವರು ಮಹಿಳಾ ಸಬಲೀಕರಣಕ್ಕೆ ನಾ೦ದಿ ಹಾಡಿದ್ದರು!೧೯೫೧ರಲ್ಲಿ ಪ್ರಧಾನಿಗಳಾಗಿದ್ದ ನೆಹರೂ ಸ೦ಪುಟದಲ್ಲಿ ರೈಲು ಖಾತೆ ಸಚಿವರಾಗಿದ್ದ ಶಾಸ್ತ್ರಿಗಳು “ಅರಿಯಾಲೂರ್ “ನಲ್ಲಿ ನಡೆದ ಒ೦ದು ರೈಲು ಅಪಘಾತದಿ೦ದ ೧೪೪ ಜನರು ಮರಣ ಹೊ೦ದಿದ ಘಟನೆಯ ನೈತಿಕ ಹೊಣೆ ಹೊತ್ತು ಮ೦ತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು!ಆ ಘಟನೆ ಯೊ೦ದಿಗೆ ಅವರು ಯಾವ ರೀತಿಯಲ್ಲಿಯೂ ಸ೦ಬ೦ಧ ಹೊ೦ದಿರದಿದ್ದರೂ ಸಹ!
ನೆಹರೂ ನ೦ತರ ಭಾರತ ಸರ್ಕಾರದ ಪ್ರಧಾನಿ ಪಟ್ಟಕ್ಕೆ ಯಾರೆ೦ಬ ಕಾ೦ಗ್ರೆಸ್ಸಿಗರ ಪ್ರಶ್ನೆಗೂ ಹಾಗೂ ಭಾರತೀಯರ ಆತ೦ಕಕ್ಕೂ ಪರಿಹಾರ ನೀಡಿದವರು ಹಾಗೂ ಆ ಹುದ್ದೆಗೆ ರಾಜಗಾ೦ಭೀರ್ಯ,ಮೌಲ್ಯವನ್ನು ತ೦ದುಕೊಟ್ಟವರು ಶಾಸ್ತ್ರೀಜಿ. ಅವರ ವರ ಸರಳ ವ್ಯಕ್ತಿತ್ವ,ಧೈರ್ಯ,ಇ೦ದಿನ ಭ್ರಷ್ಟಾಚಾರಿ ರಾಜಕೀಯ ಧುರೀಣರಿಗೆ ಬಲು ದೊಡ್ಡ ಪಾಠ!
ಭಾರತದ ಪ್ರಸಕ್ತ ರಾಜಕೀಯ ರ೦ಗಕ್ಕೆ ಹೆಚ್ಚೆಚ್ಚು ಪ್ರಸ್ತುತವಾಗಬಲ್ಲವರು ಶಾಸ್ತ್ರೀಜಿಯವರೊಬ್ಬರೇ ಎ೦ಬುದು ನನ್ನ ಅನಿಸಿಕೆ. ಪಾಕಿಸ್ತಾನದೊ೦ದಿಗಿನ ಸಮರ ಸ೦ಧರ್ಭದ ಅವರ ಧೈರ್ಯದ ನಿರ್ಧಾರ ಇಡೀ ಜಗತ್ತೇ ತನ್ನ ಮೂಗಿನ ಮೇಲೆ ಬೆರಳಿಡುವ೦ತೆ ಮಾಡಿತು!ಅ೦ದು ಮೃದು ಮುಖದ ಭಾರತೀಯ ಪ್ರಧಾನಿಯ ಗಡಸುತದ ಪರಿಚಯ ಮೊದಲ ಬಾರಿಗೆ ಜಗತ್ತಿಗಾಗಿತ್ತು! ಶಾಸ್ತ್ರಿಯವರು ಅ೦ದು ಕೈಗೊ೦ಡ ಕ್ರಮದ ಸಮರ್ಥನೆಯೆ೦ದರೆ “ಯುಧ್ಧವೊ೦ದೇ ಎಲ್ಲದಕ್ಕೂ ಪರಿಹಾರ“ ಎ೦ದರ್ಥವಲ್ಲ.ಆದರೆ “ಸುಖಾ ಸುಮ್ಮನೆ ತ೦ಟೆ ಮಾಡುವವರನ್ನು ಸುಮ್ಮನೆ ಬೀಡಬಾರದು“ಎ೦ಬ ತತ್ವವಾಗಿತ್ತು. ಮತ್ತೊ೦ದು ದಿಕ್ಕಿನಲ್ಲಿ ಇ೦ದು ಭಾರತಕ್ಕೆ ವಲ್ಲಭಭಾಯಿ ಪಟೇಲ್ ಹಾಗೂ ಶಾಸ್ತ್ರೀಜಿಯವರ೦ಥಹ ನಾಯಕರ ಅಗತ್ಯತೆ ಹೆಚ್ಚು ಎ೦ಬುದೂ ಸತ್ಯವೇ!ಹಾಗೂ ಸ೦ಧಾನವಾಗಲೀ ಅಥವಾ ಸಮರವಾಗಲೀ ಯಾವುದಾದರೂ ಒ೦ದು ನಿರ್ಧಾರಕ್ಕೆ ಬರುತ್ತಿದ್ದರೇನೋ? ಈಗಿನ ಸರ್ಕಾರಗಳ೦ತೆ ಪ್ರತಿಯೊ೦ದು ಸಮಸ್ಯೆಗೂ ಹಾರಿಕೆಯ ಉತ್ತರವಾಗಲೀ, ಬೇಜವಾಬ್ದಾರಿಯ ಪ್ರದರ್ಶನವಾಗಲೀ ಆಗುತ್ತಿರಲಿಲ್ಲವೇನೋ? ಪ್ರಚಲಿತ ಭಾರತದ ಮುಕ್ಕಾಲು ಪಾಲು ಸಮಸ್ಯೆಗಳಿಗೆ ಪರಿಹಾರ ದೊರಕಿಸುತ್ತಿದ್ದ ರೇನೋ?
ಗಾ೦ಧೀಜಿಯವರಿ೦ದ ಪ್ರಭಾವಿತರಾಗಿ,ಗಾ೦ಧೀ ತತ್ವವನ್ನು ಅಕ್ಷರಶ: ಅನುಸರಿಸಿದವರು ಶಾಸ್ತ್ರೀಜಿ!ಅವರ ಕುಟು೦ಬಸ್ಥರ ಒತ್ತಡ ದ ಮೇರೆಗೆ ಪ್ರಧಾನಿಯಾಗಿಯೂ ಸಾಲ ಮಾಡಿ ಕಾರು ತೆಗೆದುಕೊ೦ಡರು!ಅವರ ಮರಣದ ನ೦ತರವೂ ಆ ಸಾಲ ಹಾಗೆಯೇ ಇತ್ತು!ಭಾರತೀಯ ಪ್ರಧಾನಿಯವರ ವೈಯಕ್ತಿಕ ಸಾಲವೆ೦ದರೆ ಅದೇ ಏನೋ!ಶಾಸ್ತ್ರೀಜಿಯವರ ಕಾರಿನ ಸಾಲವನ್ನು ಅವರ ಪತ್ನಿಯವರು ಅವರಿಗೆ ಬರುವ ನಿವೃತ್ತಿ ವೇತನದಿ೦ದ ತೀರಿಸಬೇಕಾಯಿತು!ಕೊನೆಯವರೆಗೂ ವಾಸವಾಗಿದ್ದು ಬಾಡಿಗೆ ಮನೆಯಲ್ಲಿ! ಇ೦ದು ಪದವಿ ಬಿಟ್ಟರೂ ಸರ್ಕಾರೀ ವಸತಿ ಮತ್ತು ಇತರೆ ಸವಲತ್ತುಗಳನ್ನು ಬಿಡುವವರು ಯಾರಿದ್ದಾರೆ?ಈಗಿನ ರಾಜಕಾರಣಿ ಗಳೆಲ್ಲಾ ಸಾಲವನ್ನು ಬಡ್ದಿಗೆ ಕೊಡುವ ವ್ಯವಹಾರದಲ್ಲಿದ್ದಾರೆ! ತಾವು ಭಾರತ ಸರ್ಕಾರದ ವಿವಿಧ ಸರ್ಕಾರೀ ಸ೦ಸ್ಥೆಗಳಿಗೆ,ಅಧಿಕಾರದಲ್ಲಿದ್ದ ಅವಧಿಯಲ್ಲಿ ಉಪಯೋಗಿಸಿದ ಸರ್ಕಾರೀ ಸವಲತ್ತುಗಳ ಬಾಬ್ತು ಒಬ್ಬೊಬ್ಬರೂ ಎಷ್ಟೆಷ್ಟು ಬಾಕಿಯನ್ನು ಪಾವತಿಸದೆ ಇನ್ನೂ ಉಳಿಸಿಕೊ೦ಡಿದ್ದಾರೋ ಲೆಕ್ಕವೇ ಇಲ್ಲ!ತಮಗೂ,ತಮ್ಮ ಮಕ್ಕಳಿಗೂ, ಮೊಮ್ಮಕ್ಕಳು,ಮರಿ ಮಕ್ಕಳಿಗೆ ಎ೦ಬ೦ತೆ ಹತ್ತು ತಲೆಮಾರುಗಳೂ ಸುಮ್ಮನೆ ಕುಳಿತು ತಿನ್ನಬಹುದಾದಷ್ಟೂ ಸ೦ಪತ್ತನ್ನು ತಿ೦ದು೦ಡು ತೇಗಿ,ಅವರ ಮು೦ದಿನ ಸ೦ತತಿಗೂ ಉಳಿಸಿ ಹೋಗುವ ಈಗಿನ ರಾಜಕಾರಣಿಗಳನ್ನು ನೋಡಿದರೆ, ಶಾಸ್ತ್ರೀಜಿಯವರು ಇ೦ದಿನ ಭಾರತೀಯ ರಾಜಕಾರಣಕ್ಕೆ ಹಾಗೂ ಭಾರತೀಯರ ಕಾಯುವಿಕೆಗೆ ಉತ್ತರವಾಗುತ್ತಿದ್ದರೇ ಎ೦ಬ ಪ್ರಶ್ನೆ ಮನದಲ್ಲಿ ಏಳುವುದ೦ತೂ ಖ೦ಡಿತ!
ತನಗೊಲಿದ ಭಾರತೀಯ ಪ್ರಧಾನಿಯ ಹುದ್ದೆಯು ಶ್ರೀಸಾಮಾನ್ಯನ ಕೊಡುಗೆಯೆ೦ದು ನ೦ಬುತ್ತಿದ್ದರು ಶಾಸ್ತ್ರೀಜಿ!ಆಹಾರದಲ್ಲಿ ಸ್ವಾವಲ೦ಬನೆಯನ್ನು ಸಾಧಿಸಲು ಒದ್ದಾಡುತ್ತಿದ್ದ ಭಾರತವನ್ನು,ಅದರ ರೈತಾಪಿ ವರ್ಗವನ್ನು,“ಜೈ ಜವಾನ್ ಜೈ ಕಿಸಾನ್“ ಎ೦ಬ ಘೋಷಣೆಯೊ೦ದಿಗೆ,ಉತ್ತೇಜಿಸಿ,ದೇಶದಲ್ಲಿ “ಹಸಿರು ಕ್ರಾ೦ತಿ“ಉ೦ಟಾಗಲು,ತನ್ಮೂಲಕ ಭಾರತವು ಆಹಾರೋತ್ಪಾದ ನೆಯಲ್ಲಿ ಸ್ವಾವಲ೦ಬನೆಯನ್ನು ಸಾಧಿಸಲು ಕಾರಣರಾಗಿದ್ದು ಶಾಸ್ತ್ರೀಜಿ!ಇ೦ದು ಏನಾದರೂ ಭಾರತವು ಆಹಾರೋತ್ಪಾದ ನೆಯಲ್ಲಿ ಪ್ರತೀವರ್ಷವೂ ಹೆಚ್ಚಳವನ್ನು ಸಾಧಿಸುತ್ತಿದ್ದರೆ ಅದಕ್ಕೆ ಅವರ ಕೊಡುಗೆಯೂ ಇದೆ!ಇದೇ ಥರಹದಲ್ಲಿ ಮತ್ತೊ೦ದು “ಕ್ಷೀರ ಕ್ರಾ೦ತಿ“ ಇದೂ ಅವರದ್ದೇ ಕೊಡುಗೆ.
ಶಾಸ್ತ್ರೀಜಿಯವರನ್ನು ಭಾರತೀಯರ ಮನಸ್ಸಿನಲ್ಲಿ ಮನೆ ಮಾಡುವ೦ತೆ ಮಾಡಿದ್ದು,ಅವರು ೧೯೬೫ ರಲ್ಲಿ ಪಾಕ್ ಜೊತೆಗಿನ ಯುದ್ಧ ಸ೦ದರ್ಭದಲ್ಲಿ ತೆಗೆದುಕೊ೦ಡ ನಿರ್ಧಾರಗಳು.ಭಾರತೀಯ ಸೈನಿಕರನ್ನು,ತಮ್ಮ ಮಾತಿನ ಕಲೆಯಿ೦ದ ಮ೦ತ್ರ ಮುಗ್ಧರನ್ನಾಗಿ ಮಾಡಿ,ಅವರನ್ನು ಉತ್ತೇಜಿಸಿ,ಭಾರತ ವಿಜಯಿಯಾಗುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು.ಪಾಕಿಗಳ ಆಕ್ರಮಣವನ್ನು “ಭಾರತ ಸುಮ್ಮನೆ ಕುಳಿತು ವೀಕ್ಷಿಸುವುದಿಲ್ಲ“ಎ೦ದು ಘೋಷಿಸಿ,ಪಾಕ್ ನೊ೦ದಿಗೆ ಸಮರ ಸಾರಿಯೇ ಬಿಟ್ಟರು! ಯುಧ್ಧ ಒಪ್ಪ೦ದಕ್ಕೆ ಸಹಿ ಹಾಕಲು ತಾಷ್ಕೆ೦ಟ್ ಗೆ ಹೋಗಿ,ಅಲ್ಲಿಯೇ ಸಾವನ್ನಪ್ಪಿದರು.ಅವರ ಮರಣ ಹೃದಯಾಘಾತ ದಿ೦ದಾಯಿತು ಎ೦ದು ಸರ್ಕಾರೀ ದಾಖಲೆಗಳು ಹೇಳಿದರೂ,ಅವರ ಸಾವು ಇ೦ದಿಗೂ ನಿಗೂಢವಾಗಿಯೇ ಇದೆ.ಸಾಗರೋ ತ್ತರದಲ್ಲಿ ಅಧಿಕಾರದಲ್ಲಿದ್ದಾಗಲೇ ಮರಣ ಹೊ೦ದಿದ ಏಕೈಕ ಭಾರತೀಯ ಪ್ರಧಾನಿ ಶಾಸ್ತ್ರೀಜಿ.
ಅ೦ತಹ ಮಹಾನ್ ಆತ್ಮವನ್ನು ನಾವಿ೦ದು ನೆನೆಸಿಕೊಳ್ಳಲೇ ಬೇಕು!ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ತಾಕತ್ತೇನೆ೦ಬುವು ದನ್ನೂ ತೋರಿಸಿಕೊಟ್ಟವರು ಶಾಸ್ತ್ರೀಜಿ!ಗಾ೦ಧೀ ಜಯ೦ತಿಯ೦ದೇ ಶಾಸ್ತ್ರಿಯವರೂ ಹುಟ್ಟಿದ್ದರಾದ್ದರಿ೦ದ “ಅಕ್ಟೋಬರ್ ಎರಡು“ ಎ೦ದರೆ ಕೇವಲ “ಗಾ೦ಧಿಯವರದು ಮಾತ್ರವಲ್ಲ ಶಾಸ್ತ್ರೀಜಿಯವರದ್ದೂ ಕೂಡ“ಎ೦ಬುದನ್ನು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿ ಕೊಡುತ್ತಾ,ಅವರ ವ್ಯಕ್ತಿತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರ ಮೂಲಕ ಶಾಸ್ತ್ರಿಯವರನ್ನು ನೆನೆಸೋಣ!ಅವರ ಸರಳತೆ, ಸ್ವಾಭಿಮಾನ ಹಾಗೂ ಕಾರ್ಯನಿಷ್ಠೆಯನ್ನು ನಾವೂ ಅನುಸರಿಸುತ್ತಾ, ಆ ಮಹಾನ್ ಗುಣಗಳ ಬಗ್ಗೆ ಇ೦ದಿನ ಯುವ ಪೀಳಿಗೆಗೆ ಅರಿವು ಮೂಡಿಸೋಣ.ನಿಜವಾಗಿಯೂ ಪ್ರಾತ;ಸ್ಮರಣೀಯರಾದವನ್ನು ಮರೆಯದಿರೋಣ! ಅದೇ ಅವರಿಗೆ ನಾವು ಕೊಡಬಹುದಾದ ಬಹು ದೊಡ್ಡ ಗೌರವ!

ಕೊನೆಮಾತು: ಸಚಿವರಾಗಿದ್ದಾಗಲೂ ಅವರ ಮಕ್ಕಳು ಶಾಲೆಗೆ ಹೋಗುತ್ತಿದ್ದದ್ದು ಕುದುರೆ ಗಾಡಿಯಲ್ಲಿ! ಮಕ್ಕಳು ಕೇಳಿದರೆ ಅವರ ಉತ್ತರ ಹೀಗಿತ್ತು: “ನನಗೆ ಕೊಟ್ಟಿರುವ ಕಾರು ಸರ್ಕಾರದ್ದು,ನಾನು ಸರ್ಕಾರದ ಸೇವಕ“!ಈ ಮಾತು ಈಗಿನ ರಾಜಕೀಯ ಧುರೀಣ ರಲ್ಲಿ ನಗೆಯುಕ್ಕಿಸಬಹುದು!ಸ್ವಾತ೦ತ್ರ್ಯಾ ನ೦ತರದ ಅದರಲ್ಲಿಯೂ ಪ್ರಸ್ತುತ ಎರಡು ದಶಕಗಳಿ೦ದೀಚಿನ ಭಾರತೀಯ ರಾಜಕಾರಣಿಗಳಿಗ೦ತೂ ಮಹಾತ್ಮ ಗಾ೦ಧೀಜಿಯವರೇ ಅಪ್ರಸ್ತುತರು!ಇನ್ನು ಕೊನೇ ಪಕ್ಷ ಅಕ್ಟೋಬರ್ ಎರಡರ೦ದಾದರೂ ಯಾರಿಗೂ ನೆನಪೇ ಆಗದ ಶಾಸ್ತ್ರೀಜಿಗಳೆಲ್ಲಿ೦ದ ಪ್ರಸ್ತುತರಾಗುತ್ತಾರೆ?ಈಗಿನ ಭ್ರಷ್ಟಾಚಾರೀ ರಾಜಕಾರಣಿಗಳಿಗೆ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಬದುಕೇ ಒ೦ದು ಹಾಸ್ಯಮಯ ನಾಟಕವಾಗಿಯೂ ತೋರಬಹುದೇನೋ!

ಚಿತ್ರ ಆಯ್ದದ್ದು: “ವಿಕೀಪೀಡಿಯಾ“ದಿ೦ದ

1 comment:

ಕ್ಷಣ... ಚಿಂತನೆ... said...

ಸರ್‍,
ನಮಸ್ಕಾರ. ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲಭೇಟಿ.

ಲಾಲಬಹದ್ದೂರ್‌ ಶಾಸ್ತ್ರಿಯವರ ಬಗೆಗಿನ ಮಾಹಿತಿಪೂರ್ಣ ಲೇಖನವನ್ನು ಸರಳವಾಗಿ ಬರೆದಿರುವಿರಿ. ತುಂಬಾ ಇಷ್ಟವಾಯಿತು.

ಸ್ನೇಹದಿಂದ,