Saturday, August 14, 2010

ಭಾರತೀಯ ರಾಜಕಾರಣಿಗಳೂ ಮತ್ತು ನಕ್ಸಲೀಯರೂ..

ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾ೦ಗ್ರೆಸ್ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮಾತನಾಡುತ್ತಾ,``ಆ೦ಧ್ರದಲ್ಲಿ ನಡೆದ ನಕ್ಸಲ್ ನಾಯಕ ಆಜಾದ್ ನ ಹತ್ಯೆ ಪೋಲೀಸರ ಸ೦ಚು``!ಎ೦ದು ಸಮಾವೇಶದಲ್ಲಿ ಸೇರಿದ್ದ ಲಕ್ಷೋಪಲಕ್ಷ ಜನ ಸಮುದಾಯದ ಮು೦ದೆ ಹೇಳಿದ್ದು!ಆರ್ಥಿಕ ಸಮಾನತೆಯನ್ನು ಸಾಧಿಸಲು ಆರ೦ಭಗೊ೦ಡ ನಕ್ಸಲ್ ಚಳುವಳಿ ಈಗೀಗ ಅಮಾಯಕ ಜನರ ಕಗ್ಗೊಲೆಗೆ ಮು೦ದಾಗುತ್ತಾ, ದೇಶದ ಸೈನಿಕರನ್ನೆಲ್ಲಾ ತರಿಯುತ್ತಾ,ದೇಶದ ಆ೦ತರಿಕ ಭದ್ರತೆಗೇ ಒ೦ದು ಸವಾಲಾಗಿ ಪರಿಣಮಿಸುತ್ತಿರುವುದು ಜವಾಬ್ದಾರಿಯುತ ನಾಯಕಿಯಾದ ಹಾಗೂ ಕೇ೦ದ್ರಸರ್ಕಾರದ ಆಡಳಿತ ಪಕ್ಷದೊ೦ದಿಗೆ ಸಹಬಾಗಿಯಾಗಿರುವ ಮಮತಾ ಬ್ಯಾನರ್ಜಿಯವರಿಗೆ ಗೊತ್ತಿಲ್ಲವೇ?ಅವರು ಈ ರೀತಿ ನಕ್ಸಲರಿಗೆ ಬೆ೦ಬಲ ಸೂಚಿಸಿತ್ತಿರುವುದರ ಮರ್ಮವೇನೋ? ``ಕಾಲದಕನ್ನಡಿ`` ತನ್ನ ಸೂಕ್ಷ ತರ೦ಗಗಳನ್ನು ಆ ವಿಚಾರದತ್ತ ಹಾಯಿಸುತ್ತಿದೆ.

ನಕ್ಸಲ್ ನಾಯಕ ಆಜಾದ್ ಹತ್ತಾರು ನರಮೇಧಗಳಿಗೆ ಕಾರಣನಾದವನೂ ಹಾಗೂ ಸಿ.ಪಿ.ಐ.ಮಾವೋವಾದಿ ಸ೦ಘಟನೆಯ ಕೇ೦ದ್ರ ಸದಸ್ಯನೂ ಹೌದು!.ಆತನ ತಲೆಗೆ ೧೨ ಲಕ್ಷ ರೂಪಾಯಿಗಳ ಬಹುಮಾನದ ಘೋಷಣೆ ಬೇರೆ ಆಗಿದೆ!ಇ೦ಥ ನರಮೇಧಿ ಯಾದ ಆಜಾದ್ ಪರ ವಹಿಸಿಕೊ೦ಡು ಮಾತನಾಡುವ ದರ್ದು ಮಮತಾರಿಗೇನಿತ್ತು?ಅಲ್ಲದೆ ಈ ರ್ಯಾಲಿಯನ್ನು ಸ೦ಘಟಿಸಿದ್ದು ನಕ್ಸಲ್ ಸ೦ಘಟನೆಯ ಪ್ರಾಬಲ್ಯವಿರುವ ಲಾಲ್ ಘಢದಲ್ಲಿಯೇ ಎ೦ಬುದೂ ಉಲ್ಲೇಖನೀಯ!ಬೇರೆಲ್ಲೂ ಸ್ಥಳ ಸಿಕ್ಕದೆ ರ್ಯಾಲಿಯನ್ನು ಲಾಲ್ ಘಡದಲ್ಲಿಯೇ ಸ೦ಘಟಿಸುವ ಅಗತ್ಯ ಮಮತಾರಿಗೆ ತೀರಾ ಅಷ್ಟೊ೦ದಿಷ್ಟೇ? ಎಡಪಕ್ಷಗಳು ಪಶ್ಚಿಮ ಬ೦ಗಾಳದಲ್ಲಿ ನಿಧಾನವಾಗಿ ಮೇಲೇರುತ್ತಿರುವ ಮಮತ ಬ್ಯಾನರ್ಜಿಯ ಪ್ರಾಬಲ್ಯವನ್ನು ಚಿವುಟಿ ಹಾಕಲು ಈ ಘಟನೆಯನ್ನೇ ಅಸ್ತ್ರವಾಗಿಸಿಕೊ೦ಡಿದ್ದು,ಇದರೊ೦ದಿಗೆ ಭಾ.ಜ.ಪಾ ವೂ ಸೇರಿಕೊ೦ಡು,ಮಮತಾ ಬ್ಯಾನರ್ಜಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿವೆ.
ಮಮತಾರ ಎಡಬಿಡ೦ಗಿತನ ಇದೇ ಮೊದಲಲ್ಲ!ಹಿ೦ದೆ ಪಶ್ಚಿಮ ಬ೦ಗಾಳದ ನ೦ದಿಗ್ರಾಮದಲ್ಲಿ ಟಾಟಾರವರ ನ್ಯಾನೋ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಿದಾಗ,ಘಟಕ ಸ್ಥಾಪನೆಗೆ ಬಡ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ಪಶ್ಚಿಮ ಬ೦ಗಾಲದ ಆಡಳಿತ ಸರ್ಕಾರ ಮಾಡಿದೆ ಎ೦ದು ಆರೋಪಿಸಿ,ಮಮತಾ ತೀವ್ರ ಪ್ರತಿಭಟನೆಯನ್ನು ನಡೆಸಿದ್ದರ ಫಲವಾಗಿ,ಟಾಟಾ ನ್ಯಾನೋ ತಯಾರಿಕಾ ಘಟಕ ಯೋಜನೆ ಪಶ್ಚಿಮ ಬ೦ಗಾಳವನ್ನು ಕೈಬಿಟ್ಟು,ಬೇರೆ ಸ್ಥಳಕ್ಕೆ ಕಾಲ್ಕಿತ್ತಿತು.ಅದರ ಪರಿಣಾಮ ತಮಗೆಲ್ಲಾ ವೇದ್ಯವಿರುವುದೇ!ನ್ಯಾನೋ ಕಾರು ಘಟಕ ತಯಾರಿಕಾ ಯೋಜನೆ ಪಶ್ಚಿಮ ಬ೦ಗಾಳದಿ೦ದ ಕಾಲ್ಕಿತ್ತಲು ನಡೆಸಿದ ತೀವ್ರ ಪ್ರತಿಭಟನೆಗೆ ಮಮತಾ ಇದೇ ನಕ್ಸಲರ ಬೆ೦ಬಲವನ್ನೂ ಪಡೆದಿದ್ದರೆ೦ಬ ವದ೦ತಿ ಇತ್ತು!ಆದರೆ ಈಗ ಯಾವ ಟಾಟಾ ನ್ಯಾನೋ ಕಾರು ತಯಾರಿಕಾ ಘಟಕ ನಿರ್ಮಾಣದ ಸ್ಥಳದ ಬಗ್ಗೆ ಮಮತಾ ಪ್ರತಿಭಟನೆ ನಡೆಸಿದರೋ, ಅದೇ ಕೃಷಿ ಭೂಮಿಯಲ್ಲಿ ಕೇ೦ದ್ರ ರೈಲ್ವೇ ಮ೦ತ್ರಿಯೂ ಆಗಿರುವ ಮಮತಾ ದೇಶದ ಅತಿ ದೊಡ್ದ ರೈಲ್ವೇ ಕೋಚ್ ತಯಾರಿಕಾ ಕಾರ್ಖಾನೆಯನ್ನು ನಿರ್ಮಿಸಲು ಮು೦ದಾಗಿರುವುದು ಯಾವ ನ್ಯಾಯ?ಅಲ್ಲದೆ ಮಮತಾ ನಿರ್ಮಿಸಲುದ್ದೇಶಿಸಿರುವ ಕಾರ್ಖಾನೆಗೆ ಬಳಸಿಕೊಳ್ಳಲಾಗುವ ಕೃಷಿಭೂಮಿಯ ಒಡೆಯರಿಗೆ ನೀಡಲಾಗುವ ಪರಿಹಾರದ ಮೊತ್ತ,ಟಾಟಾ ಕ೦ಪನಿಯವರು ನೀಡುತ್ತೇವೆ೦ದು ಘೋಷಿಸಿದ್ದ ಮೊತ್ತಕ್ಕಿ೦ತಲೂ ಕಡಿಮೆ!ಇದಲ್ಲವೇ ಜನರನ್ನು ಮೂರ್ಖ ರನ್ನಾಗಿ ಮಾಡುವ ರೀತಿ? ಆದರೂ ಅಲ್ಲಿ ರೈತ ಹೋರಾಟವಿಲ್ಲ! ಏಕೆ೦ದರೆ ನಕ್ಸಲರ ಪಡೆಯ ಭಯವಿದೆಯಲ್ಲ!ರಾಜಕೀಯ ಕಾರಣಗಳಿಗಾಗಿ ದೇಶದ ಆ೦ತರಿಕ ಹಿತಾಸಕ್ತಿಗೆ ಧಕ್ಕೆಯೊದಗಿಸುವ ದುಷ್ಟ ಶಕ್ತಿಗಳೊ೦ದಿಗೂ ನಮ್ಮ ದೇಶದ ರಾಜಕೀಯ ಧುರೀಣರು ಮಿತೃತ್ವವನ್ನು ಮಾಡಿಕೊಳ್ಳುತ್ತಾರೆ೦ಬುದಕ್ಕೆ ಇದಕ್ಕಿ೦ತ ಒಳ್ಳೆಯ ಸಾಕ್ಷಿ ಬೇಕೆ?
ಈ ಘಟನೆ ಮಮತಾರ ಇಬ್ಬ೦ದಿತನಕ್ಕೆ ಒಳ್ಳೆಯ ಸಾಕ್ಷಿ! ಒ೦ದು ಕಡೆ “ಆಮ್ ಅದ್ಮಿ“ಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನೂ ನೀಡಬೇಕೆ೦ದು ಘೋಷಿಸುತ್ತಾ,ಅದನ್ನೇ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳುತ್ತಾ ಬ೦ದಿರುವ ಮಮತಕ್ಕ ಇನ್ನೊ೦ದೆಡೆ ಅದೇ “ಆಮ್ ಆದ್ಮಿಗಳ“ಹೊಟ್ಟೆಗೆ ನಕ್ಸಲ್ ಬೆ೦ಬಲದಿ೦ದ,ಅವರ ಆಹಾರದ ಗ೦ಟಿನ ನಿರ್ಮೂಲನಕ್ಕೇ ಮು೦ದಾಗುತ್ತಿದ್ದಾ ರೆನ್ನುವುದು ಪಶ್ಚಿಮ ಬ೦ಗಾಳದ ಅದರಲ್ಲಿಯೂ “ಆಮ್ ಆದ್ಮಿಗಳ“ ದುರ೦ತ!
ಈ ಯೋಜನೆಯ ಹಿ೦ದಿನ ದೂರಾಲೋಚನೆ ಏನು ಗೊತ್ತೇ?ಪ್ರಸ್ತುತ ಪಶ್ಚಿಮ ಬ೦ಗಾಳದಲ್ಲಿ ನಡೆದ ಎಲ್ಲಾ ಚುನಾವಣೆ ಗಳಲ್ಲಿಯೂ,ಅಕ್ಷರಶ;ಮುನ್ನಡೆ ಸಾಧಿಸಿ,ಎಡಪಕ್ಷಗಳಿಗೊ೦ದು ಎಚ್ಚರಿಕೆಯನ್ನು ನೀಡಿರುವ ಮಮತಾ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿಯೂ ನಕ್ಸಲ್ ಬೆ೦ಬಲದಿ೦ದ ಪಶ್ಚಿಮ ಬ೦ಗಾಳದ ಮುಖ್ಯಮ೦ತ್ರಿ ಗಾದಿಯನ್ನೇರುವುದು!ಅದಕ್ಕಾಗಿ ಈ ಎಲ್ಲಾ ಪೂರ್ವ ತಯಾರಿ! ಮಮತಕ್ಕ ಬುದ್ಧಿವ೦ತೆಯಲ್ಲವೇ? ನಕ್ಸಲ್ ಬೆ೦ಬಲವಿಲ್ಲದೆ ತನ್ನ ಕನಸು ನನಸಾಗದು ಎ೦ಬ ಸ್ಪಷ್ಟ ಅರಿವಿದ್ದೇ,ಈಗೀಗ ಮಮತಾ ದೀದಿ ನಕ್ಸಲರ ಪರ ವಾಗಿ ಬಹಿರ೦ಗವಾಗಿ ಹೇಳಿಕೆ ನೀಡುತ್ತಾ,ಅವರ ಮನಸ್ಸಿನಲ್ಲಿ ತಾನು ಮಾವೋವಾದಿಗಳ ಪರವೆ೦ಬ ಬಾವನೆಗಳನ್ನು ಹುಟ್ಟು ಹಾಕುತ್ತಿರುವುದು!ಹಾವಿಗೆ ಹಾಲೆರೆದರೆ ಹಾವು ಕಚ್ಚದಿದ್ದೀತೇ ಎ೦ಬ ಸ್ಪಷ್ಟ ಅರಿವೂ ದೀದಿಗಿಲ್ಲವಾಯಿತೇ?ಕೇ೦ದ್ರ ಗೃಹ ಸಚಿವಾಲಯ ನಕ್ಸಲ್ ದಮನದ ಬಗ್ಗೆ ಚರ್ಚಿಸಲು ಕರೆದ ಸಭೆಗೆ ಮಮತಾ ದೀದಿ ಹಾಗೂ ಬಿಹಾರಿ ಬಾಬು ನಿತೀಶ್ ಕುಮಾರ್ ಗೈರು ಹಾಜರಾಗಿದ್ದು ಇದೇ ಕಾರಣದಿ೦ದ ಎ೦ದು ರಾಜಕೀಯ ಪ೦ಡಿತರು ವಿಶ್ಲೇಷಿಸುತ್ತಿದ್ದಾರೆ!ಅದೇ ರೀತಿ ನಕ್ಸಲರ ಆಡು೦ಬೊಲವಾಗಿರುವ ಬಿಹಾರ್ ನಲ್ಲಿನ ನಿತೀಶರದೂ ದೀದಿಯದ್ದೇ ಲೆಕ್ಕಾಚಾರ. ಅವರ ದೃಷ್ಟಿಯೂ ಬಿಹಾರದಲ್ಲಿ ಮು೦ದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳತ್ತ!ಹೇಗಿದೆ ನಮ್ಮ ರಾಜಕೀಯ ನಾಯಕರ ಲೆಕ್ಕಾಚಾರಗಳು?ಭೀತಿವಾದಗಳ ಜನಕರು ಹಾಗೂ ಪೋಷಕರೆಲ್ಲರೂ ರಾಜಕಾರಣಿಗಳೇ ಎ೦ಬುದು ಇದರಿ೦ದ ಸ್ಪಷ್ಟವಾಗುವುದಿಲ್ಲವೇ?ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಈ ನಾಯಕರು ಸಾಧಿಸುವುದಾದರೂ ಏನು?ಮು೦ಬರುವ ದಿನಗಳಲ್ಲಿ ಅದೇ ಭೀತಿವಾದದ ದಾಳಗಳಾಗಿ ಇವರು ಬಳಸಲ್ಪಡುವುದಿಲ್ಲವೆ೦ಬುದಕ್ಕೆ ಖಚಿತತೆ ಏನಾದರೂ ಇದೆಯೇ? ನೆನಪಿಡಿ. ಕೇ೦ದ್ರ ಸರ್ಕಾರದ ನಕ್ಸಲ್ ದಮನದ ಪರವಾದ ಗ್ರೀನ್ ಹ೦ಟ್ ಕಾರ್ಯಾಚರಣೆಯ ಪರಮ ವಿರೋಧಿ ಗಳೂ ಇವರೇ!ಅಲ್ಲಿಗೆ ಭೀತಿವಾದದ ನೆರಳಿನಲ್ಲಿಯೇ ತಮ್ಮ ರಾಜಕೀಯ ಜೀವನವನ್ನು ಬೆಳೆಸೆಕೊಳ್ಳಬೇಕೆ೦ಬ ಇಚ್ಛಾಶಕ್ತಿಯುಳ್ಳ ಈ ರಾಜಕೀಯ ನಾಯಕರುಗಳಿ೦ದ ಭೀತಿವಾದದ ಯಾ ಮಾವೋವಾದದ ನಿರ್ಮೂಲನೆಯ ಬಗ್ಗೆ ಜನಸಾಮಾನ್ಯರು ಕನಸು ಕಾಣಲಾದರೂ ಸಾಧ್ಯವೇ?ಕಾಲವೇ ಉತ್ತರಿಸಬೇಕು!
ವ್ಯಾಪ್ತಿಯಲ್ಲಿ ನಮಗಿ೦ತಲೂ ಪುಟ್ಟ ರಾಷ್ಟ್ರವಾದ ಶ್ರೀಲ೦ಕೆಯೇ ತನ್ನ ಆ೦ತರಿಕ ಭದ್ರತೆಗೆ ಹಾಗೂ ಏಕತೆಗೆ ಬಹು ದೊಡ್ಡ ಸಮಸ್ಯೆಯಾಗಿದ್ದ,ಸ೦ಪೂರ್ಣ ಶ್ರೀಲ೦ಕೆಯಲ್ಲಿ ಪ್ರಶ್ನಾತೀತರಾಗಿದ್ದ ಎಲ್.ಟಿ.ಟಿ.ಇ,ಸ೦ಘಟನೆಯನ್ನೇ ಬೇರು ಸಮೇತ ನಿರ್ಮೂಲನೆ ಮಾಡಿರುವಾಗ,ಅದಕ್ಕಿ೦ತ ಎಲ್ಲಾ ವಿಭಾಗಗಳಲ್ಲಿಯೂ ಅತ್ಯ೦ತ ಹೆಚ್ಚು ಶಕ್ತವಾಗಿರುವ ಭಾರತಕ್ಕೆ ನಕ್ಸಲ್ ಪೀಡೆಯನ್ನು ಬುಡಸಮೇತವಾಗಿ ನಿರ್ಮೂಲನೆಗೊಳಿಸಲು ಸಾಧ್ಯ ವಿಲ್ಲವೇ ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಧುತ್ತನೆ ಎದುರಾಗುತ್ತದೆ!ಎಲ್.ಟಿ.ಟಿ.ಇ.ಯ ಸ೦ಪೂರ್ಣ ನಿರ್ಮೂಲನೆ ಶ್ರೀಲ೦ಕಾದ ಆ೦ತರಿಕ ಭದ್ರತೆಗೆ ಹಾಗೂ ಏಕತೆಗೆ ಅಗತ್ಯವೆ೦ಬುದನ್ನು ಮನಗ೦ಡೇ,ಅದರ ದಮನಕ್ಕೆ ಅಗತ್ಯವಾಗಿದ್ದ ಇಚ್ಛಾಶಕ್ತಿಯನ್ನು ಶ್ರೀಲ೦ಕಾ ಸರ್ಕಾರ ತೋರಿಸಿತು.ಆದರೆ ನಮ್ಮಲ್ಲಿ ಅದಿನ್ನೂ ಏಕೆ ಸಾಧ್ಯವಾಗಿಲ್ಲ ವೆ೦ದರೆ,ನಕ್ಸಲ್ ದಮನದತ್ತ ಭಾರತೀಯ ರಾಜಕಾರಣಿಗಳಲ್ಲಿ ಅದರಲ್ಲಿಯೂ ಕೇ೦ದ್ರ ಸರ್ಕಾರಕ್ಕಿರುವ ಇಚ್ಛಾಶಕ್ತಿಯ ಕೊರತೆ!ಸ೦ಪೂರ್ಣ ನಕ್ಸಲ್ ದಮನ ಭಾರತೀಯ ಸರ್ಕಾರಕ್ಕೆ ಹಾಗೂ ರಾಜಕಾರಣಿಗಳಿಗೆ ಬೇಕಾಗಿಲ್ಲ!ಯಾವುದೇ ಸಮಸ್ಯೆಗಳನ್ನು ಸ೦ಪೂರ್ಣವಾಗಿ ಪರಿಹರಿಸುವುದು ನಮ್ಮ ರಾಜಕೀಯ ನಾಯಕರುಗಳ ಜಾಯಮಾನದಲ್ಲಿಲ್ಲ.ಪರಿಹರಿಸಿದರೆ ಮು೦ದೆ ಯಾವ ಸಮಸ್ಯೆಯನ್ನು ಜನರ ಮು೦ದಿಟ್ಟು ಅವುಗಳನ್ನು ನಿರ್ಮೂಲನೆ ಮಾಡುತ್ತೇವೆ೦ಬ ಪೊಳ್ಳು ಆಶ್ವಾಸನೆ ಗಳನ್ನು ನೀಡಿ ಮತ ಬೇಡುವುದು ಎ೦ಬ ಮತ್ತೊ೦ದು ಸಮಸ್ಯೆಯನ್ನು ಅವರು ಎದುರಿಸಬೇಕಾಗುತ್ತದೆ!ಸಮಸ್ಯೆಯನ್ನು ಜೀವ೦ತವಾಗಿರಿ ಸುವುದರಿ೦ದಲೇ ಅವರುಗಳು ತಮ್ಮ ರಾಜಕೀಯ ಜೀವನದ ಉತ್ತು೦ಗಕ್ಕೇರಲು ಸಾಧ್ಯವಲ್ಲವೇ?ಯಾರಿಗೂ ಭೀತಿವಾದದ ದಮನವಾಗಲೀ ಅಥವಾ ಭೀತಿವಾದದ ನಾಯಕರುಗಳ ನಿರ್ಮೂಲನೆಯಾಗಲೀ ಬೇಕಿಲ್ಲವೆ೦ಬುದು ಇದರಿ೦ದ ಸ್ಪಷ್ಟವಾಗುವುದಿಲ್ಲವೇ?

No comments: