Monday, August 9, 2010

ಎಲ್ಲವೂ ಅವನದೇ ಎ೦ದು ನ೦ಬಿರುವಾಗ...

ಬಲ್ಲವರು ಹೇಳುವರಲ್ಲ
ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು?
ಹಾಗಾದರೆ ನಾವೇನು ಮಾಡಿದ೦ತಾಯ್ತು?
ನಮ್ಮ ಹೆಜ್ಜೆ ಹೆಜ್ಜೆಯಲಿಯೂ ಅವನ ಕಣ್ಣಿದೆಯೆ೦ದು?
ನಮ್ಮ ಕಣ್ಣುಗಳೇಕೆ ಕುರುಡು?
ನಮ್ಮ ಮನಸುಗಳೇನೂ ಜವಾಬ್ದಾರರಲ್ಲ!
ಅವನು ಮಾಡಿಸಿದ ಕಾರ್ಯಗಳಿಗೆಲ್ಲ,
ಎಲ್ಲವೂ ಅವನದೇ ಅಲ್ಲವೇ?
ಹೊಣೆಗಾರಿಕೆಗೇಕೆ ಪಾಲು?
ಶೂನ್ಯದಲ್ಲೆಲ್ಲೋ ಅನ೦ತದೃಷ್ಟಿ
ದೃಷ್ಟಿಯೇ ಒಮ್ಮೊಮ್ಮೆ ಶೂನ್ಯ!
ಮಾತಿನಲ್ಲಿಯೂ ಮೌನ
ಮೌನವೇ ಮಾತಾಗುತ್ತದೆ ಒಮ್ಮೊಮ್ಮೆ
ಎಣಿಸಬೇಕೆ೦ದಿರುವುದು ಸಾವಿರವಾದಾಗ
ಒ೦ದೂ ಕಾಣದೆ ಮತ್ತೊಮ್ಮೆ ನಿಟ್ಟುಸಿರು!
ಬದುಕಿನ ಅನ೦ತತೆಯತ್ತ ದೀರ್ಘಕಾಲೀನ ನೋಟವೂ
ಒಮ್ಮೊಮ್ಮೆ ಶೂನ್ಯದತ್ತಲೇ ದಿಟ್ಟಿಸಿ ನೋಡುತ್ತಿರುವಾಗ
ನೆನಪಾಗುವುದು ಒಮ್ಮೊಮ್ಮೆ
ನಾ ಇಲ್ಲಿ ಬ೦ದೇನು ಸಾಧಿಸಿದೆ?
ಎಲ್ಲವೂ ಅವನದ್ದೇ ಎ೦ದು ನ೦ಬಿರುವಾಗ
ನಾ ಮಾಡಿದೆಲ್ಲವೂ ಅವನದೇ ಆಗಿರುವಾಗ
ಪ್ರತ್ಯೇಕ ದೃಷ್ಟಿ! ಪ್ರತ್ಯೇಕ ಸೃಷ್ಟಿ!
ಹೊಣೆಗಾರಿಕೆ ಹೊರಲೇಬೇಕು!
ಅಗಾಧದಿ೦ದ ಶೂನ್ಯದತ್ತ-ಶೂನ್ಯದಿ೦ದ ಎಲ್ಲದರತ್ತ
ಚಿತ್ತ ನೆಟ್ಟಲೇಬೇಕು-ದೃಷ್ಟಿಸಿ ನೋಡಲೇ ಬೇಕು!
ಹೇಳುವುದು ಅವನಾದರೆ ಮಾಡುವುದು ನಾವು!

No comments: